2.27.2008
ಪಾಳೆಯಗಾರನೆಂದರೆ ಇಮ್ಮಡಿ ಜಗದೇವರಾಯ!
(ಗೆಳೆಯ ಆಸ್ಟಿನ್ ಜೋಸ್ ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲಿನವ. ವೃತ್ತಿಯಿಂದ ವಿಪ್ರೊ ಕಂಪನಿಯಲ್ಲಿ ತಂತ್ರಾಂಶ ತಜ್ಞ. ವಿಜಯನಗರ ಕಾಲದ ನಾಣ್ಯ ಸಂಗ್ರಹಕಾರ. ಪ್ರಾಚೀನ ಕಾಲದ ವಸ್ತುಗಳು, ಬಟನ್‌ಗಳು ಇತ್ಯಾದಿ ಹಳೆಯದು ಏನೇ ಇದ್ದರೂ ಇವನ ಆಸಕ್ತಿ ಕೆರಳಿಸುತ್ತದೆ.
ಆಸ್ಟಿನ್ ಜೋಸ್, ೧೮ನೇ ದಕ್ಷಿಣ ಭಾರತ ನಾಣ್ಯ ಸಂಗ್ರಹಕಾರರ ಸಂಘದ ಸಮಾವೇಷದಲ್ಲಿ ಮಂಡಿಸಿದ "ಚನ್ನಪಟ್ಟಣದ ಪಾಳೆಯಗಾರರ ನಾಣ್ಯಗಳು ಮತ್ತು ಇಮ್ಮಡಿ ಜಗದೇವರಾಯ" ಪ್ರಬಂಧದ ಮುಖ್ಯಾಂಶಗಳು ಮತ್ತು ಕರ್ನಾಟಕದ ಪಾಳೆಯಗಾರರಿಗೆ ಸಂಬಂಧಿಸಿದ ಕೆಲವು ಪುಸ್ತಕ\ಟಿಪ್ಪಣಿಗಳ ಆಧಾರದಿಂದ ಈ ಕೆಳಗಿನ ಲೇಖನವನ್ನು ಸಿದ್ಧಪಡಿಸಲಾಗಿದೆ
-ಅರೇಹಳ್ಳಿ ರವಿ)
ಕರ್ನಾಟಕದ ಪಾಳೆಯಗಾರರು ವಿಜಯನಗರ ಸಾಮ್ರಾಜ್ಯದ ಉನ್ನತಿ ಮತ್ತು ಅವನತಿಯ ಕಾಲಗಳಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರೂ ಇವರ ಆಳ್ವಿಕೆಯ ಬಗೆಗೆ ನಡೆದಿರುವ ಅಧ್ಯಯನಗಳು, ಸಂಶೋಧನೆಗಳು ಬಹಳ ಕಡಿಮೆ. ಪ್ರಾಮುಖ್ಯತೆಯನ್ನು ಪಡೆಯಬಹುದಾಗಿದ್ದ ಪಾಳೆಯಗಾರರ ಇತಿಹಾಸ ಹಲವಾರು ಕಾರಣಗಳಿಂದ ಸಾಕಷ್ಟು ಬೆಳಕಿಗೆ ಬಂದಿಲ್ಲ. ಆಳ್ವಿಕೆ, ಪ್ರಾಬಲ್ಯದ ದೃಷ್ಟಿಯಿಂದ ಇವರು ಪ್ರಸಿದ್ಧರಾಗಿದ್ದರೂ ಇತರೆ ಪ್ರಬಲ ರಾಜಮನೆತನಗಳ ಸಾಮಂತರಾಗಿದ್ದ ಕಾರಣಕ್ಕೆ ಹಲವಾರು ವಿಷಯಗಳಲ್ಲಿ ಇವರಿಗೆ ಸ್ವಾತಂತ್ರವಿರಲಿಲ್ಲ. ಯಾರೋ ಒಬ್ಬ ಪಾಳೆಯಗಾರ ಪ್ರಬಲನಾದನೆಂದರೆ ಅವನ ವಿರುದ್ಧ ದೊಡ್ಡ ದೊರೆಗೆ ದೂರು ನೀಡಲು ಇತರ ಪಾಳೆಯಗಾರ ಹಿಂಡೇ ತಯಾರಾಗುತ್ತಿತ್ತು. ಮುಖ್ಯವಾಗಿ ಪಾಳೆಯಗಾರರಿಗೆ ಸ್ವಂತ ನಾಣ್ಯಗಳನ್ನು ಮುದ್ರಿಸುವ ಅವಕಾಶವಿರಲಿಲ್ಲ. ಅವರು ಸಾಮಂತರಾಗಿದ್ದ ಪ್ರಭುತ್ವದ ನಾಣ್ಯಗಳನ್ನೇ ಬಳಸಬೇಕಾಗಿತ್ತು.
ಆಗಿದ್ದಾಗ್ಯೂ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಚನ್ನಪಟ್ಟಣದ ಪಾಳೆಯಗಾರರು ಮತ್ತು ಇವರ ಸಮಕಾಲೀನರಾದ ಯಲಹಂಕ ಪ್ರಭುಗಳು(ಇವರೂ ಪಾಳೆಯಗಾರರೇ, ಬೆಂಗಳೂರನ್ನು ಕಟ್ಟಿದವರು) ಸ್ವಂತ ನಾಣ್ಯಗಳನ್ನು ಮುದ್ರಿಸುವ ಸಾಹಸಕ್ಕೆ ಕೈ ಹಾಕಿದರು. ಈ ನಾಣ್ಯಗಳು ಬಹುತೇಕ ತಾಮ್ರದ್ದಾಗಿರುತ್ತಿದ್ದವು. ಅವರು ಸಾಮಂತರಾಗಿದ್ದಿರಬಹುದಾದ ಪ್ರಭುತ್ವದ ನಾಣ್ಯಗಳೂ ಒಟ್ಟೊಟ್ಟಿಗೆ ಚಲಾವಣೆಯಲ್ಲಿರುತ್ತಿದ್ದವು. ಸ್ವಂತ ನಾಣ್ಯಗಳನ್ನು ಮುದ್ರಿಸಿದ ಎಂಬ ಕಾರಣಕ್ಕಾಗಿ ಕೆಂಪೇಗೌಡನನ್ನು ಬಂಧಿಸಿ ವರ್ಷಾನುಗಟ್ಟಲೆ ಸೆರೆಯಲ್ಲಿಟ್ಟಿದ್ದರೆಂಬ ಇತಿಹಾಸಕಾರರ ಅಭಿಪ್ರಾಯವೊಂದಿದೆ. ಆದರೆ ಕೆಂಪೇಗೌಡನ ಬಂಧನ ವಿನಾಕಾರಣವಾದುದ್ದಾದರಿಂದ, ನಂತರ ತಮ್ಮ ತಪ್ಪನ್ನು ತಿದ್ದಿಕೊಂಡ ವಿಜಯನಗರ ಪ್ರಭುಗಳು ಅವನನ್ನು ಬಿಡುಗಡೆ ಮಾಡಿದರೆಂಬುದು ಉಲ್ಲೇಖನೀಯ.ದೊರೆತಿರುವ ಪಾಳೆಯಗಾರರ ನಾಣ್ಯಗಳಲ್ಲಿ ಈ ಎರಡೂ ವಂಶಗಳ ನಾಣ್ಯಗಳೇ ಹೆಚ್ಚಿವೆ. ಚನ್ನಪಟ್ಟಣದ ಪಾಳೆಯಗಾರರಲ್ಲಿ ಪ್ರಬಲನಾಗಿದ್ದ ಇಮ್ಮಡಿ ಜಗದೇವರಾಯನ ಹೆಸರಿನ ನಾಣ್ಯ ದೊರೆತಿರಲೇ ಇಲ್ಲ. ಇವನ ಸೋದರರಾದ ಪೇದ ಜಗದೇವರಾಯ ಮತ್ತು ಅಂಕುಶರಾಯರ ಹೆಸರಿನ ನಾಣ್ಯಗಳು ಸಂಗ್ರಹಕಾರರಿಗೆ ಸಿಕ್ಕಿ ಅವು ಪ್ರಕಟವಾಗಿವೆ.
ಇತ್ತೀಚೆಗೆ ಚನ್ನೈನಲ್ಲಿರುವ ನಾಣ್ಯ ಸಂಗ್ರಹಕಾರರಾಗಿರುವ ಶಂಕರರಾಮನ್‍ರವರ ಬಳಿಗೆ ನನ್ನ ಗೆಳೆಯ ಆಸ್ಟಿನ್ ಹೋಗಿದ್ದಾಗ ಅವರ ಬಳಿಯಿದ್ದ ಒಂದಷ್ಟು ಹಳೆಯ ನಾಣ್ಯಗಳ ರಾಶಿಯಲ್ಲಿ ತನಗೆ ಬೇಕಾದ ವಿಜಯನಗರ ಕಾಲದ ನಾಣ್ಯಗಳನ್ನು ಹುಡುಕುತ್ತಿದ್ದ. ಅಲ್ಲೇ ಇದ್ದ ರಾಮನ್, ಅಪರೂಪದ್ದೆನಿಸಬಹುದಾದ ನಾಣ್ಯವನ್ನು ಆಸ್ಟಿನ್ ಮುಂದೆ ಹಿಡಿದರು. ತಾಮ್ರದ್ದಾಗಿದ್ದ ನಾಣ್ಯದ ಒಂದು ಮುಖದಲ್ಲಿ ಜೋಡಿ ಅಂಕುಶ ಚಿಹ್ನೆ ಇದ್ದರೆ ಇನ್ನೊಂದು ಪಾರ್ಶ್ವದಲ್ಲಿ ‘ಯಿಮಡಿ ಜಗದೆವ’ ಎಂದು ಮೂರು ಸಾಲುಗಳ ಕನ್ನಡ ಬರಹವಿತ್ತು. ಕನ್ನಡದ ಶಾಸನ ಬರಹಗಳನ್ನು ಓದುವುದರಲ್ಲಿ ಸಾಕಷ್ಟು ಪಳಗಿರುವ ರಾಮನ್ ನಾಣ್ಯದ ಮೇಲಿದ್ದ ಬರಹವನ್ನು ಸ್ಪಷ್ಟವಾಗಿಯೇ ಗುರುತಿಸಿದರು. ಪಾಳೆಯಗಾರರ ನಾಣ್ಯಗಳ ಅನುಸೂಚಿಗಳನ್ನು ತೆರೆದು ನೋಡಿದಾಗ ಇಂಥದ್ದೊಂದು ನಾಣ್ಯವು ಇದುವರೆಗೂ ಎಲ್ಲೂ ಪ್ರಕಟವಾಗಿರಲಿಲ್ಲ.
