5.16.2008

ಕನ್ನಡ ತಂತ್ರಾಂಶಗಳೂ, ಮಾತುಗಾರರೂ...

(ಸ್ನೇಹಿತರೆ
ಬೆಂಗಳೂರು ಮಾತನಾಡುವವರಿಗೆ ಮುಕ್ತ ಅವಕಾಶ ನೀಡಿದೆ. ಇಲ್ಲಿ ಕನ್ನಡಿಗರನ್ನು ಬಯ್ಯಬಹುದು. ಅನ್ಯಭಾಷಿಗರನ್ನು ಅವರ ಭಾಷೆಯಲ್ಲಿಯೇ ಓಲೈಸಬಹುದು. ಬೀದಿ ನಾಯಿಗಳ ಪರವಾಗಿ ನಾಯಿಯಂತೆಯೇ ಬೊಗಳಾಡಬಹುದು. ಏನೇ ಆದರೂ ನಾಲಿಗೆಯನ್ನು ಮುಕ್ತವಾಗಿ ಹರಿಬಿಟ್ಟು ಎಲ್ಲದರ ಬಗ್ಗೆಯೂ ಮಾತನಾಡುತ್ತೇವೆ. ಟಿವಿ, ಪತ್ರಿಕೆಗಳಲ್ಲಿ ಬಂತಾ ಎಂದು ವಿಚಾರಿಸಿಕೊಂಡು ಸುಮ್ಮನಾಗುತ್ತೇವೆ. ಅಲ್ಲಿಗೆ ನಾವೇನೋ ಹೋರಾಟ ಮಾಡಿ ಜಾಗೃತಿ ಸೃಷ್ಟಿಸಿದೆವು ಎಂದು ಬೀಗ್ತೇವೆ. ಬೆಂಗಳೂರು ಬೊಗಳೂರು, ಬೊಗಳೆಯೂರು ಎಂದೆನ್ನುವಂತೆ ಮಾಡಿದ್ದೇವೆ.

ಕನ್ನಡ ಕಂಪ್ಯೂಟರ್ ತಾಂತ್ರಿಕತೆಗೆ ಸಂಬಂಧಿಸಿದಂತೆಯೂ ಇದೇ ಪರಿಸ್ಥಿತಿ. ಸರ್ಕಾರವೇ ಇರೋ ಬರೋ ಎಲ್ಲಾ ಸಾಫ್ಟ್ವೇರುಗಳನ್ನು ಮಾಡಿ ಹಾಕಲಿ ಅಂತ ಕಾಯ್ತೇವೆ. ಮನವಿ ಸಲ್ಲಿಸಿ ಸಲ್ಲಿಸಿ ಕಸದ ಬುಟ್ಟಿ ತುಂಬಿಸ್ತೇವೆ. ಏನೂ ಆಗಲ್ಲ; ಏಕೆಂದರೆ ಗದ್ದುಗೆಯ ಮೇಲೆ ಕೂತವನಿಗೆ ಇವೆಲ್ಲಾ ಯಾಕೆ ಬೇಕು ಎಂದು ಅರ್ಥವಾಗಿರೋಲ್ಲ. ಅವನಿಗೆ ವಿವರಿಸಿ ಹೇಳಬೇಕಾದ ಅಧಿಕಾರಿಗಳು ಮೈಕ್ರೋಸಾಫ್ಟಿನಂತಹ ಕಂಪನಿಗಳಿಂದ ಎಂಜಲು ನೆಕ್ಕಿ ವಿಂಡೋಸ್-ತುಂಗಾ ಫಾಂಟಿನಂತಹ ಕಸವನ್ನು ಹೇಗೆ ಜನರ ತಲೆಗೆ ತಿಕ್ಕಬಹುದು ಅಂತ ಯೋಚಿಸ್ತಿರ್ತಾರೆ. ಯೋಜನೆಗಳು ದೊಡ್ಡ ಕಂಪನಿಗಳ ಮರ್ಜಿಗೆ ಒಳಬಿದ್ದು ತಯಾರಾಗುತ್ತವೆ. ಸಾಕಷ್ಟು ಕಠಿಣ ನಿಯಮಾವಳಿಗಳನ್ನು ರೂಪಿಸಿ ಹೊಸ ತಂತ್ರಾಂಶ ಕಂಪನಿಗಳು ಈ ಕ್ಷೇತ್ರಕ್ಕೆ ಕಾಲಿಡದಂತೆ ನಿರ್ಬಂಧಿಸುವ ಕುಕೃತ್ಯವೂ ಸರ್ಕಾರಿ ಯಂತ್ರದೊಳಗೆ ನಡೆದಿದೆ. ಗುಣಮಟ್ಟದ ತಂತ್ರಾಂಶಗಳೇನೂ ಬರದಿದ್ದರೂ ಕಾದಿಟ್ಟ ಹಣ ಖರ್ಚಾಗಿರುತ್ತದೆ.

