8.06.2008
ಓದೇಕರ್ ಫಾರಂನ ಅಂಗಳದಲ್ಲಿ ಕನಸುಗಳನ್ನು ಹರವಿಕೊಂಡು...
ಬರಹ:ಕಿರಣ್ ಎಂ
ನಿರ್ವಾಹಕರು
ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಬೆಂಗಳೂರು
ಈ ಶಿಬಿರದ ಮಾಸ್ಟರ್ ಪ್ಲಾನ್ ಎರಡು ತಿಂಗಳು ಹಳೆಯದ್ದು. ಬೆಂಗಳೂರಿನ ಧಾವಂತದಲ್ಲಿ ನಮ್ಮನ್ನೆಲ್ಲಾ ಹಿಡಿದಿಟ್ಟುಕೊಳ್ಳುವುದು ಕಷ್ಟ. ಎಲ್ಲಾದರೂ ದೂರದ ಕಾಡಿನೊಳಗೆ ಕೂಡಿ ಹಾಕಿದರೆ ನಮಗೆಲ್ಲಾ ಸ್ವಲ್ಪ ಸಿರಿಯಸ್ ನೆಸ್ ಬರಬಹುದು ಎಂಬುದು ಶೇಖರಪೂರ್ಣ ಅವರ ಯೋಚನೆ.
ಅವರ ಅಲೋಚನೆ ಯಾರೂ ಬೆಂಬಲಿಸಲಿ ಬಿಡಲಿ ಕಾರ್ಯರೂಪಕ್ಕೆ ಬರಲೇಬೇಕಲ್ಲ. ಅಂತೂ ಶುಕ್ರವಾರ ಮತ್ತು ಶನಿವಾರ ರಾತ್ರಿ ತುಮಕೂರಿನ ಬಳಿಯ ನಂದಿಹಳ್ಳಿಯ ಎಸ್ಟೇಟ್ ಒಂದರಲ್ಲಿ ಕಳೆಯುವುದು ಎಂದಾಯ್ತು. ಶೇಖರ್ ದಂಪತಿಗಳು ತಮ್ಮ ಕಾರಿನಲ್ಲಿ ಒಂದು ಗಂಟೆಗೇ ಹೊರಟಿದ್ದಾಯ್ತು. ಅವರ ಹಿಂದೆ ನಾನು, ಅರೇಹಳ್ಳಿ, ಜಯಕುಮಾರ್ ಮತ್ತು ಅವರ ಸ್ನೇಹಿತ ಮನೋಜ್ ಹೊರಟೆವು. ಜಯಕುಮಾರ್, ರಾಜ್ಯ ಸರ್ಕಾರಿ ನೌಕರರಾಗಿಯೂ ನಿರುಪದ್ರವಿ ಜೀವಿ. ಮನೋಜ್ ಕೂಡ ಅದೇ ಕೆಟಗರಿ ಅಂತ ಆಮೇಲೆ ತಿಳಿದದ್ದು. ಅರೇಹಳ್ಳಿ ಮಾತ್ರ ಮಾತನಾಡಲು ಕುಳಿತರೆ ಏನಾದರೂ ರುಚಿ ರುಚಿ ಯಾದದ್ದು ಸಿಗುತ್ತೆ. ಮೆಜೆಸ್ಟಿಕ್ ಮುಟ್ಟಿದ್ದೆ ಬಸ್ ರೆಡಿಯಾಗಿತ್ತು. ಕೊನೆಯ ಸೀಟ್ ಎಂಬ ಬೇಸರದ ನಡುವೆಯೂ ಹೆಚ್ಚಿನ ಪ್ರಯಾಣವಿಲ್ಲವಲ್ಲ ಎಂದು ಸಮಾಧಾನ ಪಟ್ಟುಕೊಂಡದ್ದಾಯ್ತು. ಆದರೆ ಈ ಸಮಾಧಾನ ಹೆಚ್ಚು ಹೊತ್ತು ಇರಲಿಲ್ಲ. ಮಾತು ಮಾತಿಗೂ ರವಿ ತುಮಕೂರಿನಿಂದ ಇನ್ನೂ ಒಂದು ಒಂದು ಗಂಟೆ ಪ್ರಯಾಣ ಎಂದು ಹೇಳಿದ್ದನ್ನೇ ಹೇಳಿ ಸಿಟ್ಟು ಬರಿಸಿದ್ದರು.
ಶಿವಮೊಗ್ಗೆಯಿಂದ ಅವಿ ತುಮಕೂರಿಗೆ ಬರುವವನಿದ್ದ. ಅವನನ್ನು ನಮ್ಮೊಡನೆ ಸೇರಿಸಿಕೊಂಡು ಒಟ್ಟಿಗೆ ತೋವಿನಕೆರೆಗೆ ಹೋಗುವುದೆಂದಾಯ್ತು. ತುಮಕೂರಿಗೆ ಮುಟ್ಟಿದಾಗ ಸಾಯಂಕಾಲ ೬. ಅಲ್ಲಿಂದ ತೋವಿನಕೆರೆ ೨೭ ಕಿ.ಮಿ ಒಂದು ಗಂಟೆ ಪ್ರಯಾಣ.
ತುಮಕೂರಿನಲ್ಲಿ ಮಸಾಲಾಪುರಿ ಕೊಡಿಸಿ ಎಂದರೂ ಅರೇಹಳ್ಳಿ ಕಿವಿಗೆ ಹಾಕಿಕೊಳ್ಳದೆ , ಹಸಿವಿನಲ್ಲಿದ್ದ ಅವಿಗೆ ದೋಸೆ ಕೊಡಿಸಿ ಬಸ್ಸು ಹತ್ತಿದ್ದಾಯ್ತು. ಸುತ್ತೆಲ್ಲಾ ತುಂಬಿದ ಕಪ್ಪು ಕತ್ತಲೆಯಲ್ಲಿ ಅಲ್ಲಾಡುವ ಬಸ್ಸಿನಲ್ಲಿ ತೋವಿನಕೆರೆ ತಲುಪಿದಾಗ ರಾತ್ರಿ ೮. ಅಲ್ಲಿಂದ ಆಟೋದವನು ನಂದಿಹಳ್ಳಿಗೆ ಎಂಟು ಕಿಲೋ ಮೀಟರ್ ಎಂದಾಗ ಸುಸ್ತೋ ಸುಸ್ತು. ಈ ಮಧ್ಯೆ ಅರೇಹಳ್ಳಿ ತಮಗೆ ಬರುತ್ತಿದ್ದ ಕಾಲ್ ಗಳಿಗೆಲ್ಲಾ ಉತ್ತರಿಸುವಲ್ಲಿ ಬ್ಯುಸಿಯಾಗಿದ್ದರು. ಬಹುಪಾಲು ಕರೆಗಳೆಲ್ಲ ನಾಳೆ ಬರುವವರದ್ದೇ. ಕೆ.ಎಸ್.ಸಿ ಯ ನಿರ್ವಾಹಕನಾಗಿ ನಾನಿದ್ದರೂ ನಿಜವಾದ ಅರ್ಥದಲ್ಲಿ ಆ ಕೆಲಸ ಮಾಡುತ್ತಿದ್ದುದು ರವಿಯೇ. ಅದಕ್ಕೆ ಅವರ ಮಾತಿನ ಶೈಲಿಯೂ ಕಾರಣ. ಒಬ್ಬ ವ್ಯಾಪಾರಿಗಿರಬೇಕಾದ ಎಚ್ಚರ, ರಾಜಕಾರಣಿಗಿರಬೇಕಾದ ಚಾತುರ್ಯ, ಜೊತೆಗೆ ನೂರಾರು ವಿಷಯಗಳ ಮೇಲಿನ ಆಸಕ್ತಿ ಎಲ್ಲವನ್ನೂ ಸೇರಿಸಿ ಅವರೊಬ್ಬ ಅಚ್ಚರಿಯ ಸಂಘಟನಕಾರರಾಗಿಬಿಟ್ಟಿದ್ದಾರೆ. ಫೋನಿನಲ್ಲಿ ಒಂದು ನಿಮಿಷವೂ ಸರಿಯಾಗಿ ಮಾತನಾಡದ ನಾನು ಇವರು ಕಾಲ್ ಮಾಡಿದಾಗ ಮಾತ್ರ ಹತ್ತು ನಿಮಿಷದ ಕಡಿಮೆ ಮಾತಿಲ್ಲ. ಕೆ.ಎಸ್.ಸಿ ಬೆಂಬಲಿಗರ ಬಳಗ ಕಳೆದರಡು ವರ್ಷಗಳಿಂದ ನಡೆಸಿರುವ ಎಲ್ಲಾ ಕಾರ್ಯಕ್ರಮಗಳ ನಿಜವಾದ ಹೊಣೆಗಾರಿಕೆ ಸಂಘಟನೆ ಅರೇಹಳ್ಳಿ ರವಿಯವರದ್ದೇ!
