4.13.2008
ಹಣವೂ, ಹಸಿದ ಹೊಟ್ಟೆಗಳೂ, ಹಿಟ್ಲರನೂ ನೆನಪಾದಾಗ...
ಅದು ಮೊದಲ ಮಹಾಯುದ್ಧದ ನಂತರ ಕಾಲ. ಮಿತ್ರ ಸೇನೆಯ ಎದುರು ಹೀನಾಯವಾಗಿ ಸೋತ ಜರ್ಮನಿ ತನ್ನ ಭೂಭಾಗಗಳನ್ನು ಕಳೆದುಕೊಂಡಿದ್ದಲ್ಲದೆ, ಯುದ್ಧ ನಷ್ಟವೆಂದು ಅಪಾರವಾದ ವೆಚ್ಚವನ್ನು ಭರಿಸಬೇಕಾಯಿತು.
ಜರ್ಮನಿಯಲ್ಲೊಂದು ನೀರಸ ಹಗಲು ಆಕಳಿಸಿ ಮೈಮುರಿಯುತ್ತಿದ್ದ ವೇಳೆ. ಮಹಿಳೆಯೋರ್ವಳು ತನಗೆ ಸಂಬಳವಾಗಿ ಬಂದ ದೊಡ್ಡ ಮೊತ್ತದ ನೋಟುಗಳನ್ನು ಚರ್ಮದ ಬ್ಯಾಗಿನಲ್ಲಿ ತುಂಬಿಕೊಂಡು ಒಯ್ಯುತ್ತಿದ್ದಳು. ಮೊದಲೇ ಕಳ್ಳಕಾಕರ ಕಾಟ ವಿಪರೀತವಾಗಿದ್ದ ದಿನಗಳವು. ಮಂಜು ಮುಸುಕಿದ ಹಗಲು. ಇಡೀ ಬೀದಿ ನಿರ್ಮಾನುಷ್ಯವಾಗಿತ್ತು. ಆದರೆ ಈ ಮಹಿಳೆಗೆ ಅದ್ಯಾವುದರ ಭಯ ಇರಲಿಲ್ಲ. ಇರುವ ಹಣದಲ್ಲೇನೇನು ಕೊಳ್ಳಬಹುದು ಎಂಬ ಲೆಕ್ಕಾಚಾರದ ಅನ್ಯಮನಸ್ಕತೆ. ಶೌಚಕ್ಕೆ ಹೋಗಬೇಕೆನಿಸಿ ದಾರಿ ಪಕ್ಕದ ಶೌಚಾಲಯದತ್ತ ನಡೆದಳು. ಅಲ್ಲೇ ಟಾಯಿಲೆಟ್ಟಿನ ಹೊರಗೆ ಬೆಂಚಿನ ಮೇಲೆ ಬ್ಯಾಗ್ ಬಿಸಾಡಿದವಳೇ ಒಳಗೆ ನುಗ್ಗಿದಳು. ಅವಳು ಹೊರಗೆ ಬಂದಾಗ ಆಕೆಯ ಬ್ಯಾಗ್ ಕಳುವಾಗಿತ್ತು. ಆದ್ರೆ ಕಳ್ಳರು ಬ್ಯಾಗನ್ನು ಮಾತ್ರ ತಗೊಂಡು ಹಣವನ್ನು ಅಲ್ಲೇ ಬೆಂಚಿನ ಮೇಲೆ ಸುರಿದು ಹೋಗಿದ್ದರು. ಕಳ್ಳರಿಗೆ ಆ ಚರ್ಮದ ಬ್ಯಾಗು ಅಷ್ಟೊಂದು ಬೆಲೆಬಾಳುವಂತದ್ದಾಗಿತ್ತು. ಕರೆನ್ಸಿ ಅವರ ದೃಷ್ಟಿಯಲ್ಲಿ ಕಸಕ್ಕೆ ಸಮನಾಗಿತ್ತು.
ಇಂಥ ಹಲವು ಘಟನೆಗಳು ಜಾನ್ ಟೊಲ್ಯಾಂಡನ ಜರ್ಮನಿ ಕುರಿತ ಬರಹಗಳಲ್ಲಿ ದಾಖಲಾಗಿವೆ.
ಇಷ್ಟಕ್ಕೂ ಕಳ್ಳರಿಗೆ ಯಾಕೆ ಕರೆನ್ಸಿ ಬೇಡದ ವಸ್ತುವಾಗಿತ್ತು?
