3.18.2008

ಕನ್ನಡದ ಕತ್ತಲೆಗೆ ಬ್ಲಾಗೀ ಟಾರ್ಚು :ಒಂದು ಬ್ಲಾಗೀ ಮಿಲನ

ಶ್ರೀಮಾತಾ,

ಕ್ಷಮೆಯಿರಲಿ ನನ್ನ ಗಡಿಬಿಡಿ ಮತ್ತು ಹೊಸ ಹುಡುಗಿಯರನ್ನು ನೇರವಾಗಿ ಮಾತನಾಡಿಸಲಾಗದ ಲಘು ಸಂಕೋಚಕ್ಕೆ.
ಬ್ಲಾಗೀ ಮಿಲನದಲ್ಲಿ ರಾಜೇಶ್ ನಿಮ್ಮನ್ನು ’ಮ್ಯುಸಿಸಿಯನ್’ ಅಂತ ಪರಿಚಯಿಸಿದಾಗ, ನಾನು ಪೆದ್ದು-ಪೆದ್ದಾಗಿ ನೋಡಿದಾಗ-ನೀವು ಏನಂದುಕೊಂಡಿರೋ...ಇರ್ಲಿ ಬಿಡಿ. "ಹೀಗೆ ಸುಮ್ನೆ" ಬ್ಲಾಗ್‌ಕರ್ತೆ ಅಂದಿದ್ದರೆ ತಕ್ಷಣ ಗೊತ್ತಾಗ್ತಿತ್ತು. ಸ್ನೇಹಿತರನ್ನು ವಿಚಾರಿಸಿ, ನಿಮ್ಮ ಕೆಲವು ಹಳೆ ಪೋಸ್ಟುಗಳನ್ನು ನೋಡಿದ ಮೇಲೇನೇ ನನಗೆ ನಿಮ್ಮ ಬಗ್ಗೆ ತಿಳಿದದ್ದು. ಜೊತೆಗೆ ಶ್ರೀಮಾತ ಎನ್ನುವ ಹೆಸರು, ಅಪರೂಪಕ್ಕೊಮ್ಮೆ ಹಲವಾರು ಬ್ಲಾಗ್‌ಗಳನ್ನು ಒಟ್ಟಿಗೆ ನೋಡುವಾಗ ಆಗುವ ಗೊಂದಲ ಇತ್ಯಾದಿಗಳು ನಿಮ್ಮನ್ನು ಗುರುತಿಸುವಲ್ಲಿ ನನಗೆ ಅಡ್ಡಿಯಾದವು. ಈಗ ಗುರುತಾಯಿತು.

ಸುಶ್ರುತನಿಗೆ ಎಲ್ಲಾ ಬ್ಲಾಗಿಗಳನ್ನು(ಮುಖ್ಯವಾಗಿ ಹುಡ್ಗೀರೂ!)ಪರಿಚಯ ಮಾಡಿಕೊಳ್ಳಲು ನೀವು ಆಯೋಜಕರು ಅವಕಾಶವನ್ನೇ ಕೊಡಲಿಲ್ಲವೆಂದು ಛೇಡಿಸಿದೆ. ತೀರ ಕೆಲವರ, ಹಲವೆಡೆ ಓದಿದ-ಕೇಳಿದ ಪುನರಾವರ್ತಿತ ಭಾಷಣಗಳನ್ನು ಸ್ವಲ್ಪ ಸೀಮಿತವಾಗಿಸಿದ್ದರೆ ಇನ್ನು ಕೆಲವರಿಗೆ ಪರಿಚಯಿಸಿಕೊಳ್ಳಲು ಅವಕಾಶವಾಗುತ್ತಿತ್ತು.
ಯಾವ ಕಾರ್ಯಕ್ರಮದಲ್ಲೂ ಕೇಳಿ ಬರುವ ಸವಕಲು ಪದವೇ ‘ಕಾಲಾವಕಾಶವೇ ಆಗಲಿಲ್ಲ’ ಅನ್ನೋದು. Informal ಆಗಬಹುದಿದ್ದ ಕಾರ್ಯಕ್ರಮ ಭಾಷಣಗಳಿಂದ formal ಆಗಿ ಹೋಗುತ್ತೆ. ಇದೆಲ್ಲದರ ಮಧ್ಯೆ ರಷೀದ್, ವಸುಧೇಂದ್ರ ಮುಂತಾದವರ ಜೊತೆ ಸ್ವಲ್ಪ ಮಾತಾಡ್ಲಿಕ್ಕೆ ಆಗಿದ್ದು ಒಳ್ಳೆ ಸಂಗತಿ.

