2.24.2008

ಮುಂಗಾರುಮಳೆ ಹೇಳಿದ್ದೇನು? - ಮುಂಗಾರುಮಳೆಯ ಕೊನೆಯದೊಂದು ವಿಮರ್ಶೆ

(ಸುಮಾರು ಒಂದು ವರ್ಷದ ಹಿಂದೆಯೇ ಬರೆದ ಈ ವಿಮರ್ಶೆ ಕಾರಣಾಂತರಗಳಿಂದ ಪ್ರಕಟವಾಗಿರಲಿಲ್ಲ. ಮುಂಗಾರು ಮಳೆಯ ಅಗಾಧ ಯಶಸ್ಸನ್ನೂ ಮನಸ್ಸಲ್ಲಿಟ್ಟುಕೊಂಡು ಈ ವಿಮರ್ಶೆ ಮೂಡಿಬಂದಿರುವುದಾದರೂ ಚಿತ್ರ ಪ್ರತಿಪಾದಿಸುತ್ತಿರುವ ಮುಕ್ತ-ಸಮಾಜ ಕಲ್ಪನೆಯೆಡೆಗೆ ನಮ್ಮನ್ನು ಯೋಚನೆಗೆ ಹಚ್ಚುತ್ತದೆ. ವಿಮರ್ಶೆ ಕುರಿತಂತೆ ಬರುವ ಎಲ್ಲಾ ಸಂದೇಹಗಳಿಗೆ ಲೇಖಕರಾದ ಶೇಖರ್‌ಪೂರ್ಣ ರವರೇ ಉತ್ತರ ನೀಡುತ್ತಾರೆ. ಮುಂಗಾರುಮಳೆಯನ್ನು ಇಷ್ಟಪಟ್ಟವರು, ಟೀಕಿಸಿದವರು ಎಲ್ಲರೂ ಒಂದೇ ವೇದಿಕೆಯಲ್ಲಿ ಚರ್ಚೆ ನಡೆಸಬೇಕೆಂಬುದು ನನ್ನ ಆಶಯ. ಏಕೆಂದರೆ ಚಿತ್ರವೊಂದು ವರ್ಷಾನುಗಟ್ಟಲೆ ಪ್ರದರ್ಶನಗೊಳ್ಳುತ್ತಾ ಕನ್ನಡ ಚಿತ್ರರಂಗ ಹಿಂದೆಂದೂ ಕಂಡಿರದ ಹಣವನ್ನು ಗಳಿಸಿಕೊಟ್ಟಿದ್ದು ಸಾಮಾನ್ಯ ಸಂಗತಿಯಲ್ಲ. ಚಿತ್ರ ಯುವಜನತೆಯ ಮೇಲೆ ಮೂಡಿಸಿದ ಪರಿಣಾಮದ ತೀವ್ರತೆ ಏನೇ ಇರಲಿ. ಅದು ಹೇಳುತ್ತಿರುವ, ಜಾಗತೀಕರಣಕ್ಕೆ ಉದಾಹರಿಸಬಹುದಾದ ಸಂಗತಿಗಳನ್ನು ಮರೆಮಾಚಲು ಸಾಧ್ಯವಿಲ್ಲ. ಬಹಳ ದಿನಗಳ ನಂತರ ನನ್ನ ಬ್ಲಾಗ್ ಅಪ್‌ಡೇಟ್ ಆಗಿದೆ. ಒಪ್ಪಿಸಿಕೊಳ್ಳಿ.

--ಅರೇಹಳ್ಳಿ ರವಿ )