ಕನ್ನಡ ಸಾಫ್ಟ್ವೇರು, ತಂತ್ರಾಂಶ ಕುರಿತಂತೆ ಇದ್ದುದರಲ್ಲಿಯೇ ಅಲ್ಪಸ್ವಲ್ಪ ತಿಳಿದುಕೊಂಡು ಆ ದಿಸೆಯಲ್ಲಿ ಮುನ್ನಡೆಯಲು ಆಸಕ್ತರನ್ನು ಮುನ್ನಡೆಸಿದವರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಆದರೆ ನೈಜ ಕಳಕಳಿ ಹೊಂದಿದ್ದ ತೇಜಸ್ವಿಯವರನ್ನೂ ‘ಮಾತುಗಾರರು’ ದಾರಿತಪ್ಪಿಸುತ್ತಿದ್ದರು. ಈಗಾಗಲೇ ಕನ್ನಡ ತಂತ್ರಾಂಶ ಕ್ಷೇತ್ರದಲ್ಲಿ ಅಲ್ಪಸ್ವಲ್ಪ ಕೆಲಸ ಮಾಡಿ ಆರ್ಥಿಕ ಕಾರಣಗಳಿಂದ ಒದ್ದಾಡುತ್ತಿದ್ದ ಸಂಸ್ಥೆಗಳ ವಿರುದ್ಧ ಪತ್ರಿಕಾಗೋಷ್ಠಿಗಳಲ್ಲಿ ತೇಜಸ್ವಿಯವರೇ ಹರಿಹಾಯ್ದರು. ‘ಬರಹ’ ರೂಪಿಸಿದ ‘ಶೇಷಾದ್ರಿ ವಾಸುರವರಂಥ’ ನಿಷ್ಕಪಟಿ, ಸಮಾಜಮುಖೀ ಮನಸ್ಸುಗಳನ್ನು ಈ ‘ಮಾತುಗಾರರು’ ನೋಯಿಸದೆ ಬಿಡಲಿಲ್ಲ.

ಅದೆಲ್ಲಾ ಇರಲಿ. ಇಲ್ಲಿ ನೋಡಿ. ತೇಜಸ್ವಿಯವರ ಪ್ರಯತ್ನಗಳಿಂದ ಸ್ಫೂರ್ತಿಗೊಂಡ ತಂಡವೊಂದು ಹಂಪಿ ವಿಶ್ವವಿದ್ಯಾಲಯದಂತ


ಕನ್ನಡಸಾಹಿತ್ಯ.ಕಾಂ ಬಳಗಕ್ಕೆ ಸದಸ್ಯರಾಗಿೆ


ಮೂಲಗಳಿಂದ ಸಹಾಯ ಪಡೆದು ‘ಕುವೆಂಪು ತಂತ್ರಾಂಶ’ ರೂಪಿಸಿತು. ಹಾಸನದ ‘ಮಾರುತಿ ತಂತ್ರಾಂಶ ಅಭಿವೃದ್ಧಿಕಾರರು’ ಹೆಸರಿನಲ್ಲಿ ಒಂದಾದ ತಂಡ ಬ್ರೈಲ್ ಕನ್ನಡ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಇದುವರೆಗೂ ಇಂಗ್ಲೀಷಿನ ಪಠ್ಯವನ್ನು ಮಾತ್ರ ತಂತ್ರಾಂಶ ಬಳಸಿ ಅಂಧರಿಗೆ ಕೇಳಿಸಲಾಗುತ್ತಿದೆ. ಕನ್ನಡದ ಈ ಬ್ರೈಲ್ ತಂತ್ರಾಂಶ ಅಂಧರ ಬಾಳಿಗೆ ಅಂತಃಕಿರಣವಾಗಲಿದೆ ಎಂಬ ನಿರೀಕ್ಷೆಯಿದೆ. ತಂತ್ರಾಂಶದ ಪ್ರಗತಿಯ ಕೊನೆ ಹಂತದಲ್ಲಿ ತಂಡ ಆರ್ಥಿಕ ಮುಗ್ಗಟ್ಟಿಗೆ ಬಿದ್ದಿದೆ. ಮುಂದೆ ಬರುವ ಸರ್ಕಾರ ಈ ನಿಟ್ಟಿನಲ್ಲಿ ಏನಾದರೂ ಸಹಾಯ ಮಾಡುತ್ತೆ ಅನ್ನುವ ಆಸೆಯಿಟ್ಟುಕೊಂಡು ಕೂತಿದ್ದಾರೆ. ಆದರೆ ಕರ್ನಾಟಕ ಸರ್ಕಾರವನ್ನು ಹೊರತು ಪಡಿಸಿ ಇಂಥಹ ಪ್ರಯತ್ನಗಳಿಗೆ ಪ್ರಾಯೋಜಕತ್ವದ ಅಗತ್ಯವಿದೆ. ಸರ್ಕಾರೇತರ ಪ್ರಾಯೋಜಕರು ಮುಂದೆ ಬಂದರೆ ಇಂಥ ಹಲವು ಕನ್ನಡದ ಕೆಲಸಗಳು ಮುಂದುವರೆಯುವುದು ಕಷ್ಟವಾಗಲಾರದು. ಪ್ರಭಾಕರ್‌ರವರ ಲೇಖನ ಸಮಯೋಚಿತವೆಂದು ನನ್ನ ಭಾವನೆ. ‘ಮಾತುಗಾರ’ರಿಗೆ ಕೇಳಿಸಿತಾ?

