3.25.2008

Gold Questnet ಪೋಸ್ಟ್ ಮಾರ್ಟಂ-ಚಿನ್ನ ಮಾರಿ ಲಕ್ಷ ಗಳಿಸಿ !

(ಸ್ನೇಹಿತರೆ, ಲೇಖನ ಓದಿಯಾದ ಮೇಲೆ questnet ಮತ್ತು ಇದೇ ತರದ ಇನ್ನಿತರ ಚೈನ್ ಮಾರ್ಕೆಟಿಂಗ್ ಕಂಪನಿಗಳಿಂದ ನಿಮ್ಮ ಮತ್ತು ಪರಿಚಿತರಿಗಾದ ವಂಚನೆಯನ್ನು ದಯಮಾಡಿ comment ಮಾಡುವುದರ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ
ಅರೇಹಳ್ಳಿ ರವೀ...)


ಕಳೆದ ವಾರ ಮಂಡ್ಯ ನಗರದ ತುಂಬಾ Questnet Investments ಕಂಪನಿಯದೇ ಸುದ್ಧಿ. ಕಂಪನಿಯ ಕಛೇರಿಯೆನ್ನಲಾದ ಕಟ್ಟಡದ ಮುಂದೆ ನೂರಾರು ಜನ ಜಮಾಯಿಸಿದ್ದರು. ಗುಂಪಿನಲ್ಲಿ ತರಕಾರಿ ಮಾರುವವರು, ಹಿಜಡಾಗಳು, ಕೂಲಿ ಕಾರ್ಮಿಕರು, ಸರ್ಕಾರಿ ನೌಕರರು...ಹೀಗೆ ಹತ್ತಾರು ತರದ ಜನರಿದ್ದರು. Questnetನ ಪ್ರಮುಖ ಪ್ರತಿನಿಧಿಗಳೆಂದು ಹೇಳಿಕೊಂಡು ಲಕ್ಷಾಂತರ ರೂಪಾಯಿ ಹಣ ಕಟ್ಟಿಸಿಕೊಂಡ ಅಲ್ಲಿನ ನ್ಯಾಯಾಂಗ ಇಲಾಖೆಯ ಅನೇಕರ ವಿರುದ್ಧ ದೂರುಗಳು ದಾಖಲಾದವು. ಸುಳ್ಳು ಮಾಹಿತಿ ನೀಡಿ ಜನರನ್ನು ಮೋಸದ ಜಾಲ ಹೆಣೆದು ವಂಚನೆಗೊಳಿಸಿದ್ದು ಸ್ಪಷ್ಟವಾಗಿತ್ತು. ನಿಶ್ಚಿತ ಆದಾಯ ಮತ್ತು ದೊಡ್ಡ ಮೊತ್ತದ ಕಮಿಷನ್ ಆಸೆಯಿಂದ ಮಂಡ್ಯದಲ್ಲಿ ನೂರಾರು ಜನ ತಲಾ ೩೨ಸಾವಿರ ಹಣ ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದ ಮೇಲೂ ಹಣ ಕಟ್ಟಿಸಿಕೊಂಡ Questnetನ ಪ್ರತಿನಿಧಿಗಳೆಂದು ಹೇಳಿಕೊಂಡವರು ನಾವು ನ್ಯಾಯವಾಗಿಯೇ ಹಣ ಹೂಡಿಸಿಕೊಂಡಿದ್ದೇವೆಂದು ಪೋಲೀಸರ ಎದುರು ಮೊಂಡು ವಾದ ಮಾಡುತ್ತಿದ್ದದ್ದು ಕಾನೂನುಗಳ ವ್ಯಂಗ್ಯ ಮಾಡುವಂತಿತ್ತು. ಕಷ್ಟಕಾಲಕ್ಕೆಂದು ಉಳಿಸಿದ ಹಣ ಕಳೆದುಕೊಂಡ ಜನ Questnetಗೆ ಹಿಡಿಶಾಪ ಹಾಕಿ ಗೋಳಿಡುತ್ತಿದ್ದಾರೆ.

ಇತ್ತ Questnet ಕಂಪನಿಯ ಜನ ನಾಡಿನ ಪ್ರಮುಖ ಪತ್ರಿಕೆಗಳಿಗೆ ದೊಡ್ಡ ದೊಡ್ಡ ಜಾಹೀರಾತು ನೀಡುತ್ತಾ, ಗೌರವಾನ್ವಿತ ಕಂಪನಿಯ ಹೆಸರನ್ನು ಹಾಳುಗೆಡವಲು ಕೆಲವು ಜನ ಕಂಪನಿಯ ಹೆಸರನ್ನು ದುರುಪಯೋಗಪಡಿಸಿಕೊಂಡು ಜನರಿಗೆ ಮೋಸ ಮಾಡಿದ್ದಾರೆ ಎಂದು ಹೇಳುತ್ತಿದಾರೆ. ಆದರೆ ಅದೇ ಜಾಹೀರಾತಿನಲ್ಲಿ ಕಂಪನಿಯ ಐ ಆರ್‌ಗಳು ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಮಾಹಿತಿಯೂ ಇದೆ. ಈ ಐ ಆರ್‌ಗಳಿಗೆ Questnet ಕಂಪನಿಯ ಮಾನ್ಯತೆಯಿಲ್ಲ. ಅವರು ಹಾಕಿದ ದುಡ್ಡು ಮಾತ್ರ ಬೇಕು. ಮೋಸ ಹೋಗಲು, ಮೋಸ ಮಾಡಲು ಯಾರ ಮಾನ್ಯತೆ ಬೇಕು? ಜಾಹೀರಾತಿನಲ್ಲಿ Questnet ತನ್ನ ಕಛೇರಿ ಬೆಂಗಳೂರಿನಲ್ಲಿಯೂ ಇದೆ ಎಂದು ಹೇಳುತ್ತದಾದರೂ ಅದರ ವಿಳಾಸವನ್ನು ಜಾಹೀರಾತುಗಳಲ್ಲಿ ಕೊಡುವುದಿಲ್ಲ. ಅಷ್ಟೇ ಏಕೆ ಸಂಪರ್ಕ ಸಿಗದ ಟೋಲ್ ಫ್ರೀ ಸಂಖ್ಯೆ ಬಿಟ್ಟರೆ Questnetಗೆ ಭಾರತದಲ್ಲೆಲ್ಲೂ ಅಧಿಕೃತ ಕಛೇರಿ ಇಲ್ಲ!

Questnetನ ಕರ್ಮಕಾಂಡಗಳ ಒಂದು ಹಿನ್ನೋಟ

೨೦೦೩ ನೇ ಇಸವಿ ಆಗಸ್ಟ್ ತಿಂಗಳಿನಲ್ಲಿ Questnet ಎಂಬ ಪಿರಮಿಡ್ ಮಾರ್ಕೆಟಿಂಗ್ ಕಂಪನಿ ತಮಿಳುನಾಡಿನಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದ್ದ ಕಾಲ. ಚೆನ್ನೈನಲ್ಲಿ ಕಂಪನಿ ಕಾಯ್ದೆಯಡಿ ನೊಂದಾಯಿಸಲಾಗಿರುವ Questnet, Gold Quest International ಎಂಬ ಮಲೇಷಿಯಾ ಮೂಲದ ಕಂಪನಿಯ ಭಾರತೀಯ ಅಂಗ. ಪುಷ್ಪಂ ಅಪ್ಪಾಲ್ ನಾಯ್ಡು ಎಂಬಾತ ಇದರ ಎಂ ಡಿ. Questnet ವಂಚಿತ ಸದಸ್ಯನೊಬ್ಬನ ದೂರಿನ ಮೇರೆಗೆ ಚನ್ನೈ ಪೋಲೀಸರು ಕಂಪನಿಯ ಮೂರು ಮಂದಿಯನ್ನು ಬಂಧಿಸಿ ಅವರ ಮೇಲೆ ವಂಚನೆಯ ಕೇಸು ದಾಖಲಿಸಿದರು. ಇದು ಅವರು ಆ ತಿಂಗಳಲ್ಲಿ ಮಾಡಿದ ಹಲವಾರು ದಾಳಿಗಳಲ್ಲಿ ಒಂದಾಗಿತ್ತು. ಏನೇನೋ ಸಬೂಬು ಹೇಳಿ ಕೋರ್ಟಿನಿಂದ ಪೋಲೀಸರ ಕಾರ್ಯಾಚರಣೆ ವಿರುದ್ಧ ತಡೆಯಾಜ್ಞೆ ತರುವಲ್ಲಿ ಕಂಪನಿಯ ಅಧಿಕಾರಿಗಳು ಯಶಸ್ವಿಯಾದರು.

ಅದೇ ವರ್ಷಾಂತ್ಯದಲ್ಲಿ ಕೆನಡಾ ದೇಶ ತನ್ನ ಪ್ರಜೆಗಳಿಗೆ Gold Quest International ಕಂಪನಿಯ ಆರ್ಥಿಕ ಆಮಿಷ ಮತ್ತು ವಂಚನೆಯ ಸಾಧ್ಯತೆಗಳ ಬಗ್ಗೆ ಎಚ್ಚರಿಕೆಯ ಸಂದೇಶ ಸಾರಿತು.

೨೦೦೫ರ ನವೆಂಬರ್‌ನಲ್ಲಿ ಇರಾನ್ ಸರ್ಕಾರ Gold Quest International ಕಂಪನಿಯ ಎಲ್ಲಾ ಚಟುವಟಿಕೆಗಳನ್ನು ನಿಷೇಧಿಸಿತು. ಕಂಪನಿಯ ಹಲವಾರು ಪ್ರತಿನಿಧಿಗಳನ್ನು ಬಂಧಿಸಿತು. ಆದರೆ ಇಷ್ಟೆಲ್ಲಾ ಆಗುವಷ್ಟರಲ್ಲಿ ಆ ದೇಶದ ೫ ಲಕ್ಷ ಜನ ಈ ಕಂಪನಿಯಲ್ಲಿ ಹಣ ತೊಡಗಿಸಿದ್ದರು. ೨೫೦ ಮಿಲಿಯನ್ ಡಾಲರ್‌ಗೂ ಅಧಿಕ ಹಣ ದೇಶದಿಂದಾಚೆ ಹೋಗಿತ್ತು.