ಲೇಖಕರು: ಶೇಖರ್‌ಪೂರ್ಣ, ಕನ್ನಡಸಾಹಿತ್ಯ.ಕಾಂ

"ಮುಂಗಾರುಮಳೆ ಸಿನಿಮಾ ನೋಡಲಿಕ್ಕೆ ಹೋಗೋಣವೆ..?" ಎಂದು ಅರೇಹಳ್ಳಿ ರವಿ ಮತ್ತು ಕಿರಣ್ ಕೇಳಿದಾಗ, ಮುಂಗಾರು ಮಳೆಯ ಅಗಾಧ ಯಶಸ್ಸಿನ ವಾಸ್ತವಕ್ಕೆ ಕಣ್ಮುಚ್ಚಿಕೊಳ್ಳುವುದು ಸರಿಯಲ್ಲ ಎಂದೆನ್ನಿಸಿ ಹೋಗಬೇಕೆಂಬ ತೀರ್ಮಾನ ಬಲವಾಯಿತು. ಅರೇಹಳ್ಳಿ ರವಿ ಎರಡು ಬಾರಿ ನೋಡಿಯಾಗಿತ್ತು. ಗೆಳೆಯ ರಾಘವ ಕೋಟೆಕಾರ್ ಸಹಾ ಎರಡು ಬಾರಿ ನೋಡಿದ್ದರು.
ಕನ್ನಡ ಚಿತ್ರರಂಗ ಇಂತಹ ಅಭೂತಪೂರ್ವ ಯಶಸ್ಸನ್ನು ಕಂಡಿದ್ದುದು ಮತ್ತು ಕಾಣಬಹುದಾದ ಸಾಧ್ಯತೆಯೂ ಕಡಿಮೆ. ಯಶಸ್ಸಿನ ಹಿನ್ನೆಲೆಯ ಬಗ್ಗೆ ಚಿಂತಿಸಲಾರಂಭಿಸಿದಂತೆ ಮುಂಗಾರು ಮಳೆಯ ಬಗೆಗೆ ದಿನಪತ್ರಿಕೆ ಮತ್ತು ದೂರದರ್ಶನ ವಾಹಿನಿಗಳಲ್ಲಿ ಬಂದಿರುವ ವಿಮರ್ಶೆಯ ಬೀಸನ್ನು ಗಮನಕ್ಕೆ ತೆಗೆದುಕೊಂಡರೆ ಆ ವಿಮರ್ಶೆಗಳೆಲ್ಲವೂ `impulsive' ಆದ ಪ್ರತಿಕ್ರಿಯೆಗಳು ಎಂದೇ ಅನ್ನಿಸಿತು. ಅವೆಲ್ಲವುಗಳ ಮಧ್ಯೆ ನನ್ನದೂ ಒಂದಷ್ಟು ಸಾಲುಗಳಿರಲಿ ಎಂದು ಈ ಕೆಳಗಿನ ಸಾಲುಗಳನ್ನು ಸೇರಿಸಿದ್ದೇನೆ.

