8.06.2008

ಓದೇಕರ್ ಫಾರಂನ ಅಂಗಳದಲ್ಲಿ ಕನಸುಗಳನ್ನು ಹರವಿಕೊಂಡು...

ಬರಹ:ಕಿರಣ್ ಎಂ
ನಿರ್ವಾಹಕರು
ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಬೆಂಗಳೂರು

ಈ ಶಿಬಿರದ ಮಾಸ್ಟರ್ ಪ್ಲಾನ್ ಎರಡು ತಿಂಗಳು ಹಳೆಯದ್ದು. ಬೆಂಗಳೂರಿನ ಧಾವಂತದಲ್ಲಿ ನಮ್ಮನ್ನೆಲ್ಲಾ ಹಿಡಿದಿಟ್ಟುಕೊಳ್ಳುವುದು ಕಷ್ಟ. ಎಲ್ಲಾದರೂ ದೂರದ ಕಾಡಿನೊಳಗೆ ಕೂಡಿ ಹಾಕಿದರೆ ನಮಗೆಲ್ಲಾ ಸ್ವಲ್ಪ ಸಿರಿಯಸ್ ನೆಸ್ ಬರಬಹುದು ಎಂಬುದು ಶೇಖರಪೂರ್ಣ ಅವರ ಯೋಚನೆ.

ಅವರ ಅಲೋಚನೆ ಯಾರೂ ಬೆಂಬಲಿಸಲಿ ಬಿಡಲಿ ಕಾರ್ಯರೂಪಕ್ಕೆ ಬರಲೇಬೇಕಲ್ಲ. ಅಂತೂ ಶುಕ್ರವಾರ ಮತ್ತು ಶನಿವಾರ ರಾತ್ರಿ ತುಮಕೂರಿನ ಬಳಿಯ ನಂದಿಹಳ್ಳಿಯ ಎಸ್ಟೇಟ್ ಒಂದರಲ್ಲಿ ಕಳೆಯುವುದು ಎಂದಾಯ್ತು. ಶೇಖರ್ ದಂಪತಿಗಳು ತಮ್ಮ ಕಾರಿನಲ್ಲಿ ಒಂದು ಗಂಟೆಗೇ ಹೊರಟಿದ್ದಾಯ್ತು. ಅವರ ಹಿಂದೆ ನಾನು, ಅರೇಹಳ್ಳಿ, ಜಯಕುಮಾರ್ ಮತ್ತು ಅವರ ಸ್ನೇಹಿತ ಮನೋಜ್ ಹೊರಟೆವು. ಜಯಕುಮಾರ್, ರಾಜ್ಯ ಸರ್ಕಾರಿ ನೌಕರರಾಗಿಯೂ ನಿರುಪದ್ರವಿ ಜೀವಿ. ಮನೋಜ್ ಕೂಡ ಅದೇ ಕೆಟಗರಿ ಅಂತ ಆಮೇಲೆ ತಿಳಿದದ್ದು. ಅರೇಹಳ್ಳಿ ಮಾತ್ರ ಮಾತನಾಡಲು ಕುಳಿತರೆ ಏನಾದರೂ ರುಚಿ ರುಚಿ ಯಾದದ್ದು ಸಿಗುತ್ತೆ. ಮೆಜೆಸ್ಟಿಕ್ ಮುಟ್ಟಿದ್ದೆ ಬಸ್ ರೆಡಿಯಾಗಿತ್ತು. ಕೊನೆಯ ಸೀಟ್ ಎಂಬ ಬೇಸರದ ನಡುವೆಯೂ ಹೆಚ್ಚಿನ ಪ್ರಯಾಣವಿಲ್ಲವಲ್ಲ ಎಂದು ಸಮಾಧಾನ ಪಟ್ಟುಕೊಂಡದ್ದಾಯ್ತು. ಆದರೆ ಈ ಸಮಾಧಾನ ಹೆಚ್ಚು ಹೊತ್ತು ಇರಲಿಲ್ಲ. ಮಾತು ಮಾತಿಗೂ ರವಿ ತುಮಕೂರಿನಿಂದ ಇನ್ನೂ ಒಂದು ಒಂದು ಗಂಟೆ ಪ್ರಯಾಣ ಎಂದು ಹೇಳಿದ್ದನ್ನೇ ಹೇಳಿ ಸಿಟ್ಟು ಬರಿಸಿದ್ದರು.
ಶಿವಮೊಗ್ಗೆಯಿಂದ ಅವಿ ತುಮಕೂರಿಗೆ ಬರುವವನಿದ್ದ. ಅವನನ್ನು ನಮ್ಮೊಡನೆ ಸೇರಿಸಿಕೊಂಡು ಒಟ್ಟಿಗೆ ತೋವಿನಕೆರೆಗೆ ಹೋಗುವುದೆಂದಾಯ್ತು. ತುಮಕೂರಿಗೆ ಮುಟ್ಟಿದಾಗ ಸಾಯಂಕಾಲ ೬. ಅಲ್ಲಿಂದ ತೋವಿನಕೆರೆ ೨೭ ಕಿ.ಮಿ ಒಂದು ಗಂಟೆ ಪ್ರಯಾಣ.
ತುಮಕೂರಿನಲ್ಲಿ ಮಸಾಲಾಪುರಿ ಕೊಡಿಸಿ ಎಂದರೂ ಅರೇಹಳ್ಳಿ ಕಿವಿಗೆ ಹಾಕಿಕೊಳ್ಳದೆ , ಹಸಿವಿನಲ್ಲಿದ್ದ ಅವಿಗೆ ದೋಸೆ ಕೊಡಿಸಿ ಬಸ್ಸು ಹತ್ತಿದ್ದಾಯ್ತು. ಸುತ್ತೆಲ್ಲಾ ತುಂಬಿದ ಕಪ್ಪು ಕತ್ತಲೆಯಲ್ಲಿ ಅಲ್ಲಾಡುವ ಬಸ್ಸಿನಲ್ಲಿ ತೋವಿನಕೆರೆ ತಲುಪಿದಾಗ ರಾತ್ರಿ ೮. ಅಲ್ಲಿಂದ ಆಟೋದವನು ನಂದಿಹಳ್ಳಿಗೆ ಎಂಟು ಕಿಲೋ ಮೀಟರ್ ಎಂದಾಗ ಸುಸ್ತೋ ಸುಸ್ತು. ಈ ಮಧ್ಯೆ ಅರೇಹಳ್ಳಿ ತಮಗೆ ಬರುತ್ತಿದ್ದ ಕಾಲ್ ಗಳಿಗೆಲ್ಲಾ ಉತ್ತರಿಸುವಲ್ಲಿ ಬ್ಯುಸಿಯಾಗಿದ್ದರು. ಬಹುಪಾಲು ಕರೆಗಳೆಲ್ಲ ನಾಳೆ ಬರುವವರದ್ದೇ. ಕೆ.ಎಸ್.ಸಿ ಯ ನಿರ್ವಾಹಕನಾಗಿ ನಾನಿದ್ದರೂ ನಿಜವಾದ ಅರ್ಥದಲ್ಲಿ ಆ ಕೆಲಸ ಮಾಡುತ್ತಿದ್ದುದು ರವಿಯೇ. ಅದಕ್ಕೆ ಅವರ ಮಾತಿನ ಶೈಲಿಯೂ ಕಾರಣ. ಒಬ್ಬ ವ್ಯಾಪಾರಿಗಿರಬೇಕಾದ ಎಚ್ಚರ, ರಾಜಕಾರಣಿಗಿರಬೇಕಾದ ಚಾತುರ್ಯ, ಜೊತೆಗೆ ನೂರಾರು ವಿಷಯಗಳ ಮೇಲಿನ ಆಸಕ್ತಿ ಎಲ್ಲವನ್ನೂ ಸೇರಿಸಿ ಅವರೊಬ್ಬ ಅಚ್ಚರಿಯ ಸಂಘಟನಕಾರರಾಗಿಬಿಟ್ಟಿದ್ದಾರೆ. ಫೋನಿನಲ್ಲಿ ಒಂದು ನಿಮಿಷವೂ ಸರಿಯಾಗಿ ಮಾತನಾಡದ ನಾನು ಇವರು ಕಾಲ್ ಮಾಡಿದಾಗ ಮಾತ್ರ ಹತ್ತು ನಿಮಿಷದ ಕಡಿಮೆ ಮಾತಿಲ್ಲ. ಕೆ.ಎಸ್.ಸಿ ಬೆಂಬಲಿಗರ ಬಳಗ ಕಳೆದರಡು ವರ್ಷಗಳಿಂದ ನಡೆಸಿರುವ ಎಲ್ಲಾ ಕಾರ್ಯಕ್ರಮಗಳ ನಿಜವಾದ ಹೊಣೆಗಾರಿಕೆ ಸಂಘಟನೆ ಅರೇಹಳ್ಳಿ ರವಿಯವರದ್ದೇ!
ಅದು ಓದೇಕರ್ ತೋಟ. ಸಾವಯವ ಕೃಷಿಯಿಂದ ಅದಾಗಲೇ ಸುತ್ತಲೂ ಪರಿಚಿತರಾಗಿದ್ದ ಶ್ರೀನೀಲಕಂಠಮೂರ್ತಿ-ಅನಿತಾ ದಂಪತಿಗಳು ಅದರ ಮಾಲೀಕರು.ಅದಾಗಲೇ ಒಮ್ಮೆ ಕಾಲ್ ಮಾಡಿದ್ದಾಗ ಶೇಖರ್ ಸರ್ " ಈ ಜಾಗ ಅದ್ಭುತವಾಗಿದೆ" ಎಂದಿದ್ದರು. ಮಲೆನಾಡಿನ ಹುಡುಗರಾದ ನನಗೂ ಅವಿಗೂ ಅದೇನೂ ಅದ್ಭುತವಾಗಿ ಕಾಣದಿದ್ದರೂ ಮನಸ್ಸಿಗೆ ಹಿಡಿಸಿದ್ದಂತೂ ಸುಳ್ಳಲ್ಲ. ಅಷ್ಟಕ್ಕೂ ಇತ್ತೀಚೆಗೆ ಶೇಖರ್ ಸರ್ ರವರ ಪದ ಸಂಗ್ರಹ ಕಡಿಮೆಯಾದಂತಿದೆ. ಅದ್ಭುತ! ದರಿದ್ರ! ಎನ್ನುವ ಎರಡು ಪದಗಳು ಮಾತ್ರ ಅವರ ಮಾತಿನ ಬಾಣದಲ್ಲಿ ಹೆಚ್ಚು ಸಿಗುವಂತದ್ದು.

ಇರಲಿ. ಅದ್ಭುತವಲ್ಲದ ಈ ಸುಂದರ ತೋಟದಲ್ಲಿ ನನಗೆ ನಿಜವಾಗಿಯೂ ಅದ್ಭುತವೆನಿಸಿದ್ದು ಅವರ ಮನೆಯಲ್ಲೇ ತಯಾರಿಸಿದ ಸಾಬೂನು. ನೈಸರ್ಗಿಕವಾಗಿ ತಯಾರಾದ ಆ ಸಾಬೂನಿನಲ್ಲಿ ಕೈ ಕಾಲು ತೊಳೆದದ್ದು ವಿಭಿನ್ನ ಅನುಭವ ನೀಡಿತ್ತು.

ರಾತ್ರಿ ಅಲ್ಲಿ ಉಳಿದದ್ದು ನಾವು ಐವರು ಹಾಗೂ ಶೇಖರ್ ಸರ್, ಸೀತಕ್ಕ, ಅನ್ನಪೂರ್ಣಕ್ಕ ಹಾಗು ನಂದಿನಿ. ಆ ರಾತ್ರಿ ಊಟ ಮಾಡಿ ಹಾಗೆಯೇ ಮಾತಿಗೆ ಕುಳಿತೆವು.

ದಶಾವತಾರಂ ತೇಜೋವಧೆಯನ್ನು ಶೇಖರ್ ಸರ್ ಇಲ್ಲಿ ಕೂಡ ಮುಂದುವರೆಸಿದರು. ಅದು ಬಿಡುಗಡೆಯಾದಾಗಿನಿಂದ ಅದನ್ನು ತೆಗಳುತ್ತಿದ್ದ ಅವರು ಇಲ್ಲಿಯೂ ಅದನ್ನು ಮುಂದುವರೆಸಿದ್ದರು. ಯಾವುದೇ ವಿಷಯವನ್ನು ಪರಿಣಾಮಕಾರಿಯಾಗಿ ಇನ್ನೊಬ್ಬರ ಮನಸಿನಲ್ಲಿ ಮೂಡಿಸುವುದನ್ನು ಶೇಖರ್ ಅವರಿಂದ ಕಲಿಯಬೇಕು. ಅವರು ತಮ್ಮ ಅನಿಸಿಕೆಯನ್ನು ತಮಗೆ ಸಿಕ್ಕ ಸಮಯ ಸಂದರ್ಭಗಳಲ್ಲೆಲ್ಲಾ ಪ್ರಸ್ತಾಪಿಸುತ್ತಲೇ ಅದನ್ನು ಗಟ್ಟಿಗೊಳಿಸುತ್ತಾ ಹೋಗುತ್ತಾರೆ.

ಕನ್ನಡಸಾಹಿತ್ಯ.ಕಾಂ ಕೆಲಸಕ್ಕೆ ನಾವೆಲ್ಲ ಎಷ್ಟು ಸಮಯ ಮೀಸಲಿಡಬಹುದೆಂಬುದರ ಬಗ್ಗೆಯೂ ಸಣ್ಣ ಚರ್ಚೆ ನಡಿಯಿತು. ಅದನ್ನು ಬಿಟ್ಟರೆ ರಾತ್ರಿ ಹನ್ನೆರಡೂ ವರೆವರೆಗೆ ಹೊರಬಿದ್ದ ಮಾತುಗಳಿಷ್ಟು:

ಈ ಮಧ್ಯೆ ಅವಿನಾಶನಿಗೆ ಸಿಗರೇಟು ಸೇದಲು ಅರೇಹಳ್ಳಿ ಅಷ್ಟೊಂದು ನೆರವು ನೀಡಿದ್ದೇಕೆಂದು ನನಗೆ ಅರ್ಥವಾಗಿಲ್ಲ. ತಾನು ಇದ್ದಲ್ಲೆಲ್ಲಾ ಬರೀ ಪ್ರತಿಮೆಗಳನ್ನೇ ಹುಡುಕುವ ಅವಿಗೆ ಆ ರಾತ್ರಿಯಲ್ಲೂ ಏನಾದರೂ ಸಿಕ್ಕವೇ? ನಾನು ಕೇಳಲಿಲ್ಲ.

^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^

"ಗಂಟೆ ಎಂಟಾಯ್ತು. ಇನ್ನೂ ಎಷ್ಟು ಹೊತ್ತು ಮಲಗ್ತೀರಾ" ಜವಾಬ್ದಾರಿ ಯಜಮಾನನಂತೆ ಅರೇಹಳ್ಳಿ ಕೂಗುತ್ತಿದ್ದಂತೆ ವಿಧೇಯ ಮಕ್ಕಳಂತೆ ನಾವೆಲ್ಲಾ ಎದ್ದು ಕುಳಿತಿದ್ದೆವು. ನಾವೆಲ್ಲಾ ಕಾಫಿ ಕುಡಿದು ಸ್ನಾನಕ್ಕೆ ಅಣಿಯಾಗುತ್ತಿದ್ದಂತೆ ಒಬ್ಬೊಬ್ಬರಾಗಿ ಬರುತ್ತಿದ್ದರು. ನಾನೂ ಮತ್ತು ಅವಿ ಡಾಕ್ಯೂ ಮೆಂಟರಿಗಾಗಿ ಶೇಖರ್ ಸಂದರ್ಶನ ಹೇಗೆ ಮಾಡುವುದೆಂಬ ಆಲೋಚನೆಯಲ್ಲಿದ್ದರೇ, ರವಿ ಮಾತ್ರ ತಟ್ಟೆ ಇಡ್ಲಿ ಮತ್ತು ಚಟ್ನಿಯನ್ನು ಹೇಗೆ ಇನ್ನೂ ಚೆನ್ನಾಗಿ ಮಾಡುವುದೆಂದು ಅಡಿಗೆಯವರಿಗೆ ಹೇಳುತ್ತಿದ್ದಂತಿತ್ತು. ಶಿಬಿರದ ಪೂರ್ತಿ ಅಡಿಗೆಯವರಿಗೆ ಒಂದಿಲ್ಲೊಂದು ಪುಕ್ಕಟೆ ಸಲಹೆ ನೀಡಲು ಅವರು ಮರೆತಿರಲಿಲ್ಲ.

ಬಂದವರು ಈ ರಮ್ಯ ಎಸ್ಟೇಟಿನಲ್ಲಿ ಮುಳುಗಿ ಹೋಗಿದ್ದರು. ಕ್ಯಾಮೇರಾವೊಂದನ್ನು ಹೆಗಲಿಗೆ ಸಿಕ್ಕಿಸಿ ಎಸ್ಟೇಟಿನ ತುಂಬೆಲ್ಲಾ ಓಡಾಡುತ್ತಿದ್ದ ರುದ್ರ ಮೂರ್ತಿಯವರಿಗೆ ಮೈ ಮೇಲೆ ತೇಜಸ್ವಿ ಬಂದ ಹಾಗಿತ್ತು. ಅರೇಹಳ್ಳಿ ಎಸ್ಟೇಟಿನ ಮಾಲೀಕರ ಜೊತೆ ಸುತ್ತಾಡುತ್ತಾ ಸಸ್ಯಶಾಸ್ತ್ರ ಪ್ರಾವೀಣ್ಯತೆ ಪಡೆದುಕೊಳ್ಳುತ್ತಿದ್ದರೆ, ಶೇಖರ್ ಸರ್ ಈ ಮಂಗಗಳನ್ನೆಲ್ಲಾ ಹೇಗೆ ಕಟ್ಟಿ ಹಾಕುವುದು ಎಂಬ ಆಲೋಚನೆಯಲ್ಲಿದ್ದಂತಿತ್ತು.

ಈ ಮಧ್ಯೆ ರಾಘವ ಕೋಟೆಕರ್ ಹೊಸ ಸಿ.ಎಮ್.ಎಸ್ ಕಾರ್ಯ ನಿರ್ವಹಣೆಯ ಬಗ್ಗೆ ವಿವರಿಸಿದ್ದಾಯ್ತು. ನಾನು ಮತ್ತು ಅವಿ ಶೇಖರ್ ಸರ್ ಸಂದರ್ಶನವನ್ನು ದಾಖಲಿಸಿಕೊಂಡದ್ದಾಯ್ತು. ಊಟ ಮುಗಿಸಿ ಸಭೆ ನಡೆಸುವುದು ಎಂದಾಯ್ತು.
ಶೇಖರ್ ಸರ್ ಶಿಬಿರದ ಮುಖ್ಯ ಭಾಗವಾದ ಚರ್ಚೆಯನ್ನು ಪ್ರಾರಂಭಿಸಿದ್ದೇ ನಮಗೆಲ್ಲಾ ನಿದ್ದೆಯ ಮಂಪರು ಜೋರಾಗಿತ್ತು. ಆದರೂ ಛಲ ಬಿಡದ ತಿವಿಕ್ರಮನಂತೆ ಕೆ.ಎಸ್.ಸಿ ಯ ಮೂಲ ಧ್ಯೆಯೋದ್ದೇಶ, ಸಂವಾದ ಡಾಟ್ ಕಾಮ್ ನ ಅಗತ್ಯತೆ ಇವೆಲ್ಲದರ ಬಗ್ಗೆ ಸವಿವರವಾಗಿ ಹೇಳತೊಡಗಿದ್ದರು. ಕೆ.ಎಸ್.ಸಿ ಸಾಹಿತ್ಯವನ್ನು ಪಕ್ಕಕ್ಕಿಟ್ಟು ಎಲ್ಲಿ ಸಿನೆಮಾ ಸಂಘಟನೆಯಾಗಿ ಬಿಡುತ್ತದೆಯೋ ಎಂಭ ಭಯ ಲಾವಣ್ಯ ಅವರದ್ದು. ಅದಕ್ಕೆ ತಂಗಿ ಸೌಮ್ಯಳ ಸಪೋರ್ಟ್ ಬೇರೆ ದಕ್ಕಿತ್ತು. ಚರ್ಚೆ ಒಂದು ಹಂತಕ್ಕೆ ತಲುಪುತ್ತಿದೆ ಅಂದಾಕ್ಷಣ ಅದಕ್ಕೆ ಒಂದಿಲ್ಲೊಂದು ವಿಘ್ನ ಬಂದೊದಗುತ್ತಿತ್ತು. ಮೊದಲಿಗೆ ಕಷಾಯ, ನಂತರ ಎಲ್ಲರ ಪರಿಚಯ ಆಗಬೇಕೆಂದು ಯಾರೋ ಹೇಳಿದರು, ತದ ನಂತರ ಸ್ವದೇಶಿ ಉತ್ಪನ್ನದ ಬಳಕೆಯ ಅಗತ್ಯದ ಕುರಿತು ಸಿ ಸಿ ಪಾವಟೆ ಎಂಬ ಸ್ಥಳೀಯ ಸಂಪನ್ಮೂಲ ವ್ಯಕ್ತಿ ಭಾಷಣ ಮಾಡಿದರು. ಎತ್ತಲೋ ಹೊರಟಂತಿದ್ದ ಚರ್ಚೆಯನ್ನು ಶೇಖರ್ ಸರ್ ಮತ್ತೆ ಸರಿ ದಾರಿಗೆ ತಂದರು. ನೋಡ ನೋಡುತ್ತಿದ್ದಂತೆ ಟ್ರಸ್ಟ್ ಹುಟ್ಟು ಹಾಕಿಯೇ ಬಿಟ್ಟರು. ಆ ಟ್ರಸ್ಟಿಗೊಂದು ಹೆಸರು ಸೂಚಿಸಬೇಕೆಂದಾಗ ರಾಘವ ಅನಿವಾರ್ಯ ಎಂದ, ನಾನು ಶೂನ್ಯ ಎಂದಿಡೋಣ ಎಂದು ಬೈಸಿಕೊಂಡದ್ದಾಯ್ತು. ಅಷ್ಟರಲ್ಲಿ ಲೊಕೆಶನ್ ಶಿಫ್ಟ್ ಆದದ್ದಾಯ್ತು.

