1.19.2009

ಬಿ.ಜೆ.ಪಿ.ಗೆ ‘ಅಣ್ಣಯ್ಯ’ (ಎಚ್.ಸಿ. ಶ್ರೀಕಂಠಯ್ಯ ) ಜಿಗಿತ: ಹಾಸನದಲ್ಲಿ ಜೆ.ಡಿ.ಎಸ್.ಗೆ ಮತ್ತಷ್ಟು ಲಾಭ!?

ಲೇಖಕರು: ಎಚ್ ಎಸ್ ಪ್ರಭಾಕರ್
ಕೃಪೆ: ಸಂಯುಕ್ತ ಕರ್ನಾಟಕ

ಹಾಸನ, ಜೆ.ಡಿ.ಎಸ್. ಭದ್ರಕೋಟೆಯಾಗಿದ್ದರೂ ಮುಂಬರುವ ಸಂಸತ್ ಚುನಾವಣೆಗಳಲ್ಲಿ ಸ್ವಲ್ಪ ಸಂಘಟಿತ ಶ್ರಮ ಹಾಕಿದ್ದರೆ ಹಾಸನ ಲೋಕಸಭಾ ಸ್ಥಾನವನ್ನು ಹೇಗೋ ಬಿ.ಜೆ.ಪಿ. ತನ್ನದಾಗಿಸಿಕೊಳ್ಳುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ ಕಾಂಗ್ರೆಸ್‌ನ ‘ವೃದ್ಧ ಪಿತಾಮಹ’ ಅಣ್ಣಯ್ಯ (ಎಚ್.ಸಿ. ಶ್ರೀಕಂಠಯ್ಯ) ರನ್ನು ಬಿ.ಜೆ.ಪಿ.ಗೆ ಸೇರಿಸಿಕೊಂಡಿರುವ ‘ಸ್ವಯಂಕೃತ ಅಪರಾಧ’ದ ಪರಿಣಾಮವಾಗಿ ಈಗ ಆ ಸ್ಥಾನ ಕೈತಪ್ಪುವ ಎಲ್ಲ ಸಾಧ್ಯತೆಗಳೂ ಇವೆ! ಅಂದರೆ ಇದೀಗ ಬಿಜೆಪಿ ಮತ್ತೆ ಎಡವಿದೆ; ‘ದಾಪುಗಾಲು’ ಇಡುತ್ತಾ ಸಾಗುವವರು ಒಂದಲ್ಲ ಒಂದು ಕಡೆ ಎಡವುತ್ತಾರೆ ಎಂಬುದಕ್ಕೆ ನಿಲ್ಲದೆ ಸಾಗಿರುವ ‘ಆಪರೇಷನ್ ಕಮಲ’ ಕಾರ್ಯಾಚರಣೆಯೇ ನಿದರ್ಶನವಾಗಿದೆ.
‘ಅಣ್ಣಯ್ಯ ಅವರು ಕಾಂಗ್ರೆಸ್ ತೊರೆದರೆ ನಷ್ಟವೇನೂ ಇಲ್ಲ; ಬಿ.ಜೆ.ಪಿ. ಸೇರಿದರೆ ಅಲ್ಲಿ ಲಾಭವೇನೂ ಇಲ್ಲ’ ಎಂಬಂತಹ ಸನ್ನಿವೇಶ ಇರುವಾಗ, ಬಿಜೆಪಿ ಯಾವ ಪುರುಷಾರ್ಥಕ್ಕಾಗಿ ಈ ಸೇರ್ಪಡೆ ಮಾಡಿಕೊಳ್ಳುತ್ತಿದೆಯೋ ಗೊತ್ತಿಲ್ಲ ಎಂದು ಈ ಎರಡೂ ಪಕ್ಷಗಳ ಕಾರ್ಯಕರ್ತರು ನಿಡುಸುಯ್ಯುತ್ತಿದ್ದಾರೆ. ‘ಶ್ರೀಕಂಠಯ್ಯ ಹಾಗೂ ಜೆ.