5.07.2006
ನಾವೇಕೆ ಹೀಗೆ....?
ಟಿವಿ ವಾಹಿನಿಗಳ ಅಬ್ಬರ ಮತ್ತು ಸರ್ಕಾರಿ ರೇಡಿಯೊ ವಾಹಿನಿಗಳ ಏಕತಾನತೆಯ ಕಾರ್ಯಕ್ರಮಗಳನ್ನು ಕೇಳಿ ಬೇಸತ್ತು ರೇಡಿಯೊವನ್ನು ಮೂಲೆಗೆಸೆದಿದ್ದ ಜನರನ್ನು ಮತ್ತೆ ರೇಡಿಯೋದೆಡೆಗೆ ಕಿವಿತೆರೆಯುವಂತೆ ಮಾಡಿದ ಕೀರ್ತಿ ಖಾಸಗಿ ರೇಡಿಯೋ ವಾಹಿನಿಗಳಿಗೆ ಸಲ್ಲಬೇಕು.ರೇಡಿಯೊ ಕೇಳುವುದು ಒಂದು ಸೀಮಿತ ಸಮಯಕ್ಕೆ ಮಾತ್ರ ಮೀಸಲು ಎಂಬಂತಿದ್ದ ಕಾಲದಲ್ಲಿ ಎಲ್ಲರೂ ಯಾವ ಕಾಲದಲ್ಲೂ ಕೇಳುವಂತೆ ಮಾಡಿದ್ದು ಖಾಸಗಿ ರೇಡಿಯೊ ವಾಹಿನಿಗಳು.ಖಾಸಗಿ ವಾಹಿನಿಗಳು ರೇಡಿಯೋ ಕೇಳುವ ರೀತಿ ನೀತಿಗಳನ್ನೇ ಬದಲಾಯಿಸಿದವು. ರೇಡಿಯೋದ ಆಕಾರದ ಬಗೆಗಿನ ಕಲ್ಪನೆಗಳು ಬದಲಾದವು. ರೇಡಿಯೊ ಪೆನ್ನಿನ ಒಳಗೆ ಅಷ್ಟೇ ಏಕೆ ಮೊಬೈಲ್‍ನ ಒಳಗೂ ಅಡಗಿಸಬಹುದಾದ ವಸ್ತುವಾಯಿತು. ನೂರು-ಸಾವಿರಗಳಲ್ಲಿದ್ದ೦ ರೇಡಿಯೊ ಬೆಲೆ ಹತ್ತಾರು ರೂಪಾಯಿಗಳಿಗೆ ಇಳಿಯಿತು. ರೇಡಿಯೊ ಜಾಕಿಗಳಿಗೆ ಎಲ್ಲಿಲ್ಲದ ಬೇಡಿಕೆ ಬಂತು. ಮಾತು- ಮಾತೆಂಬುದೇ ಅವರ ಬಂಡವಾಳವಾಯಿತು. ಜಾಹಿರಾತುದಾರರು ಟಿವಿ ಹಿಡಿತಕ್ಕೆ ಸಿಗದ ಗ್ರಾಹಕರನ್ನು ರೇಡಿಯೊ ಮೂಲಕ ತಲುಪಿದರು.