ಅದು ಓದೇಕರ್ ತೋಟ. ಸಾವಯವ ಕೃಷಿಯಿಂದ ಅದಾಗಲೇ ಸುತ್ತಲೂ ಪರಿಚಿತರಾಗಿದ್ದ ಶ್ರೀನೀಲಕಂಠಮೂರ್ತಿ-ಅನಿತಾ ದಂಪತಿಗಳು ಅದರ ಮಾಲೀಕರು.ಅದಾಗಲೇ ಒಮ್ಮೆ ಕಾಲ್ ಮಾಡಿದ್ದಾಗ ಶೇಖರ್ ಸರ್ " ಈ ಜಾಗ ಅದ್ಭುತವಾಗಿದೆ" ಎಂದಿದ್ದರು. ಮಲೆನಾಡಿನ ಹುಡುಗರಾದ ನನಗೂ ಅವಿಗೂ ಅದೇನೂ ಅದ್ಭುತವಾಗಿ ಕಾಣದಿದ್ದರೂ ಮನಸ್ಸಿಗೆ ಹಿಡಿಸಿದ್ದಂತೂ ಸುಳ್ಳಲ್ಲ. ಅಷ್ಟಕ್ಕೂ ಇತ್ತೀಚೆಗೆ ಶೇಖರ್ ಸರ್ ರವರ ಪದ ಸಂಗ್ರಹ ಕಡಿಮೆಯಾದಂತಿದೆ. ಅದ್ಭುತ! ದರಿದ್ರ! ಎನ್ನುವ ಎರಡು ಪದಗಳು ಮಾತ್ರ ಅವರ ಮಾತಿನ ಬಾಣದಲ್ಲಿ ಹೆಚ್ಚು ಸಿಗುವಂತದ್ದು.
ಇರಲಿ. ಅದ್ಭುತವಲ್ಲದ ಈ ಸುಂದರ ತೋಟದಲ್ಲಿ ನನಗೆ ನಿಜವಾಗಿಯೂ ಅದ್ಭುತವೆನಿಸಿದ್ದು ಅವರ ಮನೆಯಲ್ಲೇ ತಯಾರಿಸಿದ ಸಾಬೂನು. ನೈಸರ್ಗಿಕವಾಗಿ ತಯಾರಾದ ಆ ಸಾಬೂನಿನಲ್ಲಿ ಕೈ ಕಾಲು ತೊಳೆದದ್ದು ವಿಭಿನ್ನ ಅನುಭವ ನೀಡಿತ್ತು.
ಆ ರಾತ್ರಿ ಅಲ್ಲಿ ಉಳಿದದ್ದು ನಾವು ಐವರು ಹಾಗೂ ಶೇಖರ್ ಸರ್, ಸೀತಕ್ಕ, ಅನ್ನಪೂರ್ಣಕ್ಕ ಹಾಗು ನಂದಿನಿ. ಆ ರಾತ್ರಿ ಊಟ ಮಾಡಿ ಹಾಗೆಯೇ ಮಾತಿಗೆ ಕುಳಿತೆವು.
ದಶಾವತಾರಂ ತೇಜೋವಧೆಯನ್ನು ಶೇಖರ್ ಸರ್ ಇಲ್ಲಿ ಕೂಡ ಮುಂದುವರೆಸಿದರು. ಅದು ಬಿಡುಗಡೆಯಾದಾಗಿನಿಂದ ಅದನ್ನು ತೆಗಳುತ್ತಿದ್ದ ಅವರು ಇಲ್ಲಿಯೂ ಅದನ್ನು ಮುಂದುವರೆಸಿದ್ದರು. ಯಾವುದೇ ವಿಷಯವನ್ನು ಪರಿಣಾಮಕಾರಿಯಾಗಿ ಇನ್ನೊಬ್ಬರ ಮನಸಿನಲ್ಲಿ ಮೂಡಿಸುವುದನ್ನು ಶೇಖರ್ ಅವರಿಂದ ಕಲಿಯಬೇಕು. ಅವರು ತಮ್ಮ ಅನಿಸಿಕೆಯನ್ನು ತಮಗೆ ಸಿಕ್ಕ ಸಮಯ ಸಂದರ್ಭಗಳಲ್ಲೆಲ್ಲಾ ಪ್ರಸ್ತಾಪಿಸುತ್ತಲೇ ಅದನ್ನು ಗಟ್ಟಿಗೊಳಿಸುತ್ತಾ ಹೋಗುತ್ತಾರೆ.
ಕನ್ನಡಸಾಹಿತ್ಯ.ಕಾಂ ಕೆಲಸಕ್ಕೆ ನಾವೆಲ್ಲ ಎಷ್ಟು ಸಮಯ ಮೀಸಲಿಡಬಹುದೆಂಬುದರ ಬಗ್ಗೆಯೂ ಸಣ್ಣ ಚರ್ಚೆ ನಡಿಯಿತು. ಅದನ್ನು ಬಿಟ್ಟರೆ ರಾತ್ರಿ ಹನ್ನೆರಡೂ ವರೆವರೆಗೆ ಹೊರಬಿದ್ದ ಮಾತುಗಳಿಷ್ಟು:
ಈ ಮಧ್ಯೆ ಅವಿನಾಶನಿಗೆ ಸಿಗರೇಟು ಸೇದಲು ಅರೇಹಳ್ಳಿ ಅಷ್ಟೊಂದು ನೆರವು ನೀಡಿದ್ದೇಕೆಂದು ನನಗೆ ಅರ್ಥವಾಗಿಲ್ಲ. ತಾನು ಇದ್ದಲ್ಲೆಲ್ಲಾ ಬರೀ ಪ್ರತಿಮೆಗಳನ್ನೇ ಹುಡುಕುವ ಅವಿಗೆ ಆ ರಾತ್ರಿಯಲ್ಲೂ ಏನಾದರೂ ಸಿಕ್ಕವೇ? ನಾನು ಕೇಳಲಿಲ್ಲ.
