7.15.2008

ಬರಿದಾದ ಭೂಮಿಯ ಮಡಿಲು ತುಂಬಿದವರೂ ಇದ್ದಾರೆ!

ಲೇಖಕರು: ಎಚ್.ಎಸ್. ಪ್ರಭಾಕರ, ಹಾಸನ
ಲೇಖನ ಕೃಪೆ: ಸಂಯುಕ್ತ ಕರ್ನಾಟಕ

ಈ ಜಗತ್ತಿನಲ್ಲಿ ನಾವು ನೀವು ಸೇರಿದಂತೆ ಜೀವಿಗಳು ಯಾವ ಕಾರಣಕ್ಕಾಗಿ ಜೀವಿಸಬೇಕು; ಜೀವಿಸುವ ಉದ್ದೇಶವಾದರೂ ಏನು ಎಂಬ ಅಂತಿಮ ಪ್ರಶ್ನೆಗೆ ‘ಹುಟ್ಟಿದ ಮೇಲೆ ಜೀವಿಸಲೇಬೇಕು’ ಎಂಬ ಹಾರಿಕೆ ಉತ್ತರ ಬಿಟ್ಟರೆ, ಈವರೆಗೂ ‘ಇದಮಿತ್ಥಂ’ (ಇದೇ ಸರಿ) ಎಂಬ ನಿರ್ದಿಷ್ಟ ‘ವೈಜ್ಞಾನಿಕ’ ಉತ್ತರ ಇನ್ನೂ ಯಾರಿಗೂ ಸಿಕ್ಕಿಲ್ಲ! ಆದರೆ ಹೇಗೆ ಜೀವಿಸಬೇಕು ಎಂಬ ಪ್ರಶ್ನೆಗೆ ಮಾತ್ರ ಅನಾದಿ ಕಾಲದಿಂದಲೂ ಆಯಾ ಕಾಲಕ್ಕನುಗುಣವಾಗಿ ಉತ್ತರಗಳು ಸಿಗುತ್ತಲೇ ಬಂದಿವೆ
.
ಆದರೆ ಈಗ ಜೀವ ವೈವಿಧ್ಯತೆಯಲ್ಲಿ ‘ಉತ್ಕೃಷ್ಟ’ ಎನಿಸಿಕೊಂಡಿರುವ ಮಾನವ ಹೇಗೆ ಜೀವಿಸುತ್ತಿದ್ದಾನೆ? ತನ್ನನ್ನು ‘ಹೆತ್ತು’, ಲಾಲನೆ, ಪಾಲನೆ ಪೋಷಣೆ ಮಾಡುತ್ತಿರುವ ಈ ಭೂ ತಾಯಿ, ಕೆಲವು ದಶಕಗಳಿಂದೀಚೆಗೆ ಕಾದ ಕೆಂಡದಂತೆ ‘ಜ್ವರ’ ಪೀಡಿತಳಾಗಲು ಆಕೆಯ ಮಕ್ಕಳೇ ಕಾರಣ. ಆಕೆಗೇನಾದರೂ ಸ್ವಲ್ಪ ಹೆಚ್ಚು ಕಡಿಮೆಯಾದರೂ ತಾವಾರೂ ಉಳಿಯುವುದಿಲ್ಲ ಎಂಬ ಪರಿಜ್ಞಾನವೂ ಇಲ್ಲದೆ, ಆಕೆಯ ಶುಶ್ರೂಷೆಯನ್ನೂ ಮಾಡದೆ ಆಕೆಯ ಸಕಲ ‘ಸಂಪತ್ತು, ಆಸ್ತಿ ಪಾಸ್ತಿ’ಗಳನ್ನೆಲ್ಲ ದೋಚಿ ‘ದೊಡ್ಡವ’ರಾಗಲು ಹವಣಿಸುತ್ತಿದ್ದಾರೆ.

ಆದರೆ ಈ ಮಕ್ಕಳಲ್ಲಿ ಭಾರತವೂ ಸೇರಿದಂತೆ ಜಗತ್ತಿನಲ್ಲಿರುವ ಕೆಲವು ‘ಪರೋಪಕಾರ’ ಸ್ಮರಣೆಯ ಕೃತಜ್ಞರು, ತಜ್ಞರು, ಪರಿಸರ ವಾದಿಗಳು ಇತ್ಯಾದಿ ಕಡಿಮೆ ಸಂಖ್ಯೆಯವರು ಮಾತ್ರ ಆತಂಕದಿಂದ ತಮ್ಮ ‘ತಾಯಿ’ಯ ಜ್ವರ ಇಳಿಸಿ ಆಕೆಯನ್ನು ಆರೋಗ್ಯವಂತಳನ್ನಾಗಿ ಮಾಡಲು ಆಕೆಗೆ “ವಿವಿಧ ಮಾತ್ರೆಗಳನ್ನು ನುಂಗಿಸುವ” ತಮ್ಮ ಕೈಲಾದ ಎಲ್ಲ ಪ್ರಯತ್ನ ಮುಂದುವರೆಸಿದ್ದಾರೆ. ಅಂತಹ ಜಾಗತಿಕ ಪ್ರಯತ್ನಗಳಲ್ಲಿ ಪ್ರಾಕೃತಿಕ ಅರಣ್ಯ ಬೆಳೆಸುವ ಮೂಲಕ ‘ಬಿ.ಸಿ.ಆರ್.ಟಿ. ಎಂಬ ಮಾತ್ರೆ’ಯೊಂದನ್ನು ಭೂ ತಾಯಿಯ ಬಾಯಿಗೆ ಹಾಕುವ ಪ್ರಯತ್ನವೂ ಒಂದಾಗಿದೆ! ಆ ಮೂಲಕ ‘ಜೀವ ವೈವಿಧ್ಯತೆ’ ಸೃಷ್ಟಿಸಿ ಭೂ ತಾಯಿಯ ಋಣ ತೀರಿಸುವ ಮಕ್ಕಳ ಸಾಲಿಗೆ ಹಾಸನ ತಾಲ್ಲೂಕು ಅನುಗನಾಳು ಎಂಬ ಕುಗ್ರಾಮಕ್ಕೆ ಸೇರಿದ ಡಾ. ಮಳಲಿಗೌಡರು ಹಾಗೂ ಅವರ ಸಹೋದರರಲ್ಲಿ ಒಬ್ಬರಾದ ಕೃಷ್ಣಮೂರ್ತಿಯೂ ಸೇರುತ್ತಾರೆ!

ಬಿ.ಸಿ.ಆರ್.ಟಿ. ಎಂದರೆ- ‘ಬಯೋ ಡೈವರ್ಸಿಟಿ ಕನ್ಸರ್ವೇಶನ್ ಅಂಡ್ ರೀಸರ್ಚ್ (ಜೀವ ವೈವಿಧ್ಯ ಸಂರಕ್ಷಣೆ ಹಾಗೂ ಸಂಶೋಧನಾ) ಟ್ರಸ್ಟ್’. ಇದೊಂದು ಲಾಭ ರಹಿತ ಪರಿಸರ ಸಂಘಟನೆ. ಹಾಸನದಿಂದ ಬೇಲೂರಿಗೆ ಹೋಗುವ ಹೆದ್ದಾರಿ ಬದಿಯ ಕ್ರಾಸ್‌ನಲ್ಲಿ ಇಳಿದು ಎಡಭಾಗ ಹೋದರೆ ಅನುಗನಾಳು ಸಿಗುತ್ತದೆ. ಹಾಸನದಿಂದ ಸುಮಾರು ೧೪ ಕಿ.ಮೀ ಅಷ್ಟೆ. ಈ ಗ್ರಾಮ ಇದೀಗ ಜಗತ್ತಿನ ಪರಿಸರ ಪ್ರಿಯರ ಗಮನ ಸೆಳೆದಿದೆ. ಗ್ರಾಮದ ರೈತ ರಂಗೇಗೌಡರ ಸುಶಿಕ್ಷಿತ ಮಕ್ಕಳಾದ ೩೯ ವರ್ಷದ ಸ್ನಾತಕೋತ್ತರ ಕೃಷಿ ಪಿ‌ಎಚ್‌ಡಿ ಪದವೀಧರ ಡಾ. ಮಳಲಿಗೌಡರು ಈಗ ಅಮೆರಿಕದಲ್ಲಿದ್ದಾರೆ. ಅವರು ವಿದೇಶಕ್ಕೆ ತೆರಳುವ ಮುನ್ನ ಸ್ವಗ್ರಾಮದಲ್ಲಿ ಮಾಡಿ ಹೋದ ಕೆಲಸ ಮಾತ್ರ ಅದ್ವಿತೀಯವೇ ಸರಿ. ಇಲ್ಲಿಯೇ ಇರುವ ಅವರ ಸಹೋದರ ಬಿ.ಕಾಂ. ಪದವೀಧರ ಕೃಷ್ಣಮೂರ್ತಿ, ಅಣ್ಣನನ್ನು ಅನುಸರಿಸಿ ಅವರೊಂದಿಗೆ ಕೈ ಜೋಡಿಸಿದರು. ಇಬ್ಬರೂ ನಿಸರ್ಗ ಪ್ರೇಮಿಗಳು ೬ ವರ್ಷಕ್ಕೂ ಹಿಂದೆ ಗ್ರಾಮಸ್ಥರ ಸಹಕಾರದೊಂದಿಗೆ ಈ ಒಂದು ಹೊಸ ‘ಪರಿಸರ ಸಾಹಸಕ್ಕೆ’ ನಾಂದಿ ಹಾಡಿದರು.