ಇವೆಲ್ಲ ಖಾಸಗಿ ರೇಡಿಯೋಗಳ ಬಗೆಗಿನ ಒಳ್ಳೆಯ ಮಾತುಗಳಾದವು. ಬೆಂಗಳೂರಿನಲ್ಲಿ ಮೊದಲ ಖಾಸಗಿ ರೇಡಿಯೊ ವಾಹಿನಿ 'ರೇಡಿಯೊ ಸಿಟಿ' ಪ್ರಾರಂಭವಾದಾಗ ಅದರಲ್ಲಿ ಕನ್ನಡದ ತಾತ್ಸಾರವಾಗುತ್ತಿದೆಂಬುದು ಬಹುಬೇಗ ಎಲ್ಲರ ಗಮನಕ್ಕೆ ಬಂತು. ಮಿಸ್ ಲಿಂಗೋಲೀಲ ಹೆಸರಿನಲ್ಲಿ ಕನ್ನಡದ ಅವಹೇಳನಕ್ಕೂ ಅದು ಮುಂದಾಯಿತು. ಇದರ ವಿರುದ್ಧ ಪ್ರತಿಭಟನೆಗಳಾದವು. ಆದರೆ ರೆಡಿಯೋ ಸಿಟಿಯ ಇಂಗ್ಲಿಷ್ ಮಾತು, ಹಗಲಿನ ಹಿಂದಿ ಹಾಡುಗಳು, ರಾತ್ರಿಯ ಪಾಶ್ಚಾತ್ಯ ಹಾಡುಗಳನ್ನು ಕೇಳುವುದರಲ್ಲಿ ಮೈಮರೆತಿದ್ದ ಕನ್ನಡಿಗರಿಗೆ ಚಳುವಳಿ-ಪ್ರತಿಭಟನೆಗಳು ವ್ಯರ್ಥ ಚಟುವಟಿಕೆಗಳಂತೆ ಕಂಡವು. ರೇಡಿಯೊ ಸಿಟಿಯ ವಿರುದ್ಧ ಜನಾಭಿಪ್ರಾಯವೊಂದು ರೂಪುಗೊಳ್ಳಲೇ ಇಲ್ಲ. ರೇಡಿಯೊ ಸಿಟಿಯ ವಿರುದ್ಧದ ಹೋರಾಟಕ್ಕೆ ಸಾಕಷ್ಟು ಬೆಂಬಲ ಕ್ರೋಡೀಕರಣದ ಯತ್ನವೂ ನೆಡೆಯಲಿಲ್ಲ. ರೇಡಿಯೊ ಸಿಟಿ ಕನ್ನಡವನ್ನು 'ಚೌ-ಚೌ ಬಾತ್' ಮಾಡಿತು. ಆಗಾಗ್ಗೆ ತಮಿಳು ಹಾಡುಗಳನ್ನು ಪ್ರಸರಿಸುವ ಉದ್ಧಟತನವೂ ನೆಡೆಯಿತು. ರೇಡಿಯೊ ಸಿಟಿ ಕನ್ನಡಿಗರ ನಿರಭಿಮಾನವನ್ನು ಚೆನ್ನಾಗಿಯೇ ಬಳಸಿಕೊಂಡಿತು. ಪ್ರತಿಭಟನೆಗಿಳಿದಿದ್ದವರು ಕಾವು ಆರಿದಂತೆ ಸುಮ್ಮನಾದರು. ರೇಡಿಯೋ ಸಿಟಿಯ ದೈನಂದಿನ ಕಾರ್ಯಕ್ರಮಗಳಲ್ಲಿ ಕನ್ನಡ ಇರಲಿಲ್ಲ ಮತ್ತು ಇಂದಿಗೂ ಇಲ್ಲ.