^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^
"ಗಂಟೆ ಎಂಟಾಯ್ತು. ಇನ್ನೂ ಎಷ್ಟು ಹೊತ್ತು ಮಲಗ್ತೀರಾ" ಜವಾಬ್ದಾರಿ ಯಜಮಾನನಂತೆ ಅರೇಹಳ್ಳಿ ಕೂಗುತ್ತಿದ್ದಂತೆ ವಿಧೇಯ ಮಕ್ಕಳಂತೆ ನಾವೆಲ್ಲಾ ಎದ್ದು ಕುಳಿತಿದ್ದೆವು. ನಾವೆಲ್ಲಾ ಕಾಫಿ ಕುಡಿದು ಸ್ನಾನಕ್ಕೆ ಅಣಿಯಾಗುತ್ತಿದ್ದಂತೆ ಒಬ್ಬೊಬ್ಬರಾಗಿ ಬರುತ್ತಿದ್ದರು. ನಾನೂ ಮತ್ತು ಅವಿ ಡಾಕ್ಯೂ ಮೆಂಟರಿಗಾಗಿ ಶೇಖರ್ ಸಂದರ್ಶನ ಹೇಗೆ ಮಾಡುವುದೆಂಬ ಆಲೋಚನೆಯಲ್ಲಿದ್ದರೇ, ರವಿ ಮಾತ್ರ ತಟ್ಟೆ ಇಡ್ಲಿ ಮತ್ತು ಚಟ್ನಿಯನ್ನು ಹೇಗೆ ಇನ್ನೂ ಚೆನ್ನಾಗಿ ಮಾಡುವುದೆಂದು ಅಡಿಗೆಯವರಿಗೆ ಹೇಳುತ್ತಿದ್ದಂತಿತ್ತು. ಶಿಬಿರದ ಪೂರ್ತಿ ಅಡಿಗೆಯವರಿಗೆ ಒಂದಿಲ್ಲೊಂದು ಪುಕ್ಕಟೆ ಸಲಹೆ ನೀಡಲು ಅವರು ಮರೆತಿರಲಿಲ್ಲ.
ಬಂದವರು ಈ ರಮ್ಯ ಎಸ್ಟೇಟಿನಲ್ಲಿ ಮುಳುಗಿ ಹೋಗಿದ್ದರು. ಕ್ಯಾಮೇರಾವೊಂದನ್ನು ಹೆಗಲಿಗೆ ಸಿಕ್ಕಿಸಿ ಎಸ್ಟೇಟಿನ ತುಂಬೆಲ್ಲಾ ಓಡಾಡುತ್ತಿದ್ದ ರುದ್ರ ಮೂರ್ತಿಯವರಿಗೆ ಮೈ ಮೇಲೆ ತೇಜಸ್ವಿ ಬಂದ ಹಾಗಿತ್ತು. ಅರೇಹಳ್ಳಿ ಎಸ್ಟೇಟಿನ ಮಾಲೀಕರ ಜೊತೆ ಸುತ್ತಾಡುತ್ತಾ ಸಸ್ಯಶಾಸ್ತ್ರ ಪ್ರಾವೀಣ್ಯತೆ ಪಡೆದುಕೊಳ್ಳುತ್ತಿದ್ದರೆ, ಶೇಖರ್ ಸರ್ ಈ ಮಂಗಗಳನ್ನೆಲ್ಲಾ ಹೇಗೆ ಕಟ್ಟಿ ಹಾಕುವುದು ಎಂಬ ಆಲೋಚನೆಯಲ್ಲಿದ್ದಂತಿತ್ತು.
ಈ ಮಧ್ಯೆ ರಾಘವ ಕೋಟೆಕರ್ ಹೊಸ ಸಿ.ಎಮ್.ಎಸ್ ಕಾರ್ಯ ನಿರ್ವಹಣೆಯ ಬಗ್ಗೆ ವಿವರಿಸಿದ್ದಾಯ್ತು. ನಾನು ಮತ್ತು ಅವಿ ಶೇಖರ್ ಸರ್ ಸಂದರ್ಶನವನ್ನು ದಾಖಲಿಸಿಕೊಂಡದ್ದಾಯ್ತು. ಊಟ ಮುಗಿಸಿ ಸಭೆ ನಡೆಸುವುದು ಎಂದಾಯ್ತು.
ಶೇಖರ್ ಸರ್ ಶಿಬಿರದ ಮುಖ್ಯ ಭಾಗವಾದ ಚರ್ಚೆಯನ್ನು ಪ್ರಾರಂಭಿಸಿದ್ದೇ ನಮಗೆಲ್ಲಾ ನಿದ್ದೆಯ ಮಂಪರು ಜೋರಾಗಿತ್ತು. ಆದರೂ ಛಲ ಬಿಡದ ತಿವಿಕ್ರಮನಂತೆ ಕೆ.ಎಸ್.ಸಿ ಯ ಮೂಲ ಧ್ಯೆಯೋದ್ದೇಶ, ಸಂವಾದ ಡಾಟ್ ಕಾಮ್ ನ ಅಗತ್ಯತೆ ಇವೆಲ್ಲದರ ಬಗ್ಗೆ ಸವಿವರವಾಗಿ ಹೇಳತೊಡಗಿದ್ದರು. ಕೆ.ಎಸ್.ಸಿ ಸಾಹಿತ್ಯವನ್ನು ಪಕ್ಕಕ್ಕಿಟ್ಟು ಎಲ್ಲಿ ಸಿನೆಮಾ ಸಂಘಟನೆಯಾಗಿ ಬಿಡುತ್ತದೆಯೋ ಎಂಭ ಭಯ ಲಾವಣ್ಯ ಅವರದ್ದು. ಅದಕ್ಕೆ ತಂಗಿ ಸೌಮ್ಯಳ ಸಪೋರ್ಟ್ ಬೇರೆ ದಕ್ಕಿತ್ತು. ಚರ್ಚೆ ಒಂದು ಹಂತಕ್ಕೆ ತಲುಪುತ್ತಿದೆ ಅಂದಾಕ್ಷಣ ಅದಕ್ಕೆ ಒಂದಿಲ್ಲೊಂದು ವಿಘ್ನ ಬಂದೊದಗುತ್ತಿತ್ತು. ಮೊದಲಿಗೆ ಕಷಾಯ, ನಂತರ ಎಲ್ಲರ ಪರಿಚಯ ಆಗಬೇಕೆಂದು ಯಾರೋ ಹೇಳಿದರು, ತದ ನಂತರ ಸ್ವದೇಶಿ ಉತ್ಪನ್ನದ ಬಳಕೆಯ ಅಗತ್ಯದ ಕುರಿತು ಸಿ ಸಿ ಪಾವಟೆ ಎಂಬ ಸ್ಥಳೀಯ ಸಂಪನ್ಮೂಲ ವ್ಯಕ್ತಿ ಭಾಷಣ ಮಾಡಿದರು. ಎತ್ತಲೋ ಹೊರಟಂತಿದ್ದ ಚರ್ಚೆಯನ್ನು ಶೇಖರ್ ಸರ್ ಮತ್ತೆ ಸರಿ ದಾರಿಗೆ ತಂದರು. ನೋಡ ನೋಡುತ್ತಿದ್ದಂತೆ ಟ್ರಸ್ಟ್ ಹುಟ್ಟು ಹಾಕಿಯೇ ಬಿಟ್ಟರು. ಆ ಟ್ರಸ್ಟಿಗೊಂದು ಹೆಸರು ಸೂಚಿಸಬೇಕೆಂದಾಗ ರಾಘವ ಅನಿವಾರ್ಯ ಎಂದ, ನಾನು ಶೂನ್ಯ ಎಂದಿಡೋಣ ಎಂದು ಬೈಸಿಕೊಂಡದ್ದಾಯ್ತು. ಅಷ್ಟರಲ್ಲಿ ಲೊಕೆಶನ್ ಶಿಫ್ಟ್ ಆದದ್ದಾಯ್ತು.