ಡಿ.ಎಸ್.ನ ದೇವೇಗೌಡರ ನಡುವೆ ಮೊದಲಿನಿಂದಲೂ ಹೇಳಿಕೊಳ್ಳುವಂತಹ ರಾಜಕೀಯ ಬದ್ಧ ದ್ವೇಷವೇನೂ ಇಲ್ಲ; ಅದರ ಬದಲು ‘ಹೊಂದಾಣಿಕೆ’ ರಾಜಕೀಯವೇ ಸಾಗಿ ಬಂದಿರುವ ಹಿನ್ನೆಲೆಯಲ್ಲಿ ಈಗಿನ ಅಣ್ಣಯ್ಯರ ಬಿಜೆಪಿ ‘ಜಿಗಿತ’ದ ಹಿಂದೆ ಗೌಡರ ‘ಚಿತಾವಣೆ’ ಇದ್ದರೂ ಇರಬಹುದು; ಇದನ್ನು ಸರಿಯಾಗಿ ಗಮನಿಸದೆ ಒಂದು ವೇಳೆ ಬಿ.ಜೆ.ಪಿ. ಹೈಕಮಾಂಡ್ ಏನಾದರೂ ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿ.ಜೆ.ಪಿ ಅಭ್ಯರ್ಥಿಯಾಗಿ ಶ್ರೀಕಂಠಯ್ಯರಿಗೇ ಟಿಕೆಟ್ ನೀಡಿದ್ದೇ ಆದಲ್ಲಿ ಎಡವಿದ ಕಾಲಿಗೇ ಮತ್ತೊಮ್ಮೆ ಎಡವಿದಂತಾಗುತ್ತದೆ; ಆ ಬೆಳವಣಿಗೆಯಿಂದ ಚುನಾವಣೆಯಲ್ಲಿ ಬಿ.ಜೆ.ಪಿ. ತಾನಾಗೇ ಚಿನ್ನದ ಹರಿವಾಣದಲ್ಲಿ ಸಂಸತ್ ಸ್ಥಾನವನ್ನಿಟ್ಟು ಗೌಡರಿಗೆ ಬಳುವಳಿ ಕೊಟ್ಟಂತಾಗುತ್ತದೆ’ ಎಂದು ನಂಬಲರ್ಹ ಬಿ.ಜೆ.ಪಿ. ಮೂಲಗಳು ಭೀತಿಯಿಂದ ಪಿಸುಗುಟ್ಟುತ್ತಿವೆ!
ಅದರ ಬದಲು ಬಿ.ಜೆ.ಪಿ. ನಾಯಕರು ಬುದ್ಧಿವಂತರಾದರೆ, ಪಕ್ಷದ ಹಿರಿಯ ಮುಖಂಡರಾಗಿರುವ ಅನುಭವಿ ರಾಜಕಾರಣಿ ಬಿ.ಬಿ. ಶಿವಪ್ಪ ಅಥವಾ ಯುವ ಮುಂದಾಳು ವಿಧಾನ ಪರಿಷತ್ ಸದಸ್ಯ ಬಿ.ಆರ್. ಗುರುದೇವ್‌ಗೆ ಲೋಕಸಭಾ ಟಿಕೆಟ್ ನೀಡಿದರೆ ಮಾತ್ರ ಪಕ್ಷ ಗೌಡರ ವಿರುದ್ಧ ಸೆಡ್ಡು ಹೊಡೆಯಲು ಸಾಧ್ಯ ಎಂಬ ಸಲಹೆಗಳು ಕೇಳಿಬರುತ್ತಿವೆ.