-ಅರೇಹಳ್ಳಿ ರವಿ)

ಲೇಖಕರು- ಎಚ್ ಎಸ್ ಪ್ರಭಾಕರ್, ಹಿರಿಯ ಪತ್ರಕರ್ತರು
ಲೇಖನ ಕೃಪೆ: ಸಂಯುಕ್ತ ಕರ್ನಾಟಕ

ಕರ್ನಾಟಕ ರಾಜ್ಯದಲ್ಲಿನ ಸುಮಾರು ೫ ಲಕ್ಷ ಅಂಧರಿಗಾಗಿಯೇ ಹಾಸನದಲ್ಲಿ ರೂಪಿಸಲಾಗುತ್ತಿರುವ ಪ್ರಪ್ರಥಮ ‘ಕನ್ನಡ ಧ್ವನಿ’ ಆಧಾರಿತ ‘ಪೂರ್ಣಚಂದ್ರ ತೇಜಸ್ವಿ ಬ್ರೈಲ್ ಕನ್ನಡ ತಂತ್ರಾಂಶ’ (ಸಾಫ್ಟ್ವೇರ್) ಅಂತಿಮ ಹಂತ ತಲುಪಿದ್ದು, ಇನ್ನು ೨೫ ದಿನಗಳಲ್ಲಿ ಅಂಧರ ಕೈಗೆಟುಕಲಿದೆ; ಆದರೆ ‘ಆಧುನಿಕ’ ಅಂಧರ ಶೈಕ್ಷಣಿಕ ಅಭಿವೃದ್ಧಿ ಕುರಿತು ‘ಜಾಣ ಕುರುಡು’ ಪ್ರದರ್ಶಿಸುತ್ತಿರುವ ಸರ್ಕಾರ, ಈ ‘ಪೂಚಂತೇ ಬ್ರೈಲ್ ತಂತ್ರಾಂಶ’ ಕುರಿತು ಕಣ್ಣು ತೆರೆದರೆ ಮಾತ್ರ ಇದು ಇನ್ನಷ್ಟು ಸುಲಭ ಸಾಧ್ಯ!
ಕುವೆಂಪು ಅವರ ಪುತ್ರ ಹಾಗೂ ಕನ್ನಡದ ಖ್ಯಾತ ಲೇಖಕ ದಿ. ಪೂರ್ಣಚಂದ್ರ ತೇಜಸ್ವಿ ಅವರ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕನಸಿನ ಕೂಸಾಗಿದ್ದ ‘ಕುವೆಂಪು ಕನ್ನಡ ತಂತ್ರಾಂಶ’ವನ್ನು ಈಗಾಗಲೇ ಹಂಪಿ ಕನ್ನಡ ವಿ.ವಿ. ಬಿಡುಗಡೆ ಮಾಡಿದೆ. ಸದರಿ ಉಚಿತ ಕುವೆಂಪು ಕನ್ನಡ ತಂತ್ರಾಂಶವನ್ನು ತೇಜಸ್ವಿ ಮಾರ್ಗದರ್ಶನದಲ್ಲಿ ರೂಪಿಸಿಕೊಟ್ಟವರು ಹಾಸನದ ‘ಮಾರುತಿ ತಂತ್ರಾಂಶ ಅಭಿವೃದ್ಧಿಗಾರರು’ ಸಂಸ್ಥೆಯ ಎಸ್.ಡಿ. ಆನಂದ್, ಮಂಜಾಚಾರ್ ಮತ್ತು ಸುಧೀರ್ ಎಂಬ ಹುಡುಗರು ಎಂಬುದೇ ಹೆಮ್ಮೆಯ ಸಂಗತಿ! ಕನ್ನಡದ ಅದೇ ಹುಡುಗರೇ ಈಗ ಕನ್ನಡದಲ್ಲೇ ಉಲಿಯುವ ಧ್ವನಿ ಆಧರಿತ ಪೂಚಂತೇ ಬ್ರೈಲ್ ಕನ್ನಡ ತಂತ್ರಾಂಶವನ್ನೂ ರೂಪಿಸಿದ್ದಾರೆ; ಹೀಗಾಗಿ ತೇಜಸ್ವಿ ಅವರಂತೆಯೇ ಈ ಹುಡುಗರೂ ಸಹ ಒಂದು ರೀತಿ ‘ಕನ್ನಡದ ಕುವೆಂಪು ಮಕ್ಕಳು’ ಎಂದರೆ ಉತ್ಪ್ರೇಕ್ಷೇಯೇನಲ್ಲ! ಏಕೆಂದರೆ ಇವರು ಮಾಡಿರುವುದೇನೂ ಸಾಧಾರಣ ಸಾಧನೆಯಲ್ಲ; ಕಂಪ್ಯೂಟರ್ ಕೀಲಿ ಮಣೆ ಮೇಲೆ ಆಡುವ ಅಂಧರ ಕೈಗಳಿಗೆ ಇವರು ಹೊಸ ತಂತ್ರಾಂಶದ ‘ಕಣ್ಣು’ ನೀಡಿದ್ದಾರೆ; ಕನ್ನಡದ ‘ಕಿವಿ’ ಕೊಟ್ಟಿದ್ದಾರೆ! ಈ ತಂತ್ರಾಂಶವನ್ನು ಉಚಿತವಾಗಿ ಲೋಕಾರ್ಪಣೆ ಮಾಡಲೂ ಸಹ ಇವರು ಸಿದ್ಧರಿದ್ದಾರೆ!!