ನಂತರ ಕಮಿಟಿಗಳು, ಟ್ರಸ್ಟ್‌ನ ಪದಾಧಿಕಾರಿಗಳು ಇವೆಲ್ಲದರ ಆಯ್ಕೆ. ಎಲ್ಲರೂ ಜನರಲ್ ಸೆಕ್ರೆಟರಿ ಪದವಿಗೆ ಅರೇಹಳ್ಳಿ ರವಿಯೇ ಸೂಕ್ತ ಎಂದರೂ ಅವರು ಒಪ್ಪಲು ಹಿಂದೆ ಮುಂದೆ ನೋಡಿ ಸಾಕಷ್ಟು ಸ್ಕೋಪ್ ತೆಗೆದುಕೊಂಡಿದ್ದಾಯ್ತು. ನನ್ನನ್ನು ಖಜಾಂಚಿ ಮಾಡಿ ಆಫೀಸಿನ ಬೋರು ಕೆಲಸವನ್ನೇ ಇಲ್ಲಿ ಮಾಡಲು ಪಿತೂರಿ ನಡೆಸಿದ್ದು ಯಾರೋ ಅನ್ನುವುದು ತಿಳಿಯಲಿಲ್ಲ. ಈ ಹೊತ್ತಿನಲ್ಲಿ ದೊಡ್ಡ ಗೊಂದಲ ಹುಟ್ಟಿಕೊಂಡಿದ್ದು ಹೆಸರಿನ ಕುರಿತು. ಇದ್ದದ್ದು ಹತ್ತು ಜನ. ಹೆಸರುಗಳು ಮಾತ್ರ ಹಲವು. ಕನ್ನಡಸಾಹಿತ್ಯಡಾಟ್ ಕಾಂ, ಕನ್ನಡಸಾಹಿತ್ಯಡಾಟ್‌ಕಾಂ ಬೆಂಬಲಿಗರ ಬಳಗ, ಸಂವಾದ ಟ್ರಸ್ಟ್, ಸಂವಾದ ಟ್ರಸ್ಟ್ ಡಾಟ್ ಕಾಂ ಬೆಂಬಲಿಗರ ಬಳಗ ಹೀಗೆಲ್ಲಾ ಯಾವ ಹೆಸರಿನ ಅಡಿಯಲ್ಲಿ ಕೆಲಸ ಮಾಡುವುದು ಎಂಬುದೇ ಗೊಂದಲದ ವಿಷಯವಾಗಿತ್ತು. ಟ್ರಸ್ಟ್‌ನ ರೂಪು ರೇಷೆಗಳೆಲ್ಲ ಸಿದ್ಧವಾಗುವ ಹೊತ್ತಿಗೆ ಟ್ರಸ್ಟ್‌ ನ ಏಕೈಕ ಆಜೀವ ಸದಸ್ಯ ’ಆನೆ ಬಲ’ ಅಜಿತ್ ರವರು ಅರ್ಧ ನಿದ್ದೆ ತೆಗೆದು ಎದ್ದು ಕುಳಿತಿದ್ದರು. ಚೀನಿಯಂತೂ ಮನೆಯಲ್ಲಿ ಒಬ್ಬನಿಗೆ ನಿದ್ದೆ ಬರುವುದಿಲ್ಲವೆಂದು ಈ ಗಲಾಟೆಯ ನಡುವೆ ನಿದ್ದೆ ಮಾಡಲು ಬಂದ ಹಾಗಿತ್ತು.
ರಾತ್ರಿ ಊಟದ ನಂತರ ನಡೆದದ್ದು ಫೈರ್ ಕ್ಯಾಂಪ್. ನಾನು ಫೈರ್ ಕ್ಯಾಂಪ್ ಅಂದರೆ ಎಲ್ಲೋ ಬಯಲಲ್ಲಿ ಬೆಂಕಿ ಹಚ್ಚುತ್ತಾರೆ ಅಂದುಕೊಂಡಿದ್ದೆ. ಆದರೆ ಇದು
ನಡೆದದ್ದು ಕೋಣೆಯೊಳಗೆ. ನಮ್ಮ ಶೇಖರ್ ಸರ್ ಮತ್ತು ಆನೆ ಬಲದ ಅಜಿತನ ನಡುವೆ. ವಿಷಯ ಇಷ್ಟೆ. ಕಾಸರವಳ್ಳಿ ಸಿನೆಮಾ ಕುರಿತ ವಿಚಾರ ಸಂಕಿರಣವೊಂದನ್ನು ಶೇಖರ್ ಸರ್ ಎರಡು ದಿನ ಮಾಡೋಣವೆಂದರೆ ಅಜಿತ ಒಂದೇ ದಿನಕ್ಕೆ ಸಾಕು ಎಂದಿದ್ದ. ಈ ಮಹತ್ವದ ವಿಷಯವನ್ನು ಇಬ್ಬರೂ ರಾತ್ರೆ ಒಂದರ ವರೆಗೆ ಎಳೆದಾಡಿದರು. ಈ ಮಧ್ಯೆ ಶ್ರೀ ಕ್ರಿಶ್ಣ ಸಂಧಾನ ನಾಟಕ ನೋಡಬೇಕೆಂಬ ನನ್ನ ರಾಘವನ ಪ್ಲಾನ್ ಫೇಲ್ ಆಯಿತು. ಅಜಿತ ಮತ್ತು ಶೇಖರ್ ಸರ್ ನಡುವೆ ಸಂಧಾನ ಉಂಟು ಮಾಡುವುದೇ ಮಹತ್ವದ ಕೆಲಸವಾಯಿತು. ಕೆಲವರು ನಿದ್ದೆಗೆ ಜಾರಿದರೆ ಹಲವರು ಜಗಳವಾಡುತ್ತಲೆ ಬಿದ್ದುಕೊಂಡಿದ್ದರು. ಈ ಗಂಭೀರ ವಾಕ್ ಸಮರದ ನಡುವೆ ನಮ್ಮ ವಿವೇಕ್ ಮಾತ್ರ ಕೀಲಿ ಕೊಟ್ಟ ಅಲಾರಾಮಿನಂತೆ ಆಗಾಗ ಎದ್ದು ಮತ್ತೆ ಮಲಗುತ್ತಿದ್ದರು. ರಾತ್ರೆ ಎರಡರ ಹೊತ್ತಿಗೆ ಎಲ್ಲವೂ ಬಗೆ ಹರಿದ ಮೇಲೂ ವಿವೇಕ್ ಮತ್ತೆ ಎದ್ದು ನನ್ನದೊಂದು ಚಿಕ್ಕ ಪ್ರಶ್ನೆ ಎಂದಾಗ ಮಾತ್ರ ಹೊಟ್ಟೆ ಹುಣ್ಣಾಗಿತ್ತು.

ಎಂದಿನಂತೆ ಶೇಖರ್ ಸರ್ ಹೇಳಿದ ಹಾಗೆ ಎರಡು ದಿನಕ್ಕೆ ಕಾರ್ಯಕ್ರಮವನ್ನು ನಿಗದಿ ಗೊಳಿಸುವಂತಾಯಿತು (ಗಂಟಲು ಹರಿದುಕೊಳ್ಳುವ ಮೊದಲೆ ತಿಳಿದಿರಲಿಲ್ಲವೇ ಅಜಿತ್?).

ಎಲ್ಲರೂ ಮಲಗಿದಾಗ ಸದ್ಯ ಏನನ್ನೂ ಲಿಖಿತದಲ್ಲಿ ಬರೆಸಿಕೊಂಡಿಲ್ಲವಲ್ಲ ಎಂಬ ಸಮಾಧಾನ!

ಮಾರನೇ ದಿನ ಹೊರಡುವ ಗಡಿಬಿಡಿಯಲ್ಲಿ ಡಾಕ್ಯೂಮೆಂಟರಿಗೆ ಕೆಲವು ಸದಸ್ಯರನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಯಿತು. ಮೂರ್ತಿಯವರ ಮೇಲಿನ ತೇಜಸ್ವಿ ಭೂತ ದಿನವಿಡೀ ಇಳಿದಂತಿರಲಿಲ್ಲ.ರಾಘವ ಮತ್ತು ಪ್ರಮೋದ ಮಿಯಾವ್ ಬೆಕ್ಕಿನ ಸೌಂದರ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಉತ್ಸುಕರಾಗಿದ್ದರು. ಕೆರೆ ಕಡೆಯ ವಾಕಿಂಗ್, ಗ್ರೂಪ್ ಫೋಟೊ, ಸೀಬೆ ಕಾಯಿ ಕೊಯ್ದು ತಿಂದದ್ದು ಎಲ್ಲ ಮುಗಿಯುತ್ತಿದ್ದಂತೆ ಬೆಂಗಳೂರು ನಮ್ಮನ್ನು ನೆನೆಸಿಕೊಂಡಿತ್ತು.

ಹೊರಡುವಾಗ ತಿಳಿದದ್ದು: ನಮ್ಮ ಗಲಾಟೆ ಕಾರಣವಾಗಿಯೋ ಎಂಬಂತೆ ಓದೇಕರ್ ಎಸ್ಟೇಟಿನ ಹಸುವೊಂದು ಕರುಹಾಕಿತ್ತು.
----------------------------------------------------------------
ಇನ್ನೊಂದು ಬರಹ:ಶ್ರೀಮತಿ ಲಾವಣ್ಯ
ನಿರ್ವಾಹಕಿ
ಕೆ ಎಸ್ ಸಿ ಬಳಗ ಮೈಸೂರು

ತುಮಕೂರಿನಿಂದಾಚೆ ಇರುವ ಹಳ್ಳಿಯಲ್ಲಿ ಶಿಬಿರ ಎಂದು ಮೈಲ್ ಬಂದಾಗ ಅಷ್ಟು ದೂರಾನಾ? ಯಾಕೆ? ಹೋಗಲು ಸಾಧ್ಯವಿಲ್ಲ, ಇದು ನನಗಲ್ಲ ಅಂತ(ಇತ್ತೀಚಿಗೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದಿದ್ದಕ್ಕೋ ಏನೋ!) ಪೂರ್ತಿಯಾಗಿ ಕೂಡ ಓದದೆ ತಣ್ಣಗೆ ಕುಳಿತಿದ್ದೆ. ಶೇಖರ್ ಸರ್ ಫೋನ್ ಮಾಡಿ ಹೀಗೆ ಒಂದು ಮೀಟಿಂಗ್ ಇದೆ ಅಂದರು. ನನ್ನಿಂದ ಯಾವುದೇ ಪ್ರತಿಕ್ರಿಯೆ ಬಾರದ್ದು ನೋಡಿ ಏನನ್ನಿಸಿತೋ "ಎಲ್ಲ ಒಳ್ಳೇ ಹುಡುಗರು, ಯಾವುದೇ ಯೋಚನೆಯಿಲ್ಲದೆ ಬಾ" ಅಂದರು. (ನನಗಿಲ್ಲದ ಅನುಮಾನ ಅವರಿಗ್ಯಾಕೆ ಬಂತೋ ಗೊತ್ತಿಲ್ಲ - ಬಹುಶಃ ಎಲ್ಲರನ್ನೂ ಹತ್ತಿರದಿಂದ ಬಲ್ಲವರಾದ್ದರಿಂದ ಇರಬೇಕು!) ಯಾವುದೇ ನೆಪ ಹೇಳಬಾರದು ಎಂದಾಗ ಅನುಮಾನಿಸುತ್ತ ಹೂಂ ಅಂದಿದ್ದೆ(ವೈಯುಕ್ತಿಕ ಕಾರಣಗಳಿಂದ ಅಷ್ಟು ಸುಲಭವಾಗಿರಲಿಲ್ಲ). ಆದರೆ ಕೆ‍ಎಸ್‍ಸಿಯ ಸೆಳೆತ ಎಲ್ಲ ಕಾರಣಗಳನ್ನು ಮೂಲೆಗೊತ್ತಿ ಶನಿವಾರ ಬೆಳಿಗ್ಗೆ ನನ್ನನ್ನು ಹೊರಡಿಸಿತು.

ನಂದಿಹಳ್ಳಿ ತಲುಪಿ ಓದೇಕಾರ್ ಫಾರಂ ತಲುಪಿದ ಕೂಡಲೆ ಅಷ್ಟೋ ಇಷ್ಟೋ ಇದ್ದ ಹಿಂಜರಿಕೆ ಕೂಡಾ ಮಾಯವಾಯಿತು. ಮೂರ್ತಿ ದಂಪತಿಗಳ ಆತ್ಮೀಯ ಸ್ವಾಗತ ಎದುರುಗೊಂಡು, ಅವರು ಕೊಟ್ಟ ನಿಂಬೆಹುಲ್ಲಿನ ಕಷಾಯ ಕುಡಿದ ನಮಗೆ ಎದುರಾದದ್ದು ಸೀತಕ್ಕ. ಸರಿ, ಉಭಯಕುಶಲೋಪರಿಯ ನಂತರ ಅಲ್ಲಿನ ಸೌಲಭ್ಯಗಳನ್ನು ನೋಡಿದ ನಮಗೆ ಹೇಗೋ, ಏನೋ ಎಂಬ ಶಂಕೆಗಳು ದೂರಾಗಿ ಮನಸ್ಸು ನಿರಾಳವಾಯಿತು. ಅಷ್ಟರಲ್ಲಿ ನಮಗಿಂತಲೂ ಮುಂಚೆ ಬಂದು "ಸಂಪೂರ್ಣ" CMS ಬಗ್ಗೆ ಒಂದು ಸುತ್ತು ಚರ್ಚೆ ನಡೆಸಿದ್ದ ಗುಂಪು ಎದುರಾಯಿತು. ಒಂದು ಸುತ್ತು ತೋಟ ನೋಡುವ ಎಂದು ರವಿ ಕೆಲವರನ್ನು ಹೊರಡಿಸಿದರು. ಅವರ ಮುಖ್ಯ ಉದ್ದೇಶ ಶೇಖರ್ ಸರ್ ಅವರ ಸಂದರ್ಶನ ನಡೆಸುತ್ತಿದ್ದ ಕಿರಣ್ ಅವರ ಗುಂಪಿಗೆ ನಾವು ತೊಂದರೆ ಕೊಡಬಾರದೆಂದೇ ಆಗಿತ್ತು.

ಅಲ್ಲಿದ್ದ ಒಂದು ಸಣ್ಣ ಕೆರೆಯ ದಂಡೆಯಲ್ಲಿ ಕುಳಿತ ನಮಗೆ ಕೆ‍ಎಸ್‍ಸಿಯ ಅನಿವಾರ್ಯವೇ ಆಗಿರುವ ರವಿ ಕೆಲವು ಹೊಸ ಬೆಳವಣಿಗೆಗಳ ಬಗ್ಗೆ ತಿಳಿಸಿದರು. ಅದಕ್ಕೆ ಕಾದಿದ್ದವರಂತೆ ನಮ್ಮ ಪ್ರಶ್ನೆಗಳು ಶುರುವಾದವು. ಪ್ರಶ್ನೆಗಳ ದಾಳಿಗೆ ತಾಳ್ಮೆಯಿಂದ ಉತ್ತರ ಕೊಟ್ಟ ರವಿಯವರು ಕೊನೆಗೆ ಸುಸ್ತಾಗಿ, ಮಿಕ್ಕಿದ್ದು ಸರ್ ಜೊತೆಯಲ್ಲಿ ನಡೆಯುವ ಚರ್ಚೆಯಲ್ಲಿ ಪ್ರಸ್ತಾಪಿಸಿ ಎಂದು ಸೂಚಿಸಿ, ಊಟದ ವೇಳೆಯಾದ್ದರಿಂದ ಅಲ್ಲಿಂದ ಹೊರಡಿಸಿದರು. ಗೋಧಿ ಪಾಯಸದ ಜೊತೆ ಪುಷ್ಕಳ ಭೋಜನದ ನಂತರ ೪ ಗಂಟೆಗೆ ಅಧಿಕೃತ ಸಭೆ ಪ್ರಾರಂಭವಾಯಿತು.

ಶೇಖರ್ ಸರ್ ಸಂವಾದ.ಕಾಂನ ಬಗ್ಗೆ ಸೂಚಿಸುತ್ತಲೇ ವಿರೋಧ ಪಕ್ಷದವರಂತೆ ಕೂತಿದ್ದ ನಮ್ಮಿಂದ ಅನೇಕ ಪ್ರಶ್ನೆಗಳ ಮಳೆಯೇ ಸುರಿಯಿತು. ಅದಕ್ಕೆ ಉತ್ತರವಾಗಿ ಸರ್ ಒಂದು ಪಾಠವನ್ನೇ ಮಾಡಿ(ಬೋರ್ಡ್ ಇದ್ದದು ತುಂಬಾ ಸುಲಭವಾಯಿತು) ಸಂವಾದ.ಕಾಂ ಇಲ್ಲದಿದ್ದರೆ ದೊಡ್ಡ ಅಪಚಾರವಾಗುವುದೆಂಬಂತೆ ನಿರೂಪಿಸಿದರು. ಕಿರಣ್ ಈಗಾಗಲೇ ಹೇಳಿರುವಂತೆ ನಾನು ಮತ್ತು ಸೌಮ್ಯ ಮಾತ್ರವೇ ವಿರೋಧ ಪಕ್ಷದಲ್ಲಿದ್ದುದರಿಂದ ವಿರೋಧ ಸೂಚಿಸಿದ್ದಕ್ಕೇ ತೃಪ್ತಿಗೊಂಡು ಸುಮ್ಮನಾದೆವು(ಇನ್ನೂ ಮುಂದುವರೆಸಿದ್ದರೆ ಅಲ್ಲಿದ್ದ ಕೆಲವರಾದರೂ ಬೆಂಗಳೂರಿಗೆ ಹಿಂದಿರುಗುವ ಮನಸ್ಸು ಮಾಡಿರುತ್ತಿದ್ದರು). ಎಲ್ಲರ ಪರಿಚಯವಾಗಬೇಕೆಂಬುದು ನನ್ನದೇ ಸಲಹೆಯಾಗಿತ್ತು, ಕಾರಣ ಸರ್, ರವಿ ಮತ್ತು ಸೀತಕ್ಕ ಬಿಟ್ಟರೆ ಎಲ್ಲರಿಗೂ ಎಲ್ಲರೂ ಗೊತ್ತಿರಲಿಕ್ಕಿಲ್ಲ ಎಂಬುದು ನನ್ನ ಅನಿಸಿಕೆಯಾಗಿತ್ತು. ನಂತರ ಟ್ರಸ್ಟ್‍ ಹುಟ್ಟಿತು. ಅದಕ್ಕೆ ಸದಸ್ಯೆಯಾಗಲು ಮೊದಲು ಹಿಂಜರಿದರೂ ಮಹಿಳಾ ಮೀಸಲಾತಿಯನ್ನು ಗಮನದಲ್ಲಿಟ್ಟುಕೊಂಡು (ವಿರೋಧ ವ್ಯಕ್ತಪಡಿಸಲಾದರೂ ಒಂದು ದನಿಯಿರಲಿ ಎಂದು) ಸೇರಿದ್ದಾಯಿತು. ನನ್ನ ಹಿಂದೆ ಸೌಮ್ಯ. ಅಷ್ಟರಲ್ಲಿ ಬ್ರೇಕ್. ಪದಾಧಿಕಾರಿಗಳನ್ನು ಸೂಚಿಸುವಾಗ ಈಗಾಗಲೇ ಎಲ್ಲವನ್ನೂ ಬರೆದುಕೊಳ್ಳುತ್ತಿದ್ದೆ ಎಂದು ಅದೇ ಕೆಲಸ ಮುಂದುವರೆಸಿ ಎಂದು ಕಾರ್ಯದರ್ಶಿಯನ್ನಾಗಿ ಮಾಡಿದರು. ಸಮಿತಿಗಳ ರಚನೆಯ ಸಮಯದಲ್ಲಿ ಸಮಿತಿ ಎಷ್ಟಿರಬೇಕು? ಸಂವಾದಕ್ಕೆ ಬೇರೆಯೇ ಅಂತ ಉಂಟಾದ ಗೊಂದಲದಲ್ಲಿ ತಲೆಕೆಟ್ಟು ಮನೋಜ್, ರಮೇಶ್ ಆಚೆ ಕುಳಿತು ವ್ಯವಸಾಯದ ಬಗ್ಗೆ ಚರ್ಚೆ ಮಾಡಿದ್ದೂ ಆಯಿತು. ಮತ್ತೆ ಒಂದು ಬ್ರೇಕ್.