ನಂತರ ಕಮಿಟಿಗಳು, ಟ್ರಸ್ಟ್‌ನ ಪದಾಧಿಕಾರಿಗಳು ಇವೆಲ್ಲದರ ಆಯ್ಕೆ. ಎಲ್ಲರೂ ಜನರಲ್ ಸೆಕ್ರೆಟರಿ ಪದವಿಗೆ ಅರೇಹಳ್ಳಿ ರವಿಯೇ ಸೂಕ್ತ ಎಂದರೂ ಅವರು ಒಪ್ಪಲು ಹಿಂದೆ ಮುಂದೆ ನೋಡಿ ಸಾಕಷ್ಟು ಸ್ಕೋಪ್ ತೆಗೆದುಕೊಂಡಿದ್ದಾಯ್ತು. ನನ್ನನ್ನು ಖಜಾಂಚಿ ಮಾಡಿ ಆಫೀಸಿನ ಬೋರು ಕೆಲಸವನ್ನೇ ಇಲ್ಲಿ ಮಾಡಲು ಪಿತೂರಿ ನಡೆಸಿದ್ದು ಯಾರೋ ಅನ್ನುವುದು ತಿಳಿಯಲಿಲ್ಲ. ಈ ಹೊತ್ತಿನಲ್ಲಿ ದೊಡ್ಡ ಗೊಂದಲ ಹುಟ್ಟಿಕೊಂಡಿದ್ದು ಹೆಸರಿನ ಕುರಿತು. ಇದ್ದದ್ದು ಹತ್ತು ಜನ. ಹೆಸರುಗಳು ಮಾತ್ರ ಹಲವು. ಕನ್ನಡಸಾಹಿತ್ಯಡಾಟ್ ಕಾಂ, ಕನ್ನಡಸಾಹಿತ್ಯಡಾಟ್‌ಕಾಂ ಬೆಂಬಲಿಗರ ಬಳಗ, ಸಂವಾದ ಟ್ರಸ್ಟ್, ಸಂವಾದ ಟ್ರಸ್ಟ್ ಡಾಟ್ ಕಾಂ ಬೆಂಬಲಿಗರ ಬಳಗ ಹೀಗೆಲ್ಲಾ ಯಾವ ಹೆಸರಿನ ಅಡಿಯಲ್ಲಿ ಕೆಲಸ ಮಾಡುವುದು ಎಂಬುದೇ ಗೊಂದಲದ ವಿಷಯವಾಗಿತ್ತು. ಟ್ರಸ್ಟ್‌ನ ರೂಪು ರೇಷೆಗಳೆಲ್ಲ ಸಿದ್ಧವಾಗುವ ಹೊತ್ತಿಗೆ ಟ್ರಸ್ಟ್ ನ ಏಕೈಕ ಆಜೀವ ಸದಸ್ಯ ’ಆನೆ ಬಲ’ ಅಜಿತ್ ರವರು ಅರ್ಧ ನಿದ್ದೆ ತೆಗೆದು ಎದ್ದು ಕುಳಿತಿದ್ದರು. ಚೀನಿಯಂತೂ ಮನೆಯಲ್ಲಿ ಒಬ್ಬನಿಗೆ ನಿದ್ದೆ ಬರುವುದಿಲ್ಲವೆಂದು ಈ ಗಲಾಟೆಯ ನಡುವೆ ನಿದ್ದೆ ಮಾಡಲು ಬಂದ ಹಾಗಿತ್ತು.
ರಾತ್ರಿ ಊಟದ ನಂತರ ನಡೆದದ್ದು ಫೈರ್ ಕ್ಯಾಂಪ್. ನಾನು ಫೈರ್ ಕ್ಯಾಂಪ್ ಅಂದರೆ ಎಲ್ಲೋ ಬಯಲಲ್ಲಿ ಬೆಂಕಿ ಹಚ್ಚುತ್ತಾರೆ ಅಂದುಕೊಂಡಿದ್ದೆ. ಆದರೆ ಇದು
ನಡೆದದ್ದು ಕೋಣೆಯೊಳಗೆ. ನಮ್ಮ ಶೇಖರ್ ಸರ್ ಮತ್ತು ಆನೆ ಬಲದ ಅಜಿತನ ನಡುವೆ. ವಿಷಯ ಇಷ್ಟೆ. ಕಾಸರವಳ್ಳಿ ಸಿನೆಮಾ ಕುರಿತ ವಿಚಾರ ಸಂಕಿರಣವೊಂದನ್ನು ಶೇಖರ್ ಸರ್ ಎರಡು ದಿನ ಮಾಡೋಣವೆಂದರೆ ಅಜಿತ ಒಂದೇ ದಿನಕ್ಕೆ ಸಾಕು ಎಂದಿದ್ದ. ಈ ಮಹತ್ವದ ವಿಷಯವನ್ನು ಇಬ್ಬರೂ ರಾತ್ರೆ ಒಂದರ ವರೆಗೆ ಎಳೆದಾಡಿದರು. ಈ ಮಧ್ಯೆ ಶ್ರೀ ಕ್ರಿಶ್ಣ ಸಂಧಾನ ನಾಟಕ ನೋಡಬೇಕೆಂಬ ನನ್ನ ರಾಘವನ ಪ್ಲಾನ್ ಫೇಲ್ ಆಯಿತು. ಅಜಿತ ಮತ್ತು ಶೇಖರ್ ಸರ್ ನಡುವೆ ಸಂಧಾನ ಉಂಟು ಮಾಡುವುದೇ ಮಹತ್ವದ ಕೆಲಸವಾಯಿತು. ಕೆಲವರು ನಿದ್ದೆಗೆ ಜಾರಿದರೆ ಹಲವರು ಜಗಳವಾಡುತ್ತಲೆ ಬಿದ್ದುಕೊಂಡಿದ್ದರು. ಈ ಗಂಭೀರ ವಾಕ್ ಸಮರದ ನಡುವೆ ನಮ್ಮ ವಿವೇಕ್ ಮಾತ್ರ ಕೀಲಿ ಕೊಟ್ಟ ಅಲಾರಾಮಿನಂತೆ ಆಗಾಗ ಎದ್ದು ಮತ್ತೆ ಮಲಗುತ್ತಿದ್ದರು. ರಾತ್ರೆ ಎರಡರ ಹೊತ್ತಿಗೆ ಎಲ್ಲವೂ ಬಗೆ ಹರಿದ ಮೇಲೂ ವಿವೇಕ್ ಮತ್ತೆ ಎದ್ದು ನನ್ನದೊಂದು ಚಿಕ್ಕ ಪ್ರಶ್ನೆ ಎಂದಾಗ ಮಾತ್ರ ಹೊಟ್ಟೆ ಹುಣ್ಣಾಗಿತ್ತು.