ಆಧ್ಯತೆ ಯಾವುದಕ್ಕೆ?: ‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಾದೇಶಿಕ ಭಾಷೆಗಳಿಗೆ ಅವಕಾಶವೇ ಇಲ್ಲ; ಕಂಪ್ಯೂಟರ್ನಲ್ಲಿ ಕನ್ನಡ ತರಬೇಕು; ಜಾಗತೀಕರಣ ಹಾಗೂ ಐ.ಟಿ.-ಬಿ.ಟಿ.ಗಳಿಂದ ಪ್ರಾದೇಶಿಕ ಭಾಷೆ ಹಾಗೂ ಸಂಸ್ಕೃತಿಗಳು ಸಾವನ್ನಪ್ಪುತ್ತಿವೆ....’ ಇತ್ಯಾದಿ ಹಾಹಾಕಾರ ಪ್ರಬಲವಾಗುತ್ತಿರುವ ಈ ದಿನಗಳಲ್ಲಿ, ಕಂಪ್ಯೂಟರ್ ಕ್ಷೇತ್ರದಲ್ಲಿ ಇಂತಹ ‘ಪ್ರಾದೇಶಿಕ’ ಸಾಧನೆ ಮಾಡಿದವರನ್ನು ಪ್ರೋತ್ಸಾಹಿಸುವುದು ಸರ್ಕಾರದ ಕರ್ತವ್ಯ. ಆದರೆ ದುರದೃಷ್ಟವಶಾತ್ ಆ ಕೆಲಸ ಆಗುತ್ತಿಲ್ಲ ಎಂಬ ನೋವಿನ ಕೂಗೂ ಸಹ ಅಷ್ಟೇ ಪ್ರಬಲವಾಗಿದ್ದು, ಅದಕ್ಕೆ ಈ ಹುಡುಗರ ಪ್ರಯತ್ನವೇ ನಿದರ್ಶನ!

ಈ ಮೂವರು ಕನ್ನಡ ತಂತ್ರಾಂಶ ಅಭಿವೃದ್ಧಿಗಾರರು ಈಗ್ಗೆ ೯ ತಿಂಗಳ ಹಿಂದೆ ಏಪ್ರಿಲ್ನಲ್ಲಿ ಅಂಧರಿಗಾಗಿ ಈ ವಿಶೇಷ ತಂತ್ರಾಂಶ ಅಭಿವೃದ್ಧಿಗೆ ತೊಡಗಿಸಿಕೊಂಡರು. ನಂತರ ಈಗ್ಗೆ ೬ ತಿಂಗಳ ಹಿಂದೆಯೇ ಜುಲೈನಲ್ಲಿ ಈ ಹುಡುಗರ ಪರವಾಗಿ ಅಂತಾರಾಷ್ಟ್ರೀಯ ಖ್ಯಾತ ಕಲಾವಿದ ಕೆ.ಟಿ. ಶಿವಪ್ರಸಾದ್ ನೇತೃತ್ವದ ‘ಪೂರ್ಣಚಂದ್ರ ಬೋಧಿ ಟ್ರಸ್ಟ್’ ಸಂಸ್ಥೆಯು ಸರ್ಕಾರಕ್ಕೆ ಪತ್ರ ಬರೆಯಿತು. ಪತ್ರದಲ್ಲಿ ಎಲ್ಲ ವಿವರಗಳನ್ನು ನೀಡಿ ಲಾಭದ ಉದ್ದೇಶವಿಲ್ಲದೆ ತಯಾರಾಗುತ್ತಿರುವ ಈ ಉಚಿತ ತಂತ್ರಾಂಶ ಅಭಿವೃದ್ಧಿಗೆ ೧೭ ಲಕ್ಷ ರೂ. ಖರ್ಚಾಗುತ್ತಿದ್ದು, ಅದನ್ನು ಒದಗಿಸಿಕೊಡಬೇಕೆಂದು ಕೋರಲಾಗಿತ್ತು. ರಾಜ್ಯದ ಅಂಧರ ಹಿತದೃಷ್ಟಿಯಿಂದ ಸರ್ಕಾರ ಈ ಮನವಿಗೆ ಸ್ಪಂದಿಸಬೇಕಾಗಿತ್ತು. (ಈಗಿನ ಲೆಕ್ಕಾಚಾರಗಳ ಪ್ರಕಾರ ಸುಮಾರು ೨೫ ಲಕ್ಷ ರೂ. ಅಗತ್ಯವಿದೆ) ಆದರೆ ಈವರೆಗೂ ಆ ಮನವಿ ಕುರಿತು ಸರ್ಕಾರ ಜಾಣ ಕುರುಡನ್ನೇ ಪ್ರದರ್ಶಿಸುತ್ತಿದೆ. ಇನ್ನು ಐ.ಟಿ. ಕ್ಷೇತ್ರದಲ್ಲಿ ಕನ್ನಡ ಅಭಿವೃದ್ಧಿ ಆಗಬೇಕೆಂದರೆ ಹೇಗೆ...?