ಅದು ಹಣದುಬ್ಬರದ ಪರಿಣಾಮ!
ಜರ್ಮನಿಯ ಯುದ್ಧಾನಂತರದ ದುಸ್ತರ ದಿನಗಳವು. ಯಾವ ದೇಶವೂ ಜರ್ಮನಿಯನ್ನು ಆರ್ಥಿಕವಾಗಿ ಮೇಲೆತ್ತಲು ಸಹಕಾರ ನೀಡಲು ಸಿದ್ಧರಿರದ ಕಾಲ. ಕಾರಣ ಹಲವಾರು ವರ್ಷಗಳು ಯುದ್ಧದಲ್ಲೇ ತೊಡಗಿಕೊಂಡದ್ದರಿಂದ ಬಹುತೇಕ ರಾಷ್ಟ್ರಗಳ ಆರ್ಥಿಕತೆ ಹದಗೆಟ್ಟು ಹೋಗಿತ್ತು. ಹಣದುಬ್ಬರವೆಂಬುದು ಜರ್ಮನಿಯಲ್ಲಿ ಮುಗಿಲು ಮುಟ್ಟಿತ್ತು. ಕರೆನ್ಸಿ ಬೆಲೆ ಕಳೆದುಕೊಂಡಿತ್ತು.
ಇಂಥಹ ದುಸ್ಥಿತಿಯಿಂದ ಜರ್ಮನಿ ಪಾರಾಗಲು ಒಬ್ಬ ಹಿಟ್ಲರ್ ಹುಟ್ಟಿಬರಬೇಕಾಯಿತು.
ಹಿಟ್ಲರನ ಬಿಗಿ ನಿಲುವುಗಳು, ದೇಶವನ್ನು ಸಧೃಡಗೊಳಿಸುವಲ್ಲಿ ಅವನಿಗಿದ್ದ ಕಾಳಜಿಗಳು ಜರ್ಮನಿ ಕೆಲವೇ ವರ್ಷಗಳಲ್ಲಿ ಸುಧಾರಿಸಿಕೊಳ್ಳಲು ನೆರವಾದವು. ಜರ್ಮನಿಯ ಪ್ರತಿ ಪ್ರಜೆಯನ್ನು ದುಡಿಯಲು ಹಚ್ಚಿದ ಹಿಟ್ಲರ್ ಮುರಿದು ಬಿದ್ದ ಸಾಮ್ರಾಜ್ಯಕ್ಕೆ ಕಾಯಕಲ್ಪ ನೀಡಿ ಇಡೀ ಪ್ರಪಂಚಕ್ಕೆ ಸಡ್ಡು ಹೊಡೆದು ನಿಂತಿದ್ದು-ನಮಗೆಲ್ಲ ಗೊತ್ತಿರುವುದೇ.
ಇತ್ತ ದಿನನಿತ್ಯ ಮಾಧ್ಯಮಗಳಲ್ಲಿ ಕಮ್ಯೂನಿಸ್ಟ್ ರಾಷ್ಟ್ರ ಜಿಂಬಾಬ್ವೆಯ ಆರ್ಥಿಕ ಅಧೋಗತಿಯ ವರದಿಗಳನ್ನು ಕೇಳುತ್ತಿದ್ದೇವೆ. ಅಲ್ಲೀಗ ಹಣದುಬ್ಬರ ಒಂದೂವರೆ ಲಕ್ಷ ಪಟ್ಟು ಜಾಸ್ತಿಯಾಗಿದೆ. ಅದು ತೀರ ಮೊನ್ನೆ ಫೆಬ್ರವರಿಯಲ್ಲಿ ಒಂದು ಲಕ್ಷ ಪಟ್ಟಿನಷ್ಟಿತ್ತು. ಸಣ್ಣ ಪುಟ್ಟ ಮೊತ್ತದ ಮುಖಬೆಲೆಯ ನೋಟುಗಳಿಗೆ ಅಲ್ಲೀಗ ಬೆಲೆಯಿಲ್ಲ. ಇಂಥ ಪರಿಸ್ಥಿತಿಯನ್ನು ಎದುರಿಸಲು ಜಿಂಬಾಬ್ವೆ ಸರ್ಕಾರ ೫೦೦೦೦೦೦ ಡಾಲರ್ ಮುಖಬೆಲೆಯ ನೋಟನ್ನು ಬಿಡುಗಡೆ ಮಾಡಿದೆ. ಇಷ್ಟಾದರೂ ಅಂತರರಾಷ್ಟ್ರೀಯವಾಗಿ ಈ ನೋಟಿನ ಬೆಲೆಯಾದರೂ ಎಷ್ಟು ಗೊತ್ತೆ? ಕೇವಲ ಒಂದೂ ಕಾಲು ಅಮೇರಿಕನ್ ಡಾಲರ್‌ಗಳು!