ಯಾವುದೊಂದು ಕಾರ್ಯಕ್ರಮದ ಬಗೆಗೆ ಕೊಂಕು ತೆಗೆಯುವುದು ಬಹಳ ಸಲೀಸು. ಆದ್ರೆ ಸಣ್ಣದೊಂದು ಕಾರ್ಯಕ್ರಮವನ್ನು ಆಯೋಜಿಸಿ ಮುಗಿಸಲಿಕ್ಕೆ ಎಷ್ಟೊಂದು ಅಡೆತಡೆಗಳು-ಆತಂಕಗಳು ಎದುರಾಗುತ್ತವೆಂಬುದು ಬಹಳಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿದ ನನ್ನ ಅನುಭವದಲ್ಲಿದೆ.

ಆದ್ರೆ, ಸುಶ್ರುತ ಕಾರ್ಯಕ್ರಮದ ಮೊದಲಿಗೇ ‘ಬ್ಲಾಗಿಗಳ ಪರಸ್ಪರ ಪರಿಚಯ’ ಅಂತ ಹೇಳಿದ್ದು ಇನ್ನೂ ನೆನಪಿದೆ. ಕಾರ್ಯಕ್ರಮಕ್ಕೆ ನೂರು ಜನ ಬ್ಲಾಗಿಗಳು ಬಂದಿದ್ದರು ಅಂದುಕೊಂಡರೆ, ಅದರಲ್ಲಿ ಪ್ರತಿಶತ ೫೦ ರಷ್ಟು ಮಂದಿ ತಮ್ಮನ್ನು ತಾವು ವೇದಿಕೆಯ ಮೇಲೆ ಪರಿಚಯಿಸಿಕೊಳ್ಳಲು ಇಚ್ಚಿಸೋದಿಲ್ಲ. ಇನ್ನುಳಿದ ೫೦% ಜನರನ್ನಾದರೂ ಕನಿಷ್ಟ ಅವರ ಬ್ಲಾಗ್ ಹೆಸರು, ತಮ್ಮ ಹೆಸರು ಹೇಳಿ ಮುಗಿಸಿ ಪರಿಚಯ ಮಾಡಿಕೊಳ್ಳಲು ಅವಕಾಶ ಕೊಡಬಹುದಿತ್ತು. ಭಾಷಣಕಾರರಿಗೆ ತಲಾ ಇಪ್ಪತ್ತು ನಿಮಿಷ ಸಮಯ ಕೊಡಬಹುದಿತ್ತು. ಸಮಯ ನಿಗಧಿ ಪಡಿಸದಿದ್ದರೆ ಕೆಲವರು ಮಾತಾಡ್ತಲೇ ಇರ್ತಾರೆ. ಅದು ಇಲ್ಲೂ ನಿಜವಾಯಿತು. ಸುಮಾರು ಅಂದರೆ ಬಹುತೇಕೆ ಬ್ಲಾಗಿಗಳು non technical ಹಿನ್ನೆಲೆಯವರಾದ್ದರಿಂದ technical ವಿಷಯಗಳ ಚರ್ಚೆ ಅವರ ಆಕಳಿಕೆಗೆ ಕಾರಣವಾಗುತ್ತೆ. ಅವರು ಎದ್ದು ಹೋಗಲೂಬಹುದು. technical ಜನಗಳ ಸಭೆಯನ್ನು ಬೇರೆಯಾಗಿಯೇ ಇಟ್ಟುಕೊಂಡರೆ ಒಳ್ಳೇದು.

ಎಲ್ಲ ಬ್ಲಾಗಿಗಳನ್ನೂ ಸಾಫ್ಟ್‌ವೇರ್ ಇಂಜಿನೀಯರ್‌ಗಳು ಅಂದುಕೊಳ್ಳೋದು, ಪ್ರಸ್ತಾಪಿಸುತ್ತಿರುವ ತಂತ್ರಜ್ಞಾನ ಇತ್ಯಾದಿಗಳ ಬಗ್ಗೆ ಎಲ್ಲ ಸಾಫ್ಟಿಗಳಿಗೂ ಗೊತ್ತಿರುತ್ತೆ ಅನ್ಕೋಳ್ಳೋದು ಶುದ್ಧಾನುಶುದ್ಧ ತಪ್ಪು. ಮಾತನಾಡಿದವರ ಮಾತುಗಳು ಅರ್ಥವಾಗದೆ ಹೋದರೆ ಬಂದು ಕೂತದ್ದಕ್ಕೆ ಸಾರ್ಥಕ್ಯ ಬಾರದು. ಕಾರ್ಯಕ್ರಮಕ್ಕೆ ಬಂದಿದ್ದು ಯಾರು ಯಾರೆಂದು ಗೊತ್ತಾಗದೇ ಹೋಗೋದು ಸಾರ್ವಜನಿಕ ಸಮಾರಂಭಗಳ ವಿಪರ್ಯಾಸ. ಆದ್ರೆ ಬ್ಲಾಗಿಗಳ ಸಮಾವೇಶ ಆತ್ಮೀಯರ ಆಪ್ತ ಮಿಲನ. ಅಷ್ಟರ ಮಟ್ಟಿಗೆ ಮುಂದಿನ ಸಭೆಗಳಾದರೂ ಆಪ್ತವಾಗಲಿ. After all ಇವೆಲ್ಲ ಕೊಂಕನ್ನು ನೀವು off the record ಅಂತಿಟ್ಟುಕೊಳ್ಳಿ.

ಉಳಿದಂತೆ ಕೆಲವು ಒಳ್ಳೆ ಆಲೋಚನೆಗಳು-ಸಲಹೆಗಳು ಬ್ಲಾಗಿಗಳನ್ನೆಲ್ಲ ಚಿಂತನೆಗೀಡು ಮಾಡುವಂತವು.

* ಕನ್ನಡದ ಬ್ಲಾಗುಗಳು ಕಥೆ-ಕವನ-ಅನುಭವ-ವಿಮರ್ಶೆಗಳ ಪರಿಧಿಯಿಂದಾಚೆಗೆ ಬೆಳೆದು ಮಾಹಿತಿ ಖಣಜಗಳಾಬೇಕು. ಭಾವಲೋಕ ಬಿಟ್ಟು ಭೂಲೋಕದ ಬಗ್ಗೆ ಬರೀಬೇಕು.

* ಪ್ರತಿಯೊಬ್ಬರೂ ಸ್ವತಂತ್ರ ತಾಣಗಳನ್ನು ಹೊಂದುವಂತಾಗಬೇಕು-ಆ ಮೂಲಕ ದೊಡ್ಡ ಕಂಪನಿಗಳ ಅವಲಂಬನೆ ತಪ್ಪಿಸಿಕೊಳ್ಳಬೇಕು.

* ಕರ್ನಾಟಕದ ಎಲ್ಲಾ ಭಾಗಗಳ ವಿದ್ಯಾವಂತರೂ ಬ್ಲಾಗುಗಳಿಗೆ ತೆರೆದುಕೊಳ್ಳುವಂತಾಗಬೇಕು.
ಕೊಡಗು, ಉತ್ತರ ಕರ್ನಾಟಕ ಮುಂತಾದ ಪ್ರದೇಶಗಳ ಜನರ ಬ್ಲಾಗುಗಳು ಬಹಳ ಕಡಿಮೆ. ಈಗಿನ ಅಂದಾಜಿನಂತೆ ಮಲೆನಾಡು-ಕರಾವಳಿ ಬ್ಲಾಗಿಗಳು ಜಾಸ್ತಿ ಸಂಖ್ಯೆಯಲ್ಲಿದ್ದಾರೆ.

* ಕನ್ನಡ ನೆಲದ , ಸಂಪದದಂತಹ ಪ್ರಯತ್ನಗಳನ್ನು ಇನ್ನಷ್ಟು ಬಲಗೊಳಿಸಬೇಕು.

* ಆರ್ಕುಟ್‌ನಂತಹ ತಾಣ ಕನ್ನಡಕ್ಕೆ ಬೇಕೆಂದುಕೊಂಡರೂ ಅದರ ಅಸಾಧ್ಯತೆಗಳ ಅರಿವಿರುವುದರಿಂದ ಇನ್ನುಳಿಕೆ ಕೆಲಸಗಳತ್ತ ತಂತ್ರಜ್ಞರ ಗಮನ ಹರಿಯಬೇಕು.

* Non unicode ಪರಿಸರಕ್ಕೆ unicode ಬ್ಲಾಗುಗಳು\ತಾಣಗಳು ತಲುಪಲಾಗದ ವಿಪರ್ಯಾಸ. ಅಷ್ಟರಮಟ್ಟಿಗೆ ಗ್ರಾಮೀಣರು ಬ್ಲಾಗಿನಿಂದ ದೂರ.

* ವಿವಿಧ ವಯೋಮಾನದವರ ಅಗತ್ಯಗಳ ಕುರಿತಾದ ಬ್ಲಾಗ್‌ಗಳು ಬರಲಿ. ಬಹಳ ಗಂಭೀರ ಸಲಹೆ. ಏಕೆಂದರೆ ಎಲ್ಲರಿಗೂ ದಟ್ಸ್‌ಕನ್ನಡ ಗ್ಯಾಲರಿ ತರದ್ದೆ ಬೇಕಾಗೋಲ್ಲ.

* Technology ಇರೋದು ಭಾಷೆಯನ್ನ ಉಳಿಸಿಕೊಳ್ಳುವುದಕ್ಕೆ-ಬಂಗಾರದಂತಹ ಮಾತು.

* ಕನ್ನಡ ಬ್ಲಾಗ್ ಕ್ರಾಂತಿಯ ಇಂದಿನ ದಿನಗಳಲ್ಲಿ ಬರಹ ವಾಸುರವರ ಕೊಡುಗೆಯನ್ನು ನೆನೆದದ್ದು(ಶ್ಯಾಂ ಮಾತುಗಳಲ್ಲಿ) ಅಷ್ಟರ ಮಟ್ಟಿಗೆ ಅವರಿಗೆ ಕೃತಜ್ಞತೆ ಸಲ್ಲಿಸಿದಂತೆ.