ರೋಚಕ ಕಥೆ: ಗ್ರಾಮದ ಹೊರ ವಲಯದಲ್ಲಿ ಕಲ್ಲು- ಬಂಡೆಗಳ ಸಹಿತ ಬಂಜರಾಗಿ ಬಿದ್ದಿದ್ದ ೧೦ ಎಕರೆ ‘ಕೆಲಸಕ್ಕೆ ಬಾರದ’ ಹಳ್ಳ ದಿಣ್ಣೆಗಳ ಸರ್ಕಾರಿ ಭೂಮಿಯಲ್ಲಿ ಅರಣ್ಯೀಕರಣ ಮಾಡುವ ಸಾಹಸಕ್ಕೆ ಇವರು ಕೈ ಹಾಕಿದರು. ೨೦೦೧ ಜೂನ್‌ನಲ್ಲಿ ಸಾಕಷ್ಟು ಸಂಖ್ಯೆಯ ಎಲ್ಲ ಜಾತಿಯ ಗಿಡಗಳನ್ನು ಅಲ್ಲಿ ನೆಟ್ಟು ಆರಂಭಿಕ ಪೋಷಣೆ ನೀಡಿದರು. ಸಸ್ಯ ವರ್ಗಕ್ಕೆ ಎದುರಾಗುವ ಪ್ರಾಕೃತಿಕ ಅಪಾಯ ತಪ್ಪಿಸುವ ರಕ್ಷಣಾ ಕಾರ್‍ಯ ಹೊರತುಪಡಿಸಿ, ಮತ್ಯಾವ ‘ಹೆಚ್ಚುವರಿ ಚಟುವಟಿಕೆ’ಯನ್ನೂ ಇವರು ಮಾಡದೆ, ಆ ಮಣ್ಣಿನಲ್ಲಿ ಸಂಭವಿಸಬಹುದಾದ ಜೈವಿಕ ಹಾಗೂ ಪ್ರಾಕೃತಿಕ ಪರಿವರ್ತನೆ ನಿರೀಕ್ಷಿಸುತ್ತಾ ಕಣ್ಗಾವಲಿಟ್ಟು ಕಾದರು.
‘ಬಿಸಿ‌ಆರ್‌ಟಿ’ ಬೆಳೆಸಲು ಡಾ. ಮಳಲಿಗೌಡರು ತಮ್ಮ ಉನ್ನತ ಶಿಕ್ಷಣಕ್ಕೆಂದು ದೊರೆತಿದ್ದ ೧ ಲಕ್ಷ ರೂ. ವಿದ್ಯಾರ್ಥಿ ವೇತನದಲ್ಲೇ ಒಂದು ಪಾಲು ಮೀಸಲಿಟ್ಟರು. ಜೊತೆಗೆ ನರ್ಸರಿಯನ್ನೂ ಮಾಡಿ ಗಿಡಗಳನ್ನು ರಿಯಾಯ್ತಿ ದರಕ್ಕೆ ಮಾರಾಟ ಮಾಡಿ ಅಷ್ಟೋ ಇಷ್ಟೋ ಹಣ ಸಂಗ್ರಹಿಸಿ ಇದಕ್ಕಾಗಿ ವಿನಿಯೋಗಿಸಿದರು. ಖರ್ಚು ಹೆಚ್ಚಾದಾಗ ತಮ್ಮ ಸ್ವಂತ ಹಣವನ್ನೂ ಬಂಡವಾಳವಾಗಿ ತೊಡಗಿಸಿದರು.

೧೦ ಎಕರೆಯಲ್ಲಿ ಆಗ ನೆಡಲ್ಪಟ್ಟ ಸಸ್ಯ ಸಂಕುಲದ ‘ಮಿನಿ ಅರಣ್ಯ’ದ ಸಾಮೂಹಿಕ ಜವಾಬ್ದಾರಿ ಹೊರಲು ಸಂಸ್ಥೆಯೊಂದು ಬೇಕೆನಿಸಿತು. ಈ ಚಿಂತನೆ ಫಲವಾಗಿ ೫ ತಿಂಗಳ ನಂತರ ಅದೇ ವರ್ಷ (೨೦೦೧) ಡಿಸೆಂಬರ್‌ನಲ್ಲಿ ಈ ‘ಬಿ.ಸಿ.ಆರ್.ಟಿ.’ ಸಂಸ್ಥೆಯನ್ನು ಡಾ. ಮಳಲಿಗೌಡರು ಸ್ಥಾಪಿಸಿದರು. ಈ ಬಿಸಿ‌ಆರ್‌ಟಿ ಬೆಳೆದ ಕಥೆ ರೋಚಕವಾಗಿದೆ. ಅವರ ಅಂದಿನ ನಿರೀಕ್ಷೆ ಹಾಗೂ ಆಶಯ ಈಗ ಫಲ ಕೊಟ್ಟಿದೆ. ಇದೆಲ್ಲ ಕೇಳಿದರೆ, ಕರ್ನಾಟಕದಲ್ಲಿ ಸುಮಾರು ೨ ವರ್ಷ ಓಡಿದ ಅತ್ಯಂತ ಯಶಸ್ವೀ ಚಲನ ಚಿತ್ರ ‘ಬಂಗಾರದ ಮನುಷ್ಯ’ದಲ್ಲಿನ ‘ರಾಜೀವ’ನ (ಡಾ. ರಾಜ್) ಪಾತ್ರ ನೆನಪಾಗುತ್ತದೆ! ಗ್ರಾಮಸ್ಥರ ಸಹಭಾಗಿತ್ವ ಇರುವುದರಿಂದ ಬಿಸಿ‌ಆರ್‌ಟಿಗೆ ಬೇಲಿಯೇನು ಇಲ್ಲ! ಜೀವನದುದ್ದಕ್ಕೂ ಮನುಷ್ಯ ತಾನು ಹೋದೆಡೆಯಲ್ಲೆಲ್ಲ ತನ್ನದೇ ಆದ ‘ಬೇಲಿ’ ಕಟ್ಟಿಕೊಂಡೇ ಅಲ್ಲವೇ ಹಾಳಾಗುತ್ತಿರುವುದು!?


