2.06.2011

ಕನ್ನಡ ಸಾಹಿತ್ಯ ಸಮ್ಮೇಳನ: ಶನಿವಾರದ ರಾತ್ರಿ ರಿಪೋರ್ಟು

ಸಮ್ಮೇಳನದ ಮಳಿಗೆಯಲ್ಲಿ ಶನಿವಾರ ನಮಗಂತೂ ಶುಭದಿನ. ಎದ್ದು ನ(ಗ)ರಿಗಳ ಮುಖ ನೋಡಿದ್ದರಿಂದಲೋ ಏನೋ ಭರ್ಜರಿ ನಲವತ್ತು ಸಾವಿರ ವ್ಯಾಪಾರ-೮*೮ ಮಳಿಗೆಯೊಂದರಲ್ಲೇ. ವ್ಯಾಪಾರಕ್ಕಿಟ್ಟದ್ದು ಪುಸ್ತಕಗಳು, ಕನ್ನಡದ ಶುಭಾಶಯ ಪತ್ರಗಳು ಮತ್ತು ಕನ್ನಡ ಬರಹಗಳಿದ್ದ ಟೀ ಷರ್ಟ್‌ಗಳು. ನಮ್ಮದೇ ಪರಿಕಲ್ಪನೆಯ ನಕಲು ಮಾಡಿದ ಇನ್ನೊಂದು ಮಳಿಗೆಗೂ ವ್ಯಾಪಾರ ಜೋರಾಗಿತ್ತು. ಇಂದು ಊಟದ ಸ್ಟಾಲ್‌ಗಳಲ್ಲಿ ಜನರ ಸಂಖ್ಯೆ ಸ್ವಾಭಾವಿಕವಾಗಿ ಕಡಿಮೆಯಿತ್ತು. ಅಡಿಗರ ಟಿಫನ್ ಬಾಕ್ಸ್ ಸೈಜಿನ ಊಟ ತುಂಬಿಕೊಂಡಿದ್ದ ಪಾತ್ರೆಗಳನ್ನು ನೋಡಿ ಯಾರಿಗಾದರೂ ಹೋಗಿ ಉಣ್ಣಲು ಧೈರ್ಯ ಬಂದೀತೆ? ಜನ ಸಿಕ್ಕ ಹೋಟೆಲುಗಳಲ್ಲಿ ಹೊಟ್ಟೆ ತುಂಬಿಸಿಕೊಂಡರು. ಮುಂದಿನ ಸಮ್ಮೇಳನಗಳಲ್ಲಿ ಊಟದದ ವ್ಯವಸ್ಥೆಗಳನ್ನು ಲಕ್ಷಾಂತರ ಮಂದಿಗೆ ಊಟ ಹಾಕಿ ಅನುಭವವಿರುವ ಮಠಗಳು ಅಥವ ರಾಜಕೀಯ ನಾಯಕರಿಗೆ ವಹಿಸಬಹುದೆಂಬುದು ಜನಗಳ ಅಂಬೋಣ.

ಉಳಿದಂತೆ ಪುಸ್ತಕಗಳನ್ನು ಬರೆದು ಬೋರು ಹೊಡೆಸುತ್ತಿದ್ದ ಲೇಖಕರು ಮಳಿಗೆಗಳಲ್ಲಿ ಕಾಣಿಸಿಕೊಂಡದ್ದು, ಕೊಂಡವರಿಗೆ ಸಹಿ ಹಾಕಿ ಕೊಡುತ್ತಿದ್ದದ್ದು ವಿಶೇಷ. ವಿಜಯ ಕರ್ನಾಟಕದ ಮಾಜಿ ಸಂಪಾದಕರಾದ ಭಟ್ಟರು ಮತ್ತು ಅವರ ಶಿಷ್ಯರು ಮಳಿಗೆ ಮತ್ತು ಮೇಳದ ಅಂಗಳದಲ್ಲಿ ಹೆಚ್ಚಾಗಿ ಕಾಣಿಸಿಕೊಂಡರು. ಟಿ ವಿ, ಪತ್ರಿಕೆಗಳವರು, ಹಾಡುವವರು, ಕುಣಿಯುವವರು ಸುಳ್ಳು ಸುಳ್ಳೇ ಗಾಂಭೀರ್ಯದ ಪೋಸು ಕೊಡುತ್ತಾ ಒದ್ದಾಡಿದರು. ಪತ್ರಕರ್ತರು ನಿನ್ನೆಯ ಧೂಳಿನ ಸೇಡನ್ನು ನೆಲ ಕೆರೆದು ಧೂಳೆಬ್ಬಿಸಿ ತೀರಿಸಿಕೊಂಡರು. ಚಂಪಾ ಮತ್ತು ವಸುಧೇಂದ್ರ ಅವರವರ ಮಳಿಗೆಗಳನ್ನು ನಿಭಾಯಿಸಿದರು. ನಿನ್ನೆ ಮತ್ತು ಇಂದು ಸೇರಿದರೆ ಸಮ್ಮೆಳನದಲ್ಲಿ ಐದರಿಂದ ಆರು ಕೋಟಿಯ ಪುಸ್ತಕಗಳು ವ್ಯಾಪಾರವಾಗಿರಬಹುದೆಂದು ವ್ಯಾಪಾರಿಗಳ ಅನಧಿಕೃತ ಸಂಘವೊಂದು ಪ್ರಕಟಿಸಿದೆ. ಕನ್ನಡ ಮನಸ್ಸುಗಳಿಗೆ ಇದಕ್ಕಿಂದ ಹರ್ಷದ ಸಂಗತಿ ಬೇರೊಂದುಂಟೆ? ಬನ್ನಿ ನಾಳೆ ಈ ಅಂಕಿಗಳನ್ನು ಅಟ್ಟಕ್ಕೇರಿಸೋಣ. ಹಾಗೇ ನಮ್ಮ ಮಳಿಗೆಯ ಸಂಖ್ಯ ೮೪. ಮರೆತೀರಿ ಮತ್ತೆ...



ಜನಪ್ರಿಯ ಲೇಖನಗಳು