4.13.2008

ಹಣವೂ, ಹಸಿದ ಹೊಟ್ಟೆಗಳೂ, ಹಿಟ್ಲರನೂ ನೆನಪಾದಾಗ...

ದು ಮೊದಲ ಮಹಾಯುದ್ಧದ ನಂತರ ಕಾಲ. ಮಿತ್ರ ಸೇನೆಯ ಎದುರು ಹೀನಾಯವಾಗಿ ಸೋತ ಜರ್ಮನಿ ತನ್ನ ಭೂಭಾಗಗಳನ್ನು ಕಳೆದುಕೊಂಡಿದ್ದಲ್ಲದೆ, ಯುದ್ಧ ನಷ್ಟವೆಂದು ಅಪಾರವಾದ ವೆಚ್ಚವನ್ನು ಭರಿಸಬೇಕಾಯಿತು.
ಜರ್ಮನಿಯಲ್ಲೊಂದು ನೀರಸ ಹಗಲು ಆಕಳಿಸಿ ಮೈಮುರಿಯುತ್ತಿದ್ದ ವೇಳೆ. ಮಹಿಳೆಯೋರ್ವಳು ತನಗೆ ಸಂಬಳವಾಗಿ ಬಂದ ದೊಡ್ಡ ಮೊತ್ತದ ನೋಟುಗಳನ್ನು ಚರ್ಮದ ಬ್ಯಾಗಿನಲ್ಲಿ ತುಂಬಿಕೊಂಡು ಒಯ್ಯುತ್ತಿದ್ದಳು. ಮೊದಲೇ ಕಳ್ಳಕಾಕರ ಕಾಟ ವಿಪರೀತವಾಗಿದ್ದ ದಿನಗಳವು. ಮಂಜು ಮುಸುಕಿದ ಹಗಲು. ಇಡೀ ಬೀದಿ ನಿರ್ಮಾನುಷ್ಯವಾಗಿತ್ತು. ಆದರೆ ಈ ಮಹಿಳೆಗೆ ಅದ್ಯಾವುದರ ಭಯ ಇರಲಿಲ್ಲ. ಇರುವ ಹಣದಲ್ಲೇನೇನು ಕೊಳ್ಳಬಹುದು ಎಂಬ ಲೆಕ್ಕಾಚಾರದ ಅನ್ಯಮನಸ್ಕತೆ. ಶೌಚಕ್ಕೆ ಹೋಗಬೇಕೆನಿಸಿ ದಾರಿ ಪಕ್ಕದ ಶೌಚಾಲಯದತ್ತ ನಡೆದಳು. ಅಲ್ಲೇ ಟಾಯಿಲೆಟ್ಟಿನ ಹೊರಗೆ ಬೆಂಚಿನ ಮೇಲೆ ಬ್ಯಾಗ್ ಬಿಸಾಡಿದವಳೇ ಒಳಗೆ ನುಗ್ಗಿದಳು. ಅವಳು ಹೊರಗೆ ಬಂದಾಗ ಆಕೆಯ ಬ್ಯಾಗ್ ಕಳುವಾಗಿತ್ತು. ಆದ್ರೆ ಕಳ್ಳರು ಬ್ಯಾಗನ್ನು ಮಾತ್ರ ತಗೊಂಡು ಹಣವನ್ನು ಅಲ್ಲೇ ಬೆಂಚಿನ ಮೇಲೆ ಸುರಿದು ಹೋಗಿದ್ದರು. ಕಳ್ಳರಿಗೆ ಆ ಚರ್ಮದ ಬ್ಯಾಗು ಅಷ್ಟೊಂದು ಬೆಲೆಬಾಳುವಂತದ್ದಾಗಿತ್ತು. ಕರೆನ್ಸಿ ಅವರ ದೃಷ್ಟಿಯಲ್ಲಿ ಕಸಕ್ಕೆ ಸಮನಾಗಿತ್ತು.


ಕನ್ನಡಸಾಹಿತ್ಯ ಗುಂಪಿಗೆ ಸದಸ್ಯರಾಗಿ



ಇಂಥ ಹಲವು ಘಟನೆಗಳು ಜಾನ್ ಟೊಲ್ಯಾಂಡನ ಜರ್ಮನಿ ಕುರಿತ ಬರಹಗಳಲ್ಲಿ ದಾಖಲಾಗಿವೆ.

ಇಷ್ಟಕ್ಕೂ ಕಳ್ಳರಿಗೆ ಯಾಕೆ ಕರೆನ್ಸಿ ಬೇಡದ ವಸ್ತುವಾಗಿತ್ತು?

ಅದು ಹಣದುಬ್ಬರದ ಪರಿಣಾಮ!

ಜರ್ಮನಿಯ ಯುದ್ಧಾನಂತರದ ದುಸ್ತರ ದಿನಗಳವು. ಯಾವ ದೇಶವೂ ಜರ್ಮನಿಯನ್ನು ಆರ್ಥಿಕವಾಗಿ ಮೇಲೆತ್ತಲು ಸಹಕಾರ ನೀಡಲು ಸಿದ್ಧರಿರದ ಕಾಲ. ಕಾರಣ ಹಲವಾರು ವರ್ಷಗಳು ಯುದ್ಧದಲ್ಲೇ ತೊಡಗಿಕೊಂಡದ್ದರಿಂದ ಬಹುತೇಕ ರಾಷ್ಟ್ರಗಳ ಆರ್ಥಿಕತೆ ಹದಗೆಟ್ಟು ಹೋಗಿತ್ತು. ಹಣದುಬ್ಬರವೆಂಬುದು ಜರ್ಮನಿಯಲ್ಲಿ ಮುಗಿಲು ಮುಟ್ಟಿತ್ತು. ಕರೆನ್ಸಿ ಬೆಲೆ ಕಳೆದುಕೊಂಡಿತ್ತು.

ಇಂಥಹ ದುಸ್ಥಿತಿಯಿಂದ ಜರ್ಮನಿ ಪಾರಾಗಲು ಒಬ್ಬ ಹಿಟ್ಲರ್ ಹುಟ್ಟಿಬರಬೇಕಾಯಿತು.
ಹಿಟ್ಲರನ ಬಿಗಿ ನಿಲುವುಗಳು, ದೇಶವನ್ನು ಸಧೃಡಗೊಳಿಸುವಲ್ಲಿ ಅವನಿಗಿದ್ದ ಕಾಳಜಿಗಳು ಜರ್ಮನಿ ಕೆಲವೇ ವರ್ಷಗಳಲ್ಲಿ ಸುಧಾರಿಸಿಕೊಳ್ಳಲು ನೆರವಾದವು. ಜರ್ಮನಿಯ ಪ್ರತಿ ಪ್ರಜೆಯನ್ನು ದುಡಿಯಲು ಹಚ್ಚಿದ ಹಿಟ್ಲರ್ ಮುರಿದು ಬಿದ್ದ ಸಾಮ್ರಾಜ್ಯಕ್ಕೆ ಕಾಯಕಲ್ಪ ನೀಡಿ ಇಡೀ ಪ್ರಪಂಚಕ್ಕೆ ಸಡ್ಡು ಹೊಡೆದು ನಿಂತಿದ್ದು-ನಮಗೆಲ್ಲ ಗೊತ್ತಿರುವುದೇ.

ಇತ್ತ ದಿನನಿತ್ಯ ಮಾಧ್ಯಮಗಳಲ್ಲಿ ಕಮ್ಯೂನಿಸ್ಟ್ ರಾಷ್ಟ್ರ ಜಿಂಬಾಬ್ವೆಯ ಆರ್ಥಿಕ ಅಧೋಗತಿಯ ವರದಿಗಳನ್ನು ಕೇಳುತ್ತಿದ್ದೇವೆ. ಅಲ್ಲೀಗ ಹಣದುಬ್ಬರ ಒಂದೂವರೆ ಲಕ್ಷ ಪಟ್ಟು ಜಾಸ್ತಿಯಾಗಿದೆ. ಅದು ತೀರ ಮೊನ್ನೆ ಫೆಬ್ರವರಿಯಲ್ಲಿ ಒಂದು ಲಕ್ಷ ಪಟ್ಟಿನಷ್ಟಿತ್ತು. ಸಣ್ಣ ಪುಟ್ಟ ಮೊತ್ತದ ಮುಖಬೆಲೆಯ ನೋಟುಗಳಿಗೆ ಅಲ್ಲೀಗ ಬೆಲೆಯಿಲ್ಲ. ಇಂಥ ಪರಿಸ್ಥಿತಿಯನ್ನು ಎದುರಿಸಲು ಜಿಂಬಾಬ್ವೆ ಸರ್ಕಾರ ೫೦೦೦೦೦೦ ಡಾಲರ್ ಮುಖಬೆಲೆಯ ನೋಟನ್ನು ಬಿಡುಗಡೆ ಮಾಡಿದೆ. ಇಷ್ಟಾದರೂ ಅಂತರರಾಷ್ಟ್ರೀಯವಾಗಿ ಈ ನೋಟಿನ ಬೆಲೆಯಾದರೂ ಎಷ್ಟು ಗೊತ್ತೆ? ಕೇವಲ ಒಂದೂ ಕಾಲು ಅಮೇರಿಕನ್ ಡಾಲರ್‌ಗಳು!

ಕಡಿಮೆ ಮುಖಬೆಲೆಯ ನೋಟುಗಳು ಅಲ್ಲೀಗ ಕಸದ ತೊಟ್ಟಿಯ ಪಾಲು. ಅವು ಮಕ್ಕಳಿಗೆ ಆಟದ ವಸುವಾಗಿವೆ.

