2.02.2009

‘ಶೋಕೀಲಾಲ’ರ ನಡುವಣ ‘ಶೋಕಾಚರಣೆ’ ಎಷ್ಟು ಪ್ರಸ್ತುತ?

ಲೇಖಕರು: ಎಚ್.ಎಸ್. ಪ್ರಭಾಕರ

 ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ ನಿಧನರಾದ ಪ್ರಯುಕ್ತ ಸರ್ಕಾರ ಜ.೨೮ ರಿಂದ ಫೆ.೩ ರವರೆಗೆ ಒಂದು ವಾರ ಶೋಕಾಚರಣೆ ಪ್ರಕಟಿಸಿದ್ದು ಸರಿಯಷ್ಟೆ. ಈ ರೀತಿ ರಾಷ್ಟ್ರ ನಾಯಕರು ನಿಧನರಾದಾಗ ಶೋಕಾಚರಣೆ ಮಾಡುವ 'ಸರ್ಕಾರಿ ವಿಧಾನ'ವನ್ನು ಗಮನಿಸಿದಾಗ ಅದು ಎಷ್ಟು ಅರ್ಥಹೀನ ಎಂದು ವಿಚಾರವಂತರಿಗೆ ಅನಿಸದೇ ಇರದು.

ಪ್ರಜಾಪ್ರಭುತ್ವದಲ್ಲಿ ಸರ್ಕಾರ ಪ್ರಜೆಗಳಿಂದ ನಿರ್ಮಿಸಲ್ಪಟ್ಟರೂ ಸಾಮಾನ್ಯ ಪ್ರಜೆಗಳಿಗೇ ಬೇಡವಾದ ಶೋಕಾಚರಣೆಯನ್ನ ಸರ್ಕಾರ ಮಾತ್ರ ಪ್ರಜೆಗಳ ಹೆಸರಲ್ಲಿ ಆಚರಿಸುವುದು ವಿಪರ್‍ಯಾಸವೇ ಸರಿ. ಬಹುತೇಕ ಎಲ್ಲ ಸರ್ಕಾರಿ ಕಾರ್ಯಕ್ರಮಗಳೂ, ರಾಷ್ಟ್ರೀಯ ಹಬ್ಬಗಳು, ಆಚರಣೆಗಳು, ಉತ್ಸವಗಳೆಲ್ಲ ಇದೇ ರೀತಿ 'ಕಾಟಾಚಾರ' ಆಗಿರುವುದು ಪ್ರಜಾಪ್ರಭುತ್ವದ ವ್ಯಂಗ್ಯವೇ ಸರಿ!
'ಶೋಕಾಚರಣೆ' ಅವಧಿ ಪ್ರಕಟವಾಗುವ ಮುನ್ನ ಈಗಾಗಲೇ ಆರಂಭವಾಗಿರುವ ಹಾಗೂ ಖಾಸಗಿ ಕಾರ್ಯಕ್ರಮಗಳಿಗಂತೂ ಶೋಕಾಚರಣೆ 'ನೀತಿ ಸಂಹಿತೆ' ಅನ್ವಯವಾಗುವುದೇ ಇಲ್ಲ; ಆದರೆ ಇನ್ನೂ ಪ್ರಾರಂಭವಾಗದೇ ಇರುವ ನಿಗದಿತ ಹಾಗೂ ನಿಗದಿಯಾಗುವ ಹಂತದಲ್ಲಿನ ಸರ್ಕಾರಿ ಕಾರ್ಯಕ್ರಮ, 'ಉತ್ಸವ' ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ಧು ಮಾಡುವುದಕ್ಕಷ್ಟೇ ಈ ಶೋಕಾಚರಣೆಗಳು ಸೀಮಿತವಾಗಿವೆ! ಆ ಪ್ರಕಾರ, 'ಸೂತಕ' ಎಂಬ ಕಾರಣಕ್ಕೆ ಚಿತ್ರದುರ್ಗದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಹಾಗೂ ಆಯಾ ಜಿಲ್ಲಾ ಕೇಂದ್ರಗಳಲ್ಲಿನ ವಿವಿಧ ನಿಗದಿತ ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ಧಾಗಿವೆ. ಸಮ್ಮೇಳನದ ವಿಷಯ ಬಿಡಿ, ಅದನ್ನು ಪರಿಷತ್ತೇ ಸ್ವಯಂ ಪ್ರೇರಿತವಾಗಿ ಮುಂದೂಡಿದೆ.

ದಿವಂಗತ ಗಣ್ಯರಿಗೆ ಅಗೌರವ ತೋರುವುದಾಗಲಿ ಅಥವಾ ಶೋಕಾಚರಣೆ ಔಚಿತ್ಯ ಪ್ರಶ್ನಿಸುವುದಾಗಲಿ ಈ ಬರಹದ ಉದ್ದೇಶವಲ್ಲ. 'ಸರ್ಕಾರಿ ಶೋಕಾಚರಣೆ' ಈಗ ಎಷ್ಟು ಪ್ರಸ್ತುತ ಎಂಬುದಷ್ಟೇ ಇಲ್ಲಿ ಎತ್ತಿರುವ ಪ್ರಶ್ನೆ. ಶೋಕಾಚರಣೆ ನೀತಿ ಸಂಹಿತೆ ಹೆಸರಲ್ಲಿ ಎಡಬಿಡಂಗಿ ದ್ವಂದ್ವ ನೀತಿಗಳು ಹಾಗೂ ಕಾಟಾಚಾರದ ಆಚರಣೆಗಳನ್ನು ಬಲವಂತವಾಗಿ ಹೇರಬೇಕೆ-ಬೇಡವೇ ಎಂಬುದಷ್ಟೆ ಪ್ರಶ್ನೆ. ಪ್ರಸ್ತುತ ಶೋಕಾಚರಣೆ ನೀತಿ ಸಂಹಿತೆ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿದರೆ 'ಸರ್ಕಾರ ಕಳುಹಿಸಿರುವ ಸುತ್ತೋಲೆ ಪ್ರಕಾರ ನಾವು ನಡೆದುಕೊಳ್ಳುವುದಷ್ಟೇ ನಮ್ಮ ಕರ್ತವ್ಯ' ಎಂಬ ಸಿದ್ಧ ಉತ್ತರ ನೀಡುತ್ತಾರೆ. ಆದ್ದರಿಂದಲೇ ಈ ಪ್ರಶ್ನೆಯನ್ನು ಅಂತಹ ಸುತ್ತೋಲೆ ಹೊರಡಿಸುವ ಸರ್ಕಾರಗಳನ್ನೇ ಕೇಳಬೇಕಾಗಿದೆ.