‘ಸಂಯುಕ್ತ ಕರ್ನಾಟಕ’ದ ನಿನ್ನೆಯ (ಫೆ.೧೬) ಸಂಚಿಕೆಯಲ್ಲಿ ಪ್ರಕಟವಾಗಿರುವ ಮೈಸೂರು ವರದಿಯೊಂದರ ಪ್ರಕಾರ, ಮೈಸೂರಿನ ಸರ್ಕಾರಿ ಲೂಯಿ ಬ್ರೈಲ್ ಅಂಧ ಮಕ್ಕಳ ಶಾಲೆಯಲ್ಲಿ ಕಂಪ್ಯೂಟರ್ ಪ್ರಯೋಗಾಲಯವೊಂದನ್ನು ಸ್ಥಾಪಿಸಲಾಗುತ್ತಿದೆ. ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮ (ಎನ್ಟಿಪಿಸಿ) ಹಾಗೂ ರಾಜ್ಯದ ಅಂಗವಿಕಲರ ಕಲ್ಯಾಣ ಇಲಾಖೆ ಜಂಟಿಯಾಗಿ ಈ ಯೋಜನೆ ಕೈಗೆತ್ತಿಕೊಂಡಿವೆ ಎನ್ನಲಾಗಿದೆ. ಸಂತೋಷ! ಆದರೆ ಇಲ್ಲಿ ೧ ರಿಂದ ೧೦ನೇ ತರಗತಿವರೆಗಿನ ಅಂಧ ಮಕ್ಕಳಿಗಾಗಿ ಜೋಡಿಸುವ ಹತ್ತಾರು ‘ಮಾತನಾಡುವ ಕಂಪ್ಯೂಟರ್’ಗಳು ಕನ್ನಡದಲ್ಲಿ ಮಾತನಾಡುತ್ತವೆಯೇ!? ಖಂಡಿತ ಇಲ್ಲ; ಬಲ್ಲ ಮೂಲಗಳ ಪ್ರಕಾರ ಅದು ಕಂಪ್ಯೂಟರ್ ಶಿಕ್ಷಣ ಕುರಿತು ಪ್ರಾಥಮಿಕ ಮಾಹಿತಿಯನ್ನಷ್ಟೆ ಕಲಿಸುವ ಅಮೆರಿಕಾ ಮೂಲದ ‘ಜಾಸ್ ತಂತ್ರಾಂಶ’ ಅಳವಡಿಸಿರುವ ಆಂಗ್ಲ ಭಾಷೆ ಮಾತನಾಡುವ ಸಾಧನಗಳಷ್ಟೆ!
ಆದರೆ, ಹಾಸನದ ಹುಡುಗರು ರೂಪಿಸಿರುವ ಪೂಚಂತೇ ತಂತ್ರಾಂಶದಲ್ಲಿ ಅಂಧರಿಗೆ ಕಸ್ತೂರಿ ಕನ್ನಡ ಭಾಷೆ ಕೇಳಿಸುತ್ತದೆ. ಅವರು ಟೈಪ್ ಮಾಡುತ್ತಿರುವ ಅಕ್ಷರ ಯಾವುದು ಎಂಬುದನ್ನು ಅಂಧರು ಕನ್ನಡದಲ್ಲೇ ಕೇಳಿ ಅರಿತು ಮುಂದುವರೆಯಬಹುದು. ಬರೇ ಪ್ರಾಥಮಿಕ ಕಲಿಕೆಗಷ್ಟೇ ಇದು ಸೀಮಿತವೂ ಅಲ್ಲ; ವ್ಯಾಪಕವಾದ ಸಾಕಷ್ಟು ಸೌಲಭ್ಯಗಳು ಇದರಲ್ಲಿವೆ! ಆನಂದ್, ಮಂಜಾಚಾರ್ ಹಾಗೂ ಸುಧೀರ್ ಅವರುಗಳು, ‘ಸಂಯುಕ್ತ ಕರ್ನಾಟಕ’ ಹಾಸನ ಪ್ರಾದೇಶಿಕ ಕಚೇರಿಗೇ ಇತ್ತೀಚೆಗೆ ಆಗಮಿಸಿ ತಮ್ಮ ತಂತ್ರಾಂಶದ ವಿವಿಧ ಸೌಲಭ್ಯಗಳ ಪ್ರದರ್ಶನ ನೀಡಿ ಸಾಬೀತುಪಡಿಸಿದ್ದಾರೆ! ಕರ್ನಾಟಕ ಸರ್ಕಾರದ (ಅಂಗವಿಕಲರ ಕಲ್ಯಾಣ ಇಲಾಖೆಯ) ಆದ್ಯತೆ ಯಾವುದಾಗಿರಬೇಕು?