ವೈವಿಧ್ಯತೆ ಮಹತ್ವ: ಒಂದು ನಿರ್ದಿಷ್ಟ ಪ್ರದೇಶದಲ್ಲಿ ಪ್ರಾಕೃತಿಕವಾಗಿ ಜನರ ಸಹಭಾಗಿತ್ವದಲ್ಲಿ ಜೀವ ವೈವಿಧ್ಯತೆ ಬೆಳೆಸುವ ಈ ಪ್ರಯತ್ನ, (ಜಾಗತಿಕ ಮಟ್ಟಕ್ಕೆ ಹೋಲಿಸಿದಾಗ ‘ಸಣ್ಣದು’ ಎನಿಸಿದರೂ) ದೇಶಕ್ಕೆ ದೊಡ್ಡದು ಹಾಗೂ ಕರ್ನಾಟಕದಲ್ಲೇ ಪ್ರಪ್ರಥಮ ಎನಿಸುವ ಬಹು ದೊಡ್ಡ ಸಾಧನೆ. ಏಕೆಂದರೆ ಅರಣ್ಯಗಳ ಮಹತ್ವ ತಿಳಿದವರಿಗೆ ಮಾತ್ರ ಇದು ಅರ್ಥವಾಗುತ್ತದೆಯೇ ಹೊರತು, ಉತ್ಪ್ರೇಕ್ಷೆಯಂತೂ ಅಲ್ಲ.
ಸಸ್ಯ ಸಂಕುಲ ಮಾನವನಿಗೆ ಆಮ್ಲಜನಕ ಪೂರೈಸುವ ಮೂಲಕ ‘ಜೀವ’ ನೀಡುತ್ತವೆ. ಮಣ್ಣಿನ ಸವಕಳಿ ತಡೆಗಟ್ಟುತ್ತವೆ. ಅಲ್ಲದೆ, ಆಹಾರ, ನೀರು, ನೆರಳು (ಮನೆ), ಬಟ್ಟೆ, ಉದ್ಯಮಗಳಿಗೆ ಬೇಕಾದ ಪರಿಕರಗಳು ಇತ್ಯಾದಿ ಏನೆಲ್ಲ ಕೊಟ್ಟು ಪೋಷಿಸುತ್ತಿವೆ. ‘ದ್ಯುತಿ ಸಂಶ್ಲೇಷಣೆ’ ಎಂಬ ನಿಗೂಢ ಕ್ರಿಯೆ ಮೂಲಕ ಸಸ್ಯಗಳು ತಮ್ಮ ಆಹಾರ ತಾವೇ ತಯಾರಿಸಿಕೊಂಡು ಮನುಷ್ಯನಿಗೆ ಹಗಲು ವೇಳೆ ಆಮ್ಲಜನಕ ನೀಡುತ್ತವೆ. ಎಷ್ಟು ಪ್ರಮಾಣ ನೀಡುತ್ತವೆ ಎಂಬುದು ಪ್ರತಿ ಗಿಡದಿಂದ ಗಿಡಕ್ಕೆ; ಮರದಿಂದ ಮರಕ್ಕೆ ಅವುಗಳ ವಯಸ್ಸಿಗೆ ಅನುಗುಣವಾಗಿ ಇದು ವ್ಯತ್ಯಾವಿದೆ. ಹೀಗಾಗಿ ಪ್ರತಿ ದಿನ ಬಿಡುಗಡೆ ಆಗುವ ಟನ್‌ಗಟ್ಟಲೆ ಆಮ್ಲಜನಕದ ಪ್ರಮಾಣವನ್ನು ನಿರ್ಧಿಷ್ಟವಾಗಿ ಹೇಳಲಾಗದು.