ಅಲ್ಲೀಗ ದೊಡ್ಡ ದೊಡ್ಡ ಮಾಲ್‍ಗಳ Rackಗಳಲ್ಲಿ ಆಹಾರ ಧಾನ್ಯದ ಪೊಟ್ಟಣಗಳಿಲ್ಲ. ಅಂಗಡಿ ಬೀದಿಗಳು ನಿರ್ಮಾನುಷ್ಯ. ನಮ್ಮವರೇ ಗುಜರಾತಿ ವಣಿಕರು ಅಲ್ಲೀಗ ಅಂಗಡಿ ತೆರೆದಿಟ್ಟು ನೊಣ ಹೊಡೆಯುವಂತಾಗಿದೆ. ಆಹಾರ ಧಾನ್ಯಗಳ ಉತ್ಪಾದನೆ ದಾಖಲೆ ಪ್ರಮಾಣದಲ್ಲಿ ಕುಸಿದಿದೆ. ಕನಿಷ್ಟ ತನ್ನ ಪ್ರಜೆಗಳಿಗಾಗುವಷ್ಟಾದರೂ ಆಹಾರಧಾನ್ಯಗಳ ಉತ್ಪಾದನೆಯಿಲ್ಲ. ಇದು ಅಲ್ಲಿನ ಹಣದುಬ್ಬರಕ್ಕೆ ಪ್ರಮುಖ ಕಾರಣಗಳಲ್ಲೊಂದು.

ಅಲ್ಲಿನ ಜನರಿಗೆ ಸದ್ಯಕ್ಕೆ ಯಾವುದನ್ನು ಕೊಂಡುಕೊಳ್ಳುವ ಅವಕಾಶವಿಲ್ಲ. ಅವರ ಉದ್ದೇಶವೊಂದೇ ಸಾಧ್ಯವಾದಷ್ಟೂ ದವಸವನ್ನು ಕೊಂಡು ಸಂಗ್ರಹಿಸುವುದು. ಯಾರಿಗೆ ಗೊತ್ತು-ನಾಳೆ ಯಾವ ಬೆಲೆ ಇರುತ್ತದೋ...? ಇರುವ ದುಡ್ಡಿನಲ್ಲಿ ಸದ್ಯಕ್ಕೆ ಊಟದ ವಿಷಯ ನೋಡಿಕೊಳ್ಳೋಣ ಎಂಬ ಮನೋಭಾವ ಅಲ್ಲಿನವರದು. ಅಲ್ಲಿನ ಆಹಾರ ಧಾನ್ಯಗಳ ಕೊರತೆ ೩,೬೦ ೦೦೦ ಟನ್ನುಗಳು.
೩೦ ಪೌಂಡುಗಳ ಆಲೂಗಡ್ಡೆ ಬ್ಯಾಗ್‌ಗೆ ಇನ್ನೂರು ಮಿಲಿಯನ್ ಡಾಲರ್‌ಗಳು! ೫೦ ಮಿಲಿಯನ್ ಡಾಲರ್ ನೋಟಿಗೆ ಸಿಗೋದು ಮೂರೇ ಮೂರು ಪೀಸು ಬ್ರೆಡ್ಡು. ಅಲ್ಲೀಗ ಎಲ್ಲರೂ ಮಿಲಿಯನೇರ್‌ಗಳೇ!

ಆದರೆ ಕಡು ಬಡವರು.

ಜನಸಂಖ್ಯೆ ಒಂದೂವರೆ ಕೋಟಿ. ಬಡತನದ ಜೊತೆಗೆ ಏಡ್ಸ್ ರೋಗ ಇಲ್ಲಿನ ಜನಸಂಖ್ಯೆಯನ್ನು ಇಳಿಮುಖವಾಗಿ ತಳ್ಳುತ್ತಿದೆ. ವಿದೇಶಗಳಿಂದ ಬರುವ ಸಹಾಯ ಯಾತಕ್ಕೂ ಸಾಲುತ್ತಿಲ್ಲ. ಜಿಂಬಾಬ್ವೆಯ ಸುಧಾರಣೆಗೆ ಹಿಟ್ಲರ್‌ನಂತವರು ‍ಯಾರೂ ಇಲ್ಲ. ಅಲ್ಲೀಗ ಮುಗಾಬೆಯ ದರ್ಬಾರು. ಅಧ್ಯಕ್ಷ ರಾಬರ್ಟ್ ಮುಗಾಬೆಯ ದುರಾಡಳಿತದ ಫಲ ಈ ಬಡತನ. ಬ್ರಿಟೀಷರ ವಸಾಹತು ರೊಡೇಷಿಯ ೧೯೮೦ರಲ್ಲಿ ಸ್ವತಂತ್ರವಾಗಿ ಜಿಂಬಾಬ್ವೆ ಎಂಬ ಹೆಸರಿನಲ್ಲಿ ಕಮ್ಯೂನಿಸ್ಟ್ ರಾಷ್ಟ್ರವಾದಂದಿನಿಂದ ಅರಂಭವಾದ ಅಲ್ಲಿನ ಜನರ ದುರ್ದೆಸೆ ೨೫ ವರ್ಷಗಳ ನಂತರವೂ ನಿಂತಿಲ್ಲ

ಹೆಚ್ಚೂ ಕಮ್ಮಿ ಇದೇ ಪರಿಸ್ಥಿತಿ ಯುದ್ಧ-ಭಯೋತ್ಪಾದನೆಯಿಂದ ಕಂಗೆಟ್ಟಿರುವ ಪ್ರಪಂಚದ ಹಣದುಬ್ಬರದಲ್ಲಿ ಎರಡನೇ ಸ್ಥಾನದಲ್ಲಿರುವ ಇರಾಕ್‌ನಲ್ಲೂ ಇದೆ.
*******************************---------------------------*****************

ಇವೆಲ್ಲಾ ವಿಚಾರಗಳು ಮನಕ್ಕೆ ತಾಕುವಷ್ಟರಲ್ಲಿ-ಇಲ್ಲಿ ಬೆಂಗಳೂರಿನಲ್ಲಿ ನನ್ನ ಗೆಳೆಯರನೇಕರು ತಿಂಗಳಿಗೆ ೫೦ ಸಾವಿರದಿಂದ ಒಂದು ಲಕ್ಷದವರೆಗೂ ಸಂಪಾದಿಸುತ್ತಾರೆ. ನನ್ನ ಸಂಬಳಕ್ಕೂ, ಅವರ ಸಂಬಳಕ್ಕೂ ಅಜಗಜಾಂತರ. ಆದರೂ ನನಗಿರಬಹುದಾದ\ಇನ್ನೂ ಹೆಚ್ಚಿನ ಸಮಸ್ಯೆಗಳು ಅವರಿಗೂ ಇವೆ. ತಿಂಗಳ ಕೊನೆಯಲ್ಲಿ ದುರ್ಭರ. ಜೀವನ ಶೈಲಿಯಲ್ಲಿ ಬದಲಾವಣೆ ಇರುವುದು ಬೇರೆ ಮಾತು.

ಐದಾರು ವರ್ಷಗಳ ಹಿಂದೆ ೪೦-೫೦ ಸಾವಿರ ಸಂಬಳವೆಂದರೆ ಹುಬ್ಬೇರಿಸುವಂತಾಗುತ್ತಿತ್ತು. ಈವತ್ತು ಅದು ಸಾಮಾನ್ಯ ಮೊತ್ತದಂತಾಗಿದೆ. ಗಂಡ ಹೆಂಡತಿ ಇಬ್ಬರೂ ಕೆಲಸ ಮಾಡಿದರೂ ಒಂದು ಮನೆ ಕೊಳ್ಳಲಾಗದ ಪರಿಸ್ಥಿತಿಗೆ ನಮ್ಮನ್ನು ದೂಡಿಕೊಂಡಿದ್ದೇವೆ.
ನಿಮಗೂ ಗೊತ್ತಿರಬಹುದು, ಬ್ಯಾಂಕ್ ಸಾಲದಲ್ಲಿ ಮನೆ ಕೊಂಡರೂ ಇಪ್ಪತ್ತು ಇಪ್ಪತ್ತೈದು ವರ್ಷಗಳವರೆಗೂ ಅದು ನಮ್ಮ ಆಸ್ತಿಯಲ್ಲ. ಕಂತು ಮುಗಿಯುವಷ್ಟರಲ್ಲಿ ನಮ್ಮ ಜೀವನದ ಕಂತುಗಳೇ ಮುಗಿಯುವ ಹಂತಕ್ಕೆ ಬಂದಿರುತ್ತೇವೆ. ಹತ್ತು ಹದಿನೈದು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಏಳೆಂಟು ಸಾವಿರ ಸಂಬಳ ಪಡೆಯುತ್ತಿದ್ದವನೂ ಎಂಥದ್ದೊ ಒಂದು ಸೂರು ಮಾಡಿಕೊಳ್ಳುತ್ತಿದ್ದ.

