5.25.2008

ನಕಲಿ ಸಾರಾಯಿಯ ನರಮೇಧ ಮತ್ತು ಮುಖ್ಯಮಂತ್ರಿಯಾಗಲಿರುವ ಯಡಿಯೂರಪ್ಪ

ಅಂತೂ ಕಳ್ಳಭಟ್ಟಿಯ ಹೆಸರಿನಲ್ಲಿ methyl alcohol ಅಥವ methanol ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ. ಸಾರಾಯಿ ನಿಷೇಧವಿರುವ ಕರ್ನಾಟಕ ಮತ್ತು ನಿಷೇಧವಿಲ್ಲದಿರುವ ತಮಿಳುನಾಡು ಎರಡೂ ಕಡೆ ಸಾವುಗಳು ಸಂಭವಿಸಿವೆ. ನಕಲಿ ಮದ್ಯ ಸೇವಿಸಿ ಅಷ್ಟೊಂದು ಜನ ಸಾಯುತ್ತಿದ್ದಾರೆ ಎಂಬ ಮಾಧ್ಯಮಗಳ ವರಧಿಗಳ ನಡುವೆಯೂ ನಡೆಯುವ ಅನಾಹುತದ ಅರಿವಿಲ್ಲದೆ ನಕಲಿ ಮದ್ಯ ಕುಡಿಯುತ್ತಾ ಇನ್ನೂ ಹತ್ತಾರು ಮಂದಿ ಸಾಯುತ್ತಲೇ ಇದ್ದಾರೆ. ಯಥಾಪ್ರಕಾರ ಸಾರಾಯಿ ನಿಷೇಧದಿಂದ ಕಂಗೆಟ್ಟಿರುವ ಮದ್ಯದ ದೊರೆಗಳು, ಮದ್ಯದ ದೊರೆಗಳ ಋಣಭಾರದಿಂದ ನರಳುತ್ತಿರುವ ಕಾಂಗ್ರೇಸ್ಸು, ದಳಗಳು ಸಾರಾಯಿ ನಿಷೇಧ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸುವ ಮಟ್ಟಕ್ಕೂ ಹೋಗಿವೆ.

ಸಾವುನೋವುಗಳ ಸಂಖ್ಯೆ ಏರುತ್ತಲೇ ಹೋದಾಗ ಎಚ್ಚೆತ್ತುಕೊಂಡ ರಾಜ್ಯಪಾಲರ ವಿನಮ್ರ ಸೇವಕರು ರಾತ್ರೋರಾತ್ರಿ ಕೆಲವರನ್ನು ಸಸ್ಪೆಂಡ್ ಮಾಡಿ, ಒಂದಿಷ್ಟು ಪರಿಹಾರ ಘೋಷಿಸಿ ಕೈತೊಳೆದುಕೊಂಡು ಎದ್ದೋಗುವ ಹುನ್ನಾರದಲ್ಲಿದ್ದಾರೆ. ರಾಜ್ಯಪಾಲರ ಅವಧಿ ಇನ್ನು ಕೆಲವೇ ದಿನಗಳಿರುವ ಕಾರಣ ಅವರು ನಿರಾಳ. ಮಾಧ್ಯಮಗಳ ವರಧಿಯನ್ನು ಗಮನಿಸಿದರೆ ಮತ್ತೆ ಸಾರಾಯಿ ಮಾರಾಟವನ್ನು ಪ್ರಾರಂಭಿಸುವತ್ತ ಜನಾಭಿಪ್ರಾಯ(ಮಾಧ್ಯಮಾಭಿಪ್ರಾಯ!) ರೂಪುಗೊಳ್ಳುತ್ತಿದೆಯೆ ಎಂದೆನ್ನಿಸದಿರದು.

ಮೊನ್ನೆ ಟಿವಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಸಾರಾಯಿ ದೊರೆ ಜೆ ಪಿ ನಾರಾಯಣ ಸ್ವಾಮಿ ಇಷ್ಟೊಂದು ಜನ ಸಾಯುತ್ತಿರುವುದು ಸಾರಾಯಿ ನಿಷೇಧದಿಂದಲೇ ಅಂತ ಒದರುತ್ತಿದ್ದರು. ಅಲ್ಲಿಗೆ ಅವರ ಉದ್ದೇಶ ಸ್ಪಷ್ಟ. ಹೇಗಾದರೂ ಮಾಡಿ ಮತ್ತೆ ಸಾರಾಯಿ ಮಾರಾಟ ಆರಂಭವಾಗುವಂತೆ ಮಾಡುವುದು. ಆ ಮೂಲಕ ಕಳೆದುಹೋದ ದೊರೆ ಪಟ್ಟವನ್ನು ಮರಳಿ ಪಡೆಯುವುದು.