ನಗರೀಕರಣದ ಪರಿಸರದಲ್ಲಿ ಮದುವೆ ಎಂದೆನ್ನುವುದು ಈಗ ಸಂಭ್ರಮಿಸಬಹುದಾದಂತಹ ಸನ್ನಿವೇಷವಾಗೇನೂ ಉಳಿದಿಲ್ಲ. ಮುಕ್ತ ಸಮಾಜದ ಅಂಶಗಳನ್ನೇ ಪ್ರಧಾನವಾಗಿ ತೆಗೆದು ತೋರಿಸುವಂತಹ ಟೈಮ್ಸ್ ಆಫ್ ಇಂಡಿಯ ಮತ್ತು ಇತರ ಆಂಗ್ಲ ಪತ್ರಿಕೆಗಳು ಹೂಡುವ ಸಾಮಾಜಿಕ ಪೀಠಿಕೆಗಳನ್ನು ಗಮನಿಸಿದಾಗ ಆ ಪತ್ರಿಕೆಗಳ ಪ್ರಧಾನ ಓದುಗರಾಗಿರುವ ಈ ಯುವ ಜನಾಂಗವೂ ಸಹಾ ಮುಕ್ತ ಸಮಾಜದ ಮೌಲ್ಯಗಳನ್ನೇ ಸಂಭ್ರಮಿಸಿ ಆಚರಣೆಗೆ ತರುವ ದಿಕ್ಕಿನತ್ತ ಹೊರಟಿದೆ. ಜೊತೆಗೆ ಪಾರಂಪರಿಕ ಮೌಲ್ಯಗಳನ್ನೂ ಸಹ ಬಿಡದೆ ಆಚರಿಸುತ್ತಿವೆ. ಹೇಗೆಂದರೆ :ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸವಾದನಂತರ ಕಾರೊಂದನ್ನು ಕಂತಿನ ಮೇಲೆ ಖರೀದಿಸಿ ವಾರ ಹದಿನೈದು ದಿನಗಳ ನಂತರ ಶೃಂಗೇರಿ, ಧರ್ಮಸ್ಥಳಕ್ಕೆ ಡ್ರೈವಿಂಗ್ ಫ್ಲೆಶರ್‌ನಂತಹ ತೀರ್ಥ ಯಾತ್ರೆಯಲ್ಲದ ಪ್ರವಾಸಕ್ಕೆ ಹೋಗಿ ಬಂದು, ಉಳಿದ ವಾರಾಂತ್ಯಗಳಲ್ಲಿನ ಚಟುವಟಿಕೆಗಳು ಹೀಗಿರಬಹುದು: ಹುಡುಗ ಹುಡುಗಿಯ ನಡುವೆ ಕಾಯಾ ವಾಚಾ ಮನಸಾ ಫ್ಲರ್ಟಿಂಗಿಗೆ ಅವಕಾಶ ನೀಡುವಂತಹ ಕಾಫೀ ಕ್ಲಬ್‍ಗಳು, ಶಾಪಿಂಗ್ ಮಾಲ್ ಭೇಟಿ, ವಿಂಡೋ ಶಾಪಿಂಗ್; ಅನಂತರ ದಿಢೀರನೆ ಒಂದು ದಿನ ‘ನಾನು ಮದುವೆ ಆಗುತ್ತಿದ್ದೇನೆ’, ಎಂಬ ಆಹ್ವಾನ ಪತ್ರಿಕೆಯ ಎರಚಾಟಗಳು. ಇಲ್ಲಿ ಅವರಿಬ್ಬರೇ ಮದುವೆ ಆಗಬಹುದು ಅಥವಾ ಬೇರೆಯೇ ಆದರೂ ಸರಿ. ಹೆತ್ತವರೂ ಸಹ ಕಡಿಮೆಯೇನಲ್ಲ. ಮಕ್ಕಳು ಸಾಫ್ಟ್‌ವೇರ್ ಪರಿಸರವನ್ನು ಸೇರಿ ಸಂಪಾದಿಸಲಾರಂಭಿಸಿದರೆ ಸಾಕು.
ವಿದೇಶಕ್ಕೆ ಒಂದೆರಡು ಟ್ರಿಪ್ ಇಲ್ಲದಿದ್ದರೆ ಹೇಗೆ? ಸಂಪಾದನೆ ಹೆಚ್ಚು ಬರುವುದಾರೆ ಸಾಫ್ಟ್‌ವೇರೇತರ ಪರಿಸರವಾದರೂ ನಡೆದೀತು. ಬಿಕ್ಕಟ್ಟು ಎದುರಾದಾಗ ಮನೆಗೆ ಬರುವ ಸೊಸೆ/ಅಳಿಯ ತನ್ನದೇ ಜಾತಿ/ಧರ್ಮದವನಾಗದಿದ್ದರೆ ಮುಗಿಲು ಮುಟ್ಟುವ ಆಕ್ರಂದನ. ಹೆತ್ತವರು ಇಲ್ಲಿ ಬಯಸುವುದು ಮಗ ಅಥವ ಮಗಳ ತ್ಯಾಗವನ್ನು. ಇಲ್ಲದಿದ್ದರೆ ಇಲ್ಲಿ ಸಂಬಂಧದ ವಿಚ್ಛೇದನಕ್ಕೂ ಅವರೂ ತಯಾರು.
ಮುಂಗಾರುಮಳೆಯ ಸಂಗೀತ, ಸಾಹಿತ್ಯ, ಛಾಯಾಗ್ರಹಣ, ಅಭಿನಯ ಎಲ್ಲದರ ಹದವಾದ ಮಿಶ್ರಣದ ಬಗೆಗೆ ಜನಸಾಮಾನ್ಯರಲ್ಲಿ ಮೆಚ್ಚುಗೆ.
ನನ್ನ ಮಟ್ಟಿಗೆ ಅಭಿನಯ, ಛಾಯಾಗ್ರಹಣ ಹಾಗು ಗೀತ ಸಾಹಿತ್ಯ ಇವ್ಯಾವುದನ್ನೂ ಚಿತ್ರದ ಸಮಗ್ರತೆಯಿಂದ ಬೇರ್ಪಡಿಸಿ ನೋಡಬಾರದು. ಈ ವಿಮರ್ಶೆಯ ಶಿಸ್ತನ್ನಿಟ್ಟುಕೊಂಡು ಮುಂಗಾರುಮಳೆ ತನ್ನ ಅಂತರ್ಗತದಲ್ಲಿ ಮಾತ್ರವಲ್ಲದೆ ಕೂಗಿ ಕೂಗಿ ಹೇಳುತ್ತಿರಬಹುದಾದದ್ದರ ಕಡೆಗೆ ಗಮನಿಸಿದಾಗ ಕಂಡದ್ದು-
ಬೇಡ ಗೆಳೆಯ ನಂಟಿಗೆ ಹೆಸರು, ಯಾಕೆ ಸುಮ್ಮನೆ..?