ಪ್ರಾಮುಖ್ಯತೆ ಏನು?: ಸಮೀಕ್ಷೆಯೊಂದರ ಪ್ರಕಾರ ೧,೯೯,೪೩೬ ಮಹಿಳೆಯರೂ ಸೇರಿದಂತೆ ರಾಜ್ಯದಲ್ಲಿ ಸುಮಾರು ೫ ಲಕ್ಷ ಅಂಧರಿದ್ದು, ೫೪ ಅಂಧ ಮಕ್ಕಳ ಶಾಲೆಗಳಿವೆ. ಇಡೀ ದಕ್ಷಿಣ ಭಾರತಕ್ಕೆ ೪೦೦ ಎಸ್.ಆರ್. ಮುದ್ರಣ ಯಂತ್ರ ಹೊಂದಿರುವ ಏಕೈಕ ಬ್ರೈಲ್ ಲಿಪಿಯ ಸರ್ಕಾರಿ ಮುದ್ರ್ರಣಾಲಯ ಮೈಸೂರಿನಲ್ಲಿ ಮಾತ್ರವಿದೆ! ಅಂದ ಮೇಲೆ, ಇಡೀ ದಕ್ಷಿಣ ಭಾರತದ ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ೧ ರಿಂದ ೧೦ನೇ ತರಗತಿವರೆಗಿನ ಅಂಧ ಮಕ್ಕಳ ಪಠ್ಯ ಪುಸ್ತಕಗಳು, ಮತ್ತಿತರ ಮುದ್ರಣ ಕಾರ್ಯಗಳಿಗೆ ಎಷ್ಟು ಒತ್ತಡ ಇರಬಹುದು ನೀವೇ ಊಹಿಸಿ! ಈಗ ಹೇಳುತ್ತಿರುವ ಪೂಚಂತೇ ಕನ್ನಡ ಬ್ರೈಲ್ ತಂತ್ರಾಂಶ ಅಳವಡಿಸಿಕೊಂಡರೆ ಖಚಿತವಾಗಿ ಅಲ್ಲಿ ಕೆಲಸಗಳು ಸಸೂತ್ರವಾಗಿ ಸಕಾಲಕ್ಕೆ ಮುಗಿಯುತ್ತವೆ!!
ಕನ್ನಡದಲ್ಲಿ ಬ್ರೈಲ್ ಬೆರಳಚ್ಚು ಮಾಡಲು ಒಂದೆರಡು ತಂತ್ರಾಂಶಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವೂ ಸಹ ತಮ್ಮದೇ ಆದ ಕೊಡುಗೆ ಕೊಟ್ಟಿವೆ. ಆದರೆ ಅಲ್ಲಿನ ಅನಾನುಕೂಲತೆಗಳು ಹಾಗೂ ಕೊರತೆಗಳನ್ನೆಲ್ಲ ನೀಗಿಸಿ ಅತ್ಯಾಧುನಿಕವಾಗಿ ಈ ಧ್ವನಿ ಆಧಾರಿತ ಪೂಚಂತೇ ತಂತ್ರಾಂಶ ಸಿದ್ಧಗೊಂಡಿದೆ.