ಆದರೆ ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಎಲ್ಲರೂ ಉದ್ದೇಶಪೂರ್ವಕವಾಗಿ ಬದಿಗೆ ತಳ್ಳುತ್ತಿರುವ ವಿಷಯವೊಂದಿದೆ. ಅದು ಈ ಎಲ್ಲಾ ಸಾವುಗಳು ಆದದ್ದು ಸಾಂಪ್ರದಾಯಿಕವಾಗಿ ತಯಾರಿಸಲಾದ ಕಳ್ಳಭಟ್ಟಿಯಿಂದಲೇನಾ ಅನ್ನುವುದು. ಆದರೆ ಸತ್ತವರ ಪೋಸ್ಟ್‌ಮಾರ್ಟಂ ನಂತರದ ವರದಿಗಳನ್ನು ನೋಡಿದರೆ ಅವರು ಸೇವಿಸಿದ್ದು ಪ್ರಾಣಾಂತಿಕವಾದ methyl alcohol ಎಂಬುದು ಖಚಿತವಾಗುತ್ತಿದೆ. ಎಲ್ಲಾ ವಿಧದ ಮದ್ಯದಲ್ಲಿ ಸಾಮಾನ್ಯವಾಗಿ ಇರುವುದು ethyl alcohol ಅಥವ ethanolನ ಅಂಶ. ಬೇರೆ ಬೇರೆ ವಿಧದ ಮದ್ಯಗಳಲ್ಲಿ ಇದರ ಪ್ರಮಾಣ ಬೇರೆಯಾಗಿರುತ್ತದೆ. ಇದು ತನ್ನ ಪ್ರಮಾಣಕ್ಕನುಗುಣವಾಗಿ ಮತ್ತೇರಿಸುತ್ತದಾದರೂ ತೀರಾ ಅತಿಯಾಗಿ ಸೇವಿಸದೇ ಇದ್ದಲ್ಲಿ ಪ್ರಾಣಾಪಾಯ ತರುವುದಿಲ್ಲ. ನಕಲಿ ಸಾರಾಯಿ ಮಾಡಿ ಮಾರುವ ಮಂದಿ ಈ ಎರಡು ವಿಧದ alcoholಗಳನ್ನು ಗುರುತಿಸುವಲ್ಲಿ ಎಡವುತ್ತಿರುವುದರಿಂದಲೇ ಇಷ್ಟೊಂದು ಸಾವುಗಳು ಸಂಭವಿಸುತ್ತಿವೆ. ಕಳ್ಳಭಟ್ಟಿ ಎಂದು ಹೆಸರಿಟ್ಟು ಅಬಕಾರಿ, ಮಾಧ್ಯಮಗಳು ಜನರನ್ನು ದಾರಿ ತಪ್ಪಿಸುತ್ತಿವೆ.

ಏನಿದು methyl alcohol?
methyl alcohol ರಾಸಾಯನಿಕ ಕೈಗಾರಿಕೆಗಳಲ್ಲಿ ಬಳಸಲಾಗುವ ಒಂದು ಸಾಲ್ವೆಂಟ್. ಬಣ್ಣ, ರುಚಿ, ವಾಸನೆಯಲ್ಲಿ ethyl alcoholನ್ನೇ ಹೋಲುತ್ತದೆ. ಸೇವಿಸಿದ ತತ್ಕ್ಷಣಕ್ಕೆ ಇದು ಕಣ್ಣಿನ ನರಗಳನ್ನು ಹಾನಿಗೊಳಿಸಿ ದೃಷ್ಟಿ ಕಳೆದುಕೊಳ್ಳಲು ಕಾರಣವಾಗುತ್ತೆ. ನಂತರ ಇಡೀ ನರಮಂಡಲವಕ್ಕೆ ಪ್ರಭಾವ ಬೀರುತ್ತಾ ಉಸಿರಾಟದ ತೊಂದರೆ ಉಂಟುಮಾಡುತ್ತದೆ. ವ್ಯಕ್ತಿ ಉಸಿರಿಗಾಗಿ ತಹತಹಿಸುವಂತೆ ಮಾಡುತ್ತದೆ. ಅಲ್ಲಿಗೆ ಶ್ವಾಸಕೋಶಗಳು ಹಾನಿಗೊಳಗಾಗುತ್ತವೆ. ಜೀರ್ಣಾಂಗ ವ್ಯವಸ್ಥೆ ಹದಗೆಟ್ಟು ನಿರಂತರ ವಾಂತಿ, ಭೇದಿಗಳಾಗಿ ವ್ಯಕ್ತಿ ನಿರ್ಜಲೀಕರಣಕ್ಕೆ ಒಳಗಾಗುತ್ತಾನೆ. ರಕ್ತದೊತ್ತಡ ತೀರಾ ಕಡಿಮೆಯಾಗಿ ಸಾವು ಸಂಭವಿಸುತ್ತದೆ. ಮಿತಿಮೀರಿ ಸೇವಿಸಿದ್ದೇ ಆದಲ್ಲಿ methyl alcohol ತಕ್ಷಣ ವ್ಯಕ್ತಿಯನ್ನು ಕೊಲ್ಲುತ್ತದೆ.