ಇದು ಐಟಿ, ಬಿಪಿಒ, ಸರ್ಕಾರಿ ಉದ್ಯೋಗಿಗಳ ಕುರಿತಾದರೆ, ಬೆಂಗಳೂರಿನ ರಕ್ತನಾಡಿಗಳಂತಿರುವ ಗಾರ್ಮೆಂಟ್ ಕಾರ್ಖಾನೆಗಳಲ್ಲಿ ದುಡಿಯುವ ಲಕ್ಷಾಂತರ ಮಂದಿಯತ್ತಲೂ ನೋಡಿದರೆ-

ಅವರಿಗೆ ಬೆಂಗಳೂರು ಈಗ ಸಹನೀಯವಾಗುಳಿದಿಲ್ಲ. ಬೆಲೆ ಏರಿಕೆಗೆ ಮೊದಲ ಬಲಿಗಳು ಇದೇ ಗಾರ್ಮೆಂಟ್ ಕಾರ್ಮಿಕರು. ಕನಿಷ್ಟವೆನಿಸುವ ೨-೩ ಸಾವಿರ ಸಂಬಳ ಪಡೆಯುವ ಗಾರ್ಮೆಂಟ್ ಕಾರ್ಮಿಕರು ಕೊಬ್ಬಿದ ಸಂಬಳದ ಬೆಂಗಳೂರಿನ ಇನ್ನೊಂದು ವರ್ಗದ ಜನರ ದುಂದು ವೆಚ್ಚದ ಜೊತೆ ಸೆಣಸಲಾಗದೆ ಹೆಣಗಾಡುತ್ತಿದ್ದಾರೆ. ಅವರಿಗೆ ಬಿಎಂಟಿಸಿ ಬಸ್ಸು ಹತ್ತಲೂ ಹಣ ಸಾಲದೆ ಟೆಂಪೋ, ಲಾರಿ, ಖಾಸಗಿ ಬಸ್ಸುಗಳಲ್ಲಿ ತೂರಿನಿಂತು ನೇತಾಡುತ್ತಾ ಪ್ರಯಾಣಿಸಿ ಗಮ್ಯ ತಲುಪಬೇಕಾದ ನಿಕೃಷ್ಟ ನಿರಂತರತೆ. ಬಾಡಿಗೆಯ ಬಿಸಿ ಕಡಿಮೆ ಮಾಡಿಕೊಳ್ಳಲು ಇರುಕು ಕೋಣೆಗಳ ಮನೆಗಳಲ್ಲಿ ಪ್ರಾಣಿಗಳಂತೆ ಬದುಕಬೇಕಾದ ಅನಿವಾರ್ಯತೆ. ಇದೆಲ್ಲಾ ಬೇಡ ಬಿಟ್ಟು ಹೋಗಿ ಹಳ್ಳಿಗಳಲ್ಲಿ ಬೇಸಾಯ ಮಾಡಿಕೊಂಡಿರೋಣವೆಂದರೆ, ನಮ್ಮ ನಗರ ಕೇಂದ್ರಿತ ವ್ಯವಸ್ಥೆ ಹಳ್ಳಿಗಳನ್ನು ಭೂಮಿಯ ಮೇಲಿನ ನರಕವನ್ನಾಗಿಸಿ ನಗುತ್ತಿದೆ. ಹಳ್ಳಿಗಳೀಗ ಮುದುಕರು ಮತ್ತು ಅಸಹಾಯಕರೂ ಇರಬಹುದಾದ ನಿರಾಶ್ರಿತ ಶಿಬಿರಗಳು.

ಮೂರ್ನಾಲ್ಕು ವರ್ಷಗಳ ಹಿಂದೆ ನೂರು, ಐನೂರರ ನೋಟುಗಳನ್ನು ಚೆನ್ನಾಗಿ ಪರೀಕ್ಷಿಸಿಯೇ ತೆಗೆದುಕೊಳ್ಳುತ್ತಿದ್ದರು.
ಇವತ್ತೇನಾಗಿದೆ ನೋಡಿ-ನೀವು ಸಾವಿರದ ನೋಟನ್ನು ಕೊಟ್ಟರೂ ಯಾರೂ ಪರೀಕ್ಷಿಸೋ ಗೋಜಿಗೆ ಹೋಗೋಲ್ಲ. ಮತ್ತೆ ಸಾವಿರದ\ಐನೂರರ ನೋಟಾ! ಚಿಲ್ಲರೆ ಇಲ್ಲ ಹೋಗಿ ಎಂಬ ಉದ್ಗಾರಗಳು ನಿಂತುಹೋಗಿವೆ. ೨೫-೫೦ ಪೈಸೆ ನಾಣ್ಯಗಳು ಹೆಚ್ಚೂ ಕಮ್ಮಿ ಚಲಾವಣೆ ಕಳೆದುಕೊಂಡಿವೆ. ಯಥಾಪ್ರಕಾರ ನಾವು ಕಾಲ ಕೆಟ್ಟು ಹೋಯಿತು ಅಂತ ಗೊಣಗಾಡುತ್ತ ನಿಡುಸುಯ್ಯುತ್ತಿರುತ್ತೇವೆ.

ಹೇಳಿ ಜರ್ಮನಿ, ಜಿಂಬಾಬ್ವೆ, ಇರಾಕ್‌ಗಳಲ್ಲಿ ಪರಿಸ್ಥಿತಿಗೆ ನಾವು ಬಹಳ ಹತ್ತಿರವಾಗಿದ್ದೇವೆ ಅನಿಸುತ್ತಿಲ್ಲವೆ. ದಪ್ಪ ಸಂಬಳದ ಒಂದು ವರ್ಗವನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ರೂಪಿತಗೊಳ್ಳುತ್ತಿರುವ ನಮ್ಮ ಅಭಿವೃದ್ಧಿ ಯೋಜನೆಗಳು ಯಾವಾಗ ಜೀವನ್ಮುಖಿಯಾಗುವುದು...?

ಮತ್ತೊಬ್ಬ ಹಿಟ್ಲರ್ ಭಾರತದಲ್ಲೇ ಹುಟ್ಟಲಿ ಅನಿಸುತ್ತಿಲ್ಲವೆ?


**********************----------------------------******************************

ಒಂದು ಟಿಪ್ಪಣಿ:

ಭಾರತದಲ್ಲೀಗ ಅಗತ್ಯ ವಸ್ತುಗಳ ಬೆಲೆಗಳು ಗಗನ ಮುಟ್ಟುತ್ತಿವೆ. ಗೋಧಿ, ಅಕ್ಕಿ, ಎಣ್ಣೆ ಪದಾರ್ಥಗಳು, ತರಕಾರಿಗಳು ಹೀಗೆ ಯಾವುದೂ ಬೆಲೆ ಏರಿಕೆಯಿಂದ ಪಾರಾಗಿಲ್ಲ.ಕಳೆದ ಎಂಟು ವಾರಗಳಿಂದ ಹಣದುಬ್ಬರ ನಿರಂತರವಾಗಿ ಏರುತ್ತಿದೆ. ಕಳೆದ ವಾರ ೭%ನಲ್ಲಿದ್ದದ್ದು ಈ ವಾರ ೭.೪೧% ರಷ್ಟಾಗಿದೆ. ಮೂರೇ ಮೂರು ತಿಂಗಳಲ್ಲಿ ಅದು ದುಪ್ಪಟ್ಟಾಗಿದೆ. ಬೆಲೆ ಏರಿಕೆಯ ಬಿಸಿ ಮೊದಲಿಗೆ ತಟ್ಟೋದು ಬಡಜನತೆ ಮೇಲೆ.

ಕೇಂದ್ರ ಮಂತ್ರಿ ಕಪಿಲ್ ಸಿಬಲ್ ಹಣದುಬ್ಬರ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸುತ್ತಾ "ಬೆಲೆ ಏರಿಕೆ ನಿಗ್ರಹಿಸಲು ನಮ್ಮ ಬಳಿ ಮಂತ್ರದಂಡ ಇಲ್ಲ" ಅನ್ನುತ್ತಾರೆ. ಹಾಗನ್ನುತ್ತಾ ತಮ್ಮ ಹೊಣೆಗೇಡಿತನವನ್ನೂ, ಅಸಹಾಯಕತೆಯನ್ನೊ ಸಮರ್ಥಿಸಿಕೊಳ್ಳುತ್ತಾರೆ.ಸದ್ಯದ ಹಣದುಬ್ಬರ ಜಾಗತಿಕ ವಿದ್ಯಮಾನ ಎಂದು ಮಾಜಿ ಆರ್ಥಶಾಸ್ತ್ರಜ್ಞ(!) ಮನಮೋಹನ ಸಿಂಗರೂ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ನಾಚಿಕೆಗೇಡು!

ಸಧ್ಯದ ಸ್ಥಿತಿ ನೋಡಿದರೆ ಪರಿಸ್ಥಿತಿ ಸರ್ಕಾರದ ಕೈಮೀರಿದೆಯೇ ಎಂಬ ಅನುಮಾನ ಮೂಡದಿರದು. ಇದೆಲ್ಲದರ ಮಧ್ಯೆ ಸರ್ಕಾರದಲ್ಲಿ ಪಾಲ್ಗೊಂಡು ಅಧಿಕಾರದ ಸವಿಯುಣ್ಣುತ್ತಿರುವ ಸಿಪಿಎಂ-ಸರ್ಕಾರ ಹಣದುಬ್ಬರ ನಿಯಂತ್ರಿಸದಿದ್ದರೆ ಹೋರಾಟ ಮಾಡುತ್ತೇವೆ ಎಂದು ಸೋಗಲಾಡಿತನದ ಬೆದರಿಕೆ ಹಾಕುತ್ತವೆ.

ಯಾರು ಕಾರಣ ಹಣದುಬ್ಬರಕ್ಕೆ?-ಪ್ರಶ್ನೆ ದುತ್ತೆಂದು ನಿಲ್ಲುತ್ತದೆ.