ಕನ್ನಡಸಾಹಿತ್ಯ.ಕಾಂ ಬಳಗಕ್ಕೆ ಸದಸ್ಯರಾಗಿ



ಭಾರತೀಯ ಎಲ್ಲ ಭಾಷೆಗಳಿಗೂ (‘ಡೆಕ್ಸ್ಬೆರಿ’ ತಂತ್ರಾಂಶಕ್ಕೆ) ಹೊಂದಾಣಿಕೆಯಾಗುವಂತಹ ತಂತ್ರಾಂಶ ಇದಾಗಿದ್ದು, ಫಾಂಟ್ಗೆ ಅನುಗುಣವಾಗಿ ಬ್ರೈಲ್ ಕೀಲಿ ಮಣೆ ವಿನ್ಯಾಸಗೊಳಿಸಲಾಗಿದೆ. ಬ್ರೈಲ್ ಕೀಲಿ ಮಣೆ ಹಾಗೂ ಗ್ಲಿಫ್ ಪ್ಲೇಸ್ಮೆಂಟ್ಗೆ ಹೊಂದಿಕೊಳ್ಳುವಂತೆ ಇಲ್ಲಿ ದೃಷ್ಟಿ ಉಳ್ಳವರ ಫಾಂಟ್ (ಸೈಟೆಡ್ ಫಾಂಟ್) ಸಹ ಇಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕುವೆಂಪು ಕನ್ನಡ ತಂತ್ರಾಂಶದ ಲಿಪಿಯಿಂದ ಬ್ರೈಲ್ ಲಿಪಿಗೆ ಹಾಗು ಬ್ರೈಲ್ ಲಿಪಿಯಿಂದ ಕುವೆಂಪು ಕನ್ನಡ ತಂತ್ರಾಂಶದ ಕನ್ನಡ ಲಿಪಿಗೆ ವರ್ಗಾಯಿಸುವ ಕನ್ವರ್ಟರ್ಗಳನ್ನೂ ಇಲ್ಲಿ ಅಳವಡಿಸಲಾಗಿದೆ. ಟೈಪ್ ಮಾಡುವ ಅಕ್ಷರಗಳನ್ನು ಉಲಿಯುವ ಕನ್ನಡದ ಪುರುಷ ಹಾಗೂ ಮಹಿಳಾ ಧ್ವನಿಗಳನ್ನು ಈ ತಂತ್ರಾಂಶದಲ್ಲಿ ಸೇರಿಸಲಾಗಿದೆ!
‘ಮಾರುತಿ ತಂತ್ರಾಂಶ ಅಭಿವೃದ್ಧಿಗಾರರು’ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಎಸ್.ಡಿ. ಆನಂದ್, ಯೋಜನಾ ವ್ಯವಸ್ಥಾಪಕರಾಗಿ ಮಂಜಾಚಾರ್ ಹಾಗೂ ಸಾಫ್ಟ್ವೇರ್ ಇಂಜಿನಿಯರ್ ಸುಧೀರ್ ಮತ್ತು ಸಿಬ್ಬಂದಿ ಈ ತಂತ್ರಾಂಶ ರೂಪಿಸಿದ್ದಾರೆ; ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಭಾಷಾ ಉಚ್ಛಾರಣಾ ತಜ್ಞ ಸಿ.ಎಸ್. ರಾಮಚಂದ್ರ ಹಾಗೂ ಹಾಸನ ಅಂತರಿಕ್ಷ ನಗರದ ಸಂಗೀತಗಾರರಾದ ಶ್ರೀಮತಿ ಪ್ರಭಾಮಣಿ ಅವರುಗಳು ತಮ್ಮ ಸುಶ್ರಾವ್ಯ ಧ್ವನಿ ನೀಡಿದ್ದಾರೆ. ಕಂಪ್ಯೂಟರ್ಗೆ ಕನ್ನಡ ಬಾಷೆ ಧ್ವನಿ ಅಳವಡಿಸಿರುವುದ ಇದೇ ಪ್ರಥಮ ಎಂಬ ಹೆಗ್ಗಳಿಕೆಯೂ ಇದೆ. ಟೈಪ್ ಮಾಡಿದ ವಿಷಯದ ಮುದ್ರಣವೂ ಇಲ್ಲಿ ಸುಲಭ.
ಖ್ಯಾತ ಕಲಾವಿದ ಹಾಗೂ ಪೂರ್ಣಚಂದ್ರ ಬೋಧಿ ಟ್ರಸ್ಟ್ನ ಅಧ್ಯಕ್ಷ ಕೆ.ಟಿ. ಶಿವಪ್ರಸಾದ್ ಹಾಗೂ ಟ್ರಸ್ಟಿಗಳು, ವಿಸ್ಮಯ ಪ್ರತಿಷ್ಟಾನ, ಹಾಸನದ ವಾಣಿಜ್ಯೋದ್ಯಮಿ ಎಸ್.ಡಿ. ರಮೇಶ, ಕೇಂದ್ರದ ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್, ದಿಗ್ಗಜರುಗಳಾದ ಡಾ. ಚಂದ್ರಶೇಖರ ಕಂಬಾರ, ಡಾ. ಚಿದಾನಂದ ಗೌಡ, ಪುಸ್ತಕ ಪ್ರಕಾಶನದ ಶ್ರೀರಾಮ್, ಮತ್ತು ಮೂಡಿಗೆರೆ ರಾಘವೇಂದ್ರ, ಸಾಫ್ಟ್ವೇರ್ ಇಂಜಿನಿಯರುಗಳಾದ ಜ್ಞಾನೇಶ್, ಎಂ. ಖನೋಲ್ಕರ್, ಶ್ರೀಕುಮಾರ್, ಈಶ್ವರ್ಭಟ್ ಮತ್ತು ಮೈಸೂರು ಸರ್ಕಾರಿ ಮುದ್ರಣಾಲಯ ಆಡಳಿತ ಹಾಗೂ ಸಿಬ್ಬಂದಿ ವರ್ಗ ಮತ್ತಿತರರು ಈ ತಂತ್ರಾಂಶ ಹೊರಬರಲು ನಾನಾ ರೀತಿಯ ಸಲಹೆ-ಸಹಕಾರ ನೀಡಿದ್ದಾರೆ ಎಂದು ಈ ಮೂವರು ಹುಡುಗರು ಸ್ಮರಿಸುತ್ತಾರೆ!
ಇವರು ರೂಪಿಸಿರುವ ಯೋಜನಾ ವರದಿಯಂತೆ ಸರ್ಕಾರ ಒಬ್ಬ ಅಂಧನಿಗೆ ೫ ರೂ. ತೊಡಗಿಸಿದರೂ ಸಾಕು, ಮೇಲ್ಕಂಡ ಸವಲತ್ತನ್ನು ಅಂಧರು ಪಡೆಯಬಹುದು. ಈಗಲಾದರೂ ಸರ್ಕಾರ ಕಣ್ಣು ತೆರೆದೀತೆ!?