ಅಸಲಿಗೆ ಆಗಿದ್ದೇನು?

ಸಾಮಾನ್ಯವಾಗಿ ನಕಲಿ ಮದ್ಯ(ಕಳ್ಳಭಟ್ಟಿಯಲ್ಲ) ತಯಾರಿಸುವ ಮಂದಿ ethanol ಅನ್ನು ಡಿಸ್ಟಿಲರಿಗಳಿಗೆ ಹೋಗುವ ಸ್ಪಿರಿಟ್ ಲಾರಿಗಳು, ಸಕ್ಕರೆ ಕಾರ್ಖಾನೆಗಳಿಂದ ಹೊರಬರುವ ಸ್ಪಿರಿಟ್ ಟ್ಯಾಂಕರ್‌ಗಳು ಮುಂತಾದವುಗಳಿಂದ ಪಡೆಯುತ್ತಾರೆ. ದಾರಿ ಮಧ್ಯೆ ನಡೆಯುವ ಸ್ಪಿರಿಟ್ ಲಾರಿಗಳ ಡ್ರೈವರ್‌ಗಳು, ನಕಲಿ ಮದ್ಯ ತಯಾರಕರ ನಡುವಿನ ಒಪ್ಪಂದಗಳು, ಲೀಟರುಗಟ್ಟಲೇ `ಗುಣಮಟ್ಟದ ethanol' ಕ್ಯಾನ್‌ಗಳಿಗೆ ಇಳಿಕೆ ಆಗುವಂತೆ ಮಾಡುತ್ತವೆ. ಅದನ್ನು ತಂದು ಹಳ್ಳಿಗಳಲ್ಲಿ ನೀರು ಬೆರೆಸು, ಹಳೆಯ ಪ್ಲಾಸ್ಟಿಕ್ ಪಾನೀಯ ಬಾಟಲಿಗಳಲ್ಲಿ ತುಂಬಿಸಿ ಮಾರಾಟ ಮಾಡುತ್ತಾರೆ. ಚಿಲ್ಲರೆ ಮಾರಟಗಾರರು ಅದಕ್ಕೆ ಇನ್ನಷ್ಟು ನೀರು ಬೆರೆಸಿ ಹಣದ ಮೊತ್ತಕ್ಕೆ ಅನುಗುಣವಾಗಿ ಸಣ್ಣಸಣ್ಣ ಪ್ಲಾಸ್ಟಿಕ್ ಪೊಟ್ಟಣ ಮಾಡಿ ವಿತರಿಸುತ್ತಾರೆ. ಹೀಗೆ ಮಾಡುವುದು ಕಡಿಮೆ ಖರ್ಚಿನ ಕೆಲಸ ಮತ್ತು ಹೆಚ್ಚು ಲಾಭಕರ. ಈ ತೆರನಾದ ಮದ್ಯ ತಯಾರಿಕೆ ಆನೇಕಲ್ ತಾಲೋಕಿನ ಹಳ್ಳಿಗಳು, ಹೊಸಕೋಟೆ ತಾಲ್ಲೋಕಿನ ಕಲ್ಲಹಳ್ಳಿ, ಮೆಡಿಮೈಲಸಂದ್ರ, ಬೈಲನರಸಾಪುರ, ಕಟ್ಟಿಗೇನಹಳ್ಳಿ ಮುಂತಾದ ಊರುಗಳು ನಕಲಿ ಮದ್ಯ ತಯಾರಿಕೆ ಪ್ರಮುಖ ತಾಣಗಳು. ಇಲ್ಲಿನ ಕೆಲವು ಹಳ್ಳಿಗಳಲ್ಲಿ ಊರಿಗೆ ಊರೇ ನಕಲಿ ಮದ್ಯ ತಯಾರಿಸಿ ಮಾರುವ ಉದ್ಯಮ(!)ದಲ್ಲಿ ವರ್ಷಾಂತರಗಳಿಂದ ತೊಡಗಿಸಿಕೊಂಡಿದೆ. ಅದೂ ಅಬಕಾರಿ ಮತ್ತು ಪೋಲೀಸ್ ಅಧಿಕಾರಿಗಳ ಮೂಗಿನಡಿಯಲ್ಲೇ ಅವರ ಕೃಪಾಕಟಾಕ್ಷದಿಂದ ಈ ಕೃತ್ಯ ನಡೆಯುತ್ತಿತ್ತು. ಅದು ನಿಲ್ಲುವುದೂ ಇಲ್ಲ. ಆದರೆ ಸಾವುಗಳು ಸಂಭವಿಸಲು ಕಾರಣವಾಗಿದ್ದು ನಕಲಿ ಮದ್ಯ ತಯಾರಕರಿಗೆ ಅರಿವಿಲ್ಲದೆ ದೊರೆತ methyl alcohol ಅನ್ನೋದು ಈಗ ನಿಚ್ಛಳವಾಗಿದೆ. ಅದನ್ನು ಗೊತ್ತಿಲ್ಲದೆ ಬೆರೆಸಿದರೋ ಅಥವ ಜಾಸ್ತಿ ಕಿಕ್ ನೀಡಲೆಂದು ಉದ್ದೇಶಪೂರ್ವಕವಾಗಿಯೇ ಬೆರೆಸಿದರೂ ಇನ್ನಷ್ಟೇ ದೃಢವಾಗಬೇಕಿದೆ. ಆದರೆ ಒಂದಂತೂ ನಿಜ. ಇತ್ತೀಚಿನ ವರ್ಷಗಳಲ್ಲಿ ಆದ ಸಾರಾಯಿ ದುರಂತಗಳೆಲ್ಲದರಲ್ಲು methyl alcohol ಪಾಲಿದೆ. ಅನಕ್ಷರಸ್ಥ ನಕಲಿ ಮದ್ಯ ತಯಾರಕರು ಎರಡೂ ರಾಸಾಯನಿಕಗಳ ನಡುವಿನ ವ್ಯತ್ಯಾಸವನ್ನು ಗುರುತಿಸದೇ ಹೋಗುತ್ತಿದ್ದಾರೆ. ಇದು ಕೆಸರೆರಚಿಕೊಳ್ಳುತ್ತಿರುವ ಕುಮಾರಸ್ವಾಮಿಯಂತ ದಿಢೀರ್ ರಾಜಕಾರಣಿಗಳಿಗೆ ಗೊತ್ತಿಲ್ಲವೆ? ಗೊತ್ತು. ಆದರೆ ಅದನ್ನು ಬೇರೆಯವರ ಮೇಲೆ ಹೊರಿಸಿ ಆ ಮೂಲಕ ಒಂದಿಷ್ಟು ಉಪಯೋಗ ಪಡೆಯಲು ಬಯಸುವುದೂ ಜನಕ್ಕೂ ಗೊತ್ತಾಗಿದೆ. ಬೆಂದ ಮನೆಯಲ್ಲಿ ಗಳ ಹಿರಿಯುವ ರಾಜಕಾರಣಿಗಳನ್ನು ಬದಿಗಿಟ್ಟು ನೋಡೋದಾದ್ರೆ...