ಊಟದ ನಂತರ ರಾಘವ ಬೋರ್ಡಿನ ಬಳಿ ತಮ್ಮ ಸಾರ್ವಭೌಮತ್ವವನ್ನು ಸ್ಥಾಪಿಸಿಕೊಂಡರು. ಹೀಗೆ ಬಿಟ್ಟರೆ ಚರ್ಚೆ ಮರುದಿನ ರಾತ್ರಿಯವರೆಗೂ ಮುಂದುವರೆಯಬಹುದು ಎಂಬ ಆತಂಕ ಶುರುವಾಯಿತೋ ಏನೋ? ಸರಿ, ಯಾವ ಸಮಿತಿ ಏನು ಮಾಡಬೇಕು, ಯಾರು ಸದಸ್ಯರು ಎಂದು ಎಲ್ಲ ಕಡೆಗಳಿಂದಲೂ ಗೆರೆಗಳೆಳೆದು ಬರೆದರು, ಅಳಿಸಿದರು, ಬರೆದರು. ನಾನೂ ಈಗಾಗಲೇ ಸಿಕ್ಕಿದ್ದ ಕಾರ್ಯದರ್ಶಿ ಸ್ಥಾನಕ್ಕೆ ಒಂದಿಷ್ಟೂ ಚ್ಯುತಿ ಬಾರದಂತೆ ಎಲ್ಲವನ್ನೂ ಬರೆದುಕೊಂಡೆ. ಇಷ್ಟಾಗುವ ಹೊತ್ತಿಗೆ ೧೨ ದಾಟಿತ್ತು ಎಂದುಕೊಳ್ಳುತ್ತೇನೆ, ಒಬ್ಬೊಬ್ಬರೆ ಮಲಗಲು ಅಣಿಮಾಡಿಕೊಳ್ಳತೊಡಗಿದರು. ಅಷ್ಟರಲ್ಲಿ ಶುರುವಾಯಿತು ಅಜಿತ್ ಮತ್ತು ಶೇಖರ್ ಸರ್ ಮಧ್ಯೆ ಪರ್ಯಾಯ ಸಿನಿಮಾದ ಕಾರ್ಯಾಗಾರದ ಬಗ್ಗೆ ಯುದ್ಧ. ಒಂದು ದಿನ ಎಂದು ಅಜಿತ್, ಎರಡು ದಿನ ಎಂದು ಸರ್. ಕಿರಣ್ ಮಲಗಿದ್ದವರು ಮಧ್ಯೆ ಎದ್ದು ನಾಲ್ಕು ದಿನ ಇದ್ದರೆ ಮತ್ತಷ್ಟು ಚೆನ್ನ ಎಂದು ಉರಿಯುವ ಬೆಂಕಿಗೆ ತುಪ್ಪ ಸುರಿದರು. ನನ್ನ ಬೆಂಬಲ ಅಜಿತ್‍ಗೆ(ಎರಡು ದಿನವಾದರೆ ನನಗೇ ಹೋಗುವುದು ಕಷ್ಟ). ಏನೇನೋ ಹೇಳಿ ಅಂತೂ ಒಪ್ಪಿಸಿದರು. ಇದಕ್ಕೆ ಅವರ convincing capacity ಕಾರಣವೋ, ಅದಾಗಲೇ ಸುಮಾರು ಜನ ನಿದ್ರೆಯ ಮೂಡಿನಲ್ಲಿದ್ದರಿಂದ ನಮಗೆ ಬೆಂಬಲ ಇಲ್ಲದ್ದು ಕಾರಣವೋ ಗೊತ್ತಿಲ್ಲ. (ಸೀರಿಯಸ್ಸಾಗಿ ಯೋಚಿಸಿದರೆ, ಲಿಖಿತ ಒಪ್ಪಂದಕ್ಕೆ ಬರದಿದ್ದರೂ, ನಮಗಿದ್ದ ಮಾನಸಿಕ ಒಪ್ಪಂದವೇ ಕಾರಣ ಎನಿಸುತ್ತದೆ). ಅಂತೂ ಸುಮಾರು ೨.೩೦ ಕ್ಕೆ ಮಲಗಲು ಬಂದೆವು.

ಯಾವಾಗಲೂ ಚರ್ಚೆಗೆ ಸಿಕ್ಕದ ಶೇಖರ್‌ಪೂರ್ಣ ಅವರ ಜೊತೆ ಇಷ್ಟು ಚರ್ಚಿಸಿದ್ದು ವೈಯಕ್ತಿಕವಾಗಿ ಖುಷಿ ಕೊಟ್ಟ ವಿಷಯ. ಸಮಯವಲ್ಲದ ಸಮಯದಲ್ಲಿ ನಿದ್ರೆಯೂ ಸಹಕರಿಸದೆ ಕಷ್ಟಪಟ್ಟು ಸ್ವಲ್ಪ ನಿದ್ರೆ ಮಾಡಿ ಕಣ್ಣುಬಿಟ್ಟರೆ ಕಂಡಿದ್ದು ನಿದ್ರೆ ಮಾಡಿ ಎದ್ದಿದ್ದ ಚೀನಿ, ನಿದ್ರೆ ಬರದೆ ಕೂತಿದ್ದ ರಮೇಶ್ ನಡುವೆ ನಡೆಯುತ್ತಿದ್ದ ಚರ್ಚೆ.(ಮೂಲ ಚರ್ಚೆ ನಡೆಯುತ್ತಿದ್ದ ಹೊತ್ತಿನಲ್ಲಿ ಒಬ್ಬರು ನಿದ್ದೆ, ಒಬ್ಬರು ಮೂಕ ಪ್ರೇಕ್ಷಕ). ಆ ಹೊತ್ತಿನಲ್ಲಿ ಯಾರು ಎಷ್ಟು ಗೊರಕೆ ಹೊಡೆಯುತ್ತಿದ್ದಾರೆ ಎಂಬುದು ಚರ್ಚೆಯ ಮಹತ್ವದ ವಿಷಯ. ಜೊತೆಗೆ ಹಾಡು ಬೇರೆ. ಸ್ವಲ್ಪ ದೂರ ಹೋಗಿ ಏನಾದರೂ ಮಾಡಿಕೊಳ್ಳಿ ಎಂದು ಬೈದು ಮತ್ತೆ ಮಲಗಿದವಳಿಗೆ ಎಚ್ಚರವಾಗಿದ್ದು ೭.೩೦ ಕ್ಕೆ. ನಂತರ ಎಲ್ಲರೂ ರೆಡಿಯಾಗಿ, ತಿಂಡಿ ತಿಂದು ಒಂದು ಸುತ್ತು ತೋಟ ನೋಡಲು ಹೋಗಿ ಭವಿಷ್ಯತ್ತಿನ ನಿರ್ದೇಶಕರ ಶೂಟಿಂಗ್‍ನಲ್ಲಿ ಭಾಗವಹಿಸಿದ್ದಾಯಿತು. ರಾಘವ್ ಹಾಗೂ ರುದ್ರಮೂರ್ತಿ ಛಾಯಾಗ್ರಾಹಕರಾಗಲು ಸ್ಪರ್ಧೆಗೆ ಹೊರಟಂತಿತ್ತು. ಬರುವಾಗ ಸೀಬೆಕಾಯಿಯ ಮರವನ್ನು ಸಾಧ್ಯವಾದಷ್ಟು ದೋಚಿ, ಮೂರ್ತಿ ದಂಪತಿಗಳ ನೈಸರ್ಗಿಕ ಉತ್ಪನ್ನಗಳ ಶಾಪಿಂಗ್ ಮಾಡಿ ಹೊರಟೆವು. ತುಮಕೂರಿನಲ್ಲಿ ದೊಡ್ಡಮ್ಮನ ಮನೆಗೆ ಹೋಗಿ ಊಟ ಮಾಡಿ ಹೊರಟು ಮೈಸೂರು ತಲುಪಿದಾಗ ರಾತ್ರಿ ೭.೩೦. ಈ ಎಲ್ಲದರ ನಡುವೆ ನಾವು ನಕ್ಕಿದ್ದೆಷ್ಟೋ ಗೊತ್ತಿಲ್ಲ.(ಇಡೀ ತಿಂಗಳಿಗೆ ಸಾಲಬಹುದು!) ನೆನಪು ಕೂಡ ನಗೆ ತರಿಸುತ್ತದೆ. ಸುಮಾರು ಒಂದು ವರ್ಷದಿಂದ ಬಹಳ ಕೆಲಸದ ಒತ್ತಡದಿಂದ ಸುಸ್ತಾಗಿದ್ದ ನನಗೆ ಈ ಶಿಬಿರ ನಮ್ಮ ಕಾಲೇಜಿನ ದಿನಗಳ ನೆನಪನ್ನು ತಂದುಕೊಟ್ಟ ಒಂದು welcome relief.

7.15.2008

ಬರಿದಾದ ಭೂಮಿಯ ಮಡಿಲು ತುಂಬಿದವರೂ ಇದ್ದಾರೆ!

ಲೇಖಕರು: ಎಚ್.ಎಸ್. ಪ್ರಭಾಕರ, ಹಾಸನ
ಲೇಖನ ಕೃಪೆ: ಸಂಯುಕ್ತ ಕರ್ನಾಟಕ

ಈ ಜಗತ್ತಿನಲ್ಲಿ ನಾವು ನೀವು ಸೇರಿದಂತೆ ಜೀವಿಗಳು ಯಾವ ಕಾರಣಕ್ಕಾಗಿ ಜೀವಿಸಬೇಕು; ಜೀವಿಸುವ ಉದ್ದೇಶವಾದರೂ ಏನು ಎಂಬ ಅಂತಿಮ ಪ್ರಶ್ನೆಗೆ ‘ಹುಟ್ಟಿದ ಮೇಲೆ ಜೀವಿಸಲೇಬೇಕು’ ಎಂಬ ಹಾರಿಕೆ ಉತ್ತರ ಬಿಟ್ಟರೆ, ಈವರೆಗೂ ‘ಇದಮಿತ್ಥಂ’ (ಇದೇ ಸರಿ) ಎಂಬ ನಿರ್ದಿಷ್ಟ ‘ವೈಜ್ಞಾನಿಕ’ ಉತ್ತರ ಇನ್ನೂ ಯಾರಿಗೂ ಸಿಕ್ಕಿಲ್ಲ! ಆದರೆ ಹೇಗೆ ಜೀವಿಸಬೇಕು ಎಂಬ ಪ್ರಶ್ನೆಗೆ ಮಾತ್ರ ಅನಾದಿ ಕಾಲದಿಂದಲೂ ಆಯಾ ಕಾಲಕ್ಕನುಗುಣವಾಗಿ ಉತ್ತರಗಳು ಸಿಗುತ್ತಲೇ ಬಂದಿವೆ
.
ಆದರೆ ಈಗ ಜೀವ ವೈವಿಧ್ಯತೆಯಲ್ಲಿ ‘ಉತ್ಕೃಷ್ಟ’ ಎನಿಸಿಕೊಂಡಿರುವ ಮಾನವ ಹೇಗೆ ಜೀವಿಸುತ್ತಿದ್ದಾನೆ? ತನ್ನನ್ನು ‘ಹೆತ್ತು’, ಲಾಲನೆ, ಪಾಲನೆ ಪೋಷಣೆ ಮಾಡುತ್ತಿರುವ ಈ ಭೂ ತಾಯಿ, ಕೆಲವು ದಶಕಗಳಿಂದೀಚೆಗೆ ಕಾದ ಕೆಂಡದಂತೆ ‘ಜ್ವರ’ ಪೀಡಿತಳಾಗಲು ಆಕೆಯ ಮಕ್ಕಳೇ ಕಾರಣ. ಆಕೆಗೇನಾದರೂ ಸ್ವಲ್ಪ ಹೆಚ್ಚು ಕಡಿಮೆಯಾದರೂ ತಾವಾರೂ ಉಳಿಯುವುದಿಲ್ಲ ಎಂಬ ಪರಿಜ್ಞಾನವೂ ಇಲ್ಲದೆ, ಆಕೆಯ ಶುಶ್ರೂಷೆಯನ್ನೂ ಮಾಡದೆ ಆಕೆಯ ಸಕಲ ‘ಸಂಪತ್ತು, ಆಸ್ತಿ ಪಾಸ್ತಿ’ಗಳನ್ನೆಲ್ಲ ದೋಚಿ ‘ದೊಡ್ಡವ’ರಾಗಲು ಹವಣಿಸುತ್ತಿದ್ದಾರೆ.

ಆದರೆ ಈ ಮಕ್ಕಳಲ್ಲಿ ಭಾರತವೂ ಸೇರಿದಂತೆ ಜಗತ್ತಿನಲ್ಲಿರುವ ಕೆಲವು ‘ಪರೋಪಕಾರ’ ಸ್ಮರಣೆಯ ಕೃತಜ್ಞರು, ತಜ್ಞರು, ಪರಿಸರ ವಾದಿಗಳು ಇತ್ಯಾದಿ ಕಡಿಮೆ ಸಂಖ್ಯೆಯವರು ಮಾತ್ರ ಆತಂಕದಿಂದ ತಮ್ಮ ‘ತಾಯಿ’ಯ ಜ್ವರ ಇಳಿಸಿ ಆಕೆಯನ್ನು ಆರೋಗ್ಯವಂತಳನ್ನಾಗಿ ಮಾಡಲು ಆಕೆಗೆ “ವಿವಿಧ ಮಾತ್ರೆಗಳನ್ನು ನುಂಗಿಸುವ” ತಮ್ಮ ಕೈಲಾದ ಎಲ್ಲ ಪ್ರಯತ್ನ ಮುಂದುವರೆಸಿದ್ದಾರೆ. ಅಂತಹ ಜಾಗತಿಕ ಪ್ರಯತ್ನಗಳಲ್ಲಿ ಪ್ರಾಕೃತಿಕ ಅರಣ್ಯ ಬೆಳೆಸುವ ಮೂಲಕ ‘ಬಿ.ಸಿ.ಆರ್.ಟಿ. ಎಂಬ ಮಾತ್ರೆ’ಯೊಂದನ್ನು ಭೂ ತಾಯಿಯ ಬಾಯಿಗೆ ಹಾಕುವ ಪ್ರಯತ್ನವೂ ಒಂದಾಗಿದೆ! ಆ ಮೂಲಕ ‘ಜೀವ ವೈವಿಧ್ಯತೆ’ ಸೃಷ್ಟಿಸಿ ಭೂ ತಾಯಿಯ ಋಣ ತೀರಿಸುವ ಮಕ್ಕಳ ಸಾಲಿಗೆ ಹಾಸನ ತಾಲ್ಲೂಕು ಅನುಗನಾಳು ಎಂಬ ಕುಗ್ರಾಮಕ್ಕೆ ಸೇರಿದ ಡಾ. ಮಳಲಿಗೌಡರು ಹಾಗೂ ಅವರ ಸಹೋದರರಲ್ಲಿ ಒಬ್ಬರಾದ ಕೃಷ್ಣಮೂರ್ತಿಯೂ ಸೇರುತ್ತಾರೆ!

ಬಿ.ಸಿ.ಆರ್.ಟಿ. ಎಂದರೆ- ‘ಬಯೋ ಡೈವರ್ಸಿಟಿ ಕನ್ಸರ್ವೇಶನ್ ಅಂಡ್ ರೀಸರ್ಚ್ (ಜೀವ ವೈವಿಧ್ಯ ಸಂರಕ್ಷಣೆ ಹಾಗೂ ಸಂಶೋಧನಾ) ಟ್ರಸ್ಟ್’. ಇದೊಂದು ಲಾಭ ರಹಿತ ಪರಿಸರ ಸಂಘಟನೆ. ಹಾಸನದಿಂದ ಬೇಲೂರಿಗೆ ಹೋಗುವ ಹೆದ್ದಾರಿ ಬದಿಯ ಕ್ರಾಸ್‌ನಲ್ಲಿ ಇಳಿದು ಎಡಭಾಗ ಹೋದರೆ ಅನುಗನಾಳು ಸಿಗುತ್ತದೆ. ಹಾಸನದಿಂದ ಸುಮಾರು ೧೪ ಕಿ.ಮೀ ಅಷ್ಟೆ. ಈ ಗ್ರಾಮ ಇದೀಗ ಜಗತ್ತಿನ ಪರಿಸರ ಪ್ರಿಯರ ಗಮನ ಸೆಳೆದಿದೆ. ಗ್ರಾಮದ ರೈತ ರಂಗೇಗೌಡರ ಸುಶಿಕ್ಷಿತ ಮಕ್ಕಳಾದ ೩೯ ವರ್ಷದ ಸ್ನಾತಕೋತ್ತರ ಕೃಷಿ ಪಿ‌ಎಚ್‌ಡಿ ಪದವೀಧರ ಡಾ. ಮಳಲಿಗೌಡರು ಈಗ ಅಮೆರಿಕದಲ್ಲಿದ್ದಾರೆ. ಅವರು ವಿದೇಶಕ್ಕೆ ತೆರಳುವ ಮುನ್ನ ಸ್ವಗ್ರಾಮದಲ್ಲಿ ಮಾಡಿ ಹೋದ ಕೆಲಸ ಮಾತ್ರ ಅದ್ವಿತೀಯವೇ ಸರಿ. ಇಲ್ಲಿಯೇ ಇರುವ ಅವರ ಸಹೋದರ ಬಿ.ಕಾಂ. ಪದವೀಧರ ಕೃಷ್ಣಮೂರ್ತಿ, ಅಣ್ಣನನ್ನು ಅನುಸರಿಸಿ ಅವರೊಂದಿಗೆ ಕೈ ಜೋಡಿಸಿದರು. ಇಬ್ಬರೂ ನಿಸರ್ಗ ಪ್ರೇಮಿಗಳು ೬ ವರ್ಷಕ್ಕೂ ಹಿಂದೆ ಗ್ರಾಮಸ್ಥರ ಸಹಕಾರದೊಂದಿಗೆ ಈ ಒಂದು ಹೊಸ ‘ಪರಿಸರ ಸಾಹಸಕ್ಕೆ’ ನಾಂದಿ ಹಾಡಿದರು.

ರೋಚಕ ಕಥೆ: ಗ್ರಾಮದ ಹೊರ ವಲಯದಲ್ಲಿ ಕಲ್ಲು- ಬಂಡೆಗಳ ಸಹಿತ ಬಂಜರಾಗಿ ಬಿದ್ದಿದ್ದ ೧೦ ಎಕರೆ ‘ಕೆಲಸಕ್ಕೆ ಬಾರದ’ ಹಳ್ಳ ದಿಣ್ಣೆಗಳ ಸರ್ಕಾರಿ ಭೂಮಿಯಲ್ಲಿ ಅರಣ್ಯೀಕರಣ ಮಾಡುವ ಸಾಹಸಕ್ಕೆ ಇವರು ಕೈ ಹಾಕಿದರು. ೨೦೦೧ ಜೂನ್‌ನಲ್ಲಿ ಸಾಕಷ್ಟು ಸಂಖ್ಯೆಯ ಎಲ್ಲ ಜಾತಿಯ ಗಿಡಗಳನ್ನು ಅಲ್ಲಿ ನೆಟ್ಟು ಆರಂಭಿಕ ಪೋಷಣೆ ನೀಡಿದರು. ಸಸ್ಯ ವರ್ಗಕ್ಕೆ ಎದುರಾಗುವ ಪ್ರಾಕೃತಿಕ ಅಪಾಯ ತಪ್ಪಿಸುವ ರಕ್ಷಣಾ ಕಾರ್‍ಯ ಹೊರತುಪಡಿಸಿ, ಮತ್ಯಾವ ‘ಹೆಚ್ಚುವರಿ ಚಟುವಟಿಕೆ’ಯನ್ನೂ ಇವರು ಮಾಡದೆ, ಆ ಮಣ್ಣಿನಲ್ಲಿ ಸಂಭವಿಸಬಹುದಾದ ಜೈವಿಕ ಹಾಗೂ ಪ್ರಾಕೃತಿಕ ಪರಿವರ್ತನೆ ನಿರೀಕ್ಷಿಸುತ್ತಾ ಕಣ್ಗಾವಲಿಟ್ಟು ಕಾದರು.
‘ಬಿಸಿ‌ಆರ್‌ಟಿ’ ಬೆಳೆಸಲು ಡಾ. ಮಳಲಿಗೌಡರು ತಮ್ಮ ಉನ್ನತ ಶಿಕ್ಷಣಕ್ಕೆಂದು ದೊರೆತಿದ್ದ ೧ ಲಕ್ಷ ರೂ. ವಿದ್ಯಾರ್ಥಿ ವೇತನದಲ್ಲೇ ಒಂದು ಪಾಲು ಮೀಸಲಿಟ್ಟರು. ಜೊತೆಗೆ ನರ್ಸರಿಯನ್ನೂ ಮಾಡಿ ಗಿಡಗಳನ್ನು ರಿಯಾಯ್ತಿ ದರಕ್ಕೆ ಮಾರಾಟ ಮಾಡಿ ಅಷ್ಟೋ ಇಷ್ಟೋ ಹಣ ಸಂಗ್ರಹಿಸಿ ಇದಕ್ಕಾಗಿ ವಿನಿಯೋಗಿಸಿದರು. ಖರ್ಚು ಹೆಚ್ಚಾದಾಗ ತಮ್ಮ ಸ್ವಂತ ಹಣವನ್ನೂ ಬಂಡವಾಳವಾಗಿ ತೊಡಗಿಸಿದರು.

೧೦ ಎಕರೆಯಲ್ಲಿ ಆಗ ನೆಡಲ್ಪಟ್ಟ ಸಸ್ಯ ಸಂಕುಲದ ‘ಮಿನಿ ಅರಣ್ಯ’ದ ಸಾಮೂಹಿಕ ಜವಾಬ್ದಾರಿ ಹೊರಲು ಸಂಸ್ಥೆಯೊಂದು ಬೇಕೆನಿಸಿತು. ಈ ಚಿಂತನೆ ಫಲವಾಗಿ ೫ ತಿಂಗಳ ನಂತರ ಅದೇ ವರ್ಷ (೨೦೦೧) ಡಿಸೆಂಬರ್‌ನಲ್ಲಿ ಈ ‘ಬಿ.ಸಿ.ಆರ್.ಟಿ.’ ಸಂಸ್ಥೆಯನ್ನು ಡಾ. ಮಳಲಿಗೌಡರು ಸ್ಥಾಪಿಸಿದರು. ಈ ಬಿಸಿ‌ಆರ್‌ಟಿ ಬೆಳೆದ ಕಥೆ ರೋಚಕವಾಗಿದೆ. ಅವರ ಅಂದಿನ ನಿರೀಕ್ಷೆ ಹಾಗೂ ಆಶಯ ಈಗ ಫಲ ಕೊಟ್ಟಿದೆ. ಇದೆಲ್ಲ ಕೇಳಿದರೆ, ಕರ್ನಾಟಕದಲ್ಲಿ ಸುಮಾರು ೨ ವರ್ಷ ಓಡಿದ ಅತ್ಯಂತ ಯಶಸ್ವೀ ಚಲನ ಚಿತ್ರ ‘ಬಂಗಾರದ ಮನುಷ್ಯ’ದಲ್ಲಿನ ‘ರಾಜೀವ’ನ (ಡಾ. ರಾಜ್) ಪಾತ್ರ ನೆನಪಾಗುತ್ತದೆ! ಗ್ರಾಮಸ್ಥರ ಸಹಭಾಗಿತ್ವ ಇರುವುದರಿಂದ ಬಿಸಿ‌ಆರ್‌ಟಿಗೆ ಬೇಲಿಯೇನು ಇಲ್ಲ! ಜೀವನದುದ್ದಕ್ಕೂ ಮನುಷ್ಯ ತಾನು ಹೋದೆಡೆಯಲ್ಲೆಲ್ಲ ತನ್ನದೇ ಆದ ‘ಬೇಲಿ’ ಕಟ್ಟಿಕೊಂಡೇ ಅಲ್ಲವೇ ಹಾಳಾಗುತ್ತಿರುವುದು!?