ಚಿತ್ರವೊಂದರಲ್ಲಿ ಗೀತಸಾಹಿತ್ಯ ಪಾತ್ರದ ಯಥೋಚಿತ ನಿರೂಪಣೆಯ ಭಾಗ ಎಂದೆನ್ನುವುದೇ ಆದರೆ ಈ ಚಿತ್ರದ ಗೀತ ಸಾಹಿತ್ಯ ಚಿತ್ರದ ಪ್ರಧಾನ ನಿರೂಪಣೆಗೆ ಹಾಗು ಅರ್ಥಕ್ಕೆ ಪರ್ಯಾಯ ಆಯಾಮವನ್ನು ಕಲ್ಪಿಸುತ್ತಿರುವುದು ಈವರೆಗೆ ಬಂದಿರುವ ವಿಮರ್ಶೆಗಳ ಸಾಲು-ಮಾತುಗಳಲ್ಲಿ ಎಲ್ಲಿಯೂ ಕಂಡು ಬರುತ್ತಿಲ್ಲ. ಚಿತ್ರದ ಒಟ್ಟು ಸಾರಾಂಶವನ್ನು ಹೇಳಿ ಮುಂದುವರೆಯುವುದು ಸಂದರ್ಭೋಚಿತ ಎಂದೆನ್ನಿಸುವುದರಿಂದ ಅದರ ಸಾರಾಂಶ:
ನವೀನ ಕಾರುಗಳನ್ನು ಬಿಕರಿಗಿಟ್ಟಿರುವ, ಸಂಖ್ಯೆಯಲ್ಲಿ ಬೆಳೆಯುತ್ತಲೇ ಹೋಗುತ್ತಿರುವ ಆಟೋ ಡೀಲರ್‌ಗಳು, ಕಿರಾಣಿ ಅಂಗಡಿಯನ್ನು ಸಂದಿಗೆ ನೂಕಿ ಬೀದಿಯ ಪ್ರಧಾನ ಸ್ಥಾನವನ್ನಾಕ್ರಮಿಸಿಕೊಳ್ಳುತ್ತಿರುವ ಬ್ರಾಂಡೆಡ್ ವಸ್ತು/ಉಡುಪುಗಳನ್ನೇ ಮಾರಾಟ ಮಾಡಲು ಹುಟ್ಟಿಕೊಂಡಿರುವ ಸಹಸ್ರಾರು ಶಾಪಿಂಗ್ ಮಾಲ್ ಗಳುಳ್ಳ ಬೆಂಗಳೂರು ನಗರ. ಈ ಶಾಪಿಂಗ್ ಮಾಲ್‌ಗಳ ಖಾಯಂ ಗಿರಾಕಿ ಎಂದೆನ್ನಿಸಬಹುದಾದವನೇ ಚಿತ್ರದ ಪ್ರಧಾನ ಪಾತ್ರಗಳಲ್ಲಿ ಒಂದಾದ ಪ್ರೀತಮ್ ಎಂಬ ಯುವಕ. ನಂದಿನಿ ಎನ್ನುವ ಹುಡುಗಿಗೆ ವಿವಾಹ ನಿಶ್ಚಯವಾಗಿದೆ ಎನ್ನುವುದನ್ನು ತಿಳಿಯದೆಯೇ ಪ್ರೀತಂಗೆ ಅವಳ ಬಗ್ಗೆ ಪ್ರೀತಿ-ಅನುರಾಗ. ಪ್ರೀತಂ ಭಾರೀ ಉದ್ಯಮಿಯ ಹಿನ್ನೆಲೆಯುಳ್ಳ ಹೆತ್ತವರಿಗೆ ಸಹಜವಾಗಿಯೇ ಮುದ್ದಿನ ಒಬ್ಬನೇ ಮಗ. ಹಾಗೆಯೇ ನಂದಿನಿಯೂ ಸಹ ಒಬ್ಬಳೆ ಮಗಳು. ಪ್ರೀತಮ್‌ನ ತಾಯಿ ಕಮಲ ಹಾಗು ನಂದಿನಿಯ ತಾಯಿ ಬಬಿತಾ ಗಾಢ ಸ್ನೇಹಿತೆಯರು. ಮೊದಲೇ ಆಯೋಜಿತಗೊಂಡ ನಂದಿನಿಯ ಮದುವೆ ಸಮಾರಂಭಕ್ಕೆ ಕಮಲಳ ಜೊತೆ ಪ್ರೀತಮ್ ಸಹಾ ಹೋಗುವುದು, ಚಿತ್ರವು ತನ್ನ ಪ್ರಸ್ತಾವನೆಯಲ್ಲಿ ಪಾರಂಪರಿಕ ಮೌಲ್ಯವಾದ ತ್ಯಾಗವನ್ನು ಎತ್ತಿ ಹಿಡಿಯಲು ಬೇಕಾಗಿರುವ ಸನ್ನಿವೇಶ ಹಾಗು ಕಥೆಯ ಮಟ್ಟಿಗೆ ಅನಿವಾರ್ಯ.
ಈ ಅನಿವಾರ್ಯದ ನಡುವೆ ನಂದಿನಿಗೆ ಮದುವೆಯ ಬಗೆಗೆ ಸಂಪೂರ್ಣ ಅರಿವಿದೆ. ಬಂದಿರುವುದು ನಂದಿನಿಯ ಮದುವೆಗೆ ಎನ್ನುವ ಸಂಗತಿ ಪ್ರೀತಮ್‌ಗೆ ಸ್ವಲ್ಪ ಆಘಾತಕಾರಿಯಾಗಿದ್ದರೂ ಕಾಯಾ ವಾಚಾ ಮನಸಾ ನಂದಿನಿಯನ್ನು ಬೆಂಬತ್ತುವುದನ್ನು ಮುಂದುವರೆಸುವುದು ಚಿತ್ರದ ಭಾವೋತ್ಕಟದ ವಲಯವನ್ನು ಹಿಗ್ಗಿಸುತ್ತಾ ಹೋಗುತ್ತದೆ. ಇನ್ನೊಬ್ಬನು ಕಟ್ಟುವ ತಾಳಿಗೆ ಕೊರಳೊಡ್ಡುವ ಹೆಣ್ಣು ತಾನು, ಅದನ್ನು ಮನಃಸ್ಪೂರ್ತಿಯಾಗಿ ಅಂಗೀಕರಿಸಿದ್ದೇನೆ ಎನ್ನುವ ಸಂಗತಿ ನಂದಿನಿಗೂ ಅರಿವಿದೆ. ಈ ಅರಿವಿನ ಮಧ್ಯೆ ಪ್ರೀತಮ್ ಕುರಿತಂತೆ ಇವನು ಗೆಳೆಯನಲ್ಲ, ಗೆಳತಿ ನಾನು ಮೊದಲೇ ಅಲ್ಲ, ಇವನು ಇನಿಯನಲ್ಲ, ತುಂಬ ಸನಿಹ ಬಂದಿಹನಲ್ಲ-ಎನ್ನುವ ಪ್ರಾರಂಭದ ಮೃದು ಧೋರಣೆಯ ನಂತರ-ಬೇಡ ಗೆಳೆಯ ನಂಟಿಗೆ ಹೆಸರು ಏಕೆ ಸುಮ್ಮನೆ? ಎಂದು ಮುಕ್ತ ಬಾಂಧವ್ಯದ ಪ್ರಸ್ತಾವನೆಯನ್ನು ಯುವ ಪ್ರೇಕ್ಷಕರ ಮುಂದಿಡುತ್ತಾಳೆ. ನಂದಿನಿಯ ಭಾವೋತ್ಕಟತೆಯ ಸಂಪೂರ್ಣ ಪರಿಚಯವಿರುವ ಪ್ರೀತಂ ಅವಳು ಮದುವೆ ಮಾಡಿಕೊಂಡರೇನಂತೆ ಎಂದೆನ್ನುವ ರೀತಿಯಲ್ಲಿ ಮದುವೆ ವಿವಾಹ ಮಹೋತ್ಸವದ ಪರಿಸರವನ್ನು ಬಿಟ್ಟು ಆಚೆಗಿನ ಪರಿಧಿಯಲ್ಲಿ ನಿಲ್ಲುತ್ತಾನೆ.ಏಕೆಂದರೆ ಪರಸ್ಪರ ಇಬ್ಬರಿಗೂ ಗೊತ್ತು, ವಿವಾಹೇತರ ಸಂಬಂಧದ ಸಾಧ್ಯತೆಯನ್ನು ಬೆಂಗಳೂರಿನಂತಹ ನಗರಗಳು ಈಗಾಲೇ ಅಂಗೀಕರಿಸಲಾರಂಭಿದೆ ಎನ್ನುವುದು. ಚಿತ್ರದ ಅಗಾಧ ಯಶಸ್ಸಿಗೆ ಈ ಪ್ರಸ್ತಾವನೆಯೂ ಹಾಗು ಒಡಂಬಡಿಕೆ ಸಹಾ ಒಂದು ಪ್ರಧಾನ ಕಾರಣವೆಂದು ಹೇಳಬಹುದೆ...?