ನಕಲಿ ಮದ್ಯ ತಯಾರಿಕೆ, ಮಾರಾಟಕ್ಕೆ, ಅದರಿಂದಾದ ಸಾವುಗಳಿಗೆ ಸಾರಾಯಿ ನಿಷೇಧ ಕಾರಣ ಅಲ್ಲವೇ ಅಲ್ಲ. ನಕಲಿ ಮದ್ಯ ಕಡಿಮೆ ಬೆಲೆಯ ಜಾಸ್ತಿ ಕಿಕ್ ನೀಡುವ ಪದಾರ್ಥವಾಗಿರುವುದರಿಂದ ಅದರ ಚಲಾವಣೆ ನಿರಂತರ. ಸಾರಾಯಿ ನಿಷೇಧದಿಂದಲೇ ಇದೆಲ್ಲ ಆಗಿರುವುದೆಂದಾದಲ್ಲಿ ನಿಷೇಧವಿಲ್ಲದಿರುವ ಪಕ್ಕದ ತಮಿಳುನಾಡಿನಲ್ಲೂ ಅಪಾರ ಸಾವು ನೋವುಗಳಾಗಿವೆ. ಅಷ್ಟೆಲ್ಲಾ ಏಕ ನಮ್ಮಲ್ಲೇ ನೆಲಮಂಗಲ ಮುಂತಾದ ಕಡೆ ಸರ್ಕಾರಿ ಸಾರಾಯಿಯ ಹೊಳೆ ಹರಿಯುತ್ತಿದ್ದ ಕಾಲದಲ್ಲೂ ಇದೇ methyl alcohol ಹತ್ತಾರು ಜನರನ್ನು ಬಲಿ ತೆಗೆದುಕೊಂಡಿದ್ದೂ ನೆನಪಿನಲ್ಲಿದೆ. ಇದೇ ಹೊತ್ತಿನಲ್ಲಿ ಅಲ್ಲಿ ಹಾಸನದ ಸಕಲೇಶಪುರ ತಾಲ್ಲೊಕಿನಲ್ಲಿ ಮತ್ತೆ ನಾಲ್ಕು ಜನ ನಕಲಿ ಮದ್ಯ ಸೇವಿಸಿ ಜೀವ ತೆತ್ತಿದ್ದಾರೆ. ಈ ಮದ್ಯದ ಮೂಲವೂ ನೂರಾರು ಜನರನ್ನು ಬಲಿ ತೆಗೆದುಕೊಂಡ ಬೆಂಗಳೂರು ಆಸುಪಾಸಿನ ದುರಂತದ ಮೂಲವೂ ಒಂದೇ ಎನ್ನುವುದು ಗಮನಾರ್ಹ. ಪೋಲೀಸರು ಬಂಧಿಸಿರುವ ಸೌಂದರ್ ರಾಜನ್‌ನನ್ನು ಪ್ರಮುಖ ಅಪರಾಧಿಯಾಗಿ ಬಿಂಬಿಸಿ ಪ್ರಭಾವಿಗಳು ತೆರೆಮರೆಗೆ ಸರಿದಿದ್ದಾನೆ. ಸೌಂದರ್ ರಾಜನ್‌ಗೆೆ ನಕಲಿ ಮದ್ಯ ಮಾರುವುದು ಹೊಟ್ಟೆಪಾಡಿನ ಮೂಲವಾಗಿತ್ತು. ನಕಲಿ ಮದ್ಯ ಮಾರಿ ಅವನೇನೂ ಕೋಟ್ಯಾದಿಪತಿಯಾಗಿಲ್ಲ. ಆತನಿಗೆ ಜಾಮೀನು ಹೊಂದಿಸಲೂ ಹಣವಿಲ್ಲ. ಕರೀಂ ಲಾಲನ ತಲೆಗೆ ಇಡೀ ಛಾಪ ಕಾಗದ ಕರ್ಮಕಾಂಡವನ್ನು ಕಟ್ಟಿ ರೋಷನ್ ಬೇಗ್, ಕೃಷ್ಣ ತರದವರು ತಪ್ಪಿಸಿಕೊಂಡಂತೆ ಇಲ್ಲೂ ಆಗುತ್ತಿದೆ. ಇದಕ್ಕೆ ಪೋಲೀಸರ ಸಹಕಾರ ಸಿಕ್ಕಿದೆ.