ವೈವಿಧ್ಯತೆ ಮಹತ್ವ: ಒಂದು ನಿರ್ದಿಷ್ಟ ಪ್ರದೇಶದಲ್ಲಿ ಪ್ರಾಕೃತಿಕವಾಗಿ ಜನರ ಸಹಭಾಗಿತ್ವದಲ್ಲಿ ಜೀವ ವೈವಿಧ್ಯತೆ ಬೆಳೆಸುವ ಈ ಪ್ರಯತ್ನ, (ಜಾಗತಿಕ ಮಟ್ಟಕ್ಕೆ ಹೋಲಿಸಿದಾಗ ‘ಸಣ್ಣದು’ ಎನಿಸಿದರೂ) ದೇಶಕ್ಕೆ ದೊಡ್ಡದು ಹಾಗೂ ಕರ್ನಾಟಕದಲ್ಲೇ ಪ್ರಪ್ರಥಮ ಎನಿಸುವ ಬಹು ದೊಡ್ಡ ಸಾಧನೆ. ಏಕೆಂದರೆ ಅರಣ್ಯಗಳ ಮಹತ್ವ ತಿಳಿದವರಿಗೆ ಮಾತ್ರ ಇದು ಅರ್ಥವಾಗುತ್ತದೆಯೇ ಹೊರತು, ಉತ್ಪ್ರೇಕ್ಷೆಯಂತೂ ಅಲ್ಲ.
ಸಸ್ಯ ಸಂಕುಲ ಮಾನವನಿಗೆ ಆಮ್ಲಜನಕ ಪೂರೈಸುವ ಮೂಲಕ ‘ಜೀವ’ ನೀಡುತ್ತವೆ. ಮಣ್ಣಿನ ಸವಕಳಿ ತಡೆಗಟ್ಟುತ್ತವೆ. ಅಲ್ಲದೆ, ಆಹಾರ, ನೀರು, ನೆರಳು (ಮನೆ), ಬಟ್ಟೆ, ಉದ್ಯಮಗಳಿಗೆ ಬೇಕಾದ ಪರಿಕರಗಳು ಇತ್ಯಾದಿ ಏನೆಲ್ಲ ಕೊಟ್ಟು ಪೋಷಿಸುತ್ತಿವೆ. ‘ದ್ಯುತಿ ಸಂಶ್ಲೇಷಣೆ’ ಎಂಬ ನಿಗೂಢ ಕ್ರಿಯೆ ಮೂಲಕ ಸಸ್ಯಗಳು ತಮ್ಮ ಆಹಾರ ತಾವೇ ತಯಾರಿಸಿಕೊಂಡು ಮನುಷ್ಯನಿಗೆ ಹಗಲು ವೇಳೆ ಆಮ್ಲಜನಕ ನೀಡುತ್ತವೆ. ಎಷ್ಟು ಪ್ರಮಾಣ ನೀಡುತ್ತವೆ ಎಂಬುದು ಪ್ರತಿ ಗಿಡದಿಂದ ಗಿಡಕ್ಕೆ; ಮರದಿಂದ ಮರಕ್ಕೆ ಅವುಗಳ ವಯಸ್ಸಿಗೆ ಅನುಗುಣವಾಗಿ ಇದು ವ್ಯತ್ಯಾವಿದೆ. ಹೀಗಾಗಿ ಪ್ರತಿ ದಿನ ಬಿಡುಗಡೆ ಆಗುವ ಟನ್‌ಗಟ್ಟಲೆ ಆಮ್ಲಜನಕದ ಪ್ರಮಾಣವನ್ನು ನಿರ್ಧಿಷ್ಟವಾಗಿ ಹೇಳಲಾಗದು.

ಆದರೂ, ೧ ಹೆಕ್ಟೇರ್ ಅರಣ್ಯ ಒಂದು ದಿನಕ್ಕೆ ೩ ಟನ್ ಇಂಗಾಲದ ಡೈಯಾಕ್ಸೈಡ್ ಹೀರಿಕೊಂಡು ೨ ಟನ್ ಆಮ್ಲಜನಕ ವಿಸರ್ಜಿಸುತ್ತವೆ ಎಂಬ ಅಂದಾಜಿದೆ. ಮತೊಂದು ಲೆಕ್ಕಾಚಾರದ ಪ್ರಕಾರ ೧ ಗಿಡದ ೧ ಎಲೆ ೧ ಗಂಟೆಗೆ ೫ ಮಿ.ಲೀ. ಆಮ್ಲಜನಕ ನೀಡುತ್ತದೆ. ಎಲ್ಲ ಮರ ಗಿಡಗಳು ಹಗಲು ಆಮ್ಲಜನಕ ಹಾಗೂ ರಾತ್ರಿ ಇಂಗಾಲದ ಡೈಯಾಕ್ಸೈಡ್ ಬಿಡುಗಡೆ ಮಾಡಿದರೆ, ವಿಶೇಷವಾಗಿ ಅರಳಿ ಮರ ಮಾತ್ರ ದಿನದ ೨೪ ಗಂಟೆಯೂ ೧ ಗಂಟೆಗೆ ೩೬೦೦ ಕೆ.ಜಿ. ಆಮ್ಲಜನಕವನ್ನೇ ಉಗುಳುತ್ತದೆ! ಅದಕ್ಕಾಗಿಯೇ ಭಾರತೀಯರು ಅನಾದಿ ಕಾಲದಿಂದ ಅರಳಿಯನ್ನು ‘....ವೃಕ್ಷ ರಾಜಾಯತೇ ನಮಃ’ ಎಂದು ಪೂಜ್ಯ ಸ್ಥಾನದಲ್ಲಿಟ್ಟು ಪೋಷಿಸುತ್ತಿದ್ದಾರೆ! ಈ ಜಗತ್ತಿನಲ್ಲಿ ಇನ್ನೂ ಅನೇಕಾನೇಕ ಜೀವ ವೈವಿಧ್ಯ ವಿಸ್ಮಯಗಳಿವೆ.
ಇಷ್ಟಲ್ಲದೆ, ಪಕ್ಷಿ ಸಂಕುಲವು ಬೀಜ ಪ್ರಸಾರ ಮಾಡುತ್ತವೆ. ಕೀಟಗಳು ಹೂವಿಗೆ ಪರಾಗ ಸ್ಪರ್ಶ ಮಾಡಿ, ಆ ಮೂಲಕ ಸಸ್ಯ ಸಂಕುವನ್ನು ವೃದ್ಧಿಸುತ್ತವೆ. ಸಸ್ಯಗಳು ಬೆಳಕು-ನೀರು ಬಳಸಿಕೊಂಡು ನೇರವಾಗಿ ತಮ್ಮ ಆಹಾರ ತಾವೇ ತಯಾರಿಸಿಕೊಳ್ಳುತ್ತವೆ; ಯಾವ ‘ಬೆನ್ನು ಮೂಳೆ’ ಅಥವಾ ಅಸ್ತಿ ಪಂಜರದ ಸಹಾಯವಿಲ್ಲದೆ ಎದ್ದು ನಿಂತು ಮೇಲ್ಮುಖವಾಗಿ ಬೆಳೆಯುತ್ತವೆ. ಹಾಗೆ ನೋಡಿದರೆ, ಈ ನಿಸರ್ಗದಲ್ಲಿ ತನ್ನ ಜೀವ, ಆಹಾರ, ಬದುಕು ಮತ್ತಿತರ ಜೀವನೋಪಾಯಕ್ಕಾಗಿ ಮನುಷ್ಯನೇ ಮೇಲ್ಕಂಡವುಗಳ ಮೇಲೆ ಅವಲಂಬಿತನಾಗಿ ‘ಪರಾವಲಂಬಿ’ಯಾಗಿದ್ದಾನೆ. ದ್ಯುತಿ ಸಂಶ್ಲೇಷಣೆ, ಪರಾಗ ಸ್ಪರ್ಶ ಇತ್ಯಾದಿ ನಿಗೂಢ ಕ್ರಿಯೆಗಳನ್ನೆಲ್ಲ ಮಾನವನೇ ಮಾಡಿ ತೋರಿಸಿಬಿಡಲಿ ನೋಡೋಣ!?
ತನ್ನದೇ ಆದ ವಿಶಿಷ್ಟ ಜೀವ ವೈವಿಧ್ಯತೆ ಮೆರೆಯುತ್ತಾ ಬಂದಿರುವ ಈ ಜಗತ್ತಿನಲ್ಲಿ ಮಾನವ ಮಾತ್ರವೇ ‘ಜೀವಿ’ಯಲ್ಲ; ಕೋಟ್ಯಾಂತರ ಸಸ್ಯ- ಪ್ರಾಣಿ ಸಂಕುಲವೇ ಅಲ್ಲದೆ, ಭೂಮಿಯ ಪ್ರತಿ ಕಣ ಕಣದಲ್ಲೂ ಜೀವ ಇದೆ. ಇಂತಹ ‘ಜೀವ’ ಅಥವಾ ‘ಚೇತನ’ ಎಂದರೆ ಏನು ಅಥವಾ ಅದರ ಮೂಲ ಯಾವುದು ಎಂಬ ಮೂಲಭೂತ ಪ್ರಶ್ನೆಗೆ ಇನ್ನೂ ಉತ್ತರವೇ ಸಿಕ್ಕಿಲ್ಲ. ‘ಜೀವಿ’ ಹುಟ್ಟಿದ ನಂತರ ಒಂದಲ್ಲ ಒಂದು ದಿನ ಸಾಯಲೇಬೇಕು; ಹಾಗೂ ಅಲ್ಲಿಯವರೆಗೆ ಜೀವ ವೈವಿಧ್ಯತೆಯ ‘ಜೀವನ ಚಕ್ರ’ದಲ್ಲಿ ಒಂದಕ್ಕೊಂದು ಪೂರಕವಾಗಿ ಸಮತೋಲನ ಕಾಪಾಡಿಕೊಂಡು ಜೀವಿಸಬೇಕು ಎಂಬುದಷ್ಟೆ ಈಗ ಗೊತ್ತಿರುವ ಸತ್ಯ. ಆದರೆ ತಾನೊಬ್ಬ ಮಾತ್ರ ‘ಚೆನ್ನಾಗಿ ಜೀವಿಸಬೇಕು’ ಎಂಬ ಅಜ್ಞಾನದ ದುರಾಸೆಯಿಂದ ಮಾನವ ಬೇರೆ ಜೀವಿಗಳ ವಿನಾಶ ಮಾಡಲು ಹೊರಟು, ಈ ಜೀವ ಚಕ್ರದ ಸಮತೋಲನ ಕೆಡಿಸುತ್ತಿದ್ದಾನೆ. ‘ನಿನಗೆ ಜೀವ ಕೊಡುವ ಸಾಮರ್ಥ್ಯವಿಲ್ಲ ಎಂದ ಮೇಲೆ; ಅದನ್ನು ತೆಗೆಯುವ ಹಕ್ಕೂ ಇಲ್ಲ’ ಎಂಬ ಭಗವಾನ್ ಬುದ್ಧನ ಮಾತು ಎಷ್ಟೊಂದು ಅರ್ಥಗರ್ಭಿತ!
ಯಶಸ್ಸಿನ ಕಥೆ: ಆರಂಭದಲ್ಲಿ ಅನುಗನಾಳು ಬಿ.ಸಿ.ಆರ್.ಟಿ. ಬಂಜರು ಭೂಮಿಯ ಮೇಲೆ ನೈಸರ್ಗಿಕವಾಗಿ ಹುಲ್ಲು ಬೆಳೆಯಲಿಕ್ಕೇ ೨ ವರ್ಷ ಕಾಲಾವಧಿ ಬೇಕಾಯಿತು. ಹೀಗೆಯೇ ನೈಸರ್ಗಿಕ ಪರಿವರ್ತನೆ ಸಾಗುತ್ತಾ ಹೋಯಿತು. ಮರ ಗಿಡಗಳಿಂದ ಉದುರಿದ ಎಲೆ, ಕಸ, ಕಡ್ಡಿಗಳು ನೆರಳಿನ ತಂಪು ತೇವಾಂಶದೊಂದಿಗೆ ಮಣ್ಣಿನಲ್ಲಿ ಕರಗಿ ಗೊಬ್ಬರವಾಗಿ, ಹದವಾಗಿ ಬೆರೆತು ಸಾವಯವ ಚಟುವಟಿಕೆಗೆ ನಾಂದಿ ಹಾಡಿತು. ಮಣ್ಣು ಹಾಗೂ ತೇವಾಂಶ ಭೂಮಿಯಲ್ಲೇ ಭದ್ರವಾಗಿ ಹಿಡಿದಿಡಲ್ಪಟ್ಟು, ಎರೆಹುಳು ಸೇರಿದಂತೆ ಅನೇಕ ವಿವಿಧ ಸಣ್ಣ ಹುಳು ಹುಪ್ಪಟೆ ಸೇರಿಕೊಂಡು ಸಾವಯವ ನೈಸರ್ಗಿಕ ವಿಭಜನೆಯ ಕ್ರಿಯೆ ಸಾಗುತ್ತಾ ಮಣ್ಣಿನ ಫಲವತ್ತತೆ ಹೆಚ್ಚಿತು. ಈ ಎರೆಹುಳು ತೇವಾಂಶ ಹುಡುಕಿಕೊಂಡು ೧ ರಾತ್ರಿಗೇ ೧೦೦೦ ಮೀ (೧ ಕಿ.ಮೀ.) ವೇಗವಾಗಿ ಭೂಮಿಯೊಳಗೇ ಸಾಗುತ್ತದಂತೆ!

ಕೆಲವು ನಿರ್ದಿಷ್ಟ ಮರ ಗಿಡಗಳಿಂದ ಆಕರ್ಷಿಸಲ್ಪಟ್ಟು ೩೪ ಜಾತಿಯ ವಿವಿಧ ಪಕ್ಷಿಗಳು ಬಂದು ಸೇರಿದವು. ಜತೆಗೆ ಕ್ರಿಮಿ ಕೀಟಾದಿಗಳಿಂದಾಗಿ ಕ್ರಮವಾಗಿ ನೈಸರ್ಗಿಕ ಬೀಜ ಪ್ರಸಾರ ಹಾಗೂ ಪರಾಗ ಸ್ಪರ್ಷ ಚಟುವಟಿಕೆ ಆರಂಭಗೊಂಡಿತು. ಇದೀಗ ಬಿಸಿ‌ಆರ್‌ಟಿ ಅರಣ್ಯದಲ್ಲಿ ೧೦-೧೨ ಜಾತಿಯ ಹೊಸ ಮರಗಳು ತಾವಾಗಿಯೇ ಹುಟ್ಟಿ ಬೆಳೆದಿವೆ; ಮುಂದೆ ದೊಡ್ಡ ಮರಗಳಾಗಿ ಬೆಳೆಯಬಲ್ಲ ಆಲ, ಅರಳಿಯಂತಹ ಗಿಡಗಳು ಇಲ್ಲಿನ ಕಲ್ಲು ಬಂಡೆಗಳು ಹಾಗೂ ಅವುಗಳ ಸೀಳಿನಲ್ಲಿ ಟಿಸಿಲೊಡೆದು, ತಾವಾಗಿ ಬೆಳೆಯುತ್ತಿವೆ. ಇದೆಲ್ಲವುಗಳ ಫಲವಾಗಿ ಇದೀಗ ಬಿಸಿ‌ಆರ್‌ಟಿ ದಟ್ಟ ಅರಣ್ಯವೇ ಆಗಿ ರೂಪು ತಾಳಿದೆ! ಒಂದು ದಿನ ಇದ್ದಕ್ಕಿದ್ದಂತೆ ನವಿಲುಗಳು ಇಲ್ಲಿ ಕಾಣಸಿಕೊಂಡವು! ಇನ್ನೂ ಏನೇನು ಪ್ರಾಣಿ ಪಕ್ಷಿಗಳು ಏಕೆ ಮತ್ತು ಹೇಗೆ ಇಲ್ಲಿಗೆ ಬಂದು ಸೇರುತ್ತವೋ ಆ ನಿಸರ್ಗಕ್ಕೇ ಗೊತ್ತು!
ಕೆಲವೇ ವರ್ಷಗಳ ಹಿಂದೆ ಹಳ್ಳ-ದಿಣ್ಣೆ, ಕಲು-ಬಂಡೆಗಳ ಬಂಜರಾಗಿದ್ದ ಇಲ್ಲಿನ ಭೂಮಿಯಲ್ಲೀಗ ಯಾವ ಭಾಗದಲ್ಲಿ ಮಣ್ಣು ಕೆದಕಿದರೂ ಒಳಗೆ ತೇವಾಂಶದ ನಡುವೆ ಸಣ್ಣ ಎರೆ ಹುಳು ಹಾಗೂ ಕ್ರಿಮಿ ಕೀಟಾದಿಗಳು ಓಡಾಡುವುದು ಕಂಡು ಬರುತ್ತದೆ; ದಟ್ಟವಾದ ‘ಝಿರ್’ ಎನ್ನುವ ನಿತ್ಯ ಹರಿದ್ವರ್ಣದ ಮಳೆ ಕಾಡುಗಳಲ್ಲಿ ಓಡಾಡುತ್ತಿರುವ ಅನುಭವ; ಒಳಭಾಗದಲ್ಲಿ ಒಂದು ರೀತಿ ಮಣ್ಣಿನ ‘ಘಮ್ಮೆನ್ನುವ’ ವಾಸನೆ!

ಜಗತ್ತು- ದೇಶದ ಪಾಲು: ೪ ಲಕ್ಷ ಕೋಟಿ (ಬಿಲಿಯನ್) ವರ್ಷಗಳ ವಿಕಾಸದ ಫಲವಾಗಿ ಇಂದು ಜೀವ ವೈವಿಧ್ಯತೆ ರೂಪುಗೊಂಡಿದೆ ಎಂಬ ಅಂದಾಜಿದೆ. ಭೂಮಿ ಹುಟ್ಟಿದ ನಂತರ ಈಗ್ಗೆ ೬೦೦ ದಶಲಕ್ಷ ವರ್ಷಗಳ ಹಿಂದಿನ ಕಾಲದವರೆಗೂ ‘ಅಮೀಬಾ’ದಂತಹ ಏಕ ಕೋಶ ಜೀವಿಗಳದ್ದೇ ಸಾಮ್ರಾಜ್ಯವಾಗಿತ್ತು; ಕಳೆದ ೫೪೦ ದಶಲಕ್ಷ ವರ್ಷಗಳಿಂದೀಚೆಗೆ ಮಾತ್ರ ಜೀವ ವೈವಿಧ್ಯತೆ ಇತಿಹಾಸ ವೇಗವಾಗಿ ಬೆಳೆದಿದ್ದು, ೩೦೦ ದಶಲಕ್ಷ ವರ್ಷಗಳಿಂದೀಚೆಗಷ್ಟೆ ‘ಆಧುನಿಕ ಜೀವ ವೈವಿಧ್ಯತೆ’ ಕಂಡು ಬಂದಿದೆ ಎಂಬ ಊಹೆ ಇದೆ!
ಈ ಲಕ್ಷ ಕೋಟಿ ವರ್ಷಗಟ್ಟಲೆ ಕಾಲಮಾನದಲ್ಲಿ ಈವರೆಗೆ ೫ ಬಾರಿ ‘ಪ್ರಾಕೃತಿಕ ವಿನಾಶ’ಗಳು ಸಂಭವಿಸಿದ್ದು, ಹಾಲಿ ಜೀವ ವೈವಿಧ್ಯತೆ ಈಗ ೬ನೇ ಸಮೂಹ ವಿನಾಶಕ್ಕೆ ಸಾಕ್ಷಿಯಾಗುತ್ತಿದೆ; ಕ್ರಿ.ಶ. ೧೫೦೦ ರಿಂದೀಚೆಗೆ ಇಂತಹ ೭೮೪ ವಿನಾಶಗಳು ಸಂಭವಿಸಿವೆ ಎಂದು ‘ಪ್ರಾಕೃತಿಕ ಸಂಪನ್ಮೂಲ ಮತ್ತು ಪ್ರಕೃತಿ ಸಂರಕ್ಷಣಾ ಅಂತಾರಾಷ್ಟ್ರೀಯ ಸಂಘಟನೆ’ (ಅಮೆರಿಕ) ದಾಖಲಿಸಿದೆ; ಕಳೆದ ಶತಮಾನದಿಂದೀಚೆಗೆ ೨೦ ಸಾವಿರದಿಂದ ೨ ದಶ ಲಕ್ಷ ಜೀವ ಸಂಕುಲ ನಾಶವಾಗಿವೆಯಂತೆ! ಈಗಿನ ತಿಳಿವಳಿಕೆಯಂತೆ ಪ್ರತಿ ವರ್ಷ ೧,೪೦,೦೦೦ ಜೀವ ಸಂಕುಲ ನಾಶವಾಗುತ್ತಿದೆ; ಪ್ರಸ್ತುತ ವಾದಗಳ ಪ್ರಕಾರ ಈಗಿನ ವಿನಾಶದ ವೇಗವನ್ನು ನೋಡಿದರೆ, ಬಹುತೇಕ ತಳಿಗಳು (ಜೀವ ಸಂಕುಲ) ಭೂಮಿಯಿಂದ ಕಣ್ಮರೆಯಾಗಲು ಇನ್ನು ೧೦೦ ವರ್ಷ ಸಾಕು ಎಂಬ ಆತಂಕವೂ ಇದೆ! ಇಷ್ಟಾದರೂ ಸಹ, ಪ್ರತಿ ವರ್ಷ ಕ್ರಮವಾಗಿ ಸರಾಸರಿ ೫ ರಿಂದ ೧೦ ಸಾವಿರ ಹೊಸ-ಹೊಸ ಜೀವ ಸಂಕುಲಗಳನ್ನು ಸಂಶೋಧಿಸಲಾಗುತ್ತಿದೆ; ಇವುಗಳಲ್ಲಿ ಬಹುತೇಕ ಕೀಟಗಳೇ ಆಗಿವೆ; ಅಲ್ಲದೆ, ಭೂಮಿ ಮೇಲಿನ ಕಷೇರುಕಗಳಲ್ಲಿ ಶೇ.೯೦ ರಷ್ಟನ್ನು ಇನ್ನು ವಿಂಗಡಿಸಿಲ್ಲ!! ಜಗತ್ತಿನ ಜೀವ ವೈವಿಧ್ಯತೆಯಲ್ಲಿ ಒಟ್ಟಾರೆ ಸಸ್ಯ ವರ್ಗದ ಪ್ರಭೇದಗಳು ೨,೮೭,೬೫೫ ಹಾಗೂ ಪ್ರಾಣಿ ವರ್ಗ ೧೨,೫೦,೦೦೦ ಸೇರಿ ಒಟ್ಟಾರೆ ೧೫,೩೭,೬೫೫ ಜೀವಿಗಳಿವೆ ಎಂಬ ಅಂದಾಜಿದೆ!