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಶೋಕಾಚರಣೆಯ ನೀತಿ ಸಂಹಿತೆ ಹೆಸರಲ್ಲಿ 'ಅನುತ್ಪಾದಕ ಚಟುವಟಿಕೆ'ಗಳ ಕತ್ತನ್ನಷ್ಟೇ ಹಿಚುಕಲಾಗುತ್ತಿದೆ; ಉಳಿದಂತೆ ಅದಾಗಲೇ ಪ್ರಾರಂಭವಾಗಿರುವ ಎಲ್ಲ ರೀತಿಯ ಸರ್ಕಾರಿ ಉತ್ಸವ, ಮೇಳ ಹಾಗೂ ಖಾಸಗಿ ಮೋಜು, ಶೋಕಿ, ವ್ಯಾಪಾರ, ಮನರಂಜನೆಗಳಿಗೆ ಸಂಬಂಧಿಸಿದಂತೆ ಸರ್ಕಾರವೂ ಸೇರಿದಂತೆ ಯಾರೂ ಚಕಾರವೆತ್ತದೇ ಇರುವುದು! ಈ ಪರಿ ಶೋಕಾಚರಣೆಯಿಂದ ನಿಧನರಾದ ರಾಷ್ಟ್ರೀಯ ಗಣ್ಯರಿಗೆ ಗೌರವ ತೋರಿದಂತಾಗುವುದೋ!?
ಹಾಸನದ ಇತ್ತೀಚಿನ ಕೆಲವು ನಿದರ್ಶನಗಳೇ ಹೀಗಿವೆ: ಶೋಕಾಚರಣೆ ಜಾರಿಗೆ ಬಂದ ಜ ೨೮ ರಂದು ನಗರದ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ಪಂಚಾಯಿತಿ ಸಂಘಟಿಸಿದ ಕಾವೇರಿ ಸರಸ್ ಮೇಳ ಹಾಗೂ ತೋಟಗಾರಿಕಾ ಇಲಾಖೆ ಪ್ರಾಯೋಜಿತ ಫಲ ಪುಷ್ಪ ಪ್ರದರ್ಶನಗಳು ನಡೆಯುತ್ತಿದ್ದವು. ಇವೆರಡೂ 'ಉತ್ಸವ'ಗಳೇ. ಆದರೂ ಅವು ಅದಾಗಲೇ ಪ್ರಾರಂಭವಾಗಿ ನಡೆಯುತ್ತಿದ್ದುರಿಂದ ನೀತಿ ಸಂಹಿತೆಯಂತೆ ಅವು ಮುಂದುವರೆಯಲು ಯಾವ ಅಡ್ಡಿ ಇರಲಿಲ್ಲ. ಆದರೆ ಕಾವೇರಿ ಸರಸ್ ಮೇಳದಲ್ಲಿ ಮಕ್ಕಳು ಮಹಿಳೆಯರೂ ಸೇರಿದಂತೆ ಎಲ್ಲರಿಗೂ 'ಅಮ್ಯೂಸ್‌ಮೆಂಟ್ ಪಾರ್ಕ್' ರೀತಿಯ ಅತ್ಯುತ್ಸಾಹ ಪುಟಿಯುವ ವಿವಿಧ ಮನರಂಜನೆಗಳಿದ್ದವು; ಇವೆಲ್ಲವೂ ಜನರಿಗೆ ಸಂತೋಷ, ಉತ್ಸಾಹಗಳನ್ನು ಭರ್ಜರಿಯಾಗಿಯೇ ಮಾರಾಟ ಮಾಡಿ ವಿಜೃಂಬಿಸುತ್ತಿದ್ದವು. ಜತೆಗೆ ವಿವಿಧ ಖಾದ್ಯ, ತಿಂಡಿ, ತಿನಿಸು, ಆಹಾರಗಳ ಮಾರಾಟ ಮಳಿಗೆಗಳಿದ್ದವು. ಇಂತಹ ಮಳಿಗೆಗಳ ಮುಂದಂತೂ ಜನ ಕಿಕ್ಕಿರಿದು ಮುಕ್ಕುತ್ತಿದ್ದರು. ಜತೆಗೆ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಉತ್ಪನ್ನಗಳ ಮಾರಾಟ ಮಳಿಗೆಗಳಿದ್ದರೂ ಅವೆಲ್ಲವೂ 'ನಾಮಕಾವಾಸ್ತೆ' ಎಂಬಂತಾಗಿದ್ದವು. ಇನ್ನು ತೋಟಗಾರಿಕಾ ಫಲಪುಷ್ಪ ಪ್ರದರ್ಶನವೂ ಇದಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಎಲ್ಲ ಮೋಜುಗಳೂ 'ಶೋಕಾಚರಣೆ ನೀತಿ ಸಂಹಿತೆ' ವ್ಯಾಪ್ತಿಯಲ್ಲೇ ನಡೆಯುತ್ತಿದ್ದವು! ಈ ಅವಧಿಯಲ್ಲಿ ದಿವಂಗತ ಗಣ್ಯರಿಗಾಗಿ ಜನ 'ಕಂಬನಿ ಮಿಡಿದ ಪರಿ' ಹಾಗೂ ತೋರಿದ 'ಗೌರವ' ಇದೇನೋ ಎಂಬ ಜಿಜ್ಞಾಸೆ ಕಾಡದೇ ಇರದು! ಹಾಗಾದರೆ ಪ್ರಜೆಗಳಿಗೂ ಸರ್ಕಾರಕ್ಕೂ ಸಂಬಂಧವೇ ಇಲ್ಲವೆ?

ಇಷ್ಟೆಲ್ಲ ಮೋಜಿಗೆ, ಶೋಕಿಗೆ, ಲಕ್ಷಾಂತರ ರೂ. ಭರ್ಜರಿ ಹಣಕಾಸು ವಹಿವಾಟು- ಲಾಭ ಗಳಿಕೆಗಳಿಗೆ ಅವಕಾಶ ಕೊಡುವ ಅದೇ ಸರ್ಕಾರ, ಶೋಕಾಚರಣೆ ನೀತಿ ಸಂಹಿತೆ ಹೆಸರಲ್ಲಿ ಇವೆರಡೂ ಉತ್ಸವಗಳಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾತ್ರ ರದ್ಧುಗೊಳಿಸಿತ್ತು! ಜ.೨೮ ರಂದು ಸಂಜೆ ಫಲ ಪುಷ್ಪ ಪ್ರದರ್ಶನದಲ್ಲಿ ಇನ್ನೇನು ಪ್ರದರ್ಶನಕ್ಕೆ ಸಿದ್ಧವಾಗುತ್ತಿದ್ದ ನಾಟಕ, ನಂತರದ ಶಾಲಾ ಮಕ್ಕಳ ನೃತ್ಯ, ಕಾವೇರಿ ಸರಸ್‌ನಲ್ಲಿದ್ದ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆ ಏರಲಿಲ್ಲ. ನಾಟಕ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಫೆ.೧ ರಂದು ಪ್ರದರ್ಶನಗೊಳ್ಳಬೇಕಿದ್ದ ಮತ್ತೊಂದು ನಾಟಕ ಫೆ. ೧೫ ಕ್ಕೆ ಮುಂದೂಡಲ್ಪಟ್ಟಿತು. ಶೈಕ್ಷಣಿಕವಾದ ಹಾಗೂ ನಿಜವಾಗಿಯೂ ನೊಂದ ಮನಸ್ಸುಗಳಿಗೆ ಸಾಂತ್ವನ ನೀಡುವ ಸಂಗೀತ, ನಾಟಕ, ನೃತ್ಯ ಮುಂತಾದ ಚಟುವಟಿಕೆಗಳು ನೀತಿ ಸಂಹಿತೆಯ 'ಕತ್ತರಿ'ಗೆ ಕತ್ತು ನೀಡಬೇಕಾಯಿತು. ರಾಜ್ಯ ಹಾಗೂ ರಾಷ್ಟ್ರಾದ್ಯಂತ ಇನ್ನೂ ಎಷ್ಟು ಕಾರ್ಯಕ್ರಮಗಳು ಇದೇ ರೀತಿ ರದ್ಧಾದವೋ! ಒಂದು ವೇಳೆ ಆರ್. ವೆಂಕಟರಾಮನ್‌ರ ಗುಣಗಾನ ಹಾಗೂ ಸ್ಮರಣೆಯ ಕಾರ್ಯಕ್ರಮವೊಂದು ಏರ್ಪಟ್ಟಿದ್ದಿದ್ದರೆ ಅದೂ ಸಹ ಶೋಕಾಚರಣೆ ನೀತಿ ಸಂಹಿತೆ ಹೆಸರಲ್ಲಿ ಖಚಿತವಾಗಿ ರದ್ಧಾಗುತ್ತಿತ್ತು! ಇಂತಹ 'ಸರ್ಕಾರಿ ಶೋಕಾಚರಣೆ'ಯ ಔಚಿತ್ಯ ಪ್ರಶ್ನಾರ್ಹವಲ್ಲದೆ ಮತ್ತೇನು!?

ರಾಷ್ಟ್ರ ಮಟ್ಟದ ಗಣ್ಯರೊಬ್ಬರು ನಿಧನರಾದಾಗ ಜಪಾನ್ ದೇಶದಲ್ಲಿ ಅಂದು ಶೋಕ ಸಂಕೇತವಾಗಿ ಎಲ್ಲರೂ ಕಪ್ಪು ಪಟ್ಟಿ ಧರಿಸಿಕೊಂಡು ಮಾಮೂಲಿ ಕೆಲಸ ಮಾಡುವ ಅವಧಿಗಿಂತ ಹೆಚ್ಚಿನ ಅವಧಿ ದುಡಿದು ಮೃತ ಗಣ್ಯರ ಆತ್ಮಕ್ಕೆ ಶಾಂತಿ ಕೋರುವ ಮೂಲಕ ತಮ್ಮ ರಾಷ್ಟ್ರ ಭಕ್ತಿ ಮೆರೆಯುತ್ತಾರೆಂದು ಕೇಳಿದ್ದೇವೆ. ಆದರೆ ಶೋಕಾಚರಣೆ ಸಂದರ್ಭದಲ್ಲಿ ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ಭಾರತದಲ್ಲಿನ ಪ್ರಜೆಗಳ ನಡವಳಿಕೆಯತ್ತ ಒಮ್ಮೆ ಗಮನ ಹರಿಸೋಣ. ಕೇವಲ ಒಂದು ರಜೆಗಾಗಿ ಯಾರಾದರೂ ಸಾಯುತ್ತಾರೇನೋ ಎಂದು ಕ್ಯಾಲೆಂಡರ್ ಹಿಡಿದು ಜಾತಕ ಪಕ್ಷಿಗಳಂತೆ ಕಾಯುತ್ತಾರೆ! (ರಾಜ್ಯದ ಹಾಲಿ ಬಿ.ಜೆ.ಪಿ. ಸರ್ಕಾರ ಸಾರ್ವತ್ರಿಕ ರಜೆ ಘೋಷಣೆ ಮಾಡದೆ ಅಷ್ಟರಮಟ್ಟಿಗೆ ಸ್ತುತ್ಯಾರ್ಹ ಕೆಲಸ ಮಾಡಿತೆನ್ನಬಹುದು.) ಶೋಕಾಚರಣೆಯಲ್ಲಿ ಮೃತರಾದ ಗಣ್ಯರ ಸಾಧನೆ ಹಾಗೂ ಅವರ ಉತ್ತಮ ಆದರ್ಶಗಳನ್ನು ಸ್ಮರಿಸಿಕೊಳ್ಳುವ ಮಾತು ಹಾಗಿರಲಿ; ಅಂತಹವರ ಸಾವನ್ನು ಇನ್ನಷ್ಟು ನಿರೀಕ್ಷಿಸುತ್ತಾರೆ! ಶೋಕಾಚರಣೆಗಾಗಿ ನೀಡುವ ಸಾರ್ವತ್ರಿಕ ರಜೆಗಳು ರಾಷ್ಟ್ರೀಯ ನಷ್ಟಕ್ಕೆ ಕಾರಣವಾಗುತ್ತಿವೆ; ಶಾಲಾ ಮಕ್ಕಳಂತೂ, ಸತ್ತವರು ಯಾರು ಹಾಗೂ ಅವರ ಮಹತ್ವ ಏನು ಎಂಬ ಅರಿವೇ ಇಲ್ಲದೆ ಮುಗ್ಧವಾಗಿ 'ಹೊಯ್ ನಾಳೆ ರಜೆಯಂತೆ; ಹೈಟ್ಲಗಾ' ಎಂದು ಕುಣಿಯುತ್ತವೆ!