ಬರೀ ಯುವ ಪ್ರೇಕ್ಷಕ ವೃಂದ ಸಾಲಿಟ್ಟು ಚಿತ್ರ ನೋಡಿದರಷ್ಟೇ ಸಾಲದು, ಹೆತ್ತವರೂ ಸಹ ಚಿತ್ರವನ್ನು ಆಮೋದಿಸುವಂತಹ ಅಂಶಗಳನ್ನು ಎತ್ತಿ ಹಿಡಿಯುವಂತೆ ಹಿರಿಯ ತಲೆಮಾರಿನ ನಟ ಅನಂತನಾಗ್, ಕಿರುತೆರೆಯ ಮೂಲಕ ಎಲ್ಲ ಮನೆಗಳಲ್ಲಿ ಪ್ರವೇಶಿಸಿರುವ ನಟಿ ಪದ್ಮಜಾ ರಾವ್ ಇದ್ದಾರೆ. ಈಗಿನ ಎಲ್ಲ ಹುಡುಗರು ಮುದ್ದು ಮುದ್ದಾದ ಪ್ರೀತಮ್‌ನಂತೆಯೇ ಏನನ್ನಾದರೂ ಸಾಧಿಸಿ ತೋರಿಸುವಂತಹ(ವಿವಾಹ ಮತ್ತು ವಿವಾಹೇತರ ಸಂಬಂಧವನ್ನೂ ಸಹಾ) ಮಕ್ಕಳಿರಬಾರದೆ ಎಂದೆನ್ನುವ ಕಲ್ಪನೆಯೊಂದಿಗೆ ನಮ್ಮ ಹುಡುಗರೂ ಹೀಗೆಯೇ ಅಲ್ಲವೆ ಇರುವುದು ಎಂಬ ಧಾಷ್ಟಿಕತನವನ್ನು ಹೂಡಿಸುವಂತಿದೆ. ಜೊತೆಗೆ ಪ್ರೀತಂ ನಂದಿನಿಯನ್ನು ಪ್ರೀತಿಸುತ್ತಿದ್ದಾನೆ ಎಂದೆನ್ನುವ ಸಂಗತಿ ತಾಯಿ ಕಮಲಳಿಗೆ ಗೊತ್ತು. ಅವನು ನಂದಿನಿ ಬೇಕೇ ಬೇಕು ಎಂದುಕೊಂಡರೆ ಅವಳು ಅವನ ಜೊತೆ ಓಡಿ ಹೋಗಲು ತಯಾರಿದ್ದಾಳೆ ಅನ್ನುವುದೂ ಗೊತ್ತು. ಹೀಗೆ ಅಂತಹ ಅವಕಾಶವಿದ್ದರೂ ಅದನ್ನು ತಿರಸ್ಕರಿಸಿ ಉದಾತ್ತ ತ್ಯಾಗದ ಮೌಲ್ಯವನ್ನು ಎತ್ತಿ ಹಿಡಿಯುವ ನಡವಳಿಕೆ ಉಳ್ಳ ಮಗ ಎಂದೆನ್ನುವ ಸಂತೃಪ್ತಿಯನ್ನು ಚಿತ್ರ ವಯಸ್ಸಾದ ತಂದೆ ತಾಯಿಯರಿಗೂ ಕೊಟ್ಟು ತಣಿಸುತ್ತದೆ.

ಒಂದೇ ಎಡೆ ಕಿರಿಯ ಮತ್ತು ಹಿರಿಯ ತಲೆಮಾರುಗಳೆರಡಕ್ಕೂ ಅಪ್ಯಾಯಮಾನವಾಗುವಂತೆ ಚಿತ್ರದ ನಿರೂಪಣೆ ಇರುವುದು ಗಟ್ಟಿತನವೋ ಅಥವ ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳ ಕುಸಿತಕ್ಕೆ ಒಂದು ಉದಾಹರಣೆಯೋ ಎಂಬ ಪ್ರಶ್ನೆಯನ್ನೂ ಇಲ್ಲಿ ಇಡಲಾಗುತ್ತಿದೆ.
ಮೇಲಿನ ಸಾಲುಗಳಿಗೆ ಪೂರಕವಾಗುವಂತೆ ಚಿತ್ರದಿಂದಲೇ ಒಂದಷ್ಟು ಸನ್ನಿವೇಶಗಳನ್ನು ಹೆಕ್ಕಿ ಈ ಕೆಳಗೆ ಪಟ್ಟಿ ಮಾಡುತ್ತಿದ್ದೇವೆ-
೧. ಎಲ್ಲವನ್ನೂ ಉಢಾಫೆಯಿಂದಲೇ ಕಾಣಬಹುದಾದ ನಾಯಕ ಪ್ರೇಮ-ಪ್ರಣಯದ ಭಾವಕ್ಕೆ ಸಿಲುಕುವುದು.
೨. ಆಗಂತುಕನ ಪ್ರೇಮದ ಪ್ರಸ್ತಾವನೆ ಬಂದಾಗ "ಹುಚ್ಚು ಹಿಡಿದಿದೆಯೆ ನಿನಗೆ?" ಎಂದು ಅದನ್ನು ನಿರಾಕರಿಸುತ್ತಾಳೆ. ಏಕೆಂದರೆ ಮೂರು ದಿನಗಳಲ್ಲಿ ದೇಶಭಕ್ತ ಸೈನಿಕನೊಬ್ಬ ಕಟ್ಟುವ ತಾಳಿಗೆ ಕೊರಳನ್ನು ಒಡ್ಡುವವಳಿದ್ದಾಳೆ.