೨೦೦೭ರ ಜೂನ್ ತಿಂಗಳಿನಲ್ಲಿ ಪಿರಮಿಡ್-ಚೈನ್ ಮಾರ್ಕೆಟಿಂಗ್ ವಿರೋಧಿ ಒಕ್ಕೂಟವು ಶ್ರೀಲಂಕಾ ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಎಚ್ಚರಿಕೆಯೊಂದನ್ನು ರವಾನಿಸಿ ದೊಡ್ಡ ಪ್ರಮಾಣದಲ್ಲಿ ಹಣ ದೇಶದಾಚೆ ಹರಿದುಹೋಗುವ, ಆ ಮೂಲಕ ಉಂಟಾಗಬಹುದಾದ ಆರ್ಥಿಕ ದುಷ್ಪರಿಣಾಮಗಳ ಸಾಧ್ಯತೆಗಳ ಬಗ್ಗೆ ವರದಿ ಸಲ್ಲಿಸಿದ್ದರು. Gold Quest


ಕನ್ನಡಸಾಹಿತ್ಯ ಗುಂಪಿಗೆ ಸದಸ್ಯರಾಗಿ


International ಕಂಪನಿಯ double-pyramid 'binary compensation' ಕುರಿತಂತೆ ಆಘಾತಕಾರಿ ಸತ್ಯಗಳನ್ನು ಹೊರಗೆಡವಿದರು. ಈ ಯೋಜನೆಯಲ್ಲಿ ಹಣ ತೊಡಗಿಸುವವರಲ್ಲಿ ಕೇವಲ ಶೇ.೨ರಷ್ಟು ಜನ ಲಾಭ ಮಾಡಬಹುದೆಂಬುದನ್ನು ಲೆಕ್ಕಾಚಾರಗಳ ಸಮೇತ ನಿರೂಪಿಸಿದರು.

ಈ ವರ್ಷದ ಮಾರ್ಚ್ ತಿಂಗಳಲ್ಲಿ ಕೋಲಂಬಿಯಾ Securities Commission ಆರ್ಥಿಕ ಹಗರಣದ ಸಾಧ್ಯತೆಯ ಆತಂಕ ವ್ಯಕ್ತಪಡಿಸಿ Gold Quest International ಕಂಪನಿಯ ಚಟುವಟಿಕೆಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ಹೇಳಿತು. ಇದರಿಂದ ವಿಚಲಿತವಾದ GoldQuest Mining Corp ಎಂಬ ಹೆಸರಿನ ಕಂಪನಿ ಸಾರ್ವಜನಿಕ ಪ್ರಕಟಣೆ ನೀಡಿ ತನಗೂ, ಪ್ರಸ್ತಾಪಿಸಿದ ಕಂಪನಿಗೂ ಯಾವುದೇ ಸಂಬಂಧವಿಲ್ಲವೆಂದು ತನ್ನ ಷೇರುದಾರರಿಗೆ ಸ್ಪಷ್ಟನೆ ನೀಡಬೇಕಾಗಿ ಬಂತು.
೨೦೦೭ರ ಮೇ ತಿಂಗಳಿನಲ್ಲಿ ಇಂಡೋನೇಷಿಯದಲ್ಲಿ Gold Quest International ಕಂಪನಿಯ ಸಿ ಇ ಒ ವಿಜಯ್ ಈಶ್ವರನ್ ಒಳಗೊಂಡಂತೆ ಹಲವಾರು ಹಿರಿಯ ಅಧಿಕಾರಿಗಳನ್ನು ಬಂಧಿಸಲಾಯಿತು. ತನ್ನ ಮಾಜಿ ರಾಷ್ಟ್ರಾಧ್ಯಕ್ಷರ ಹೆಸರನ್ನು ದುರುಪಯೋಗಪಡಿಸಿಕೊಂಡ ಆರೋಪ Goldquest ಕಂಪನಿಯ ಮೇಲಿತ್ತು.ಇದರ ಹಿಂದೆಯೇ ಭೂತಾನ್, ನೇಪಾಳ ಮುಂತಾದ ದೇಶಗಳಲ್ಲಿ ನೂರಾರು ಜನರ ಬಂಧನಗಳಾದವು.

ಇಂಡೋನೆಷಿಯಾದಲ್ಲಿ ಬಂಧನಗಳಾಗುತ್ತಿದ್ದ ಹೊತ್ತಿನಲ್ಲೇ ಅತ್ತ ಫಿಲಿಫೀನ್ಸ್‌ನಲ್ಲಿ ಹಗರಣಗಳ ಸರಮಾಲೆಯೇ ನಡೆದಿತ್ತು. ದೂರು ನೀಡಿದಾತನೊಬ್ಬ ಆರೂವರೆ ಲಕ್ಷ ಡಾಲರ್‌ಗಳಷ್ಟು ಹಣವನ್ನು ಕಳೆದುಕೊಂಡಿದ್ದ. ಫಿಲಿಫೀನ್ಸ್ ಸರ್ಕಾರ ಇಂಟರ್‌ಪೋಲ್‌ಗೆ ಮನವಿ ಮಾಡಿ ಕಂಪನಿಯ ಸಿ ಇ ಒ ವಿಜಯ್ ಈಶ್ವರನ್ ಒಳಗೊಂಡಂತೆ ಅನೇಕರ ವಿರುದ್ಧ ರೆಡ್ ಕಾರ್ನರ್ ನೋಟೀಸ್ ಹೊರಡಿಸುವಲ್ಲಿ ಯಶಸ್ವಿಯಾಯಿತು. ಇಂಟರ್‌ಪೋಲ್ ವಾಂಟೆಡ್ ಪಟ್ಟಿಯಲ್ಲಿ ಇವರನ್ನೆಲ್ಲ ಸೇರಿಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತು. ಇದರಿಂದಾಗಿ ಬಹಳಷ್ಟು ಜನ ಭೂಗತರಾದರು.

ಇದೆಲ್ಲದರ ನಡುವೆ, ಬಂಧಿಸಲ್ಪಟ್ಟಿದ್ದ ಅನೇಕ ಜನ ದುರ್ಬಲ ಕಾನೂನುಗಳ ಲಾಭ ಪಡೆದು ಬಿಡುಗಡೆಯಾಗುವಲ್ಲಿ ಯಶಸ್ವಿಯಾಗಿದ್ದರು.

ಇದೇ ವೇಳೆ ಕಂಪನಿ ಪೂರ್ವಾನುಮತಿ ಪಡೆಯದೆ ಶ್ರೀಲಂಕ ಈಕ್ವಿಟಿ ಮಾರ್ಕೆಟ್‌ಗಳಲ್ಲಿ ತನ್ನ ಹಣ ತೊಡಗಿಸಿತ್ತು. ಕೆರಳಿದ ಶ್ರೀಲಂಕ Gold Quest ಕಂಪನಿಯ ವಿರುದ್ಧದ ತನ್ನ ತನಿಖೆಯನ್ನು ತೀವ್ರಗೊಳಿಸಿತು. ನಂತರದ ದಿನಗಳಲ್ಲಿ ವಿದೇಶೀ ಅಕ್ರಮ ಹಣ ಪ್ರಸರಣ ತಡೆ ಕಾಯ್ದೆಯನ್ನೂ ರೂಪಿಸಿ, ಜಾರಿಗೆ ತಂದಿತು. ಈಗಾಗಲೇ ಬಂಧಿತರಾಗಿದ್ದ Gold Quest ಕಂಪನಿಯ ಪ್ರತಿನಿಧಿಗಳನ್ನು ತನಗೆ ಹಸ್ತಾಂತರಿಸಬೇಕೆಂದು ಕೋರಲು ಇಂಡೋನೇಷಿಯಾಕ್ಕೆ ತನ್ನ ತನಿಖಾಧಿಕಾರಿಗಳನ್ನು ಕಳಿಸಿತು.

ಅದೆಲ್ಲಾ ಬಿಟ್ಟು ಕರ್ನಾಟಕದ ವಿಷಯವನ್ನೇ ತೆಗೆದುಕೊಂಡರೆ(ಪ್ರಜಾವಾಣಿ-deccan herald ವರದಿ ಆಧಾರ) ಇಲ್ಲಿ ೧೦ ಸಾವಿರಕ್ಕಿಂತ ಮಿಗಿಲಾಗಿ ಜನ Gold Quest (ಇದರ ಅಂಗಸಂಸ್ಥೆ Questnet) ಕಂಪನಿಯಲ್ಲಿ ಹಣ ತೊಡಗಿಸಿದ್ದಾರೆ. ಬೆಂಗಳೂರೊಂದರಲ್ಲೇ ಕಂಪನಿಯ ಸುಮಾರು ೫೦ ಶಾಖೆಗಳು ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿವೆ. ಒಂದೇ ವಾರದಲ್ಲಿ ಬೆಂಗಳೂರಿನ ವಿವಿಧ ಪೋಲೀಸ್ ಠಾಣೆಗಳಲ್ಲಿ ಸುಮಾರು ೯೦೦ ದೂರುಗಳು ಕಂಪನಿಯ ವಿರುದ್ಧ ದಾಖಲಾಗಿವೆ. ಪೋಲೀಸರು ಸುಮಾರು ೩೦೦ ಜನರಿಗೆ ಹಣ ಹಿಂದಿರುಗಿ ಕೊಡಿಸಲು ಯಶಸ್ವಿಯಾದರೂ ಈ ವರ್ಷದ ಮಾರ್ಚ್ ಮೊದಲ ವಾರದಲ್ಲಿ ದೂರುಗಳ ಸಂಖ್ಯೆ ೯೦೦ರಿಂದ ೨೫೦೦ಕ್ಕೇರಿತು. ಎಚ್ಚರಗೊಂಡ ಪೋಲೀಸರು ಕಂಪನಿಯ ಪ್ರಕರಣವನ್ನು ಸಿ ಓ ಡಿ ಗೆ ಒಪ್ಪಿಸಿದರು.

ಕಂಪನಿಯ ಭಾರತದ ಎಂ ಡಿ ಪುಷ್ಪಂ ಅಪ್ಪಾಲ್ ನಾಯ್ಡು ಒಳಗೊಂಡಂತೆ ಅನೇಕ ಆರೋಪಿಗಳು ಎಲ್ಲಿದ್ದಾರೆಂಬ ಮಾಹಿತಿ ಪೋಲೀಸರಿಗೂ ಇತ್ತೀಚಿನವರೆಗೂ ಸಿಕ್ಕಿರಲಿಲ್ಲ. ಆದರೆ ಮೇ ೧೧, ೨೦೦೮ರಂದು ಚನ್ನೈನಲ್ಲಿ Questnetನ ಎಂ ಡಿ ಪುಷ್ಪಂ ಅಪ್ಪಾಲ್ ನಾಯ್ಡು ಮನೆ ಮೇಲೆ ಮಿಂಚಿನ ಕಾರ್ಯಾಚರಣೆ ನಡೆಸಿದ ಪೋಲೀಸರು ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ನಾಯ್ಡು, ಅವನ ಸಹಾಯಕ ಅಗಸ್ಟೀನ್ ಒಳಗೊಂಡಂತೆ ಐದು ಜನರನ್ನು ಬಂಧಿಸಿದೆ. ಮೂರೂವರೆ ಕೋಟಿ ಹಣ, ಹತ್ತು ಕೋಟಿಗಿಂತಲೂ ಬೆಲೆಬಾಳುವ ೮೭ಕೆ ಜಿಯಷ್ಟು ಚಿನ್ನ-ಬೆಳ್ಳಿ ನಾಣ್ಯಗಳನ್ನೂ ಇದೇ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದೆ. ಕಂಪನಿಯ ಇತರೆ ಆರು ಜನರ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ. ಕೋರ್‍ಟ್ ಇವರನ್ನು ವಿಚಾರಣೆಗೆ ಒಳಪಡಿಸಲು ಪೋಲೀಸರಿಗೆ ಅನುಮತಿ ನೀಡಿದೆ. ಅಲ್ಲಿನ ಪೋಲೀಸ್ ಕಮಿಷನರ್, ನಾಯ್ಡು ಮತ್ತು ಅಗಸ್ಟೀನ್ ವಿರುದ್ಧ ಗೂಂಡಾ ಕಾಯ್ದೆ ಬಳಕೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಇವರಿಬ್ಬರಿಗೂ ಒಂದು ವರ್ಷದ ಜೈಲು ಶಿಕ್ಷೆ ಖಚಿತ. ಇವರಿಬ್ಬರನ್ನೂ ಹೈದರಾಬಾದ್ ಮತ್ತು ಬೆಂಗಳೂರಿಗೆ ಕರೆದೊಯ್ದು ಅವರು ಹೊಂದಿರುವ ಬ್ಯಾಂಕ್ ಲಾಕರ್‌ಗಳ ತೆರೆದು ನೋಡಲು ಪೋಲೀಸರು ಪ್ರಯತ್ನಿಸುತ್ತಿದ್ದಾರೆ.

ಅಲ್ಲೀಗ Questnetನ ಕಛೇರಿಗೆ ಶಾಶ್ವತ ಬೀಗ ಬಿದ್ದಿದೆ. ಮೊನ್ನೆ ಮೇ ೭ರಂದು Questnetನಿಂದ ವಂಚನೆಗೊಳಗಾದವರಿಗೆ ಚನ್ನೈನ ಪೋಲೀಸ್ ಆಯುಕ್ತರ ಕಛೇರಿಯಲ್ಲಿ ತೆರೆಯಲಾಗಿದ್ದ ದೂರು ದಾಖಲು ಶಿಬಿರಕ್ಕೆ ಜನ ಕ್ಯೂನಲ್ಲಿ ನಿಂತು ದೂರು ದಾಖಲಿಸಿದ್ದಾರೆ. ಅಲ್ಲಿ ದಾಖಲಾದ ದೂರುಗಳ ಸಂಖ್ಯೆ ಕಳೆದವಾರ ಹತ್ತು ಸಾವಿರ ದಾಟಿದೆ. ಕಂಪನಿಯ ಅಂತರಾಷ್ಟ್ರೀಯ ವಿಭಾಗವಾದ Gold Quest International ಸಂಧಾನದ ಮೂಲಕ ಹಣವನ್ನು ಹೂಡಿಕೆದಾರರಿಗೆ ಹಿಂದಿರುಗಿಸುವ ಮಾತನಾಡುತ್ತಿದೆಯಾದರೂ ಬಹುತೇಕ ಜನರ ಬಳಿ ಲಿಖಿತ ದಾಖಲೆಗಳೇನೂ ಇಲ್ಲದ ಕಾರಣ ಮರಳಿ ಹಣ ಪಡೆಯುವ ಮಾತು ಗಾಳಿಗೋಪುರವಷ್ಟೇ ಹತ್ತು ವರ್ಷಗಳಲ್ಲಿ Gold Quest International ಒಂದು ಬಿಲಿಯನ್ ಡಾಲರ್ ಕಂಪನಿಯಾಗಿದೆಯೆಂದರೆ ಅದರ ಅಗಾಧ ವಹಿವಾಟನ್ನ ಮೆಚ್ಚದೆ ಇರಲಾಗಲ್ಲ. ಮುಖ್ಯವಾಗಿ ನಾಣ್ಯ\ಮೆಡಲ್‌ಗಳನ್ನು ಮಾರುವಂತಹ ಮಾರ್ಕೆಟಿಂಗ್ ಕಂಪನಿಯೊಂದು ಬಿಲಿಯನ್ ಡಾಲರ್ ಕಂಪನಿಯಾಗಿ ಬೆಳೆಯೋದು ಸಾಮಾನ್ಯ ವಿಚಾರವಲ್ಲ. ಇನ್ಫೋಸಿಸ್ ಆ ಗುರಿ ಸಾಧಿಸಲು ೨೫ ವರ್ಷಗಳನ್ನೇ ತೆಗೆದುಕೊಂಡಿತು. ವಿಪ್ರೊಗೆ ನಲವತ್ತು ವರ್ಷಗಳೇ ಬೇಕಾದವೇನೋ.
****** ****** ******

ಇಂಥದ್ದೇ ವಿಸ್ಮಯ, ಕುತೂಹಲ, ಆತಂಕ, ಆಸೆ Questnet ಕಂಪನಿಯ ಬಗೆಗೆ ಎರಡು ವರ್ಷಗಳ ಹಿಂದೆ ನನಗೂ ಇದ್ದವು. ತೀರ ಕಡಿಮೆ ಕಾಲಾವಧಿಯಲ್ಲಿ ಹೆಚ್ಚು ಶ್ರಮವಿಲ್ಲದೆ ಹೆಚ್ಚು ಹಣ ಸಂಪಾದನೆಯ ಆಸೆ ಮಾನವಸಹಜ ದೌರ್ಬಲ್ಯ.
ನನ್ನ ಸಹಪಾಠಿ ಅಜಯ್‍ಗೆ ಬಾಲ್ಯದ ಗೆಳೆಯನಾಗಿರುವ ಜಸ್ಟಿನ್ ಎಂಬಾತನೊಬ್ಬ ಬೆಂಗಳೂರಿನ ಪಬ್ ಸಂಸ್ಕೃತಿಯ ಜನರ ನಡುವೆ ಓಡಾಡಿಕೊಂಡಿರ್ತಾನೆ. ಹೆಸರಿಗೆ ಮಾಡೆಲಿಂಗ್ ಮಾಡ್ತೀನಿ ಅಂತಾ ಹೇಳ್ತಾನಾದರೂ ಅವನನ್ನು ಹಾಕಿಕೊಂಡು ಚಿಕ್ಕದೊಂದು add ಕೂಡ ಹೊರಬಂದಿಲ್ಲ. ಬೆಂಗಳೂರಿನಲ್ಲಿ ತೀರ ಅವತ್ತವತ್ತಿನ ಊಟ ತಿಂಡಿ-ಕುಡಿತಕ್ಕಾದರೆ ಸಾಕು ಎನ್ನುವ ಪರಿಸ್ಥಿತಿಯಿತ್ತು. ಹುಡುಗಿಯರ ಖಯಾಲಿ ವಿಪರೀತವಿದ್ದುದರಿಂದ ಕೆಲ ತಲೆ ಮಾಸಿದ ಮಾಡೆಲಿಂಗ್ ಹುಡುಗಿಯರ ಜೊತೆ ಇವನು ಸುತ್ತುತ್ತಿದ್ದುದನ್ನು ನೋಡಿ ನಾವು ಹೊಟ್ಟೆ ಉರಿದುಕೊಳ್ಳುತ್ತಿದ್ದೆವು. ಆದ್ರೆ ಈ ಜಸ್ಟಿನ್ ಕೂಡ ನೋಡಲು ಹುಡುಗಿಯ ತರವೇ ಇದ್ದನಾದ್ದರಿಂದ ಇಬ್ಬರೂ ಹುಡುಗಿಯರಲ್ಲವೆ? ಓಡಾಡಲಿ ಬಿಡು ಎಂದು ಗೇಲಿ ಮಾಡಿಕೊಂಡು ಸುಮ್ಮನಾಗುತ್ತಿದ್ದೆವು. ಮನೆಯಲ್ಲಿ ಸ್ಥಿತಿವಂತಿಕೆ ಇದ್ದುದರಿಂದ ಮನೆಯಿಂದಲೂ ಹಣ ಬರುತ್ತಿದ್ದಿರಬಹುದು. ಅದೊಂದು ದಿನ ಬಂದವನೆ ನಾನು Questnet ಎಂಬ ಕಂಪನಿಗೆ ಮಾರ್ಕೆಟಿಂಗ್ ಪ್ರತಿನಿಧಿಯಾಗ್ತಿದ್ದೀನಿ. ನೀವು ಸೇರ್ಕೊಳ್ಳಿ ಎಂದು ಅಜಯ್ ಸೇರಿದಂತೆ ಹಲವಾರು ಗೆಳೆಯರಿಗೆ ದುಂಬಾಲು ಬಿದ್ದಿದ್ದ. ಚಿನ್ನದ ಮಾರ್ಕೆಟಿಂಗ್ ಮಾಡುವುದು ಅಂದೊಡನೆ ಸ್ಮಗ್ಲಿಂಗ್ ತರದ್ದೇನಾದರೂ ಇದ್ದೀತು ಎಂದು ನಾವು ಈ ಕುರಿತಂತೆ ಜಾಸ್ತಿ ಗಮನ ಹರಿಸದೆ ಸುಮ್ಮನಾಗಿದ್ದೆವು.

ಈಗಾರು ತಿಂಗಳ ಹಿಂದೆ ಕಾರು ಖರೀದಿಸಿದನಂತೆ ಅಂತ ಸುದ್ಧಿ ಬಂದಾಗಲೂ ಅಂತಹ ಆಸಕ್ತಿ ತೋರಿಸಿರಲಿಲ್ಲ. ಈಗೆರಡು ತಿಂಗಳ ಹಿಂದೆ ಬನ್ನೇರುಘಟ್ಟ ರಸ್ತೆಯಲ್ಲಿ ಫ್ಲಾಟು ಖರೀದಿ ಮಾಡಿದನಲ್ಲ, ಆವಾಗ ನಮ್ಮಲ್ಲೊಂದು ಆಸಕ್ತಿ ಮೂಡಿತ್ತು. ಆದರೂ Questnet ಕಂಪನಿಯ ಬಗೆಗೆ ತಿಳಿದುಕೊಳ್ಳುವ ಉತ್ಸಾಹ ತೋರಿಸಲಿಲ್ಲ. ಜಸ್ಟಿನ್, ಸಂಪಾದಿಸಿದ ಅಷ್ಟೂ ಹಣ Questnet ನಿಂದಲೇ ಬಂದದ್ದು ಅಂತ ಹೇಳಿಕೊಳ್ತಿದ್ದ.