ಇಂತಹ ದಿನಗಳಂದು ಸ್ವಯಂಪ್ರೇರಿತವಾಗಿ ಎಷ್ಟು ಕಡೆ ಪಬ್, ಬಾರ್‌ಗಳನ್ನು ಮುಚ್ಚಲಾಗುತ್ತದೆ? ಎಷ್ಟು ಕಡೆ ಮೋಜಿನ ಅಮ್ಯೂಸ್‌ಮೆಂಟ್ ಪಾರ್ಕ್‌ಗಳ ಬಾಗಿಲು ಹಾಕಲಾಗುತ್ತದೆ? ಎಷ್ಟು ಇಸ್ಪೀಟು ಕ್ಲಬ್‌ಗಳ ಬಂದ್ ಮಾಡಲಾಗುತ್ತದೆ? ಯಾರು ಕಣ್ಣೀರು ಸುರಿಸುತ್ತಾರೆ? ಎಷ್ಟು ಮಂದಿ ಊಟ-ತಿಂಡಿ ಬಿಡುತ್ತಾರೆ? ಸ್ವಾತಂತ್ರ್ಯಾ ನಂತರ ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರೂ ಅಂತಹ ನಾಯಕರು ನಿಧನರಾದ ಸಂದರ್ಭ ಹೊರತುಪಡಿಸಿದರೆ, ಉಳಿದಂತೆ ಇತ್ತೀಚಿನ ಯಾವ ರಾಷ್ಟ್ರ ನಾಯಕರಿಗೆ ಇಂತಹ ಸ್ವಯಂಪ್ರೇರಿತ ಶೋಕಾಚರಣೆ ಸಂದಿದೆ? ಇವೆಲ್ಲವೂ ಏನನ್ನು ಸೂಚಿಸುತ್ತವೆ?
ಇದೇ ಹೊತ್ತಿನಲ್ಲಿ ಶೈಕ್ಷಣಿಕವಾಗಿ, ನೈತಿಕವಾಗಿ, ಸಾಂಸ್ಕೃತಿಕವಾಗಿ ಮಕ್ಕಳನ್ನು ಹಾಗೂ ವ್ಯಕ್ತಿಗಳನ್ನು ಪರೋಕ್ಷವಾಗಿ ತಿದ್ದಿ ತೀಡಿ ರಾಷ್ಟ್ರೀಯತೆಗೆ ಪೂರಕವಾಗುವಂತೆ ಮಾಡುವ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಶೋಕಾಚರಣೆ ನೀತಿ ಸಂಹಿತೆ ಹೆಸರಲ್ಲಿ ಕಡಿವಾಣ ಹಾಕಲಾಗುತ್ತದೆ. ಅನಿರ್ಬಂಧಿತ ಮದ್ಯ-ಮದಿರೆ, ಸುಖ-ಶೋಕಿಗಳನ್ನು ಅನುಭವಿಸುವವರ ಮನಸ್ಥಿತಿಗೂ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವವರ ಹಾಗೂ ಅವನ್ನು ನೋಡಿ ಕಲಿಯುವವರ ಮನಸ್ಥಿತಿಗೂ ವ್ಯತ್ಯಾಸವಿಲ್ಲವೆ? ಯಾವುದು ನಿಜವಾದ ಶೋಕಾಚರಣೆ?

ಈ ಹಿಂದೆ ಸಚಿವ ಮಹಾಶಯರೊಬ್ಬರು 'ಶಿಕ್ಷಣ ಎಂಬುದು 'ಅನುತ್ಪಾದಕ ಖಾತೆ' ಎಂದು ಅಪ್ಪಣೆ ಕೊಡಿಸಿ ತಮ್ಮ 'ಅದ್ಭುತ ತಿಳಿವಳಿಕೆ' ಮೆರದದ್ದು ನೆನಪಿರಬಹುದು! 'ಇಂತಹ ಅನುತ್ಪಾದಕ ಚಟುವಟಿಕೆಗಳ ವ್ಯಾಪ್ತಿಗೆ ಸಾಂಸ್ಕೃತಿಕ ಕಾರ್ಯಕ್ರಮಗೂ ಸೇರುತ್ತವೆ; ಇವುಗಳಿಂದ ಯಾರಿಗೆ ಏನಾಗಬೇಕು? ಕಲಾವಿದರೆಂಬ ಒಂದಷ್ಟು 'ಮಂಗ'ಗಳು ಸ್ಟೇಜ್ ಮೇಲೆ ಬಂದು ತಮ್ಮ 'ತೆವಲು' ತೀರಿಸಿಕೊಂಡು ಹೋಗುತ್ತಾರೆ; ಇದರಿಂದ ಯಾರಿಗೆ ತಾನೆ ಲಾಭವಿದೆ'-ಎಂದು ಹಣದ ಬೆನ್ನು ಹತ್ತಿದ ಸಂಸ್ಕೃತಿ ರಹಿತ ಜನರಂತೆಯೇ ಸರ್ಕಾರವೂ ಯೋಚಿಸುತ್ತಿದೆಯೋ ಎಂಬ ಸಣ್ಣ ಅನುಮಾನದ ಕಿಡಿಯೊಂದು ಇಂತಹ ಸಂದರ್ಭಗಳಲ್ಲಿ ಸುಡುತ್ತದೆ. ಇವರೆಲ್ಲರಿಗೆ ಆದ ಹಾಗೂ ಆಗುವ ನಷ್ಟವನ್ನು ಮಾತ್ರ ಯಾರೂ ತುಂಬಿಕೊಡುವುದಿಲ್ಲ. ಹಠಾತ್ ರದ್ಧಾದ ಇಂತಹ ಕಾರ್‍ಯಕ್ರಮಗಳಿಗೆ ಸಂಬಂಧಿಸಿದವರ ಮನಸ್ಸಿನಲ್ಲಿ ಇಂತಹ ಸಣ್ಣ ಕಿಡಿ ಸಿಡಿಯದೇ ಇರವು ಸಾಧ್ಯವೆ? ಕಾರ್ಯಕ್ರಮ ಸಂಘಟಕರು ಅಥವಾ ಕಲಾವಿದರಲ್ಲಿ ಇಂತಹ ನಕಾರಾತ್ಮಕ ಮನೋಭಾವ ಹುಟ್ಟಲು ಕಾರಣವಾದ 'ಶೋಕಾಚರಣೆ ಎಂಬ ನೀತಿ ಸಂಹಿತೆ'ಯಿಂದ ನಿಧನರಾದ ಗಣ್ಯರ ಆತ್ಮಕ್ಕೆ ನಿಜವಾಗಿ ಶಾಂತಿ ಸಿಗುವುದೆ?