ಸಂಖ್ಯಾದೃಷ್ಟಿಯಲ್ಲಿ ೭.೪೧% ಹಣದುಬ್ಬರ ಕಡಿಮೆಯೆನಿಸುವಂತೆ ಕಂಡರೂ ಜಿಂಬಾಬ್ವೆಯ ಪರಿಸ್ಠಿತಿಯನ್ನು ಪಕ್ಕಕ್ಕಿಟ್ಟು ನೋಡಿದರೆ ಆತಂಕವಾಗೋದು ಸಹಜ.

ಇಷ್ಟಕ್ಕೂ ಭಾರತದ ಹಣದುಬ್ಬರಕ್ಕೆ ಕಾರಣಗಳೇನು?- ಇದು ಇವತ್ತಿನ ಆರ್ಥಿಕ ತಜ್ಞರನ್ನು ಕಾಡುತ್ತಿರುವ ಪ್ರಶ್ನೆ. ಒಬ್ಬೊಬ್ಬರದೂ ಒಂದೊಂದು ತರ್ಕ-ವಾದ.

ಹಣದುಬ್ಬರಕ್ಕೆ ಕಾರಣಗಳನ್ನು ಈ ರೀತಿ ಪಟ್ಟಿ ಮಾಡಬಹುದು:

೧. ಆಹಾರ ಧಾನ್ಯಗಳ ಉತ್ಪಾದನೆಯಲ್ಲಾಗುವ ಇಳಿಕೆ.

೨.ಅಂಕೆಯಿಲ್ಲದಂತೆ ಏರಿಕೆಯಾಗುತ್ತಿರುವ ಒಂದು ವರ್ಗದ ಸಂಬಳ-ಭತ್ಯೆ(ಮುಖ್ಯವಾಗಿ ಕೇಂದ್ರ ಸರ್ಕಾರಿ ನೌಕರರು, ಐಟಿ, ಬಿಪಿಒ ಉದ್ಯೋಗಿಗಳು). ಸರ್ಕಾರಿ ನೌಕರರಿಗಂತೂ ತುಟ್ಟಿ ಭತ್ಯೆಯ ಅನುಕೂಲವೇ ಇದೆ. ಇದು ಒಂದು ಬಗೆಯಲ್ಲಿ ಬೆಲೆ ಏರಿಕೆಗೆ ಕಾರಣ.

೩. ಹಣದುಬ್ಬರದಲ್ಲಿ ಆಯಾತ-ನಿರ್ಯಾತಗಳ ಪಾಲು ಜಾಸ್ತಿ. ಅಗತ್ಯ ವಸ್ತುಗಳ ಮಿತಿಮೀರಿದ ರಫ್ತು ಮತ್ತು ಭೋಗದ ವಸ್ತುಗಳ ಅಧಿಕ ಆಮದು ಹಣದುಬ್ಬರಕ್ಕೆ ಕಾರಣವಾಗಬಹುದು.

೪. ದೊಡ್ಡ ದೊಡ್ಡ ಕಂಪನಿಗಳು ಮಾರುಕಟ್ಟೆಯ ದೈತ್ಯ ಶಕ್ತಿಗಳು ಅಗತ್ಯ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸುವುದು.
ಉತ್ತರ ಪ್ರದೇಶ, ಪಂಜಾಬ್, ಆಂಧ್ರ ಪ್ರದೇಶ ಮುಂತಾದ ಕಡೆ ದೊಡ್ಡ ದೊಡ್ಡ ಕಂಪನಿಗಳೇ ಅಕ್ರಮವಾಗಿ ಗೋಧಿ ಮತ್ತು ಅಕ್ಕಿಯನ್ನು ರೈತರಿಂದ ಕೊಂಡು ಸಂಗ್ರಹಿಸುತ್ತಿರುವುದನ್ನು ಸರ್ಕಾರವೇ ಒಪ್ಪಿಕೊಂಡಿದೆ. ಆದಾಗ್ಯೂ ಸರ್ಕಾರಗಳು ಅಲ್ಲಿ ನಡೆಯುತ್ತಿರಬಹುದಾದ ಅಕ್ರಮಗಳನ್ನು ಪತ್ತೆ ಹಚ್ಚುವ ಗೊಡವೆಗೇ ಹೋಗುವುದಿಲ್ಲ.

೫. ದೇಶದ ಆಂತರಿಕ ಉತ್ಪಾದನೆ ಕುಸಿದು ವಿತ್ತೀಯ ಕೊರತೆ ನಿವಾರಣೆಗೆ ದೇಶ ಸಾಲದ ಸುಳಿಗೆ ಸಿಕ್ಕೋದು.

೬. ದೇಶದ ಖಜಾನೆಯಲ್ಲಿ ಹಣವಿರದಿದ್ದರೂ ಚುನಾವಣಾ ಉದ್ದೇಶಗಳಿಗಾಗಿ ಹೊಸ ಹೊಸ ಜನಾಕರ್ಷಕ ಯೋಜನೆಗಳನ್ನು ಅನುಷ್ಠಾನಗೊಳಿಸುವುದು.

೭. ಮುಂದಾಲೋಚನೆಯಿಲ್ಲದ ಆರ್ಥಿಕ ಯೋಜನೆಗಳು-ಅದನ್ನು ನಿಭಾಯಿಸುವಲ್ಲಿ ಸರ್ಕಾರದ ಇಲಾಖೆಗಳ ಅಸಹಕಾರ.

೮. ಪೆಟ್ರೋಲಿಯಂ ವಸ್ತುಗಳ ಮೇಲಿನ ಅತಿಯಾದ ಅವಲಂಬನೆ ಮತ್ತು ಅವುಗಳ ಏರುಮುಖೀ ಬೆಲೆಗಳು.

೯. ನಕಲಿ ನೋಟು ಚಲಾವಣೆ

೧೦. ಕಪ್ಪು ಹಣದ ಕ್ರೋಢೀಕರಣ.

ಇಷ್ಟೆಲ್ಲಾ ಆದ ಮೇಲೂ ಹಣದುಬ್ಬರದ ಬಗೆಗೆ ಹಣಕಾಸು ತಜ್ಞರಲ್ಲೇ ಭಿನ್ನಮತಗಳಿವೆ. ಇರಲಿ, ಅದು ಸಹಜ.

12 comments:

Harisha - ಹರೀಶ said...

ರವಿ, ಸೂಪರ್-ಮಾರ್ಕೆಟ್ ಗಳಿಗೆ ಜನ ಮುಗಿ ಬೀಳುವ ಪರಿ ನೋಡಿದರೆ ಬೆಳೆ ಏರಿಕೆಗೆ ನಾವೇ ಕಾರಣರು ಎನ್ನಿಸುವುದಿಲ್ಲವೇ? ಜನ ಮರುಳೋ ಜಾತ್ರೆ ಮರುಳೋ ಎನ್ನುವುದು ಇದಕ್ಕೆ ಇರಬೇಕು.

Pramod P T said...

ಹೌದು ರವಿ..ಅನುಭವ ಆಗ್ತಾ ಇದೆ.
6-7 ಸಾವಿರಕ್ಕೆ ಸುಮಾರಾಗಿರೊ ಮನೆ ಸಿಗ್ತಿಲ್ಲಾ.ಅಂಗಡಿಗಳಲ್ಲಿ ಎರಡು ರೂಪಾಯಿ note ನ ತಗೊಳ್ತಾ ಇಲ್ಲಾ..ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ..

H.S. Prabhakara said...

Ravi, blog tumba chennagide. Tumba mahiti purnavagide. Eega nanu Odida `hanavu, hasida hottegalu... lekhanavantu kannu teresuvantide. Intaha lekhanagalanne hechu nirikshisuvantagide. Dhanyavadagalu, H.S.P, S.K., Hassan

ಸುಪ್ತದೀಪ್ತಿ suptadeepti said...

ಒಳ್ಳೆಯ ಲೇಖನ ರವಿಯವರೇ. ಇಂಥ ಸನ್ನಿವೇಶಕ್ಕೆ ನಾವು- ನಾಗರಿಕರು- ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕು? ಇದನ್ನು ಸುಧಾರಿಸಲು ನಾವೇನು ಮಾಡಬಹುದು?

+ಹಳ್ಳಿಯ ಯುವಕರನ್ನು ಹುರಿದುಂಬಿಸಿ ಅವರ ಹಳ್ಳಿಯಲ್ಲೇ ಸ್ವಾವಲಂಬನೆಗೆ ತೆರೆದುಕೊಳ್ಳುವಂತೆ ಪ್ರೇರೇಪಿಸಬಹುದೆ?

+ಸಣ್ಣ-ಪುಟ್ಟ ಊರುಗಳಿಂದ ಬೆಂಗಳೂರಿಗೆ (ಇತರ ದೊಡ್ಡ ನಗರಗಳಿಗೆ) ವಲಸೆ ಹೋಗುವುದನ್ನು ತಡೆದು, ಸಣ್ಣ ಊರಿನಲ್ಲೇ ಅವರವರ ಉದ್ಯೋಗಾವಕಾಶ ಸೃಷ್ಟಿಸಿಕೊಳ್ಳುವಂತೆ ದಾರಿತೋರಬಹುದೆ?

+ಹಿರಿಯರ ಮಾರ್ಗದರ್ಶನದಲ್ಲಿ ಮತ್ತೊಮ್ಮೆ ಕೃಷಿಕಾಯಕ ಮೇಲೆತ್ತುವಂತೆ ಉತ್ತೇಜಿಸಬಹುದೆ?