ಬ್ರೈಲ್ ಹಿನ್ನೆಲೆ: ಸ್ವಯಂ ಅಂಧನಾಗಿದ್ದ ಲೂಯಿಸ್ ಬ್ರೈಲಿ ಮಹಾಶಯನು ಅಂಧರಿಗಾಗಿ ೧೮೨೯ ರಲ್ಲಿ ಫ್ರೆಂಚ್ ಭಾಷೆಯಲ್ಲಿ ರೂಪಿಸಿದ ೨ ಕಾಲಂಗಳಲ್ಲಿ ಹರಡಿದ ೩ ಸಾಲುಗಳ ಚುಕ್ಕಿಗಳ ಸಂಕೇತಗಳೇ ನಂತರ ೧೮೬೨ ರಲ್ಲಿ ಆಂಗ್ಲ ಭಾಷೆಯಲ್ಲಿ ಬ್ರೈಲ್ ಲಿಪಿಯಾಗಿ ಮಾರ್ಪಟ್ಟಿತು. ೧೯೫೧ ಫೆಬ್ರವರಿ ೧೭ ರಂದು (ಇಂದಿಗೆ ಸರಿಯಾಗಿ ೫೬ ವರ್ಷಗಳ ಹಿಂದೆ) ಭಾರತೀಯ ೧೪ ಪ್ರಾಂತೀಯ ಭಾಷೆಗಳ ಏಕ ರೂಪದ ಬ್ರೈಲ್ ಲಿಪಿಯನ್ನು ಅಂದಿನ ಕೇಂದ್ರ ಸರ್ಕಾರ ಲೋಕಾರ್ಪಣೆ ಮಾಡಿತು. ಆ ವರ್ಷದ ಜೂನ್ನಿಂದ ಭಾರತೀಯ ಅಂಧರು ಬ್ರೈಲ್ ಲಿಪಿ ಬಳಕೆ ಮಾಡುತ್ತಾ ಬರುತ್ತಿದ್ದಾರೆ. ಕೈಗಳ ನೆರವಿನಿಂದ (ಕನ್ನಡದಲ್ಲೂ) ಈ ಉಬ್ಬಿದ ಚುಕ್ಕಿಗಳ ಲಿಪಿಯ ಪ್ರತಿ ಸಾಲನ್ನು ಪ್ರತಿ ನಿಮಿಷಕ್ಕೆ ಕನಿಷ್ಟ ೧೨೫ ಹಾಗೂ ಗರಿಷ್ಟ ೨೦೦ ಪದಗಳವರೆಗೆ ಓದಬಹುದು.
ವಿಪರೀತ ಅಸ್ತವ್ಯಸ್ತ ಪರಿಸ್ಥಿತಿ ಎದುರಿಸುತ್ತಿರುವ ಕನ್ನಡ ತಂತ್ರಾಂಶ ಕ್ಷೇತ್ರದಲ್ಲಿ ಈವರೆವಿಗೂ ಏಕ ವಿನ್ಯಾಸದ ಕೀಲಿ ಮಣೆ ರೂಪಿತವಾಗಿಯೇ ಇಲ್ಲ. ಒಂದು ತಂತ್ರಾಂಶ ಮತ್ತೊಂದಕ್ಕೆ ಹೊಂದಿಕೆಯಾಗುವುದೇ ಇಲ್ಲ; ಇಂತಹ ಅವ್ಯವಸ್ಥೆಗಳನ್ನೆಲ್ಲ ನಿಯಂತ್ರಿಸಿ ನಿರ್ದೇಶಿಸಲು, ತಂತ್ರಾಂಶಗಳ ಅತಿ ದೊಡ್ಡ ಗ್ರಾಹಕನಾಗಿರುವ ಸರ್ಕಾರದಿಂದ ಅಥವಾ ವಿ.ವಿ.ಗಳಿಂದ ಮಾತ್ರ ಸಾಧ್ಯ. ಆದರೆ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಿಂದ ಪ್ರಾದೇಶಿಕ ಭಾಷೆಗೆ ಒದಗುವ ಅಪಾಯದ ಅಂದಾಜು ಇವುಗಳಿಗೆ ಇದ್ದಂತಿಲ್ಲ! ಈಗ ಪ್ರತಿಯೊಂದು ಕ್ಷೇತ್ರದಲ್ಲೂ ದೈನಂದಿನ ವಾಣಿಜ್ಯ ಮತ್ತು ಆಡಳಿತ ವ್ಯವಹಾರವೆಲ್ಲ ಈ ವಿದ್ಯುನ್ಮಾನ ತಂತ್ರಜ್ಞಾನದ ಮೂಲಕವೇ ನಡೆಯುತ್ತಿರುವುದರಿಂದ, ಇಲ್ಲೆಲ್ಲ ಸಮರ್ಥವಾಗಿ ಕನ್ನಡದ ಬಳಕೆ ಆಗದಿದ್ದರೆ ಅದು ಸತ್ತು ಹೋಗುತ್ತದೆ. ಯಾವುದೇ ಭಾಷೆಯ ಬಳಕೆ ಕಡಿಮೆಯಾಗುತ್ತಾ ಸಾಗಿದರೆ ಅದು ಮುಂದೊಂದು ದಿನ ನಾಶವಾಗುತ್ತದೆ ಎಂಬ ಅಪಾಯಕಾರಿ ಸತ್ಯದ ಅರಿವು ಸರ್ಕಾರಕ್ಕೆ ಇಲ್ಲವೋ ಅಥವಾ ಇದ್ದೂ ಸಹ ಇಲ್ಲದಂತೆ ನಟಿಸುತ್ತಿದೆಯೋ ಗೊತ್ತಿಲ್ಲ! ಕನ್ನಡದ ಸದ್ಯದ ಸೀಮಿತ ಮಾರುಕಟ್ಟೆ ಹಾಗೂ ಕೈಗೊಳ್ಳುತ್ತಿರುವ ಕೆಲವು ತಪ್ಪು ನೀತಿಗಳಿಂದಾಗಿ ಕನ್ನಡಕ್ಕಾಗಿ ಕೆಲಸ ಮಾಡುತ್ತಿದ್ದ ಸುಮಾರು ೨೩ ಖಾಸಗಿ ಕಂಪನಿಗಳಲ್ಲಿ ಈಗ ಕೇವಲ ಒಂದೆರಡು ಮಾತ್ರ ಉಳಿದುಕೊಂಡಿವೆ; ಅವೂ ಸಹ ಈಗ ಬಂಡವಾಳ ಹಾಗೂ ಪ್ರೋತ್ಸಾಹದ ಕೊರತೆಯಿಂದ ಬೇರೆ ಕ್ಷೇತ್ರಗಳಿಗೆ ವಲಸೆ ಹೋಗಲು ಚಿಂತಿಸುತ್ತಿವೆ! ಪ್ರಾದೇಶಿಕ ಭಾಷಾ ತಂತ್ರಾಂಶ ಅಭಿವೃದ್ಧಿ ಕೇವಲ ಸಾಫ್ಟ್ವೇರ್ ಇಂಜಿನಿಯರುಗಳ ಕೆಲಸ ಮಾತ್ರವಲ್ಲ. ಅದಕ್ಕೆ ಭಾಷಾ ತಜ್ಞರು, ವ್ಯಾಕರಣ ಶಾಸ್ತ್ರಜ್ಞರು, ಸಾಹಿತ್ಯ ಪರಿಣಿತರು, ಉಚ್ಛಾರಣಾ ತಜ್ಞರು ಮುಂತಾದವರೆಲ್ಲ ಒಟ್ಟಾಗಿ ಸೇರಿ ಮಾಡಬೇಕಾದ ಕೆಲಸವಿದು. ಇದರ ಸಂಕೀರ್ಣತೆಯನ್ನು ಸಂಬಂಧಪಟ್ಟವರೆಲ್ಲ ಅರಿಯಬೇಕು. ಇಲ್ಲವಾದರೆ ಐ.ಟಿ. ಕ್ಷೇತ್ರದಲ್ಲಿ ಕನ್ನಡ ಮೂಲೆ ಗುಂಪಾಗುವುದು ಖಚಿತ.

No comments:

ಜನಪ್ರಿಯ ಲೇಖನಗಳು