ಎರಡು ವಾರಗಳ ಹಿಂದೆ ಒಂದು ಭಾನುವಾರ ರಾತ್ರಿ ಗೆಳೆಯ ಶಂಕರ್ ಕರೆ ಮಾಡಿ Questnet ಅಫೀಸಿನಲ್ಲಿ ಒಂದು ಮೀಟಿಂಗ್ ಇಟ್ಕೊಂಡಿದ್ದೀವಿ ಬನ್ನಿ, ನಾನಲ್ಲಿ ಕಾಯ್ತಿರ್ತೀನಿ ಅಂದ. ಸಮಯ ನೋಡಿಕೊಂಡೆ ಹತ್ತತ್ತಿರ ಅಪರಾತ್ರಿ ಹನ್ನೊಂದು. ಇನ್ನೂ ಊಟ ಮಾಡಿರಲಿಲ್ಲ. ಪ್ರದೀಪ್‍ನ ಬೈಕಿನಲ್ಲಿ ಸೂಚಿತ ಜಾಗ ತಲುಪಿದೆವು. ಮೀಟಿಂಗ್ ಜಾಗ ರಿಂಗ್ ರಸ್ತೆಯಲ್ಲಿರುವ ಭಾರೀ ಬಂಗಲೆಯಾಗಿತ್ತು. ಇಂಥ ಹತ್ತಾರು ಬಂಗಲೆ, ಹೋಟೆಲ್ ಹಾಲ್‍ಗಳನ್ನು ನಟರಾಜನ್ ಎಂಬ Questnetನಲ್ಲಿ ಅಧಿಕ ಹಣ ಸಂಪಾದಿಸುವ ವ್ಯಕ್ತಿ ಪ್ರಾಯೋಜಿಸುತ್ತಿದ್ದಾನೆ ಎಂದು ಹೇಳಲಾಗುತ್ತದೆ. ಆದರೆ ಲಕ್ಷಾಂತರ ರೂಪಾಯಿ ಬಾಡಿಗೆ ಹಣವನ್ನು ಒಬ್ಬನೇ ವ್ಯಕ್ತಿ ಪ್ರಾಯೋಜಿಸುವುದು ನಿಗೂಢವೇ. ಹಗಲು ಹೊತ್ತು ಬಿಕೋ ಎನ್ನುವ ಕಟ್ಟಡ ಈ ಅಪರಾತ್ರಿಯಲ್ಲಿ ಗಿಜಿಗಿಡುತ್ತಿತ್ತು. ಮನೆಯೊಳಗೆ ಪ್ರವೇಶಿಸಲಾಗಿ ತೆಳುವಾದ ಸಿಗರೇಟು\ಗಾಂಜಾ ಪರಿಮಳ ಮೂಗಿಗಡರಿತು. ಆಶ್ಚರ್ಯವೆಂಬಂತೆ ನಾಲ್ಕೈದು ಹುಡುಗಿಯರೂ ಅಲ್ಲಿದ್ದರು. ಮುಖ್ಯವಾಗಿ ಅವರೆಲ್ಲಾ ಕನ್ನಡದವರಾಗಿದ್ದರು. ಭಾರೀ ಮನೆಯ ಪ್ರತಿ ಕೋಣೆಯಲ್ಲೂ ಒಂದೊಂದು ಮೀಟಿಂಗ್. ಕರೆತಂದ ಹೊಸ ಗಿರಾಕಿಯನ್ನು ಒಪ್ಪಿಸುವ ನಾನಾ ತರದ ಪ್ರಯತ್ನಗಳು. ಅಲ್ಲೇ ಮೂಲೆಯಲ್ಲಿ ಲ್ಯಾಪ್‍ಟಾಪ್ ಹರಡಿಕೊಂಡು ಸಿಗರೇಟ್ ಎಳೀತಿದ್ದ ಒಂದು ಗುಂಪು, ಮನೆ ತುಂಬ ಇಂಟರ್ನೆಟ್ ಸಂಪರ್ಕಕ್ಕೆ ವ್ಯವಸ್ಥೆ. ಉಳಿದಂತೆ ಇದು Questnet ಕಛೇರಿ ಎಂದು ಹೇಳಬಹುದಾದ ಯಾವುದೇ ಕುರುಹಿಲ್ಲ. ಶಂಕರ್ ನಮ್ಮನ್ನು ಸಣಕಲನಂತಿದ್ದ ಒಬ್ಬನಿಗೆ ಪರಿಚಯಿಸಿ, ಇವರು ಸಂಪನ್ಮೂಲ ವ್ಯಕ್ತಿಯಾಗಿ ನಿಮಗೆ seminar ಕೊಡುತ್ತಾರೆ ಎಂದು ಹೇಳಿ ಸುಮ್ಮನೆ ಕುಳಿತ. ಸಣಕಲ ನಮ್ಮನ್ನು ರೂಮೊಂದಕ್ಕೆ ಕರೆದೊಯ್ದು ಬೋಲ್ಟ್ ಮಾಡಿಕೊಂಡು ಶುರು ಮಾಡಿದ. ಸ್ನೇಹಿತರೆ ನಾನು ಕೆಲಸ ಮಾಡ್ತಿರೋದು ಹುವೈ ಕಂಪನಿಯಲ್ಲಿ. ಒಂದು ವರ್ಷದ ಹಿಂದೆ ನನಗೆ ನಲವತ್ತು ಸಾವಿರ ಸಂಬಳ ಬರ್ತಿದ್ದರೂ ನನಗಿದ್ದ ಬ್ಯಾಂಕ್ ಮತ್ತಿತರ ಸಾಲಗಳಿಗೆ ತಿಂಗಳಿಗೆ ಮೂವತ್ತು ಸಾವಿರ ಹೋಗುತ್ತಿತ್ತು. ಉಳಿದ ಹತ್ತು ಸಾವಿರದಲ್ಲಿ ನನಗೆ ಜೀವನ ಮಾಡಲು ಕಷ್ಟವಾಗ್ತಿತ್ತು. ಅಂತಹ ಸಮಯದಲ್ಲಿ Questnet ನನ್ನ ಸಹಾಯಕ್ಕೆ ಬಂತು. Questnet ಸದಸ್ಯನಾಗಿ ಈಗ ನನ್ನ ಸಮಸ್ಯೆಗಳೆಲ್ಲಾ ಬಗೆಹರಿದಿವೆ. ತಿಂಗಳಿಗೆ ಹತ್ತತ್ತಿರ ಎಪ್ಪತ್ತು ಸಾವಿರ ಸಂಪಾದಿಸುತ್ತಿದ್ದೇನೆ. ನಾನೀಗ ಸುಖೀ ಎಂದು ಸುಮ್ಮನಾದ. ತಲೆಯೆತ್ತಿ ಮುಖ ನೋಡಿದೆ. ಸುಖಿಯಾಗಿ ಕಾಣಿಸಲಿಲ್ಲ. ಕೈ ಬೆರಳುಗಳು ಕಡ್ಡಿಯಾಗಿದ್ದವು. ಡ್ರಗ್ ಅಡಿಕ್ಟ್ ಎಂಬುದು ಖಚಿತವಾಯಿತು. ಅಲ್ಲಾ ನಲವತ್ತು ಸಾವಿರ ಸಂಬಳ ತಗೊಂಡೂ ಅಷ್ಟೊಂದು ಸಾಲ ಯಾಕಯ್ಯ ಮಾಡ್ಕೊಂಡಿದ್ದೆ? ಅಂತ ಕೇಳೋಣ ಅನ್ನಿಸಿತು. ಅವನ ದಯಾ ಮುಖ ನೋಡಿ ಸುಮ್ಮನಾದೆ. ಮುಂದುವರೆಸಿ ನೀವು ಹದಿನೈದಿಪ್ಪತ್ತು ಸಾವಿರ ದುಡಿಯಲಿಕ್ಕೆ ದಿನಕ್ಕೆ ಎಂಟತ್ತು ಗಂಟೆ ಗಾಣದೆತ್ತಿನಂತೆ(!) ದುಡಿಯಬೇಕು. ಆದರೆ Questnet ವಾರಕ್ಕೆ ನಿಮ್ಮ ಐದಾರು ಗಂಟೆಗಳನ್ನಷ್ಟೇ ಬೇಡುತ್ತದೆ. ಅದು ನಿಮ್ಮ ಸಂಬಳದ ಹಲವು ಪಟ್ಟು ಹಣ ಗಳಿಸಲಿಕ್ಕಾಗಿ ಎಂದ.

ಅವನು ಮತ್ತು ಅವನ ಉಳಿದ ಸೀನಿಯರ್ ಟೋಪಿ ಗಿರಾಕಿಗಳ ಜೊತೆ ನಾವು ನಡೆಸಿದ ಸುಮಾರು ಎರಡು ಗಂಟೆಯ ಪ್ರಶ್ನೋತ್ತರದಲ್ಲಿ ಮುಖ್ಯವೆನಿಸಿದ ಬಹಳ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿರಲಿಲ್ಲ. ಅಲ್ಲಿದ್ದ ಬಹುತೇಕ ಹೊಸ ಮಂದಿ ಕಡಿಮೆ ಸಮಯದಲ್ಲಿ ಅಪಾರ ಹಣ ಮಾಡುವ ಪ್ರಸ್ತಾವನೆಗೆ ದಂಗಾಗಿದ್ದು ಕಂಡು ಬಂತು.

Questnetನ ಮೀಟಿಂಗ್‍ಗೆ ಕರೆದಿದ್ದ ಆತ್ಮೀಯ ಗೆಳೆಯ ಶಂಕರನಿಗಾದರೂ ತಿಳಿ ಹೇಳಬಹುದಾ ಅಂದುಕೊಂಡು "ನೀನೇನಾದ್ರೂ ಇಲ್ಲಿ ಹಣ ಹೂಡೋದಕ್ಕೆ ಯೋಚನೆ ಮಾಡಿದೀಯಾ?" ಕೇಳಿದೆ. "ಹೇ ಹೋಗೋ ಮಾರಾಯ ನಾನಾಗಲೇ ದುಡ್ಡು ಹಾಕಿಯಾಯ್ತು, gold coin ಬರೋದು ಬಾಕಿ" ಎಂದ ಅಪ್ಪಟ ಮಂಗಳೂರು ಕನ್ನಡದಲ್ಲಿ. ಇವರೆಲ್ಲಾ ಹೇಗೆ ನೋಡಿದರೂ ನನಗಿಂತ ಬುದ್ಧಿವಂತರು. ಇನ್ನೇನು ಹೇಳೋದು?