ಶ್ರೀಕಂಠಯ್ಯರನ್ನು ಕಾಂಗ್ರೆಸ್‌ನಲ್ಲಾಗಲಿ ಅಥವಾ ಅವರು ಈಗ ಪ್ರವೇಶಿಸಿರುವ ಬಿ.ಜೆ.ಪಿ.ಯಲ್ಲಾಗಲೀ ಯಾರೂ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ತಮ್ಮ ತಂದೆ ಬಿ.ಜೆ.ಪಿ. ಸೇರುತ್ತಿರುವುದು ಸ್ವತಃ ಶ್ರೀಕಂಠಯ್ಯರ ಪುತ್ರ ವಿಜಯಕುಮಾರ್ ಅವರಿಗೇ ಇಷ್ಟವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
‘ಯಾರಾದರೂ ನಿಮ್ಮ ಪಕ್ಷಕ್ಕೆ ಬರುತ್ತೇನೆ ಎಂದರೆ ಬೇಡ ಎನ್ನಲಾಗುತ್ತದೆಯೇ? ಬರುವವರೆಲ್ಲ ಬೇಷರತ್ತಾಗಿ ಬರಲಿ; ಆದರೆ ಸ್ಥಾನಮಾನ ಅಥವಾ ಟಿಕೆಟ್ ನಿರೀಕ್ಷಿಸುವುದೇನೂ ಬೇಡ. ಮುಂಬರುವ ಸಂಸತ್ ಚುನಾವಣೆಗೆ ಟಿಕೆಟ್ ನೀಡಲಾಗುವುದೆಂದು ಪಕ್ಷದ ಹೈಕಮಾಂಡ್ ಏನೂ ಯಾರಿಗೂ ಭರವಸೆ ನೀಡಿಲ್ಲ; ನಮ್ಮ ಪಕ್ಷದಲ್ಲೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಬ್ಬರಂತೆ ಸಮರ್ಥ ಆಕಾಂಕ್ಷಿಗಳಿದ್ದಾರೆ. ಅವರಲ್ಲೇ ಒಬ್ಬರು ಅಭ್ಯರ್ಥಿಯಾಗುತ್ತಾರೆ. ಪಕ್ಷದ ರಾಜ್ಯ ನಾಯಕರೂ ಸೇರಿದಂತೆ ಶ್ರೀಕಂಠಯ್ಯರನ್ನು ಬನ್ನಿ ಎಂದು ನಾವಾಗಿ ಯಾರೂ ಕರೆದಿಲ್ಲ; ಒಂದು ವೇಳೆ ಬಂದರೆ ಜಿಲ್ಲೆಯಲ್ಲಿನ ೧೪,೫೦೦ ಸಕ್ರಿಯ ಸದಸ್ಯರಲ್ಲಿ ಅವರೂ ಒಬ್ಬರಾಗುತ್ತಾರೆ; ಮೊದಲು ಅವರು ಪಕ್ಷವನ್ನು ಸಂಘಟಿಸಲಿ’ ಎಂದು ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ನವಿಲೆ ಅಣ್ಣಪ್ಪ ಅಭಿಪ್ರಾಯಪಡುತ್ತಾರೆ.
ಇನ್ನು ಲೋಕಸಭಾ ಚುನಾವಣೆ ರಾಜಕೀಯದ ಮಟ್ಟಿಗೆ ಶ್ರೀಕಂಠಯ್ಯ ಅವರ ಸಾಧನೆ ಗಮನಿಸಿದರೆ ಹೇಳಿಕೊಳ್ಳುವಂತಹದೇನೂ ಇಲ್ಲ. ಮೊದಲ ಬಾರಿ ೧೯೮೯ ರಲ್ಲಿ ಜನತಾ ಪಕ್ಷದ ಎಚ್.ಎನ್. ನಂಜೇಗೌಡರ ವಿರುದ್ಧ ೪,೦೩,೨೮೬ ಮತ ಗಳಿಸಿ ೧,೮೯,೧೫೫ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು ಬಿಟ್ಟರೆ ಮತ್ತೆಂದೂ ಗೆದ್ದಿಲ್ಲ. ೧೯೯೧ ರಲ್ಲಿ ಜನತಾ ದಳದ ಎಚ್.ಡಿ. ದೇವೇಗೌಡರ ವಿರುದ್ಧ ೨,೫೭,೫೭೦ ಮತ ಗಳಿಸಿ ೩,೧೯೧ ಅಂತರದಲ್ಲಿ ಸೋತಿದ್ದರು. ನಂತರ ಕಳೆದ ಬಾರಿ ೨೦೦೪ ರಲ್ಲೂ ಅದೇ ಗೌಡರ (ಜೆ.ಡಿ.ಎಸ್.) ವಿರುದ್ಧ ಕೇವಲ ೨,೭೨,೩೨೦ ಮತ ಪಡೆದು, ೧,೯೦,೩೦೫ ಮತಗಳ ಭಾರಿ ಅಂತರದಿಂದ ಪರಾಭವಗೊಂಡರು. ಇದೀಗ ಅವರಿಗೆ ೮೬ ವರ್ಷವಾಗಿದ್ದು, ವಯೋವೃದ್ಧರೂ ಆಗಿದ್ದಾರೆ. ಯುವ ಪೀಳಿಗೆ ಮಟ್ಟಿಗೆ ಅವರು ‘ಹಿಂದಿನ ತಲೆಮಾರಿನ ರಾಜಕಾರಣಿ’. ಹೀಗಾಗಿ ಅವರು ‘ರಾಮ ಕೃಷ್ಣ’ ಎಂದು ರಾಜಕೀಯ ನಿವೃತ್ತ ಜೀವನ ಸಾಗಿಸಬೇಕು; ಅದು ಬಿಟ್ಟು, ದಶಕಗಳ ಕಾಲ ಕಾಂಗ್ರೆಸ್ ಮುಖಂಡರಾಗಿದ್ದು ಈಗ ಕೆಲವು ಕ್ಷುಲ್ಲಕ ಆಂತರಿಕ ಕಾರಣಗಳ ನೆಪ ಒಡ್ಡಿ ಬಿ.ಜೆ.ಪಿ. ಸೇರುವುದು ಸ್ವಾರ್ಥ ರಾಜಕೀಯ ಆಗುತ್ತದೆ ಎಂಬ ಅಭಿಪ್ರಾಯಗಳು ಜಿಲ್ಲಾದ್ಯಂತ ಕೇಳಿಬರುತ್ತಿವೆ.