+ಪಟ್ಟಣಗಳ ದುರ್ದೆಶೆಗೆ ಕಾರಣವಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಸಾರ್ವಜನಿಕವಾಗಿ (ಸರಕಾರದ ಮುಖ ನೋಡದೆ) ಎತ್ತಿಕೊಳ್ಳಬಹುದೆ?

ಏನು ಮಾಡಬಹುದು? ಹೇಗೆ ಮಾಡಬಹುದು? ಯೋಚಿಸಬೇಕಾದ ವಿಷಯವಿದು.

Anonymous said...

very good article!! keep it up.

ಅರೇಹಳ್ಳಿ ರವಿ said...

ಸುಪ್ತದೀಪ್ತಿಯವರೆ...,
ಎಲ್ಲರಲ್ಲೂ ನೀವು ಪ್ರಸ್ತಾಪಿಸಿದ ಪ್ರಶ್ನೆಗಳೇ ಮೂಡುತ್ತವೆ. ಹಳ್ಳಿಗಳನ್ನು ಸ್ವಾವಲಂಭಿಗಳನ್ನಾಗಿಸುವ ಕನಸು ಗಾಂಧೀಜಿ ಬದುಕಿರುವವರೆಗೆ ಜೀವಂತವಾಗಿತ್ತು. ನಂತರ ಬಂದ ನಾಯಕರು, ಜನಸಾಮಾನ್ಯರು, ಸರ್ಕಾರಗಳು ನಿಧಾನಕ್ಕೆ ಹಳ್ಳಿಗಳನ್ನು ಕಡೆಗಣಿಸಲಾರಂಭಿಸಿದರು. ಹಳ್ಳಿಗಳೆಂದರೆ ಕಡಿಮೆ ಆದಾಯ ಕೊಡುವ ಹೆಚ್ಚು ಹೊರೆ ಎನಿಸುವ ಜಾಗಗಳೆಂಬ ಭಾವನೆ ಆಳುವ ವರ್ಗಗಳಲ್ಲು ಬಲವಾಗಿ ಈವತ್ತಿನ ಈ ಪರಿಸ್ಥಿತಿ. ಹಾಗೆ ಅವರಿಗೆ ಆ ಸೌಲಭ್ಯ, ಈ ಭತ್ಯೆ ಇತ್ಯಾದಿ ಆಸೆ ತೋರಿಸುತ್ತ, ಇನ್ನೊಂದೆಡೆಗೆ ೨ ಮೂರು ರೂಪಾಯಿಗಳಿಗೆ ಅಕ್ಕಿ-ಧಾನ್ಯ ಕೊಡುವೆವೆಂದು ಹೇಳುತ್ತಾ-ಕೊಡುತ್ತಾ ರೈತಾಪಿ ವರ್ಗವನ್ನು ಬೇಸಾಯದಿಂದ ವಿಮುಖರನ್ನಾಗಿ ಮಾಡಲು ಇಂಬು ಕೊಡುತ್ತಾ ಹೋದವು. ಹಸಿರು ಕ್ರಾಂತಿಯ ಆರಂಭದ ದಿನಗಳಲ್ಲಿ ಅಷ್ಟೊಂದು ಬೆಳೆಯುತ್ತಿದ್ದ ರೈತ ಈವತ್ತು ಮನೆಗಾಗುವಷ್ಟನ್ನಾದರೂ ಬೆಳಕೊಳ್ಳುತ್ತಿಲ್ಲ. ಇದಕ್ಕೆ ನೀರಾವರಿ ಇಲ್ಲದಿರುವಿಕೆ, ಅನಾವೃಷ್ಟಿ, ಬೆಳೆನಾಶ, ಬೆಲೆಗಳಲ್ಲಾಗುವ ಚೆಲ್ಲಾಟ ಇತ್ಯಾದಿ ಜೊತೆಗೆ ಹಲವಾರು ಕಾರಣಗಳಿದ್ದಾವಾದರೂ ಈ ಕಾಲದ ರೈತರ ಮಕ್ಕಳಿಗೆ ಬೆಳೆಗಾರರಾಗುವುದರಲ್ಲಿ ಆಸಕ್ತಿಯಿಲ್ಲ. ಅವರೀಗ ಲಾಭ-ನಷ್ಟ-ಶ್ರಮ ಇತ್ಯಾದಿಗಳನ್ನು ಲೆಕ್ಕ ಹಾಕಿ ವ್ಯವಸಾಯ ಮಾಡದಿರುವುದೇ ಕ್ಷೇಮ ಎಂಬ ನಿರ್ಧಾರಕ್ಕೆ ಬಂದಿರುವುದರಲ್ಲಿ ತಪ್ಪೇನಿಲ್ಲ.

ಮುಖ್ಯವಾಗಿ ಸಿನಿಮ, ಟಿ ವಿ ಮಾಧ್ಯಮಗಳು ಬೇರೊಂದು ಅವಾಸ್ತವ ಲೋಕವನ್ನು ರೈತ ಮಕ್ಕಳ ಮುಂದಿಡುತ್ತಾ, ನಿಮಗೆ ಹಳ್ಳಿಗಳಲ್ಲಿ ಸಾಧ್ಯವಾಗದ ಇನ್ನೊಂದು ಭೋಗ-ತಿಂಗಳ ಪಗಾರ ನಗರಗಳಲ್ಲಿದೆ. ಇನ್ನೆಷ್ಟು ದಿನ ಹಳ್ಳಿ ಜೀವನ(ಈಗಾಗಲೇ ಹಳ್ಳಿ ವಾಸಿಗಳನ್ನು ದಡ್ಡರಂತೆ ಕ್ಲೀಷೆ ಎನಿಸುವಷ್ಟು ಚಿತ್ರಿಸಿದ್ದಾರೆ) ಎಂಬ ಪ್ರಶ್ನೆಯನ್ನು ಅವರ ಮುಂದಿಟ್ಟಿವೆ. ಮುಖ್ಯವಾಗಿ ಹಳ್ಳಿಯ ಹೆಣ್ಣುಮಕ್ಕಳು ಹಳ್ಳಿಗಳಲ್ಲಿರಲು ಬಯಸುತ್ತಿಲ್ಲ. ಅವರಿಗೆ ಎಂಥವನಾದರೂ ಹುಡುಗ ನಗರವಾಸಿಯೇ ಆಗಬೇಕು. ಇದಕ್ಕೆ ಟಿ ವಿ ಮಾಧ್ಯಮ ನೇರ ಕಾರಣ. ಎಲ್ಲರೂ ಒಪ್ಪಿಕೊಳ್ಳಬೇಕಾದ ವಾಸ್ತವವಿದು.

Ravi Hanj said...

Ravi - Delighted to see that you write about practical problems and stand out from the canvas crowd!!!

Best Regards,
Ravi Hanj.
(http://kannadathinktank.blogspot.com)

Anonymous said...

ರವಿ:
ಅನೇಕ ವಿಷಯಗಳ ಬಗ್ಗೆ ಬರೆದಿದ್ದೀರಿ. ನನ್ನ ಒಂದೆರಡು ಟಿಪ್ಪಣಿಗಳು. ಹಿಟ್ಲರ್ ಇಲ್ಲಿ ಹುಟ್ಟಿ ಬರಬಾರದೇ ಎಂದು ಆಶಿಸಿದ್ದೀರಿ. ಒಂದೇ ಮಾತು: power corrupts; absolute power corrupts absolutely. ಒಬ್ಬ ಮನುಷ್ಯನಿಗೆ ಅಪರಿಮಿತ ಅಧಿಕಾರ ಕೊಡುವುದರಿಂದ ಆಗುವುದು disaster ಮಾತ್ರ. ಡೆಮಾಕ್ರಸಿ ಒಂದು ಪರಿಪೂರ್ಣವಲ್ಲದ ವ್ಯವಸ್ಥೆ. ಆದರೆ ಮನುಷ್ಯರಿಗೆ ಗೊತ್ತಿರುವ ವ್ಯವಸ್ಥೆಗಳಲ್ಲಿ ಅತ್ಯಂತ ಉತ್ತಮವಾದುದೇ ಅದು.