ಈಗ ರೇಡಿಯೊ ಮಿರ್ಚಿ 'ಸಕತ್ ಹಾಟ್ ಮಗಾ..' ಎಂದು ಕೂಗುತ್ತ ಬಂದಿದೆ. ಕನ್ನಡದ ನಟರಿಗೆ ಈ ಕೂಗು ರತ್ನನ ಪದದಂತೆ ಕೇಳಿಸಿದೆ. ಪುನೀತು, ಉಪೇಂದ್ರ, ಹಿರಣ್ಣಯ್ಯ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಅನೇಕರು "ರೇಡಿಯೋ ಮಿರ್ಚಿ ಕೇಳಿ, ನಾನೂ ಇದನ್ನೇ ಕೇಳೋದು. ಸಕತ್ ಹಾಟ್ ಮಗಾ.." ಎಂದು ಯಾವುದೇ ನಾಚಿಕೆಯಿಲ್ಲದೆ ತಮ್ಮ ಧ್ವನಿಯನ್ನು ಕೊಟ್ಟು ಆನಂದಿಸುತ್ತಿದ್ದಾರೆ. ರೇಡಿಯೊ ಮಿರ್ಚಿ ಹಿಂದಿ ಹಾಡುಗಳ ಮಧ್ಯೆ ಇವರ ಧ್ವನಿಯನ್ನು ಚೆನ್ನಾಗಿಯೇ ಉಪಯೋಗಿಸಿಕೊಳ್ಳುತ್ತಿದೆ. ರೇಡಿಯೋ ಮಿರ್ಚಿಯಲ್ಲಿ ನಿರೂಪಣೆಯೆಂಬುದು ಅರೆಬರೆ 'ಕನ್ನಡ' ಎಂಬುದನ್ನು ಬಿಟ್ಟರೆ ಎಲ್ಲಾ ಕಾರ್ಯಕ್ರಮಗಳೂ ಹಿಂದಿ ಇಂಗ್ಲೀಷ್‍ಮಯವಾಗಿವೆ. ಕನ್ನಡ ಹಾಡುಗಳಿಲ್ಲಿ ನಿಷಿದ್ಧ. ಅವರೊಂದಿಗೆ ಫೋನ್‍ನಲ್ಲಿ ಮಾತನಾಡಿದರೂ ಕಂಗ್ಲೀಷ್‍ನಲ್ಲಿ ಮಾತನಾಡುವವರಿಗೆ ಮಾತ್ರ ಪ್ರಾಮುಖ್ಯತೆ. ತಮಿಳುನಾಡಿನಲ್ಲಿ ತಮಿಳಿನ ಹಾಡುಗಳನ್ನು ಪ್ರಸಾರ ಮಾಡುವ ರೇಡಿಯೋ ಮಿರ್ಚಿ ಇಲ್ಲಿಯೂ ಮುಂದೆ ತಮಿಳಿನ ಹಾಡುಗಳನ್ನು ಪ್ರಸಾರ ಮಾಡಬಹುದು ಕನ್ನಡವೆಂಬುದು ರೇಡಿಯೊ ಸಿಟಿಯ ಎದುರು ಒಂದು ಬಾರಿ ಸೋತಿತ್ತು. ಈಗ ಮತ್ತೊಮ್ಮೆ ಸೋಲುತ್ತಿದೆ. ಈಗ ಕನ್ನಡವನ್ನು ಮಣಿಸುವ ಕೆಲಸಕ್ಕೆ ಕನ್ನಡ ಚಿತ್ರರಂಗದವರ ಅಧಿಕೃತ ಬೆಂಬಲ ಸಿಕ್ಕಿದೆ. ಅವರ ಅಣಿಮುತ್ತುಗಳು ರೇಡಿಯೊ ಮಿರ್ಚಿಯಲ್ಲಿ ನಿಯಮಿತವಾಗಿ ಪ್ರಸಾರವಾಗುತ್ತಿವೆ.