ಯಡಿಯೂರಪ್ಪ ಮುಖ್ಯಮಂತ್ರಿ?
ಇದೆಲ್ಲದರ ಮಧ್ಯೆ ರಾಜ್ಯದಲ್ಲಿ ನಡೆದ ಚುನಾವಣೆಗಳ ಫಲಿತಾಂಶಗಳು ಬದಲಾವಣೆಗಾಗಿ ತುಡಿಯುವ ಕನ್ನಡಿಗರ ಆರೋಗ್ಯವಂತ ಮನಸ್ಥಿತಿಯನ್ನು ತೋರಿಸುತ್ತಿವೆ. ಜನ ಬಿ ಜೆ ಪಿ ಗೆ ಒಳ್ಳೆಯದೊಂದು ಅವಕಾಶ ನೀಡಿದ್ದಾರೆ. ಆದರೂ ಸ್ಪಷ್ಟ ಬಹುಮತ ಇಲ್ಲದಿರುವುದು ಅಲ್ಪ ಮಟ್ಟಿಗಿನ ನಿರಾಶೆಗೆ ಕಾರಣ. ಪಕ್ಷೇತರರು ಈ ನಿಟ್ಟಿನಲ್ಲಿ ಒಳ್ಳೆಯ ನಿರ್ಧಾರ ಕೈಗೊಳ್ಳುವರೆಂದು ಕೊಂಡರೆ...

ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ.

ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿ ಜೆ ಪಿ ಸ್ವಂತ ಬಲದ ಆಡಳಿತ ನಡೆಸಲಿದೆ. ಸಾರಾಯಿ ನಿಷೇಧ ಹಿಂತೆಗೆಯದಿರುವ ಮತ್ತು ನಡೆದ ನಕಲಿ ಸಾರಾಯಿ ದುರಂತದ ತನಿಖೆಗೆ ಒಂದು ತಾತ್ವಿಕ ಅಂತ್ಯ ನೀಡುವ ಭರವಸೆ ಭಾವೀ ಮುಖ್ಯಮಂತ್ರಿಯಿಂದ ಸಿಕ್ಕಿದೆ.

ಅದಾಗದಿದ್ದರೆ

ಮತ್ತೆ ಕಾಂಗ್ರೇಸ್ಸು, ಜೆಡಿಎಸ್ಸೂ ಒಂದಾದರೆ, ಪಕ್ಷೇತರರೆಲ್ಲಾ ಇದಕ್ಕೆ ಬೆಂಬಲಿಸಿದರೆ...ರೆ...ರೇ!

ಅಂತದ್ದೊಂದು ಸಮ್ಮಿಶ್ರ ಸರ್ಕಾರಕ್ಕೆ ಶಿಖಂಡಿ ಪಾತ್ರ ವಹಿಸಲು ಅಭ್ಯರ್ಥಿಗಳೇ ಇಲ್ಲ.

ಅಲ್ಲಿ ಧರ್ಮಸಿಂಗ್‌ಗೆ ತಡಕಿ ನೋಡಿಕೊಳ್ಳುವಂತಹ ಧರ್ಮದೇಟು ಬಿದ್ದಿದೆ. ಗಿನ್ನಿಸ್ ದಾಖಲೆ ಬರೆದುಕೊಳ್ಳುವವರಿಗೆ ಸ್ವಲ್ಪ ರಿಲೀಫು. ಎಚ್ಕೆ, ದೇಶಪಾಂಡೆ, ಅಂಬಿ-ಹೀಗೆ ಒಂದಿಷ್ಟು ಮುಖ್ಯಮಂತ್ರಿ ಸ್ಥಾನಾಕಾಂಕ್ಷಿಗಳಿಗೆ ಹಾಸಿಗೆ ಹಾಸಿ ಕೊಡಲಾಗಿದೆ. ಕಾಂಗ್ರ್ಏಸ್ಸಿನ ಕೈಹಿಡಿದ ಹಳೆ ಮೈಸೂರಿನ ಭಾಗದ ಜನರಿಗೆ ಬುದ್ಧಿ ಬರಲು ಇನ್ನೊಂದು ಎಲೆಕ್ಶನ್ ಬರಬೇಕೇನೋ ಗೊತ್ತಾಗ್ತಿಲ್ಲ.

ಜೆಡಿಎಸ್ಸಿನ ಮೆರಾಜೂ, ಚೆಲ್ವೂ, ಚೆನ್ಗಪ್ಪ, ಬಿಎಸ್ಪಿಯ ಸಿಂಧ್ಯ, ಇನ್ಮೇಲೆ ನಾನು ನಾಟ್ಕ ಮಾಡ್ಕತಾ ರೆಸ್ಟು ತಗೋಳ್ತೀನಿ ಅಂತಿದ್ದ ಎಂ ಪಿ ಪ್ರಕಾಶೂ ಎಲ್ಲರಿಗೂ ಅವರ ಇಚ್ಛಾನುಸಾರ ಮತದಾರ ಅನುಕೂಲ ಮಾಡಿಕೊಟ್ಟಿದ್ದಾನೆ.