ದಪ್ಪ ಸಂಬಳದವರ ಬಗ್ಗೆ ಮಾತಾಡಿದ್ದೀರಿ. ಬಹಳ ಮಂದಿಗೆ, ಇದಕ್ಕೆಲ್ಲ ಒಟ್ಟಾರೆಯಾಗಿ ಅವರೇ ಕಾರಣ ಎಂಬ ಅಸಮಾಧಾನ ಇದೆ. ವ್ಯವಸ್ಥೆಯಲ್ಲಿ ಹಣ ಹೆಚ್ಚಾದಂತೆ, ಹಣದ ಮೌಲ್ಯ ಕಡಿಮೆಯಾಗುತ್ತದೆ. ಹೀಗಾಗಿ ಹಣದುಬ್ಬರವಾಗುತ್ತದೆ. ಆದರೆ ನಾವು ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು: ಈ ಹೆಚ್ಚು ಸಂಬಳದ ವರ್ಗವನ್ನು ನಿರ್ಮಿಸಿದ ಆರ್ಥಿಕ boom ಏನಿದೆಯಲ್ಲ, ಅದರಿಂದ ಅವರಿಗಷ್ಟೇ ಅಲ್ಲ, ಎಲ್ಲರಿಗೂ ಲಾಭವಾಗಿದೆ. ಐಟಿ ಬೂಮ್‍ನಿಂದ ಕೇವಲ ಐಟಿಯಲ್ಲಿ ನೌಕರಿ ಮಾಡಿವವರಿಗೆ ಲಾಭವಾಗಿ ಉಳಿದವರಿಗೆಲ್ಲ ಲುಕ್ಸಾನಾಗಿದೆಯೆನ್ನುವುದು ತಪ್ಪು ತಿಳುವಳಿಕೆ. ಐಟಿ ಬೂಮ್‍ನಿಂದ ಸಮಾಜದ ಅದೆಷ್ಟೋ ವರ್ಗಗಳಿಗೆ ಲಾಭವಾಗಿದೆ. ಉದಾಹರಣೆಗೆ: ಸೆಕ್ಯುರಿಟಿ, ಸಿಟಿ ಟ್ಯಾಕ್ಸಿ, ಆಟೋದವರು, ಹೌಸ್‍ಕೀಪಿಂಗ್, ಕೇಟರಿಂಗ್ (ಇವರು ಸಮಾಜದ ’ಮೇಲ್ಸ್ತರ’ದವರಲ್ಲ), ಹಾಗೆಯೇ, ರಿಯಲ್ ಎಸ್ಟೇಟ್, ಸಾರಿಗೆ, ಬಿಲ್ಡರ್ಸ್. ಪಟ್ಟಿ ಮಾಡಿತ್ತಲೇ ಹೋಗಬಹುದು. ಸೂಕ್ಷ್ಮವಾಗಿ ಗಮನಿಸಿದರೆ ಇದು ಕಂಡುಬರುತ್ತದೆ. ನಾವು ಮಾಡುವ ತಪ್ಪೇನು ಗೊತ್ತೇ? ’ಓ ಐಟಿಯವರು ೫೦-೬೦ ಸಾವಿರ ತೊಗೊಳ್ಳುತ್ತಾರೆ, ಸಾಮಾನ್ಯ ಜನ ಕೇವಲ ೫-೬ ಸಾವಿರಕ್ಕೆ ತೃಪ್ತಿ ಪಡಬೇಕು’ -- ನಿಜ, ಅವರ ಸಂಬಳದ ಜೊತೆ ಹೋಲಿಸಿದರೆ ಉಳಿದವರದು ತೀರ ಕಡಿಮೆ. ಆದರೆ ಅದೇ ನಾವು ಮಾಡುವ ತಪ್ಪು. ಒಂದು ಎಕಾನಮಿ ಎತ್ತರಕ್ಕೆ ಏರುವಾಗ ಈಗಾಗಲೇ ಮೇಲಿರುವವರು ಇನ್ನೂ ಬಹಳ ಮೇಲೆ ಹೋಗಿಯೇ ಹೋಗುತ್ತಾರೆ. ನಾವು ನಮ್ಮ ಮೊದಲಿನ ಸ್ಥಿತಿ ಮತ್ತು ನಂತರದ ಸ್ಥಿತಿ ಗಮನಿಸಿಕೊಳ್ಳಬೇಕು. ಸಾಮಾನ್ಯ ಜನರು, ಮೊದಲಿಗಿಂತ ಮೇಲೇರಿದ್ದಾರೆಯೇ ಇಲ್ಲವೇ? ಇದರ ಬಗ್ಗೆ ಬೇರೆ ಬೇರೆ ಅಭ್ಯಾಸಗಳಿವೆ. ಮೇಲೇರಿದ್ದಂತೂ ನಿಜ. ಅದರಲ್ಲಿ ಸಂಶಯವಿಲ್ಲ. ಹಾಗೆಯೇ ಎಕಾನಮಿಯ ಅಸ್ಥಿರತೆ ಎಲ್ಲರನ್ನೂ ತಟ್ಟುತ್ತದೆ.

ಎಲ್ಲವೂ ಸರಿಯಾಗಿದೆ ಎಂದು ನಾನು ವಾದಿಸುತ್ತಿಲ್ಲ, ಆದರೆ ಎಲ್ಲವೂ ಹದಗೆಡುತ್ತಿಲ್ಲ. ಒಟ್ಟಾರೆಯಾಗಿ ನಾವು ಹೋಗುತ್ತಿರುವ ದಿಕ್ಕು ಸರಿಯಾಗಿದೆ, ಆದರೆ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಳ್ಳಬೇಕಾಗುತ್ತದೆ.

ಅಲ್ಲದೇ ಎಲ್ಲದಕ್ಕೂ ೨ ಮುಖಗಳಿವೆ. ವಸ್ತುಸ್ಥಿತಿಯನ್ನು ಭಿನ್ನವಾಗಿಯೂ ನೋಡಬಹುದು. ಉದಾಹರಣೆಗೆ: ೬-೭ಸಾವಿರಕ್ಕೆ ಮನೆ ಸಿಗುತ್ತಿಲ್ಲ ಎಂಬ ದೂರು. ಹಳೆಯ ಕಾಲದಲ್ಲಿ ಹೇಗೋ ಒಂದು ಮನೆ ಕಟ್ಟಿಸಿ, ಕೆಲ ವರ್ಷಗಳ ಹಿಂದೆ ರಿಟೈರ್ ಆಗಿ ಆ ಮನೆಯ ಬಾಡಿಗೆಯ ಮೇಲೆ ಜೀವನ ಸಾಗಿಸುತ್ತಿರುವವ ಒಬ್ಬ ಮನುಷ್ಯನನ್ನು ಕೇಳಿ, ಬಾಡಿಗೆ ಹೆಚ್ಚಾಗಿದ್ದು ಒಳ್ಳೆಯದೋ ಕೆಟ್ಟದ್ದೋ ಎಂದು. ಅವನೂ ಸಾಮಾನ್ಯ ಮನುಷ್ಯನೇ ಅಲ್ಲವೆ?

ಅರೇಹಳ್ಳಿ ರವಿ said...

ಚಕೋರರೆ,
ಮೊದಲನೆಯದಾಗಿ ಇಷ್ಟು ಒಳ್ಳೆಯ ಕಮೆಂಟ್‌ ಕೊಟ್ಟಿದ್ದಕ್ಕೆ thanx.
ನಾನು ಹಿಟ್ಲರನನ್ನು ಉದ್ಧರಿಸಿದ್ದು ಆತನ ಸರ್ವಾಧಿಕಾರಿತನವನ್ನು ಎತ್ತಿಹಿಡಿಯಲಾಗಲೀ, ಆ ಮೂಲಕ ಒದಗಬಹುದಾದ ದುರಂತಗಳ ಸಮರ್ಥನೆಗಾಗಲೀ ಅಲ್ಲ. ಬದಲಾಗಿ ತೀರ ನಿಕೃಷ್ಟ ಸ್ಥಿತಿಗೆ ಜಾರಿದ್ದ ಒಂದು ವ್ಯವಸ್ಥೆಯನ್ನು ಎತ್ತಿನಿಲ್ಲಿಸಲು ಹೇಗೆ ಕೆಲವು ಏಕಪಕ್ಷೀಯ\ಏಕವ್ಯಕ್ತಿ ನಿರ್ಧಾರಗಳು ಅತ್ಯಗತ್ಯ ಅನ್ನುವುದಕ್ಕೆ ಒಂದು ದೃಷ್ಟಾಂತವಾಗಿ ಮಾತ್ರ quote ಮಾಡಿದ್ದೇನೆ. ಸದ್ದಾಂ, ಮುಗಾಬೆ, ಈದಿ ಅಮೀನ್, ಅಷ್ಟೆ ಏಕೆ ತುರ್ತು ಪರಿಸ್ಥಿತಿ ಹೇರಿದ ಇಂದಿರಾಗಾಂಧಿಯಂಥವರ ಬಗೆಗೆ ಯಾರಲ್ಲೂ ಸಮರ್ಥನೆಗಳಿರಲಾರವು.

ಆದರೆ ಸರ್ವಾಧಿಕಾರವೆಂಬುದು ತಾತ್ಕಾಲಿಕ. ಅದು ಯಾವತ್ತಿಗೂ ಸ್ಥಿರವಲ್ಲ; ನಮ್ಮ ದೇವೇಗೌಡರನ್ನು ಸೇರಿಸಿಕೊಂಡು ಸರ್ಕಾರ ಮಾಡಿದಂತೆ. ಆದರೆ ಕೆಲವು constructive ನಿರ್ಧಾರಗಳು ಏಕಾಂಗಿಯಾಗಿ ಬಂದಾಗ ಇತಿಹಾಸ ದೂರಬಹುದಾದದ್ದು ಸರ್ವಾಧಿಕಾರದ ವ್ಯಾಪ್ತಿಯನ್ನೇ ಹೊರತು ವ್ಯಕ್ತಿಯನ್ನಲ್ಲ.

ಮುಖ್ಯವಾಗಿ ಸಂಪತ್ತಿನ ಏಕಮುಖ ಕ್ರೋಢೀಕರಣ ಸರ್ವಾಧಿಕಾರಕ್ಕೆ ಮೂಲವೂ ಆಗುತ್ತದೆ. ನೀವು ಹೇಳಿದಂತೆ ಬಾಡಿಗೆ ಹೆಚ್ಚು ಪಡೆಯುವವನೂ ಸಾಮಾನ್ಯ ಮನುಷ್ಯ ಅಂದಿದ್ದಕ್ಕೆ; ಅವನಿಗೆ ದೊರಕಬಹುದಾದ ಅಸಹಜವಾದ ಹೆಚ್ಚುವರಿ ಸಂಪಾದನೆಯಲ್ಲಾ ಸಂಪತ್ತಿನ ಅಕ್ರಮ ಕ್ರೋಢೀಕರಣವೆ. ಯಥಾಪ್ರಕಾರ ಬಾಡಿಗೆ ಹೆಚ್ಚು ತಗೋಂಡರೂ ಆತ ಟ್ಯಾಕ್ಸು ಕಟ್ಟೋ ಮನಸ್ಸು ಮಾಡೋದಿಲ್ಲ. ಬಾಡಿಗೆ ಹುಚ್ಚಾಪಟ್ಟೆ ಏರಿಕೆಯಾಗಲು ಕಾರಣವಾಗೋದು...ಅದೂ ವಿನಾಕಾರಣಗಳಿಗಾಗಿ ಅಸಮರ್ಥನೀಯ.