'ಮೋರೆ'ಗಳಿಗೆ ಮಸಿ ಬಳಿದು ವೀರರಾದವರು, ಕನ್ನಡಕ್ಕಾಗಿ ಪ್ರತ್ಯೇಕ ಪಕ್ಷ ಬೇಕೆಂದು ಒರಲುವವರು, ಕನ್ನಡದ 'ಹುಟ್ಟು ಹೋರಾಟಗಾರ'ರೆಂಬ ವಿಶೇಷಣವನ್ನು ಅಂಟಿಸಿಕೊಂಡಿರುವವರು, ಕನ್ನಡವನ್ನು ಕಾಯುವ ಕೆಲಸ ಮಾಡಬೇಕಾದ ಕನ್ನಡ ಮಾಧ್ಯಮಗಳವರು ಈಗಲೂ ಸುಮ್ಮನಿದ್ದಾರೆ. ಯಾಕೆಂದು ಕೇಳಿದವರಿಗೆ ನಾವು ರೇಡಿಯೊ ಕೇಳುವುದಿಲ್ಲ. ನೀವೂ ಕೇಳಬೇಡಿ ಅಷ್ಟೆ ಎನ್ನುತ್ತಾರೆ. ಇದು ಪಲಾಯನವಾದವಲ್ಲದೆ ಬೇರೇನೂ ಅಲ್ಲ. ಖಾಸಗಿವಾಹಿನಿಗಳ ಜಾಡು ಹಿಡಿದಿರುವ ಎಫ್.ಎಮ್.ರೈನ್‍ಬೊ ಕೂಡ ತನ್ನ ಕಾರ್ಯಕ್ರಮಗಳಲ್ಲಿ ಕನ್ನಡವನ್ನು ಪ್ರತಿಶತ ೫೦ರಷ್ಟು ಕಡಿಮೆ ಮಾಡಿ ಹಿಂದಿ, ಇಂಗ್ಲೀಷ್‍ಗೆ 'ಮೀಸಲಾತಿ' ಸೃಷ್ಟಿಸಿದೆ.ಯಾವುದೇ ಹೊಸ ಚಿತ್ರದ ಬಗ್ಗೆ ಜನರಿಗೆ ಕುತೂಹಲ ಹುಟ್ಟುವಂತೆ ಮಾಡಬೇಕೆಂದರೆ ಅದರ ಹಾಡುಗಳನ್ನು ಪದೇ ಕೇಳಿಸುವ ತಂತ್ರವೊಂದು ಜಾರಿಯಲ್ಲಿದೆ. ಇದು ಕನ್ನಡ ಚಿತ್ರರಂಗದವರಿಗೆ ತಿಳಿದಿಲ್ಲವೆಂದೇನೂ ಅಲ್ಲ. ಇದೇ ರೇಡಿಯೊ ಮಿರ್ಚಿ ಚೆನ್ನೈನಲ್ಲಿ ಹೊಸಹೊಸ ತಮಿಳು ಹಾಡುಗಳನ್ನು ಪ್ರಸಾರ ಮಾಡುತ್ತಿದೆ. ತಮಿಳರಿಗೆ ಹಿಂದಿಯನ್ನು ಉಣಬಡಿಸುವ ಕೆಲಸ ಯಾವ ಮಿರ್ಚಿಗಳಿಂದಲೂ ಆಗದು. ಅದು ತಮಿಳರ ಅಭಿಮಾನವೆನ್ನಿ, ದುರಭಿಮಾನವೆನ್ನಿ-ಕನ್ನಡಿಗರಿಗೆ ಅದೂ ಇಲ್ಲ.ಈಗ ಮತ್ತೊಮ್ಮೆ 'ರೇಡಿಯೋಗಳಲ್ಲಿ ಕನ್ನಡ'ದ ವಿಷಯ ಚರ್ಚೆಗೆ ಬರುತ್ತಿದೆ. ಪ್ರತಿಭಟನೆಯ ದನಿಗಳು ಸಣ್ಣಗೆ ಕೇಳಿಸುತ್ತಿವೆ. ಜನಾಭಿಪ್ರಾಯವೊಂದನ್ನು ರೂಪಿಸಲು ಇದು ಸಕಾಲವಾಗಿದೆ. ಇದೇ ಸಂದರ್ಭದಲ್ಲಿ ಕನ್ನಡಿಗರ ಹಂಗಿನಲ್ಲಿರುವ ಕನ್ನಡ ಚಿತ್ರರಂಗದವರಿಗೊಂದು ಪಾಠ ಕಲಿಸಬೇಕಿದೆ. ಅಣ್ಣಾವ್ರ ಸಾವಿನ ಜೊತೆಯಲ್ಲಿಯೇ ಚಿತ್ರರಂಗದವರ(ಅವರ ಮಕ್ಕಳೂ ಸೇರಿದಂತೆ) ಕನ್ನಡಾಭಿಮಾನ ಮರೆಯಾಯಿತೆ ಎಂಬುದು ಸ್ಪಷ್ಟವಾಗಬೇಕಾಗಿದೆ. ಜಾಣರಾದರೆ ಅವರು ರೇಡಿಯೋ ಮಿರ್ಚಿಯ ಜೊತೆಗಿನ ತಮ್ಮ ಸಂಬಂಧವನ್ನು ಕಳಚಿಕೊಳ್ಳುತ್ತಾರೆ. ಮುಖ್ಯವಾಗಿ ಜಡ್ಡುಗಟ್ಟಿರುವ ಕನ್ನಡದ ಮನಸ್ಸುಗಳು ಮೈಕೊಡವಿಕೊಂಡು ಮೇಲೇಳಬೇಕಿದೆ. 'ಕನ್ನಡ'ವನ್ನು ಟಿವಿಗಿಂತ ಚೆನ್ನಾಗಿ ರೇಡಿಯೊದಲ್ಲಿ ಜನಕ್ಕೆ ತಲುಪಿಸಬಹುದೆಂಬುದನ್ನು ಅರಿಯಬೇಕಾಗಿದೆ. ಬಿ.ಎಂ.ಟಿ.ಸಿ.ಬಸ್ಸುಗಳಲ್ಲಿ ಮಾತ್ರ ಉಳಿದುಕೊಂಡಿರುವ ಕನ್ನಡವನ್ನು ಬೆಂಗಳೂರಿನಲ್ಲೆಡೆ ಒಂದು 'ಅಗತ್ಯ'ವನ್ನಾಗಿ ಮಾಡಬೇಕಿದೆ. ನಾರಾಯಣಗೌಡರಂಥವರು ರೇಡಿಯೋ ಸಿಟಿ,ಮಿರ್ಚಿಗಳಿಗೆ ಮಸಿ ಬಳಿಯುವ ಧೈರ್ಯ ಮಾಡಬೇಕಾಗಿದೆ. ವಾಟಾಳರಂಥವರು ಕನ್ನಡ ಹೋರಾಟವೆಂಬ ವಿಶೇಷಣಕ್ಕೆ ಅರ್ಥ ನೀಡಬೇಕಿದೆ. ಕನ್ನಡಕ್ಕಾಗಿ ಪಕ್ಷ ಕಟ್ಟುವವರು ಮೊದಲು ಕನ್ನಡವನ್ನು ಕಟ್ಟಬೇಕಿದೆ. ಹಾಗೆಯೇ 'ಹಿಂದಿ ಹೇರಿಕೆಯ' ವಿರುದ್ಧ ಆಂದೋಲನ ತಮಿಳುನಾಡಿನ ಮಾದರಿಯಲ್ಲಿ ರೂಪುಗೊಳ್ಳಬೇಕಿದೆ. ಅಂತಿಮವಾಗಿ ರೇಡಿಯೊ ಸಿಟಿ, ಮಿರ್ಚಿಗಳಿಗೆ ಕನ್ನಡವನ್ನು ಅರ್ಥ ಮಾಡಿಸುವ ಕೆಲಸದಲ್ಲಿ ಎಲ್ಲರೂ ಒಂದಾಗಬೇಕಿದೆ.
ಜನಪ್ರಿಯ ಲೇಖನಗಳು
-
ಅ ದು ಮೊದಲ ಮಹಾಯುದ್ಧದ ನಂತರ ಕಾಲ. ಮಿತ್ರ ಸೇನೆಯ ಎದುರು ಹೀನಾಯವಾಗಿ ಸೋತ ಜರ್ಮನಿ ತನ್ನ ಭೂಭಾಗಗಳನ್ನು ಕಳೆದುಕೊಂಡಿದ್ದಲ್ಲದೆ, ಯುದ್ಧ ನಷ್ಟವೆಂದು ಅಪಾರವಾದ ವೆಚ್ಚವನ್ನು...
-
ಶ್ರೀಮಾತಾ, ಕ್ಷಮೆಯಿರಲಿ ನನ್ನ ಗಡಿಬಿಡಿ ಮತ್ತು ಹೊಸ ಹುಡುಗಿಯರನ್ನು ನೇರವಾಗಿ ಮಾತನಾಡಿಸಲಾಗದ ಲಘು ಸಂಕೋಚಕ್ಕೆ. ಬ್ಲಾಗೀ ಮಿಲನದಲ್ಲಿ ರಾಜೇಶ್ ನಿಮ್ಮನ್ನು ’ಮ್ಯುಸಿಸಿಯನ್’...