ಪ್ರಾಕೃತಿಕ ನಿಯಮದಂತೆ ಜೈವಿಕ ಸಮತೋಲನಕ್ಕಾಗಿ ಭೂಮಿಯ ಮೇಲೆ ಶೇ. ೩೩ ರಷ್ಟು ಅರಣ್ಯ ಪ್ರದೇಶ ಇರಲೇಬೇಕು; ಹಿಂದೆ ಇತ್ತು. ಆದರೆ ದುರದೃಷ್ಟವಶಾತ್ ದುರಾಸೆಯ ಮಾನವನ ಅರಣ್ಯ ನಾಶ ಚಟುವಟಿಕೆಯಿಂದಾಗಿ ಇದೀಗ ಈ ಪ್ರಮಾಣ ಶೇ.೧೨ಕ್ಕೆ ಕುಸಿದಿದೆ. ಕಾಡುಗಳನ್ನು ‘ಸಂರಕ್ಷಿಸಲು’ ಅರಣ್ಯ ಇಲಾಖೆ ಕೋಟ್ಯಾಂತರ ರೂ. ಖರ್ಚು ಮಾಡುತ್ತದೆ; ಅರಣ್ಯ- ಅದರಲ್ಲೂ ನೈಸರ್ಗಿಕ ಅರಣ್ಯವನ್ನು ಹೇಗೆ ಬೆಳೆಸಿ ಸಂರಕ್ಷಿಸಬೇಕೆಂಬುದಕ್ಕೆ ಬಹುಷಃ ಈ ಬಿ.ಸಿ.ಆರ್.ಟಿ.ಯೇ ಮಾದರಿ.
ಭೂ ಮಂಡಲದಲ್ಲಿ ಸ್ಥೂಲವಾಗಿ ಶೀತ ವಲಯಗಳು ಹಾಗೂ ಸಮ ಶೀತೋಷ್ಣ ವಲಯಗಳು ತಲಾ ೨ ಹಾಗೂ ೧ ಉಷ್ಣ ವಲಯ ಇವೆ ಎಂಬುದನ್ನು ಪಠ್ಯದಲ್ಲೇ ಓದಿದ್ದೇವೆ. ಭಾರತದ ಮಧ್ಯೆ ಹಾದು ಹೋಗುವ ‘ಕರ್ಕಾಟಕ ಸಂಕ್ರಾಂತಿ ವೃತ್ತ ರೇಖೆ ಹಾಗೂ ಸಮಭಾಜಕ ವೃತ್ತದಿಂದ ದಕ್ಷಿಣಕ್ಕಿರುವ ‘ಮಕರ ಸಂಕ್ರಾಂತಿ ವೃತ್ತ ರೇಖೆಗಳ ನಡುವಣ ಉಷ್ಣ ವಲಯವೇ ಜಗತ್ತಿನ ಅತ್ಯಂತ ಹೆಚ್ಚು ಜೀವ ವೈವಿಧ್ಯತೆ ಹೊಂದಿರುವ ತಾಣವಾಗಿದೆ. ಈ ವಲಯದಲ್ಲಿ ಒಟ್ಟಾರೆ ೩೪ ‘ತೀಕ್ಷ್ಣ ಜೀವ ವೈವಿಧ್ಯ’ (ಅಪಾಯದಲ್ಲಿರುವ ‘ಹಾಟ್ ಸ್ಪಾಟ್’) ವಿಭಾಗಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ೪ ಭಾರತದಲ್ಲಿವೆ! ಅವುಗಳೆಂದರೆ, ಹಿಮಾಲಯ, ಪಶ್ಚಿಮ ಘಟ್ಟಗಳು/ಶ್ರೀಲಂಕಾ, ಇಂಡೋ ಬರ್ಮ ಮತ್ತು ಸೂಂದ ಲ್ಯಾಂಡ್ ಎಂದು ಭೌಗೋಳಿಕವಾಗಿ ಗುರುತಿಸಲಾಗಿದೆ.

ಭೂ ತಾಪಮಾನ ಏರಿಕೆಗೆ ಕಾರಣವಾಗಿರುವ ಮಾನವನ ಮಿತಿ ಮೀರಿದ ದುರಾಸೆಯ ಹಾಗೂ ಐಷಾರಾಮಿ ಚಟುವಟಿಕೆಗಳಿಂದ ಇಂಗಾಲದ ಡೈಯಾಕ್ಸೈಡ್ ಪ್ರಮಾಣ ಹೆಚ್ಚಾಗಿ ಭೂಮಿಯ ಉಷ್ಣತೆ ಒಂದೇ ಸಮನೆ ಏರುತ್ತಿದೆ. ಶೀತ ಪ್ರದೇಶದ ಹಿಮ ಗಡ್ಡೆಗಳು ಕರಗುತ್ತಾ ಸಮುದ್ರದ ಮಟ್ಟ ಏರುತ್ತದೆ. ‘ಹಸಿರು ಮನೆ’ ಪರಿಣಾಮವಾಗಿ ಭೂ ತಾಪಮಾನ ಇನ್ನು ಅರ್ಧ ಡಿಗ್ರಿ ಸೆಂಟಿಗ್ರೇಡ್‌ನಷ್ಟು ಏರಿದರೂ ಭಾರತದಲ್ಲಿ ಗೋಧಿ ಇಳುವರಿ ಶೇ. ೧೭ ರಷ್ಟು ಕಡಿಮೆಯಾಗಲಿದೆ.೧೫೦ ವರ್ಷಗಳಲ್ಲಿ ಅತಿ ಬೇಸಿಗೆಯ ೧೧ ಋತುಗಳು ೧೯೯೫ ರಿಂದೀಚೆಗೇ ದಾಖಲಾಗಿವೆ. ಹಿಮಾಲಯದ ಹಿಮ ಝರಿಗಳು ೨೦೩೫ ರ ವೇಳೆಗೆ ಪೂರ್ಣ ಬತ್ತಲಿವೆ. ಕಳೆದ ೧ ದಶಕದಲ್ಲಿ ನಮ್ಮ ಪಶ್ಚಿಮ ಘಟ್ಟಗಳಲ್ಲಿ ಕಣ್ಮರೆಯಾಗಿರುವ ಸಸ್ಯ-ಪ್ರಾಣಿ ವರ್ಗ ವೈವಿಧ್ಯತೆ, ಕಳೆದ ೧೦೦ ವರ್ಷಗಳಲ್ಲಿ ಆಗಿರುವ ವಿನಾಶಗಳಿಗಿಂತಲೂ ಅಧಿಕವೆಂದು ಕೆಲವು ಅಂಕಿ ಅಂಶ ಹೇಳಿವೆ!
ಬಿಸಿಯಾಗುತ್ತಿರುವ ಭೂಮಿಯ ತಾಪವನ್ನು ಭಾಷಣಗಳ ಉಗುಳಿನಿಂದ ತಂಪು ಮಾಡಲು ಖಂಡಿತ ಸಾಧ್ಯವಿಲ್ಲ. ಹೀಗಾಗಿ ಇಂತಹ ಬಿ.ಸಿ.ಆರ್.ಟಿ.ಗಳು ಆಯಾ ಪ್ರದೇಶದ ಭೌಗೋಳಿಕ ಹವಾಗುಣ, ಮಣ್ಣಿನ ಗುಣಕ್ಕೆ ತಕ್ಕಂತೆ ಪ್ರತಿ ಹಳ್ಳಿಗಳಲ್ಲೂ ರೂಪುಗೊಳ್ಳಬೇಕು. ಆಗ ಮಾತ್ರ ಜೀವ ವೈವಿಧ್ಯತೆ ಉಳಿದು- ಬೆಳೆದು, ಭೂಮಿ ತಂಪಾಗಿ, ‘ಜೀವ ವೈವಿಧ್ಯ ಚಕ್ರ’ ಸಮತೋಲನಗೊಂಡು, ನಾವು ನೀವುಗಳೂ ಸಹ ಉಳಿಯಲು ಸಾಧ್ಯವಾಗುತ್ತದೆ.

ನಮ್ಮ ದೇಶದಲ್ಲಿ ಜೀವ ವೈವಿಧ್ಯತೆಯ ಒಟ್ಟಾರೆ ೧೦ ಭೌಗೋಳಿಕ ವಲಯಗಳಿವೆ. ಅವುಗಳು- ನಿತ್ಯ ಹರಿದ್ವರ್ಣದ ಮಳೆ ಕಾಡುಗಳು ಇರುವ ಮಹಾರಾಷ್ಟ್ರ, ಕರ್ನಾಟಕದ ಪಶ್ಚಿಮ ಘಟ್ಟಗಳು, ತಮಿಳುನಾಡು ಮತ್ತು ಕೇರಳ ದಕ್ಷಿಣ ಭಾರತದಲ್ಲಿವೆ. ಉಳಿದ ೪ ವಲಯಗಳು ಬಂಗಾಳ ಕೊಲ್ಲಿಯ ಅಂಡಮಾನ್ ನಿಕೋಬಾರ್ ದ್ವೀಪಗಳು ಹಾಗೂ ಘಟ್ಟ ಪ್ರದೇಶ ಸೇರಿದಂತಿರುವ ಇಡೀ ಪಶ್ಚಿಮ ಬಂಗಾಳದ ಉತ್ತರ ವಲಯದಲ್ಲೇ ಇವೆ. ಉಳಿದ ಮತ್ತೊಂದು ಹಿಮಾಲಯ.

ವಿಶೇಷಗಳು: ಜೀವ ವೈವಿಧ್ಯತೆ ಬೆಳೆಸುವುದಷ್ಟಕ್ಕೇ ಬಿ.ಸಿ.ಆರ್.ಟಿ. ಸೀಮಿತವಾಗಿಲ್ಲ. ಇಲ್ಲಿ ಕೆಲವು ವಿಶೇಷಗಳೂ ಇವೆ! ನಿಸರ್ಗ ಜಾಗೃತಿ ಉಂಟುಮಾಡುವ ಪ್ರಯತ್ನವಾಗಿ ಇಲ್ಲಿನ ಪ್ರತಿ ಮರ-ಗಿಡಗಳ ಮೇಲೆ ಒಂದೊಂದು ಪರಿಸರ ಪ್ರಿಯ ನಾಣ್ಣುಡಿಗಳನ್ನು ಬರೆದು ತೂಗು ಹಾಕಲಾಗಿದೆ. ಅಲ್ಲದೆ ‘ಪರಿಸರ ಪ್ರಿಯ’ ವಿವಾಹಗಳು ಇಲ್ಲಿ ನಡೆಯುತ್ತಿವೆ! ಅನುಗನಾಳು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನವ ವಧು-ವರರು ಇಲ್ಲಿಗೆ ಬಂದು ಅರಣ್ಯದ ನಡುವೆ ವಿವಾಹವಾಗಿ ತಾವೂ ಸಹ ಒಂದು ಗಿಡ ನೆಟ್ಟು ಹೋಗುತ್ತಾರೆ! ೨೦೦೪ ರಿಂದ ಕೃಷ್ಣಮೂರ್ತಿ ಈ ಪದ್ಧತಿ ಆರಂಭಿಸಿದ್ದಾರೆ. ಅಲ್ಲದೆ ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಹಬ್ಬಗಳನ್ನು ಇಲ್ಲಿನ ಪರಿಸರದಲ್ಲಿ ಆಚರಿಸಲಾಗುತ್ತದೆ.
ಬಿ.ಸಿ.ಆರ್.ಟಿ.ಯಲ್ಲೇ ಒಂದು ನೈಸರ್ಗಿಕ ಕೃಷಿಯ ಬ್ಲಾಕ್, ಹೂ ತೋಟ, ಕೃಷಿ ಅರಣ್ಯ, ಔಷಧಿ ವನ, ೫ ಹಂದಿ ಸಾಕಬಹುದಾದ ‘ಹಂದಿ ಸಾಕಾಣಿಕೆ ಘಟಕ’ ಹಾಗೂ ಎರೆಹುಳು ಬ್ಲಾಕ್ ಸಹ ಇದೆ. ಇಲ್ಲಿನ ಕೃತಕ ನೀರು ಹಾಸಿನ ಅಜೋಲ ಜಾತಿಯ ಅಪರೂಪದ ಪಾಚಿಯನ್ನೂ ಅರೆ ನೆರಳಿನಲ್ಲಿ ಬೆಳೆಸಲಾಗಿದೆ. ಕೃಷಿ ಅರಣ್ಯದಲ್ಲಿ ಕಾಫಿ ಗಿಡಗಳೂ ಇವೆ. ಹಾಸನ-ಬೇಲೂರು ರಸ್ತೆ ಕ್ರಾಸ್‌ನಿಂದ ಅನುಗನಾಳಿಗೆ ಬರುವ ಮುಖ್ಯ ರಸ್ತೆಯುದ್ದಕ್ಕೂ ಎರಡೂ ಬದಿ ಸಾಲು ಮರಗಳನ್ನು ನೆಡಲಾಗಿದೆ.

ಬಿಸಿ‌ಆರ್‌ಟಿಗೆ ಎದುರು ರಸ್ತೆಯ ಆಚೆ ಬದಿ ಇದಕ್ಕೇ ಸೇರಿದ ಔಷಧಿ ವನವಿದೆ. ಇಲ್ಲಿ ಆಯುರ್ವೇದದ ಸುಮಾರು ೬೦ ಜಾತಿಯ ಚಿತ್ರ ವಿಚಿತ್ರ ವಿಸ್ಮಯಕಾರಿ ಔಷಧಿ ಗಿಡಗಳನ್ನು ಬೆಳೆಸಲಾಗಿದೆ. ೨ ತಿಂಗಳಿಗೊಮ್ಮೆ ಇಲ್ಲಿ ಪರಂಪರಾಗತ ನಾಟಿ ವೈದ್ಯರ ಸಭೆ ನಡೆಸಿ ಅವರಿಂದ ವಿವರಗಳನ್ನು ಸಂಗ್ರಹಿಸುತ್ತಿರುವುದು ಇಲ್ಲಿನ ಮತ್ತೊಂದು ವಿಶೇಷ! ಶತಮಾನಗಳಷ್ಟು ಹಿಂದಕ್ಕೆ ಹೋದಾಗ, ಪ್ರಾಚೀನ ಪುರಾತನ ಆಯುರ್ವೇದದ ಪೂಜ್ಯ ಗುರುಗಳಲ್ಲಿ ಒಬ್ಬರಾದ ಆತ್ರೇಯ ಮುನಿಯ ಬಳಿ ಶಿಷ್ಯರಾಗಿದ್ದ ಪ್ರಾಚೀನ ಪ್ರಖ್ಯಾತ ವೈದ್ಯ ‘ಜೀವಕ’ರು, ‘ಏನು ಗುರುದಕ್ಷಿಣೆ ನೀಡಲಿ’ ಎಂದು ಗುರುವನ್ನು ಕೇಳಿದರಂತೆ; ಆಗ ಆತ್ರೇಯರು, ‘ಈ ಜಗತ್ತಿನಲ್ಲಿ ಔಷಧೀಯ ಗುಣವಿಲ್ಲದ ಒಂದು ಸಸ್ಯವನ್ನು ಹಿಡಿದು ತಾ’ ಎಂದು ಅಪ್ಪಣೆ ಕೊಟ್ಟರಂತೆ! ಇಡೀ ಭೂಮಂಡಲ ಸುತ್ತಿ ಸುಳಿದರೂ ಅಂತಹ ಗಿಡ ಕಣ್ಣಿಗೆ ಕಾಣದೆ ಜೀವಕರು ಹಿಂದಿರುಗಿ ‘ನಾನು ಸೋತೆ’ ಎಂದು ತಲೆ ತಗ್ಗಿಸಿದರಂತೆ! ಆಗು ಆತ್ರೇಯರು, ‘ಶಹಬ್ಬಾಸ್! ಈ ಉತ್ತರವೇ ನೀನು ನನಗೆ ಕೊಡಬೇಕಾದ ಗುರು ದಕ್ಷಿಣೆಯಾಗಿತ್ತು; ಇನ್ನು ಹೋಗಿ ಬಾ’ ಎಂದು ಕಳುಹಿಸಿಕೊಟ್ಟರಂತೆ!

ಮಳಲಿಗೌಡರ ಮತ್ತೊಂದು ಕನಸಾಗಿದ್ದ ‘ಡಿ.ಎನ್.ಎ. (ವಂಶವಾಹಿ-ಜೀನ್) ಮಂದಿರ’ ನಿರ್ಮಿಸಲು ಸಂಕಲ್ಪಿಸಲಾಗಿದೆ. ಔಷಧಿ ವನಕ್ಕೆ ಹೊಂದಿಕೊಂಡಂತೆ ೨೦೦೦ ಜ.೧ ರಂದು ಶಿಲಾನ್ಯಾಸವನ್ನೂ ಮಾಡಲಾಗಿದೆ. ಅದರ ರೂಪುರೇಷೆ ಸಿದ್ದವಾಗುತ್ತಿದೆ!!
ಊರಿನ ಕೆರೆಯ ಬಳಿ ಪಕ್ಷಿ ಧಾಮವೊಂದನ್ನೂ ಮಾಡುವ ಯೋಜನೆಯೂ ಕೃಷ್ಣಮೂರ್ತಿಗಳಿಗಿದೆ. ಕೆರೆ ಹೂಳು ಎತ್ತಿಸಿ ಬೇಸಿಗೆಯಲ್ಲೂ ಕೆರೆಯಲ್ಲಿ ನೀರು ಹಿಡಿದಿಟ್ಟುಕೊಂಡರೆ ವಿವಿಧ ಜಾತಿಯ ಪಕ್ಷಿಗಳು ಬರುತ್ತವೆ. ಈಗಾಗಲೇ ಇಲ್ಲಿ ೨೪ ಜಾತಿಯ ಪಕ್ಷಿಗಳು ಇವೆ.
ಊರಿನ ಕೆರೆಯ ಹೂಳು ತೆಗೆಯುವಾಗ ಭೂಯಿಯೊಳಗೆ ಸಿಕ್ಕಿದ ಕೆಲವು ಐತಿಹಾಸಿಕ ಸ್ಮಾರಕಗಳನ್ನು ಇಲ್ಲಿ ತಂದಿಟ್ಟು ರಕ್ಷಿಸಲಾಗುತ್ತಿದೆ. ಬಿ.ಸಿ.ಆರ್.ಟಿ. ಸರ್ಕಾರಿ ಭೂಮಿಯಾಗಿದ್ದು, ಇಲ್ಲಿ ಇದೀಗ ಬೆಳೆದು ನಿಂತಿರುವ ಅಸಂಖ್ಯ ಗಿಡ ಮರಗಳ ಸಮೀಕ್ಷೆ ಇನ್ನೂ ಆಗಿಲ್ಲ. ಈ ಭೂ ಪ್ರದೇಶವನ್ನು ಬಿ.ಸಿ.ಆರ್.ಟಿ.ಗೆ ಮಂಜೂರು ಮಾಡಿಕೊಡಬೇಕೆಂದೂ ಕೋರಲಾಗಿದೆ. ಬಿ.ಸಿ.ಆರ್.ಟಿ. ಸುತ್ತಮುತ್ತೆಲ್ಲ ಗ್ರಾಮಸ್ಥರ ಕೃಷಿ ಜಮೀನುಗಳು ಇದ್ದರೂ, ಯಾರೂ ಸಹ ಈ ಪ್ರದೇಶಕ್ಕೆ ಒತ್ತುವರಿ ಸೇರಿದಂತೆ ಯಾವುದೇ ಹಾನಿ ಮಾಡುವುದಿಲ್ಲ!
ಸಾಧನೆಗೆ ಸಂದ ಗೌರವ: ಇಷ್ಟು ಸಾಧನೆ ಮಾಡಿದ ಮೇಲೆ ಅದು ‘ಎಲೆ ಮರೆಯ ಕಾಯಾಗಲು’ ಹೇಗೆ ಸಾಧ್ಯ? ಈಗ ಪ್ರತಿ ತಾಲ್ಲೂಕಿಗೊಂದು ಇರುವಂತೆ, ಅನುಗನಾಳು ಗ್ರಾಮವನ್ನು ಸಹ ರಾಜ್ಯ ಸರ್ಕಾರ ಬಿ.ಸಿ.ಆರ್.ಟಿ.ಯಿಂದಾಗಿ ಗುರುತಿಸಿ ‘ಸಾವಯವ ಗ್ರಾಮ’ ಎಂದು ಘೋಷಿಸಿದೆ. ನೆಲ-ಜಲ ತಜ್ಞ ಶ್ರೀ ಪಡ್ರೆ ಅವರಂತಹ ಅನೇಕಪರಿಸರ ಪ್ರೇಮಿ ಗಣ್ಯರು ಇಲ್ಲಿಗೆ ಭೇಟಿ ನೀಡಿ, ‘ಶಹಬ್ಬಾಸ್’ ಎಂದು ಕೃಷ್ಣಮೂರ್ತಿ ಭುಜ ತಟ್ಟಿದ್ದಾರೆ.