ನಂತರ ಈ ವಿಶಿಷ್ಟ ನಾಣ್ಯದ ಕುರಿತು ಐತಿಹಾಸಿಕ ವಿವರಗಳನ್ನು ಕೆದಕುತ್ತಾ ಹೋದ ಹಾಗೇ ಚನ್ನಪಟ್ಟಣದ ಪಾಳೆಯಗಾರರನ್ನು ಕುರಿತ ಹಲವಾರು ಸಂಗತಿಗಳು ತಿಳಿದುಬಂದವು. ನಾಣ್ಯದ ಒಂದು ಬದಿಯಲ್ಲಿದ್ದ ಜಗದೇವ ಎಂಬ ಹೆಸರು ಚನ್ನಪಟ್ಟಣದ ಪಾಳೆಯಗಾರರ ರೂಢನಾಮ(ಅವರ ವಂಶಾವಳಿಯ ಬಿರುದು)ವಾಗಿದ್ದುದರಿಂದ ಸಹಜವಾಗಿಯೇ ಕುತೂಹಲ ಕೆರಳಿತು. ನಾಣ್ಯದ ಮೇಲಿದ್ದ ಜೋಡಿ ಅಂಕುಶಗಳ ಲಾಂಛನವೂ ಇದು ಚನ್ನಪಟ್ಟಣದ ಪಾಳೆಯಗಾರರಿಗೆ ಸೇರಿದ್ದೆಂದು ಹೇಳಲು ಬಹುಮುಖ್ಯ ಸಾಕ್ಷ್ಯವಾಗಿತ್ತು.
ಮುಂಭಾಗ : ಕಮಾನೊಂದರಿಂದ ಸುತ್ತುವರೆದಿರುವ ಜೋಡಿ ಅಂಕುಶ
ಹಿಂಭಾಗ: ಮೂರು ಸಾಲಿನ ‘ಯಮ್ಮಡಿ ಜಗದೆವ’ ಎಂಬ ಕನ್ನಡ ಬರಹ
ತೂಕ ೩.೨ ಗ್ರಾಂಗಳು
ವ್ಯಾಸ ೧೪ ಮಿ ಮೀ
ಲೋಹ ತಾಮ್ರ
ಈಗಾಗಲೇ ಪ್ರಕಟಗೊಂಡ ಜಗದೇವರಾಯ ಮತ್ತು ಅಂಕುಶರಾಯ ಹೆಸರಿನ ಎರಡು ನಾಣ್ಯಗಳ ವಿವರಗಳು ಇಂತಿವೆ .
೧. ಜಗದೇವರಾಯ ನಾಣ್ಯದ ವಿವರ:
ಮುಂಭಾಗ: ಗಂಡ-ಭೇರುಂಡ
ಹಿಂಭಾಗ: ಎರಡು ಸಾಲಿನ ‘ಜಗದೆವ’ ಎಂಬ ಕನ್ನಡ ಬರಹ
ತೂಕ ೨.೭ ಗ್ರಾಂಗಳು
ವ್ಯಾಸ ೧೫ ಮಿ ಮೀ
ಲೋಹ ತಾಮ್ರ
೨. ಅಂಕುಶರಾಯ ನಾಣ್ಯದ ವಿವರ:
ಮುಂಭಾಗ : ಜೋಡಿ ಅಂಕುಶಗಳು ಮತ್ತು ಅವುಗಳನ್ನು
ಸುತ್ತುವರೆದಿರುವ ಒಂದು ಕಮಾನು
ಹಿಂಭಾಗ: ಎರಡು ಸಾಲಿನ ‘ಅಂಕುಶರಾಯ’ ಎಂಬ ಕನ್ನಡ ಬರಹ
ತೂಕ ೩.೨ ಗ್ರಾಂಗಳು
ವ್ಯಾಸ ೧೪ ಮಿ ಮೀ
ತಾಮ್ರ ತಾಮ್ರ
ಚನ್ನಪಟ್ಟಣದ ಪಾಳೆಯಗಾರರು ಮತ್ತು ಇಮ್ಮಡಿ ಜಗದೇವರಾಯ:
ಚನ್ನಪಟ್ಟಣ ಇತ್ತೀಚೆಗೆ ರಚನೆಯಾಗಿರುವ ರಾಮನಗರ ಜಿಲ್ಲೆಯ ಒಂದು ತಾಲೋಕು ಕೇಂದ್ರವಾಗಿದ್ದು ೧೫ ರಿಂದ ೧೭ನೇಶತಮಾನದವರೆಗೂ ಪ್ರಭಾವಿ ಪಾಳೆಯಗಾರರ ಆಳ್ವಿಕೆಯಲ್ಲಿತ್ತು. ಚನ್ನಪಟ್ಟಣದ ಪಾಳೆಯಗಾರರಲ್ಲಿ ಪ್ರಸಿದ್ಧರಾಗಿದ್ದ ರಾಣಾ ವಂಶದ ಪೆದ್ದ ಜಗದೇವರಾಯನೆಂಬುವವನು ಕ್ರಿ ಶ ೧೫೭೦ ರಲ್ಲಿ ಚನ್ನಪಟ್ಟಣದ ಅಧಿಕಾರಿಯಾಗಿ ನೇಮಿಸಲ್ಪಟ್ಟನು. ಇವನು ರಾಣಾ ವಂಶದಲ್ಲಿ ‘ಜಗದೇವರಾಯ’ನೆಂದು ಮೊದಲಿಗೆ ಕರೆಯಲ್ಪಟ್ಟ ತಿಮ್ಮಣ್ಣನಾಯಕನ ಮಗ.
ಇಮ್ಮಡಿ ಜಗದೇವರಾಯ ಈ ವಂಶದ ಪ್ರಸಿದ್ಧ ಪಾಳೆಯಗಾರ. ಅಪಾರ ಧೈರ್ಯಶಾಲಿಯೂ, ಶೂರನೂ ಆಗಿದ್ದ ಈತ ಪೆದ್ದ(ಪೇದ) ಜಗದೇವರಾಯನ ಸಹೋದರ.
ಆಗಾಗ ವಿಜಯನಗರ ಸಾಮ್ರಾಜ್ಯದ ಮೇಲೇ ದಂಡೆತ್ತಿ ಬರುತ್ತಿದ್ದ ವಿಜಾಪುರದ ಶಾಹೀ ಸುಲ್ತಾನರನ್ನು ಬಗ್ಗು ಬಡಿಯುವಲ್ಲಿ ಇಮ್ಮಡಿ ಜಗದೇವರಾಯನ ಪಾತ್ರ ಮಹತ್ವದ್ದು. ತನ್ನಂತಹ ಅನೇಕ ಪಾಳೆಯಗಾರ ಸಂಸ್ಥಾನಗಳೊಂದಿಗೆ ಸಮನ್ವಯ ಸಾಧಿಸಿ ಸೈನ್ಯಗಳನ್ನು ಕಲೆಹಾಕಿಕೊಂಡು ಹೋಗಿ ಶಾಹೀ ಸುಲ್ತಾನರನ್ನು ಹಿಮ್ಮೆಟ್ಟಿಸಿದನು. ಆಗಿನ ಶಾಹೀ ಸೈನ್ಯದ ದಂಡನಾಯಕರಾಗಿದ್ದ ಮುತುರ್ಜಾಖಾನ್, ಖಾನ್-ಖಾನ್, ನೂರ್-ಖಾನ್ ಮುಂತಾದವರನ್ನು ಇಮ್ಮಡಿ ಜಗದೇವರಾಯನ ನೇತೃತ್ವದ ಸೈನ್ಯ ಸೋಲಿಸಿ ಓಡಿಸಿತು.
ಇಮ್ಮಡಿ ಜಗದೇವರಾಯನ ಶೌರ್ಯ-ಸಾಧನೆಗಳನ್ನು ಮೆಚ್ಚಿದ ವಿಜಯನಗರದ ಪ್ರಭುಗಳು, ೯ ಲಕ್ಷ ಪಘೋಡ(ಆ ಕಾಲದ ಚಾಲ್ತಿಯಲ್ಲಿದ್ದ ಹಣ)ಗಳ ವರಮಾನವಿದ್ದ ಜಿಲ್ಲೆಯೊಂದನ್ನು ಕೊಡುಗೆಯಾಗಿ ನೀಡಿದರು. ಶಾಹೀ ಸುಲ್ತಾನರ ನಿರಂತರ ದಾಳಿಯಿಂದ ಕಂಗೆಟ್ಟಿದ್ದ ವಿಜಯನಗರದ ಅರಸರು ಈ ಪ್ರದೇಶವನ್ನು ನಿಯಂತ್ರಿಸಲು ಸತತ ಹೆಣಗಾಡುತ್ತಿದ್ದರು. ಪೂರ್ವದ ಬಾರಾಮಹಲಿನಿಂದ(ಇಂದಿನ ಸೇಲಂ)-ಪಶ್ಚಿಮಘಟ್ಟಗಳವರೆಗಿನ ವಿಶಾಲ ಭಾಗ ಚನ್ನಪಟ್ಟಣ ಪಾಳೆಯಗಾರ ಸಂಸ್ಥಾನ(ಇಮ್ಮಡಿ ಜಗದೇವರಾಯನ)ದ ಆಳ್ವಿಕೆಗೆ ಒಳಪಟ್ಟಿತ್ತು. ಚನ್ನಪಟ್ಟಣವು ಈ ಪ್ರದೇಶದ ಹೃದಯ ಭಾಗದಲ್ಲಿದ್ದುದರಿಂದ ಸಹಜವಾಗಿಯೇ ಅದು ಇಮ್ಮಡಿ ಜಗದೇವರಾಯನ ರಾಜಧಾನಿಯಾಯಿತು. ‘ಚನ್ನಪಟ್ಟಣದ ಪಾಳೆಯಗಾರರು’ ಪ್ರಸಿದ್ಧಿಗೆ ಬಂದಿದ್ದು ಇಮ್ಮಡಿ ಜಗದೇವರಾಯನ ನಂತರವೇ ಎಂಬುದು ಇತಿಹಾಸದ ಗಮನಾರ್ಹ ಸಂಗತಿ. ಪಾಳೆಯಗಾರರಿಗೆ ಸಹಜವಾಗಿ ಸೈನ್ಯ-ಸಂಪನ್ಮೂಲದ ಕೊರತೆ ಬಹಳವಾಗಿದ್ದುದರಿಂದ ಇಮ್ಮಡಿ ಜಗದೇವರಾಯನ ನಂತರ ಈ ವಿಶಾಲ ಭೂಪ್ರದೇಶವೊಂದನ್ನು ನಿಯಂತ್ರಿಸುವುದು ಅವನ ವಾರಸುದಾರರಿಗೆ ಸಾಧ್ಯವಾಗದೇ ಹೋಯಿತು. ಇದರಿಂದ ಇನ್ನಷ್ಟು ಮರಿ ಪಾಳೆಯಗಾರರ ಹುಟ್ಟಿಕೊಂಡು ತಮ್ಮನ್ನು ಸ್ವತಂತ್ರರೆಂದು ಘೋಷಿಸಿಕೊಂಡರು. ಪರಿಣಾಮ ಚನ್ನಪಟ್ಟಣ ಸಂಸ್ಥಾನ ಮತ್ತೆ ಚಿಕ್ಕ ಪ್ರಾಂತ್ಯವಾಗಿಯೇ ಉಳಿಯಿತು. ಈ ಹೊತ್ತಿಗಾಗಲೇ ವಿಜಯನಗರದ ಅರಸರ ಪ್ರಾಬಲ್ಯವೂ ತಗ್ಗಿತ್ತು.
ಆಧಾರ:
೧. ಕರ್ನಾಟಕದ ಪಾಳೆಯಗಾರರು - Visu.
೨. As referred by Buchanan.
೩. Muttagarae Scripts.
೪. History of Medieval Deccan - M.H. Sheravi.
೫. Southern School of Telugu Literature - N. Venkata Rao.
೬. Mysore Gazetteer - B.L. Rice.
೭. Page no. 230, Coins of Karnataka - K.Ganesh, 2007.
2.24.2008
ಮುಂಗಾರುಮಳೆ ಹೇಳಿದ್ದೇನು? - ಮುಂಗಾರುಮಳೆಯ ಕೊನೆಯದೊಂದು ವಿಮರ್ಶೆ
(ಸುಮಾರು ಒಂದು ವರ್ಷದ ಹಿಂದೆಯೇ ಬರೆದ ಈ ವಿಮರ್ಶೆ ಕಾರಣಾಂತರಗಳಿಂದ ಪ್ರಕಟವಾಗಿರಲಿಲ್ಲ. ಮುಂಗಾರು ಮಳೆಯ ಅಗಾಧ ಯಶಸ್ಸನ್ನೂ ಮನಸ್ಸಲ್ಲಿಟ್ಟುಕೊಂಡು ಈ ವಿಮರ್ಶೆ ಮೂಡಿಬಂದಿರುವುದಾದರೂ ಚಿತ್ರ ಪ್ರತಿಪಾದಿಸುತ್ತಿರುವ ಮುಕ್ತ-ಸಮಾಜ ಕಲ್ಪನೆಯೆಡೆಗೆ ನಮ್ಮನ್ನು ಯೋಚನೆಗೆ ಹಚ್ಚುತ್ತದೆ. ವಿಮರ್ಶೆ ಕುರಿತಂತೆ ಬರುವ ಎಲ್ಲಾ ಸಂದೇಹಗಳಿಗೆ ಲೇಖಕರಾದ ಶೇಖರ್‌ಪೂರ್ಣ ರವರೇ ಉತ್ತರ ನೀಡುತ್ತಾರೆ. ಮುಂಗಾರುಮಳೆಯನ್ನು ಇಷ್ಟಪಟ್ಟವರು, ಟೀಕಿಸಿದವರು ಎಲ್ಲರೂ ಒಂದೇ ವೇದಿಕೆಯಲ್ಲಿ ಚರ್ಚೆ ನಡೆಸಬೇಕೆಂಬುದು ನನ್ನ ಆಶಯ. ಏಕೆಂದರೆ ಚಿತ್ರವೊಂದು ವರ್ಷಾನುಗಟ್ಟಲೆ ಪ್ರದರ್ಶನಗೊಳ್ಳುತ್ತಾ ಕನ್ನಡ ಚಿತ್ರರಂಗ ಹಿಂದೆಂದೂ ಕಂಡಿರದ ಹಣವನ್ನು ಗಳಿಸಿಕೊಟ್ಟಿದ್ದು ಸಾಮಾನ್ಯ ಸಂಗತಿಯಲ್ಲ. ಚಿತ್ರ ಯುವಜನತೆಯ ಮೇಲೆ ಮೂಡಿಸಿದ ಪರಿಣಾಮದ ತೀವ್ರತೆ ಏನೇ ಇರಲಿ. ಅದು ಹೇಳುತ್ತಿರುವ, ಜಾಗತೀಕರಣಕ್ಕೆ ಉದಾಹರಿಸಬಹುದಾದ ಸಂಗತಿಗಳನ್ನು ಮರೆಮಾಚಲು ಸಾಧ್ಯವಿಲ್ಲ. ಬಹಳ ದಿನಗಳ ನಂತರ ನನ್ನ ಬ್ಲಾಗ್ ಅಪ್‌ಡೇಟ್ ಆಗಿದೆ. ಒಪ್ಪಿಸಿಕೊಳ್ಳಿ.
--ಅರೇಹಳ್ಳಿ ರವಿ )
ಲೇಖಕರು: ಶೇಖರ್‌ಪೂರ್ಣ, ಕನ್ನಡಸಾಹಿತ್ಯ.ಕಾಂ
"ಮುಂಗಾರುಮಳೆ ಸಿನಿಮಾ ನೋಡಲಿಕ್ಕೆ ಹೋಗೋಣವೆ..?" ಎಂದು ಅರೇಹಳ್ಳಿ ರವಿ ಮತ್ತು ಕಿರಣ್ ಕೇಳಿದಾಗ, ಮುಂಗಾರು ಮಳೆಯ ಅಗಾಧ ಯಶಸ್ಸಿನ ವಾಸ್ತವಕ್ಕೆ ಕಣ್ಮುಚ್ಚಿಕೊಳ್ಳುವುದು ಸರಿಯಲ್ಲ ಎಂದೆನ್ನಿಸಿ ಹೋಗಬೇಕೆಂಬ ತೀರ್ಮಾನ ಬಲವಾಯಿತು. ಅರೇಹಳ್ಳಿ ರವಿ ಎರಡು ಬಾರಿ ನೋಡಿಯಾಗಿತ್ತು. ಗೆಳೆಯ ರಾಘವ ಕೋಟೆಕಾರ್ ಸಹಾ ಎರಡು ಬಾರಿ ನೋಡಿದ್ದರು.
ಕನ್ನಡ ಚಿತ್ರರಂಗ ಇಂತಹ ಅಭೂತಪೂರ್ವ ಯಶಸ್ಸನ್ನು ಕಂಡಿದ್ದುದು ಮತ್ತು ಕಾಣಬಹುದಾದ ಸಾಧ್ಯತೆಯೂ ಕಡಿಮೆ. ಯಶಸ್ಸಿನ ಹಿನ್ನೆಲೆಯ ಬಗ್ಗೆ ಚಿಂತಿಸಲಾರಂಭಿಸಿದಂತೆ ಮುಂಗಾರು ಮಳೆಯ ಬಗೆಗೆ ದಿನಪತ್ರಿಕೆ ಮತ್ತು ದೂರದರ್ಶನ ವಾಹಿನಿಗಳಲ್ಲಿ ಬಂದಿರುವ ವಿಮರ್ಶೆಯ ಬೀಸನ್ನು ಗಮನಕ್ಕೆ ತೆಗೆದುಕೊಂಡರೆ ಆ ವಿಮರ್ಶೆಗಳೆಲ್ಲವೂ `impulsive' ಆದ ಪ್ರತಿಕ್ರಿಯೆಗಳು ಎಂದೇ ಅನ್ನಿಸಿತು. ಅವೆಲ್ಲವುಗಳ ಮಧ್ಯೆ ನನ್ನದೂ ಒಂದಷ್ಟು ಸಾಲುಗಳಿರಲಿ ಎಂದು ಈ ಕೆಳಗಿನ ಸಾಲುಗಳನ್ನು ಸೇರಿಸಿದ್ದೇನೆ.
ನಗರೀಕರಣದ ಪರಿಸರದಲ್ಲಿ ಮದುವೆ ಎಂದೆನ್ನುವುದು ಈಗ ಸಂಭ್ರಮಿಸಬಹುದಾದಂತಹ ಸನ್ನಿವೇಷವಾಗೇನೂ ಉಳಿದಿಲ್ಲ. ಮುಕ್ತ ಸಮಾಜದ ಅಂಶಗಳನ್ನೇ ಪ್ರಧಾನವಾಗಿ ತೆಗೆದು ತೋರಿಸುವಂತಹ ಟೈಮ್ಸ್ ಆಫ್ ಇಂಡಿಯ ಮತ್ತು ಇತರ ಆಂಗ್ಲ ಪತ್ರಿಕೆಗಳು ಹೂಡುವ ಸಾಮಾಜಿಕ ಪೀಠಿಕೆಗಳನ್ನು ಗಮನಿಸಿದಾಗ ಆ ಪತ್ರಿಕೆಗಳ ಪ್ರಧಾನ ಓದುಗರಾಗಿರುವ ಈ ಯುವ ಜನಾಂಗವೂ ಸಹಾ ಮುಕ್ತ ಸಮಾಜದ ಮೌಲ್ಯಗಳನ್ನೇ ಸಂಭ್ರಮಿಸಿ ಆಚರಣೆಗೆ ತರುವ ದಿಕ್ಕಿನತ್ತ ಹೊರಟಿದೆ. ಜೊತೆಗೆ ಪಾರಂಪರಿಕ ಮೌಲ್ಯಗಳನ್ನೂ ಸಹ ಬಿಡದೆ ಆಚರಿಸುತ್ತಿವೆ. ಹೇಗೆಂದರೆ :ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸವಾದನಂತರ ಕಾರೊಂದನ್ನು ಕಂತಿನ ಮೇಲೆ ಖರೀದಿಸಿ ವಾರ ಹದಿನೈದು ದಿನಗಳ ನಂತರ ಶೃಂಗೇರಿ, ಧರ್ಮಸ್ಥಳಕ್ಕೆ ಡ್ರೈವಿಂಗ್ ಫ್ಲೆಶರ್‌ನಂತಹ ತೀರ್ಥ ಯಾತ್ರೆಯಲ್ಲದ ಪ್ರವಾಸಕ್ಕೆ ಹೋಗಿ ಬಂದು, ಉಳಿದ ವಾರಾಂತ್ಯಗಳಲ್ಲಿನ ಚಟುವಟಿಕೆಗಳು ಹೀಗಿರಬಹುದು: ಹುಡುಗ ಹುಡುಗಿಯ ನಡುವೆ ಕಾಯಾ ವಾಚಾ ಮನಸಾ ಫ್ಲರ್ಟಿಂಗಿಗೆ ಅವಕಾಶ ನೀಡುವಂತಹ ಕಾಫೀ ಕ್ಲಬ್‍ಗಳು, ಶಾಪಿಂಗ್ ಮಾಲ್ ಭೇಟಿ, ವಿಂಡೋ ಶಾಪಿಂಗ್; ಅನಂತರ ದಿಢೀರನೆ ಒಂದು ದಿನ ‘ನಾನು ಮದುವೆ ಆಗುತ್ತಿದ್ದೇನೆ’, ಎಂಬ ಆಹ್ವಾನ ಪತ್ರಿಕೆಯ ಎರಚಾಟಗಳು. ಇಲ್ಲಿ ಅವರಿಬ್ಬರೇ ಮದುವೆ ಆಗಬಹುದು ಅಥವಾ ಬೇರೆಯೇ ಆದರೂ ಸರಿ. ಹೆತ್ತವರೂ ಸಹ ಕಡಿಮೆಯೇನಲ್ಲ. ಮಕ್ಕಳು ಸಾಫ್ಟ್‌ವೇರ್ ಪರಿಸರವನ್ನು ಸೇರಿ ಸಂಪಾದಿಸಲಾರಂಭಿಸಿದರೆ ಸಾಕು.
ವಿದೇಶಕ್ಕೆ ಒಂದೆರಡು ಟ್ರಿಪ್ ಇಲ್ಲದಿದ್ದರೆ ಹೇಗೆ? ಸಂಪಾದನೆ ಹೆಚ್ಚು ಬರುವುದಾರೆ ಸಾಫ್ಟ್‌ವೇರೇತರ ಪರಿಸರವಾದರೂ ನಡೆದೀತು. ಬಿಕ್ಕಟ್ಟು ಎದುರಾದಾಗ ಮನೆಗೆ ಬರುವ ಸೊಸೆ/ಅಳಿಯ ತನ್ನದೇ ಜಾತಿ/ಧರ್ಮದವನಾಗದಿದ್ದರೆ ಮುಗಿಲು ಮುಟ್ಟುವ ಆಕ್ರಂದನ. ಹೆತ್ತವರು ಇಲ್ಲಿ ಬಯಸುವುದು ಮಗ ಅಥವ ಮಗಳ ತ್ಯಾಗವನ್ನು. ಇಲ್ಲದಿದ್ದರೆ ಇಲ್ಲಿ ಸಂಬಂಧದ ವಿಚ್ಛೇದನಕ್ಕೂ ಅವರೂ ತಯಾರು.
ಮುಂಗಾರುಮಳೆಯ ಸಂಗೀತ, ಸಾಹಿತ್ಯ, ಛಾಯಾಗ್ರಹಣ, ಅಭಿನಯ ಎಲ್ಲದರ ಹದವಾದ ಮಿಶ್ರಣದ ಬಗೆಗೆ ಜನಸಾಮಾನ್ಯರಲ್ಲಿ ಮೆಚ್ಚುಗೆ.
ನನ್ನ ಮಟ್ಟಿಗೆ ಅಭಿನಯ, ಛಾಯಾಗ್ರಹಣ ಹಾಗು ಗೀತ ಸಾಹಿತ್ಯ ಇವ್ಯಾವುದನ್ನೂ ಚಿತ್ರದ ಸಮಗ್ರತೆಯಿಂದ ಬೇರ್ಪಡಿಸಿ ನೋಡಬಾರದು. ಈ ವಿಮರ್ಶೆಯ ಶಿಸ್ತನ್ನಿಟ್ಟುಕೊಂಡು ಮುಂಗಾರುಮಳೆ ತನ್ನ ಅಂತರ್ಗತದಲ್ಲಿ ಮಾತ್ರವಲ್ಲದೆ ಕೂಗಿ ಕೂಗಿ ಹೇಳುತ್ತಿರಬಹುದಾದದ್ದರ ಕಡೆಗೆ ಗಮನಿಸಿದಾಗ ಕಂಡದ್ದು-
ಬೇಡ ಗೆಳೆಯ ನಂಟಿಗೆ ಹೆಸರು, ಯಾಕೆ ಸುಮ್ಮನೆ..?
ಚಿತ್ರವೊಂದರಲ್ಲಿ ಗೀತಸಾಹಿತ್ಯ ಪಾತ್ರದ ಯಥೋಚಿತ ನಿರೂಪಣೆಯ ಭಾಗ ಎಂದೆನ್ನುವುದೇ ಆದರೆ ಈ ಚಿತ್ರದ ಗೀತ ಸಾಹಿತ್ಯ ಚಿತ್ರದ ಪ್ರಧಾನ ನಿರೂಪಣೆಗೆ ಹಾಗು ಅರ್ಥಕ್ಕೆ ಪರ್ಯಾಯ ಆಯಾಮವನ್ನು ಕಲ್ಪಿಸುತ್ತಿರುವುದು ಈವರೆಗೆ ಬಂದಿರುವ ವಿಮರ್ಶೆಗಳ ಸಾಲು-ಮಾತುಗಳಲ್ಲಿ ಎಲ್ಲಿಯೂ ಕಂಡು ಬರುತ್ತಿಲ್ಲ. ಚಿತ್ರದ ಒಟ್ಟು ಸಾರಾಂಶವನ್ನು ಹೇಳಿ ಮುಂದುವರೆಯುವುದು ಸಂದರ್ಭೋಚಿತ ಎಂದೆನ್ನಿಸುವುದರಿಂದ ಅದರ ಸಾರಾಂಶ:
ನವೀನ ಕಾರುಗಳನ್ನು ಬಿಕರಿಗಿಟ್ಟಿರುವ, ಸಂಖ್ಯೆಯಲ್ಲಿ ಬೆಳೆಯುತ್ತಲೇ ಹೋಗುತ್ತಿರುವ ಆಟೋ ಡೀಲರ್‌ಗಳು, ಕಿರಾಣಿ ಅಂಗಡಿಯನ್ನು ಸಂದಿಗೆ ನೂಕಿ ಬೀದಿಯ ಪ್ರಧಾನ ಸ್ಥಾನವನ್ನಾಕ್ರಮಿಸಿಕೊಳ್ಳುತ್ತಿರುವ ಬ್ರಾಂಡೆಡ್ ವಸ್ತು/ಉಡುಪುಗಳನ್ನೇ ಮಾರಾಟ ಮಾಡಲು ಹುಟ್ಟಿಕೊಂಡಿರುವ ಸಹಸ್ರಾರು ಶಾಪಿಂಗ್ ಮಾಲ್ ಗಳುಳ್ಳ ಬೆಂಗಳೂರು ನಗರ. ಈ ಶಾಪಿಂಗ್ ಮಾಲ್‌ಗಳ ಖಾಯಂ ಗಿರಾಕಿ ಎಂದೆನ್ನಿಸಬಹುದಾದವನೇ ಚಿತ್ರದ ಪ್ರಧಾನ ಪಾತ್ರಗಳಲ್ಲಿ ಒಂದಾದ ಪ್ರೀತಮ್ ಎಂಬ ಯುವಕ. ನಂದಿನಿ ಎನ್ನುವ ಹುಡುಗಿಗೆ ವಿವಾಹ ನಿಶ್ಚಯವಾಗಿದೆ ಎನ್ನುವುದನ್ನು ತಿಳಿಯದೆಯೇ ಪ್ರೀತಂಗೆ ಅವಳ ಬಗ್ಗೆ ಪ್ರೀತಿ-ಅನುರಾಗ. ಪ್ರೀತಂ ಭಾರೀ ಉದ್ಯಮಿಯ ಹಿನ್ನೆಲೆಯುಳ್ಳ ಹೆತ್ತವರಿಗೆ ಸಹಜವಾಗಿಯೇ ಮುದ್ದಿನ ಒಬ್ಬನೇ ಮಗ. ಹಾಗೆಯೇ ನಂದಿನಿಯೂ ಸಹ ಒಬ್ಬಳೆ ಮಗಳು. ಪ್ರೀತಮ್‌ನ ತಾಯಿ ಕಮಲ ಹಾಗು ನಂದಿನಿಯ ತಾಯಿ ಬಬಿತಾ ಗಾಢ ಸ್ನೇಹಿತೆಯರು. ಮೊದಲೇ ಆಯೋಜಿತಗೊಂಡ ನಂದಿನಿಯ ಮದುವೆ ಸಮಾರಂಭಕ್ಕೆ ಕಮಲಳ ಜೊತೆ ಪ್ರೀತಮ್ ಸಹಾ ಹೋಗುವುದು, ಚಿತ್ರವು ತನ್ನ ಪ್ರಸ್ತಾವನೆಯಲ್ಲಿ ಪಾರಂಪರಿಕ ಮೌಲ್ಯವಾದ ತ್ಯಾಗವನ್ನು ಎತ್ತಿ ಹಿಡಿಯಲು ಬೇಕಾಗಿರುವ ಸನ್ನಿವೇಶ ಹಾಗು ಕಥೆಯ ಮಟ್ಟಿಗೆ ಅನಿವಾರ್ಯ.