ಎಂದಿನಂತೆ ಶೇಖರ್ ಸರ್ ಹೇಳಿದ ಹಾಗೆ ಎರಡು ದಿನಕ್ಕೆ ಕಾರ್ಯಕ್ರಮವನ್ನು ನಿಗದಿ ಗೊಳಿಸುವಂತಾಯಿತು (ಗಂಟಲು ಹರಿದುಕೊಳ್ಳುವ ಮೊದಲೆ ತಿಳಿದಿರಲಿಲ್ಲವೇ ಅಜಿತ್?).
ಎಲ್ಲರೂ ಮಲಗಿದಾಗ ಸದ್ಯ ಏನನ್ನೂ ಲಿಖಿತದಲ್ಲಿ ಬರೆಸಿಕೊಂಡಿಲ್ಲವಲ್ಲ ಎಂಬ ಸಮಾಧಾನ!
ಮಾರನೇ ದಿನ ಹೊರಡುವ ಗಡಿಬಿಡಿಯಲ್ಲಿ ಡಾಕ್ಯೂಮೆಂಟರಿಗೆ ಕೆಲವು ಸದಸ್ಯರನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಯಿತು. ಮೂರ್ತಿಯವರ ಮೇಲಿನ ತೇಜಸ್ವಿ ಭೂತ ದಿನವಿಡೀ ಇಳಿದಂತಿರಲಿಲ್ಲ.ರಾಘವ ಮತ್ತು ಪ್ರಮೋದ ಮಿಯಾವ್ ಬೆಕ್ಕಿನ ಸೌಂದರ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಉತ್ಸುಕರಾಗಿದ್ದರು. ಕೆರೆ ಕಡೆಯ ವಾಕಿಂಗ್, ಗ್ರೂಪ್ ಫೋಟೊ, ಸೀಬೆ ಕಾಯಿ ಕೊಯ್ದು ತಿಂದದ್ದು ಎಲ್ಲ ಮುಗಿಯುತ್ತಿದ್ದಂತೆ ಬೆಂಗಳೂರು ನಮ್ಮನ್ನು ನೆನೆಸಿಕೊಂಡಿತ್ತು.
ಹೊರಡುವಾಗ ತಿಳಿದದ್ದು: ನಮ್ಮ ಗಲಾಟೆ ಕಾರಣವಾಗಿಯೋ ಎಂಬಂತೆ ಓದೇಕರ್ ಎಸ್ಟೇಟಿನ ಹಸುವೊಂದು ಕರುಹಾಕಿತ್ತು.
----------------------------------------------------------------
ಇನ್ನೊಂದು ಬರಹ:ಶ್ರೀಮತಿ ಲಾವಣ್ಯ
ನಿರ್ವಾಹಕಿ
ಕೆ ಎಸ್ ಸಿ ಬಳಗ ಮೈಸೂರು
ತುಮಕೂರಿನಿಂದಾಚೆ ಇರುವ ಹಳ್ಳಿಯಲ್ಲಿ ಶಿಬಿರ ಎಂದು ಮೈಲ್ ಬಂದಾಗ ಅಷ್ಟು ದೂರಾನಾ? ಯಾಕೆ? ಹೋಗಲು ಸಾಧ್ಯವಿಲ್ಲ, ಇದು ನನಗಲ್ಲ ಅಂತ(ಇತ್ತೀಚಿಗೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದಿದ್ದಕ್ಕೋ ಏನೋ!) ಪೂರ್ತಿಯಾಗಿ ಕೂಡ ಓದದೆ ತಣ್ಣಗೆ ಕುಳಿತಿದ್ದೆ. ಶೇಖರ್ ಸರ್ ಫೋನ್ ಮಾಡಿ ಹೀಗೆ ಒಂದು ಮೀಟಿಂಗ್ ಇದೆ ಅಂದರು. ನನ್ನಿಂದ ಯಾವುದೇ ಪ್ರತಿಕ್ರಿಯೆ ಬಾರದ್ದು ನೋಡಿ ಏನನ್ನಿಸಿತೋ "ಎಲ್ಲ ಒಳ್ಳೇ ಹುಡುಗರು, ಯಾವುದೇ ಯೋಚನೆಯಿಲ್ಲದೆ ಬಾ" ಅಂದರು. (ನನಗಿಲ್ಲದ ಅನುಮಾನ ಅವರಿಗ್ಯಾಕೆ ಬಂತೋ ಗೊತ್ತಿಲ್ಲ - ಬಹುಶಃ ಎಲ್ಲರನ್ನೂ ಹತ್ತಿರದಿಂದ ಬಲ್ಲವರಾದ್ದರಿಂದ ಇರಬೇಕು!) ಯಾವುದೇ ನೆಪ ಹೇಳಬಾರದು ಎಂದಾಗ ಅನುಮಾನಿಸುತ್ತ ಹೂಂ ಅಂದಿದ್ದೆ(ವೈಯುಕ್ತಿಕ ಕಾರಣಗಳಿಂದ ಅಷ್ಟು ಸುಲಭವಾಗಿರಲಿಲ್ಲ). ಆದರೆ ಕೆಎಸ್‍ಸಿಯ ಸೆಳೆತ ಎಲ್ಲ ಕಾರಣಗಳನ್ನು ಮೂಲೆಗೊತ್ತಿ ಶನಿವಾರ ಬೆಳಿಗ್ಗೆ ನನ್ನನ್ನು ಹೊರಡಿಸಿತು.