ಇದೆಲ್ಲಕ್ಕಿಂತ ಮಿಗಿಲಾಗಿ ರಾಜ್ಯ ಸರ್ಕಾರ ೧ ಲಕ್ಷ ರೂ. ಮೊತ್ತದ ೨೦೦೬-೦೭ ರ ‘ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪರಿಸರ ಪ್ರಶಸ್ತಿ’ಯನ್ನು ಬಿ.ಸಿ.ಆರ್.ಟಿ.ಗೆ ನೀಡಿ ಗೌರವಿಸಿದೆ.
‘ನನಗೇನು ಲಾಭ’ ಎಂಬ ಸ್ವಾರ್ಥವನ್ನು ಬದಿಗಿಟ್ಟು ನಿಸರ್ಗಕ್ಕಾಗಿಯೆಂದೇ ಪರಿಸರ ಸಂರಕ್ಷಣೆ ಮಾಡಿದರೆ, ನೈಸರ್ಗಿಕವಾಗಿಯೂ ಕಾಡು ಕಟ್ಟಬಹುದು ಎಂಬುದನ್ನು ಈ ‘ಅಪೂರ್ವ ಸಹೋದರರು’ ಸಾಬೀತುಪಡಿಸಿದರು. ‘ಕಾಂಕ್ರೀಟ್ ಕಾಡು’ ಕಟ್ಟುವವರೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಸಹಜ ಅಗತ್ಯವೆನಿಸಿದ ಪ್ರಾಕೃತಿಕ ಕಾಡು ಕಟ್ಟುವವರು ಎಷ್ಟು ಮಂದಿ ಸಿಕ್ಕಾರು? ಎಲ್ಲಾದರೂ ಜೀವ ವೈವಿಧ್ಯತೆ ಕಾಣಬೇಕೆಂದರೆ ವೈವಿಧ್ಯಮಯ ಪೂರಕ ಗಿಡಗಳನ್ನು ನೆಡಬೇಕಷ್ಟೆ. ಅಷ್ಟು ಕಷ್ಟಪಟ್ಟು ನೈಸರ್ಗಿಕ ಅರಣ್ಯ ಬೆಳೆಸಿದ ಡಾ. ಮಳಲಿಗೌಡರೇ, ಈಗ ಅದನ್ನು ಜತನದಿಂದ ರಕ್ಷಿಸುತ್ತಿರುವ ಕೃಷ್ಣಮೂರ್ತಿಗೆ ಸ್ಫೂರ್ತಿಯಾಗಿದ್ದಾರೆ.

ಮಾನವನಿಗೆ ಏನೇ ಬುದ್ಧಿ ಶಕ್ತಿ, ವಿವೇಚನಾ ಶಕ್ತಿ ಇದ್ದರೂ ಈ ಪ್ರಕೃತಿಯ ಮುಂದೆ ತಾನೊಂದು ಹುಲ್ಲು ಕಡ್ಡಿಗೆ ಸಮ ಮತ್ತು ತನಗೆ ಅಂತಹ ವಿಶೇಷ ಯೋಗ್ಯತೆ ಇಲ್ಲ; ನೆಲ-ಜಲ ಹಾಗೂ ವಾಯು ಮಂಡಲದ ನಡುವೆ ಸುತ್ತುವ ಈ ‘ಜೀವ ವೈವಿಧ್ಯ ಚಕ್ರ’ದಲ್ಲಿ ಸಮತೋಲನ ಕಾಯ್ದುಕೊಳ್ಳದಿದ್ದರೆ ತನಗೆ ಉಳಿಗಾಲವಿಲ್ಲ ಎಂಬ ಪರಮ ಸತ್ಯಗಳು ಅವನಿಗೆ ನಿಖರವಾಗಿ ಮನದಟ್ಟಾಗಬೇಕು. ಅಲ್ಲಿಯವರೆಗೆ ಆತ ಈ ಜಗತ್ತು ಇರುವುದು ತಾನೊಬ್ಬ ಅನುಭವಿಸಲು ಮಾತ್ರ ಎಂಬ ‘ವಿನಾಶಕಾಲೇ ವಿಪರೀತ ಬುದ್ಧಿ’ ಪ್ರದರ್ಶಿಸುವುದನ್ನು ಮುಂದುವರೆಸುತ್ತಲೇ ಇರುತ್ತಾನೆ.

6.17.2008

ಚಾಪೆ, ರಂಗೋಲಿ ಕೆಳಗೆ ತೂರುವವರ ನಡುವೆ ಕಾಪಿರೈಟೂ, ಕಾನೂನೂ...

ಬರಹಗಾರರು-ವಿಶಾಲಮತಿ, `ಪುಸ್ತಕ ಪ್ರೀತಿ' ಬ್ಲಾಗ್

ಅಂತರ್ಜಾಲದ ಓದುಗರಿಗೆ ಕನ್ನಡ ಪುಸ್ತಕಗಳ ಬಗೆಗಿನ ಪ್ರೀತಿಯನ್ನು ಬೆಳೆಸಬೇಕೆಂಬ ಉದ್ದೇಶದಿಂದ ಬ್ಲಾಗ್ ಪ್ರಪಂಚದಲ್ಲಿ ಕಾಲಿಟ್ಟ ನನಗೆ, ಈ ಸಾಹಸ (ಹೊಸದಾಗಿ ಮಾಡುವುದೆಲ್ಲವೂ ಸಾಹಸವೇ ಅಲ್ಲವೇ?) ಪ್ರಾರಂಭಿಸಿದ ಹೊಸ ಹೊಸದರಲ್ಲೇ, ಕನ್ನಡಸಾಹಿತ್ಯ.ಕಾಂ ನೇತೃತ್ವದಲ್ಲಿ ನಡೆದ ‘ಅಂತರ್ಜಾಲ ಬಗೆಗಿನ ಈ ಕಾರ್ಯಕ್ರಮ ತುಂಬಾ ಖುಷಿ ಕೊಟ್ಟಿತು.
‘ಅಂತರ್ಜಾಲ ಎಂದೊಡನೆ ಇಂಗ್ಲೀಷ್ ಎಂದುಕೊಳ್ಳದಂತೆ ಅಪ್ಪಟ ಕನ್ನಡದಲ್ಲೇ ನಡೆದ ಕಾರ್ಯಕ್ರಮವಾಗಿ ಇನ್ನಷ್ಟು ಖುಷಿ ಕೊಟ್ಟಿತು.
ಕನ್ನಡ ಸಾಹಿತ್ಯ.ಕಾಂ ತನ್ನ ೮ ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ಸಂದರ್ಭಕ್ಕನುಗುಣವಾಗಿ ಅಂತರ್ಜಾಲ (ಬ್ಲಾಗ್) ನಲ್ಲಿ ಕನ್ನಡದ ಬಳಕೆಯ ಆವಶ್ಯಕತೆ ಹಾಗೂ ಈ ನಿಟ್ಟಿನಲ್ಲಿ ಅದು ಎದುರಿಸುತ್ತಿರುವ ಸವಾಲುಗಳನ್ನು ವಿಶ್ಲೇಷಿಸಲೆಂದೇ ನಡೆಸಿದ ಕಾರ್ಯಕ್ರಮ ಇದು.

ಇದರಲ್ಲಿ ಅಂತರ್ಜಾಲದೊಡನೆ ಪ್ರಾದೇಶಿಕ ಭಾಷೆಗಳು ಅದರಲ್ಲೂ ಕನ್ನಡ ಸಂಸ್ಕೃತಿ, ಪುಸ್ತಕೋದ್ಯಮ, ಸಂಗೀತ, ಸಿನೆಮಾ ಹಂಚಿಕೆಗಳು ತಳುಕು ಹಾಕಿಕೊಂಡಿವೆ. ಅಂತರ್ಜಾಲದಿಂದಾಗಿ ಈ ಎಲ್ಲಾ ಅಂದರೆ ಕನ್ನಡ ಸಂಸ್ಕೃತಿಗೆ, ಪುಸ್ತಕೋದ್ಯಮಕ್ಕೆ, ಸಂಗೀತಕ್ಷೇತ್ರ ಹಾಗೂ ಸಿನೆಮಾಕ್ಷೇತ್ರಕ್ಕೆ ಧಕ್ಕೆಯಾಗಬಹುದು. ಕಾಪಿರೈಟ್‌ನ ಸರಿಯಾದ ಜಾರಿಯಿಲ್ಲದೇ ಅಂತರ್ಜಾಲದಲ್ಲಿ ಪ್ರಕಟಿಸಲ್ಪಟ್ಟ ಪುಸ್ತಕ, ಸಂಗೀತ, ಸಿನೇಮಾ ಮುಂತಾದವುಗಳಿಂದಾಗಿ ಆಯಾ ಉದ್ಯಮಗಳಲ್ಲಿ ಈಗಾಗಲೇ ದುಡಿಯುತ್ತಿರುವವರ ಉದ್ಯಮಕ್ಕೆ ಧಕ್ಕೆ ಒದಗಬಲ್ಲದು ಎಂಬ ಆತಂಕ ಒಂದು ಅಭಿಪ್ರಾಯವಾದರೆ ಈ ಅಂತರ್ಜಾಲವನ್ನು ಈ ಉದ್ದಿಮೆಗಾಗಿಯೇ ಉಪಯೋಗಿಸಿಕೊಳ್ಳಬಹುದಾದ ಸಾಧ್ಯತೆಯ ಆಶಯ ಇನ್ನೊಂದು ಅಭಿಪ್ರಾಯವಾಗಿ ಇಲ್ಲಿ ಹೊರಹೊಮ್ಮಿತು.

ಕನ್ನಡ ಸಾಹಿತ್ಯ.ಕಾಂ ಬಳಗದವರು ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ವಿವಿದ ಕ್ಷೇತ್ರಗಳ ಮಹಾನುಭಾವರು ಪ್ರಬಂಧ ಮಂಡಿಸಿದರು.

ಪ್ರಾರಂಭದಲ್ಲಿ ಅಂತರ್ಜಾಲದ ಸಂದರ್ಭದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಸೃಜನಶೀಲತೆಯ ಗತಿ ಸ್ಥಿತಿ, ಸವಾಲುಗಳು ಪ್ರಬಂಧ ಮಂಡಿಸಿದ ಪ್ರಕಾಶ್ ಬೆಳವಾಡಿಯವರು.

ಅಂತರ್ಜಾಲ ಒಂದು ಅದ್ಬುತವಾದ ಮಾದ್ಯಮ. ಇದು ರುಚಿ ಮತ್ತು ಸ್ಪರ್ಶ ಎರಡನ್ನು ಬಿಟ್ಟು ಇನ್ನೆಲ್ಲಾ ರೀತಿಯ (ದೃಶ್ಯ, ಶೃವ್ಯ ಇತ್ಯಾದಿ) ಆನಂದ ನಮ್ಮದಾಗಿಸುತ್ತದೆ. ಇದೊಂದು ಅದ್ಭುತ ಮಾದ್ಯಮ ಯಾಕೆಂದರೆ ಇದಕ್ಕೆ ಅಕ್ಷರಸ್ತರು ಅನಕ್ಷರಸ್ತರು ಎಂಬ ಬೇದವಿಲ್ಲ. ಇನ್ನು ಮುಂದೆ ಅನಕ್ಷರಸ್ತರೂ ತಮಗೆ ಬೇಕಾದ ವಿಷಯದಲ್ಲಿ ಜ್ಞಾನವನ್ನು ಇತರರ ಸಹಾಯವಿಲ್ಲದೆ ಪಡೆಯಬಲ್ಲರು. ಹೀಗೆ ಅಂತರ್ಜಾಲದಿಂದ ಸಮಾಜಕ್ಕೆ ಆಗುವ ಉಪಯೋಗಗಳನ್ನು ತಿಳಿಸುತ್ತಾ, ಅಂತರ್ಜಾಲದ `content free' ವ್ಯವಸ್ಥೆಯು ‘ `content producer' ಗಳಿಗೆ ಜಾಹೀರಾತುಗಳಿಂದ ಸಂಭಾವನೆ ಪಡೆಯುವಂತೆ ಆಗಬಹುದು. ಇದರಿಂದ ‘person to person' ಬದಲಾಗಿ `person to community' ವ್ಯವಸ್ಥೆ ನಿರ್ಮಾಣವಾಗುತ್ತದೆ ಎಂದರು.

ಪ್ರಾದೇಶಿಕ ಭಾಷೆಯಾದ ಕನ್ನಡದ ಲಿಪಿಯು ಕಂಪ್ಯೂಟರ್‌ನಲ್ಲಿ ಅಳವಡಿಸಲು ಕಷ್ಟಸಾಧ್ಯವಾದದ್ದರಿಂದ ಕನ್ನಡ ಲಿಪಿಯನ್ನು ನವೀಕರಿಸಬೇಕು. ಕನ್ನಡ ಲಿಪಿಯು linear ಆಗಿದ್ದಲ್ಲಿ ಇದು ಸುಲಭವಾಗಿರುತ್ತಿತ್ತು. ಯಾವುದೇ ಭಾಷೆಯು ನವೀಕರಣಕ್ಕೊಳಗಾಗಲಾರದ ಮಡಿವಂತಿಕೆ ಮೆರೆದರೆ ಅದು ಉಳಿಯುವುದಾಗಲೀ ಬೆಳೆಯುವುದಾಗಲೀ ಸಾಧ್ಯವಿಲ್ಲ. ಲಿಪಿಯನ್ನು ನವೀಕರಿಸಿದಲ್ಲಿ ಅದು ಕನ್ನಡ ಸಂಸ್ಕೃತಿಗೆ ಧಕ್ಕೆ ಎಂದು ತಿಳಿಯಬೇಕಾಗಿಲ್ಲ. ಒಂದು ಭಾಷಾ ಸಂಸ್ಕೃತಿಯು ಬರಿದೇ ಅದರ ಲಿಪಿಯಲ್ಲಿಲ್ಲ. ಕನ್ನಡ ಲಿಪಿಗೆ ಹೊರತಾದ ಲಿಪಿಯಿಂದ ದಾಖಲಿಸಲಾಗದ ಎಷ್ಟೋ ಭಾವಗಳು ಕನ್ನಡ ಸಂಸ್ಕೃತಿಗೆ ಹೊರತು ಎಂದು ತಿಳಿಯಬೇಕಾಗಿಲ್ಲ.

ಮುಂದಿನ ಪ್ರಬಂಧ ವಿಷಯ ಅಂತರ್ಜಾಲ - ಪುಸ್ತಕೋದ್ಯಮ. ಪ್ರಬಂಧಕಾರ ಪ್ರಕಾಶ್ ಕಂಬತ್ತಳ್ಳಿ ಯವರು ಅಂತರ್ಜಾಲದಲ್ಲಿ ಪುಸ್ತಕದ ವಿತರಣೆ ಕುರಿತು ಆತಂಕ ವ್ಯಕ್ತಪಡಿಸಿದರು. ಇದರಿಂದ ಪುಸ್ತಕೋದ್ಯಮಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದರು. ಅವರು ಕನ್ನಡ ಸಂಸ್ಕೃತಿ ಬೆಳೆಯಬೇಕೆಂದರೆ ಶಾಲೆಗಳಲ್ಲಿ ೧ ರಿಂದ ೧೦ ನೇ ತರಗತಿಯವರೆಗೂ ಕನ್ನಡ ಒಂದು ವಿಷಯವಾಗಿ ಕಡ್ಡಾಯವಾಗಬೇಕು ಎಂದರು.

ಮುಂದಿನ ಪ್ರಬಂಧ ವಿಷಯ ಅಂತರ್ಜಾಲ - ಸಂಗೀತ ಹಂಚಿಕೆ. ಪ್ರಬಂಧಕಾರ ಲಹರಿ ವೇಲು ಎಂದೇ ಪ್ರಖಾತರಾದ ತುಳಸಿರಾಮ್ ನಾಯ್ಡು ರವರು ಸಹ ಸಂಗೀತ ಲೋಕದ ‘ ಛಿoಟಿಣeಟಿಣ ಠಿಡಿoಜuಛಿeಡಿ ಗಳಿಗೆ ತಮ್ಮ ಕೆಲಸದಲ್ಲಿ ಆಸಕ್ತಿಕಳೆದುಕೊಳ್ಳಬಹುದಾದಂತಹ ಪರಿಸ್ಥಿತಿ ಉದ್ಭವವಾಗಬಹುದು ಎಂಬ ಆತಂಕ ತೋರಿದರು.

ಕೊನೆಯ ಪ್ರಬಂಧದ ವಿಷಯ ಅಂತರ್ಜಾಲ-ಸಿನೆಮಾ. ಪ್ರಬಂಧಕಾರ ಖ್ಯಾತ ನಿರ್ದೇಶಕ ಗುರುಪ್ರಸಾದ್ ಕೆ.ಆರ್. ಅವರು ‘content'ನಲ್ಲಿ ಬಲವಿದ್ದರೆ ಅಂತರ್ಜಾಲದಿಂದ ಸಿನೆಮಾ ಪ್ರಪಂಚಕ್ಕೆ ಯಾವ ತೊಂದರೆಯೂ ಬರಲಾರದು ಎಂಬ
ಭರವಸೆಯ ಮಾತನಾಡಿದರು.

ಎಲ್ಲಾ ಪ್ರಬಂಧಗಳ ಮಂಡನೆ ನಂತರ ಪ್ರಶ್ನೋತ್ತರಗಳಿಗೆ ಅವಕಾಶವಿದ್ದು ಕೇಳುಗರು ಅದನ್ನು ಚೆನ್ನಾಗೇ ಉಪಯೋಗಿಸಿಕೊಂಡದ್ದು ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು. ಯಾವುದೇ ಕಾರಣಕ್ಕೆ ಅಂತರ್ಜಾಲ ಒಂದು ಇಲ್ಲಿನ ಎಲ್ಲಾ ಉದ್ಯಮಗಳನ್ನು ನುಂಗಿ ನೀರು ಕುಡಿಯುವ ರಾಕ್ಷಸನಲ್ಲ. ಅಂತರ್ಜಾಲವನ್ನು ಸರಿಯಾದ ನಿಟ್ಟಿನಲ್ಲಿ ಉಪಯೋಗಿಸಿಕೊಂಡಲ್ಲಿ ಅದು ಇಲ್ಲಿನ ಎಲ್ಲಾ ಉದ್ಯಮಗಳಿಗೆ ಪೂರಕವಾಗಿ ನಿಲ್ಲಬಲ್ಲದು ಎಂದು ಕೇಳುಗರ ಒಟ್ಟಭಿಪ್ರಾಯವಾಗಿತ್ತು.

ಕೊನೆಯಲ್ಲಿ ಮಾತನಾಡಿದ ಅಧಮ್ಯ ಸಂಸ್ಥೆಯ ಟಿ.ಜೆ.ಯತೀಂದ್ರನಾಥ್ ಅವರು ಕನ್ನಡ ನುಡಿ ಸಂಸ್ಕೃತಿಯನ್ನು
ಉಳಿಸಿಕೊಳ್ಳುವುದು ನಮ್ಮಿಂದ ಮಾತ್ರಾ ಸಾಧ್ಯ. ಕನ್ನಡ ಉಳಿಸಿ ಬೆಳೆಸಿಕೊಂಡು ಹೋಗುವುದಕ್ಕೆ ನಮಗೆ ಆಗುತ್ತಿಲ್ಲ ಎಂದು ಹೇಳಲು ನೂರು ಕಾರಣಗಳು ದೊರೆಯಬಹುದು ಆದರೆ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದೇ. ಕನ್ನಡವನ್ನು ಎಲ್ಲಾ ಕಡೆಯಲ್ಲಿ ಬಳಸಿಯೇ ಕನ್ನಡವನ್ನು ಉಳಿಸಲು ಸಾಧ್ಯ. ನಾವು ಕನ್ನಡದವರೆಂದು ಕೊರಗುವ ಕಾರಣವಿಲ್ಲ ಕನ್ನಡದ ಬಗ್ಗೆ ಕಾಳಜಿ ತೋರಿಸಿ ಎಂದು ಕರೆ ಕೊಟ್ಟರು.

ಈ ನಡುವೆ ಬ್ರೌಸರ್‌ನಲ್ಲೇ ಕನ್ನಡ ಆನ್ಸಿ ಹಾಗೂ ಯೂನಿಕೋಡ್ ಎರಡನ್ನೂ ಕೀ ಇನ್ ಮಾಡಲು ಸಾಧ್ಯವಾಗುವ ಸ್ಕ್ರಿಪ್ಟ್ ಹಾಗೂ ಕನ್ನಡ ಸ್ಪೆಲ್ ಚೆಕರ್ (ಯೂನಿಕೋಡ್ ಮತ್ತು ಯೂನಿಕೋಡೇತರ) ಪ್ಲಗ್ ಇನ್ ಪ್ರಾತ್ಯಕ್ಷಿಕೆ ಇತ್ತು. ಇದನ್ನು ನಡೆಸಿಕೊಟ್ಟವರು ರಾಘವ ಕೊಟೆಕಾರ್ ಮತ್ತು ರುದ್ರಮೂರ್ತಿಯವರು.

6.01.2008

ಮತ್ತೂ ಒಂದು ವಿಚಾರಸಂಕಿರಣ...!