ಈ ಅನಿವಾರ್ಯದ ನಡುವೆ ನಂದಿನಿಗೆ ಮದುವೆಯ ಬಗೆಗೆ ಸಂಪೂರ್ಣ ಅರಿವಿದೆ. ಬಂದಿರುವುದು ನಂದಿನಿಯ ಮದುವೆಗೆ ಎನ್ನುವ ಸಂಗತಿ ಪ್ರೀತಮ್‌ಗೆ ಸ್ವಲ್ಪ ಆಘಾತಕಾರಿಯಾಗಿದ್ದರೂ ಕಾಯಾ ವಾಚಾ ಮನಸಾ ನಂದಿನಿಯನ್ನು ಬೆಂಬತ್ತುವುದನ್ನು ಮುಂದುವರೆಸುವುದು ಚಿತ್ರದ ಭಾವೋತ್ಕಟದ ವಲಯವನ್ನು ಹಿಗ್ಗಿಸುತ್ತಾ ಹೋಗುತ್ತದೆ. ಇನ್ನೊಬ್ಬನು ಕಟ್ಟುವ ತಾಳಿಗೆ ಕೊರಳೊಡ್ಡುವ ಹೆಣ್ಣು ತಾನು, ಅದನ್ನು ಮನಃಸ್ಪೂರ್ತಿಯಾಗಿ ಅಂಗೀಕರಿಸಿದ್ದೇನೆ ಎನ್ನುವ ಸಂಗತಿ ನಂದಿನಿಗೂ ಅರಿವಿದೆ. ಈ ಅರಿವಿನ ಮಧ್ಯೆ ಪ್ರೀತಮ್ ಕುರಿತಂತೆ ಇವನು ಗೆಳೆಯನಲ್ಲ, ಗೆಳತಿ ನಾನು ಮೊದಲೇ ಅಲ್ಲ, ಇವನು ಇನಿಯನಲ್ಲ, ತುಂಬ ಸನಿಹ ಬಂದಿಹನಲ್ಲ-ಎನ್ನುವ ಪ್ರಾರಂಭದ ಮೃದು ಧೋರಣೆಯ ನಂತರ-ಬೇಡ ಗೆಳೆಯ ನಂಟಿಗೆ ಹೆಸರು ಏಕೆ ಸುಮ್ಮನೆ? ಎಂದು ಮುಕ್ತ ಬಾಂಧವ್ಯದ ಪ್ರಸ್ತಾವನೆಯನ್ನು ಯುವ ಪ್ರೇಕ್ಷಕರ ಮುಂದಿಡುತ್ತಾಳೆ. ನಂದಿನಿಯ ಭಾವೋತ್ಕಟತೆಯ ಸಂಪೂರ್ಣ ಪರಿಚಯವಿರುವ ಪ್ರೀತಂ ಅವಳು ಮದುವೆ ಮಾಡಿಕೊಂಡರೇನಂತೆ ಎಂದೆನ್ನುವ ರೀತಿಯಲ್ಲಿ ಮದುವೆ ವಿವಾಹ ಮಹೋತ್ಸವದ ಪರಿಸರವನ್ನು ಬಿಟ್ಟು ಆಚೆಗಿನ ಪರಿಧಿಯಲ್ಲಿ ನಿಲ್ಲುತ್ತಾನೆ.ಏಕೆಂದರೆ ಪರಸ್ಪರ ಇಬ್ಬರಿಗೂ ಗೊತ್ತು, ವಿವಾಹೇತರ ಸಂಬಂಧದ ಸಾಧ್ಯತೆಯನ್ನು ಬೆಂಗಳೂರಿನಂತಹ ನಗರಗಳು ಈಗಾಲೇ ಅಂಗೀಕರಿಸಲಾರಂಭಿದೆ ಎನ್ನುವುದು. ಚಿತ್ರದ ಅಗಾಧ ಯಶಸ್ಸಿಗೆ ಈ ಪ್ರಸ್ತಾವನೆಯೂ ಹಾಗು ಒಡಂಬಡಿಕೆ ಸಹಾ ಒಂದು ಪ್ರಧಾನ ಕಾರಣವೆಂದು ಹೇಳಬಹುದೆ...?
ಬರೀ ಯುವ ಪ್ರೇಕ್ಷಕ ವೃಂದ ಸಾಲಿಟ್ಟು ಚಿತ್ರ ನೋಡಿದರಷ್ಟೇ ಸಾಲದು, ಹೆತ್ತವರೂ ಸಹ ಚಿತ್ರವನ್ನು ಆಮೋದಿಸುವಂತಹ ಅಂಶಗಳನ್ನು ಎತ್ತಿ ಹಿಡಿಯುವಂತೆ ಹಿರಿಯ ತಲೆಮಾರಿನ ನಟ ಅನಂತನಾಗ್, ಕಿರುತೆರೆಯ ಮೂಲಕ ಎಲ್ಲ ಮನೆಗಳಲ್ಲಿ ಪ್ರವೇಶಿಸಿರುವ ನಟಿ ಪದ್ಮಜಾ ರಾವ್ ಇದ್ದಾರೆ. ಈಗಿನ ಎಲ್ಲ ಹುಡುಗರು ಮುದ್ದು ಮುದ್ದಾದ ಪ್ರೀತಮ್‌ನಂತೆಯೇ ಏನನ್ನಾದರೂ ಸಾಧಿಸಿ ತೋರಿಸುವಂತಹ(ವಿವಾಹ ಮತ್ತು ವಿವಾಹೇತರ ಸಂಬಂಧವನ್ನೂ ಸಹಾ) ಮಕ್ಕಳಿರಬಾರದೆ ಎಂದೆನ್ನುವ ಕಲ್ಪನೆಯೊಂದಿಗೆ ನಮ್ಮ ಹುಡುಗರೂ ಹೀಗೆಯೇ ಅಲ್ಲವೆ ಇರುವುದು ಎಂಬ ಧಾಷ್ಟಿಕತನವನ್ನು ಹೂಡಿಸುವಂತಿದೆ. ಜೊತೆಗೆ ಪ್ರೀತಂ ನಂದಿನಿಯನ್ನು ಪ್ರೀತಿಸುತ್ತಿದ್ದಾನೆ ಎಂದೆನ್ನುವ ಸಂಗತಿ ತಾಯಿ ಕಮಲಳಿಗೆ ಗೊತ್ತು. ಅವನು ನಂದಿನಿ ಬೇಕೇ ಬೇಕು ಎಂದುಕೊಂಡರೆ ಅವಳು ಅವನ ಜೊತೆ ಓಡಿ ಹೋಗಲು ತಯಾರಿದ್ದಾಳೆ ಅನ್ನುವುದೂ ಗೊತ್ತು. ಹೀಗೆ ಅಂತಹ ಅವಕಾಶವಿದ್ದರೂ ಅದನ್ನು ತಿರಸ್ಕರಿಸಿ ಉದಾತ್ತ ತ್ಯಾಗದ ಮೌಲ್ಯವನ್ನು ಎತ್ತಿ ಹಿಡಿಯುವ ನಡವಳಿಕೆ ಉಳ್ಳ ಮಗ ಎಂದೆನ್ನುವ ಸಂತೃಪ್ತಿಯನ್ನು ಚಿತ್ರ ವಯಸ್ಸಾದ ತಂದೆ ತಾಯಿಯರಿಗೂ ಕೊಟ್ಟು ತಣಿಸುತ್ತದೆ.