ಆದರೂ, ೧ ಹೆಕ್ಟೇರ್ ಅರಣ್ಯ ಒಂದು ದಿನಕ್ಕೆ ೩ ಟನ್ ಇಂಗಾಲದ ಡೈಯಾಕ್ಸೈಡ್ ಹೀರಿಕೊಂಡು ೨ ಟನ್ ಆಮ್ಲಜನಕ ವಿಸರ್ಜಿಸುತ್ತವೆ ಎಂಬ ಅಂದಾಜಿದೆ. ಮತೊಂದು ಲೆಕ್ಕಾಚಾರದ ಪ್ರಕಾರ ೧ ಗಿಡದ ೧ ಎಲೆ ೧ ಗಂಟೆಗೆ ೫ ಮಿ.ಲೀ. ಆಮ್ಲಜನಕ ನೀಡುತ್ತದೆ. ಎಲ್ಲ ಮರ ಗಿಡಗಳು ಹಗಲು ಆಮ್ಲಜನಕ ಹಾಗೂ ರಾತ್ರಿ ಇಂಗಾಲದ ಡೈಯಾಕ್ಸೈಡ್ ಬಿಡುಗಡೆ ಮಾಡಿದರೆ, ವಿಶೇಷವಾಗಿ ಅರಳಿ ಮರ ಮಾತ್ರ ದಿನದ ೨೪ ಗಂಟೆಯೂ ೧ ಗಂಟೆಗೆ ೩೬೦೦ ಕೆ.ಜಿ. ಆಮ್ಲಜನಕವನ್ನೇ ಉಗುಳುತ್ತದೆ! ಅದಕ್ಕಾಗಿಯೇ ಭಾರತೀಯರು ಅನಾದಿ ಕಾಲದಿಂದ ಅರಳಿಯನ್ನು ‘....ವೃಕ್ಷ ರಾಜಾಯತೇ ನಮಃ’ ಎಂದು ಪೂಜ್ಯ ಸ್ಥಾನದಲ್ಲಿಟ್ಟು ಪೋಷಿಸುತ್ತಿದ್ದಾರೆ! ಈ ಜಗತ್ತಿನಲ್ಲಿ ಇನ್ನೂ ಅನೇಕಾನೇಕ ಜೀವ ವೈವಿಧ್ಯ ವಿಸ್ಮಯಗಳಿವೆ.
ಇಷ್ಟಲ್ಲದೆ, ಪಕ್ಷಿ ಸಂಕುಲವು ಬೀಜ ಪ್ರಸಾರ ಮಾಡುತ್ತವೆ. ಕೀಟಗಳು ಹೂವಿಗೆ ಪರಾಗ ಸ್ಪರ್ಶ ಮಾಡಿ, ಆ ಮೂಲಕ ಸಸ್ಯ ಸಂಕುವನ್ನು ವೃದ್ಧಿಸುತ್ತವೆ. ಸಸ್ಯಗಳು ಬೆಳಕು-ನೀರು ಬಳಸಿಕೊಂಡು ನೇರವಾಗಿ ತಮ್ಮ ಆಹಾರ ತಾವೇ ತಯಾರಿಸಿಕೊಳ್ಳುತ್ತವೆ; ಯಾವ ‘ಬೆನ್ನು ಮೂಳೆ’ ಅಥವಾ ಅಸ್ತಿ ಪಂಜರದ ಸಹಾಯವಿಲ್ಲದೆ ಎದ್ದು ನಿಂತು ಮೇಲ್ಮುಖವಾಗಿ ಬೆಳೆಯುತ್ತವೆ. ಹಾಗೆ ನೋಡಿದರೆ, ಈ ನಿಸರ್ಗದಲ್ಲಿ ತನ್ನ ಜೀವ, ಆಹಾರ, ಬದುಕು ಮತ್ತಿತರ ಜೀವನೋಪಾಯಕ್ಕಾಗಿ ಮನುಷ್ಯನೇ ಮೇಲ್ಕಂಡವುಗಳ ಮೇಲೆ ಅವಲಂಬಿತನಾಗಿ ‘ಪರಾವಲಂಬಿ’ಯಾಗಿದ್ದಾನೆ. ದ್ಯುತಿ ಸಂಶ್ಲೇಷಣೆ, ಪರಾಗ ಸ್ಪರ್ಶ ಇತ್ಯಾದಿ ನಿಗೂಢ ಕ್ರಿಯೆಗಳನ್ನೆಲ್ಲ ಮಾನವನೇ ಮಾಡಿ ತೋರಿಸಿಬಿಡಲಿ ನೋಡೋಣ!?
ತನ್ನದೇ ಆದ ವಿಶಿಷ್ಟ ಜೀವ ವೈವಿಧ್ಯತೆ ಮೆರೆಯುತ್ತಾ ಬಂದಿರುವ ಈ ಜಗತ್ತಿನಲ್ಲಿ ಮಾನವ ಮಾತ್ರವೇ ‘ಜೀವಿ’ಯಲ್ಲ; ಕೋಟ್ಯಾಂತರ ಸಸ್ಯ- ಪ್ರಾಣಿ ಸಂಕುಲವೇ ಅಲ್ಲದೆ, ಭೂಮಿಯ ಪ್ರತಿ ಕಣ ಕಣದಲ್ಲೂ ಜೀವ ಇದೆ. ಇಂತಹ ‘ಜೀವ’ ಅಥವಾ ‘ಚೇತನ’ ಎಂದರೆ ಏನು ಅಥವಾ ಅದರ ಮೂಲ ಯಾವುದು ಎಂಬ ಮೂಲಭೂತ ಪ್ರಶ್ನೆಗೆ ಇನ್ನೂ ಉತ್ತರವೇ ಸಿಕ್ಕಿಲ್ಲ. ‘ಜೀವಿ’ ಹುಟ್ಟಿದ ನಂತರ ಒಂದಲ್ಲ ಒಂದು ದಿನ ಸಾಯಲೇಬೇಕು; ಹಾಗೂ ಅಲ್ಲಿಯವರೆಗೆ ಜೀವ ವೈವಿಧ್ಯತೆಯ ‘ಜೀವನ ಚಕ್ರ’ದಲ್ಲಿ ಒಂದಕ್ಕೊಂದು ಪೂರಕವಾಗಿ ಸಮತೋಲನ ಕಾಪಾಡಿಕೊಂಡು ಜೀವಿಸಬೇಕು ಎಂಬುದಷ್ಟೆ ಈಗ ಗೊತ್ತಿರುವ ಸತ್ಯ. ಆದರೆ ತಾನೊಬ್ಬ ಮಾತ್ರ ‘ಚೆನ್ನಾಗಿ ಜೀವಿಸಬೇಕು’ ಎಂಬ ಅಜ್ಞಾನದ ದುರಾಸೆಯಿಂದ ಮಾನವ ಬೇರೆ ಜೀವಿಗಳ ವಿನಾಶ ಮಾಡಲು ಹೊರಟು, ಈ ಜೀವ ಚಕ್ರದ ಸಮತೋಲನ ಕೆಡಿಸುತ್ತಿದ್ದಾನೆ. ‘ನಿನಗೆ ಜೀವ ಕೊಡುವ ಸಾಮರ್ಥ್ಯವಿಲ್ಲ ಎಂದ ಮೇಲೆ; ಅದನ್ನು ತೆಗೆಯುವ ಹಕ್ಕೂ ಇಲ್ಲ’ ಎಂಬ ಭಗವಾನ್ ಬುದ್ಧನ ಮಾತು ಎಷ್ಟೊಂದು ಅರ್ಥಗರ್ಭಿತ!
ಯಶಸ್ಸಿನ ಕಥೆ: ಆರಂಭದಲ್ಲಿ ಅನುಗನಾಳು ಬಿ.ಸಿ.ಆರ್.ಟಿ. ಬಂಜರು ಭೂಮಿಯ ಮೇಲೆ ನೈಸರ್ಗಿಕವಾಗಿ ಹುಲ್ಲು ಬೆಳೆಯಲಿಕ್ಕೇ ೨ ವರ್ಷ ಕಾಲಾವಧಿ ಬೇಕಾಯಿತು. ಹೀಗೆಯೇ ನೈಸರ್ಗಿಕ ಪರಿವರ್ತನೆ ಸಾಗುತ್ತಾ ಹೋಯಿತು. ಮರ ಗಿಡಗಳಿಂದ ಉದುರಿದ ಎಲೆ, ಕಸ, ಕಡ್ಡಿಗಳು ನೆರಳಿನ ತಂಪು ತೇವಾಂಶದೊಂದಿಗೆ ಮಣ್ಣಿನಲ್ಲಿ ಕರಗಿ ಗೊಬ್ಬರವಾಗಿ, ಹದವಾಗಿ ಬೆರೆತು ಸಾವಯವ ಚಟುವಟಿಕೆಗೆ ನಾಂದಿ ಹಾಡಿತು. ಮಣ್ಣು ಹಾಗೂ ತೇವಾಂಶ ಭೂಮಿಯಲ್ಲೇ ಭದ್ರವಾಗಿ ಹಿಡಿದಿಡಲ್ಪಟ್ಟು, ಎರೆಹುಳು ಸೇರಿದಂತೆ ಅನೇಕ ವಿವಿಧ ಸಣ್ಣ ಹುಳು ಹುಪ್ಪಟೆ ಸೇರಿಕೊಂಡು ಸಾವಯವ ನೈಸರ್ಗಿಕ ವಿಭಜನೆಯ ಕ್ರಿಯೆ ಸಾಗುತ್ತಾ ಮಣ್ಣಿನ ಫಲವತ್ತತೆ ಹೆಚ್ಚಿತು. ಈ ಎರೆಹುಳು ತೇವಾಂಶ ಹುಡುಕಿಕೊಂಡು ೧ ರಾತ್ರಿಗೇ ೧೦೦೦ ಮೀ (೧ ಕಿ.ಮೀ.) ವೇಗವಾಗಿ ಭೂಮಿಯೊಳಗೇ ಸಾಗುತ್ತದಂತೆ!

ಕೆಲವು ನಿರ್ದಿಷ್ಟ ಮರ ಗಿಡಗಳಿಂದ ಆಕರ್ಷಿಸಲ್ಪಟ್ಟು ೩೪ ಜಾತಿಯ ವಿವಿಧ ಪಕ್ಷಿಗಳು ಬಂದು ಸೇರಿದವು. ಜತೆಗೆ ಕ್ರಿಮಿ ಕೀಟಾದಿಗಳಿಂದಾಗಿ ಕ್ರಮವಾಗಿ ನೈಸರ್ಗಿಕ ಬೀಜ ಪ್ರಸಾರ ಹಾಗೂ ಪರಾಗ ಸ್ಪರ್ಷ ಚಟುವಟಿಕೆ ಆರಂಭಗೊಂಡಿತು. ಇದೀಗ ಬಿಸಿ‌ಆರ್‌ಟಿ ಅರಣ್ಯದಲ್ಲಿ ೧೦-೧೨ ಜಾತಿಯ ಹೊಸ ಮರಗಳು ತಾವಾಗಿಯೇ ಹುಟ್ಟಿ ಬೆಳೆದಿವೆ; ಮುಂದೆ ದೊಡ್ಡ ಮರಗಳಾಗಿ ಬೆಳೆಯಬಲ್ಲ ಆಲ, ಅರಳಿಯಂತಹ ಗಿಡಗಳು ಇಲ್ಲಿನ ಕಲ್ಲು ಬಂಡೆಗಳು ಹಾಗೂ ಅವುಗಳ ಸೀಳಿನಲ್ಲಿ ಟಿಸಿಲೊಡೆದು, ತಾವಾಗಿ ಬೆಳೆಯುತ್ತಿವೆ. ಇದೆಲ್ಲವುಗಳ ಫಲವಾಗಿ ಇದೀಗ ಬಿಸಿ‌ಆರ್‌ಟಿ ದಟ್ಟ ಅರಣ್ಯವೇ ಆಗಿ ರೂಪು ತಾಳಿದೆ! ಒಂದು ದಿನ ಇದ್ದಕ್ಕಿದ್ದಂತೆ ನವಿಲುಗಳು ಇಲ್ಲಿ ಕಾಣಸಿಕೊಂಡವು! ಇನ್ನೂ ಏನೇನು ಪ್ರಾಣಿ ಪಕ್ಷಿಗಳು ಏಕೆ ಮತ್ತು ಹೇಗೆ ಇಲ್ಲಿಗೆ ಬಂದು ಸೇರುತ್ತವೋ ಆ ನಿಸರ್ಗಕ್ಕೇ ಗೊತ್ತು!
ಕೆಲವೇ ವರ್ಷಗಳ ಹಿಂದೆ ಹಳ್ಳ-ದಿಣ್ಣೆ, ಕಲು-ಬಂಡೆಗಳ ಬಂಜರಾಗಿದ್ದ ಇಲ್ಲಿನ ಭೂಮಿಯಲ್ಲೀಗ ಯಾವ ಭಾಗದಲ್ಲಿ ಮಣ್ಣು ಕೆದಕಿದರೂ ಒಳಗೆ ತೇವಾಂಶದ ನಡುವೆ ಸಣ್ಣ ಎರೆ ಹುಳು ಹಾಗೂ ಕ್ರಿಮಿ ಕೀಟಾದಿಗಳು ಓಡಾಡುವುದು ಕಂಡು ಬರುತ್ತದೆ; ದಟ್ಟವಾದ ‘ಝಿರ್’ ಎನ್ನುವ ನಿತ್ಯ ಹರಿದ್ವರ್ಣದ ಮಳೆ ಕಾಡುಗಳಲ್ಲಿ ಓಡಾಡುತ್ತಿರುವ ಅನುಭವ; ಒಳಭಾಗದಲ್ಲಿ ಒಂದು ರೀತಿ ಮಣ್ಣಿನ ‘ಘಮ್ಮೆನ್ನುವ’ ವಾಸನೆ!