ಕೆಲವೊಮ್ಮೆ ಹಾಗಾಗುತ್ತೆ. ಎದುರಾಗುವ ಪ್ರತಿ ಸನ್ನಿವೇಷವೂ ನಮಗೆ ವಿರುದ್ಧವಾಗಿ ವರ್ತಿಸುತ್ತಿರುತ್ತದೆ.
ಕನ್ನಡ ಅಂತರ್ಜಾಲ ಜಗತ್ತಿನಲ್ಲಿ ಕನ್ನಡದ ಪ್ರಾತಿನಿಧ್ಯತೆಯನ್ನು ಐದಾರು ವರ್ಷಗಳ ಕಾಲ ಸಮರ್ಥವಾಗಿ ಎತ್ತಿ ಹಿಡಿದ ಕನ್ನಡಸಾಹಿತ್ಯ.ಕಾಂ ಅನ್ನುವ ಕನ್ನಡದ ಶ್ರೇಷ್ಠ ಕೃತಿಗಳ ಆಕರ ತಾಣಕ್ಕೂ ಸನ್ನಿವೇಷಗಳು ವಿರುದ್ಧವಾಗಿದ್ದವು. ಅಗಾಧ ಸಂಖ್ಯೆಯ ಬೆಂಬಲಿಗರೂ, ಓದುಗರೂ ಇದ್ದರೂ ತಾಣ ಸುಮಾರು ಒಂದೂವರೆ ವರ್ಷಗಳ ಕಾಲ ನಿಂತೇ ಹೋಗಿತ್ತು. ಏನೆಂದು ಹೇಳೋದು? ಡಿಜಿಟಲ್ ಜಗತ್ತಿನಲ್ಲಿ ಎಲ್ಲವೂ ಕ್ಷಣಿಕವೆಂಬುದನ್ನು ನಿಜ ಮಾಡಲೋ ಎಂಬಂತೆ ನಮ್ಮ ಸರ್ವರ್‌ಗಳೂ, ಹಾರ್ಡ್‌ಡಿಸ್ಕ್‌ಗಳೂ ಏಕಕಾಲಕ್ಕೆ ಕೈಕೊಟ್ಟು ಅಗಾಧವಾದ ಕಂಟೆಂಟ್ ಒಂದೇ ದಿನದಲ್ಲಿ ಬರಿದಾಯಿತು. ಬ್ಯಾಕ್‌ಅಪ್ ಅನ್ನೋದನ್ನು ಎಷ್ಟು ಕಡೆ ಅಂತ ಇಡೋಕೆ ಸಾಧ್ಯ? ಆದರೂ ಬ್ಯಾಕ್‌ಅಪ್‌ ಕುರಿತಂತೆ ತೋರಿದ ಅಲ್ಪ ಉದಾಸೀನ ಅಷ್ಟೋದು ಡೇಟಾ ಕಳೆದುಕೊಳ್ಳಲು ಕಾರಣವಾಯಿತೇನೋ...? ಈಗ ಎಲ್ಲಾ ಸರಿಯಾದ ಮೇಲೆ ಕಾರಣಗಳನ್ನು ಕೊಡೋದು ಬಾಲಿಶತನವೇನೂ ಅಲ್ಲವೆಂದು ನನ್ನ ಭಾವನೆ.

ಇರಲಿ. ಕಳೆದ ಒಂದೂವರೆ ವರ್ಷ ಕನ್ನಡಸಾಹಿತ್ಯ.ಕಾಂ ತಂಡ ಸುಮ್ಮನೇನೂ ಕುಳಿತಿಲ್ಲ. ಕಳೆದುಹೋದ ಡೇಟಾವನ್ನು ಹೆಚ್ಚೂ ಕಮ್ಮಿ ಹುಡುಕಿ ಮರಳಿ ಪಡೆಯುವ ಜೊತೆಗೆ ಅದನ್ನು ಒಂದು ಯೋಜಿತ ರೀತಿಯಲ್ಲಿ ತನ್ನದೇ ‘ಸಂಪೂರ್ಣ ಫೀನಿಕ್ಸ್’ ಕೃತಿ ನಿರ್ವಹಣಾ ವ್ಯವಸ್ಥೆಗೆ ಅಳವಡಿಸಿದೆ. ಈ ಮಧ್ಯೆ ತಾಣ ನಿಂತು ಹೋದದ್ದರಿಂದ ಬೆಂಬಲಿಗರ ಬಳಗದ ಚಟುವಟಿಕೆಗಳೂ ನಿಂತುಹೋದವು. ಮುಂಚೂಣಿಯಲ್ಲಿದ್ದವರನೇಕರು ಉದ್ಯೋಗ ನಿಮಿತ್ತ ದೂರದ ಊರುಗಳಿಗೆ ಹೋದರು. ಆದಾಗ್ಯೂ ಹೇಗಾದರೂ ಮಾಡಿ ಕನ್ನಡಸಾಹಿತ್ಯ.ಕಾಂ ಕನ್ನಡ ಅಂತರ್ಜಾಲ ಜಗತ್ತಿಗೆ ಮರಳಿ ಬರಬೇಕೆನ್ನುವ ನಮ್ಮ ಅಭಿಲಾಶೆ ಗಟ್ಟಿಯಾಗಿತ್ತು. ಈವತ್ತು ಅದು ಸಾಧ್ಯವೂ ಆಗುತ್ತಿದೆ. ಸಂಪಾದಕರಾದ ಶೇಖರಪೂರ್ಣ, ಬಳಗದ ತಾಂತ್ರಿಕ ತಂಡದ ರಾಘವ ಕೋಟೆಕಾರ್ ಕನ್ನಡಸಾಹಿತ್ಯ.ಕಾಂನ ಮರುಹುಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರಿಗೆ ಬಳಗದ ಕೃತಜ್ಞತೆಗಳನ್ನು ಅರ್ಪಿಸುತ್ತಾ...

ಮೊನ್ನೆ ಮೇ ೧ರ ಗುರುವಾರ ನಡೆದ ಕೆ ಎಸ್ ಸಿ ಬೆಂಬಲಿಗರ ಸಭೆ ಸಮಾರಂಭ ಕುರಿತಂತೆ ಸುಧೀರ್ಘವಾಗಿ ಚರ್ಚಿಸಿತು. ಕಾರ್ಯಕ್ರಮದ ಸ್ಥಳ, ದಿನಾಂಕವನ್ನು ನಿರ್ಧರಿಸಿತು. ಸಮಾರಂಭದ ಆಯೋಜನೆಗೆ ಮುಂಚೂಣಿಯಲ್ಲಿರುವ ಸದಸ್ಯರನ್ನೊಳಗೊಂಡ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಗಳಿಗೆ ದಿನಾಂಕ ೧೧-೦೫-೨೦೦೮ ಮತ್ತು ೩೧-೦೫-೨೦೦೬ರಂದು ನಡೆದ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ವಿಸ್ಮೃತ ರೂಪ ನೀಡಲಾಯಿತು.

ಕನ್ನಡಸಾಹಿತ್ಯ.ಕಾಂ ಮುಂದಿನ ಜೂನ್ ೮ನೇ ತಾರೀಖು ಭಾನುವಾರ ಮತ್ತೆ ತನ್ನ ಎಂದಿನ ವೈಭವದೊಂದಿಗೆ ಅಂತರ್ಜಾಲ ಲೋಕಕ್ಕೆ ಸೇರ್ಪಡೆಗೊಳ್ಳಲಿದೆ. ಅದೂ ಒಂದು ಅರ್ಥಪೂರ್ಣವೆನಿಸುವ ಕಾರ್ಯಕ್ರಮದ ಮೂಲಕ. ಮರುಹುಟ್ಟನ್ನು ೮ನೇ ವಾರ್ಷಿಕೋತ್ಸವವೆಂದು ಹೆಸರಿಟ್ಟು ಕನ್ನಡದ ಯುವ ಮನಸ್ಸುಗಳ ಮಧ್ಯೆ ಆಚರಿಸಿ ಸಂಭ್ರಮಿಸುವ ಹಂಬಲ ನಮ್ಮದು. ಕಾರ್ಯಕ್ರಮ ’ಕ್ರೈಸ್ಟ್ ಕಾಲೇಜ್ ಆಫ್ ಲಾ’ದ ಸಭಾಂಗಣ, ಹೊಸೂರು ರಸ್ತೆ, ಬೆಂಗಳೂರು ಇಲ್ಲಿ ನಡೆಯುವುದೆಂದು ನಿರ್ಧರಿಸಲಾಗಿದೆ. ಕಾರ್ಯಕ್ರಮಕ್ಕೆ ನಿರ್ದೇಶಕರಾದ ಪ್ರಕಾಶ ಬೆಳವಾಡಿ, ಗುರುಪ್ರಾಸ್ ಬಿ ಆರ್, ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ, ಲಹರಿ ಆಡಿಯೋದ ವೇಲು, ಕೆಟುಕೆ ಟೆಕ್ನಾಲಜೀಸ್ ಸಾಫ್ಟ್‌ವೇರ್‌ನ ಸಿ ಇ ಓ ಯತೀಂದ್ರರವರು ಭಾಗವಹಿಸುವುದು ಬಹುತೇಕ ಖಚಿತವಾಗಿದೆ. ಅವತ್ತು ‘ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು’, ಎಂಬ ವಿಷಯದ ಮೇಲೆ ಮಾತುಕಥೆಗಳಾಗಲಿವೆ. ಸಮಯ, ಉತ್ಸಾಹ ಇದ್ದರೆ ಇನ್ನೊಂದು ವಿಶಿಷ್ಟ ಕಾರ್ಯಕ್ರಮ ‘ಬ್ಲಾಗೀ ಮಾತುಕತೆ’ ಹಮ್ಮಿಕೊಳ್ಳುವ ಯೋಜನೆಯೂ ಇದೆ.

ಕಾರ್ಯಕ್ರಮದ ರೂಪುರೇಷೆಗಳು ಇಂತಿವೆ.
ಬೆಳಗಿನ ೧೦-೩೦ಕ್ಕೆ ಕನ್ನಡಸಾಹಿತ್ಯ.ಕಾಂ ೮ನೇ ವಾರ್ಷಿಕೋತ್ಸವ ಉದ್ಘಾಟನೆ.
ಕನ್ನಡಸಾಹಿತ್ಯ.ಕಾಂ ಮತ್ತು ಅದರ ಚಟುವಟಿಕೆಗಳ ಕಿರುಪರಿಚಯ. ನಂತರ ವಿಷಯದ ಮೇಲೆ ಸಂಪನ್ಮೂಲ ವ್ಯಕ್ತಿಗಳು ಮಾತನಾಡುತ್ತಾರೆ. ಪ್ರತಿಯೊಬ್ಬರ ಮಾತಿನ ನಂತರ ಪ್ರಶ್ನೋತ್ತರದ ಅವಧಿ ಇರುತ್ತದೆ. ಮುಖ್ಯ ಕಾರ್ಯಕ್ರಮ ಮಧ್ಯಾಹ್ನ ಒಂದು ಗಂಟೆಗೆ ಮುಗಿಯುತ್ತದೆ. ೧ರಿಂದ ೧-೩೦ರವರೆಗೆ ಊಟದ ಸಮಯ. ಮಹ್ಯಾಹ್ನ ೨ರ ನಂತರ ಸಂಭಾವ್ಯ ಬ್ಲಾಗೀ ಮಾತುಕತೆ ಇರುತ್ತದೆ. ಅದು ನಾಲ್ಕು ಗಂಟೆಯವರೆಗೆ ಮುಂದುವರೆಯಬಹುದು.

ವಿಚಾರಸಂಕಿರಣದ ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english

http://saadhaara.com/events/index/kannada

ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ನೀವು ಬಂದರೆ ಸಮಕ್ಷಮ ಭೇಟಿ ಆಗೋಣ.

ರವೀ...

5.25.2008

ನಕಲಿ ಸಾರಾಯಿಯ ನರಮೇಧ ಮತ್ತು ಮುಖ್ಯಮಂತ್ರಿಯಾಗಲಿರುವ ಯಡಿಯೂರಪ್ಪ

ಅಂತೂ ಕಳ್ಳಭಟ್ಟಿಯ ಹೆಸರಿನಲ್ಲಿ methyl alcohol ಅಥವ methanol ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ. ಸಾರಾಯಿ ನಿಷೇಧವಿರುವ ಕರ್ನಾಟಕ ಮತ್ತು ನಿಷೇಧವಿಲ್ಲದಿರುವ ತಮಿಳುನಾಡು ಎರಡೂ ಕಡೆ ಸಾವುಗಳು ಸಂಭವಿಸಿವೆ. ನಕಲಿ ಮದ್ಯ ಸೇವಿಸಿ ಅಷ್ಟೊಂದು ಜನ ಸಾಯುತ್ತಿದ್ದಾರೆ ಎಂಬ ಮಾಧ್ಯಮಗಳ ವರಧಿಗಳ ನಡುವೆಯೂ ನಡೆಯುವ ಅನಾಹುತದ ಅರಿವಿಲ್ಲದೆ ನಕಲಿ ಮದ್ಯ ಕುಡಿಯುತ್ತಾ ಇನ್ನೂ ಹತ್ತಾರು ಮಂದಿ ಸಾಯುತ್ತಲೇ ಇದ್ದಾರೆ. ಯಥಾಪ್ರಕಾರ ಸಾರಾಯಿ ನಿಷೇಧದಿಂದ ಕಂಗೆಟ್ಟಿರುವ ಮದ್ಯದ ದೊರೆಗಳು, ಮದ್ಯದ ದೊರೆಗಳ ಋಣಭಾರದಿಂದ ನರಳುತ್ತಿರುವ ಕಾಂಗ್ರೇಸ್ಸು, ದಳಗಳು ಸಾರಾಯಿ ನಿಷೇಧ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸುವ ಮಟ್ಟಕ್ಕೂ ಹೋಗಿವೆ.

ಸಾವುನೋವುಗಳ ಸಂಖ್ಯೆ ಏರುತ್ತಲೇ ಹೋದಾಗ ಎಚ್ಚೆತ್ತುಕೊಂಡ ರಾಜ್ಯಪಾಲರ ವಿನಮ್ರ ಸೇವಕರು ರಾತ್ರೋರಾತ್ರಿ ಕೆಲವರನ್ನು ಸಸ್ಪೆಂಡ್ ಮಾಡಿ, ಒಂದಿಷ್ಟು ಪರಿಹಾರ ಘೋಷಿಸಿ ಕೈತೊಳೆದುಕೊಂಡು ಎದ್ದೋಗುವ ಹುನ್ನಾರದಲ್ಲಿದ್ದಾರೆ. ರಾಜ್ಯಪಾಲರ ಅವಧಿ ಇನ್ನು ಕೆಲವೇ ದಿನಗಳಿರುವ ಕಾರಣ ಅವರು ನಿರಾಳ. ಮಾಧ್ಯಮಗಳ ವರಧಿಯನ್ನು ಗಮನಿಸಿದರೆ ಮತ್ತೆ ಸಾರಾಯಿ ಮಾರಾಟವನ್ನು ಪ್ರಾರಂಭಿಸುವತ್ತ ಜನಾಭಿಪ್ರಾಯ(ಮಾಧ್ಯಮಾಭಿಪ್ರಾಯ!) ರೂಪುಗೊಳ್ಳುತ್ತಿದೆಯೆ ಎಂದೆನ್ನಿಸದಿರದು.

ಮೊನ್ನೆ ಟಿವಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಸಾರಾಯಿ ದೊರೆ ಜೆ ಪಿ ನಾರಾಯಣ ಸ್ವಾಮಿ ಇಷ್ಟೊಂದು ಜನ ಸಾಯುತ್ತಿರುವುದು ಸಾರಾಯಿ ನಿಷೇಧದಿಂದಲೇ ಅಂತ ಒದರುತ್ತಿದ್ದರು. ಅಲ್ಲಿಗೆ ಅವರ ಉದ್ದೇಶ ಸ್ಪಷ್ಟ. ಹೇಗಾದರೂ ಮಾಡಿ ಮತ್ತೆ ಸಾರಾಯಿ ಮಾರಾಟ ಆರಂಭವಾಗುವಂತೆ ಮಾಡುವುದು. ಆ ಮೂಲಕ ಕಳೆದುಹೋದ ದೊರೆ ಪಟ್ಟವನ್ನು ಮರಳಿ ಪಡೆಯುವುದು.

ಆದರೆ ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಎಲ್ಲರೂ ಉದ್ದೇಶಪೂರ್ವಕವಾಗಿ ಬದಿಗೆ ತಳ್ಳುತ್ತಿರುವ ವಿಷಯವೊಂದಿದೆ. ಅದು ಈ ಎಲ್ಲಾ ಸಾವುಗಳು ಆದದ್ದು ಸಾಂಪ್ರದಾಯಿಕವಾಗಿ ತಯಾರಿಸಲಾದ ಕಳ್ಳಭಟ್ಟಿಯಿಂದಲೇನಾ ಅನ್ನುವುದು. ಆದರೆ ಸತ್ತವರ ಪೋಸ್ಟ್‌ಮಾರ್ಟಂ ನಂತರದ ವರದಿಗಳನ್ನು ನೋಡಿದರೆ ಅವರು ಸೇವಿಸಿದ್ದು ಪ್ರಾಣಾಂತಿಕವಾದ methyl alcohol ಎಂಬುದು ಖಚಿತವಾಗುತ್ತಿದೆ. ಎಲ್ಲಾ ವಿಧದ ಮದ್ಯದಲ್ಲಿ ಸಾಮಾನ್ಯವಾಗಿ ಇರುವುದು ethyl alcohol ಅಥವ ethanolನ ಅಂಶ. ಬೇರೆ ಬೇರೆ ವಿಧದ ಮದ್ಯಗಳಲ್ಲಿ ಇದರ ಪ್ರಮಾಣ ಬೇರೆಯಾಗಿರುತ್ತದೆ. ಇದು ತನ್ನ ಪ್ರಮಾಣಕ್ಕನುಗುಣವಾಗಿ ಮತ್ತೇರಿಸುತ್ತದಾದರೂ ತೀರಾ ಅತಿಯಾಗಿ ಸೇವಿಸದೇ ಇದ್ದಲ್ಲಿ ಪ್ರಾಣಾಪಾಯ ತರುವುದಿಲ್ಲ. ನಕಲಿ ಸಾರಾಯಿ ಮಾಡಿ ಮಾರುವ ಮಂದಿ ಈ ಎರಡು ವಿಧದ alcoholಗಳನ್ನು ಗುರುತಿಸುವಲ್ಲಿ ಎಡವುತ್ತಿರುವುದರಿಂದಲೇ ಇಷ್ಟೊಂದು ಸಾವುಗಳು ಸಂಭವಿಸುತ್ತಿವೆ. ಕಳ್ಳಭಟ್ಟಿ ಎಂದು ಹೆಸರಿಟ್ಟು ಅಬಕಾರಿ, ಮಾಧ್ಯಮಗಳು ಜನರನ್ನು ದಾರಿ ತಪ್ಪಿಸುತ್ತಿವೆ.

ಏನಿದು methyl alcohol?
methyl alcohol ರಾಸಾಯನಿಕ ಕೈಗಾರಿಕೆಗಳಲ್ಲಿ ಬಳಸಲಾಗುವ ಒಂದು ಸಾಲ್ವೆಂಟ್. ಬಣ್ಣ, ರುಚಿ, ವಾಸನೆಯಲ್ಲಿ ethyl alcoholನ್ನೇ ಹೋಲುತ್ತದೆ. ಸೇವಿಸಿದ ತತ್ಕ್ಷಣಕ್ಕೆ ಇದು ಕಣ್ಣಿನ ನರಗಳನ್ನು ಹಾನಿಗೊಳಿಸಿ ದೃಷ್ಟಿ ಕಳೆದುಕೊಳ್ಳಲು ಕಾರಣವಾಗುತ್ತೆ. ನಂತರ ಇಡೀ ನರಮಂಡಲವಕ್ಕೆ ಪ್ರಭಾವ ಬೀರುತ್ತಾ ಉಸಿರಾಟದ ತೊಂದರೆ ಉಂಟುಮಾಡುತ್ತದೆ. ವ್ಯಕ್ತಿ ಉಸಿರಿಗಾಗಿ ತಹತಹಿಸುವಂತೆ ಮಾಡುತ್ತದೆ. ಅಲ್ಲಿಗೆ ಶ್ವಾಸಕೋಶಗಳು ಹಾನಿಗೊಳಗಾಗುತ್ತವೆ. ಜೀರ್ಣಾಂಗ ವ್ಯವಸ್ಥೆ ಹದಗೆಟ್ಟು ನಿರಂತರ ವಾಂತಿ, ಭೇದಿಗಳಾಗಿ ವ್ಯಕ್ತಿ ನಿರ್ಜಲೀಕರಣಕ್ಕೆ ಒಳಗಾಗುತ್ತಾನೆ. ರಕ್ತದೊತ್ತಡ ತೀರಾ ಕಡಿಮೆಯಾಗಿ ಸಾವು ಸಂಭವಿಸುತ್ತದೆ. ಮಿತಿಮೀರಿ ಸೇವಿಸಿದ್ದೇ ಆದಲ್ಲಿ methyl alcohol ತಕ್ಷಣ ವ್ಯಕ್ತಿಯನ್ನು ಕೊಲ್ಲುತ್ತದೆ.

ಅಸಲಿಗೆ ಆಗಿದ್ದೇನು?