ಅವರ ಜೊತೆ ಮಾತಾಡಿದ ನಂತರ Questnet ಎಂಬುದೇನೆಂದರೆ-

Questnet ದಾಳವಾಗಿ ಬಳಸುತ್ತಿರುವುದು ಪ್ರಪಂಚದಾದ್ಯಂತ ಚಾಲ್ತಿಯಲ್ಲಿರುವ ಜನರ ಪ್ರಾಚೀನ-ಅಪರೂಪದ ನಾಣ್ಯ ಸಂಗ್ರಹ ಅಭಿರುಚಿಯನ್ನ. ಪ್ರಾಚೀನ ನಾಣ್ಯಗಳು ಸಾಮಾನ್ಯವಾಗಿ ಲೋಹದ ಮೂಲ ಬೆಲೆಗಿಂತ ಹಲವು ಪಟ್ಟು ಹೆಚ್ಚಿನ ಮೌಲ್ಯಕ್ಕೆ ಮಾರಾಟವಾಗುತ್ತವೆ. ಅದೇ ನಾಣ್ಯ ಸಂಗ್ರಹದ ಗೀಳನ್ನು ಸಾಮಾನ್ಯ ಜನದ ಮೇಲೆ Questnet ಇನ್ನೊಂದು ಬಗೆಯಲ್ಲಿ ಪ್ರಯೋಗಿಸುತ್ತಿದೆ. ಅದಕ್ಕೆ Referrel pyramid marketing ಅಂತ ಹೆಸರಿಟ್ಟಿದೆ.
Questnetನ ಯೋಜನೆಗೆ ನೀವು ಭಾಗಿಗಳಾಗಲು ನೀವು ಮಾಡಬೇಕಾದದು ಇಷ್ಟೆ. ಅವರು ಮಾರಾಟ ಮಾಡುವ ವಿವಿಧ ಶ್ರೇಣಿಯ ಚಿನ್ನದ ಪದಕಗಳಲ್ಲಿ(ಅವನ್ನು ಇವರು ನಾಣ್ಯಗಳೆಂದು ಕರೀತಾರೆ) ನಿಮ್ಮ ಹಣವನ್ನು ಹೂಡಬೇಕು. ವಿವಿಧ ದೇಶಗಳ ಪ್ರಮುಖ ವ್ಯಕ್ತಿಗಳ ಚಿತ್ರಗಳನ್ನು ನಾಣ್ಯದ ಮೇಲೆ ಮುದ್ರಿಸಲಾಗಿರುತ್ತದೆ. ನಾಣ್ಯಗಳು ೬ ಗ್ರಾಂನಿಂದ ಪ್ರಾರಂಭವಾಗುತ್ತದೆ. ಆದರೆ ಬೆಲೆ ಕೇಳಿದರೆ ದಂಗು ಬಡಿಯುತ್ತೀರಿ. ೬ ಗ್ರಾಂ ಚಿನ್ನದ ನಾಣ್ಯ ಇಲ್ಲಿ ೨೮ಸಾವಿರ ರೂಪಾಯಿ. ಇದರ ಮೇಲೆ ನೀವು ಎಷ್ಟು ಹಣವನ್ನಾದರೂ ಹೂಡಬಹುದು. ಯಾಕಯ್ಯ ಇಷ್ಟೊಂದು ಬೆಲೆ ಎಂದರೆ ಅದು ನಾಣ್ಯದ numismatic ಬೆಲೆ ಅನ್ನುತ್ತಾರೆ. ಇಪ್ಪತ್ತೆಂಟು ಸಾವಿರ ಕಟ್ಟಿದ ಮೇಲೆ ಎರಡು ತಿಂಗಳಿಗೆ ನಾಣ್ಯ ನಿಮ್ಮ ತಲುಪುತ್ತದೆ ಅನ್ನುತ್ತಾರೆ. ಹಣವನ್ನು ಡಿ ಡಿ, ಕ್ರೆಡಿಟ್ ಕಾರ್ಡ್ ಮೂಲಕ ಅವರು ಸೂಚಿಸುವ ವಿದೇಶೀ ಅಕೌಂಟೊಂದಕ್ಕೆ ಐಸಿಐಸಿಐ ಬ್ಯಾಂಕ್ ಮೂಲಕ ರವಾನಿಸಲಾಗುತ್ತದೆ. ಅಲ್ಲಿಗೆ ಮೊದಲ ಹಂತದ ನಿಮ್ಮ ಕೆಲಸ ಮುಗಿದು ನೀವು Questnet ಎಕ್ಸಿಕ್ಯುಟಿವ್ ಆದಿರಿ. ಹಣ ಕಟ್ಟಿದ ಮರುಕ್ಷಣವೇ ನಿಮಗೆ Questnetನದೆನ್ನಲಾದ ಜಾಲತಾಣದಲ್ಲಿ ಒಂದು ಪಿರಮಿಡ್ ದ್ವಿಮಾನ ಆಧಾರಿತ ರಚನೆ ಆರಂಭವಾಗುತ್ತದೆ. ನೀವು ಮತ್ತು ನೀವು ಕಂಪನಿಗೆ ಪರಿಚಯಿಸುವ ಇತರ ಗ್ರಾಹಕರ ಸಂಬಂಧ ಪಿರಮಿಡ್ ರಚನೆಯನ್ನು ಹೋಲುವುದರಿಂದ ಆ ಹೆಸರು.(pic source:wikipedia)
ನಿಮ್ಮ ಬಲ ಮತ್ತು ಎಡ ಭಾಗದ ಸರಪಳಿಯಲ್ಲಿ ಸದಸ್ಯರ\ಗ್ರಾಹಕರ ಸಂಖ್ಯೆ ೩-೩ ಆದಾಗ ನಿಮಗೆ ಕಮಿಷನ್ ಹಣ ಬರಲಾರಂಬಿಸುತ್ತದೆ. ಅದು ಹಾಗೆ ಹೋಗಿ ಎರಡೂ ಭಾಗದಲ್ಲಿ ೧೮೦-೧೮೦ ಸಮಸಂಖ್ಯೆಯ ಸದಸ್ಯರಾದಾಗ ನಿಮ್ಮ ಅತಿ ಹೆಚ್ಚಿನ ಕಮಿಷನ್ ಆರೂ ಚಿಲ್ಲರೆ ಲಕ್ಷ ಬರುತ್ತೆ. ಒಬ್ಬ ಸದಸ್ಯನ ಸಂಪಾದನೆಗೆ ಇದು ಅವರು ಹಾಕಿಕೊಡುವ ಲಿಮಿಟ್. ಇನ್ನೂ ಸಂಪಾದನೆ ಮಾಡಬೇಕೆಂಡರೆ ನೀವು ಇನ್ನೊಂದು ನಾಣ್ಯ ಕೊಳ್ಳಬೇಕು. ಆಗ ನಿಮಗೆ ಇನ್ನೊಂದು binary structure ಸಿಗುತ್ತದೆ. ಹಾಗಂತ ಎರಡೂ ಕಡೆ ಸಮ ಸಂಖ್ಯೆಯ ಗ್ರಾಹಕರು ಸಿಗದ ಹೊರತು ನಿಮಗೆ ಹಣ ಬರುವುದಿಲ್ಲ. ಅದು ಹಾಗೇ hold ಆಗಿದ್ದು ನೀವು ಪೂರ್ಣ ಸಂಖ್ಯೆ ಗ್ರಾಹಕರನ್ನು ಸೇರಿಸಿದ ಮೇಲೆ ನಿಮಗೆ ಕಮಿಷನ್ ಬರುತ್ತೆ. ಚಿತ್ರದಲ್ಲಿರುವ ಪಿರಮಿಡ್ ಕಮಿಷನ್ ವಿನ್ಯಾಸ ಡಾಲರ್ ಅವತರಣಿಕೆಯಲ್ಲಿದೆ.
ಒಟ್ಟಾರೆ ನ್ಯಾಯಯುತವಾಗಿ ಬ್ಯಾಂಕ್, ಷೇರು ಇತರೆಡೆ ನೀವು ಹೂಡುವ ಹಣ ಗರಿಷ್ಟ ತನ್ನ ಮೌಲ್ಯದ ೪೦% ಲಾಭಾಂಶ ಗಳಿಸುತ್ತದಾದರೆ Questnet ನಿಮಗೆ ೧೩೩% ಲಾಭಾಂಶ ಗಳಿಸಿಕೊಡುವ ಭರವಸೆ ನೀಡುತ್ತದೆ. ಆದರೆ ಇದಕ್ಕೆ ಯಾವುದೇ ಲಿಖಿತ ಭರವಸೆ ಇಲ್ಲಿ ಸಿಗೋಲ್ಲ. ಜೊತೆಗೆ ಅಪರೂಪದ ವ್ಯಕ್ತಿಗಳ ಚಿತ್ರವಿರುವ ಪದಕಗಳನ್ನು ಮುದ್ರಿಸುವಾಗ ತೀರ ಕಡಿಮೆ ಸೀಮಿತ ಸಂಖ್ಯೆಯ ನಾಣ್ಯಗಳನ್ನು ಮುದ್ರಿಸುವುದರಿಂದ(ಇದು ಮೂರ್ಖರು ಮಾತ್ರ ಹೇಳಬಹುದಾದ, ನಂಬಬಹುದಾದ ವಿಚಾರ) ನೀವು ಕೊಂಡ ನಾಣ್ಯಕ್ಕೆ ಮುಂದೊಂದು ದಿನ ವಿಪರೀತ numismatic ಬೆಲೆ ಬರಬಹುದು. ಆದರೆ ಅದು ಮುಂದಿನ ನೂರು ವರ್ಷಕ್ಕೆ ಅಸಾಧ್ಯದ ಮಾತು ಎಂಬುದು ಅನುಭವಿ ನಾಣ್ಯ ಸಂಗ್ರಹಕಾರರ ಖಚಿತ ಮಾತು. ಈ ನಿಟ್ಟಿನಲ್ಲಿ ಕಂಪನಿ ಮದರ್ ತೆರೇಸಾ, ಮಹಾತ್ಮ ಗಾಂಧಿ, ನೆಹರೂ, ತಮಿಳಿನ ಶಿವಾಜಿ ಗಣೇಶನ್, ಕನ್ನಡದ ರಾಜ್‍ಕುಮಾರ್ ಮುಂತಾದವರ ಚಿತ್ರವಿರುವ ನಾಣ್ಯಗಳನ್ನು ಬಿಡುಗಡೆ ಮಾಡಿ ಮಾರಾಟ ಮಾಡಿದೆ. ಅದಲ್ಲದೆ ಲಕ್ಷ್ಮಿ, ಗಣೇಶ, ತಾಜ್‍ಮಹಲ್ ಇತ್ಯಾದಿ ಚಿತ್ರಗಳ ನಾಣ್ಯಗಳೂ ಇವೆ. ಮಹಾತ್ಮ ಗಾಂಧಿ ಮತ್ತು ಮದರ್ ತೆರೆಸಾ ಪದಕಗಳನ್ನು ಸಾವಿರಾರು ಸಂಸ್ಥೆಗಳು ತಮ್ಮ ಹಣ ಸಂಗ್ರಹದ ಅಭಿಯಾನಕ್ಕಾಗಿ ಹೊರತಂದಿವೆ. ಈ ಕಾರಣದಿಂದ Questnet ನಾಣ್ಯಗಳಿಗೆ ಅಧಿಕ ಮೌಲ್ಯ ಬರುವುದು ದೂರದ ಮಾತು ಎನ್ನುತ್ತಾರೆ ನುರಿತ ನಾಣ್ಯ ಸಂಗ್ರಹಕಾರರು. ನಾಣ್ಯಗಳನ್ನುQuest Internationalಗೆ ಸರಬರಾಜು ಮಾಡುವವರು ಜರ್ಮನಿಯ ’ಮೇಯರ್ ಮಿಂಟ್’ ಎಂಬ ಕಂಪನಿಯವರು. ಸದರಿ ಕಂಪನಿ ಪ್ರಾಚೀನ ನಾಣ್ಯಗಳನ್ನು ನಕಲಿ ಮಾಡಿ ಮಾರಾಟ ಮಾಡಿದ್ದಕ್ಕೆ ಹಲವಾರು ಬಾರಿ ಶಿಕ್ಷೆಗೀಡಾಗಿದ್ದು ಅದರ ಸಾಚಾತನದ ಬಗ್ಗೆ ಗುಮಾನಿಗಳಿವೆ. ಈ ಮಧ್ಯೆ ಪೋಪ್ ಜಾನ್‍ಪಾಲ್‍ ಜೊತೆಗೆ ಕಂಪನಿಯ ಸಿ ಇ ಒ ವಿಜಯ್ ಈಶ್ವರನ್ ಇರುವಂತೆ ತೋರಿಸಲಾದ ಚಿತ್ರವನ್ನು ತನ್ನ ಪ್ರಚಾರದಲ್ಲಿ ಬಳಸಿಕೊಳ್ಳುತ್ತಿರುವುದಕ್ಕೆ ಪಾಶ್ಚಾತ್ಯ ಜಗತ್ತಿನಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಇಷ್ಟೆಲ್ಲಾ ಹೇಳಿದ ಮೇಲೆ ನೀವು ನನ್ನನ್ನು Questnetನ ಕುರಿತು ಪೂರ್ವಗ್ರಹ ಪೀಡಿತನೆಂದುಕೊಳ್ಳಬಹುದು. ಈ ನಿಟ್ಟಿನಲ್ಲಿ Questnet ಕಂಪನಿಯಲ್ಲಿ ಹಣ ಹೂಡಲು ಯಾಕೆ ಮುಂದಾಗಬಾರದೆನ್ನುವುದಕ್ಕೆ ಆರ್ಥಿಕ ವಿಷಯಗಳನ್ನು ಬಲ್ಲವನಾಗಿ ನನ್ನ ಸಲಹೆಗಳು ಇಂತಿವೆ:


೧. ಯಾವುದೇ ಸಂದರ್ಭದಲ್ಲಿ ನೀವು Questnetನಲ್ಲಿ ತೊಡಗಿಸುವ ಹಣ ಹೂಡಿಕೆಯಾಗುವುದಿಲ್ಲ. ಭಾರತ ಸರ್ಕಾರದ ಯಾವುದೇ ಕಾನೂನು ನಿಮ್ಮ ಹಣವನ್ನು ಮರಳಿ ಕೊಡಿಸದು. ಅದರಿಂದ ನಿಶ್ಚಿತ ಆದಾಯವೂ ಇಲ್ಲ. ನಿಮ್ಮ ದುಡ್ಡನ್ನು ಮರಳಿ ಪಡೆಯೋದು ಕನಸಿನ ಮಾತು. ನೀವೂ ಸಹಾ ನಾಲ್ಕಾರು ಜನರಿಗೆ ಸುಳ್ಳು ಹೇಳಿ Questnetಗೆ ಸೇರಿಸಿದರೆ ನಿಮ್ಮ ಹಣ ವಾಪಾಸ್ ಬರಬಹುದು. ಆದರೆ ಅದು ಬೇಕೆ?

೨. ಅಂದು ನಾವು ಭೇಟಿ ನೀಡಿದ Questnetನ ಕಛೇರಿಯೆನ್ನಲಾದ ಬಂಗಲೆಯಲ್ಲಿ ತಮ್ಮನ್ನು ಕಂಪನಿಯ ಸಂಪನ್ಮೂಲ ವ್ಯಕ್ತಗಳೆಂದು ಹೇಳಿಕೊಂಡು ಸೆಮಿನಾರ್ ನಡೆಸಿದ ಯಾರ ಬಳಿಯೂ Questnet ಕಂಪನಿಯ ಗುರುತಿನ ಚೀಟಿಯಾಗಲಿ, ಅವರು Questnetನಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳುವ ಯಾವುದೇ ದಾಖಲೆಗಳಾಗಲೀ ಇರಲಿಲ್ಲ. Questnet ಇವರನ್ನು ತನ್ನ ಸ್ವತಂತ್ರ ಪ್ರತಿನಿಧಿಗಳೆಂದು ಹೇಳಿಕೊಳ್ಳುತ್ತಿದ್ದು, ಕಂಪನಿಯಿಂದಾಗುವ ಮೋಸಕ್ಕೆ ಇವರು ಬೆಲೆ ತೆರಬೇಕಾಗುತ್ತದೆ. ಕಂಪನಿ ಯಾವುದೇ ಸಂದರ್ಭದಲ್ಲೂ ಈ so called ಐ ಆರ್(Independent Executive)ಗಳ ನೆರವಿಗೆ ಹೋಗುವುದಿಲ್ಲ. Questnet ಜಾಹೀರಾತು ಹೇಳಿಕೆಯ ಪ್ರಕಾರ ಈ ಐ ಆರ್‌ಗಳು ಕಂಪನಿಗೆ ದುಡ್ಡು ಹಾಕಿ ಕಳೆದುಕೊಳ್ಳಲು ಮಾತ್ರ. ಅಂದ ಹಾಗೆ ದುಡ್ಡು ಹಾಕಿ ಕಳೆದುಕೊಳ್ಳುವವರೆಲ್ಲಾ ಐ ಆರ್‌ಗಳೇ ಆಗುತ್ತಾರೆ.

೩. ಅವರ ಏಕೈಕ ಉದ್ದೇಶ ನಮ್ಮ ಮತ್ತು ನಮ್ಮ ಗೆಳೆಯರಿಂದ ಹೇಗಾದರೂ ಮಾಡಿ Questnetಗೆ ದುಡ್ಡು ಹಾಕಿಸಿ ನಮಗೆ ಉಂಡೆನಾಮ ತಿಕ್ಕುವುದಾಗಿತ್ತು.

೪. ನೀವು ಕಮಿಷನ್ ಆಸೆಯಿಂದ ಸೇರಿಸುವ ಜನ ಯಥಾಪ್ರಕಾರ ನಿಮ್ಮ ಸ್ನೇಹಿತರು, ನಂಟರೇ ಆಗಿರುತ್ತಾರೆ. ಅವರಿಗೆ ನೀವು ಮೋಸ ಮಾಡಿದಂತೆ ಆಗುತ್ತೆ. ಬಹುಪಾಲು ಹಣ ಕಂಪನಿ ಪಾಲಾಗಿ ನಿಮಗೆ ಕಮಿಷನ್ ಅಂತ ಬರುವುದು ಚೂರು ಪಾರು.
ಕೊನೆಗೆ ಹೋಗಿದ್ದು-ಬಂದಿದ್ದು ನಿಮ್ಮ ಆಪ್ತರದ್ದೇ.

೫ ಪಿರಮಿಡ್ ರಚನೆಯಲ್ಲಿ ನಿಮ್ಮ ಎಡ ಮತ್ತು ಬಲ ಭಾಗದಲ್ಲಿರುವ ಸದಸ್ಯರು ನಿಶ್ಚಿತ ಸಮಸಂಖ್ಯೆಯಲ್ಲಿ ಗ್ರಾಹಕರನ್ನು ಸೇರಿಸುತ್ತಿರಬೇಕು. ಒಂದೇ ಕಡೆ ಸದಸ್ಯರ ಸಂಖ್ಯೆ ಬೆಳೆದರೆ ಕಮಿಷನ್ ಇಲ್ಲ.

೬. Gold Quest International ಅಥವ questnet ಕಂಪನಿಗಳ ಅಧಿಕೃತ ಜಾಲತಾಣಗಳು ನಿಮಗೆ ಲಭ್ಯವಿಲ್ಲ. ನಿಮ್ಮ ಪಿರಮಿಡ್ ವ್ಯವಹಾರಗಳನ್ನು ನಿರ್ವಹಿಸುವುದು ಬೇರೇಯದೇ ಹೆಸರಿನ ತಾಣ.

೭. ನೀವು ನಾಣ್ಯಗಳನ್ನು referrel ಆಧಾರದಲ್ಲಿ ಕೊಳ್ಳಬಹುದೇ ಹೊರತು ನೇರವಾಗಿ ಕೊಳ್ಳಲಾಗುವುದಿಲ್ಲ. ಈ ತರದ referrel ವ್ಯವಹಾರಗಳು ಭೂಗತ ಜಗತ್ತಿನಲ್ಲಿ ಸಾಮಾನ್ಯ.


೮. ಕಂಪನಿ ಪ್ರಚಾರಕರು\ಭಾಗಿಗಳು ಹಲವಾರು ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡುತ್ತೇವೆ ಅಂತ ಹೇಳುತ್ತರಾದರೂ ವಾಚುಗಳು, ಎಲೆಕ್ಟಾನಿಕ್ ವಸ್ತುಗಳ ಪ್ರಸ್ತಾಪವನ್ನು ಮೂಲೆಗಿಟ್ಟು ಬರೀ ಚಿನ್ನದ ನಾಣ್ಯಗಳ ಬಗ್ಗೆ ಪ್ರಚರಿಸುತ್ತಾರೆ.
ಹಿಂದೊಮ್ಮೆ ಟೈಟನ್ ವಾಚುಗಳನ್ನು ಮಾರ್ಕೆಟಿಂಗ್ ಮಾಡ್ತೇವೆ ಎಂದು ಕಂಪನಿ ಹೇಳಿತ್ತು. ಎಚ್ಚರಗೊಂಡ ಟೈಟನ್ Questnet ಜೊತೆ ಯಾವುದೇ ವ್ಯವಹಾರಕ್ಕೆ ಮುಂದಾಗಲಿಲ್ಲ.