ಕಡಿಮೆ ಮುಖಬೆಲೆಯ ನೋಟುಗಳು ಅಲ್ಲೀಗ ಕಸದ ತೊಟ್ಟಿಯ ಪಾಲು. ಅವು ಮಕ್ಕಳಿಗೆ ಆಟದ ವಸುವಾಗಿವೆ.
ಅಲ್ಲೀಗ ದೊಡ್ಡ ದೊಡ್ಡ ಮಾಲ್‍ಗಳ Rackಗಳಲ್ಲಿ ಆಹಾರ ಧಾನ್ಯದ ಪೊಟ್ಟಣಗಳಿಲ್ಲ. ಅಂಗಡಿ ಬೀದಿಗಳು ನಿರ್ಮಾನುಷ್ಯ. ನಮ್ಮವರೇ ಗುಜರಾತಿ ವಣಿಕರು ಅಲ್ಲೀಗ ಅಂಗಡಿ ತೆರೆದಿಟ್ಟು ನೊಣ ಹೊಡೆಯುವಂತಾಗಿದೆ. ಆಹಾರ ಧಾನ್ಯಗಳ ಉತ್ಪಾದನೆ ದಾಖಲೆ ಪ್ರಮಾಣದಲ್ಲಿ ಕುಸಿದಿದೆ. ಕನಿಷ್ಟ ತನ್ನ ಪ್ರಜೆಗಳಿಗಾಗುವಷ್ಟಾದರೂ ಆಹಾರಧಾನ್ಯಗಳ ಉತ್ಪಾದನೆಯಿಲ್ಲ. ಇದು ಅಲ್ಲಿನ ಹಣದುಬ್ಬರಕ್ಕೆ ಪ್ರಮುಖ ಕಾರಣಗಳಲ್ಲೊಂದು.
ಅಲ್ಲಿನ ಜನರಿಗೆ ಸದ್ಯಕ್ಕೆ ಯಾವುದನ್ನು ಕೊಂಡುಕೊಳ್ಳುವ ಅವಕಾಶವಿಲ್ಲ. ಅವರ ಉದ್ದೇಶವೊಂದೇ ಸಾಧ್ಯವಾದಷ್ಟೂ ದವಸವನ್ನು ಕೊಂಡು ಸಂಗ್ರಹಿಸುವುದು. ಯಾರಿಗೆ ಗೊತ್ತು-ನಾಳೆ ಯಾವ ಬೆಲೆ ಇರುತ್ತದೋ...? ಇರುವ ದುಡ್ಡಿನಲ್ಲಿ ಸದ್ಯಕ್ಕೆ ಊಟದ ವಿಷಯ ನೋಡಿಕೊಳ್ಳೋಣ ಎಂಬ ಮನೋಭಾವ ಅಲ್ಲಿನವರದು. ಅಲ್ಲಿನ ಆಹಾರ ಧಾನ್ಯಗಳ ಕೊರತೆ ೩,೬೦ ೦೦೦ ಟನ್ನುಗಳು.
೩೦ ಪೌಂಡುಗಳ ಆಲೂಗಡ್ಡೆ ಬ್ಯಾಗ್‌ಗೆ ಇನ್ನೂರು ಮಿಲಿಯನ್ ಡಾಲರ್‌ಗಳು! ೫೦ ಮಿಲಿಯನ್ ಡಾಲರ್ ನೋಟಿಗೆ ಸಿಗೋದು ಮೂರೇ ಮೂರು ಪೀಸು ಬ್ರೆಡ್ಡು. ಅಲ್ಲೀಗ ಎಲ್ಲರೂ ಮಿಲಿಯನೇರ್‌ಗಳೇ!
ಆದರೆ ಕಡು ಬಡವರು.
ಜನಸಂಖ್ಯೆ ಒಂದೂವರೆ ಕೋಟಿ. ಬಡತನದ ಜೊತೆಗೆ ಏಡ್ಸ್ ರೋಗ ಇಲ್ಲಿನ ಜನಸಂಖ್ಯೆಯನ್ನು ಇಳಿಮುಖವಾಗಿ ತಳ್ಳುತ್ತಿದೆ. ವಿದೇಶಗಳಿಂದ ಬರುವ ಸಹಾಯ ಯಾತಕ್ಕೂ ಸಾಲುತ್ತಿಲ್ಲ. ಜಿಂಬಾಬ್ವೆಯ ಸುಧಾರಣೆಗೆ ಹಿಟ್ಲರ್‌ನಂತವರು ಯಾರೂ ಇಲ್ಲ. ಅಲ್ಲೀಗ ಮುಗಾಬೆಯ ದರ್ಬಾರು. ಅಧ್ಯಕ್ಷ ರಾಬರ್ಟ್ ಮುಗಾಬೆಯ ದುರಾಡಳಿತದ ಫಲ ಈ ಬಡತನ. ಬ್ರಿಟೀಷರ ವಸಾಹತು ರೊಡೇಷಿಯ ೧೯೮೦ರಲ್ಲಿ ಸ್ವತಂತ್ರವಾಗಿ ಜಿಂಬಾಬ್ವೆ ಎಂಬ ಹೆಸರಿನಲ್ಲಿ ಕಮ್ಯೂನಿಸ್ಟ್ ರಾಷ್ಟ್ರವಾದಂದಿನಿಂದ ಅರಂಭವಾದ ಅಲ್ಲಿನ ಜನರ ದುರ್ದೆಸೆ ೨೫ ವರ್ಷಗಳ ನಂತರವೂ ನಿಂತಿಲ್ಲ
ಹೆಚ್ಚೂ ಕಮ್ಮಿ ಇದೇ ಪರಿಸ್ಥಿತಿ ಯುದ್ಧ-ಭಯೋತ್ಪಾದನೆಯಿಂದ ಕಂಗೆಟ್ಟಿರುವ ಪ್ರಪಂಚದ ಹಣದುಬ್ಬರದಲ್ಲಿ ಎರಡನೇ ಸ್ಥಾನದಲ್ಲಿರುವ ಇರಾಕ್‌ನಲ್ಲೂ ಇದೆ.
*******************************---------------------------*****************
ಇವೆಲ್ಲಾ ವಿಚಾರಗಳು ಮನಕ್ಕೆ ತಾಕುವಷ್ಟರಲ್ಲಿ-ಇಲ್ಲಿ ಬೆಂಗಳೂರಿನಲ್ಲಿ ನನ್ನ ಗೆಳೆಯರನೇಕರು ತಿಂಗಳಿಗೆ ೫೦ ಸಾವಿರದಿಂದ ಒಂದು ಲಕ್ಷದವರೆಗೂ ಸಂಪಾದಿಸುತ್ತಾರೆ. ನನ್ನ ಸಂಬಳಕ್ಕೂ, ಅವರ ಸಂಬಳಕ್ಕೂ ಅಜಗಜಾಂತರ. ಆದರೂ ನನಗಿರಬಹುದಾದ\ಇನ್ನೂ ಹೆಚ್ಚಿನ ಸಮಸ್ಯೆಗಳು ಅವರಿಗೂ ಇವೆ. ತಿಂಗಳ ಕೊನೆಯಲ್ಲಿ ದುರ್ಭರ. ಜೀವನ ಶೈಲಿಯಲ್ಲಿ ಬದಲಾವಣೆ ಇರುವುದು ಬೇರೆ ಮಾತು.
ಐದಾರು ವರ್ಷಗಳ ಹಿಂದೆ ೪೦-೫೦ ಸಾವಿರ ಸಂಬಳವೆಂದರೆ ಹುಬ್ಬೇರಿಸುವಂತಾಗುತ್ತಿತ್ತು. ಈವತ್ತು ಅದು ಸಾಮಾನ್ಯ ಮೊತ್ತದಂತಾಗಿದೆ. ಗಂಡ ಹೆಂಡತಿ ಇಬ್ಬರೂ ಕೆಲಸ ಮಾಡಿದರೂ ಒಂದು ಮನೆ ಕೊಳ್ಳಲಾಗದ ಪರಿಸ್ಥಿತಿಗೆ ನಮ್ಮನ್ನು ದೂಡಿಕೊಂಡಿದ್ದೇವೆ.