‘ದಪ್ಪಸಂಬಳದವರೆಂದು ಏಕೆ ಕರೆಯಬೇಕಾಯಿತೆಂದರೆ-ಹಿಂದೆ ಸಂಬಳದ ಹಣ ಕೈಗೆ ಬಂದಾಗ ಅದನ್ನು ಹೇಗೆಲ್ಲಾ ಖರ್ಚು ಮಾಡಬೇಕೆಂಬ ಬಗ್ಗೆ ಅರಿವು ಕೊಡಲು ಹಿರಿಯರು ಪ್ರಯತ್ನಿಸುತ್ತಿದ್ದರು. ಇದನ್ನು ವ್ಯಕ್ತಿಯ ಬೆಳವಣಿಗೆ ಹಂತದಲ್ಲೇ ಮನಸ್ಸಿಗೆ ನಾಟುವಂತೆ ತಿಳಿಸಿಕೊಡಲಾಗುತ್ತಿತ್ತು. ಆದರೆ ಈಗೇನಾಗಿದೆಯೋ ನೋಡಿ. ಬಾಡಿಗೆ ಹತ್ತು ಸಾವಿರವೆಂದರೆ ಯಾಕಷ್ಟು ಬಾಡಿಗೆ? ಎಂದು ಕೇಳಬಹುದಾದ ಸಾಮಾನ್ಯ ಜ್ಞಾನ\ಜವಾಬ್ದಾರಿಯೂ ಆತನಲ್ಲಿರುವುದಿಲ್ಲ. ಇಲ್ಲಿಗೇ ನಿಲ್ಲುವುದಿಲ್ಲ ಇದು . ಹೋಟೆಲ್ಲಿನ ಊಟ, ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಳ್ಳಲು ಕೊಡುವ ಲಂಚ ಹೀಗೆ ಹಲವು ಬಗೆಯಲ್ಲಿ ವ್ಯಕ್ತವಾಗುತ್ತೆ. ತೀರ ಇತ್ತೀಚಿನ ಟ್ರೆಂಡ್ ಎಂದರೆ ಪಾಪ ಹುಡುಗ ಅವನ ಸಂಬಳ ಅವನೇ ಉಡಾಯಿಸಿದರೆ ತಪ್ಪೇನು ಅನ್ನೋದು ಇತೀಚಿನ ತಂದೆತಾಯಿಗಳ ಧೋರಣೆ.

ನಮ್ಮ ಮನೆಯ ಹತ್ತಿರ ಒಬ್ರು ಮಂಗಳೂರಿನವರ ಅಂಗಡಿಯಿದೆ. ತಡರಾತ್ರಿಯವರೆಗೂ ಅವರು ಐಟಿ-ಬಿಪಿಓದವರಿಗಾಗಿಯೇ ತೆರೆದಿರುತ್ತಾರೆ. ಅಂಗಡಿಯಲ್ಲಿ ಬಾದಾಮಿ, ಪಿಸ್ತ, ಗೋಡಂಬಿ, ಒಣದ್ರಾಕ್ಷಿ(ಎಟುಕದ ದ್ರಾಕ್ಷಿ ಹುಳಿ ಅಂತ ಸುಮ್ಮನಿರಬೇಕೆ?) ಇತ್ಯಾದಿಗಳ ಸಣ್ಣ ಸಣ್ಣ ದುಬಾರಿ ಪೊಟ್ಟಣಗಳಿರುತ್ತವೆ. ರೇಟ್ ನಂಬಲಾಗದಷ್ಟು ಹೆಚ್ಚಿರುತ್ತದೆ. ಹೊರಗಡೆ ಸಿಗೋದಕ್ಕಿಂತ ಎರಡೂವರೆ ಪಟ್ಟು. ಯಾಕೆ ಹೀಗೆ? ಅಂದರೆ: "ಅದು ಐಟಿಯವರಿಗೆ ಸ್ವಾಮೀ ನಿಮಗಲ್ಲ" ಎಂಬ ಮುಖಕ್ಕೆ ಹೊಡೆಯುವಂತ ಉತ್ತರ ಬರುತ್ತೆ. ಅಲ್ರೀ ನಾನೂ ಐಟಿಗೆ ಸಂಬಂಧಿಸಿದವನೆ...ನನಗೇ ಜಾಸ್ತಿ ಅನ್ನುಸ್ತಾ ಇದೆಯಲ್ಲ ಅಂದರೆ, ಬೇಕಾದ್ರೆ ತಗೊಳ್ಳಿ ಅನ್ನೊ ಧಾಷ್ಟಿಕತೆ. ಹೇಳಿ ಈ ಧಾಷ್ಟಿಕತೆ ಅವನಿಗೆ ಎಲ್ಲಿಂದ ಬಂತು?

ಈವತ್ತು ಏನಾಗಿದೆ ಎಂದರೆ ಸರ್ಕಾರ ಬಸ್ಸಿನ ದರಗಳನ್ನು ಏರಿಸುವಾಗಲೂ ಮೇಲ್ಮಧ್ಯಮ ವರ್ಗವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಮಾಡುತ್ತೇನೋ ಎಂಬ ಅನುಮಾನ ಮೂಡುತ್ತೆ. ಹೋಟೆಲಿನ\ಸಿನಿಮಾ ಟಿಕೆಟುಗಳ ದರಗಳ್ಯಾಕೆ ರಾತ್ರೋರಾತ್ರಿ ಸಣ್ಣದೊಂದು ಪ್ರತಿಭಟನೆಯ ಸೊಲ್ಲೂ ಇಲ್ಲದೆ ಏರಿಕೆಯಾಗುತ್ತವೆ...?
ನಾವು ಎಲ್ಲೋ ಒಂದು ಕಡೆ ಪ್ರತಿಭಟಿಸಬೇಕಾದ ವರ್ಗವನ್ನು ಧ್ವನಿಯೇ ಇಲ್ಲದಂತೆ ಮಾಡಿದ್ದೇವೆ ಅನಿಸುತ್ತಿಲ್ಲವೆ?

ಪ್ರತಿ ಅಭಿವೃದ್ಧಿಗೂ ಒಂದು ಮಾನವೀಯ ಮುಖವನ್ನು ದಯಪಾಲಿಸಬೇಕಾದುದು ಪ್ರಜಾಪ್ರಭುತ್ವದ ಧರ್ಮವಾದರೆ, ಅದ್ಯಾಕೆ ಸಾಧ್ಯವಾಗುತ್ತಿಲ್ಲ. ಬೆಲೆಗಳು ಹೆಚ್ಚಾಗಿವೆ ಅನ್ನೋದು ತುಂಬಾ ಸಂದರ್ಭಗಳಲ್ಲಿ ಸುಳ್ಳಾಗಿರುತ್ತೆ. ಟೊಮ್ಯಾಟೊ ಬೆಳೆದ ರೈತ ಅದನ್ನು ಬೀದಿಗೆ ಚೆಲ್ಲುತ್ತಾ ಆಕ್ರೋಶ ವ್ಯಕ್ತಪಡಿಸುತ್ತಿರುವಾಗಲೂ ಇಲ್ಲ ಐಟಿವಲಯದ ನಡುವೆ ಅದೇ ಟೋಮ್ಯಾಟೊ ಹತ್ತು ರೂಪಾಯಿಯ ಆಸುಪಾಸಿನಲ್ಲಿರುತ್ತಲ್ಲಾ ಯಾಕೆ?

ಐಟಿ ಬೂಂನಿಂದ ಸಮಾಜದ ಇತರೆ ವಲಯಕ್ಕೂ ಲಾಭವಾಯಿತು ಅನ್ನೋದಾದರೆ, ಅದು ಬೇರೆ ಯಾವುದೇ ಉದ್ಯೋಗ ಸೃಷ್ಟಿಯ ಕೈಗಾರಿಕೆಗಳಲ್ಲೂ ಆಗಿರಲಿಲ್ಲವೆ? ಆಗಿತ್ತು. ಅಲ್ಲೊಂದು ಸಾಮಾಜಿಕ ಜವಾಬ್ದಾರಿಯ ನೆಲೆಯಲ್ಲಿ ಸಂಬಳಗಳ ನಿರ್ಧಾರವಾಗುತ್ತಿತ್ತು. ಹೇಳಿ ಐಟಿಯವರಿಗೆ ಸಂಬಳ ನಿಗಧಿ ಮಾಡುವಾಗ ಯಾವ ಕಳಕಳಿ ಇರುತ್ತೋ ಗೊತ್ತಿಲ್ಲ. ಯಾವ ಐಟಿ ಕಂಪನಿ ಐಟಿಗೆ support ಕೊಡಬಹುದಾದ supporting ಶ್ರಮಿಕ ವರ್ಗವನ್ನು ನೇರ ನೇಮಕ ಮಾಡುತ್ತೆ? ಯಾವ ಕಂಪನಿಗಳು ನೇರ ನೇಮಕ ಮಾಡಿಕೊಳ್ಳದ ಕಾರಣ ಸೆಕ್ಯೂರಿಟಿಯವರಿಗೆ, ಕಸ ಗುಡಿಸುವವರಿಗೆ, ಕಾರ್‌ಡ್ರೈವರ್‌ಗಳಿಗೆ ಸಿಗೋದು ಚೂರುಪಾರೇ. ಇದು ಯಥಾಪ್ರಕಾರ ಶ್ರಮಿಕ ವರ್ಗವನ್ನು ತುಳಿಯಬಹುದಾದ ಸರ್ವಾಧಿಕಾರೀ ಪ್ರಜಾಪ್ರಭುತ್ವವಲ್ಲವೆ...?