೩. ಒಂದು ಪ್ರೇಮೋತ್ಕಟತೆಯ ಸಂಭಾವ್ಯವನ್ನು ಉದಾಹರಿಸಲು ಬಳಸುವ ಸಾಹಿತ್ಯಿಕ ಪ್ರತಿಮೆಗಳೆಂದರೆ ರೋಮಿಯೋ ಜ್ಯೂಲಿಯೆಟ್, ಸಲೀಮ್ ಅನಾರ್ಕಲಿ ಮಾತ್ರವೇ ಅಲ್ಲ, ಶರತ್‍ಚಂದ್ರ ಚಟರ್ಜಿಯವರ ದೇವದಾಸ್ ಮತ್ತು ಪಾರ್ವತಿಯರ ದಶಕಗಳಿಂದ ರೂಢಿಯಲ್ಲಿರುವ ಪ್ರತೀಕವೇ. ಅಂತಹ ದೇವದಾಸ್ ಚಿತ್ರವನ್ನು ನೆನಪಿಸುವಂತೆ ಮೊಲದ ರೂಪದಲ್ಲಿ ದೇವದಾಸ್‍ನ ಹೆಸರು ಚಿತ್ರದ ತುಂಬ ಕೇಳಿ ಬರುತ್ತದೆ. ಶುದ್ಧವಲ್ಲದ ಶುದ್ಧ ಪ್ರೇಮಕ್ಕೆ ಪ್ರತೀಕವಾಗಿರುವ ದೇವದಾಸ್‍ನನ್ನು ಚಿತ್ರದಲ್ಲಿ ಸಾಯಿಸಲಾಗಿದೆ. ಒಂದು ಕಡೆ ತ್ಯಾಗ ಮತ್ತೊಂದು ಕಡೆ ಪ್ರೇಮದ ಉತ್ಕಟತೆಯನ್ನು ದೇವದಾಸ್ ಪ್ರತಿನಿಧಿಸುತ್ತದೆ ಎಂಬ ಸಾಮಾನ್ಯ ಗ್ರಹಿಕೆಯಲ್ಲಿ ಮುಂಗಾರುಮಳೆಯನ್ನಿಟ್ಟು ನೋಡಿದಾಗ ಪ್ರೀತಮ್ ಸಾಯದೆ ಬದುಕುಳಿದಿದ್ದಾನೆ. ಅಂದರೆ ತ್ಯಾಗದ ನಂತರ ಉಳಿಯುವುದೇನು?
೪. ನಂದಿನಿಯಿಂದ ಹುಚ್ಚ ಎಂದಷ್ಟೆ ಪರಿಗಣಿಸಲ್ಪಟ್ಟಿರುವ ಪ್ರೀತಂ ಅವಳ ಮದುವೆಯ ಹಿಂದಿನ ದಿನ, ಮಾನಸಿಕ ಯಾತನೆಯನ್ನು ಭರಿಸಲಾರದೆ ತನ್ನ ಮನೆಗೆ ಹಿಂದಿರುಗುತ್ತಿದ್ದಾನೆ. ಆಗ ಪ್ರಚೋದನೆ ಎಂಬಂತೆಯೇ ನಂದಿನಿ, ತಾಳಿ ಕಟ್ಟುತ್ತೇನೆ ಎಂದೆನ್ನುತ್ತಿದ್ದವನು ಈಗ ಓಡಿ ಹೋಗುತ್ತಿದ್ದೀಯೇಕೆ? ಎಂದು ಪ್ರಶ್ನಿಸಿ ಅವನನ್ನು ಪುನಃ ತನ್ನ ಬಳಿಗೆ ಪರೋಕ್ಷವಾಗಿ ಆಹ್ವಾನಿಸುತ್ತಾಳೆ.
೫. ಓಡಿ ಹೋಗೋಣವೇ ಎಂದು ಪ್ರೀತಂ ಕೇಳಿದಾಗ ಹುಚ್ಚುಮನಸ್ಸಿನ ಹುಡುಗಾಟಿಕೆಯ ಪ್ರಸ್ತಾವನೆಯೆಂದಷ್ಟೆ ಮೊದಮೊದಲು ಉಪೇಕ್ಷಿಸುವ ನಂದಿನಿ, ಮದುವೆ ಆಗುತ್ತಿದ್ದೇದ್ದೇನೆ ಎಂದು ಗೊತ್ತಿದ್ದೂ ಕೆಲವೇ ಗಂಟೆಗಳ ನಂತರ ಓಡಿ ಹೋಗೋಣ ಎಂದು ಪ್ರೀತಂನನ್ನೇ ಆಗ್ರಹಿಸುತ್ತಾಳೆ.
೬. ಮದುವೆಯಾಗಲಿರುವೆ ಎಂದು ಗೊತ್ತಿದ್ದೂ, ಓಡಿ ಹೋಗೋಣ ಎಂದು ಪ್ರೀತಂನನ್ನು ಆಗ್ರಹಿಸಿದ ಕೆಲವು ಗಂಟೆಗಳ ನಂತರ ನಿಗಧಿಯಾಗಿದ್ದ ದೇಶಭಕ್ತ ಸೈನಿಕನ ತಾಳಿಗೆ ಕೊರಳೊಡ್ಡುತ್ತಾಳೆ.
(ಬೇಡ ಗೆಳೆಯ ನಂಟಿಗೆ ಹೆಸರು ಎಂಬ ಸಾಲನ್ನು ಮೇಲಿನ ವಿಮರ್ಶೆಯಲ್ಲಿ ಬಳಸಿಕೊಳ್ಳಲಾಗಿದೆ. ಸಂಬಂಧವೊಂದು ಪಾರಮಾರ್ಥಿಕ ಮಟ್ಟಕ್ಕೂ ಏರಬಲ್ಲುದು ಎಂಬ ಧ್ವನಿಯನ್ನು ಈ ಸಾಲು ಸೂಚಿಸುತ್ತದೆ ಎಂಬ ವಾದವೂ ಬರಬಹುದು. ಈ ಚಿತ್ರದ ಪ್ರೀತಂ-ನಂದಿನಿಯರ ‘ಸಂಬಂಧ’ ಮಾತ್ರ ಪಾರಮಾರ್ಥಿಕ ಮಟ್ಟದ್ದಲ್ಲ ಎಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ಚಿತ್ರದಿಂದಲೇ ಆಯ್ಕೆ ಮಾಡಿ ನೀಡಲಾಗಿದೆ)