ಜಗತ್ತು- ದೇಶದ ಪಾಲು: ೪ ಲಕ್ಷ ಕೋಟಿ (ಬಿಲಿಯನ್) ವರ್ಷಗಳ ವಿಕಾಸದ ಫಲವಾಗಿ ಇಂದು ಜೀವ ವೈವಿಧ್ಯತೆ ರೂಪುಗೊಂಡಿದೆ ಎಂಬ ಅಂದಾಜಿದೆ. ಭೂಮಿ ಹುಟ್ಟಿದ ನಂತರ ಈಗ್ಗೆ ೬೦೦ ದಶಲಕ್ಷ ವರ್ಷಗಳ ಹಿಂದಿನ ಕಾಲದವರೆಗೂ ‘ಅಮೀಬಾ’ದಂತಹ ಏಕ ಕೋಶ ಜೀವಿಗಳದ್ದೇ ಸಾಮ್ರಾಜ್ಯವಾಗಿತ್ತು; ಕಳೆದ ೫೪೦ ದಶಲಕ್ಷ ವರ್ಷಗಳಿಂದೀಚೆಗೆ ಮಾತ್ರ ಜೀವ ವೈವಿಧ್ಯತೆ ಇತಿಹಾಸ ವೇಗವಾಗಿ ಬೆಳೆದಿದ್ದು, ೩೦೦ ದಶಲಕ್ಷ ವರ್ಷಗಳಿಂದೀಚೆಗಷ್ಟೆ ‘ಆಧುನಿಕ ಜೀವ ವೈವಿಧ್ಯತೆ’ ಕಂಡು ಬಂದಿದೆ ಎಂಬ ಊಹೆ ಇದೆ!
ಈ ಲಕ್ಷ ಕೋಟಿ ವರ್ಷಗಟ್ಟಲೆ ಕಾಲಮಾನದಲ್ಲಿ ಈವರೆಗೆ ೫ ಬಾರಿ ‘ಪ್ರಾಕೃತಿಕ ವಿನಾಶ’ಗಳು ಸಂಭವಿಸಿದ್ದು, ಹಾಲಿ ಜೀವ ವೈವಿಧ್ಯತೆ ಈಗ ೬ನೇ ಸಮೂಹ ವಿನಾಶಕ್ಕೆ ಸಾಕ್ಷಿಯಾಗುತ್ತಿದೆ; ಕ್ರಿ.ಶ. ೧೫೦೦ ರಿಂದೀಚೆಗೆ ಇಂತಹ ೭೮೪ ವಿನಾಶಗಳು ಸಂಭವಿಸಿವೆ ಎಂದು ‘ಪ್ರಾಕೃತಿಕ ಸಂಪನ್ಮೂಲ ಮತ್ತು ಪ್ರಕೃತಿ ಸಂರಕ್ಷಣಾ ಅಂತಾರಾಷ್ಟ್ರೀಯ ಸಂಘಟನೆ’ (ಅಮೆರಿಕ) ದಾಖಲಿಸಿದೆ; ಕಳೆದ ಶತಮಾನದಿಂದೀಚೆಗೆ ೨೦ ಸಾವಿರದಿಂದ ೨ ದಶ ಲಕ್ಷ ಜೀವ ಸಂಕುಲ ನಾಶವಾಗಿವೆಯಂತೆ! ಈಗಿನ ತಿಳಿವಳಿಕೆಯಂತೆ ಪ್ರತಿ ವರ್ಷ ೧,೪೦,೦೦೦ ಜೀವ ಸಂಕುಲ ನಾಶವಾಗುತ್ತಿದೆ; ಪ್ರಸ್ತುತ ವಾದಗಳ ಪ್ರಕಾರ ಈಗಿನ ವಿನಾಶದ ವೇಗವನ್ನು ನೋಡಿದರೆ, ಬಹುತೇಕ ತಳಿಗಳು (ಜೀವ ಸಂಕುಲ) ಭೂಮಿಯಿಂದ ಕಣ್ಮರೆಯಾಗಲು ಇನ್ನು ೧೦೦ ವರ್ಷ ಸಾಕು ಎಂಬ ಆತಂಕವೂ ಇದೆ! ಇಷ್ಟಾದರೂ ಸಹ, ಪ್ರತಿ ವರ್ಷ ಕ್ರಮವಾಗಿ ಸರಾಸರಿ ೫ ರಿಂದ ೧೦ ಸಾವಿರ ಹೊಸ-ಹೊಸ ಜೀವ ಸಂಕುಲಗಳನ್ನು ಸಂಶೋಧಿಸಲಾಗುತ್ತಿದೆ; ಇವುಗಳಲ್ಲಿ ಬಹುತೇಕ ಕೀಟಗಳೇ ಆಗಿವೆ; ಅಲ್ಲದೆ, ಭೂಮಿ ಮೇಲಿನ ಕಷೇರುಕಗಳಲ್ಲಿ ಶೇ.೯೦ ರಷ್ಟನ್ನು ಇನ್ನು ವಿಂಗಡಿಸಿಲ್ಲ!! ಜಗತ್ತಿನ ಜೀವ ವೈವಿಧ್ಯತೆಯಲ್ಲಿ ಒಟ್ಟಾರೆ ಸಸ್ಯ ವರ್ಗದ ಪ್ರಭೇದಗಳು ೨,೮೭,೬೫೫ ಹಾಗೂ ಪ್ರಾಣಿ ವರ್ಗ ೧೨,೫೦,೦೦೦ ಸೇರಿ ಒಟ್ಟಾರೆ ೧೫,೩೭,೬೫೫ ಜೀವಿಗಳಿವೆ ಎಂಬ ಅಂದಾಜಿದೆ!

ಪ್ರಾಕೃತಿಕ ನಿಯಮದಂತೆ ಜೈವಿಕ ಸಮತೋಲನಕ್ಕಾಗಿ ಭೂಮಿಯ ಮೇಲೆ ಶೇ. ೩೩ ರಷ್ಟು ಅರಣ್ಯ ಪ್ರದೇಶ ಇರಲೇಬೇಕು; ಹಿಂದೆ ಇತ್ತು. ಆದರೆ ದುರದೃಷ್ಟವಶಾತ್ ದುರಾಸೆಯ ಮಾನವನ ಅರಣ್ಯ ನಾಶ ಚಟುವಟಿಕೆಯಿಂದಾಗಿ ಇದೀಗ ಈ ಪ್ರಮಾಣ ಶೇ.೧೨ಕ್ಕೆ ಕುಸಿದಿದೆ. ಕಾಡುಗಳನ್ನು ‘ಸಂರಕ್ಷಿಸಲು’ ಅರಣ್ಯ ಇಲಾಖೆ ಕೋಟ್ಯಾಂತರ ರೂ. ಖರ್ಚು ಮಾಡುತ್ತದೆ; ಅರಣ್ಯ- ಅದರಲ್ಲೂ ನೈಸರ್ಗಿಕ ಅರಣ್ಯವನ್ನು ಹೇಗೆ ಬೆಳೆಸಿ ಸಂರಕ್ಷಿಸಬೇಕೆಂಬುದಕ್ಕೆ ಬಹುಷಃ ಈ ಬಿ.ಸಿ.ಆರ್.ಟಿ.ಯೇ ಮಾದರಿ.
ಭೂ ಮಂಡಲದಲ್ಲಿ ಸ್ಥೂಲವಾಗಿ ಶೀತ ವಲಯಗಳು ಹಾಗೂ ಸಮ ಶೀತೋಷ್ಣ ವಲಯಗಳು ತಲಾ ೨ ಹಾಗೂ ೧ ಉಷ್ಣ ವಲಯ ಇವೆ ಎಂಬುದನ್ನು ಪಠ್ಯದಲ್ಲೇ ಓದಿದ್ದೇವೆ. ಭಾರತದ ಮಧ್ಯೆ ಹಾದು ಹೋಗುವ ‘ಕರ್ಕಾಟಕ ಸಂಕ್ರಾಂತಿ ವೃತ್ತ ರೇಖೆ ಹಾಗೂ ಸಮಭಾಜಕ ವೃತ್ತದಿಂದ ದಕ್ಷಿಣಕ್ಕಿರುವ ‘ಮಕರ ಸಂಕ್ರಾಂತಿ ವೃತ್ತ ರೇಖೆಗಳ ನಡುವಣ ಉಷ್ಣ ವಲಯವೇ ಜಗತ್ತಿನ ಅತ್ಯಂತ ಹೆಚ್ಚು ಜೀವ ವೈವಿಧ್ಯತೆ ಹೊಂದಿರುವ ತಾಣವಾಗಿದೆ. ಈ ವಲಯದಲ್ಲಿ ಒಟ್ಟಾರೆ ೩೪ ‘ತೀಕ್ಷ್ಣ ಜೀವ ವೈವಿಧ್ಯ’ (ಅಪಾಯದಲ್ಲಿರುವ ‘ಹಾಟ್ ಸ್ಪಾಟ್’) ವಿಭಾಗಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ೪ ಭಾರತದಲ್ಲಿವೆ! ಅವುಗಳೆಂದರೆ, ಹಿಮಾಲಯ, ಪಶ್ಚಿಮ ಘಟ್ಟಗಳು/ಶ್ರೀಲಂಕಾ, ಇಂಡೋ ಬರ್ಮ ಮತ್ತು ಸೂಂದ ಲ್ಯಾಂಡ್ ಎಂದು ಭೌಗೋಳಿಕವಾಗಿ ಗುರುತಿಸಲಾಗಿದೆ.

ಭೂ ತಾಪಮಾನ ಏರಿಕೆಗೆ ಕಾರಣವಾಗಿರುವ ಮಾನವನ ಮಿತಿ ಮೀರಿದ ದುರಾಸೆಯ ಹಾಗೂ ಐಷಾರಾಮಿ ಚಟುವಟಿಕೆಗಳಿಂದ ಇಂಗಾಲದ ಡೈಯಾಕ್ಸೈಡ್ ಪ್ರಮಾಣ ಹೆಚ್ಚಾಗಿ ಭೂಮಿಯ ಉಷ್ಣತೆ ಒಂದೇ ಸಮನೆ ಏರುತ್ತಿದೆ. ಶೀತ ಪ್ರದೇಶದ ಹಿಮ ಗಡ್ಡೆಗಳು ಕರಗುತ್ತಾ ಸಮುದ್ರದ ಮಟ್ಟ ಏರುತ್ತದೆ. ‘ಹಸಿರು ಮನೆ’ ಪರಿಣಾಮವಾಗಿ ಭೂ ತಾಪಮಾನ ಇನ್ನು ಅರ್ಧ ಡಿಗ್ರಿ ಸೆಂಟಿಗ್ರೇಡ್‌ನಷ್ಟು ಏರಿದರೂ ಭಾರತದಲ್ಲಿ ಗೋಧಿ ಇಳುವರಿ ಶೇ. ೧೭ ರಷ್ಟು ಕಡಿಮೆಯಾಗಲಿದೆ.೧೫೦ ವರ್ಷಗಳಲ್ಲಿ ಅತಿ ಬೇಸಿಗೆಯ ೧೧ ಋತುಗಳು ೧೯೯೫ ರಿಂದೀಚೆಗೇ ದಾಖಲಾಗಿವೆ. ಹಿಮಾಲಯದ ಹಿಮ ಝರಿಗಳು ೨೦೩೫ ರ ವೇಳೆಗೆ ಪೂರ್ಣ ಬತ್ತಲಿವೆ. ಕಳೆದ ೧ ದಶಕದಲ್ಲಿ ನಮ್ಮ ಪಶ್ಚಿಮ ಘಟ್ಟಗಳಲ್ಲಿ ಕಣ್ಮರೆಯಾಗಿರುವ ಸಸ್ಯ-ಪ್ರಾಣಿ ವರ್ಗ ವೈವಿಧ್ಯತೆ, ಕಳೆದ ೧೦೦ ವರ್ಷಗಳಲ್ಲಿ ಆಗಿರುವ ವಿನಾಶಗಳಿಗಿಂತಲೂ ಅಧಿಕವೆಂದು ಕೆಲವು ಅಂಕಿ ಅಂಶ ಹೇಳಿವೆ!
ಬಿಸಿಯಾಗುತ್ತಿರುವ ಭೂಮಿಯ ತಾಪವನ್ನು ಭಾಷಣಗಳ ಉಗುಳಿನಿಂದ ತಂಪು ಮಾಡಲು ಖಂಡಿತ ಸಾಧ್ಯವಿಲ್ಲ. ಹೀಗಾಗಿ ಇಂತಹ ಬಿ.ಸಿ.ಆರ್.ಟಿ.ಗಳು ಆಯಾ ಪ್ರದೇಶದ ಭೌಗೋಳಿಕ ಹವಾಗುಣ, ಮಣ್ಣಿನ ಗುಣಕ್ಕೆ ತಕ್ಕಂತೆ ಪ್ರತಿ ಹಳ್ಳಿಗಳಲ್ಲೂ ರೂಪುಗೊಳ್ಳಬೇಕು. ಆಗ ಮಾತ್ರ ಜೀವ ವೈವಿಧ್ಯತೆ ಉಳಿದು- ಬೆಳೆದು, ಭೂಮಿ ತಂಪಾಗಿ, ‘ಜೀವ ವೈವಿಧ್ಯ ಚಕ್ರ’ ಸಮತೋಲನಗೊಂಡು, ನಾವು ನೀವುಗಳೂ ಸಹ ಉಳಿಯಲು ಸಾಧ್ಯವಾಗುತ್ತದೆ.

ನಮ್ಮ ದೇಶದಲ್ಲಿ ಜೀವ ವೈವಿಧ್ಯತೆಯ ಒಟ್ಟಾರೆ ೧೦ ಭೌಗೋಳಿಕ ವಲಯಗಳಿವೆ. ಅವುಗಳು- ನಿತ್ಯ ಹರಿದ್ವರ್ಣದ ಮಳೆ ಕಾಡುಗಳು ಇರುವ ಮಹಾರಾಷ್ಟ್ರ, ಕರ್ನಾಟಕದ ಪಶ್ಚಿಮ ಘಟ್ಟಗಳು, ತಮಿಳುನಾಡು ಮತ್ತು ಕೇರಳ ದಕ್ಷಿಣ ಭಾರತದಲ್ಲಿವೆ. ಉಳಿದ ೪ ವಲಯಗಳು ಬಂಗಾಳ ಕೊಲ್ಲಿಯ ಅಂಡಮಾನ್ ನಿಕೋಬಾರ್ ದ್ವೀಪಗಳು ಹಾಗೂ ಘಟ್ಟ ಪ್ರದೇಶ ಸೇರಿದಂತಿರುವ ಇಡೀ ಪಶ್ಚಿಮ ಬಂಗಾಳದ ಉತ್ತರ ವಲಯದಲ್ಲೇ ಇವೆ. ಉಳಿದ ಮತ್ತೊಂದು ಹಿಮಾಲಯ.

ವಿಶೇಷಗಳು: ಜೀವ ವೈವಿಧ್ಯತೆ ಬೆಳೆಸುವುದಷ್ಟಕ್ಕೇ ಬಿ.ಸಿ.ಆರ್.ಟಿ. ಸೀಮಿತವಾಗಿಲ್ಲ. ಇಲ್ಲಿ ಕೆಲವು ವಿಶೇಷಗಳೂ ಇವೆ! ನಿಸರ್ಗ ಜಾಗೃತಿ ಉಂಟುಮಾಡುವ ಪ್ರಯತ್ನವಾಗಿ ಇಲ್ಲಿನ ಪ್ರತಿ ಮರ-ಗಿಡಗಳ ಮೇಲೆ ಒಂದೊಂದು ಪರಿಸರ ಪ್ರಿಯ ನಾಣ್ಣುಡಿಗಳನ್ನು ಬರೆದು ತೂಗು ಹಾಕಲಾಗಿದೆ. ಅಲ್ಲದೆ ‘ಪರಿಸರ ಪ್ರಿಯ’ ವಿವಾಹಗಳು ಇಲ್ಲಿ ನಡೆಯುತ್ತಿವೆ! ಅನುಗನಾಳು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನವ ವಧು-ವರರು ಇಲ್ಲಿಗೆ ಬಂದು ಅರಣ್ಯದ ನಡುವೆ ವಿವಾಹವಾಗಿ ತಾವೂ ಸಹ ಒಂದು ಗಿಡ ನೆಟ್ಟು ಹೋಗುತ್ತಾರೆ! ೨೦೦೪ ರಿಂದ ಕೃಷ್ಣಮೂರ್ತಿ ಈ ಪದ್ಧತಿ ಆರಂಭಿಸಿದ್ದಾರೆ. ಅಲ್ಲದೆ ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಹಬ್ಬಗಳನ್ನು ಇಲ್ಲಿನ ಪರಿಸರದಲ್ಲಿ ಆಚರಿಸಲಾಗುತ್ತದೆ.
ಬಿ.ಸಿ.ಆರ್.ಟಿ.ಯಲ್ಲೇ ಒಂದು ನೈಸರ್ಗಿಕ ಕೃಷಿಯ ಬ್ಲಾಕ್, ಹೂ ತೋಟ, ಕೃಷಿ ಅರಣ್ಯ, ಔಷಧಿ ವನ, ೫ ಹಂದಿ ಸಾಕಬಹುದಾದ ‘ಹಂದಿ ಸಾಕಾಣಿಕೆ ಘಟಕ’ ಹಾಗೂ ಎರೆಹುಳು ಬ್ಲಾಕ್ ಸಹ ಇದೆ. ಇಲ್ಲಿನ ಕೃತಕ ನೀರು ಹಾಸಿನ ಅಜೋಲ ಜಾತಿಯ ಅಪರೂಪದ ಪಾಚಿಯನ್ನೂ ಅರೆ ನೆರಳಿನಲ್ಲಿ ಬೆಳೆಸಲಾಗಿದೆ. ಕೃಷಿ ಅರಣ್ಯದಲ್ಲಿ ಕಾಫಿ ಗಿಡಗಳೂ ಇವೆ. ಹಾಸನ-ಬೇಲೂರು ರಸ್ತೆ ಕ್ರಾಸ್‌ನಿಂದ ಅನುಗನಾಳಿಗೆ ಬರುವ ಮುಖ್ಯ ರಸ್ತೆಯುದ್ದಕ್ಕೂ ಎರಡೂ ಬದಿ ಸಾಲು ಮರಗಳನ್ನು ನೆಡಲಾಗಿದೆ.

ಬಿಸಿ‌ಆರ್‌ಟಿಗೆ ಎದುರು ರಸ್ತೆಯ ಆಚೆ ಬದಿ ಇದಕ್ಕೇ ಸೇರಿದ ಔಷಧಿ ವನವಿದೆ. ಇಲ್ಲಿ ಆಯುರ್ವೇದದ ಸುಮಾರು ೬೦ ಜಾತಿಯ ಚಿತ್ರ ವಿಚಿತ್ರ ವಿಸ್ಮಯಕಾರಿ ಔಷಧಿ ಗಿಡಗಳನ್ನು ಬೆಳೆಸಲಾಗಿದೆ. ೨ ತಿಂಗಳಿಗೊಮ್ಮೆ ಇಲ್ಲಿ ಪರಂಪರಾಗತ ನಾಟಿ ವೈದ್ಯರ ಸಭೆ ನಡೆಸಿ ಅವರಿಂದ ವಿವರಗಳನ್ನು ಸಂಗ್ರಹಿಸುತ್ತಿರುವುದು ಇಲ್ಲಿನ ಮತ್ತೊಂದು ವಿಶೇಷ! ಶತಮಾನಗಳಷ್ಟು ಹಿಂದಕ್ಕೆ ಹೋದಾಗ, ಪ್ರಾಚೀನ ಪುರಾತನ ಆಯುರ್ವೇದದ ಪೂಜ್ಯ ಗುರುಗಳಲ್ಲಿ ಒಬ್ಬರಾದ ಆತ್ರೇಯ ಮುನಿಯ ಬಳಿ ಶಿಷ್ಯರಾಗಿದ್ದ ಪ್ರಾಚೀನ ಪ್ರಖ್ಯಾತ ವೈದ್ಯ ‘ಜೀವಕ’ರು, ‘ಏನು ಗುರುದಕ್ಷಿಣೆ ನೀಡಲಿ’ ಎಂದು ಗುರುವನ್ನು ಕೇಳಿದರಂತೆ; ಆಗ ಆತ್ರೇಯರು, ‘ಈ ಜಗತ್ತಿನಲ್ಲಿ ಔಷಧೀಯ ಗುಣವಿಲ್ಲದ ಒಂದು ಸಸ್ಯವನ್ನು ಹಿಡಿದು ತಾ’ ಎಂದು ಅಪ್ಪಣೆ ಕೊಟ್ಟರಂತೆ! ಇಡೀ ಭೂಮಂಡಲ ಸುತ್ತಿ ಸುಳಿದರೂ ಅಂತಹ ಗಿಡ ಕಣ್ಣಿಗೆ ಕಾಣದೆ ಜೀವಕರು ಹಿಂದಿರುಗಿ ‘ನಾನು ಸೋತೆ’ ಎಂದು ತಲೆ ತಗ್ಗಿಸಿದರಂತೆ! ಆಗು ಆತ್ರೇಯರು, ‘ಶಹಬ್ಬಾಸ್! ಈ ಉತ್ತರವೇ ನೀನು ನನಗೆ ಕೊಡಬೇಕಾದ ಗುರು ದಕ್ಷಿಣೆಯಾಗಿತ್ತು; ಇನ್ನು ಹೋಗಿ ಬಾ’ ಎಂದು ಕಳುಹಿಸಿಕೊಟ್ಟರಂತೆ!