ಹಾಗಾದರೆ ಐಟಿಯಂತ ವಲಯದ ಅಭಿವೃದ್ಧಿಯೇ ಬೇಡವೆ...?

ಖಂಡಿತಾ ಬೇಕು.

ಕಳೆದ ಹತ್ತು ವರ್ಷಗಳಲ್ಲಿನ ನಮ್ಮ ಹಣದ ಮೌಲ್ಯವನ್ನು ತಾಳೆ ಮಾಡಿ ನೋಡಿದಾಗ ಅದರ ಮೌಲ್ಯ ವಾಸ್ತವದಲ್ಲಿರುವಂತೆ ಅಷ್ಟೇನೂ ಬದಲಾಗಿಲ್ಲ. ಬದಲಾಗಿರುವುದು ನೀವೇ ಹೇಳಿದಂತೆ ಹಣದೆಡೆಗಿನ ನಮ್ಮ ಅಟೆನ್ಷನ್. ಇದು ಉಂಟಾಗಿದ್ದು ವಿವೇಚನೆಯಿಲ್ಲದೆ ಖರ್ಚು ಮಾಡಲು ಸಿದ್ಧರಿರುವ ಸೀಮಿತ ವರ್ಗ ಮತ್ತು ಅದೇ ಸರಿಯೆಂದು ಅವರನ್ನು ಉದ್ದೇಪಿಸಬಹುದಾದ ಅವೇ ಕಾರ್ಪೋರೇಟ್ ಶಕ್ತಿಗಳಲ್ಲವೆ?. ಹಣವೇ ಪ್ರಧಾನವಾದಾಗ ನಿಧಾನಗತಿಯಲ್ಲಿ ಮಾನವೀಯ ಮುಖ ನೆಲೆ ಕಳೆದುಕೊಳ್ಳುತ್ತೆ. ಅದನ್ನು ಪ್ರಜಾಪ್ರಭುತ್ವ ಅನ್ನೋಕಾಗುತ್ತಾ?

ಅದಕ್ಕೇ ...

ಮಾನವೀಯ ನೆಲೆಯ ಹಿಟ್ಲರನಂತ ಸರ್ವಾಧಿಕಾರಿ ಬೇಕು. ಜನರನ್ನು ಕ್ರೂರವಾಗಿ ನಡೆಸಿಕೊಳ್ಳಬಹುದಾದ ಹಿಟ್ಲರ್ ಅಥವ ಕಾರ್ಪೋರೇಟ್ ಐಟಿ ಜಗತ್ತು ಬೇಡವೇ ಬೇಡ.

ನವನಾಗರೀಕರೆಂದು ಹೇಳಿಕೊಳ್ಳುವವರೆ ಬಹುಸಂಖ್ಯಾತ ಶ್ರಮಿಕರ ಪಾಲಿಗೆ ಉರುಳಾಗಬಾರದು.

ಸ್ವಸ್ಥ ಸಮಾಜ ನಿಸ್ತೇಜಗೊಳ್ಳುವ ವೇಳೆಗೆ ಇನ್ನೊಂದು ವ್ಯವಸ್ಥೆ ಅದಕ್ಕೆ ಚೈತನ್ಯ ಕೊಡಲು ಮುಂದಾಗಬೇಕು.

ಕೊನೆದಾಗಿ, ಸಂಬಳಗಳು ಯಾವತ್ತೂ ಸಮಾನವಾಗುವುದಿಲ್ಲ. ಆದರೆ ಅಂತರವೆಂಬುದು ಅತಿರೇಕವೆನಿಸುವಂತ ರೀತಿಯಲ್ಲಿ ವ್ಯತ್ಯಾಸವಾಗಬಾರದು.

Anonymous said...

ರವಿ:
ನಿಮ್ಮ ಪ್ರಶ್ನೆಗಳು ಗಾಢವೂ ನ್ಯಾಯಯುತವೂ ಆಗಿವೆ. ಕೆಲವಕ್ಕೆ ಅಲ್ಪಸ್ವಲ್ಪ ಪ್ರತಿಕ್ರಿಯಿಸಬಲ್ಲೆ. ಸ್ವಲ್ಪ ಕೆಲಸಗಳಿವೆ. ಅವನ್ನಷ್ಟು ಮುಗಿಸಿ ಇವತ್ತು ನಾಳೆ, ಇಲ್ಲಿ ಅಥವಾ ನನ್ನ ಬ್ಲಾಗಲ್ಲಿ ಇನ್ನಷ್ಟು ಮಾತಾಡೋಣ. ಥ್ಯಾಂಕ್ಸ್!

Supreeth.K.S said...

ಹಣದುಬ್ಬರದ ಏರಿಕೆ ನಮ್ಮ ಮಾಧ್ಯಮಗಳಲ್ಲಿ ಏಕೆ ಗಂಭೀರ ಚರ್ಚೆಯ ವಿಷಯವಾಗಿಲ್ಲ? ಮೇಲ್ಮಧ್ಯಮ ವರ್ಗದವರಿಗೆ ಈ ಬೆಲೆಯೇರಿಕೆಯಿಂದಾಗಿ ಅಷ್ಟೇನೂ ಬಿಸಿ ತಟ್ಟದಿರುವುದರಿಂದಾಗಿ ಮಾಧ್ಯಮಗಳ ಗಮನ ಇತ್ತ ಹರಿದಿಲ್ಲವೇ? ಹಾಗಾದರೆ ಈ ಮಾಧ್ಯಮಗಳು ಪ್ರತಿನಿಧಿಸುವುದು ಯಾರನ್ನು?

ಹಳ್ಳಿಗಳಲ್ಲಿ ರೈತರಿಗೆ ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ.ಇದಲ್ಲದೆ ಆಹಾರ ಧಾನ್ಯಗಳಿಂದ ಸಿಕ್ಕುವ ಲಾಭಾಂಶವೂ ಕಡಿಮೆ. ಇದರಿಂದಾಗಿ ಆಹಾರ ಧಾನ್ಯಗಳ ಉತ್ಪಾದನೆಯು ಬೆಳವಣಿಗೆ ತಟಸ್ಥವಾಗಿದೆ. ದಿನೇ ದಿನೇ ಆಹಾರ ಧಾನ್ಯಗಳ ಬೆಲೆಯೇರಿಕೆ ಆಗುತ್ತಿದೆ. ಪೆನ್ ಡ್ರೈವು, ಐಪಾಡುಗಳು ದಿನೇ ದಿನೇ ಕಡಿಮೆ ಬೆಲೆಗೆ ಸಿಕ್ಕುತ್ತಿರುವುದನ್ನೇ ನೋಡಿ ನಾವು ಅಭಿವೃದ್ಧಿ ಹೊಂದಿದ್ದೇವೆ ಎಂದು ಬೀಗಬೇಕೆ?

ಯಾಕೋ ಗಾಬರಿಯಾಗುವುದು ಬಿಟ್ಟು ಬೇರೇನೂ ಮಾಡಲಾಗುತ್ತಿಲ್ಲ... ಇಂಥವುಗಳ, ದೇಶದ ಎಕಾನಮಿಯ ಬಗ್ಗೆ ನನ್ನ ಅಜ್ಞಾನವನ್ನು ನೆನೆಸಿಕೊಂಡರೆ ನಾಚಿಕೆಯೆನಿಸುತ್ತದೆ.

ಒಳ್ಳೆಯ ಲೇಖನ...


...........
http://uniquesupri.wordpress.com/

ವಿ.ರಾ.ಹೆ. said...

ಒಳ್ಳೆಯ ಮಾಹಿತಿಪೂರ್ಣ ಲೇಖನ ರವಿಯವರೆ. ನೀವು ಚಕೋರರ ಪ್ರಶ್ನೆಗೆ ಪ್ರತಿಕ್ರಯಿಸುತ್ತಾ ನೀಡಿದ ಸಮರ್ಥನೆಗಳು ಒಪ್ಪುವಂತದ್ದೇ. ನಾವು ಯಾವುದನ್ನು ಪ್ರಗತಿ ಎಂದು ಬೀಗುತ್ತಿದ್ದೇವೋ ಅದು ನಮ್ಮ ಕುತ್ತಿಗೆಗೇ ಉರುಳಾಗಬಹುದು. ಆ ಕಾಲ ಬರುವುದಕ್ಕಿಂತ ಮೊದಲು ನಮ್ಮ ಸಮಾಜದ ಮನಸ್ಥಿತಿ ಬದಲಾದರೆ ಒಳ್ಳೆಯದು. ಈ ವಿಷಯವಾಗಿ ಸಾಮಾನ್ಯ ಜನತೆಯಾದ ನಾವು ಪ್ರಾಕ್ಟಿಕಲಿ ಏನಾದರೂ ಮಾಡಲು ಸಾಧ್ಯವೆ?

ಜನಪ್ರಿಯ ಲೇಖನಗಳು