ಎಲ್ಲರಿಗೂ ಸಮ್ಮತವಾಗುವ ಅಂಶಗಳನ್ನು ಅಡಕಗೊಳಿಸಿರುವುದು ಚಿತ್ರದಲ್ಲಿ ದುಡಿದಿರುವ ಎಲ್ಲರ ಜಾಣ್ಮೆಯನ್ನೂ ಎತ್ತಿ ತೋರಿಸುತ್ತದೆ. ಯೋಗರಾಜಭಟ್ಟರು, ಗಣೇಶ್, ಮನೋಮೂರ್ತಿಯವರಿಗೂ ಹಾಗು ಗೆಳೆಯ ಜಯಂತ್ ಕಾಯ್ಕಿಣಿಯವರಿಗೆ ಅಭಿನಂದನೆಗಳು.

1 comment:

Anonymous said...

ಹೌದು ಸ್ವಾಮೀ ನೀವು ಹೆಳ್ತಿರೋದು ನೂರಕ್ಕೆ ನೂರು ದಿಟ. ಆದರೇನು ಮಾಡೋಡು ಭರ್ಜರಿ ಮಳೆ ಘಟ್ಟಿಸಿದೆ. ನೆಲ ಎಲ್ಲವನ್ನೊ ಮರೆಯುತ್ತೆ; ರಾತ್ರಿ ತನ್ನ ಮೇಲಾದ ಕೊರೆತ ತಗ್ಗು ಗುಂಡಿಗಳ ತುಂಬ ನೀರು ತುಂಬಿಸಿ ಬೀಗುತ್ತದೆ. ಪಾಪ ಮಳೆಯೇನು ಮಾಡೀತು. ಮಳೆ ಕರೆಸುವವರು, ಉಯ್ಯಿಸಿಕೊಳ್ಳುವವರು ಇಬ್ಬರೂ ಮುಕ್ತರೇ.

-ರಾಜಶೇಖರ್

ಜನಪ್ರಿಯ ಲೇಖನಗಳು