೯. ಕಂಪನಿ ಮಾರ್ಕೆಟಿಂಗ್ ಮಾಡುತ್ತಿರುವ Mayer Mint ಕಂಪನಿಯ ಚಿನ್ನದ ನಾಣ್ಯ ವಿಶ್ವಾಸಾರ್ಹವಲ್ಲ. ಕಂಪನಿಯೇನೋ ೯೯.೯೯% ಚಿನ್ನ ಅಂತ ಹೇಳುತ್ತದಾದರೂ ಅದನ್ನು ಜಾಗತಿಕ ಗೋಲ್ಡ್ ಕೌನ್ಸಿಲ್ ಆಗಲೀ, ಭಾರತದ ಯಾವುದೇ ಗುಣ ಮಾನಕ ಸಂಸ್ಥೆಯಾಗಲೀ ಪ್ರಮಾಣೀಕರಿಸಿರುವುದಿಲ್ಲ. ಚಿನ್ನವೆಂದು ನಂಬಬೇಕು-ಕೊಳ್ಳಬೇಕು. ನೀವು ಸ್ವತಃ ಚಿನ್ನವನ್ನು ಉಜ್ಜಿ ನೋಡಿದಾಗ ಅದರ ಮೇಲಿರುವ ಚಿತ್ರ ಹಾಳಾಗಬಹುದು. ಆ ಮೂಲಕ ಕಂಪನಿ ಹೇಳುವ ನಾಣ್ಯದ numismatic ಮಹತ್ವ ಹಾಳಾಗಬಹುದು!
(ಇತ್ತೀಚೆಗೆ ಚಿನ್ನದ ಶುದ್ಧತೆ ಪರಿಶೀಲಿಸಲು ಎಲೆಕ್ಟ್ರಾನಿಕ್ ಯಂತ್ರಗಳು ಲಭ್ಯವಿದ್ದು ಪರೀಕ್ಷೆ ಮಾಡಿಸಬಹುದು. ಆದರೆ ಅಷ್ಟರಲ್ಲಿ ಕಾಲ ಮಿಂಚಿರುತ್ತದೆ)


೧೦. Questnetನ ಕಛೇರಿಗಳ್ಯಾವುದರಲ್ಲೂ ಕಂಪನಿಯ ಹೆಸರಿನ ನಾಮಫಲಕವಿಲ್ಲ. ಕಂಪನಿಯ ಸಿ ಇ ಒ ಒಳಗೊಂಡಂತೆ ಯಾವುದೇ ಮೇಲ್‍ಸ್ತರದ ಅಧಿಕಾರಿಗಳು ಭಾರತದಲ್ಲಿಲ್ಲ. ಅರ್ಥಾತ್ ಕಾನೂನಿಗೆ ಹೆದರಿ ತಲೆಮರೆಸಿಕೊಂಡಿದ್ದಾರೆ.

೧೧. ಯಾರೇನೇ ಭೋಂಗು ಬಿಟ್ಟರೂ ಪಿರಮಿಡ್ ಮಾರ್ಕೆಟಿಂಗ್‍ನಲ್ಲಿ ಶೇ ೨ ರಷ್ಟು ಜನ ಮಾತ್ರ ಹಣ ಮಾಡಬಹುದೆಂಬುದು ಖಚಿತಗೊಂಡ ಸತ್ಯ.


೧೨. ಬೆಂಗಳೂರಿನ ಪೋಲೀಸರಿಗೆ ಬಂದ ಅಷ್ಟೂ ದೂರುಗಳು ಹಣ ಕಟ್ಟಿ ವರ್ಷವಾದರೂ ಚಿನ್ನದ ನಾಣ್ಯ ತಲುಪದಿದ್ದವರದು. ನಾಣ್ಯವೇ ಬರಲಿಲ್ಲವೆಂದ ಮೇಲೆ ಕಮಿಷನ್ ಎಲ್ಲಿರುತ್ತೆ...? refer ಮಾಡೋದಾದರೂ ಹೇಗೆ...?
ಹಿಂದೊಮ್ಮೆ ಟೈಟನ್ ವಾಚುಗಳನ್ನು ಮಾರ್ಕೆಟಿಂಗ್ ಮಾಡ್ತೇವೆ ಎಂದು ಕಂಪನಿ ಹೇಳಿತ್ತು. ಎಚ್ಚರಗೊಂಡ ಟೈಟನ್ Questnet ಜೊತೆ ಯಾವುದೇ ವ್ಯವಹಾರಕ್ಕೆ ಮುಂದಾಗಲಿಲ್ಲ.


ಕರ್ನಾಟಕದಲ್ಲಿ ಕೇಸು ಸಿ ಓ ಡಿಗೆ ಹೋದ ಮೇಲೆ ನಡೀತಿದೆ Questnetನ ಸ್ಪಷ್ಟೀಕರಣದ ಪ್ರಹಸನ.
ಕರ್ನಾಟಕದ ದೈನಿಕಗಳಲ್ಲಿ ಜಾಹೀರಾತು ನೀಡುತ್ತಿರುವ ಕಂಪನಿ, ಹಣ ಕಳೆದುಕೊಂಡ ಜನರನ್ನು ಯಾರೋ questnet ಹೆಸರು ಬಳಸಿಕೊಂಡು ವಂಚಿಸಿದ್ದಾರೆ. ಹಣ ಹೋಗಿರುವುದರಲ್ಲಿ ತನ್ನ ಪಾತ್ರವಿಲ್ಲ ಎಂದಿದೆ. ಅಲ್ಲಿಗೆ ಎಲ್ಲ ತಪ್ಪುಗಳನ್ನು ಕಮಿಷನ್ ಆಸೆಗೆ ಹಣ ಹೂಡಿ ಮೋಸ ಹೋದವರ ತಲೆಗೇ ಕಟ್ಟುತ್ತಿದೆ. ಹೋದರೆ ಹೋಗಲಿ ಜಾಹೀರಾತು ನೀಡಿರುವ questnet ಕಂಪನಿಯ ಬೆಂಗಳೂರು ವಿಳಾಸವಾದರೂ ಇದೆಯಾ ಅಂತ ಹುಡುಕಿದರೆ ಅದು ಚೆನ್ನೈ ಕಡೆ ಕೈತೋರಿಸುತ್ತೆ. ಅಲ್ಲಿ ಈಗಾಗಲೇ ಕಂಪನಿ ಬಾಗಿಲು ಮುಚ್ಚಿದೆ. ಹಣ ಹಾಕಿದವರ ಆಸೆಯ ಬಾಗಿಲೂ ಸಹಾ.

Questnet ಕಂಪನಿಯಿಂದ ವಂಚಿತರಾದ ವ್ಯಕ್ತಿಯೊಬ್ಬರ ಬ್ಲಾಗ್‍ನಲ್ಲಿದ್ದ ಪತ್ರ

********************************************************
hallo friends,

I read many blogs from your blogspot and found myself trapped in business ran by a fraud and unethical company….
I joined quest before 5 months yes I haven't received my product which they promised to deliver…even i am unable to get the status from contacts from quest website……
Nobody is picking up the call from any questnet office from bangalore and Chennai…..
I have heard that Quest Bangalore office is closed by Police and Chennai office is Freezed…
I was believing in questnet with impression of my upliners that they are running an easy money making business…But with experience my experience with quest I would never like to suggest anybody to join this business for making money now……
I just want my money back (INR 33000) which seems impossible….. OR least the product to minimise the loss..
Now I am a frustrated questnet IR who joined quest before 5 months with the hopes of making money by easy means--still waiting for a product which Quest committed to give it me within 2 months..(3 months late now)…

**********************************************************
ಸ್ನೇಹಿತರೆ,
Multilevel\chainlink marketingಗಳು ಹೇಗೆ ಕೆಲವೇ ಜನರನ್ನು ಶ್ರೀಮಂತರನ್ನಾಗಿಸಿ, ಬಹುತೇಕರ ಹಣವನ್ನು ಕಳೆದುಕೊಳ್ಳಲು ಕಾರಣವಾಗುತ್ತವೆ ಎಂಬುದಕ್ಕೆ ಒಂದು ಖಚಿತ ಲೆಕ್ಕಾಚಾರ ಇಲ್ಲಿದೆ. ವಿಕಿಪೀಡಿಯ ಮತ್ತು ಮೋಹನ್ ಬಿ ಎನ್ ರವರ ಬ್ಲಾಗ್‌ನಿಂದ ಹೊರತೆಗೆದ ಒಂದಿಷ್ಟು ಲೆಕ್ಕಾಚಾರ ನಿಮ್ಮ ಅವಗಾಹನೆಗಾಗಿ:
"It is mathematically proved that the Number of nodes with two children is always less than half the total number of nodes - Well known as ‘Binary Tree Fact’. All the people who enter such a business model at the very early stages are the lucky ones. They will get to spread and introduce new ‘Partners’ to the chain. However, over a period of time this will reach the saturation level. This is very well shown in the diagram. If you observe the Blue circles, they are the one who joined in the early stages. They represent 11.8% percent of overall population while the circles indicated in Red counts to 88.1%. Hence the top 12% gets benefited from this kind of business model while the alarming 88% will be on the losing side. Think twice before you get in to this kind of businesses. It is up to you to decide on whether you belong to profitable 12% or loss making 88% depending on how you take it to the next level."
ಹಾಗೆಯೇ ಮೋಹನ್ ರವರ ಬ್ಲಾಗ್‌ನಲ್ಲಿ ಒಂದಿಷ್ಟು ಚರ್ಚೆ ನಡೆದಿದೆ ನೋಡಿ, ಪುರುಸೊತ್ತಿದ್ದರೆ.

11 comments:

ಅಮರ said...

ರವಿ ಅವರೇ...