ಒಂದೇ ಎಡೆ ಕಿರಿಯ ಮತ್ತು ಹಿರಿಯ ತಲೆಮಾರುಗಳೆರಡಕ್ಕೂ ಅಪ್ಯಾಯಮಾನವಾಗುವಂತೆ ಚಿತ್ರದ ನಿರೂಪಣೆ ಇರುವುದು ಗಟ್ಟಿತನವೋ ಅಥವ ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳ ಕುಸಿತಕ್ಕೆ ಒಂದು ಉದಾಹರಣೆಯೋ ಎಂಬ ಪ್ರಶ್ನೆಯನ್ನೂ ಇಲ್ಲಿ ಇಡಲಾಗುತ್ತಿದೆ.
ಮೇಲಿನ ಸಾಲುಗಳಿಗೆ ಪೂರಕವಾಗುವಂತೆ ಚಿತ್ರದಿಂದಲೇ ಒಂದಷ್ಟು ಸನ್ನಿವೇಶಗಳನ್ನು ಹೆಕ್ಕಿ ಈ ಕೆಳಗೆ ಪಟ್ಟಿ ಮಾಡುತ್ತಿದ್ದೇವೆ-
೧. ಎಲ್ಲವನ್ನೂ ಉಢಾಫೆಯಿಂದಲೇ ಕಾಣಬಹುದಾದ ನಾಯಕ ಪ್ರೇಮ-ಪ್ರಣಯದ ಭಾವಕ್ಕೆ ಸಿಲುಕುವುದು.
೨. ಆಗಂತುಕನ ಪ್ರೇಮದ ಪ್ರಸ್ತಾವನೆ ಬಂದಾಗ "ಹುಚ್ಚು ಹಿಡಿದಿದೆಯೆ ನಿನಗೆ?" ಎಂದು ಅದನ್ನು ನಿರಾಕರಿಸುತ್ತಾಳೆ. ಏಕೆಂದರೆ ಮೂರು ದಿನಗಳಲ್ಲಿ ದೇಶಭಕ್ತ ಸೈನಿಕನೊಬ್ಬ ಕಟ್ಟುವ ತಾಳಿಗೆ ಕೊರಳನ್ನು ಒಡ್ಡುವವಳಿದ್ದಾಳೆ.
೩. ಒಂದು ಪ್ರೇಮೋತ್ಕಟತೆಯ ಸಂಭಾವ್ಯವನ್ನು ಉದಾಹರಿಸಲು ಬಳಸುವ ಸಾಹಿತ್ಯಿಕ ಪ್ರತಿಮೆಗಳೆಂದರೆ ರೋಮಿಯೋ ಜ್ಯೂಲಿಯೆಟ್, ಸಲೀಮ್ ಅನಾರ್ಕಲಿ ಮಾತ್ರವೇ ಅಲ್ಲ, ಶರತ್‍ಚಂದ್ರ ಚಟರ್ಜಿಯವರ ದೇವದಾಸ್ ಮತ್ತು ಪಾರ್ವತಿಯರ ದಶಕಗಳಿಂದ ರೂಢಿಯಲ್ಲಿರುವ ಪ್ರತೀಕವೇ. ಅಂತಹ ದೇವದಾಸ್ ಚಿತ್ರವನ್ನು ನೆನಪಿಸುವಂತೆ ಮೊಲದ ರೂಪದಲ್ಲಿ ದೇವದಾಸ್‍ನ ಹೆಸರು ಚಿತ್ರದ ತುಂಬ ಕೇಳಿ ಬರುತ್ತದೆ. ಶುದ್ಧವಲ್ಲದ ಶುದ್ಧ ಪ್ರೇಮಕ್ಕೆ ಪ್ರತೀಕವಾಗಿರುವ ದೇವದಾಸ್‍ನನ್ನು ಚಿತ್ರದಲ್ಲಿ ಸಾಯಿಸಲಾಗಿದೆ. ಒಂದು ಕಡೆ ತ್ಯಾಗ ಮತ್ತೊಂದು ಕಡೆ ಪ್ರೇಮದ ಉತ್ಕಟತೆಯನ್ನು ದೇವದಾಸ್ ಪ್ರತಿನಿಧಿಸುತ್ತದೆ ಎಂಬ ಸಾಮಾನ್ಯ ಗ್ರಹಿಕೆಯಲ್ಲಿ ಮುಂಗಾರುಮಳೆಯನ್ನಿಟ್ಟು ನೋಡಿದಾಗ ಪ್ರೀತಮ್ ಸಾಯದೆ ಬದುಕುಳಿದಿದ್ದಾನೆ. ಅಂದರೆ ತ್ಯಾಗದ ನಂತರ ಉಳಿಯುವುದೇನು?
೪. ನಂದಿನಿಯಿಂದ ಹುಚ್ಚ ಎಂದಷ್ಟೆ ಪರಿಗಣಿಸಲ್ಪಟ್ಟಿರುವ ಪ್ರೀತಂ ಅವಳ ಮದುವೆಯ ಹಿಂದಿನ ದಿನ, ಮಾನಸಿಕ ಯಾತನೆಯನ್ನು ಭರಿಸಲಾರದೆ ತನ್ನ ಮನೆಗೆ ಹಿಂದಿರುಗುತ್ತಿದ್ದಾನೆ. ಆಗ ಪ್ರಚೋದನೆ ಎಂಬಂತೆಯೇ ನಂದಿನಿ, ತಾಳಿ ಕಟ್ಟುತ್ತೇನೆ ಎಂದೆನ್ನುತ್ತಿದ್ದವನು ಈಗ ಓಡಿ ಹೋಗುತ್ತಿದ್ದೀಯೇಕೆ? ಎಂದು ಪ್ರಶ್ನಿಸಿ ಅವನನ್ನು ಪುನಃ ತನ್ನ ಬಳಿಗೆ ಪರೋಕ್ಷವಾಗಿ ಆಹ್ವಾನಿಸುತ್ತಾಳೆ.
೫. ಓಡಿ ಹೋಗೋಣವೇ ಎಂದು ಪ್ರೀತಂ ಕೇಳಿದಾಗ ಹುಚ್ಚುಮನಸ್ಸಿನ ಹುಡುಗಾಟಿಕೆಯ ಪ್ರಸ್ತಾವನೆಯೆಂದಷ್ಟೆ ಮೊದಮೊದಲು ಉಪೇಕ್ಷಿಸುವ ನಂದಿನಿ, ಮದುವೆ ಆಗುತ್ತಿದ್ದೇದ್ದೇನೆ ಎಂದು ಗೊತ್ತಿದ್ದೂ ಕೆಲವೇ ಗಂಟೆಗಳ ನಂತರ ಓಡಿ ಹೋಗೋಣ ಎಂದು ಪ್ರೀತಂನನ್ನೇ ಆಗ್ರಹಿಸುತ್ತಾಳೆ.
೬. ಮದುವೆಯಾಗಲಿರುವೆ ಎಂದು ಗೊತ್ತಿದ್ದೂ, ಓಡಿ ಹೋಗೋಣ ಎಂದು ಪ್ರೀತಂನನ್ನು ಆಗ್ರಹಿಸಿದ ಕೆಲವು ಗಂಟೆಗಳ ನಂತರ ನಿಗಧಿಯಾಗಿದ್ದ ದೇಶಭಕ್ತ ಸೈನಿಕನ ತಾಳಿಗೆ ಕೊರಳೊಡ್ಡುತ್ತಾಳೆ.
(ಬೇಡ ಗೆಳೆಯ ನಂಟಿಗೆ ಹೆಸರು ಎಂಬ ಸಾಲನ್ನು ಮೇಲಿನ ವಿಮರ್ಶೆಯಲ್ಲಿ ಬಳಸಿಕೊಳ್ಳಲಾಗಿದೆ. ಸಂಬಂಧವೊಂದು ಪಾರಮಾರ್ಥಿಕ ಮಟ್ಟಕ್ಕೂ ಏರಬಲ್ಲುದು ಎಂಬ ಧ್ವನಿಯನ್ನು ಈ ಸಾಲು ಸೂಚಿಸುತ್ತದೆ ಎಂಬ ವಾದವೂ ಬರಬಹುದು. ಈ ಚಿತ್ರದ ಪ್ರೀತಂ-ನಂದಿನಿಯರ ‘ಸಂಬಂಧ’ ಮಾತ್ರ ಪಾರಮಾರ್ಥಿಕ ಮಟ್ಟದ್ದಲ್ಲ ಎಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ಚಿತ್ರದಿಂದಲೇ ಆಯ್ಕೆ ಮಾಡಿ ನೀಡಲಾಗಿದೆ)
ಎಲ್ಲರಿಗೂ ಸಮ್ಮತವಾಗುವ ಅಂಶಗಳನ್ನು ಅಡಕಗೊಳಿಸಿರುವುದು ಚಿತ್ರದಲ್ಲಿ ದುಡಿದಿರುವ ಎಲ್ಲರ ಜಾಣ್ಮೆಯನ್ನೂ ಎತ್ತಿ ತೋರಿಸುತ್ತದೆ. ಯೋಗರಾಜಭಟ್ಟರು, ಗಣೇಶ್, ಮನೋಮೂರ್ತಿಯವರಿಗೂ ಹಾಗು ಗೆಳೆಯ ಜಯಂತ್ ಕಾಯ್ಕಿಣಿಯವರಿಗೆ ಅಭಿನಂದನೆಗಳು.