* ಕನ್ನಡಕ್ಕೆ OCR, speech to text, ಒಳ್ಳೆಯ search engine dictionary, ತುಂಗಾ ಫ್ಹಾಂಟ್ ಸಮಸ್ಯೆ ಮುಂತಾದ ಕನ್ನಡ ಕಂಪ್ಯೂಟಿಂಗ್‌ ಕುರಿತಂತೆ ಬಹಳಷ್ಟು ಬಾರಿ ಪ್ರಸ್ತಾಪಿತವಾದ ಬೇಡಿಕೆ-ಪ್ರಸ್ತಾವನೆಗಳು.( ಹರಿಯವರ ಮಾತುಗಳಲ್ಲಿ).

* ಕನ್ನಡದ ಮಾರ್ಕೆಟಿಂಗ್ ಸರಿಯಿಲ್ಲ. ಯಾವ ಬ್ಲಾಗಿಗಳೂ hitsಗಳಿಂದ ದುಡ್ಡು ಮಾಡ್ಬೋದು ಅನ್ನೋದರ ಕಡೆ ಗಮನ ಹರಿಸಿಲ್ಲದಿರುವುದು. ಆದ ಕಾರಣ ಕನ್ನಡ ಬ್ಲಾಗ್-ಜಾಹಿರಾತು ಲೋಕ ಹಿಂದೆ ಬಿದ್ದಿರುವುದು-non commercial art cenemaಗಳ ತರ.


ಇಷ್ಟೆಲ್ಲಾ ಚರ್ಚೆಯಾಯಿತೆ? ಅಂತಾ ಯೋಚಿಸುವಷ್ಟರಲ್ಲಿ-

ಶ್ಯಾಂ, ಅರೆ-ನಗ್ನ ಸುಂದರಿಯರು ತಂದು ಕೊಡುತ್ತಿರುವ hits ಬಗ್ಗೆ ಒಪ್ಪಿಕೊಂಡದ್ದು. ಹಾಗಿದ್ದರೆ ಇನ್ಮುಂದೆ ದಟ್ಸ್‌ಕನ್ನಡಕ್ಕೆ ಲಿಂಕ್ ಕೊಡೋವಾಗ "ಅರೆನಗ್ನ ಚಿತ್ರಗಳಿಗೆ ಕ್ಲಿಕ್ಕಿಸಿ" ಎಂದು ನಮ್ಮ ಬ್ಲಾಗ್‌ಗಳಲ್ಲಿ ಹಾಕಿಕೊಂಡರೆ ಹೇಗೆ ಎಂದು ನಾವು ನಾವೇ ಮಾತಾಡಿಕೊಂಡದ್ದು. ಮಾತನಾಡಿದ ಮಹನೀಯರೊಬ್ಬರು ತಮ್ಮ ಇಷ್ಟು ವರ್ಷಗಳ ಶ್ರಮ(?) ಹೇಳಿಕೊಂಡ ಮುಖಭಾವದಲ್ಲಿ ವ್ಯಕ್ತವಾಗುತ್ತಿದ್ದ ವ್ಯಂಗ್ಯ.
ನೆನಪು-ನೇವರಿಕೆಯ ಸಿಂಧು, ಲಿನಕ್ಸಾಯಣದ ಶಿವಪ್ರಕಾಶ್, ಸುನಿಲ್, ಭಾವಲೋಕದ ಹರೀಶ್, ಪಂಚ್‌ಲೈನ್ ಗಣೇಶ್, ಮಜಾವಾಣಿಯ ಸಂಪಾದಕರು ಮುಂತಾದವರಲ್ಲಿ ಕೆಲವರ ಮುಖ ನೋಡಿದ್ದು-ಒಂದಿಷ್ಟು ಪರಿಚಯ ಮಾಡಿಕೊಂಡದ್ದು. ಹರಿಯ ಒಳ್ಳೆ ಭಾವಚಿತ್ರ ತೆಗೆಯಲಾಗದೆ ಒದ್ದಾಡಿದ್ದು, ಅಮೇರಿಕದಿಂದ ವಿಕ್ರಮ್ ಹತ್ವಾರ್ ಮುಂತಾದ ಗೆಳೆಯರು ಬ್ಲಾಗೀ ಸಮಾವೇಶದ ಬಗ್ಗೆ ವಿಚಾರಿಸಿದ್ದು- ನನ್ನ ಕಡೆಯ highlights.

ಚೇತನಾ ಮುಂತಾದ ಅನೇಕ ಪ್ರಮುಖ ಬ್ಲಾಗಿಗಳು ಬಾರದಿದ್ದದ್ದು ಯಾಕೋ ಗೊತ್ತಿಲ್ಲ.

ಪ್ರಣತಿಯ ವಿಜಯ ಪ್ರಸನ್ನ, ಅರುಣ್, ಶ್ರೀನಿವಾಸ್, ಶ್ರೀನಿಧಿ, ಸುಶ್ರುತ ಮುಂತಾದವರಿಗೆ ನನ್ನ ಪ್ರೀತಿಪೂರ್ವಕ ಧನ್ಯವಾದ. ಅವರ ಪ್ರಯತ್ನ ಎಣೆಯಿಲ್ಲದ್ದು-ಆಕಾಶಕ್ಕೆ ಕಟ್ಟಿದ ದೀಪದ ಬುಟ್ಟಿಯಂತಹ ದಿವ್ಯತನದ್ದು.

ಸಿಗೋಣ
ಅರೇಹಳ್ಳಿ ರವಿ

13 comments:

ಅಮರ said...

ಪ್ರಿಯ ರವಿ ಅವರೇ,
"Informal ಆಗಬಹುದಿದ್ದ ಕಾರ್ಯಕ್ರಮ ಭಾಷಣಗಳಿಂದ formal ಆಗಿ ಹೋಗುತ್ತೆ" ಈ ನಿಮ್ಮ ಅನಿಸಿಕೆ ನಮ್ಮ ಸಹಮತವು ಇದೆ... ಎಲ್ಲ ಬ್ಲಾಗಿಗಳ ಪರಿಚಯ ಮಾಡಿಸುವ ಉದ್ದೆಶ ನಮ್ಮಲ್ಲಿ ಇತ್ತಾದರು ನಮಗೆ ಸಿಕ್ಕ ಸಮಯ ಬಹಳ ಕಡಿಮೆ. ಸಂಜೆ ೭ ಕ್ಕೆ ನಾವು ಸಭಾಂಗಣ ಖಾಲಿಮಾಡಬೇಕಿತ್ತು ಅದ್ದರಿಂದ ಕಾರ್ಯಕ್ರಮ ಬೇಗ ಮುಗಿಸಬೇಕಾಯಿತು. ನಿಮ್ಮ ಸಲಹೆ ಪ್ರೋತ್ಸಾಹಕ್ಕೆ ಧನ್ಯವಾದ.... ನಮ್ಮ ಮುಂದಿನ ಕಾರ್ಯಕ್ರಮ ನಿಮ್ಮೆಲ್ಲರ ಸಹಕಾರದಿಂದ ಇನ್ನೂ ಯಶಸ್ವಿಯಾಗಿ ಮಾಡೋಣ.

ಪ್ರಣತಿಯವತಿಯಿಂದ.
-ಅಮರ

hpn said...

ಈ ಕಾರ್ಯಕ್ರಮದ ಕುರಿತು ಇದುವರೆಗೂ ಬ್ಲಾಗ್ ಜಗತ್ತಿನಲ್ಲಿ ಬರೆಯಲ್ಪಟ್ಟ ರೌಂಡ್ ಅಪ್ ಗಳಲ್ಲಿ ಇದು ಬಹಳ ಸ್ವಷ್ಟವಾದ logಗಳಲ್ಲೊಂದು ಅನ್ನಿಸಿತು.

ಹೆಚ್ಚೇನೂ ಹೇಳದೆ ಪ್ರತಿಯೊಂದು ವಿಷಯವನ್ನೂ ಸರಳವಾಗಿ ಕವರ್ ಮಾಡಿದ್ದೀರಿ.

"ಕನ್ನಡ ಕತ್ತಲೆಗೆ ಬ್ಲಾಗೀ ಟಾರ್ಚು" ಕೂಡ ಪೂರಕವಾಗಿದೆ. ಆ ಬೆಳಕು ಚೆಲ್ಲಿದ 'ಪ್ರಣತಿ' ತಂಡದವರಿಗೆ ಅದರ ಸಂಪೂರ್ಣ ಕ್ರೆಡಿಟ್ಸ್ ಸಲ್ಲುತ್ತದೆ. :-)

'ಮೀಟ್' ಎಂದಿದ್ದಾಗ ಭಾಷಣಗಳು ಫಾರ್ಮಲ್ ಆಗುವುದು ನಿಜ. ನನಗೂ ಇಂತಹ ಭಾಷಣಗಳು ನೀಡಿ ಅಭ್ಯಾಸವಿಲ್ಲದ ಕಾರಣ, ಮೊದಲು informal ಚರ್ಚೆ ನಡೆಸಿಬಿಡೋಣವೆ ಅಂದುಕೊಂಡವನು ಮನಸ್ಸು ಬದಲಾಯಿಸಿ ಬರೆದಿಟ್ಟುಕೊಂಡದ್ದಕ್ಕೇ ಅಂಟಿಕೊಂಡು ಬೇಗಬೇಗನೆ ಮಾತು ಮುಗಿಸಿದೆ. :-)

ಮುಂದಿನ ಸಾರಿ ಪ್ರಣತಿ ಹಾಗೂ ಎಲ್ಲ ಆಸಕ್ತರೂ ಸೇರಿಕೊಂಡು informal ಆಗಿಯೇ ಬ್ಲಾಗರ್ಸ್ ಮೀಟ್ ಮಾಡೋಣ. ಆಗ ಇನ್ನೂ ಚೆಂದವಾಗಬಹುದು. :-)

Anonymous said...

ರವೀ,
ಚನ್ನಾಗಿ ಬರೆದಿದ್ದೀರಿ. ನಾನೂ ಸಹ ಭಾಷಣಗಳನ್ನು ಕೇಳದೇ ಸಮಯದ ಅಭಾವದಿಂದ ಬೇಗನೆ ಹೊರ ಹೋದೆ. ನಿಮ್ಮನ್ನು ಸರಿಯಾಗಿ ಮಾತನಾಡಿಸಲಾಗಲಿಲ್ಲ.
ಮತ್ತೆ ಸಿಗೋಣ.

CKR

Harisha - ಹರೀಶ said...

ರವಿಯವರೇ, ನಿಮ್ಮ point-wise ಟಿಪ್ಪಣಿಗಳು ಇಷ್ಟವಾದವು.. ಉತ್ತಮವಾಗಿ ವರದಿ ಮಾಡಿದ್ದೀರಿ

ಸುಪ್ತದೀಪ್ತಿ suptadeepti said...

ಬ್ಲಾಗರ್ಸ್ ಮೀಟ್ ಮಿಸ್ ಮಾಡಿಕೊಂಡೆ ಅನ್ನುವ ಕೊರಗಿನಲ್ಲಿ ಒಂದೊಂದೇ ವರದಿಗಳನ್ನು ಓದುತ್ತಾ ಇದ್ದಂತೆ ಅಲ್ಲಿಲ್ಲದೆಯೂ ಅದನ್ನೆಲ್ಲ ನೋಡಿದ, ಕೇಳಿದ ಹಾಗಾಗುತ್ತಿದೆ. ಓದಿದ ವರದಿಗಳಲ್ಲಿ ಇದು ಬಹುಮಟ್ಟಿಗೆ ಆಪ್ತ ಮತ್ತು ಸಂಪೂರ್ಣ ಅಂದುಕೊಂಡೆ. ಧನ್ಯವಾದಗಳು.
ಮುಂದಿನ ಮೀಟ್ ಯಾವಾಗ?

ಅರೇಹಳ್ಳಿ ರವಿ said...

ಗೆಳೆಯರೇ,
ಪ್ರತಿಕ್ರಿಯೆಗಳು ಅದ್ಭುತವಾಗಿವೆ. ಒಂದಕ್ಕಿಂತ ಒಂದು ಭಿನ್ನ. ಮುಂದಿನ ಮೀಟ್ ಮೊದಲ ಮಿಲನದ ಮೆಲುಕು ಮುಗಿಯುವಷ್ಟರಲ್ಲಿ.

ಶ್ಯಾಮ್ ರವರು ಕನ್ನಡದ ಬಹಳಷ್ಟು ಬ್ಲಾಗ್ಗಳು ಮಕ್ಕಳ canvas ತರಾ ಇವೆ ಅಂದದ್ದು ಬಹುಪಾಲು ನಿಜ. ಬರೆಯಲು ಬಾರದವರು, ಏನನ್ನಾದರೂ ಬರೀಬೇಕು ಅನ್ನೋ ಹುಮ್ಮಸ್ಸಿರುವವರು, ಬೇರೆಯವರು ಬರೀತಾರೆ ಅಂತ ಬರೆಯುವವರು ಇವರಿಗೆಲ್ಲಾ ಬ್ಲಾಗ್ ಒಂದು canvas ನಿಜ. ನಾನು ಕೆಲವು ಬರಹಗಳನ್ನು ಓದುವಾಗ ಅವುಗಳಲ್ಲಿ ಬಹಳಷ್ಟು kiddish ಅನ್ನಿಸಿದ್ದುಂಟು. ಊಟ ಮಾಡಿದ್ದು, ತಿಂಡಿ ತಿಂದಿದ್ದು, ಕಸಾ ಗುಡಿಸಿದ್ದು ಮುಂತಾದ ವಿವರಗಳನ್ನೆಲ್ಲಾ ಬರೆದುಕೊಳ್ಳೋದಕ್ಕೆ ಏನಂತೀರಿ? ಹಸಿವಿತ್ತು ಊಟ ಮಾಡಿದೆ ಅಂದರೆ ಸಾಕಲ್ಲ. ಹೇಗೆಲ್ಲಾ ಊಟ ಮಾಡಿದೆ ಅನ್ನೋದು ಬೇಕಾ?

ಇನ್ನೂ ಕೆಲವರು ಬರಹಗಳನ್ನು ಆಪ್ತವಾಗಿಸಲು ಹೋಗಿ ಹೀಗೆಲ್ಲಾ ಬರೀತಾರೆ ಅನ್ಸುತ್ತೆ. ಆಪ್ತತೆ ಅತಿಯಾಗಬಾರದು. ಅದು ಬರೆಯುವಾತ ಮತ್ತು
ಓದುವಾತನ ಕೊಂಡಿಯೊಂದನ್ನು ನಡುವೆ ಬೆಸೆಯುವಷ್ಟಿದ್ದರೆ ಸಾಕು.