ಜಿಲ್ಲಾ ಕಾಂಗ್ರೆಸ್‌ನಲ್ಲೇ ಶ್ರೀಕಂಠಯ್ಯರ ನಾಯಕತ್ವದಲ್ಲಿ ಎಲ್ಲವೂ ಸರಿಯಾಗಿರಲಿಲ್ಲ. ಅವರ ವಿರುದ್ಧ ಸೆಡ್ಡು ಹೊಡೆದ ಗಂಡಸಿ ಕ್ಷೇತ್ರದ (ಈಗ ಆ ಕ್ಷೇತ್ರ ಇಲ್ಲ) ಮಾಜಿ ಸಚಿವ ಬಿ. ಶಿವರಾಂ ಅವರೇ ಒಂದು ಪ್ರತ್ಯೇಕ ಗುಂಪು ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಆ ಗುಂಪಂತೂ ಶ್ರೀಕಂಠಯ್ಯರ ವಿರುದ್ಧ ಆಂತರಿಕವಾಗಿ ದ್ವೇಷ ಬೆಳೆಸಿಕೊಂಡೇ ಬರುತ್ತಿದೆ. ಒಟ್ಟಾರೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಕಾಲದಲ್ಲಿ ಪಕ್ಷ ಬಲಪಡಿಸುವುದು ಬಿಟ್ಟು ಹೀಗೆ ಪಕ್ಷವನ್ನು ತೊರೆದು ಹೋಗುವುದು ಒಂದು ರೀತಿ ‘ಪಲಾಯನ ವಾದ’ವಾಗುತ್ತದೆ. ಬಿ.ಜೆ.ಪಿ.ಗೆ ಜಿಗಿದು ಅಲ್ಲಿ ಅದನ್ನೂ ಹಾಳುಮಾಡಿ ಆ ಮೂಲಕ ಜೆ.ಡಿ.ಎಸ್. ದೇವೇಗೌಡರಿಗೆ ಅನುಕೂಲ ಮಾಡಿಕೊಡುವುದು ಏಕೆ? ಎಂಬ ಪ್ರಶ್ನಾರ್ಥಕ ಅಭಿಪ್ರಾಯಗಳೂ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರದ್ದಾಗಿದೆ.
ಈಗ ಬಿ.ಜೆ.ಪಿ. ಎಚ್ಚರ ವಹಿಸಬೇಕು; ಮುಂಬರುವ ಲೋಕಸಭಾ ಸ್ಥಾನಕ್ಕೆ ಹಿರಿಯ ಮುಖಂಡ ಬಿ.ಬಿ. ಶಿವಪ್ಪ ಅಥವಾ ಯುವ ಮುಖಂಡ ಬಿ.ಆರ್. ಗುರುದೇವ್‌ಗೆ ಟಿಕೆಟ್ ಸಿಗುವಂತೆ ಒಟ್ಟಾಗಿ ನೋಡಿಕೊಳ್ಳಬೇಕು; ಹಾಗಾದರೆ ಮಾತ್ರ ಬಿ.ಜೆ.ಪಿ. ಬಚಾವಾಗಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಜನಪ್ರಿಯ ಲೇಖನಗಳು