2.03.2008
'ಸಲ್ಲಾಪ' ಕನ್ನಡಸಾಹಿತ್ಯ.ಕಾಂ ಪ್ರಕಾಶನ
ಪುಸ್ತಕಗಳು ನಿಮ್ಮ ಮನೆಯಂಗಳಕ್ಕೆ...ಮನದಂಗಳಕ್ಕೆ.
ಅತ್ತು ಹಗುರಾಗಲು ಹೆಗಲಿನಾಸರೆಯಿಲ್ಲ ನಕ್ಕು ಸಂಭ್ರಮಿಸಲು ಸಾವಿನನುಮತಿಯಿಲ್ಲ ಎಂದು ಬರೆಯುವ ವಿಕ್ರಮ ಹತ್ವಾರ್ ಮೊದಲ ಕವನ ಸಂಕಲನದಲ್ಲಿ ತಮ್ಮೆಲ್ಲಾ ಕವನಗಳನ್ನು ಸೇರಿಸಿದ್ದಾರೆ. ಒಳ್ಳೆಯದನ್ನು ಆಯುವುದಕ್ಕೆ ಹೋಗಿಲ್ಲ. ಅದಕ್ಕೆ ಅವರು ಕೊಡುವ ಕಾರಣವೂ ತರ್ಕಬದ್ಧವಾಗಿದೆ; ಕೆಟ್ಟ ಕವನಗಳನ್ನು ಬಚ್ಚಿಟ್ಟು ಒಳ್ಳೆಯ ಕವಿತೆಗಳನ್ನಷ್ಟೇ ನಿಮ್ಮ ಮುಂದಿಟ್ಟು ಕಳ್ಳನಾಗಲಾರೆ. ಹೀಗಾಗಿ ಎಲ್ಲಾ ಕವಿತೆಗಳನ್ನು ಪ್ರಕಟಿಸಿದ್ದೇನೆ ಎನ್ನುವ ವಿಕ್ರಮ ಹತ್ವಾರರ ನಿಲುವನ್ನು ಒಪ್ಪುತ್ತಾ.... "ವಿಕ್ರಮ್ ಹತ್ವಾರರ ಕಥೆಗಳು ಹೊಸತನದಿಂಡ ನಳನಳಿಸುತ್ತವೆ. ಅವರ ಪುಟ್ಟಕಥೆ 'ಕಟ್ಸೀಟ್' ತಂತ್ರ ಮತ್ತು ಶೈಲಿಯಲ್ಲಿ ವಿಭಿನ್ನ ಅನ್ನಿಸುವ ಕಥೆ. ಕವಿತೆ ಹಾಗೆ ಕಥೆ ಕೂಡ ಏನನ್ನೂ ಹೇಳದೇ ಹಲವು ಆಖ್ಯಾನಗಳಿಗೆ ನೆಪವಾಗಬೇಕು ಅನ್ನುವವರು 'ಕಟ್ಸೀಟ್' ಕಥೆಯನ್ನು ಓದಬೇಕು. ಮಾಡರ್ನ್ ಸಿನಿಮಾದ ಹಾಗೆ ಇದು ಹಲವು ದೃಷ್ಟಿಕೋನಗಳಲ್ಲಿ ತೆರೆದುಕೊಳ್ಳುತ್ತದೆ......."
ಹೀಗೆ ಕನ್ನಡ ಪ್ರಭದ ಸಾಪ್ತಾಹಿಕ 'ವಾರದ ಆಯ್ಕೆ'ಯಲ್ಲಿ 'ಜೋಗಿ'ಯವರು 'ಕಟ್ಸೀಟ್ ಮತ್ತಿತರ ಕತೆಗಳು' ಮತ್ತು 'ಇದೇ ಇರಬೇಕು ಕವಿತೆ' ಗಳ ಬಗ್ಗೆ ಬರೆಯುತ್ತಾ ಹೋಗುತ್ತಾರೆ. "
'ಇದೇ ಇರಬೇಕು ಕವಿತೆ' ವಿಕ್ರಮ ಹತ್ವಾರರ ಚೊಚ್ಚಲ ಕವನ ಸಂಕಲನ. ಸಂಕಲನದ ಅರ್ಪಣೆ ಸೊಗಸಾಗಿದೆ. ಹೋಟೆಲ್ ಬಿಲ್, ಟಿಶ್ಯೂ ಪೇಪರ್, ಹಳೆಯ ಪ್ರಶ್ನೆ ಪತ್ರಿಕೆ, ಯಾರದೋ ಆಮಂತ್ರಣ ಪತ್ರಿಕೆ-ಮುಂತಾದ ಎಲ್ಲ ನಿರ್ಲಕ್ಷಿತ ಕಾಗದದ ಚೂರುಗಳಿಗೆ ಕವಿತೆಗಳ ಗುಚ್ಛ ಅರ್ಪಿತವಾಗಿದೆ...
'ಕಟ್ಸೀಟ್ ಮತ್ತಿತತರ ಕಥೆಗಳು' ಸಂಕಲನದಲ್ಲಿ ಗುರುಪ್ರಸಾದ್ ಹೊರತು ಪಡಿಸಿದರೆ ಉಳಿದ ಕಥೆಗಾರರದು ಕನ್ನಡ ಓದುಗರಿಗೆ ಪರಿಚಿತ ಹೆಸರುಗಳಲ್ಲ. ಎಲ್ಲರೂ ಅನಿವಾಸಿ ಕನ್ನಡಿಗರಾದರೂ, ತಾವು ಬದುಕುತ್ತಿರುವ ಸಂದರ್ಭಕ್ಕಿಂತಲೂ ಹೆಚ್ಚಾಗಿ ತಮ್ಮ-ಬಾಲ್ಯದ ನೆನಪುಗಳನ್ನೇ ಕಥೆಯಾಗಿಸಿದ್ದಾರೆ...
"
<--ಪ್ರಜಾವಾಣಿ ವಿಮರ್ಶೆ
ಇಷ್ಟಕ್ಕೂ ಒಳ್ಳೆಯ ಮಾತುಗಳು ಪತ್ರಿಕೆಗಳಲ್ಲಿ ಬಂದ ಮಾತ್ರಕ್ಕೇ ಪುಸ್ತಕಗಳನ್ನು ಕೊಂಡು ಓದಬೇಕೆ...? ನಿಮ್ಮ ಪ್ರಶ್ನೆ ಸಹಜ.
--> ಮೇಲ್ಕಂಡ ಎರಡೂ ಪುಸ್ತಕಗಳು ಕನ್ನಡ ಸಾಹಿತ್ಯ.ಕಾಂ ನ ಪ್ರಕಾಶನ 'ಸಲ್ಲಾಪ'ದ ಚೊಚ್ಚಲ ಪ್ರಕಟಣೆಗಳು.
--->ಬಹುತೇಕ ಬರಹಗಾರರು ಅನಿವಾಸಿ ಕನ್ನಡಿಗರು(ಗುರುಪ್ರಸಾದ್ ಕಾಗಿನೆಲೆ, ಸುದರ್ಶನ್ ಪಾಟೀಲ್ ಕುಲಕರ್ಣಿ, ಎಚ್ ಆರ್ ಸತೀಶ್ ಕುಮಾರ್, ಪ್ರೀತಂ
ಎಕ್ಲಾಸ್ಪುರ್, ಗೋಪಿನಾಥ ತಾತಾಚಾರ್,
ಹಾಗು ವಿಕ್ರಂ ಹತ್ವಾರ)
-->ಕನ್ನಡ ಸಾಹಿತ್ಯ ವಲಯಕ್ಕೆ ಈಗಾಗಲೇ ಚಿರಪರಿಚಿತರಾಗಿರುವವರ ಜೊತೆಗೆ ವಿಕ್ರಮ ಹತ್ವಾರರಂಥಹ ಹೊಸಬರ ಬರಹಗಳೂ ಇವೆ.
-->ಉತ್ತಮ ಮುದ್ರಣ
-->ಮನಸೆಳೆಯುವ ಮುಖಪುಟ
-->ಕೈಗೆಟುಕುವ ಬೆಲೆ
-->ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಒಂದು ಚಟುವಟಿಕೆ.
-->ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡಸಾಹಿತ್ಯ.ಕಾಂ ತನ್ನದೇ ಆದ ಸಮಾಜಮುಖೀ ಧ್ಯೇಯಗಳೊಂದಿಗೆ ಕನ್ನಡ ತಂತ್ರಜ್ಞಾನ ದ ಬೆಳವಣಿಗೆಯ ಬಗೆಗೆ ಅನೇಕ ಚರ್ಚೆಗಳನ್ನು ಹುಟ್ಟು ಹಾಕುತ್ತಿದೆ. ಜೊತೆಗೆ ಕನ್ನಡಕ್ಕೆ ಒಗ್ಗುವಂತಹ ತಂತ್ರಾಂಶ ಅಭಿವೃದ್ಧಿ ಕುರಿತಾಗಿನ ಕೆಲಸಗಳಲ್ಲೂ ತೊಡಗಿಸಿಕೊಂಡಿದೆ.
-->ಕನ್ನಡಸಾಹಿತ್ಯ.ಕಾಂನಲ್ಲಿ ಈಗಾಗಲೇ ಒಮ್ಮೆ ಪ್ರಕಟವಾಗಿರುವ ಕೃತಿಗಳು.
'ಕಟ್ಸೀಟ್ ಮತ್ತಿತರ ಕತೆಗಳು' ಮತ್ತು 'ಇದೇ ಇರಬೇಕು ಕವಿತೆ' ನಿಮ್ಮ ಹತ್ತಿರದ ಊರಿನಲ್ಲೇ ದೊರೆಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.
ನೇರವಾಗಿ ಅಂಚೆಯ ಮೂಲಕ ತರಿಸಿಕೊಳ್ಳುವವರಿಗೆ ಎರಡೂ ಪುಸ್ತಕಗಳನ್ನು 60/- ರೂಪಾಯಿ(ಮುಖ ಬೆಲೆ-90/-ರೂ)ಗಳಿಗೆ ಕಳಿಸಿ ಕೊಡಲಾಗುವುದು. ಅಂಚೆ ವೆಚ್ಚ ಪ್ರತ್ಯೇಕ.
'ಸಲ್ಲಾಪ', ಕನ್ನಡಸಾಹಿತ್ಯ.ಕಾಂ, ೧೦೩, ಜನಪ್ರಿಯ ಲೇಕ್ ವ್ಯೂ ಅಪಾರ್ಟ್ಮೆಂಟ್, ಕೋಡಿಚಿಕ್ಕನಹಳ್ಳಿ, ಬೆಂಗಳೂರು-560 072. ಮೊಬೈಲ್: 93416 34910
ಅನಿವಾಸಿ ಕನ್ನಡಿಗರು ಸಂಪರ್ಕಿಸಬೇಕಾದ ವಿಳಾಸ: ಶ್ರೀಧರ್ ರಾಜಣ್ಣ,
website: http://kannadastore .com
email: store@kannadastore .com
ಕ್ಯಾಲಿಫೋರ್ನಿಯ
ಯು.ಎಸ್.ಎ
ಹೊರನಾಡ ಕನ್ನಡಿಗರು,
ಮುಂಬೈ-ಪುಣೆ-- ರೋಹಿತ್,
email: rohit.ramachandraia h@gmail.com
mobile:093724 70905
ಹೈದರಾಬಾದ್ ಮತ್ತು ಆಂಧ್ರದ ಇತರ ಪಟ್ಟಣಗಳು,
ಕಿರಣ್ ಎಂ,
email: krnsmyle@yahoo. com , krnsmyle@gmail. com
mobile: 099896 66565
ಸದ್ಯಕ್ಕೆ ಕೆಳಕಂಡ ಕರ್ನಾಟಕದ ಊರುಗಳಲ್ಲಿ ಪುಸ್ತಕ ದೊರೆಯುತ್ತವೆ.
ಹೆಸರುಗಳ ಜೊತೆಗೆ ಕೊಟ್ಟಿರುವ ಮೊಬೈಲ್ಗೆ ಕರೆ ಮಾಡಿ ವಿಚಾರಿಸಿ.
ಬೆಂಗಳೂರು-ಅರೇಹಳ್ಳಿ ರವಿ- 99004 39930, email:arehalliravi@ gmail.com
ಶ್ರೀನಿವಾಸ್ - 99458 90194, email: srini.shekhar@ gmail.com
ಸೌಮ್ಯ-94482 44886 email: soumya.g@psidata. com
ಮೈಸೂರು- ಲಾವಣ್ಯ ಪಿ ಜಿ--94480 06546,email: lavanyapg@gmail. com
ಸೌಜನ್ಯ- 99453 49177 , soujanyap@gmail. com
ಅರುಣ್- 98453 85156 , arun.rac@@gmail. com
ಮಂಡ್ಯ- ಜಯಕುಮಾರ್- 94481 63453
ಹಾಸನ- ಪ್ರಭಾಕರ್ ಎಚ್ ಎಸ್(ಸಂಯುಕ್ತ ಕರ್ನಾಟಕ ಜಿಲ್ಲಾ ವರದಿಗಾರರು), email: hspsk@yahoo. co.in
ತುಮಕೂರು,
ಚಿತ್ರದುರ್ಗ,
ದಾವಣಗೆರೆ-ಕೋಟೆ ನಾಗಭೂಷಣ್- 98800 18381, email: mnkote@gmail. com
ಆರ್ ಎಸ್ ಅಯ್ಯರ್- --98445 13868 email: rsitmk@gmail. com
ಮಂಗಳೂರು,
ಉಡುಪಿ- ರಾಜೇಶ್ ನಾಯಕ್--93429 85704, email:
ಸಿರ್ಸಿ - ಶಾನ್ಭಾಗ್--94499 78823
ಶಿವಮೊಗ್ಗ- ಕಿರಣ್--099896 66565, email: krnsmyle@gmail. com
ಬಳ್ಳಾರಿ--ಬಸವರಾಜ್ --98459 04062
ಕೊಪ್ಪಳ-'ಪ್ರದೀಪ್ ಬೆಳಗಲಿ'--email: belagalpradeep@ yahoo.co. in
ಹುಬ್ಬಳ್ಳಿ,
ಧಾರವಾಡ- ಮಂಜುನಾಥ ಡಿ ಎಚ್- 98866 46232, email: manjunathdh@ gmail.com
ರಾಯಚೂರು-ಗುಡೂರ್ , email: gudur007@yahoo. co.in
ಗುಲ್ಬರ್ಗ-
ಬಿಜಾಪುರ-ಫಯಾಜ್
ಜನಪ್ರಿಯ ಲೇಖನಗಳು
-
( ಸ್ನೇಹಿತರೆ, ಲೇಖನ ಓದಿಯಾದ ಮೇಲೆ questnet ಮತ್ತು ಇದೇ ತರದ ಇನ್ನಿತರ ಚೈನ್ ಮಾರ್ಕೆಟಿಂಗ್ ಕಂಪನಿಗಳಿಂದ ನಿಮ್ಮ ಮತ್ತು ಪರಿಚಿತರಿಗಾದ ವಂಚನೆಯನ್ನು ದಯಮಾಡಿ comment ...
-
ಬರಹ: ಕಿರಣ್ ಎಂ ನಿರ್ವಾಹಕರು ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಬೆಂಗಳೂರು ಈ ಶಿಬಿರದ ಮಾಸ್ಟರ್ ಪ್ಲಾನ್ ಎರಡು ತಿಂಗಳು ಹಳೆಯದ್ದು. ಬೆಂಗಳೂರಿನ ಧಾವಂತದಲ್ಲಿ ನಮ್ಮನ್ನೆ...
-
ಕೆಲವೊಮ್ಮೆ ಹಾಗಾಗುತ್ತೆ. ಎದುರಾಗುವ ಪ್ರತಿ ಸನ್ನಿವೇಷವೂ ನಮಗೆ ವಿರುದ್ಧವಾಗಿ ವರ್ತಿಸುತ್ತಿರುತ್ತದೆ. ಕನ್ನಡ ಅಂತರ್ಜಾಲ ಜಗತ್ತಿನಲ್ಲಿ ಕನ್ನಡದ ಪ್ರಾತಿನಿಧ್ಯತೆಯನ್ನು ಐದ...
-
www.samvaada.com Dear Friends, "Samvaada.com" is constantly orgainising film shows, film discourses and film readings in order...
-
ಸಮ್ಮೇಳನದ ಮಳಿಗೆಯಲ್ಲಿ ಶನಿವಾರ ನಮಗಂತೂ ಶುಭದಿನ. ಎದ್ದು ನ(ಗ)ರಿಗಳ ಮುಖ ನೋಡಿದ್ದರಿಂದಲೋ ಏನೋ ಭರ್ಜರಿ ನಲವತ್ತು ಸಾವಿರ ವ್ಯಾಪಾರ-೮*೮ ಮಳಿಗೆಯೊಂದರಲ್ಲೇ. ವ್ಯಾಪಾ...
-
ಅಂ ತೂ ಕಳ್ಳಭಟ್ಟಿಯ ಹೆಸರಿನಲ್ಲಿ methyl alcohol ಅಥವ methanol ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ. ಸಾರಾಯಿ ನಿಷೇಧವಿರುವ ಕರ್ನಾಟಕ ಮತ್ತು ನಿಷೇಧವಿಲ್ಲದಿರುವ ತಮ...
-
"NAVILAADAVARU" a Kannada film realized by a small group of enthusiasts, is produced in just Rs 35000. We are screening this film ...
-
ಶ್ರೀಮಾತಾ, ಕ್ಷಮೆಯಿರಲಿ ನನ್ನ ಗಡಿಬಿಡಿ ಮತ್ತು ಹೊಸ ಹುಡುಗಿಯರನ್ನು ನೇರವಾಗಿ ಮಾತನಾಡಿಸಲಾಗದ ಲಘು ಸಂಕೋಚಕ್ಕೆ. ಬ್ಲಾಗೀ ಮಿಲನದಲ್ಲಿ ರಾಜೇಶ್ ನಿಮ್ಮನ್ನು ’ಮ್ಯುಸಿಸಿಯನ್’...
-
ಲೇಖಕರು: ಎಚ್ ಎಸ್ ಪ್ರಭಾಕರ್ ಕೃಪೆ: ಸಂಯುಕ್ತ ಕರ್ನಾಟಕ ಹಾಸನ, ಜೆ.ಡಿ.ಎಸ್. ಭದ್ರಕೋಟೆಯಾಗಿದ್ದರೂ ಮುಂಬರುವ ಸಂಸತ್ ಚುನಾವಣೆಗಳಲ್ಲಿ ಸ್ವಲ್ಪ ಸಂಘಟಿತ ಶ್ರಮ ಹಾಕಿದ್ದರ...
-
ಅ ದು ಮೊದಲ ಮಹಾಯುದ್ಧದ ನಂತರ ಕಾಲ. ಮಿತ್ರ ಸೇನೆಯ ಎದುರು ಹೀನಾಯವಾಗಿ ಸೋತ ಜರ್ಮನಿ ತನ್ನ ಭೂಭಾಗಗಳನ್ನು ಕಳೆದುಕೊಂಡಿದ್ದಲ್ಲದೆ, ಯುದ್ಧ ನಷ್ಟವೆಂದು ಅಪಾರವಾದ ವೆಚ್ಚವನ್ನು...