ಬ್ಲಾಗ್ informative ಆಗಿದೆಯೆನ್ನಿಸಿದರೆ ಅದಕ್ಕೆ ಚೌಕಟ್ಟೇ ಬೇಕಿಲ್ಲ. ಅದು kiddish ಅನ್ನಿಸಿಕೊಳ್ಳೋದೆ ಇಲ್ಲ. ಅದು ಯಾವ canvas ನಲ್ಲಿದ್ದರೂ ಒಳ್ಳೇ ಕೃತಿಯಾಗಿ ಅರಳುತ್ತೆ.

ಆಮೇಲೆ ಬ್ಲಾಗೀ ಪ್ರಪಂಚದಲ್ಲಿ(ಬ್ಲಾಗೇತರ ಪರಿಸರದಲ್ಲೂ
) ಇರುವ ವಿಪರ್ಯಾಸ ತಾನು ಬರೆದದ್ದೆಲ್ಲ ಶ್ರೇಷ್ಟವೆಂದುಕೊಳ್ಳೋದು, ಇತರರು ಅದನ್ನು ಹೊಗಳಲಿ ಅಂದುಕೊಳ್ಳೋದು, ಅದನ್ನೇ ಪುಸ್ತಕವಾಗಿ ಪ್ರಕಟಿಸಿ ಬಿಡಲು ಪ್ರಯತ್ನ ಪಡೋದು(ಕೈಯ್ಯಲ್ಲಿ ದುಡ್ಡು ಓಡಾಡುತ್ತಿರುತ್ತೆ). ಇವೆಲ್ಲಾ ಬ್ಲಾಗ್ ಪ್ರಪಂಚ ತಂದಿಡಬಹುದಾದ ಸವಾಲುಗಳು.

ಆದರೆ ಇವೆಲ್ಲವುಗಳ ಮಧ್ಯೆ ಅವೇ kiddish ಬರಹಗಾರರ ನಡುವೆ ಒಳ್ಳೆಯ ಬರಹಗಾರನೊಬ್ಬ ಮೂಡಿ ಬರಲೂಬಹುದು.
So let us encourage it..

Anonymous said...

ರವಿ,
ಮೊದಲ ಬಾರಿಗೆ ನಿಮ್ಮ ಬ್ಲಾಗಿಗೆ ಇಣುಕುತ್ತ ಇದೇನೆ. ಶ್ರೀಯ ಬ್ಲಾಗಿನಲ್ಲಿ ನಿಮ್ಮ ಬಗ್ಗೆ ಓದಿದೆ. ಅವರ ಪೋಸ್ಟು ಕೂಡ ನಿಮ್ಮ ಲಾಗಿನಂತೆಯೆ ಸಮಗ್ರ ಚಿತ್ರಣ ನೀಡಿತು. ಮುಂದಿನ ಸಾರಿ ಮಾತಾಡಿಕೊಳ್ಳಲಿಕ್ಕೆ ಸುಮಾರು ವಿಷಯಗಳು ಸಿಕ್ಕಿದವು.
Way to go!
- ಟೀನಾ.

bhadra said...

ನಮಸ್ಕಾರ
ಇದೇ ಮೊದಲ ಬಾರಿಗೆ ನಿಮ್ಮ ಬ್ಲಾಗಿನ ಬಾಗಿಲನ್ನು ತುಳಿಯುತ್ತಿರುವೆ

ಬ್ಲಾಗಿಗರ ಮೀಟಿನ ಬಗ್ಗೆ ಅಚ್ಚುಕಟ್ಟಾಗಿ ಮತ್ತು ಸಮಗ್ರವಾಗಿ ನಿರೂಪಿಸಿದ್ದೀರಿ.
ಮುಂದಿನ ಮಿಲನಕ್ಕೆ ನಾನು ಬರುವೆ.

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆ

Anonymous said...

ನಮಸ್ತೇ ರವಿ,
ನಾನು ಗಂಭೀರ ಕಾರಣವೊಂದರಿಂದಾಗಿ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಉಳಿದೆಲ್ಲ ಬ್ಲಾಗುಗಳಲ್ಲಿ ಕಾರ್ಯಕ್ರಮದ ರಿಪೋರ್ಟ್ ಸಿಕ್ಕಿತ್ತು ನಿಜ, ಆದರೆ ನೀವು ಮಾಡಿದ ಟಿಪ್ಪಣಿಗಳು ಅದರ ಪೂರ್ಣ ಚಿತ್ರಣ ಕಟ್ಟಿಕೊಟ್ಟವು. ಅದಕ್ಕಾಗಿ ಧನ್ಯವಾದ.
ನಾನಂತೂ ಈ ಬಗೆಯ ಮತ್ತೊಂದು ಕಾರ್ಯಕ್ರಮಕ್ಕೆ ಕಾದಿದ್ದೇನೆ. ಬ್ಲಾಗ್ ಅನ್ನು ಗಂಭೀರವಾಗಿ ಪರಿಣಮಿಸುವ ಬಗ್ಗೆ ಒಂದಷ್ಟು ಚರ್ಚೆ, ಒಂದಷ್ಟು ವಾದ- ವಿವಾದ (!) ಎಲ್ಲ ನಡೆಸುವ ಆಸೆ ನಿಮ್ಮೊಂದಿಗೆ.
ಮತ್ತೆ , ಎಲ್ಲರೂ ಯಾವಾಗ ಸೇರೋಣ?

- ಚೇತನಾ ತೀರ್ಥಹಳ್ಳಿ

ಮೃಗನಯನೀ said...

ಛೆ ಮಿಸ್ ಮಾಡ್ಕೊಂಡೆ! ಅನ್ಕೊತಿರೊವಾಗ್ಲೇ ನಿಮ್ಮಗಳ bloggersmeetನ ಬಗೆಗಿನ ಅನಿಸಿಕೆ ಕಂ ವರ್ದಿ ಓದಿ ಅಲ್ಲಿಗೆ ಬಂದಷ್ಟೇ ಖುಷಿಯಾಯಿತು....

ವಿ.ರಾ.ಹೆ. said...

ಬ್ಲಾಗೀ ಮಿಲನದ ಫೋಟೋ ಆಲ್ಬಂ ಬಹಳ ಚೆನ್ನಾಗಿದೆ ರವಿಯವರೆ.

ನಿಮ್ಮ ವಸ್ತುನಿಷ್ಠ ವರದಿಯ ಮಧ್ಯೆ ಮಾತನಾಡಿದ ಮಹನೀಯರೊಬ್ಬರು ತಮ್ಮ ಇಷ್ಟು ವರ್ಷಗಳ ಶ್ರಮ(?) ಹೇಳಿಕೊಂಡ ಮುಖಭಾವದಲ್ಲಿ ವ್ಯಕ್ತವಾಗುತ್ತಿದ್ದ ವ್ಯಂಗ್ಯ.
ಎಂಬ ವಾಕ್ಯದಲ್ಲಿ ಪ್ರಶ್ನಾರ್ಥಕ ಚಿನ್ಹೆಯ ಅಗತ್ಯತೆ ತಿಳಿಯಲಿಲ್ಲ. ಆ ಮಹನೀಯರ್ಯಾರು? ಅವರ ಶ್ರಮ ಪ್ರಶ್ನಾರ್ಹವೋ ಅಥವಾ ನಿಮ್ಮ ಅರಿವು ಪ್ರಶ್ನಾರ್ಥಕವೋ?

Satish said...

ಸಾರ್, ೨೦೦೯ ರ ಏಪ್ರಿಲ್‌ನಲ್ಲಿ ಭಾರತಕ್ಕೆ ಬರ್ತೀವಿ, ಆಗ ಇನ್ನೊಂದ್ ಕಾರ್ಯಕ್ರಮ ಇಟ್ಟುಕೊಂಡರಾಗದೇ! ನಮಗೆ ಕಾರ್ಯಕ್ರಮದ ಆಹ್ವಾನವೇನೋ ಬಂತು, ನಿಮ್ಮಲ್ಲೆರಿಂದ ಬಹಳ ದೂರ ಇರೋದರ ಕಾರಣ ಬರಲಾಗಲಿಲ್ಲ.

Anonymous said...

ನನ್ನ ಹೆಸರು ಸತ್ಯಪ್ರಕಾಶ್ ಅಂತ. ನಾನೂ ಸಹಾ ನನ್ನ ಹೃದಯದ ಸ್ನೇಹಿತ ಅರುಣ್ ಅವನ ಆಹ್ವಾನದ ಮೇರೆಗೆ ಬ್ಲಾಗರ್ಸ್ ಮೀಟಿಂಗ್ ಗೆ ಬಂದಿದ್ದೆ. ನನಗಂತೂ ತುಂಬಾನೇ ಸಂತೋಷ ಆಯಿತು. ನಾನು ಈ ಅಂತರರ್ಜಾಲಕ್ಕೆ ಕಾಲಿಟ್ಟು ಹೋದ ತಿಂಗಳಿಗೆ ಎರಡು ವರ್ಷ ಆಯಿತು. ನನ್ನ ವಯಸ್ಸು ೬೯ ಆಗಿದ್ದರೂ ಕೂಡ technology ಲಿ ಬಹಳ ಆಸಕ್ತಿ.
ಈ ನಿಮ್ಮ ಲೇಖನ ತುಂಬಾನೇ ಚೆನ್ನಾಗಿದೆ.

ಜನಪ್ರಿಯ ಲೇಖನಗಳು