-
ಸಮ್ಮೇಳನದ ಮಳಿಗೆಯಲ್ಲಿ ಶನಿವಾರ ನಮಗಂತೂ ಶುಭದಿನ. ಎದ್ದು ನ(ಗ)ರಿಗಳ ಮುಖ ನೋಡಿದ್ದರಿಂದಲೋ ಏನೋ ಭರ್ಜರಿ ನಲವತ್ತು ಸಾವಿರ ವ್ಯಾಪಾರ-೮*೮ ಮಳಿಗೆಯೊಂದರಲ್ಲೇ. ವ್ಯಾಪಾ...
-
ಪುಸ್ತಕಗಳು ನಿಮ್ಮ ಮನೆಯಂಗಳಕ್ಕೆ...ಮನದಂಗಳಕ್ಕೆ. ಅತ್ತು ಹಗುರಾಗಲು ಹೆಗಲಿನಾಸರೆಯಿಲ್ಲ ನಕ್ಕು ಸಂಭ್ರಮಿಸಲು ಸಾವಿನನುಮತಿಯಿಲ್ಲ ಎಂದು ಬರೆಯುವ ವಿಕ್ರಮ ಹತ್ವಾರ್ ಮೊದಲ ...
-
"NAVILAADAVARU" a Kannada film realized by a small group of enthusiasts, is produced in just Rs 35000. We are screening this film ...
-
(ಸುಮಾರು ಒಂದು ವರ್ಷದ ಹಿಂದೆಯೇ ಬರೆದ ಈ ವಿಮರ್ಶೆ ಕಾರಣಾಂತರಗಳಿಂದ ಪ್ರಕಟವಾಗಿರಲಿಲ್ಲ. ಮುಂಗಾರು ಮಳೆಯ ಅಗಾಧ ಯಶಸ್ಸನ್ನೂ ಮನಸ್ಸಲ್ಲಿಟ್ಟುಕೊಂಡು ಈ ವಿಮರ್ಶೆ ಮೂಡಿಬಂದಿರು...
-
ಬರಹಗಾರರು - ವಿಶಾಲಮತಿ , `ಪುಸ್ತಕ ಪ್ರೀತಿ' ಬ್ಲಾಗ್ ಅಂತರ್ಜಾಲದ ಓದುಗರಿಗೆ ಕನ್ನಡ ಪುಸ್ತಕಗಳ ಬಗೆಗಿನ ಪ್ರೀತಿಯನ್ನು ಬೆಳೆಸಬೇಕೆಂಬ ಉದ್ದೇಶದಿಂದ ಬ್ಲಾಗ್ ಪ್ರಪಂಚದಲ...
-
ಎಸ್.ಕೆ.ಕರೀಂಖಾನರಿಗೊಂದು ನುಡಿನಮನ..... ನಾಡಿನ ಹೆಸರಾಂತ ಜಾನಪದ ತಜ್ಞರಾಗಿದ್ದ ಎಸ್.ಕೆ.ಕರೀಂಖಾನರು ಇಂದು(೨೯-೦೭-೦೬,ಶನಿವಾರ) ನಮ್ಮನ್ನಗಲಿದ್ದಾರೆ. ಆ ಹಿರಿಯ ಜೀ...
-
Kannadasaahithya.com supporter’s group No.1855, 6th A Main, 2nd Stage,D Block, Rajajinagar, Bangalore-10 kannadasaahithya@yahoogroups.com ph...
-
ಕಂಪ್ಯೂಟಿಂಗ್ ವಾತಾವರಣದಲ್ಲಿ ಕನ್ನಡದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕನ್ನಡಸಾಹಿತ್ಯಡಾಟ್ಕಾಂ ಸರ್ಕಾರಕ್ಕೆ ಸಲ್ಲಿಸಲಿರುವ ಮನವಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ...