3.30.2008
ವಂಚನೆ ಅನ್ನೋದು ವ್ಯಭಿಚಾರದಷ್ಟೇ ಪುರಾತನ ಕಸುಬು!
ಸ್ನೇಹಿತರೆ,
‘Gold questnet ಪೋಸ್ಟ್ಮಾರ್ಟಂ:ಚಿನ್ನ ಮಾರಿ ಲಕ್ಷ ಗಳಿಸಿ’ ಲೇಖನ ಇಷ್ಟೊಂದು ಸಂಚಲನಕ್ಕೆ ಕಾರಣವಾಗುತ್ತೆ ಅನ್ನೋ ಯೋಚನೆ ನನಗಿರಲಿಲ್ಲ. ಇ-ಮೈಲ್ನಲ್ಲಿ, ಫೋನ್ನಲ್ಲಿ, ಕೊನೆಗೆ ಕಾಮೆಂಟುಗಳ ರೂಪದಲ್ಲಿ ಪ್ರತಿಕ್ರಿಯೆಗಳ ಸುರಿಮಳೆ. ಲೇಖನ ಮೆಚ್ಚಿಕೊಂಡ ಶ್ಯಾಂರವರು ಲೇಖನಕ್ಕೆ ಪೂರಕವಾದ ಮುನ್ನುಡಿ ಬರೆದು ದಟ್ಸ್ಕನ್ನಡದಿಂದ ನನ್ನ ಬ್ಲಾಗ್ಗೆ ಸಂಪರ್ಕ ಕೊಟ್ಟರು. ನಲವತ್ತೆಂಟು ಗಂಟೆಗಳಲ್ಲಿ ಒಂದು ಸಾವಿರ ಜನ ಲೇಖನದ ಪುಟಕ್ಕೆ ಭೇಟಿ ನೀಡಿದ್ದಾರೆ. ಹಾಗೆಯೇ ಶ್ಯಾಂರವರ ಶೀರ್ಷಿಕೆ ‘ಚಿನ್ನದಂತ ಮೋಸ’ ಮತ್ತು ಅದು ಪ್ರಕಟವಾದ ರೀತಿ ಸ್ತುತ್ಯರ್ಹ. ಅವರ ಸಹಕಾರ ಹೀಗೇ ಇರಲಿ. ಬಂದ ಪ್ರತಿಕ್ರಿಯೆಗಳಲ್ಲಿ ಒಂದನ್ನು ಆಯ್ದು ಅದಕ್ಕೆ ಲೇಖನದ ರೂಪ ಕೊಟ್ಟು ಕೆಳಗೆ ಪ್ರಕಟಿಸುತ್ತಿದ್ದೇನೆ. ಅನಿವಾರ್ಯ ಕಾರಣಗಳಿಗಾಗಿ ಲೇಖಕರ ಹೆಸರನ್ನು ಪ್ರಸ್ತಾಪಿಸಿಲ್ಲ.
-ಅರೇಹಳ್ಳಿ ರವೀ
(ಮೂಲ ಲೇಖನ-`Questnet:ಚಿನ್ನದಂತ ಮೋಸ)
ವಂಚನೆ ಅನ್ನೋದು ವ್ಯಭಿಚಾರದಷ್ಟೇ ಪುರಾತನ ಕಸುಬು. ಯಾರಾದರೂ ರಾತ್ರಿ ಕಳೆದು ಬೆಳಗಾಗೋದರೊಳಗೆ ಶ್ರೀಮಂತರಾಗಿ ಹೋದರೆಂದರೆ ಅದಕ್ಕೆ ಕಾರಣ ಬೇರೇನಲ್ಲ-ವಂಚನೆ.
ಕ್ಷಣ ಯೋಚಿಸಿ.
ಅಷ್ಟು ದೊಡ್ಡ ಕಂಪನಿಯಾದ ‘ಸಹರಾ’ ಬಂಡವಾಳವನ್ನು ಯಾವ ದಾರಿಗಳ ಮೂಲಕ ಕ್ರೋಢೀಕರಿಸುತ್ತದೆ ಮತ್ತು ಅದನ್ನು ಎಲ್ಲೆಲ್ಲಿ ಹೂಡುತ್ತದೆ ಅನ್ನೋದು ಸಾರ್ವಜನಿಕರಿಗೆ ಗೊತ್ತಾಗದಂತ ಗುಟ್ಟಿನ ಗೂಡೇನಲ್ಲ. Sahara Financial Servicesನವರು ಸಂಗ್ರಹಿಸಿದ ಠೇವಣಿಯು - Amby valleyಗೆ divert ಆಗುತ್ತಿದ್ದದ್ದು ಗೊತ್ತಿದ್ರೂ, ಎಲ್ಲರೂ ಕಣ್ಣು ಮುಚ್ಚಿಕೊಂಡಿದ್ದರು. ವಿಷಯ ಸಾರ್ವಜನಿಕ ಆದಾಗ - ಯಾರೂ ಯಾರನ್ನೂ ಮುಚ್ಚಿಡಲಾಗಲಿಲ್ಲ. ಸಣ್ಣ ಪುಟ್ಟ ಕುರಿ-ಕೋಳಿಗಳನ್ನು ಬಲಿ ಕೊಟ್ಟು, ರಾಜಕಾರಣಿಗಳು ತಲೆ ಮೇಲೆ ಮುಸುಕು ಹಾಕಿಕೊಂಡರು.ಇದೇ ಸಮಯದಲ್ಲಿ ಸುಬ್ರತೊ ರಾಯ್ ಸಹರ ಅವರಿಗೆ ಆರೋಗ್ಯ ಸರಿ ಇಲ್ಲ ಎಂದು ಗುಲ್ಲೆದ್ದಿತ್ತು.
ಹಾಗೆಯೇ ಪೀಯರ್ಲೆಸ್ ಇನ್ಷೂರೆನ್ಸ್ ಕಂಪನಿ ತನ್ನ ಹೂಡಿಕೆದಾರರನ್ನು ವಂಚಿಸಿದ್ದೂ ನಮಗೆ ಗೊತ್ತು.
ಇವತ್ತು ಸುದ್ದಿಯಲ್ಲಿ ಬಂದದ್ದು - ಕ್ಯಾನ್ಫಿನ್ ವಹಿವಾಟಿನ ಹಗರಣದಲ್ಲಿ ಕೇತನ್ ಪಾರೆಖ್ ಪಾಲಿದೆ.ನಿಮಗೆ ತಿಳಿದಿರಬಹುದು - ಕ್ಯಾನ್ಫಿನ್ನ ನಿರ್ದೇಶಕರಾಗಿ ಬಹಳ ವರ್ಷಗಳ ಕಾಲ ಮಾನ್ಯ ಹಣಕಾಸು ಮಂತ್ರಿ ಚಿದಂಬರಂ ಅವರ ಪತ್ನಿ ಇದ್ದರು. ಇವರುಗಳು ಮಾಡುವ ದೊಡ್ಡ ವಂಚನೆಗಳಿಗೆ - ಸಣ್ಣ ಸಣ್ಣ ಮೀನುಗಳಾದ, ಕೇತನ್ ಪಾರೇಖ್, ಹರ್ಷದ್ ಮೆಹ್ತಾ, ತೆಲ್ಗಿ ಇತ್ಯಾದಿಗಳನ್ನು ಸಾರ್ವಜನಿಕವಾಗಿ ಬಲಿ ನೀಡುವರು.
ನೀವು ಜಪಾನ್ ಬೆಡ್ ವಂಚಕ ಯೋಜನೆಯ ಬಗ್ಗೆ ಕೇಳಿದ್ದಿರಬಹುದು.
ನಿಮಗೆ ಏನೇನೂ ಉಪಯೋಗವಿಲ್ಲದ ವಸ್ತುವೊಂದನ್ನು ವಂಚನೆಯ ಕಥೆ ಕಟ್ಟಿಯೇ ಅವಾಸ್ತವವೆನಿಸುವ ಬೆಲೆಗೆ ಮಾರುವುದು ಇತ್ತೀಚಿನ ಜಾಹಿರಾತು ಲೋಕದ ಟ್ರೆಂಡ್.
ನೆಟ್ವರ್ಕಿಂಗ್ ಕಂಪನಿಗಳು, ಚೀಟಿ ವ್ಯವಹಾರಗಳು, ‘ನಿಧಿ’ ಯೋಜನೆಗಳು, ಹಣ ಹಸ್ತಾಂತರ ವ್ಯವಹಾರಗಳು(ಪಾಶ್ಚಿಮಾತ್ಯ ಸಮೂಹ), ಸಿ ಆರ್ ಬಿ(ಮಾರವಾಡಿ ಬನ್ಸಾಲಿಗಳ ವ್ಯವಹಾರ), ಕೊನೆಗೆ ಅಂಬಾನಿಯಂತವರು- ಎಲ್ಲರೂ, ಎಲ್ಲರೂ ಮಾಡೋದು ವಂಚನೆಯನ್ನೇ. ಅದರ ಮುಖಗಳು ಬೇರೆ ಅಷ್ಟೇ.
ಹಣಕಾಸು ವ್ಯವಹಾರ ಮಾಡುವ ಯಾವುದೇ ಕಂಪನಿಯಾಗಲಿ, ಅದು ಆರ್ ಬಿ ಐ ನಲ್ಲಿ ನೋಂದಾವಣೆಗೊಳ್ಳಬೇಕು. ಕಂಪನಿಗಳು ಹಣಕಾಸೇತರವಾದರೆ, ಅಂದರೆ ಅವುಗಳ ಸ್ಥಿರಾಸ್ತಿ ಮತ್ತು ಲಾಭ ಅವುಗಳ ಲೇವಾದೇವಿ ಮೊತ್ತದ ೫೦%ಗಿಂತ ಕಡಿಮೆ ಇದ್ದಾಗ ಅಂತಹ ಕಂಪನಿಗಳು ಆರ್ ಬಿ ಐನ ಹಿಡಿತದಿಂದ ತಪ್ಪಿಸಿಕೊಳ್ಳುತ್ತವೆ. ಆಗ ಅಂತಹ ಕಂಪನಿಗಳು ‘ಕಂಪನಿ ವ್ಯವಹಾರಗಳ ಇಲಾಖೆ’ಯನ್ನು, ಆ ಮೂಲಕ ಕೇಂದ್ರ ಸರ್ಕಾರದ ಆಡಳಿತಶಾಹಿಗಳನ್ನು ತೃಪ್ತಿಪಡಿಸುವ ಆಗ್ರಹಕ್ಕೊಳಗಾಗುತ್ತವೆ. ಮತ್ತು ಪ್ರತಿ ವಂಚಕ ಕಂಪನಿಯೂ ಈ ಮಾರ್ಗವನ್ನೇ ಬಯಸುತ್ತದೆ.
ಇಂಥಹ ಕಂಪನಿಗಳನ್ನು ಪೋಲೀಸ್ ಇಲಾಖೆಯ ಹಣಕಾಸು ಅವ್ಯವಹಾರ ತನಿಖಾ ವಿಭಾಗಗಳು ಮಾತ್ರ ನಿಭಾಯಿಸಬಹುದು. ಆದರೇನು ಮಾಡೋದು ಅಲ್ಲೂ ಭ್ರಷ್ಟಾಚಾರದ ಹಬ್ಬ.
ದೇಶದಲ್ಲಿ ಇಷ್ಟೊಂದು ಕಾನೂನು ಪರಿಣತರು, ಅದರ ರಕ್ಷಕರೂ ಇದ್ದೂ ದೇಶದ ಜನಸಾಮಾನ್ಯರ ಸಂಪಾದನೆಯೆಂಬುದು ಅಕ್ಷರಶಃ ಅತ್ಯಾಚಾರಕ್ಕೀಡಾಗುತ್ತಿರುವುದು ವಾಸ್ತವದ ದುರಂತ.
ರಾತ್ರೋರಾತ್ರಿ ಶ್ರೀಮಂತಿಕೆ ಹೊಂದುವ ವಂಚಕರು ಇಂಥವೇ ಹಲವು ದಾರಿಗಳ ಮೂಲಕ ನಿಯಂತ್ರಣ ಸಂಸ್ಥೆಗಳ ಹಿಡಿತದಿಂದ ತಪ್ಪಿಸಿಕೊಂಡಿರುತ್ತಾರೆ.
ಮಲ್ಟೀ ಲೆವೆಲ್ ಮಾರ್ಕೆಟಿಂಗ್ ಕಂಪನಿಗಳು - ಎಲ್.ಎಂ.ಎಲ್ ಕಂಪನಿಗಳೆಂದೂ ಪ್ರಸಿದ್ಧವಾಗಿವೆ. ಇವುಗಳ ಕಾರ್ಯ ವೈಖರಿಯ ಬಗ್ಗೆ ನನಗೆ ತಿಳಿದ ಒಂದೆರಡು ಮಾತುಗಳನ್ನು ಇಲ್ಲಿ ಅರುಹುವೆ.
ಗ್ರಾಹಕರನ್ನು ಸುಲಭದಲ್ಲಿ ಆಕರ್ಷಿಸಿ, ತನ್ನ ಬಲೆಯೊಳಗೆ ಬೀಳಿಸಿಕೊಂಡು ರಕ್ತ ಹೀರುವ ಇಂತಹ ಕಂಪನಿಗಳನ್ನು ಸಮಾಜ ಘಾತುಕ ಶಕ್ತಿಗಳೆಂದು ಕರೆದರೆ ಅತಿಶಯೋಕ್ತಿಯೆನಿಸುವುದಿಲ್ಲ.
"ಬಜಾರಿನಲ್ಲಿ ಯಾರೂ ಪುಕ್ಕಟೆ ಊಟವನ್ನೀಯುವುದಿಲ್ಲ"-ಈ ಅಂಶವನ್ನು ಎಂದಿಗೂ ನಾವು ಮರೆಯಬಾರದು. ಎಲ್ಲ ಮಾಡುವುದೂ ಹೊಟ್ಟೆಗಾಗಿ, ಮುಂದಿನ ಏಳು ಪೀಳಿಗೆಗಳು ಕುಳಿತು ತಿನ್ನಲೆಂಬ ದುರಾಸೆಗಾಗಿ.
ಜಪಾನ್ ಬೆಡ್, ಮನ್ಜೋಗ್ ನಂತಹ ಸಂಸ್ಥೆಗಳ ಸುಲಭ ಮಾರಾಟ ತಂತ್ರ ಇಲ್ಲಿ ಪ್ರಸ್ತುತವಾಗುತ್ತೆ. ಜಪಾನ್ ಬೆಡ್ - ವೈದ್ಯಕೀಯವಾಗಿ ಈ ಹಾಸುಗೆಯನ್ನು ಬಳಸುವವರಿಗೆ ಒಳಿತಂತೆ. ಇದರ ಬೆಲೆ ಆ ಕಂಪೆನಿ ನಿಷ್ಕರ್ಶಿಸಿದ್ದು ಸುಮಾರು ೧ ಲಕ್ಷ ರೂಪಾಯಿಗಳು. ಆದರೆ ಅದನ್ನು ಮಾಡಲು ತಗಲುವ ಖರ್ಚು ಸುಮಾರು ೩೦ ರಿಂದ ೪೦ ಸಾವಿರಗಳಂತೆ! ಈ ಕಂಪನಿಯವರ ಸ್ಕೀಮಿನ ಪ್ರಕಾರ ನೀವು ಒಂದು ಹಾಸುಗೆಯನ್ನು ಕೊಂಡು, ಇನ್ನು ೧೦ ಜನಗಳಿಗೆ ತಗುಲಿ ಹಾಕಿದರೆ, ನಿಮಗೆ ಆ ಹಾಸುಗೆ ಪುಕ್ಕಟೆಯಾಗಿ ದೊರಕುವುದು. ಎಲ್ಲಿಯವರೆಗೆ ಈ ಕೊಂಡಿಯು ಬೆಸುಗೆ ಹಾಕಿಕೊಂಡು ಹೋಗಬಹುದು?
ಇದೇ ರೀತಿ, ಪಾತ್ರೆಗಳು, ಟಿವಿ, ಫ್ರಿಜ್ ಮತ್ತಿತರೇ ವಸ್ತುಗಳನ್ನು ಮಾರುವ ತಂತ್ರ ಒಂದು ರೀತಿಯದಾದರೆ, ಹಣವನ್ನು ದ್ವಿಗುಣಗೊಳಿಸುವ ತಂತ್ರವು ಇನ್ನೊಂದು ಬಗೆಯದು. ನೀವು ಹತ್ತು ರೂಪಾಯಿಗಳನ್ನು ಕಳುಹಿಸಿ, ಇನ್ನು ಹತ್ತು ಜನಗಳನ್ನು ಈ ಸ್ಕೀಮಿಗೆ ತಗುಲಿಸಿದರೆ, ನಿಮಗೆ ಹತ್ತು ರೂಪಾಯಿಗಳೂ, ಮತ್ತು ಆ ಹತ್ತು ಜನಗಳು ಇನ್ನೂ ಹತ್ತು ಹತ್ತು ಜನಗಳನ್ನು ಈ ಸ್ಕೀಮಿಗೆ ತೊಡಗಿಸಿದರೆ, ನಿಮಗೆ ೪೦ ರೂಪಾಯಿಗಳೂ ಕ್ರಮವಾಗಿ ಬರುವುದು ಎಂದು ನಡೆಸುವರು. ಅದೇನೇ ಆಗಲಿ, ಒಂದಲ್ಲ ಒಂದು ದಿನ ಈ ಗುಳ್ಳೆ ಒಡೆದೇ ಒಡೆಯಬೇಕು. ಹಾಗೆ ಗುಳ್ಳೆ ಒಡೆದಾಗ, ಜನಗಳಿಗೆ ಆಗುವ ನೋವೆಷ್ಟು?
ಇದೇ ತರಹ ಬೆಂಗಳೂರಿನಲ್ಲಿ ಮನ್ಜೋಗ್ ಎಂಬ ಸಂಸ್ಥೆಯೂ ಸ್ಕೀಮುಗಳನ್ನು ನಡೆಸುತ್ತಿದ್ದುದು ಎಲ್ಲರ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದೇ ಉಳಿದಿರಬೇಕೆಂಬುದು ನನ್ನ ಅನಿಸಿಕೆ. ಇದ್ದಕ್ಕಿದ್ದಂತೆ ಸರ್ದಾರ್ಜಿ ಸೋದರರು ಮಾಯವಾಗಿ, ಎಷ್ಟೊಂದು ಜನಗಳ ನಿವೃತ್ತಿಯ ನಂತರದ ಉಳಿಕೆಯ ಹಣವು ನೀರಿನ ಪಾಲಾಯಿತು. ಎಷ್ಟೆಲ್ಲಾ ಕುಟುಂಬಗಳು ಸಮತೋಲನ ಕಳೆದುಕೊಂಡವು. ಈ ಎಲ್ಲ ತಂತ್ರಗಳೂ ಅತೀ ಬುದ್ಧಿವಂತರ ಮೆದುಳಿನಿಂದಲೇ ಹುಟ್ಟಿಕೊಂಡಿರುವುದು. ಮೋಸಗಾರಿಕೆ ಎಂಬುದನ್ನು ಮಾರಾಟ ತಂತ್ರವೆಂಬ ಸೋಗಿನಲ್ಲಿ ಬಳಸುತ್ತಿದ್ದಾರೆ.
ಸಾರ್ವಜನಿಕರನ್ನು ಸುಲಭವಾಗಿ ಸೆಳೆಯುವ ತಂತ್ರ ಬಲ್ಲಿರಾ? ಬ್ಯಾಂಕುಗಳಲ್ಲಿ ಠೇವಣಿ ಇಟ್ಟರೆ ನಿಮಗೆ ಸಿಗುವುದು ಶೇಕಡಾ ೯ ಅಥವಾ ೧೦ ಬಡ್ಡಿ. ಅದೇ ಈ ಸಂಸ್ಥೆಗಳು ೧೬ ರಿಂದ ೨೦ ರವರೆವಿಗೆ ನೀಡುವುವು. ಕೆಲವೊಮ್ಮೆ ಸಿ ಆರ್ ಬಿ(ಬನ್ಸಾಲಿ ಕಂಪನಿ)ಯಂತಹ ಸಂಸ್ಥೆ ಶೇಕಡಾ ೨೪-೨೫ ಬಡ್ಡಿಯನ್ನೂ ನೀಡುತ್ತಿತ್ತು. ಇಲ್ಲಿ ನಿಮಗೆ ಮೊದಲು ಒಂದೆರಡು ಕಂತುಗಳು ಮಾತ್ರ ಬಡ್ಡಿ ಬರುವುದಷ್ಟೇ ಹೊರತು ನಂತರದ ದಿನಗಳಲ್ಲಿ ಬಡ್ಡಿಯಲ್ಲ ಅಸಲು ಕೂಡಾ ಮಾಯವಾಗುವುದು.
ಬಡ್ಡಿಯ ದರವನ್ನು ಹೇಗೆ ನಿಷ್ಕರ್ಶಿಸಬಹುದು? ದೇಶದ ಉತ್ಪನ್ನ ಮತ್ತು ಹಣದುಬ್ಬರಕ್ಕೆ ಹೊಂದಿಕೊಂಡಂತೆ ಬಡ್ಡಿಯನ್ನು ಆರ್ ಬಿ ಐ ಕಾಲಕಾಲಕ್ಕೆ ಪರಿಷ್ಕರಿಸುತ್ತಾ ನಿಗಧಿ ಮಾಡುತ್ತೆ.
ಎಚ್ಚರಿಕೆಯಿಂದ ಇರಬೇಕಾದ ಇನ್ನೊಂದು ಕ್ಷೇತ್ರವೆಂದರೆ, ಷೇರು ಮಾರುಕಟ್ಟೆ. ಕೆಲವು ಕುತಂತ್ರಿಗಳ ಕೈಚಳಕದಿಂದ ಷೇರು ಮಾರುಕಟ್ಟೆಯಲ್ಲಿ ಷೇರುದರಗಳು ಮೇಲೆ ಕೆಳಗೆ ಹೋಗುತ್ತಿರುತ್ತವೆ. ಒಮ್ಮಿಂದೊಮ್ಮೆಲೇ ದರಗಳು ಮೇಲೇರುವುದು, ಹಿಂದೆಯೇ ಕೆಳಗೆ ಇಳಿಯುವುದು ಸಾಮಾನ್ಯ ಸಂಗತಿಯಾಗಿದೆ. ಇದರ ಬಗ್ಗೆ ನೀವ್ಯಾರಾದರೂ ಯೋಚಿಸಿರುವಿರಾ? ದೇಶದ ಅಥವಾ ಕಂಪನಿಯ ಉತ್ಪನ್ನ - ಅಸೆಟ್ ಲಯಾಬಿಲಿಟಿಗಳಿಗೆ ಹೊಂದಿಕೊಂಡಂತೆ ಆ ಕಂಪನಿಯ ಷೇರು ಬೆಲೆಯನ್ನು ನಿಗದಿಪಡಿಸಬಹುದು. ಆದರೆ ಹಾಗೆ ಆಗುತ್ತಿದೆಯೇ? ಇನ್ಫೊಸಿಸ್ ನಂತಹ ಕಂಪನಿಯ ಒಂದು ರೂಪಾಯಿನ ಷೇರು ಒಂದು ಸಾವಿರ ಪಟ್ಟು ಹೆಚ್ಚಿನ ದರದಲ್ಲಿ ವಹಿವಾಟಿನಲ್ಲಿ ತೊಡಗಿದ್ದರೆ, ಅದು ಸರಿ ಇದೆಯೇ ಎಂಬುದನ್ನು ಯೋಚಿಸಬೇಕಲ್ಲವೇ? ಅದಿರಲಿ, ಒಂದೇ ಸಮನೆ ನಷ್ಟವನ್ನು ಅನುಭವಿಸುತ್ತಿರುವ ಕಂಪನಿಯ ಷೇರಿನ ದರವೂ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ವಹಿವಾಟು ಆಗುತ್ತಿದೆಯೆಂದರೆ, ಇದರ ಹಿಂದೆ ಯಾರದೋ ಕೈವಾಡ ಇರಬೇಕೆಂದು ನಿಮಗೆ ಅನಿಸುವುದಿಲ್ಲವೇ? ಅಲ್ಲ, ಇದರ ಬಗ್ಗೆ ನಾನು ಹೆಚ್ಚಿನ ವಿಶ್ಲೇಷಣೆಯನ್ನೇನೂ ಮಾಡುತ್ತಿಲ್ಲ. ನಾನೆಂದೂ ಯಾವುದೊಂದೂ ಷೇರನ್ನು ಕೊಂಡಿಲ್ಲ, ಅದರ ವಹಿವಾಟಿನಲ್ಲಿ ಕೈ ಹಾಕಿದ್ದಿಲ್ಲ. ಹೆಚ್ಚಿನ ಹಂತದಲ್ಲಿ ಚಿಂತಿಸಬಲ್ಲ ನಿಮ್ಮ ಮನದಲ್ಲಿ ಇದೊಂದು ಬೀಜವನ್ನು ಬಿತ್ತುತ್ತಿರುವೆ.
ವಿತ್ತೀಯ ಕ್ಷೇತ್ರದಲ್ಲಿ ಬ್ಯಾಂಕುಗಳು ಮತ್ತು ಬ್ಯಾಂಕೇತರರ ಪಾಲು ಹೆಚ್ಚಿನದಾಗಿದೆ. ಈಗಾಗಲೇ ಬ್ಯಾಂಕುಗಳನ್ನು ಶಸ್ತ್ರಕ್ರಿಯೆಗೊಳಪಡಿಸಿ, ಆರ್ಗನೈಸ್ಡ್ ಸೆಕ್ಟಾರ್ ಎಂದು ಹತೋಟಿಯಲ್ಲಿಟ್ಟುಕೊಳ್ಳಲಾಗಿದೆ. ಅದೇ ಬ್ಯಾಂಕೇತರರಲ್ಲಿ ಕಂಪೆನಿಗಳಾದರೆ, ಕೇಂದ್ರ ಸರಕಾರದ ವಿಭಾಗವಾದ ಕಂಪೆನಿ ವ್ಯವಹಾರಗಳ ಇಲಾಖೆಯು ಅವುಗಳ ಕಾರ್ಯಾಚರಣೆಯ ಮೇಲೆ ನಿಗಾ ಇಡುವುದು. ಎನ್ ಬಿ ಎಫ್ ಸಿಗಳು ಸಾರ್ವರ್ತಿಕ ಠೇವಣಿ ಇಟ್ಟುಕೊಂಡಿದ್ದರೇ ಮಾತ್ರ ಅವುಗಳ ಬಗ್ಗೆ ಆರ್ ಬಿ ಐ ಹೆಚ್ಚಿನ ನಿಗಾ ವಹಿಸುವುದು.
ಆರ್ ಬಿ ಐ ನ ಧ್ಯೇಯವೆಂದರೆ, ಸಾರ್ವಜನಿಕರ ಹಣವನ್ನು ಕಾಯುವುದು, ಅದು ಪೋಲಾಗದಂತೆ ನಿಗಾ ವಹಿಸುವುದು. ಅದೇ ಸಾರ್ವಜನಿಕ ಠೇವಣಿ ತೆಗೆದುಕೊಳ್ಳದೇ ವ್ಯಾಪಾರ ನಡೆಸುವವರ ಬಗ್ಗೆ ಹೆಚ್ಚಿನ ಕಾಳಜಿ ಯಾರಿಗೂ ಇಲ್ಲ. ಆದರೂ ಇದರಿಂದ ಹಣಕಾಸಿನ ವ್ಯವಸ್ಥೆಗೆ ಧಕ್ಕೆ ಬರುವುದಲ್ಲವೇ? ಚಿಟ್ ಫಂಡ್, ನಿಧಿ, ಅನ್ ಇನ್ ಕಾರ್ಪೊರೇಟೆಡ್ ಬಾಡೀಸ್ ಇವುಗಳನ್ನು ಹತೋಟಿಯಲ್ಲಿಡಲು ಪ್ರತ್ಯೇಕ ಸಂಸ್ಥೆಗಳಿಲ್ಲ. ರಾಜ್ಯ ಸರ್ಕಾರದ ವಿಭಾಗ ಮತ್ತು ಪೊಲೀಸ ಇಲಾಖೆ ಇದನ್ನು ನಿಯಂತ್ರಿಸಲು ಶಕ್ತವಾಗಿದೆ. ಆದರೆ ಅಲ್ಲಿಯೇ ಲಂಚಕೋರತನ ಹೆಚ್ಚಿದ್ದರೆ, ಸಾರ್ವಜನಿಕರ ಪಾಡೇನು?