ನಿಮಗೂ ಗೊತ್ತಿರಬಹುದು, ಬ್ಯಾಂಕ್ ಸಾಲದಲ್ಲಿ ಮನೆ ಕೊಂಡರೂ ಇಪ್ಪತ್ತು ಇಪ್ಪತ್ತೈದು ವರ್ಷಗಳವರೆಗೂ ಅದು ನಮ್ಮ ಆಸ್ತಿಯಲ್ಲ. ಕಂತು ಮುಗಿಯುವಷ್ಟರಲ್ಲಿ ನಮ್ಮ ಜೀವನದ ಕಂತುಗಳೇ ಮುಗಿಯುವ ಹಂತಕ್ಕೆ ಬಂದಿರುತ್ತೇವೆ. ಹತ್ತು ಹದಿನೈದು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಏಳೆಂಟು ಸಾವಿರ ಸಂಬಳ ಪಡೆಯುತ್ತಿದ್ದವನೂ ಎಂಥದ್ದೊ ಒಂದು ಸೂರು ಮಾಡಿಕೊಳ್ಳುತ್ತಿದ್ದ.
ಇದು ಐಟಿ, ಬಿಪಿಒ, ಸರ್ಕಾರಿ ಉದ್ಯೋಗಿಗಳ ಕುರಿತಾದರೆ, ಬೆಂಗಳೂರಿನ ರಕ್ತನಾಡಿಗಳಂತಿರುವ ಗಾರ್ಮೆಂಟ್ ಕಾರ್ಖಾನೆಗಳಲ್ಲಿ ದುಡಿಯುವ ಲಕ್ಷಾಂತರ ಮಂದಿಯತ್ತಲೂ ನೋಡಿದರೆ-
ಅವರಿಗೆ ಬೆಂಗಳೂರು ಈಗ ಸಹನೀಯವಾಗುಳಿದಿಲ್ಲ. ಬೆಲೆ ಏರಿಕೆಗೆ ಮೊದಲ ಬಲಿಗಳು ಇದೇ ಗಾರ್ಮೆಂಟ್ ಕಾರ್ಮಿಕರು. ಕನಿಷ್ಟವೆನಿಸುವ ೨-೩ ಸಾವಿರ ಸಂಬಳ ಪಡೆಯುವ ಗಾರ್ಮೆಂಟ್ ಕಾರ್ಮಿಕರು ಕೊಬ್ಬಿದ ಸಂಬಳದ ಬೆಂಗಳೂರಿನ ಇನ್ನೊಂದು ವರ್ಗದ ಜನರ ದುಂದು ವೆಚ್ಚದ ಜೊತೆ ಸೆಣಸಲಾಗದೆ ಹೆಣಗಾಡುತ್ತಿದ್ದಾರೆ. ಅವರಿಗೆ ಬಿಎಂಟಿಸಿ ಬಸ್ಸು ಹತ್ತಲೂ ಹಣ ಸಾಲದೆ ಟೆಂಪೋ, ಲಾರಿ, ಖಾಸಗಿ ಬಸ್ಸುಗಳಲ್ಲಿ ತೂರಿನಿಂತು ನೇತಾಡುತ್ತಾ ಪ್ರಯಾಣಿಸಿ ಗಮ್ಯ ತಲುಪಬೇಕಾದ ನಿಕೃಷ್ಟ ನಿರಂತರತೆ. ಬಾಡಿಗೆಯ ಬಿಸಿ ಕಡಿಮೆ ಮಾಡಿಕೊಳ್ಳಲು ಇರುಕು ಕೋಣೆಗಳ ಮನೆಗಳಲ್ಲಿ ಪ್ರಾಣಿಗಳಂತೆ ಬದುಕಬೇಕಾದ ಅನಿವಾರ್ಯತೆ. ಇದೆಲ್ಲಾ ಬೇಡ ಬಿಟ್ಟು ಹೋಗಿ ಹಳ್ಳಿಗಳಲ್ಲಿ ಬೇಸಾಯ ಮಾಡಿಕೊಂಡಿರೋಣವೆಂದರೆ, ನಮ್ಮ ನಗರ ಕೇಂದ್ರಿತ ವ್ಯವಸ್ಥೆ ಹಳ್ಳಿಗಳನ್ನು ಭೂಮಿಯ ಮೇಲಿನ ನರಕವನ್ನಾಗಿಸಿ ನಗುತ್ತಿದೆ. ಹಳ್ಳಿಗಳೀಗ ಮುದುಕರು ಮತ್ತು ಅಸಹಾಯಕರೂ ಇರಬಹುದಾದ ನಿರಾಶ್ರಿತ ಶಿಬಿರಗಳು.