ಎಲ್ಲ ವಿಷಯಗಳನ್ನ ಪ್ರಸ್ಥಾಪಿಸಿದ್ದಿರಿ, ನನಗೆ ಈ ಜಾಲದ ಬಗ್ಗೆ ಗೊತ್ತಿತ್ತು ಅದರೆ ಇದು ಅಂತರಾಷ್ಟ್ರಿಯ ಮಟ್ಟದಲ್ಲಿ ಸಕ್ರಿಯವಾಗಿರುವುದರ ಬಗ್ಗೆ ತಿಳಿದಿರಲಿಲ್ಲ. ನನ್ನ ಮಿತ್ರ ಕೂಡ ಈ ಗುಂಪಿನ ಸದಸ್ಯ ಅವನ ಬಳಿ ಕೂಡ ಈ ನಾಣ್ಯಗಳಿವೆ ಮೊನ್ನೆ ಅವುಗಳನ್ನ ನೋಡುತ್ತಿದ್ದೆವು ಆದರೆ ಮತ್ಯಾವ ಗೆಳೆಯರು ಆ ಬಲೆಗೆ ಬಿಳಲಿಲ್ಲ .... ಅನ್ನೊದೆ ಸಮಾಧಾನ. ಈ ತರಹದ್ದೆ ಮತ್ತೊಂದು ಚೈನ್ ಮಾರ್ಕೆಟಿಂಗ್ ಅರ್ ಎಮ್ ಫಿ ಇನ್ನು ಗಂಭೀರ ಸ್ವರೂಪದಲ್ಲಿ ಎಲ್ಲೆಡೆ ಆವರಿಸಿಕೊಂಡಿದೆ .... ಅದು ಹಳ್ಳಿಗಾಡಿನ ಪ್ರದೇಶಗಳಲ್ಲು ಕೂಡ. ಈ ಬಗ್ಗೆ ಹಾಯ್ ಬೆಂಗಳೂರಿನಲ್ಲಿ ಪ್ರಕಟವಾಗಿತ್ತು, ನೀವು ಗಮನಿಸಿರಬೇಕು.

-ಅಮರ

srinivas said...

ಎಷ್ಟೇ ಜಾಗರೂಕರಾಗಿರಲು ತಿಳಿಸಿದರೂ, ಸಾರ್ವಜನಿಕರು ಅತಿ ಆಸೆಯಿಂದ ಮೋಸ ಹೋಗುವರು.
ಫೈನಾನ್ಸ್ ಕಂಪೆನಿಗಳ ಬಗ್ಗೆ ನಿಮಗೇನಾದರೂ ಹೆಚ್ಚಿನ ಮಾಹಿತಿ ಬೇಕಿದ್ದರೆ ತಿಳಿಸಿ
ಅವುಗಳನ್ನು ನಿಯಂತ್ರಿಸಿ, ಜನತೆಗೆ ಒಳಿತು ಮಾಡುವುದೇ ನಮ್ಮ ಕೆಲಸ

ಹಷ೯ (Harsha) said...

Janaralli jagrati mudisuva E nimma prayatnakke nannadondu thanks.

ಕಟ್ಟೆ ಶಂಕ್ರ said...

ರವಿ,
ನನ್ನನು ಕೂಡಾ ಬಹಳಷ್ಟು ಮಂದಿ ಇದರ ಬಗ್ಗೆ ಕೊರೆಯಲು ಆರಂಭಿಸಿದ ತಕ್ಷಣ, ಅಲ್ಲಿಂದ ಜಾಗ ಖಾಲಿ ಮಾಡ್ತಾ ಇದ್ದೆ ಅಥವ ಬೈದು, ನಂಗೆ ಇದ್ರಲ್ಲಿ ಆಸಕ್ತಿ ಇಲ್ಲಾ ಅಂತ ಹೇಳಿ ಬಾಯಿ ಮುಚ್ಚುಸ್ತಾ ಇದ್ದೆ. ವಿಪರ್ಯಾಸ ಅಂದ್ರೆ, ಚೆನ್ನಾಗಿ ಓದಿರುವ ಜನರೂ ಕೂಡಾ,ಇದರ ಜಾಲದಲ್ಲಿ ಬೀಳ್ತಾ ಇದಾರೆ. ನನ್ನ ಹತ್ತಿರದ ಮಿತ್ರ ಕೂಡಾ ಇದ್ರಲ್ಲಿ ದುಡ್ಡು ಹಾಕಿ ಇವಾಗ ಪಾಡು ಪಡ್ತಾ ಇದಾನೆ. ನಂಗಂತೂ ಮುಂಚಿಂದಾ ಕೂಡಾ ಈ ತೆರನಾದ ವಿಷಯಗಳಲ್ಲಿ ಆಸಕ್ತಿ ಇರ್ಲಿಲ್ಲ. ದುಡ್ಡು ಮಾಡೋದಕ್ಕೆ shortcut methods ಯಾವತ್ತೂ ಬೇಡ ಅನ್ನೋ ನಮ್ಮಪ್ಪನ ಮಾತನ್ನ ಇವತ್ತಿಗೂ ಪಾಲಿಸುತ್ತಾ ಇದೀನಿ. instant ಕಾಸು ಬರಬೇಕಾದ್ರೆ ಲಕ್ ಬೇಕು ಕಣ್ರೀ. ಕುದುರೆ ರೇಸು, ಲಾಟರಿ, ಇಸ್ಪೀಟು ಇತ್ಯಾದಿ. ಕ್ಷಮಿಸಿ ಸ್ವಾಮಿ, ನಂಗೆ ಅದ್ರಲ್ಲಿ ಕೂಡಾ ಇಂಟ್ರೆಸ್ಟ್ ಇಲ್ಲಾ. ನೀವು ಬರೆದಿರುವ ಲೇಖನ ನಿಜಕ್ಕೂ ಶ್ಲಾಘನೀಯ.ಕಣ್ತೆರೆಸುವ ಒಳ್ಳೇ ಯತ್ನ. ಧನ್ಯವಾದಗಳು.

ಕಟ್ಟೆ ಶಂಕ್ರ
http://somari-katte.blogspot.com

CKR said...

namaskaara ravi,

maahiti sakattaagide. sumaaru 15/16 varshada hinde nanna parichitarobbaru intaha ondu dande nadesuttiddaru. aaga kodabEkaagidda motta 2000/- anta nenapu. chain game antano eno hesaru. idanna innobba friend hatra hELidaaga avanu kapaaLakke hoDIlilla aadre avana maatu haagittu. 2000 kodade nanna paricitarinda tale tappisikondidde. avattu avaru naanu ashtu maade ishtu maade anta heLtiddaaga nanage 2000 kodbEkaagittu annistittu.

ivattu avaru ellaa kaLedukondu mUleguMpaagiddaare. bengaLuru bitte odi hOgiddaare!!!!!!!

nimma dairyakke mechchabeku. kaalanukaalakke intahavugaLu vida vida rUpadalli marukaLisuttade. namma hushaar alli naavirabeku. intahavu kandaaga itararige manavarike maadabEku. uLisikoLLuvudu avaravarige biTTa vishaya
CKRaman

ಅರೇಹಳ್ಳಿ ರವಿ Arehalli Ravi said...

ತ ವಿ ಶ್ರೀ ಸಾರ್,
ಪಿರಮಿಡ್ ಮತ್ತು ಚೈನ್ ಮಲ್ಟಿಲೆವೆಲ್ ಮಾರ್ಕೆಟಿಂಗ್ ಬಗ್ಗೆ ನೀವು ಇನ್ನೊಂದಿಷ್ಟು ವಿವರವಾಗಿ ಬರೀತೀರಾ? ನಿಮಗಿದು ಸಾಧ್ಯ. ಮತ್ತು ಅದಕ್ಕಿರುವ ಚಾರ್ಟ್ ಗಳನ್ನೂ ಕೊಟ್ಟರೆ ಇನ್ನೂ ಚೆನ್ನಾಗಿರುತ್ತೆ.

ರವೀ...

ಟಿ ಜಿ ಶ್ರೀನಿಧಿ said...

ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ. ಜನರನ್ನು ಟೋಪಿ ಹಾಕಿಸಿಕೊಳ್ಳುವುದರಿಂದ ಬಚಾವು ಮಾಡುವ ಉದ್ದೇಶ ಶ್ಲಾಘನೀಯ. ಅಭಿನಂದನೆಗಳು!

ಮೋಹನ್ ಬಿ ಎನ್ said...

ಪ್ರಿಯ ಸ್ನೇಹಿತರೇ,

ಹೌದು, ಈ ರೀತಿಯ ಕೊಳಕಿನ ಹಣಗಳಿಸುವ ಯೋಜನೆಗಳಿಂದ ವಂಚಿತರಾಗಬೇಡಿ. ಖಂಡಿತವಾಗಿ ಭಾರತ ಸರ್ಕಾರ ಯಾವುದೋ ಒಂದು ದಿನ ಈ ಕ್ವೆಸ್ಟ್ ನೆಟ್ ಕಂಪನಿಯನ್ನು ವಹಿವಾಟು ನಡೆಸದಂತೆ ಆದೇಶಿಸುತ್ತದೆ. ಆ ದಿನಗಳು ತುಂಬಾ ದೂರವಿಲ್ಲ.

ಈ ಮೊದಲೇ ತಮಿಳುನಾಡು ಉಚ್ಚ ನ್ಯಾಯಾಲಯ ಇದೇ ಕಂಪನಿ ಗೋಲ್ಡ್ ಕ್ವೆಸ್ಟ್ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ 2003 ರಲ್ಲಿ ಬಹಿಷ್ಕರಿಸಿತ್ತು. ಈಗ ಅದೇ ಖಂಪನಿ ಕ್ವೆಸ್ಟ್ ನೆಟ್ ಎಂಬ ಮತ್ತೊಂದು ಹೆಸರಿನಲ್ಲಿ ಚಲಾವಣೆಯಲ್ಲಿದೆ.

ಅಂತೆಯೇ ನನ್ನ ಬ್ಲಾಗಿನಲ್ಲಿ (http://mohanbn.com/blog/tag/questnet)ತುಂಬಾ ಜನ ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ. ನೀವೇ ಓದಿ... ಅರ್ಥ ಮಾಡಿಕೊಳ್ಳಿ.

- ಮೋಹನ್ [ಸ್ವಾಭಿಮಾನಿ ಭಾರತೀಯ ಪ್ರಜೆ]

Shrinidhi Hande said...

ಚೆನ್ನಾಗಿ ಬರೆದಿದ್ದೀರ... ಆಮ್ ವೇ, ಆರ್ ಎ೦. ಪಿ ನ೦ತಹ ಹಲವಾರು ಕ೦ಪೆನಿಗಳು ವ್ಯವಸ್ಥತವಾಗಿ ಹಣ ದೋಚುತ್ತಿದ್ದರು ನಮ್ಮ ಸರಕಾರ ಈ ಬಗ್ಗೆ ಸೂಕ್ತ ಕಾನುನು ಮಾಡಿಲ್ಲ...

ನಿಮ್ಮ ಈ ಪ್ರಯತ್ನಕ್ಕೆ ನನ್ನ ಸ೦ಪೂರ್ಣ ಬೆ೦ಬಲವಿದೆ

Read
http://www.enidhi.net/2008/03/analysis-of-network-marketing-mlm.html

and http://www.merchantsofdeception.com/files/MerchantsOfDeception.pdf

nag said...

Some peoples even after hearing, they are falling again in this issues. I have seen still some presentations are going. And some are joining.

Manohar said...

Hello ravi thaks for the info abt questnet one of my friend is a member i will collect the details from him and let u know


bye TC
Manohar

ಜನಪ್ರಿಯ ಲೇಖನಗಳು