ಮಳಲಿಗೌಡರ ಮತ್ತೊಂದು ಕನಸಾಗಿದ್ದ ‘ಡಿ.ಎನ್.ಎ. (ವಂಶವಾಹಿ-ಜೀನ್) ಮಂದಿರ’ ನಿರ್ಮಿಸಲು ಸಂಕಲ್ಪಿಸಲಾಗಿದೆ. ಔಷಧಿ ವನಕ್ಕೆ ಹೊಂದಿಕೊಂಡಂತೆ ೨೦೦೦ ಜ.೧ ರಂದು ಶಿಲಾನ್ಯಾಸವನ್ನೂ ಮಾಡಲಾಗಿದೆ. ಅದರ ರೂಪುರೇಷೆ ಸಿದ್ದವಾಗುತ್ತಿದೆ!!
ಊರಿನ ಕೆರೆಯ ಬಳಿ ಪಕ್ಷಿ ಧಾಮವೊಂದನ್ನೂ ಮಾಡುವ ಯೋಜನೆಯೂ ಕೃಷ್ಣಮೂರ್ತಿಗಳಿಗಿದೆ. ಕೆರೆ ಹೂಳು ಎತ್ತಿಸಿ ಬೇಸಿಗೆಯಲ್ಲೂ ಕೆರೆಯಲ್ಲಿ ನೀರು ಹಿಡಿದಿಟ್ಟುಕೊಂಡರೆ ವಿವಿಧ ಜಾತಿಯ ಪಕ್ಷಿಗಳು ಬರುತ್ತವೆ. ಈಗಾಗಲೇ ಇಲ್ಲಿ ೨೪ ಜಾತಿಯ ಪಕ್ಷಿಗಳು ಇವೆ.
ಊರಿನ ಕೆರೆಯ ಹೂಳು ತೆಗೆಯುವಾಗ ಭೂಯಿಯೊಳಗೆ ಸಿಕ್ಕಿದ ಕೆಲವು ಐತಿಹಾಸಿಕ ಸ್ಮಾರಕಗಳನ್ನು ಇಲ್ಲಿ ತಂದಿಟ್ಟು ರಕ್ಷಿಸಲಾಗುತ್ತಿದೆ. ಬಿ.ಸಿ.ಆರ್.ಟಿ. ಸರ್ಕಾರಿ ಭೂಮಿಯಾಗಿದ್ದು, ಇಲ್ಲಿ ಇದೀಗ ಬೆಳೆದು ನಿಂತಿರುವ ಅಸಂಖ್ಯ ಗಿಡ ಮರಗಳ ಸಮೀಕ್ಷೆ ಇನ್ನೂ ಆಗಿಲ್ಲ. ಈ ಭೂ ಪ್ರದೇಶವನ್ನು ಬಿ.ಸಿ.ಆರ್.ಟಿ.ಗೆ ಮಂಜೂರು ಮಾಡಿಕೊಡಬೇಕೆಂದೂ ಕೋರಲಾಗಿದೆ. ಬಿ.ಸಿ.ಆರ್.ಟಿ. ಸುತ್ತಮುತ್ತೆಲ್ಲ ಗ್ರಾಮಸ್ಥರ ಕೃಷಿ ಜಮೀನುಗಳು ಇದ್ದರೂ, ಯಾರೂ ಸಹ ಈ ಪ್ರದೇಶಕ್ಕೆ ಒತ್ತುವರಿ ಸೇರಿದಂತೆ ಯಾವುದೇ ಹಾನಿ ಮಾಡುವುದಿಲ್ಲ!
ಸಾಧನೆಗೆ ಸಂದ ಗೌರವ: ಇಷ್ಟು ಸಾಧನೆ ಮಾಡಿದ ಮೇಲೆ ಅದು ‘ಎಲೆ ಮರೆಯ ಕಾಯಾಗಲು’ ಹೇಗೆ ಸಾಧ್ಯ? ಈಗ ಪ್ರತಿ ತಾಲ್ಲೂಕಿಗೊಂದು ಇರುವಂತೆ, ಅನುಗನಾಳು ಗ್ರಾಮವನ್ನು ಸಹ ರಾಜ್ಯ ಸರ್ಕಾರ ಬಿ.ಸಿ.ಆರ್.ಟಿ.ಯಿಂದಾಗಿ ಗುರುತಿಸಿ ‘ಸಾವಯವ ಗ್ರಾಮ’ ಎಂದು ಘೋಷಿಸಿದೆ. ನೆಲ-ಜಲ ತಜ್ಞ ಶ್ರೀ ಪಡ್ರೆ ಅವರಂತಹ ಅನೇಕಪರಿಸರ ಪ್ರೇಮಿ ಗಣ್ಯರು ಇಲ್ಲಿಗೆ ಭೇಟಿ ನೀಡಿ, ‘ಶಹಬ್ಬಾಸ್’ ಎಂದು ಕೃಷ್ಣಮೂರ್ತಿ ಭುಜ ತಟ್ಟಿದ್ದಾರೆ.

ಇದೆಲ್ಲಕ್ಕಿಂತ ಮಿಗಿಲಾಗಿ ರಾಜ್ಯ ಸರ್ಕಾರ ೧ ಲಕ್ಷ ರೂ. ಮೊತ್ತದ ೨೦೦೬-೦೭ ರ ‘ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪರಿಸರ ಪ್ರಶಸ್ತಿ’ಯನ್ನು ಬಿ.ಸಿ.ಆರ್.ಟಿ.ಗೆ ನೀಡಿ ಗೌರವಿಸಿದೆ.
‘ನನಗೇನು ಲಾಭ’ ಎಂಬ ಸ್ವಾರ್ಥವನ್ನು ಬದಿಗಿಟ್ಟು ನಿಸರ್ಗಕ್ಕಾಗಿಯೆಂದೇ ಪರಿಸರ ಸಂರಕ್ಷಣೆ ಮಾಡಿದರೆ, ನೈಸರ್ಗಿಕವಾಗಿಯೂ ಕಾಡು ಕಟ್ಟಬಹುದು ಎಂಬುದನ್ನು ಈ ‘ಅಪೂರ್ವ ಸಹೋದರರು’ ಸಾಬೀತುಪಡಿಸಿದರು. ‘ಕಾಂಕ್ರೀಟ್ ಕಾಡು’ ಕಟ್ಟುವವರೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಸಹಜ ಅಗತ್ಯವೆನಿಸಿದ ಪ್ರಾಕೃತಿಕ ಕಾಡು ಕಟ್ಟುವವರು ಎಷ್ಟು ಮಂದಿ ಸಿಕ್ಕಾರು? ಎಲ್ಲಾದರೂ ಜೀವ ವೈವಿಧ್ಯತೆ ಕಾಣಬೇಕೆಂದರೆ ವೈವಿಧ್ಯಮಯ ಪೂರಕ ಗಿಡಗಳನ್ನು ನೆಡಬೇಕಷ್ಟೆ. ಅಷ್ಟು ಕಷ್ಟಪಟ್ಟು ನೈಸರ್ಗಿಕ ಅರಣ್ಯ ಬೆಳೆಸಿದ ಡಾ. ಮಳಲಿಗೌಡರೇ, ಈಗ ಅದನ್ನು ಜತನದಿಂದ ರಕ್ಷಿಸುತ್ತಿರುವ ಕೃಷ್ಣಮೂರ್ತಿಗೆ ಸ್ಫೂರ್ತಿಯಾಗಿದ್ದಾರೆ.

ಮಾನವನಿಗೆ ಏನೇ ಬುದ್ಧಿ ಶಕ್ತಿ, ವಿವೇಚನಾ ಶಕ್ತಿ ಇದ್ದರೂ ಈ ಪ್ರಕೃತಿಯ ಮುಂದೆ ತಾನೊಂದು ಹುಲ್ಲು ಕಡ್ಡಿಗೆ ಸಮ ಮತ್ತು ತನಗೆ ಅಂತಹ ವಿಶೇಷ ಯೋಗ್ಯತೆ ಇಲ್ಲ; ನೆಲ-ಜಲ ಹಾಗೂ ವಾಯು ಮಂಡಲದ ನಡುವೆ ಸುತ್ತುವ ಈ ‘ಜೀವ ವೈವಿಧ್ಯ ಚಕ್ರ’ದಲ್ಲಿ ಸಮತೋಲನ ಕಾಯ್ದುಕೊಳ್ಳದಿದ್ದರೆ ತನಗೆ ಉಳಿಗಾಲವಿಲ್ಲ ಎಂಬ ಪರಮ ಸತ್ಯಗಳು ಅವನಿಗೆ ನಿಖರವಾಗಿ ಮನದಟ್ಟಾಗಬೇಕು. ಅಲ್ಲಿಯವರೆಗೆ ಆತ ಈ ಜಗತ್ತು ಇರುವುದು ತಾನೊಬ್ಬ ಅನುಭವಿಸಲು ಮಾತ್ರ ಎಂಬ ‘ವಿನಾಶಕಾಲೇ ವಿಪರೀತ ಬುದ್ಧಿ’ ಪ್ರದರ್ಶಿಸುವುದನ್ನು ಮುಂದುವರೆಸುತ್ತಲೇ ಇರುತ್ತಾನೆ.

No comments:

ಜನಪ್ರಿಯ ಲೇಖನಗಳು