ಪ್ರಸ್ತುತ ಸನ್ನಿವೇಶದಲ್ಲಿ ಒಂದು ಉತ್ತಮ ನಾಟಕ, ಸಂಗೀತ, ಸಾಹಿತ್ಯ, ನೃತ್ಯದಂತಹ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸುವುದರ ಹಿಂದೆ ಎಷ್ಟೆಲ್ಲ ನಷ್ಟ-ಸಂಕಷ್ಟಗಳು ಇವೆ ಎಂಬ ಪ್ರಾಥಮಿಕ ಅರಿವು ಸರ್ಕಾರಕ್ಕಿರಬೇಕು. ಜಿಲ್ಲಾ ಕೇಂದ್ರಗಳಲ್ಲಿನ ಹಾಗೂ ಸಣ್ಣಪುಟ್ಟ ಊರುಗಳಲ್ಲಿನ ಸರ್ಕಾರಿ ಪ್ರಾಯೋಜಿತ ನಿಗದಿತ ಕಾರ್ಯಕ್ರಮಗಳ ಹಿಂದೆ ಎಷ್ಟೋ ಸಂಘಟಕರ ಹಾಗೂ ಕಲಾವಿದರ ಪರಿಶ್ರಮವಿರುತ್ತದೆ. ಹಾಗೆಂದು ಅವರೆಲ್ಲರಿಗೂ ನಿಧನರಾದ ಗಣ್ಯರ ಕುರಿತು ಗೌರವವಿಲ್ಲ ಎಂದೇನಲ್ಲ; ಆದರೆ ಅವರಿಗೆ ಕಾರ್ಯಕ್ರಮ ಹಠಾತ್ ರದ್ಧತಿಯ ಆಘಾತ ತಾಳಿಕೊಳ್ಳುವ ಶಕ್ತಿ ಇರುವುದಿಲ್ಲ. ಅಂತಹವರ ಮೇಲೆ ಈ ನೀತಿ ಸಂಹಿತೆ ಎಂಬುದು ಬಲಾತ್ಕಾರವಾಗುತ್ತದೆ ಅಷ್ಟೆ. ಉಳಿದೆಲ್ಲವನ್ನೂ ಯಥಾಸ್ಥಿತಿ ಬಿಟ್ಟು ನಮ್ಮಂತಹ ಬಡಪಾಯಿಗಳು- ಅದರಲ್ಲೂ ಪರೋಕ್ಷವಾಗಿ ಶಿಕ್ಷಣ ನೀಡುವ ಹಾಗೂ ನೀತಿ ಬೋಧನೆ ಮಾಡುವ ಮಂದಿಗಷ್ಟೇ ಏಕೆ ಈ ನಿರ್ಬಂಧ ಎಂಬ ಅತೃಪ್ತಿ ಅವರನ್ನು ಕಾಡದೆ ಇರದು. ಇಂತಹ ಮನೋಸ್ಥಿತಿ ಬೆಳೆಸುವ ನೀತಿ ಸಂಹಿತೆಗಳಿಗೆ ಏನಾದರೂ ಅರ್ಥವಿದೆಯೇ?
ಬದುಕು ದುರ್ಬರವಾಗಿದ್ದಾಗ ದಿನ ನಿತ್ಯದ ಜಂಜಾಟಗಳಿಂದ ರೋಸಿಹೋದ ಜನಕ್ಕೆ ಸಾಂಸ್ಕೃತಿಕ ಸಾಂತ್ವಾನ ನಿಜಕ್ಕೂ ಬೇಕು; ಅದರಲ್ಲಿ ಎರಡು ಮಾತಿಲ್ಲ. ಆದರೆ, 'ಶೋಕಾಚರಣೆ ಇರುವುದರಿಂದ ಜನರು ನಾಟಕ ನೋಡುವುದು ಬೇಡ; ಅದರ ಬದಲಾಗಿ ಸಿನಿಮಾ ನೋಡಲಿ; ಜಾಯಿಂಟ್ ವ್ಹೀಲ್‌ನಲ್ಲಿ ಕುಳಿತು ಅಥವಾ 'ಬ್ರೇಕ್ ಡ್ಯಾನ್ಸ್'ನಲ್ಲಿ ಕುಳಿತು ಮಜಾ ಮಾಡಲಿ' ಎಂಬುದು ಯಾವ ಸೀಮೆ ಶೋಕಾಚರಣೆ ನೀತಿ? 'ಸಂಗೀತ, ನೃತ್ಯಗಳನ್ನು ಕೇಳುವುದು- ನೋಡುವುದು ಬೇಡ; ಬೇಕಾದರೆ ನಾಲಿಗೆ ರುಚಿಗಾಗಿ ಚೆನ್ನಾಗಿ ತಿಂದು, ಉಂಡು, ಮದ್ಯ ಕುಡಿದು, ಕುಣಿದು-ಕುಪ್ಪಳಿಸಿ ಮಜಾ ಮಾಡಲಿ' ಎಂಬುದು ಯಾವ ಸೀಮೆ ಸೂತಕದ ನೀತಿ? ಯಾವುದು ನಿಜವಾದ ಶೋಕಾಚರಣೆ? ಇಂದಿನ 'ಶೋಕೀಲಾಲ'ರ ನಡುವೆ ಇಂತಹ ಶೋಕಾಚರಣೆ ನೀತಿ ಸಂಹಿತೆ ಜಾರಿಗೊಳಿಸುವುದು ಎಷ್ಟು ಪ್ರಸ್ತುತ?