ನಂದಿಹಳ್ಳಿ ತಲುಪಿ ಓದೇಕಾರ್ ಫಾರಂ ತಲುಪಿದ ಕೂಡಲೆ ಅಷ್ಟೋ ಇಷ್ಟೋ ಇದ್ದ ಹಿಂಜರಿಕೆ ಕೂಡಾ ಮಾಯವಾಯಿತು. ಮೂರ್ತಿ ದಂಪತಿಗಳ ಆತ್ಮೀಯ ಸ್ವಾಗತ ಎದುರುಗೊಂಡು, ಅವರು ಕೊಟ್ಟ ನಿಂಬೆಹುಲ್ಲಿನ ಕಷಾಯ ಕುಡಿದ ನಮಗೆ ಎದುರಾದದ್ದು ಸೀತಕ್ಕ. ಸರಿ, ಉಭಯಕುಶಲೋಪರಿಯ ನಂತರ ಅಲ್ಲಿನ ಸೌಲಭ್ಯಗಳನ್ನು ನೋಡಿದ ನಮಗೆ ಹೇಗೋ, ಏನೋ ಎಂಬ ಶಂಕೆಗಳು ದೂರಾಗಿ ಮನಸ್ಸು ನಿರಾಳವಾಯಿತು. ಅಷ್ಟರಲ್ಲಿ ನಮಗಿಂತಲೂ ಮುಂಚೆ ಬಂದು "ಸಂಪೂರ್ಣ" CMS ಬಗ್ಗೆ ಒಂದು ಸುತ್ತು ಚರ್ಚೆ ನಡೆಸಿದ್ದ ಗುಂಪು ಎದುರಾಯಿತು. ಒಂದು ಸುತ್ತು ತೋಟ ನೋಡುವ ಎಂದು ರವಿ ಕೆಲವರನ್ನು ಹೊರಡಿಸಿದರು. ಅವರ ಮುಖ್ಯ ಉದ್ದೇಶ ಶೇಖರ್ ಸರ್ ಅವರ ಸಂದರ್ಶನ ನಡೆಸುತ್ತಿದ್ದ ಕಿರಣ್ ಅವರ ಗುಂಪಿಗೆ ನಾವು ತೊಂದರೆ ಕೊಡಬಾರದೆಂದೇ ಆಗಿತ್ತು.
ಅಲ್ಲಿದ್ದ ಒಂದು ಸಣ್ಣ ಕೆರೆಯ ದಂಡೆಯಲ್ಲಿ ಕುಳಿತ ನಮಗೆ ಕೆಎಸ್‍ಸಿಯ ಅನಿವಾರ್ಯವೇ ಆಗಿರುವ ರವಿ ಕೆಲವು ಹೊಸ ಬೆಳವಣಿಗೆಗಳ ಬಗ್ಗೆ ತಿಳಿಸಿದರು. ಅದಕ್ಕೆ ಕಾದಿದ್ದವರಂತೆ ನಮ್ಮ ಪ್ರಶ್ನೆಗಳು ಶುರುವಾದವು. ಪ್ರಶ್ನೆಗಳ ದಾಳಿಗೆ ತಾಳ್ಮೆಯಿಂದ ಉತ್ತರ ಕೊಟ್ಟ ರವಿಯವರು ಕೊನೆಗೆ ಸುಸ್ತಾಗಿ, ಮಿಕ್ಕಿದ್ದು ಸರ್ ಜೊತೆಯಲ್ಲಿ ನಡೆಯುವ ಚರ್ಚೆಯಲ್ಲಿ ಪ್ರಸ್ತಾಪಿಸಿ ಎಂದು ಸೂಚಿಸಿ, ಊಟದ ವೇಳೆಯಾದ್ದರಿಂದ ಅಲ್ಲಿಂದ ಹೊರಡಿಸಿದರು. ಗೋಧಿ ಪಾಯಸದ ಜೊತೆ ಪುಷ್ಕಳ ಭೋಜನದ ನಂತರ ೪ ಗಂಟೆಗೆ ಅಧಿಕೃತ ಸಭೆ ಪ್ರಾರಂಭವಾಯಿತು.
ಶೇಖರ್ ಸರ್ ಸಂವಾದ.ಕಾಂನ ಬಗ್ಗೆ ಸೂಚಿಸುತ್ತಲೇ ವಿರೋಧ ಪಕ್ಷದವರಂತೆ ಕೂತಿದ್ದ ನಮ್ಮಿಂದ ಅನೇಕ ಪ್ರಶ್ನೆಗಳ ಮಳೆಯೇ ಸುರಿಯಿತು. ಅದಕ್ಕೆ ಉತ್ತರವಾಗಿ ಸರ್ ಒಂದು ಪಾಠವನ್ನೇ ಮಾಡಿ(ಬೋರ್ಡ್ ಇದ್ದದು ತುಂಬಾ ಸುಲಭವಾಯಿತು) ಸಂವಾದ.ಕಾಂ ಇಲ್ಲದಿದ್ದರೆ ದೊಡ್ಡ ಅಪಚಾರವಾಗುವುದೆಂಬಂತೆ ನಿರೂಪಿಸಿದರು. ಕಿರಣ್ ಈಗಾಗಲೇ ಹೇಳಿರುವಂತೆ ನಾನು ಮತ್ತು ಸೌಮ್ಯ ಮಾತ್ರವೇ ವಿರೋಧ ಪಕ್ಷದಲ್ಲಿದ್ದುದರಿಂದ ವಿರೋಧ ಸೂಚಿಸಿದ್ದಕ್ಕೇ ತೃಪ್ತಿಗೊಂಡು ಸುಮ್ಮನಾದೆವು(ಇನ್ನೂ ಮುಂದುವರೆಸಿದ್ದರೆ ಅಲ್ಲಿದ್ದ ಕೆಲವರಾದರೂ ಬೆಂಗಳೂರಿಗೆ ಹಿಂದಿರುಗುವ ಮನಸ್ಸು ಮಾಡಿರುತ್ತಿದ್ದರು). ಎಲ್ಲರ ಪರಿಚಯವಾಗಬೇಕೆಂಬುದು ನನ್ನದೇ ಸಲಹೆಯಾಗಿತ್ತು, ಕಾರಣ ಸರ್, ರವಿ ಮತ್ತು ಸೀತಕ್ಕ ಬಿಟ್ಟರೆ ಎಲ್ಲರಿಗೂ ಎಲ್ಲರೂ ಗೊತ್ತಿರಲಿಕ್ಕಿಲ್ಲ ಎಂಬುದು ನನ್ನ ಅನಿಸಿಕೆಯಾಗಿತ್ತು. ನಂತರ ಟ್ರಸ್ಟ್ ಹುಟ್ಟಿತು. ಅದಕ್ಕೆ ಸದಸ್ಯೆಯಾಗಲು ಮೊದಲು ಹಿಂಜರಿದರೂ ಮಹಿಳಾ ಮೀಸಲಾತಿಯನ್ನು ಗಮನದಲ್ಲಿಟ್ಟುಕೊಂಡು (ವಿರೋಧ ವ್ಯಕ್ತಪಡಿಸಲಾದರೂ ಒಂದು ದನಿಯಿರಲಿ ಎಂದು) ಸೇರಿದ್ದಾಯಿತು. ನನ್ನ ಹಿಂದೆ ಸೌಮ್ಯ. ಅಷ್ಟರಲ್ಲಿ ಬ್ರೇಕ್. ಪದಾಧಿಕಾರಿಗಳನ್ನು ಸೂಚಿಸುವಾಗ ಈಗಾಗಲೇ ಎಲ್ಲವನ್ನೂ ಬರೆದುಕೊಳ್ಳುತ್ತಿದ್ದೆ ಎಂದು ಅದೇ ಕೆಲಸ ಮುಂದುವರೆಸಿ ಎಂದು ಕಾರ್ಯದರ್ಶಿಯನ್ನಾಗಿ ಮಾಡಿದರು. ಸಮಿತಿಗಳ ರಚನೆಯ ಸಮಯದಲ್ಲಿ ಸಮಿತಿ ಎಷ್ಟಿರಬೇಕು? ಸಂವಾದಕ್ಕೆ ಬೇರೆಯೇ ಅಂತ ಉಂಟಾದ ಗೊಂದಲದಲ್ಲಿ ತಲೆಕೆಟ್ಟು ಮನೋಜ್, ರಮೇಶ್ ಆಚೆ ಕುಳಿತು ವ್ಯವಸಾಯದ ಬಗ್ಗೆ ಚರ್ಚೆ ಮಾಡಿದ್ದೂ ಆಯಿತು. ಮತ್ತೆ ಒಂದು ಬ್ರೇಕ್.