ಇವುಗಳು ಹೇಗೆ ಹುಟ್ಟಿಕೊಂಡವು?
ಎಂತಹದ್ದೇ ಕಾನೂನು ಇದ್ದರೂ ಇವುಗಳು ಹೇಗೆ ತಲೆಯೆತ್ತಿ ಮೆರೆಯುತ್ತಿವೆ? ಎಲ್ಲರಿಗೂ ತಿಳಿದಂತೆ ಲಾಲೂ, ರಾಮವಿಲಾಸ ಪಾಸ್ವಾನ್, ಶರದ್ ಪವಾರ್ ಇತ್ಯಾದಿಗಳ ಬೆಂಬಲ ಈ ಕ್ಷೇತ್ರದಲ್ಲಿ ಇದ್ದೇ ಇದೆ. ಅದೇ ೧೯೯೦ರಲ್ಲಿ ಆದ ಹರ್ಷದ್ ಮೆಹತಾ ಷೇರು ಹಗರಣದ ಸಂಬಂಧದಲ್ಲಿ ಇಂದಿನ ವಿತ್ತ ಮಂತ್ರಿ ಚಿದಂಬರಂ ಕೈವಾಡ ಇತ್ತು.
ಇಷ್ಟಕ್ಕೂ ಹರ್ಷದ್ ಮೆಹತಾನಂತಹ ವಂಚಕ ಹುಳುವನ್ನು ಹುಟ್ಟು ಹಾಕಿದವರ್ಯಾರು?-‘ಅಂಬಾನಿ’ ಎಂದರೆ ಅಚ್ಚರಿಯಾಗುವುದಾ?
ಎಲ್ಲಿಯವರೆಗೆ ಜನಸಾಮಾನ್ಯರ ಅತಿಆಸೆ, ವಂಚನೆಯಲ್ಲಿ ರಾಜಕಾರಣಿಗಳ ಕೈವಾಡ, ಕುಮ್ಮಕ್ಕು, ಬೆಂಬಲ, ಜೊತೆ ಜೊತೆಗೆ ಲಂಚಕೋರ ಸರಕಾರೀ ಅಧಿಕಾರಿಗಳ ಶಾಮೀಲು ಮೆರೆಯುವುದೋ, ಜನತೆಗೆ ತನ್ನ ಶಕ್ತಿಯ ಅರಿವಾಗದೇ ಇರುವುದೋ - ಅಲ್ಲಿಯವರೆವಿಗೆ ಮೋಸ, ಕುತಂತ್ರಗಳು ಇದ್ದೇ ಇರುವುವು. ಜನಶಕ್ತಿಯ ಅರಿವು ಮೂಡಿಸಲು ಇದು ಸಕಾಲ. ಇದನ್ನು ನಿಮ್ಮಂತಹ ಓದುಗರು, ಚಿಂತಕರು ಮಾತ್ರ ಮಾಡಲು ಸಾಧ್ಯ.
3 comments:
Simple, very good, informative & awareness article. Thank you.
ಓಹ್ ಇಷ್ಟೆಲ್ಲಾ ಗೊತ್ತಿರಲೇ ಇಲ್ಲ! ಧನ್ಯವಾದಗಳು ರವೀ ಹಾಗೂ ನಿಮ್ಮ ಅನಾಮಿಕ ಲೇಖಕರಿಗೆ.
Dear Sri ravi,
Olle lekhana dhanyavaadagalu..
Prasanna
Post a Comment