ಮೂರ್ನಾಲ್ಕು ವರ್ಷಗಳ ಹಿಂದೆ ನೂರು, ಐನೂರರ ನೋಟುಗಳನ್ನು ಚೆನ್ನಾಗಿ ಪರೀಕ್ಷಿಸಿಯೇ ತೆಗೆದುಕೊಳ್ಳುತ್ತಿದ್ದರು.
ಇವತ್ತೇನಾಗಿದೆ ನೋಡಿ-ನೀವು ಸಾವಿರದ ನೋಟನ್ನು ಕೊಟ್ಟರೂ ಯಾರೂ ಪರೀಕ್ಷಿಸೋ ಗೋಜಿಗೆ ಹೋಗೋಲ್ಲ. ಮತ್ತೆ ಸಾವಿರದ\ಐನೂರರ ನೋಟಾ! ಚಿಲ್ಲರೆ ಇಲ್ಲ ಹೋಗಿ ಎಂಬ ಉದ್ಗಾರಗಳು ನಿಂತುಹೋಗಿವೆ. ೨೫-೫೦ ಪೈಸೆ ನಾಣ್ಯಗಳು ಹೆಚ್ಚೂ ಕಮ್ಮಿ ಚಲಾವಣೆ ಕಳೆದುಕೊಂಡಿವೆ. ಯಥಾಪ್ರಕಾರ ನಾವು ಕಾಲ ಕೆಟ್ಟು ಹೋಯಿತು ಅಂತ ಗೊಣಗಾಡುತ್ತ ನಿಡುಸುಯ್ಯುತ್ತಿರುತ್ತೇವೆ.
ಹೇಳಿ ಜರ್ಮನಿ, ಜಿಂಬಾಬ್ವೆ, ಇರಾಕ್‌ಗಳಲ್ಲಿ ಪರಿಸ್ಥಿತಿಗೆ ನಾವು ಬಹಳ ಹತ್ತಿರವಾಗಿದ್ದೇವೆ ಅನಿಸುತ್ತಿಲ್ಲವೆ. ದಪ್ಪ ಸಂಬಳದ ಒಂದು ವರ್ಗವನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ರೂಪಿತಗೊಳ್ಳುತ್ತಿರುವ ನಮ್ಮ ಅಭಿವೃದ್ಧಿ ಯೋಜನೆಗಳು ಯಾವಾಗ ಜೀವನ್ಮುಖಿಯಾಗುವುದು...?
ಮತ್ತೊಬ್ಬ ಹಿಟ್ಲರ್ ಭಾರತದಲ್ಲೇ ಹುಟ್ಟಲಿ ಅನಿಸುತ್ತಿಲ್ಲವೆ?
**********************----------------------------******************************
ಒಂದು ಟಿಪ್ಪಣಿ:
ಭಾರತದಲ್ಲೀಗ ಅಗತ್ಯ ವಸ್ತುಗಳ ಬೆಲೆಗಳು ಗಗನ ಮುಟ್ಟುತ್ತಿವೆ. ಗೋಧಿ, ಅಕ್ಕಿ, ಎಣ್ಣೆ ಪದಾರ್ಥಗಳು, ತರಕಾರಿಗಳು ಹೀಗೆ ಯಾವುದೂ ಬೆಲೆ ಏರಿಕೆಯಿಂದ ಪಾರಾಗಿಲ್ಲ.ಕಳೆದ ಎಂಟು ವಾರಗಳಿಂದ ಹಣದುಬ್ಬರ ನಿರಂತರವಾಗಿ ಏರುತ್ತಿದೆ. ಕಳೆದ ವಾರ ೭%ನಲ್ಲಿದ್ದದ್ದು ಈ ವಾರ ೭.೪೧% ರಷ್ಟಾಗಿದೆ. ಮೂರೇ ಮೂರು ತಿಂಗಳಲ್ಲಿ ಅದು ದುಪ್ಪಟ್ಟಾಗಿದೆ. ಬೆಲೆ ಏರಿಕೆಯ ಬಿಸಿ ಮೊದಲಿಗೆ ತಟ್ಟೋದು ಬಡಜನತೆ ಮೇಲೆ.