ಊಟದ ನಂತರ ರಾಘವ ಬೋರ್ಡಿನ ಬಳಿ ತಮ್ಮ ಸಾರ್ವಭೌಮತ್ವವನ್ನು ಸ್ಥಾಪಿಸಿಕೊಂಡರು. ಹೀಗೆ ಬಿಟ್ಟರೆ ಚರ್ಚೆ ಮರುದಿನ ರಾತ್ರಿಯವರೆಗೂ ಮುಂದುವರೆಯಬಹುದು ಎಂಬ ಆತಂಕ ಶುರುವಾಯಿತೋ ಏನೋ? ಸರಿ, ಯಾವ ಸಮಿತಿ ಏನು ಮಾಡಬೇಕು, ಯಾರು ಸದಸ್ಯರು ಎಂದು ಎಲ್ಲ ಕಡೆಗಳಿಂದಲೂ ಗೆರೆಗಳೆಳೆದು ಬರೆದರು, ಅಳಿಸಿದರು, ಬರೆದರು. ನಾನೂ ಈಗಾಗಲೇ ಸಿಕ್ಕಿದ್ದ ಕಾರ್ಯದರ್ಶಿ ಸ್ಥಾನಕ್ಕೆ ಒಂದಿಷ್ಟೂ ಚ್ಯುತಿ ಬಾರದಂತೆ ಎಲ್ಲವನ್ನೂ ಬರೆದುಕೊಂಡೆ. ಇಷ್ಟಾಗುವ ಹೊತ್ತಿಗೆ ೧೨ ದಾಟಿತ್ತು ಎಂದುಕೊಳ್ಳುತ್ತೇನೆ, ಒಬ್ಬೊಬ್ಬರೆ ಮಲಗಲು ಅಣಿಮಾಡಿಕೊಳ್ಳತೊಡಗಿದರು. ಅಷ್ಟರಲ್ಲಿ ಶುರುವಾಯಿತು ಅಜಿತ್ ಮತ್ತು ಶೇಖರ್ ಸರ್ ಮಧ್ಯೆ ಪರ್ಯಾಯ ಸಿನಿಮಾದ ಕಾರ್ಯಾಗಾರದ ಬಗ್ಗೆ ಯುದ್ಧ. ಒಂದು ದಿನ ಎಂದು ಅಜಿತ್, ಎರಡು ದಿನ ಎಂದು ಸರ್. ಕಿರಣ್ ಮಲಗಿದ್ದವರು ಮಧ್ಯೆ ಎದ್ದು ನಾಲ್ಕು ದಿನ ಇದ್ದರೆ ಮತ್ತಷ್ಟು ಚೆನ್ನ ಎಂದು ಉರಿಯುವ ಬೆಂಕಿಗೆ ತುಪ್ಪ ಸುರಿದರು. ನನ್ನ ಬೆಂಬಲ ಅಜಿತ್‍ಗೆ(ಎರಡು ದಿನವಾದರೆ ನನಗೇ ಹೋಗುವುದು ಕಷ್ಟ). ಏನೇನೋ ಹೇಳಿ ಅಂತೂ ಒಪ್ಪಿಸಿದರು. ಇದಕ್ಕೆ ಅವರ convincing capacity ಕಾರಣವೋ, ಅದಾಗಲೇ ಸುಮಾರು ಜನ ನಿದ್ರೆಯ ಮೂಡಿನಲ್ಲಿದ್ದರಿಂದ ನಮಗೆ ಬೆಂಬಲ ಇಲ್ಲದ್ದು ಕಾರಣವೋ ಗೊತ್ತಿಲ್ಲ. (ಸೀರಿಯಸ್ಸಾಗಿ ಯೋಚಿಸಿದರೆ, ಲಿಖಿತ ಒಪ್ಪಂದಕ್ಕೆ ಬರದಿದ್ದರೂ, ನಮಗಿದ್ದ ಮಾನಸಿಕ ಒಪ್ಪಂದವೇ ಕಾರಣ ಎನಿಸುತ್ತದೆ). ಅಂತೂ ಸುಮಾರು ೨.೩೦ ಕ್ಕೆ ಮಲಗಲು ಬಂದೆವು.
ಯಾವಾಗಲೂ ಚರ್ಚೆಗೆ ಸಿಕ್ಕದ ಶೇಖರ್‌ಪೂರ್ಣ ಅವರ ಜೊತೆ ಇಷ್ಟು ಚರ್ಚಿಸಿದ್ದು ವೈಯಕ್ತಿಕವಾಗಿ ಖುಷಿ ಕೊಟ್ಟ ವಿಷಯ. ಸಮಯವಲ್ಲದ ಸಮಯದಲ್ಲಿ ನಿದ್ರೆಯೂ ಸಹಕರಿಸದೆ ಕಷ್ಟಪಟ್ಟು ಸ್ವಲ್ಪ ನಿದ್ರೆ ಮಾಡಿ ಕಣ್ಣುಬಿಟ್ಟರೆ ಕಂಡಿದ್ದು ನಿದ್ರೆ ಮಾಡಿ ಎದ್ದಿದ್ದ ಚೀನಿ, ನಿದ್ರೆ ಬರದೆ ಕೂತಿದ್ದ ರಮೇಶ್ ನಡುವೆ ನಡೆಯುತ್ತಿದ್ದ ಚರ್ಚೆ.(ಮೂಲ ಚರ್ಚೆ ನಡೆಯುತ್ತಿದ್ದ ಹೊತ್ತಿನಲ್ಲಿ ಒಬ್ಬರು ನಿದ್ದೆ, ಒಬ್ಬರು ಮೂಕ ಪ್ರೇಕ್ಷಕ). ಆ ಹೊತ್ತಿನಲ್ಲಿ ಯಾರು ಎಷ್ಟು ಗೊರಕೆ ಹೊಡೆಯುತ್ತಿದ್ದಾರೆ ಎಂಬುದು ಚರ್ಚೆಯ ಮಹತ್ವದ ವಿಷಯ. ಜೊತೆಗೆ ಹಾಡು ಬೇರೆ. ಸ್ವಲ್ಪ ದೂರ ಹೋಗಿ ಏನಾದರೂ ಮಾಡಿಕೊಳ್ಳಿ ಎಂದು ಬೈದು ಮತ್ತೆ ಮಲಗಿದವಳಿಗೆ ಎಚ್ಚರವಾಗಿದ್ದು ೭.೩೦ ಕ್ಕೆ. ನಂತರ ಎಲ್ಲರೂ ರೆಡಿಯಾಗಿ, ತಿಂಡಿ ತಿಂದು ಒಂದು ಸುತ್ತು ತೋಟ ನೋಡಲು ಹೋಗಿ ಭವಿಷ್ಯತ್ತಿನ ನಿರ್ದೇಶಕರ ಶೂಟಿಂಗ್‍ನಲ್ಲಿ ಭಾಗವಹಿಸಿದ್ದಾಯಿತು. ರಾಘವ್ ಹಾಗೂ ರುದ್ರಮೂರ್ತಿ ಛಾಯಾಗ್ರಾಹಕರಾಗಲು ಸ್ಪರ್ಧೆಗೆ ಹೊರಟಂತಿತ್ತು. ಬರುವಾಗ ಸೀಬೆಕಾಯಿಯ ಮರವನ್ನು ಸಾಧ್ಯವಾದಷ್ಟು ದೋಚಿ, ಮೂರ್ತಿ ದಂಪತಿಗಳ ನೈಸರ್ಗಿಕ ಉತ್ಪನ್ನಗಳ ಶಾಪಿಂಗ್ ಮಾಡಿ ಹೊರಟೆವು. ತುಮಕೂರಿನಲ್ಲಿ ದೊಡ್ಡಮ್ಮನ ಮನೆಗೆ ಹೋಗಿ ಊಟ ಮಾಡಿ ಹೊರಟು ಮೈಸೂರು ತಲುಪಿದಾಗ ರಾತ್ರಿ ೭.