ಈಗಲಾದರೂ ಸರ್ಕಾರ ಇಂತಹ ಆಚರಣೆಗಳಿಗೆ ಸೂಕ್ತ ರೀತಿ ತಿದ್ದುಪಡಿ ಮಾಡಬೇಕು. ರದ್ಧುಗೊಳಿಸಬೇಕೆಂದು ನಾನು ಕೇಳುತ್ತಿಲ್ಲ. ಆದರೆ 'ಸೂತಕ' ಎಂಬುದು ಅರ್ಥಪೂರ್ಣವಾಗಿ ಆಚರಣೆಗೆ ಬರುವಂತೆ ಮಾರ್ಪಾಡು ಮಾಡಬೇಕು. ಹೇಗೆ ಆಚರಿಸಬಹುದು ಎಂಬ ಜಿಜ್ಞಾಸೆ ಸರ್ಕಾರದ ಮತ್ತು ಸಾರ್ವಜನಿಕರ ವಿವೇಚನೆಗೆ ಬಿಟ್ಟದ್ದು.

1.19.2009

ಬಿ.ಜೆ.ಪಿ.ಗೆ ‘ಅಣ್ಣಯ್ಯ’ (ಎಚ್.ಸಿ. ಶ್ರೀಕಂಠಯ್ಯ ) ಜಿಗಿತ: ಹಾಸನದಲ್ಲಿ ಜೆ.ಡಿ.ಎಸ್.ಗೆ ಮತ್ತಷ್ಟು ಲಾಭ!?