ಕೇಂದ್ರ ಮಂತ್ರಿ ಕಪಿಲ್ ಸಿಬಲ್ ಹಣದುಬ್ಬರ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸುತ್ತಾ "ಬೆಲೆ ಏರಿಕೆ ನಿಗ್ರಹಿಸಲು ನಮ್ಮ ಬಳಿ ಮಂತ್ರದಂಡ ಇಲ್ಲ" ಅನ್ನುತ್ತಾರೆ. ಹಾಗನ್ನುತ್ತಾ ತಮ್ಮ ಹೊಣೆಗೇಡಿತನವನ್ನೂ, ಅಸಹಾಯಕತೆಯನ್ನೊ ಸಮರ್ಥಿಸಿಕೊಳ್ಳುತ್ತಾರೆ.ಸದ್ಯದ ಹಣದುಬ್ಬರ ಜಾಗತಿಕ ವಿದ್ಯಮಾನ ಎಂದು ಮಾಜಿ ಆರ್ಥಶಾಸ್ತ್ರಜ್ಞ(!) ಮನಮೋಹನ ಸಿಂಗರೂ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ನಾಚಿಕೆಗೇಡು!
ಸಧ್ಯದ ಸ್ಥಿತಿ ನೋಡಿದರೆ ಪರಿಸ್ಥಿತಿ ಸರ್ಕಾರದ ಕೈಮೀರಿದೆಯೇ ಎಂಬ ಅನುಮಾನ ಮೂಡದಿರದು. ಇದೆಲ್ಲದರ ಮಧ್ಯೆ ಸರ್ಕಾರದಲ್ಲಿ ಪಾಲ್ಗೊಂಡು ಅಧಿಕಾರದ ಸವಿಯುಣ್ಣುತ್ತಿರುವ ಸಿಪಿಎಂ-ಸರ್ಕಾರ ಹಣದುಬ್ಬರ ನಿಯಂತ್ರಿಸದಿದ್ದರೆ ಹೋರಾಟ ಮಾಡುತ್ತೇವೆ ಎಂದು ಸೋಗಲಾಡಿತನದ ಬೆದರಿಕೆ ಹಾಕುತ್ತವೆ.
ಯಾರು ಕಾರಣ ಹಣದುಬ್ಬರಕ್ಕೆ?-ಪ್ರಶ್ನೆ ದುತ್ತೆಂದು ನಿಲ್ಲುತ್ತದೆ.
ಸಂಖ್ಯಾದೃಷ್ಟಿಯಲ್ಲಿ ೭.೪೧% ಹಣದುಬ್ಬರ ಕಡಿಮೆಯೆನಿಸುವಂತೆ ಕಂಡರೂ ಜಿಂಬಾಬ್ವೆಯ ಪರಿಸ್ಠಿತಿಯನ್ನು ಪಕ್ಕಕ್ಕಿಟ್ಟು ನೋಡಿದರೆ ಆತಂಕವಾಗೋದು ಸಹಜ.
ಇಷ್ಟಕ್ಕೂ ಭಾರತದ ಹಣದುಬ್ಬರಕ್ಕೆ ಕಾರಣಗಳೇನು?- ಇದು ಇವತ್ತಿನ ಆರ್ಥಿಕ ತಜ್ಞರನ್ನು ಕಾಡುತ್ತಿರುವ ಪ್ರಶ್ನೆ. ಒಬ್ಬೊಬ್ಬರದೂ ಒಂದೊಂದು ತರ್ಕ-ವಾದ.
ಹಣದುಬ್ಬರಕ್ಕೆ ಕಾರಣಗಳನ್ನು ಈ ರೀತಿ ಪಟ್ಟಿ ಮಾಡಬಹುದು:
೧. ಆಹಾರ ಧಾನ್ಯಗಳ ಉತ್ಪಾದನೆಯಲ್ಲಾಗುವ ಇಳಿಕೆ.
೨.ಅಂಕೆಯಿಲ್ಲದಂತೆ ಏರಿಕೆಯಾಗುತ್ತಿರುವ ಒಂದು ವರ್ಗದ ಸಂಬಳ-ಭತ್ಯೆ(ಮುಖ್ಯವಾಗಿ ಕೇಂದ್ರ ಸರ್ಕಾರಿ ನೌಕರರು, ಐಟಿ, ಬಿಪಿಒ ಉದ್ಯೋಗಿಗಳು). ಸರ್ಕಾರಿ ನೌಕರರಿಗಂತೂ ತುಟ್ಟಿ ಭತ್ಯೆಯ ಅನುಕೂಲವೇ ಇದೆ. ಇದು ಒಂದು ಬಗೆಯಲ್ಲಿ ಬೆಲೆ ಏರಿಕೆಗೆ ಕಾರಣ.