೩೦. ಈ ಎಲ್ಲದರ ನಡುವೆ ನಾವು ನಕ್ಕಿದ್ದೆಷ್ಟೋ ಗೊತ್ತಿಲ್ಲ.(ಇಡೀ ತಿಂಗಳಿಗೆ ಸಾಲಬಹುದು!) ನೆನಪು ಕೂಡ ನಗೆ ತರಿಸುತ್ತದೆ. ಸುಮಾರು ಒಂದು ವರ್ಷದಿಂದ ಬಹಳ ಕೆಲಸದ ಒತ್ತಡದಿಂದ ಸುಸ್ತಾಗಿದ್ದ ನನಗೆ ಈ ಶಿಬಿರ ನಮ್ಮ ಕಾಲೇಜಿನ ದಿನಗಳ ನೆನಪನ್ನು ತಂದುಕೊಟ್ಟ ಒಂದು welcome relief.
ಜನಪ್ರಿಯ ಲೇಖನಗಳು
-
ಸಮ್ಮೇಳನದ ಮಳಿಗೆಯಲ್ಲಿ ಶನಿವಾರ ನಮಗಂತೂ ಶುಭದಿನ. ಎದ್ದು ನ(ಗ)ರಿಗಳ ಮುಖ ನೋಡಿದ್ದರಿಂದಲೋ ಏನೋ ಭರ್ಜರಿ ನಲವತ್ತು ಸಾವಿರ ವ್ಯಾಪಾರ-೮*೮ ಮಳಿಗೆಯೊಂದರಲ್ಲೇ. ವ್ಯಾಪಾ...
-
ಶ್ರೀಮಾತಾ, ಕ್ಷಮೆಯಿರಲಿ ನನ್ನ ಗಡಿಬಿಡಿ ಮತ್ತು ಹೊಸ ಹುಡುಗಿಯರನ್ನು ನೇರವಾಗಿ ಮಾತನಾಡಿಸಲಾಗದ ಲಘು ಸಂಕೋಚಕ್ಕೆ. ಬ್ಲಾಗೀ ಮಿಲನದಲ್ಲಿ ರಾಜೇಶ್ ನಿಮ್ಮನ್ನು ’ಮ್ಯುಸಿಸಿಯನ್’...
-
ಅ ದು ಮೊದಲ ಮಹಾಯುದ್ಧದ ನಂತರ ಕಾಲ. ಮಿತ್ರ ಸೇನೆಯ ಎದುರು ಹೀನಾಯವಾಗಿ ಸೋತ ಜರ್ಮನಿ ತನ್ನ ಭೂಭಾಗಗಳನ್ನು ಕಳೆದುಕೊಂಡಿದ್ದಲ್ಲದೆ, ಯುದ್ಧ ನಷ್ಟವೆಂದು ಅಪಾರವಾದ ವೆಚ್ಚವನ್ನು...
-
(ಸ್ನೇಹಿತರೆ ಬೆಂಗಳೂರು ಮಾತನಾಡುವವರಿಗೆ ಮುಕ್ತ ಅವಕಾಶ ನೀಡಿದೆ. ಇಲ್ಲಿ ಕನ್ನಡಿಗರನ್ನು ಬಯ್ಯಬಹುದು. ಅನ್ಯಭಾಷಿಗರನ್ನು ಅವರ ಭಾಷೆಯಲ್ಲಿಯೇ ಓಲೈಸಬಹುದು. ಬೀದಿ ನಾಯಿಗಳ ಪರ...
-
(ಗೆಳೆಯ ಆಸ್ಟಿನ್ ಜೋಸ್ ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲಿನವ. ವೃತ್ತಿಯಿಂದ ವಿಪ್ರೊ ಕಂಪನಿಯಲ್ಲಿ ತಂತ್ರಾಂಶ ತಜ್ಞ. ವಿಜಯನಗರ ಕಾಲದ ನಾಣ್ಯ ಸಂಗ್ರಹ...
-
ಕೆಲವೊಮ್ಮೆ ಹಾಗಾಗುತ್ತೆ. ಎದುರಾಗುವ ಪ್ರತಿ ಸನ್ನಿವೇಷವೂ ನಮಗೆ ವಿರುದ್ಧವಾಗಿ ವರ್ತಿಸುತ್ತಿರುತ್ತದೆ. ಕನ್ನಡ ಅಂತರ್ಜಾಲ ಜಗತ್ತಿನಲ್ಲಿ ಕನ್ನಡದ ಪ್ರಾತಿನಿಧ್ಯತೆಯನ್ನು ಐದ...
-
www.samvaada.com Dear Friends, "Samvaada.com" is constantly orgainising film shows, film discourses and film readings in order...
-
"NAVILAADAVARU" a Kannada film realized by a small group of enthusiasts, is produced in just Rs 35000. We are screening this film ...
-
ಬರಹಗಾರರು - ವಿಶಾಲಮತಿ , `ಪುಸ್ತಕ ಪ್ರೀತಿ' ಬ್ಲಾಗ್ ಅಂತರ್ಜಾಲದ ಓದುಗರಿಗೆ ಕನ್ನಡ ಪುಸ್ತಕಗಳ ಬಗೆಗಿನ ಪ್ರೀತಿಯನ್ನು ಬೆಳೆಸಬೇಕೆಂಬ ಉದ್ದೇಶದಿಂದ ಬ್ಲಾಗ್ ಪ್ರಪಂಚದಲ...
-
ಲೇಖಕರು: ಎಚ್.ಎಸ್. ಪ್ರಭಾಕರ ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ ನಿಧನರಾದ ಪ್ರಯುಕ್ತ ಸರ್ಕಾರ ಜ.೨೮ ರಿಂದ ಫೆ.೩ ರವರೆಗೆ ಒಂದು ವಾರ ಶೋಕಾಚರಣೆ ಪ್ರಕಟಿಸಿದ್ದು ಸರಿ...
No comments:
Post a Comment