ಲೇಖಕರು: ಎಚ್ ಎಸ್ ಪ್ರಭಾಕರ್
ಕೃಪೆ: ಸಂಯುಕ್ತ ಕರ್ನಾಟಕ

ಹಾಸನ, ಜೆ.ಡಿ.ಎಸ್. ಭದ್ರಕೋಟೆಯಾಗಿದ್ದರೂ ಮುಂಬರುವ ಸಂಸತ್ ಚುನಾವಣೆಗಳಲ್ಲಿ ಸ್ವಲ್ಪ ಸಂಘಟಿತ ಶ್ರಮ ಹಾಕಿದ್ದರೆ ಹಾಸನ ಲೋಕಸಭಾ ಸ್ಥಾನವನ್ನು ಹೇಗೋ ಬಿ.ಜೆ.ಪಿ. ತನ್ನದಾಗಿಸಿಕೊಳ್ಳುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ ಕಾಂಗ್ರೆಸ್‌ನ ‘ವೃದ್ಧ ಪಿತಾಮಹ’ ಅಣ್ಣಯ್ಯ (ಎಚ್.ಸಿ. ಶ್ರೀಕಂಠಯ್ಯ) ರನ್ನು ಬಿ.ಜೆ.ಪಿ.ಗೆ ಸೇರಿಸಿಕೊಂಡಿರುವ ‘ಸ್ವಯಂಕೃತ ಅಪರಾಧ’ದ ಪರಿಣಾಮವಾಗಿ ಈಗ ಆ ಸ್ಥಾನ ಕೈತಪ್ಪುವ ಎಲ್ಲ ಸಾಧ್ಯತೆಗಳೂ ಇವೆ! ಅಂದರೆ ಇದೀಗ ಬಿಜೆಪಿ ಮತ್ತೆ ಎಡವಿದೆ; ‘ದಾಪುಗಾಲು’ ಇಡುತ್ತಾ ಸಾಗುವವರು ಒಂದಲ್ಲ ಒಂದು ಕಡೆ ಎಡವುತ್ತಾರೆ ಎಂಬುದಕ್ಕೆ ನಿಲ್ಲದೆ ಸಾಗಿರುವ ‘ಆಪರೇಷನ್ ಕಮಲ’ ಕಾರ್ಯಾಚರಣೆಯೇ ನಿದರ್ಶನವಾಗಿದೆ.
‘ಅಣ್ಣಯ್ಯ ಅವರು ಕಾಂಗ್ರೆಸ್ ತೊರೆದರೆ ನಷ್ಟವೇನೂ ಇಲ್ಲ; ಬಿ.ಜೆ.ಪಿ. ಸೇರಿದರೆ ಅಲ್ಲಿ ಲಾಭವೇನೂ ಇಲ್ಲ’ ಎಂಬಂತಹ ಸನ್ನಿವೇಶ ಇರುವಾಗ, ಬಿಜೆಪಿ ಯಾವ ಪುರುಷಾರ್ಥಕ್ಕಾಗಿ ಈ ಸೇರ್ಪಡೆ ಮಾಡಿಕೊಳ್ಳುತ್ತಿದೆಯೋ ಗೊತ್ತಿಲ್ಲ ಎಂದು ಈ ಎರಡೂ ಪಕ್ಷಗಳ ಕಾರ್ಯಕರ್ತರು ನಿಡುಸುಯ್ಯುತ್ತಿದ್ದಾರೆ. ‘ಶ್ರೀಕಂಠಯ್ಯ ಹಾಗೂ ಜೆ.ಡಿ.ಎಸ್.ನ ದೇವೇಗೌಡರ ನಡುವೆ ಮೊದಲಿನಿಂದಲೂ ಹೇಳಿಕೊಳ್ಳುವಂತಹ ರಾಜಕೀಯ ಬದ್ಧ ದ್ವೇಷವೇನೂ ಇಲ್ಲ; ಅದರ ಬದಲು ‘ಹೊಂದಾಣಿಕೆ’ ರಾಜಕೀಯವೇ ಸಾಗಿ ಬಂದಿರುವ ಹಿನ್ನೆಲೆಯಲ್ಲಿ ಈಗಿನ ಅಣ್ಣಯ್ಯರ ಬಿಜೆಪಿ ‘ಜಿಗಿತ’ದ ಹಿಂದೆ ಗೌಡರ ‘ಚಿತಾವಣೆ’ ಇದ್ದರೂ ಇರಬಹುದು; ಇದನ್ನು ಸರಿಯಾಗಿ ಗಮನಿಸದೆ ಒಂದು ವೇಳೆ ಬಿ.ಜೆ.ಪಿ. ಹೈಕಮಾಂಡ್ ಏನಾದರೂ ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿ.ಜೆ.ಪಿ ಅಭ್ಯರ್ಥಿಯಾಗಿ ಶ್ರೀಕಂಠಯ್ಯರಿಗೇ ಟಿಕೆಟ್ ನೀಡಿದ್ದೇ ಆದಲ್ಲಿ ಎಡವಿದ ಕಾಲಿಗೇ ಮತ್ತೊಮ್ಮೆ ಎಡವಿದಂತಾಗುತ್ತದೆ; ಆ ಬೆಳವಣಿಗೆಯಿಂದ ಚುನಾವಣೆಯಲ್ಲಿ ಬಿ.ಜೆ.ಪಿ. ತಾನಾಗೇ ಚಿನ್ನದ ಹರಿವಾಣದಲ್ಲಿ ಸಂಸತ್ ಸ್ಥಾನವನ್ನಿಟ್ಟು ಗೌಡರಿಗೆ ಬಳುವಳಿ ಕೊಟ್ಟಂತಾಗುತ್ತದೆ’ ಎಂದು ನಂಬಲರ್ಹ ಬಿ.ಜೆ.ಪಿ. ಮೂಲಗಳು ಭೀತಿಯಿಂದ ಪಿಸುಗುಟ್ಟುತ್ತಿವೆ!
ಅದರ ಬದಲು ಬಿ.ಜೆ.ಪಿ. ನಾಯಕರು ಬುದ್ಧಿವಂತರಾದರೆ, ಪಕ್ಷದ ಹಿರಿಯ ಮುಖಂಡರಾಗಿರುವ ಅನುಭವಿ ರಾಜಕಾರಣಿ ಬಿ.ಬಿ. ಶಿವಪ್ಪ ಅಥವಾ ಯುವ ಮುಂದಾಳು ವಿಧಾನ ಪರಿಷತ್ ಸದಸ್ಯ ಬಿ.ಆರ್. ಗುರುದೇವ್‌ಗೆ ಲೋಕಸಭಾ ಟಿಕೆಟ್ ನೀಡಿದರೆ ಮಾತ್ರ ಪಕ್ಷ ಗೌಡರ ವಿರುದ್ಧ ಸೆಡ್ಡು ಹೊಡೆಯಲು ಸಾಧ್ಯ ಎಂಬ ಸಲಹೆಗಳು ಕೇಳಿಬರುತ್ತಿವೆ.
ಶ್ರೀಕಂಠಯ್ಯರನ್ನು ಕಾಂಗ್ರೆಸ್‌ನಲ್ಲಾಗಲಿ ಅಥವಾ ಅವರು ಈಗ ಪ್ರವೇಶಿಸಿರುವ ಬಿ.ಜೆ.ಪಿ.ಯಲ್ಲಾಗಲೀ ಯಾರೂ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ತಮ್ಮ ತಂದೆ ಬಿ.ಜೆ.ಪಿ. ಸೇರುತ್ತಿರುವುದು ಸ್ವತಃ ಶ್ರೀಕಂಠಯ್ಯರ ಪುತ್ರ ವಿಜಯಕುಮಾರ್ ಅವರಿಗೇ ಇಷ್ಟವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