ಆದರೆ ಮಜಾ ಇರೋದು ಇದ್ಯಾವುದರಲ್ಲೂ ಅಲ್ಲ. ಶಿಕಾರಿಪುರದಲ್ಲಿ ‘ಹರಕೆಯ ಕುರಿ’ ಬಂಗಾರಪ್ಪನವರ ಹೀನಾಯ ಸೋಲಿನಲ್ಲಿ ಯಡಿಯೂರಪ್ಪನವರ ಒಟ್ಟಾರೆ ಜಯವನ್ನು ಬರೆದುಕೊಟ್ಟದ್ದರಲ್ಲಿ. ಅವರ ಪುತ್ರರ ಎಡಬಿಡಂಗಿತನವನ್ನು ಕೊನೆ ಮಾಡಿದ ಮತದಾರನ ಪ್ರಬುದ್ಧ ಮನಸ್ಸನ್ನು ಅರಿಯುವುದರಲ್ಲಿ. ಬಂಗಾರಪ್ಪನವರನ್ನು ಕುರಿ ಮಾಡುವಲ್ಲಿ ಅಪಾರ ಶ್ರಮ ವಹಿಸಿದ ಅನಂತೂ ಸೇಫಾಗಿ ಯಡಿಯೂರಪ್ಪನವರ ಎಡಗಡೆ ವಿರಾಜಮಾನ. ಸದ್ಯಕ್ಕೆ ಬಿಜೆಪಿ ಬಂಡಾಯ ಮುಕ್ತ. ಕಾಂಗ್ರೆಸ್ಸಿನ ನಾಯಕರು ಮಾತಿಗೆ ಸಿಕ್ತಾರಾದರೂ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನುವಂತೆ ಗೊಣಗುತ್ತಾರೆ. ಜೆಡಿಎಸ್ಸಿನ ಸೋಲನ್ನು ಕುಮಾರಸ್ವಾಮಿ ಒಪ್ಪಿಕೊಂಡರೂ ಅತಂತ್ರ ವಿಧಾನಸಭೆಯ ಕನಸಿನಲ್ಲಿದ್ದ ದೇವೇಗೌಡರದು ದೀರ್ಘನಿದ್ದೆ. ಸದ್ಯಕ್ಕವರು ಧೂಳಿನೊಳಗೆ ಅಡಗಿದ್ದಾರೆ-ಮತ್ತೆ ಲೋಕಸಭಾ ಚುನಾವಣೆಗಳ ತನಕ. ಕ್ಯಾತೆ ಪ್ರವೀಣ ಎಸ್ಸೆಂ ಕೃಷ್ಣರಿಗೆ ಎಲ್ಲಿಯೂ ಸಲ್ಲದಂತಾಗುವ ಭಯ.

ಇನ್ನು ಮಾಯಾವತಿ, ಮುಲಾಯಂ, ಜಯಪ್ರದ, ರಾಹುಲ್‌ಗಾಂಧಿ ಜೊತೆ ಮುಖದ ಮೇಕಪ್ಪು ಒರೆಸಿಕೊಂಡು ಇನ್ನೊಂದು ಸುತ್ತಿನ ಡಿಸ್ಕವರ್ ಇಂಡಿಯಾ ಯಾತ್ರೆ ಮಾಡಿದರೆ ಒಳ್ಳೆಯದು. ಎಸ್ಪಿ, ಬಿಎಸ್ಪಿ ಖಾತೆಗೆ ಏನೂ ಸಿಕ್ಕಿಲ್ಲ. ಕರ್ನಾಟಕ ಉತ್ತರ ಪ್ರದೇಶವಲ್ಲ ಅನ್ನೋದು ಅವರಿಗೆ ಗೊತ್ತಾದರೆ ಒಳ್ಳೆಯದು.

ಇತ್ತ ಬ್ಲಾಗು ಲೋಕದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಗಳಿಸಿದ್ದು ಪಥ್ಯವಾಗಲಿಲ್ಲ ಎಂಬಂತೆ ತಮಿಳರು ತೀರ ಕೀಳು ಮಟ್ಟದಲ್ಲಿ ಬರೆಯುತ್ತಿದ್ದಾರೆ. ಕೆಲವು ಬ್ಲಾಗ್-ಕಮೆಂಟುಗಳು ಹೇಗಿವೆಯೆಂದರೆ ಓದಲೂ ಅಸಹ್ಯವೆನಿಸುವಷ್ಟು. ಇರಲಿ ಅವರ ಅಸಹನೆ ಸಹಜ. ದಕ್ಷಿಣ ಭಾರತ so called ದ್ರಾವಿಡ ಕೋಟೆಯ ಪಕ್ಕ ಉತ್ತರ ಭಾರತಿಗಳು ಲಗ್ಗೆ ಇಟ್ಟೇ ಬಿಟ್ಟರೇನೋ ಎನ್ನುವ ಭಯ.

ಕನ್ನಡವಿರೋಧಿ ಎಂಇಎಸ್, ತಮಿಳು ಪಕ್ಷಗಳಿಗೆ ಖಾತೆ ತೆರೆಯಲಾಗಿಲ್ಲ ಅನ್ನೋದು ಸಮಾಧಾನಕರ. ರಕ್ಷಣಾ ವೇದಿಕೆಯವರು ಈ ವಿಷಯದಲ್ಲಿ ರೆಸ್ಟು ತಗೋಳ್ಳಬಹುದಾದರೂ ಕಾವೇರಿ-ಹೊಗೇನಕಲ್ ಬೂತ ತಮಿಳುನಾಡು ಕಡೆಯಿಂದ ಬೆಂಕಿ ಉಗುಳಬಹುದು.