ಸಾಮಾನ್ಯವಾಗಿ ನಕಲಿ ಮದ್ಯ(ಕಳ್ಳಭಟ್ಟಿಯಲ್ಲ) ತಯಾರಿಸುವ ಮಂದಿ ethanol ಅನ್ನು ಡಿಸ್ಟಿಲರಿಗಳಿಗೆ ಹೋಗುವ ಸ್ಪಿರಿಟ್ ಲಾರಿಗಳು, ಸಕ್ಕರೆ ಕಾರ್ಖಾನೆಗಳಿಂದ ಹೊರಬರುವ ಸ್ಪಿರಿಟ್ ಟ್ಯಾಂಕರ್‌ಗಳು ಮುಂತಾದವುಗಳಿಂದ ಪಡೆಯುತ್ತಾರೆ. ದಾರಿ ಮಧ್ಯೆ ನಡೆಯುವ ಸ್ಪಿರಿಟ್ ಲಾರಿಗಳ ಡ್ರೈವರ್‌ಗಳು, ನಕಲಿ ಮದ್ಯ ತಯಾರಕರ ನಡುವಿನ ಒಪ್ಪಂದಗಳು, ಲೀಟರುಗಟ್ಟಲೇ `ಗುಣಮಟ್ಟದ ethanol' ಕ್ಯಾನ್‌ಗಳಿಗೆ ಇಳಿಕೆ ಆಗುವಂತೆ ಮಾಡುತ್ತವೆ. ಅದನ್ನು ತಂದು ಹಳ್ಳಿಗಳಲ್ಲಿ ನೀರು ಬೆರೆಸು, ಹಳೆಯ ಪ್ಲಾಸ್ಟಿಕ್ ಪಾನೀಯ ಬಾಟಲಿಗಳಲ್ಲಿ ತುಂಬಿಸಿ ಮಾರಾಟ ಮಾಡುತ್ತಾರೆ. ಚಿಲ್ಲರೆ ಮಾರಟಗಾರರು ಅದಕ್ಕೆ ಇನ್ನಷ್ಟು ನೀರು ಬೆರೆಸಿ ಹಣದ ಮೊತ್ತಕ್ಕೆ ಅನುಗುಣವಾಗಿ ಸಣ್ಣಸಣ್ಣ ಪ್ಲಾಸ್ಟಿಕ್ ಪೊಟ್ಟಣ ಮಾಡಿ ವಿತರಿಸುತ್ತಾರೆ. ಹೀಗೆ ಮಾಡುವುದು ಕಡಿಮೆ ಖರ್ಚಿನ ಕೆಲಸ ಮತ್ತು ಹೆಚ್ಚು ಲಾಭಕರ. ಈ ತೆರನಾದ ಮದ್ಯ ತಯಾರಿಕೆ ಆನೇಕಲ್ ತಾಲೋಕಿನ ಹಳ್ಳಿಗಳು, ಹೊಸಕೋಟೆ ತಾಲ್ಲೋಕಿನ ಕಲ್ಲಹಳ್ಳಿ, ಮೆಡಿಮೈಲಸಂದ್ರ, ಬೈಲನರಸಾಪುರ, ಕಟ್ಟಿಗೇನಹಳ್ಳಿ ಮುಂತಾದ ಊರುಗಳು ನಕಲಿ ಮದ್ಯ ತಯಾರಿಕೆ ಪ್ರಮುಖ ತಾಣಗಳು. ಇಲ್ಲಿನ ಕೆಲವು ಹಳ್ಳಿಗಳಲ್ಲಿ ಊರಿಗೆ ಊರೇ ನಕಲಿ ಮದ್ಯ ತಯಾರಿಸಿ ಮಾರುವ ಉದ್ಯಮ(!)ದಲ್ಲಿ ವರ್ಷಾಂತರಗಳಿಂದ ತೊಡಗಿಸಿಕೊಂಡಿದೆ. ಅದೂ ಅಬಕಾರಿ ಮತ್ತು ಪೋಲೀಸ್ ಅಧಿಕಾರಿಗಳ ಮೂಗಿನಡಿಯಲ್ಲೇ ಅವರ ಕೃಪಾಕಟಾಕ್ಷದಿಂದ ಈ ಕೃತ್ಯ ನಡೆಯುತ್ತಿತ್ತು. ಅದು ನಿಲ್ಲುವುದೂ ಇಲ್ಲ. ಆದರೆ ಸಾವುಗಳು ಸಂಭವಿಸಲು ಕಾರಣವಾಗಿದ್ದು ನಕಲಿ ಮದ್ಯ ತಯಾರಕರಿಗೆ ಅರಿವಿಲ್ಲದೆ ದೊರೆತ methyl alcohol ಅನ್ನೋದು ಈಗ ನಿಚ್ಛಳವಾಗಿದೆ. ಅದನ್ನು ಗೊತ್ತಿಲ್ಲದೆ ಬೆರೆಸಿದರೋ ಅಥವ ಜಾಸ್ತಿ ಕಿಕ್ ನೀಡಲೆಂದು ಉದ್ದೇಶಪೂರ್ವಕವಾಗಿಯೇ ಬೆರೆಸಿದರೂ ಇನ್ನಷ್ಟೇ ದೃಢವಾಗಬೇಕಿದೆ. ಆದರೆ ಒಂದಂತೂ ನಿಜ. ಇತ್ತೀಚಿನ ವರ್ಷಗಳಲ್ಲಿ ಆದ ಸಾರಾಯಿ ದುರಂತಗಳೆಲ್ಲದರಲ್ಲು methyl alcohol ಪಾಲಿದೆ. ಅನಕ್ಷರಸ್ಥ ನಕಲಿ ಮದ್ಯ ತಯಾರಕರು ಎರಡೂ ರಾಸಾಯನಿಕಗಳ ನಡುವಿನ ವ್ಯತ್ಯಾಸವನ್ನು ಗುರುತಿಸದೇ ಹೋಗುತ್ತಿದ್ದಾರೆ. ಇದು ಕೆಸರೆರಚಿಕೊಳ್ಳುತ್ತಿರುವ ಕುಮಾರಸ್ವಾಮಿಯಂತ ದಿಢೀರ್ ರಾಜಕಾರಣಿಗಳಿಗೆ ಗೊತ್ತಿಲ್ಲವೆ? ಗೊತ್ತು. ಆದರೆ ಅದನ್ನು ಬೇರೆಯವರ ಮೇಲೆ ಹೊರಿಸಿ ಆ ಮೂಲಕ ಒಂದಿಷ್ಟು ಉಪಯೋಗ ಪಡೆಯಲು ಬಯಸುವುದೂ ಜನಕ್ಕೂ ಗೊತ್ತಾಗಿದೆ. ಬೆಂದ ಮನೆಯಲ್ಲಿ ಗಳ ಹಿರಿಯುವ ರಾಜಕಾರಣಿಗಳನ್ನು ಬದಿಗಿಟ್ಟು ನೋಡೋದಾದ್ರೆ...

ನಕಲಿ ಮದ್ಯ ತಯಾರಿಕೆ, ಮಾರಾಟಕ್ಕೆ, ಅದರಿಂದಾದ ಸಾವುಗಳಿಗೆ ಸಾರಾಯಿ ನಿಷೇಧ ಕಾರಣ ಅಲ್ಲವೇ ಅಲ್ಲ. ನಕಲಿ ಮದ್ಯ ಕಡಿಮೆ ಬೆಲೆಯ ಜಾಸ್ತಿ ಕಿಕ್ ನೀಡುವ ಪದಾರ್ಥವಾಗಿರುವುದರಿಂದ ಅದರ ಚಲಾವಣೆ ನಿರಂತರ. ಸಾರಾಯಿ ನಿಷೇಧದಿಂದಲೇ ಇದೆಲ್ಲ ಆಗಿರುವುದೆಂದಾದಲ್ಲಿ ನಿಷೇಧವಿಲ್ಲದಿರುವ ಪಕ್ಕದ ತಮಿಳುನಾಡಿನಲ್ಲೂ ಅಪಾರ ಸಾವು ನೋವುಗಳಾಗಿವೆ. ಅಷ್ಟೆಲ್ಲಾ ಏಕ ನಮ್ಮಲ್ಲೇ ನೆಲಮಂಗಲ ಮುಂತಾದ ಕಡೆ ಸರ್ಕಾರಿ ಸಾರಾಯಿಯ ಹೊಳೆ ಹರಿಯುತ್ತಿದ್ದ ಕಾಲದಲ್ಲೂ ಇದೇ methyl alcohol ಹತ್ತಾರು ಜನರನ್ನು ಬಲಿ ತೆಗೆದುಕೊಂಡಿದ್ದೂ ನೆನಪಿನಲ್ಲಿದೆ. ಇದೇ ಹೊತ್ತಿನಲ್ಲಿ ಅಲ್ಲಿ ಹಾಸನದ ಸಕಲೇಶಪುರ ತಾಲ್ಲೊಕಿನಲ್ಲಿ ಮತ್ತೆ ನಾಲ್ಕು ಜನ ನಕಲಿ ಮದ್ಯ ಸೇವಿಸಿ ಜೀವ ತೆತ್ತಿದ್ದಾರೆ. ಈ ಮದ್ಯದ ಮೂಲವೂ ನೂರಾರು ಜನರನ್ನು ಬಲಿ ತೆಗೆದುಕೊಂಡ ಬೆಂಗಳೂರು ಆಸುಪಾಸಿನ ದುರಂತದ ಮೂಲವೂ ಒಂದೇ ಎನ್ನುವುದು ಗಮನಾರ್ಹ. ಪೋಲೀಸರು ಬಂಧಿಸಿರುವ ಸೌಂದರ್ ರಾಜನ್‌ನನ್ನು ಪ್ರಮುಖ ಅಪರಾಧಿಯಾಗಿ ಬಿಂಬಿಸಿ ಪ್ರಭಾವಿಗಳು ತೆರೆಮರೆಗೆ ಸರಿದಿದ್ದಾನೆ. ಸೌಂದರ್ ರಾಜನ್‌ಗೆೆ ನಕಲಿ ಮದ್ಯ ಮಾರುವುದು ಹೊಟ್ಟೆಪಾಡಿನ ಮೂಲವಾಗಿತ್ತು. ನಕಲಿ ಮದ್ಯ ಮಾರಿ ಅವನೇನೂ ಕೋಟ್ಯಾದಿಪತಿಯಾಗಿಲ್ಲ. ಆತನಿಗೆ ಜಾಮೀನು ಹೊಂದಿಸಲೂ ಹಣವಿಲ್ಲ. ಕರೀಂ ಲಾಲನ ತಲೆಗೆ ಇಡೀ ಛಾಪ ಕಾಗದ ಕರ್ಮಕಾಂಡವನ್ನು ಕಟ್ಟಿ ರೋಷನ್ ಬೇಗ್, ಕೃಷ್ಣ ತರದವರು ತಪ್ಪಿಸಿಕೊಂಡಂತೆ ಇಲ್ಲೂ ಆಗುತ್ತಿದೆ. ಇದಕ್ಕೆ ಪೋಲೀಸರ ಸಹಕಾರ ಸಿಕ್ಕಿದೆ.

ಯಡಿಯೂರಪ್ಪ ಮುಖ್ಯಮಂತ್ರಿ?
ಇದೆಲ್ಲದರ ಮಧ್ಯೆ ರಾಜ್ಯದಲ್ಲಿ ನಡೆದ ಚುನಾವಣೆಗಳ ಫಲಿತಾಂಶಗಳು ಬದಲಾವಣೆಗಾಗಿ ತುಡಿಯುವ ಕನ್ನಡಿಗರ ಆರೋಗ್ಯವಂತ ಮನಸ್ಥಿತಿಯನ್ನು ತೋರಿಸುತ್ತಿವೆ. ಜನ ಬಿ ಜೆ ಪಿ ಗೆ ಒಳ್ಳೆಯದೊಂದು ಅವಕಾಶ ನೀಡಿದ್ದಾರೆ. ಆದರೂ ಸ್ಪಷ್ಟ ಬಹುಮತ ಇಲ್ಲದಿರುವುದು ಅಲ್ಪ ಮಟ್ಟಿಗಿನ ನಿರಾಶೆಗೆ ಕಾರಣ. ಪಕ್ಷೇತರರು ಈ ನಿಟ್ಟಿನಲ್ಲಿ ಒಳ್ಳೆಯ ನಿರ್ಧಾರ ಕೈಗೊಳ್ಳುವರೆಂದು ಕೊಂಡರೆ...

ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ.

ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿ ಜೆ ಪಿ ಸ್ವಂತ ಬಲದ ಆಡಳಿತ ನಡೆಸಲಿದೆ. ಸಾರಾಯಿ ನಿಷೇಧ ಹಿಂತೆಗೆಯದಿರುವ ಮತ್ತು ನಡೆದ ನಕಲಿ ಸಾರಾಯಿ ದುರಂತದ ತನಿಖೆಗೆ ಒಂದು ತಾತ್ವಿಕ ಅಂತ್ಯ ನೀಡುವ ಭರವಸೆ ಭಾವೀ ಮುಖ್ಯಮಂತ್ರಿಯಿಂದ ಸಿಕ್ಕಿದೆ.

ಅದಾಗದಿದ್ದರೆ

ಮತ್ತೆ ಕಾಂಗ್ರೇಸ್ಸು, ಜೆಡಿಎಸ್ಸೂ ಒಂದಾದರೆ, ಪಕ್ಷೇತರರೆಲ್ಲಾ ಇದಕ್ಕೆ ಬೆಂಬಲಿಸಿದರೆ...ರೆ...ರೇ!

ಅಂತದ್ದೊಂದು ಸಮ್ಮಿಶ್ರ ಸರ್ಕಾರಕ್ಕೆ ಶಿಖಂಡಿ ಪಾತ್ರ ವಹಿಸಲು ಅಭ್ಯರ್ಥಿಗಳೇ ಇಲ್ಲ.

ಅಲ್ಲಿ ಧರ್ಮಸಿಂಗ್‌ಗೆ ತಡಕಿ ನೋಡಿಕೊಳ್ಳುವಂತಹ ಧರ್ಮದೇಟು ಬಿದ್ದಿದೆ. ಗಿನ್ನಿಸ್ ದಾಖಲೆ ಬರೆದುಕೊಳ್ಳುವವರಿಗೆ ಸ್ವಲ್ಪ ರಿಲೀಫು. ಎಚ್ಕೆ, ದೇಶಪಾಂಡೆ, ಅಂಬಿ-ಹೀಗೆ ಒಂದಿಷ್ಟು ಮುಖ್ಯಮಂತ್ರಿ ಸ್ಥಾನಾಕಾಂಕ್ಷಿಗಳಿಗೆ ಹಾಸಿಗೆ ಹಾಸಿ ಕೊಡಲಾಗಿದೆ. ಕಾಂಗ್ರ್ಏಸ್ಸಿನ ಕೈಹಿಡಿದ ಹಳೆ ಮೈಸೂರಿನ ಭಾಗದ ಜನರಿಗೆ ಬುದ್ಧಿ ಬರಲು ಇನ್ನೊಂದು ಎಲೆಕ್ಶನ್ ಬರಬೇಕೇನೋ ಗೊತ್ತಾಗ್ತಿಲ್ಲ.

ಜೆಡಿಎಸ್ಸಿನ ಮೆರಾಜೂ, ಚೆಲ್ವೂ, ಚೆನ್ಗಪ್ಪ, ಬಿಎಸ್ಪಿಯ ಸಿಂಧ್ಯ, ಇನ್ಮೇಲೆ ನಾನು ನಾಟ್ಕ ಮಾಡ್ಕತಾ ರೆಸ್ಟು ತಗೋಳ್ತೀನಿ ಅಂತಿದ್ದ ಎಂ ಪಿ ಪ್ರಕಾಶೂ ಎಲ್ಲರಿಗೂ ಅವರ ಇಚ್ಛಾನುಸಾರ ಮತದಾರ ಅನುಕೂಲ ಮಾಡಿಕೊಟ್ಟಿದ್ದಾನೆ.

ಆದರೆ ಮಜಾ ಇರೋದು ಇದ್ಯಾವುದರಲ್ಲೂ ಅಲ್ಲ. ಶಿಕಾರಿಪುರದಲ್ಲಿ ‘ಹರಕೆಯ ಕುರಿ’ ಬಂಗಾರಪ್ಪನವರ ಹೀನಾಯ ಸೋಲಿನಲ್ಲಿ ಯಡಿಯೂರಪ್ಪನವರ ಒಟ್ಟಾರೆ ಜಯವನ್ನು ಬರೆದುಕೊಟ್ಟದ್ದರಲ್ಲಿ. ಅವರ ಪುತ್ರರ ಎಡಬಿಡಂಗಿತನವನ್ನು ಕೊನೆ ಮಾಡಿದ ಮತದಾರನ ಪ್ರಬುದ್ಧ ಮನಸ್ಸನ್ನು ಅರಿಯುವುದರಲ್ಲಿ. ಬಂಗಾರಪ್ಪನವರನ್ನು ಕುರಿ ಮಾಡುವಲ್ಲಿ ಅಪಾರ ಶ್ರಮ ವಹಿಸಿದ ಅನಂತೂ ಸೇಫಾಗಿ ಯಡಿಯೂರಪ್ಪನವರ ಎಡಗಡೆ ವಿರಾಜಮಾನ. ಸದ್ಯಕ್ಕೆ ಬಿಜೆಪಿ ಬಂಡಾಯ ಮುಕ್ತ. ಕಾಂಗ್ರೆಸ್ಸಿನ ನಾಯಕರು ಮಾತಿಗೆ ಸಿಕ್ತಾರಾದರೂ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನುವಂತೆ ಗೊಣಗುತ್ತಾರೆ. ಜೆಡಿಎಸ್ಸಿನ ಸೋಲನ್ನು ಕುಮಾರಸ್ವಾಮಿ ಒಪ್ಪಿಕೊಂಡರೂ ಅತಂತ್ರ ವಿಧಾನಸಭೆಯ ಕನಸಿನಲ್ಲಿದ್ದ ದೇವೇಗೌಡರದು ದೀರ್ಘನಿದ್ದೆ. ಸದ್ಯಕ್ಕವರು ಧೂಳಿನೊಳಗೆ ಅಡಗಿದ್ದಾರೆ-ಮತ್ತೆ ಲೋಕಸಭಾ ಚುನಾವಣೆಗಳ ತನಕ. ಕ್ಯಾತೆ ಪ್ರವೀಣ ಎಸ್ಸೆಂ ಕೃಷ್ಣರಿಗೆ ಎಲ್ಲಿಯೂ ಸಲ್ಲದಂತಾಗುವ ಭಯ.

ಇನ್ನು ಮಾಯಾವತಿ, ಮುಲಾಯಂ, ಜಯಪ್ರದ, ರಾಹುಲ್‌ಗಾಂಧಿ ಜೊತೆ ಮುಖದ ಮೇಕಪ್ಪು ಒರೆಸಿಕೊಂಡು ಇನ್ನೊಂದು ಸುತ್ತಿನ ಡಿಸ್ಕವರ್ ಇಂಡಿಯಾ ಯಾತ್ರೆ ಮಾಡಿದರೆ ಒಳ್ಳೆಯದು. ಎಸ್ಪಿ, ಬಿಎಸ್ಪಿ ಖಾತೆಗೆ ಏನೂ ಸಿಕ್ಕಿಲ್ಲ. ಕರ್ನಾಟಕ ಉತ್ತರ ಪ್ರದೇಶವಲ್ಲ ಅನ್ನೋದು ಅವರಿಗೆ ಗೊತ್ತಾದರೆ ಒಳ್ಳೆಯದು.

ಇತ್ತ ಬ್ಲಾಗು ಲೋಕದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಗಳಿಸಿದ್ದು ಪಥ್ಯವಾಗಲಿಲ್ಲ ಎಂಬಂತೆ ತಮಿಳರು ತೀರ ಕೀಳು ಮಟ್ಟದಲ್ಲಿ ಬರೆಯುತ್ತಿದ್ದಾರೆ. ಕೆಲವು ಬ್ಲಾಗ್-ಕಮೆಂಟುಗಳು ಹೇಗಿವೆಯೆಂದರೆ ಓದಲೂ ಅಸಹ್ಯವೆನಿಸುವಷ್ಟು. ಇರಲಿ ಅವರ ಅಸಹನೆ ಸಹಜ. ದಕ್ಷಿಣ ಭಾರತ so called ದ್ರಾವಿಡ ಕೋಟೆಯ ಪಕ್ಕ ಉತ್ತರ ಭಾರತಿಗಳು ಲಗ್ಗೆ ಇಟ್ಟೇ ಬಿಟ್ಟರೇನೋ ಎನ್ನುವ ಭಯ.

ಕನ್ನಡವಿರೋಧಿ ಎಂಇಎಸ್, ತಮಿಳು ಪಕ್ಷಗಳಿಗೆ ಖಾತೆ ತೆರೆಯಲಾಗಿಲ್ಲ ಅನ್ನೋದು ಸಮಾಧಾನಕರ. ರಕ್ಷಣಾ ವೇದಿಕೆಯವರು ಈ ವಿಷಯದಲ್ಲಿ ರೆಸ್ಟು ತಗೋಳ್ಳಬಹುದಾದರೂ ಕಾವೇರಿ-ಹೊಗೇನಕಲ್ ಬೂತ ತಮಿಳುನಾಡು ಕಡೆಯಿಂದ ಬೆಂಕಿ ಉಗುಳಬಹುದು.

ಪಕ್ಷೇತರರಿಗೆ ಮೊಟ್ಟ ಮೊದಲ ಬಾರಿಗೆ ರಾಜ ಮರ್ಯಾದೆ. ಅಗತ್ಯವಿರುವ ‘ಮೂರು ಜನ’ ಕೇಳಿದರೆ ಹೆಲಿಕಾಫ್ಟರೂ ಕೊಡಬೇಕು. ಯಡಿಯೂರಪ್ಪನವರ ಅಷ್ಟೊಂದು ಸ್ಪಷ್ಟ ಜಯ, ಗುರಿ, ವಿಷನ್ಗಳ ಮಧ್ಯೆಯೂ ಅವರೀಗ ಪಕ್ಷೇತರರನ್ನು ಹುಡುಕಾಡಬೇಕಾಗಿದೆ.

ಶಾಲಾ ಮಕ್ಕಳಿಗೆ ಸೈಕಲ್ ಕೊಟ್ಟಂತೆ ಪಕ್ಷೇತರರಿಗೆ ಹೆಲಿಕ್ಯಾಫ್ಟರುಗಳು ಹಂಚಿಕೆಯಾಗಬಹುದು.

ನಮ್ಮಲ್ಲಿ ಹೆಲಿಕ್ಯಾಫ್ಟರು ಎಷ್ಟಿವೆ ಜನಾ...ಅಂತ ಜನಾರ್ಧನ ರೆಡ್ಡಿಗೆ ಫೋನ್ ಮಾಡ್ತಿರೋದು ಯಡಿಯೂರಪ್ಪನವರೇನಾ?

ಬೇಡ ಬಿಡಿ.

ಪ್ರಮಾಣ ವಚನದ ದಿನ ಭೇಟಿಯಾಗೋಣ-ಯಡಿಯೂರಪ್ಪನವರ ಹೊಚ್ಛ ಹೊಸ ಸಫಾರಿಯ ಮೆರುಗಿನ ಬೆಳಕಿನಲ್ಲಿಛ್

ಜನಪ್ರಿಯ ಲೇಖನಗಳು