‘ಯಾರಾದರೂ ನಿಮ್ಮ ಪಕ್ಷಕ್ಕೆ ಬರುತ್ತೇನೆ ಎಂದರೆ ಬೇಡ ಎನ್ನಲಾಗುತ್ತದೆಯೇ? ಬರುವವರೆಲ್ಲ ಬೇಷರತ್ತಾಗಿ ಬರಲಿ; ಆದರೆ ಸ್ಥಾನಮಾನ ಅಥವಾ ಟಿಕೆಟ್ ನಿರೀಕ್ಷಿಸುವುದೇನೂ ಬೇಡ. ಮುಂಬರುವ ಸಂಸತ್ ಚುನಾವಣೆಗೆ ಟಿಕೆಟ್ ನೀಡಲಾಗುವುದೆಂದು ಪಕ್ಷದ ಹೈಕಮಾಂಡ್ ಏನೂ ಯಾರಿಗೂ ಭರವಸೆ ನೀಡಿಲ್ಲ; ನಮ್ಮ ಪಕ್ಷದಲ್ಲೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಬ್ಬರಂತೆ ಸಮರ್ಥ ಆಕಾಂಕ್ಷಿಗಳಿದ್ದಾರೆ. ಅವರಲ್ಲೇ ಒಬ್ಬರು ಅಭ್ಯರ್ಥಿಯಾಗುತ್ತಾರೆ. ಪಕ್ಷದ ರಾಜ್ಯ ನಾಯಕರೂ ಸೇರಿದಂತೆ ಶ್ರೀಕಂಠಯ್ಯರನ್ನು ಬನ್ನಿ ಎಂದು ನಾವಾಗಿ ಯಾರೂ ಕರೆದಿಲ್ಲ; ಒಂದು ವೇಳೆ ಬಂದರೆ ಜಿಲ್ಲೆಯಲ್ಲಿನ ೧೪,೫೦೦ ಸಕ್ರಿಯ ಸದಸ್ಯರಲ್ಲಿ ಅವರೂ ಒಬ್ಬರಾಗುತ್ತಾರೆ; ಮೊದಲು ಅವರು ಪಕ್ಷವನ್ನು ಸಂಘಟಿಸಲಿ’ ಎಂದು ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ನವಿಲೆ ಅಣ್ಣಪ್ಪ ಅಭಿಪ್ರಾಯಪಡುತ್ತಾರೆ.
ಇನ್ನು ಲೋಕಸಭಾ ಚುನಾವಣೆ ರಾಜಕೀಯದ ಮಟ್ಟಿಗೆ ಶ್ರೀಕಂಠಯ್ಯ ಅವರ ಸಾಧನೆ ಗಮನಿಸಿದರೆ ಹೇಳಿಕೊಳ್ಳುವಂತಹದೇನೂ ಇಲ್ಲ. ಮೊದಲ ಬಾರಿ ೧೯೮೯ ರಲ್ಲಿ ಜನತಾ ಪಕ್ಷದ ಎಚ್.ಎನ್. ನಂಜೇಗೌಡರ ವಿರುದ್ಧ ೪,೦೩,೨೮೬ ಮತ ಗಳಿಸಿ ೧,೮೯,೧೫೫ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು ಬಿಟ್ಟರೆ ಮತ್ತೆಂದೂ ಗೆದ್ದಿಲ್ಲ. ೧೯೯೧ ರಲ್ಲಿ ಜನತಾ ದಳದ ಎಚ್.ಡಿ. ದೇವೇಗೌಡರ ವಿರುದ್ಧ ೨,೫೭,೫೭೦ ಮತ ಗಳಿಸಿ ೩,೧೯೧ ಅಂತರದಲ್ಲಿ ಸೋತಿದ್ದರು. ನಂತರ ಕಳೆದ ಬಾರಿ ೨೦೦೪ ರಲ್ಲೂ ಅದೇ ಗೌಡರ (ಜೆ.ಡಿ.ಎಸ್.) ವಿರುದ್ಧ ಕೇವಲ ೨,೭೨,೩೨೦ ಮತ ಪಡೆದು, ೧,೯೦,೩೦೫ ಮತಗಳ ಭಾರಿ ಅಂತರದಿಂದ ಪರಾಭವಗೊಂಡರು. ಇದೀಗ ಅವರಿಗೆ ೮೬ ವರ್ಷವಾಗಿದ್ದು, ವಯೋವೃದ್ಧರೂ ಆಗಿದ್ದಾರೆ. ಯುವ ಪೀಳಿಗೆ ಮಟ್ಟಿಗೆ ಅವರು ‘ಹಿಂದಿನ ತಲೆಮಾರಿನ ರಾಜಕಾರಣಿ’. ಹೀಗಾಗಿ ಅವರು ‘ರಾಮ ಕೃಷ್ಣ’ ಎಂದು ರಾಜಕೀಯ ನಿವೃತ್ತ ಜೀವನ ಸಾಗಿಸಬೇಕು; ಅದು ಬಿಟ್ಟು, ದಶಕಗಳ ಕಾಲ ಕಾಂಗ್ರೆಸ್ ಮುಖಂಡರಾಗಿದ್ದು ಈಗ ಕೆಲವು ಕ್ಷುಲ್ಲಕ ಆಂತರಿಕ ಕಾರಣಗಳ ನೆಪ ಒಡ್ಡಿ ಬಿ.ಜೆ.ಪಿ. ಸೇರುವುದು ಸ್ವಾರ್ಥ ರಾಜಕೀಯ ಆಗುತ್ತದೆ ಎಂಬ ಅಭಿಪ್ರಾಯಗಳು ಜಿಲ್ಲಾದ್ಯಂತ ಕೇಳಿಬರುತ್ತಿವೆ.
ಜಿಲ್ಲಾ ಕಾಂಗ್ರೆಸ್‌ನಲ್ಲೇ ಶ್ರೀಕಂಠಯ್ಯರ ನಾಯಕತ್ವದಲ್ಲಿ ಎಲ್ಲವೂ ಸರಿಯಾಗಿರಲಿಲ್ಲ. ಅವರ ವಿರುದ್ಧ ಸೆಡ್ಡು ಹೊಡೆದ ಗಂಡಸಿ ಕ್ಷೇತ್ರದ (ಈಗ ಆ ಕ್ಷೇತ್ರ ಇಲ್ಲ) ಮಾಜಿ ಸಚಿವ ಬಿ. ಶಿವರಾಂ ಅವರೇ ಒಂದು ಪ್ರತ್ಯೇಕ ಗುಂಪು ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಆ ಗುಂಪಂತೂ ಶ್ರೀಕಂಠಯ್ಯರ ವಿರುದ್ಧ ಆಂತರಿಕವಾಗಿ ದ್ವೇಷ ಬೆಳೆಸಿಕೊಂಡೇ ಬರುತ್ತಿದೆ. ಒಟ್ಟಾರೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಕಾಲದಲ್ಲಿ ಪಕ್ಷ ಬಲಪಡಿಸುವುದು ಬಿಟ್ಟು ಹೀಗೆ ಪಕ್ಷವನ್ನು ತೊರೆದು ಹೋಗುವುದು ಒಂದು ರೀತಿ ‘ಪಲಾಯನ ವಾದ’ವಾಗುತ್ತದೆ. ಬಿ.ಜೆ.ಪಿ.ಗೆ ಜಿಗಿದು ಅಲ್ಲಿ ಅದನ್ನೂ ಹಾಳುಮಾಡಿ ಆ ಮೂಲಕ ಜೆ.ಡಿ.ಎಸ್. ದೇವೇಗೌಡರಿಗೆ ಅನುಕೂಲ ಮಾಡಿಕೊಡುವುದು ಏಕೆ? ಎಂಬ ಪ್ರಶ್ನಾರ್ಥಕ ಅಭಿಪ್ರಾಯಗಳೂ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರದ್ದಾಗಿದೆ.
ಈಗ ಬಿ.ಜೆ.ಪಿ. ಎಚ್ಚರ ವಹಿಸಬೇಕು; ಮುಂಬರುವ ಲೋಕಸಭಾ ಸ್ಥಾನಕ್ಕೆ ಹಿರಿಯ ಮುಖಂಡ ಬಿ.ಬಿ. ಶಿವಪ್ಪ ಅಥವಾ ಯುವ ಮುಖಂಡ ಬಿ.ಆರ್. ಗುರುದೇವ್‌ಗೆ ಟಿಕೆಟ್ ಸಿಗುವಂತೆ ಒಟ್ಟಾಗಿ ನೋಡಿಕೊಳ್ಳಬೇಕು; ಹಾಗಾದರೆ ಮಾತ್ರ ಬಿ.ಜೆ.ಪಿ. ಬಚಾವಾಗಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಜನಪ್ರಿಯ ಲೇಖನಗಳು