೩. ಹಣದುಬ್ಬರದಲ್ಲಿ ಆಯಾತ-ನಿರ್ಯಾತಗಳ ಪಾಲು ಜಾಸ್ತಿ. ಅಗತ್ಯ ವಸ್ತುಗಳ ಮಿತಿಮೀರಿದ ರಫ್ತು ಮತ್ತು ಭೋಗದ ವಸ್ತುಗಳ ಅಧಿಕ ಆಮದು ಹಣದುಬ್ಬರಕ್ಕೆ ಕಾರಣವಾಗಬಹುದು.
೪. ದೊಡ್ಡ ದೊಡ್ಡ ಕಂಪನಿಗಳು ಮಾರುಕಟ್ಟೆಯ ದೈತ್ಯ ಶಕ್ತಿಗಳು ಅಗತ್ಯ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸುವುದು.
ಉತ್ತರ ಪ್ರದೇಶ, ಪಂಜಾಬ್, ಆಂಧ್ರ ಪ್ರದೇಶ ಮುಂತಾದ ಕಡೆ ದೊಡ್ಡ ದೊಡ್ಡ ಕಂಪನಿಗಳೇ ಅಕ್ರಮವಾಗಿ ಗೋಧಿ ಮತ್ತು ಅಕ್ಕಿಯನ್ನು ರೈತರಿಂದ ಕೊಂಡು ಸಂಗ್ರಹಿಸುತ್ತಿರುವುದನ್ನು ಸರ್ಕಾರವೇ ಒಪ್ಪಿಕೊಂಡಿದೆ. ಆದಾಗ್ಯೂ ಸರ್ಕಾರಗಳು ಅಲ್ಲಿ ನಡೆಯುತ್ತಿರಬಹುದಾದ ಅಕ್ರಮಗಳನ್ನು ಪತ್ತೆ ಹಚ್ಚುವ ಗೊಡವೆಗೇ ಹೋಗುವುದಿಲ್ಲ.
೫. ದೇಶದ ಆಂತರಿಕ ಉತ್ಪಾದನೆ ಕುಸಿದು ವಿತ್ತೀಯ ಕೊರತೆ ನಿವಾರಣೆಗೆ ದೇಶ ಸಾಲದ ಸುಳಿಗೆ ಸಿಕ್ಕೋದು.
೬. ದೇಶದ ಖಜಾನೆಯಲ್ಲಿ ಹಣವಿರದಿದ್ದರೂ ಚುನಾವಣಾ ಉದ್ದೇಶಗಳಿಗಾಗಿ ಹೊಸ ಹೊಸ ಜನಾಕರ್ಷಕ ಯೋಜನೆಗಳನ್ನು ಅನುಷ್ಠಾನಗೊಳಿಸುವುದು.
೭. ಮುಂದಾಲೋಚನೆಯಿಲ್ಲದ ಆರ್ಥಿಕ ಯೋಜನೆಗಳು-ಅದನ್ನು ನಿಭಾಯಿಸುವಲ್ಲಿ ಸರ್ಕಾರದ ಇಲಾಖೆಗಳ ಅಸಹಕಾರ.
೮. ಪೆಟ್ರೋಲಿಯಂ ವಸ್ತುಗಳ ಮೇಲಿನ ಅತಿಯಾದ ಅವಲಂಬನೆ ಮತ್ತು ಅವುಗಳ ಏರುಮುಖೀ ಬೆಲೆಗಳು.
೯. ನಕಲಿ ನೋಟು ಚಲಾವಣೆ
೧೦. ಕಪ್ಪು ಹಣದ ಕ್ರೋಢೀಕರಣ.
ಇಷ್ಟೆಲ್ಲಾ ಆದ ಮೇಲೂ ಹಣದುಬ್ಬರದ ಬಗೆಗೆ ಹಣಕಾಸು ತಜ್ಞರಲ್ಲೇ ಭಿನ್ನಮತಗಳಿವೆ. ಇರಲಿ, ಅದು ಸಹಜ.