ಪಕ್ಷೇತರರಿಗೆ ಮೊಟ್ಟ ಮೊದಲ ಬಾರಿಗೆ ರಾಜ ಮರ್ಯಾದೆ. ಅಗತ್ಯವಿರುವ ‘ಮೂರು ಜನ’ ಕೇಳಿದರೆ ಹೆಲಿಕಾಫ್ಟರೂ ಕೊಡಬೇಕು. ಯಡಿಯೂರಪ್ಪನವರ ಅಷ್ಟೊಂದು ಸ್ಪಷ್ಟ ಜಯ, ಗುರಿ, ವಿಷನ್ಗಳ ಮಧ್ಯೆಯೂ ಅವರೀಗ ಪಕ್ಷೇತರರನ್ನು ಹುಡುಕಾಡಬೇಕಾಗಿದೆ.

ಶಾಲಾ ಮಕ್ಕಳಿಗೆ ಸೈಕಲ್ ಕೊಟ್ಟಂತೆ ಪಕ್ಷೇತರರಿಗೆ ಹೆಲಿಕ್ಯಾಫ್ಟರುಗಳು ಹಂಚಿಕೆಯಾಗಬಹುದು.

ನಮ್ಮಲ್ಲಿ ಹೆಲಿಕ್ಯಾಫ್ಟರು ಎಷ್ಟಿವೆ ಜನಾ...ಅಂತ ಜನಾರ್ಧನ ರೆಡ್ಡಿಗೆ ಫೋನ್ ಮಾಡ್ತಿರೋದು ಯಡಿಯೂರಪ್ಪನವರೇನಾ?

ಬೇಡ ಬಿಡಿ.

ಪ್ರಮಾಣ ವಚನದ ದಿನ ಭೇಟಿಯಾಗೋಣ-ಯಡಿಯೂರಪ್ಪನವರ ಹೊಚ್ಛ ಹೊಸ ಸಫಾರಿಯ ಮೆರುಗಿನ ಬೆಳಕಿನಲ್ಲಿಛ್

7 comments:

Anonymous said...

Nimma Chemistry ya pathagalige dhanyavada. Aadare, Chloral Hydrate emba ati maadaka- ati visha- election kaaladalli patta bhadrarinda vitarisalpduva vastuvendarenu gotte?

ರ್‍ಅವೀ... said...

ಅನಾಮಿಕರವರೆ,

‘ಕ್ಲೋರಲ್ ಹೈಡ್ರೇಟ್’ ರಾಸಾಯನಿಕವನ್ನು ಮಾದಕ ಪದಾರ್ಥವಾಗಿ ಬಳಸುತ್ತಾರಾ...?
ಗೊತ್ತಿರಲಿಲ್ಲ-ವಿವರವಾಗಿ ಹೇಳಿ. ಅದನ್ನು ಚುನಾವಣಾ ಸಮಯದಲ್ಲಿ ಬಳಸುತ್ತಿರುವುದರ ಬಗ್ಗೆ ಚುನಾವಣಾ ಆಯೋಗ ಮತ್ತು ಪೋಲೀಸರ ಬಳಿ ಯಾವುದೇ ಮಾಹಿತಿ ಸಿಗ್ತಿಲ್ಲ.

ರ್‍ಅವೀ...

Harish - ಹರೀಶ said...

Chloral hydrate ಬಗ್ಗೆ ಇಲ್ಲಿದೆ

ನಾಗೇಶ್ ಹೆಗ್ಡೆ said...

ಪ್ರಿಯರೇ ನಿಮ್ಮ ಬರಹ ಚೆನ್ನಾಗಿದೆ. ಅದ್ಯಾರೋ ತಪ್ಪಾಗಿ ಕ್ಲೋರಲ್ ಹೈಡ್ರೇಟ್ ಕಿಕ್ ಕೊಡತ್ತೆ ಅಂತ ಬರೆದಿದಾರೆ. ತಪ್ಪು. ಅದು ನಿದ್ದೆ ಬರಿಸುತ್ತದೆ. ಆರೇ ನಿಮಿಷಗಳಲ್ಲಿ. ಹೆಂಡ ಮಾರುವವನು ಅಂಥದ್ದನ್ನು ಮಾರಿದರೆ ಅವನಿಗೇ ನಷ್ಟ. ಮೀಥೈಲ್ ಅಲ್ಕೊಹಾಲ್ ಮುಖ್ಯ ವಿಷ. ಲಿಟ್ಮಸ್ ಕಾಗದದಂಥ ಏನಾದರೂ ತುಸು ಸುಲಭದ ಪರೀಕ್ಚಾ ವಿಧಾನ ಬಳಕೆಗೆ ಬಂದರೆ ಅನೇಕ ಬಡಪಾಯಿಗಳ ಜೀವ ಉಳಿಸಬಹುದಿತ್ತು. ಆದರೆ ನೀವು ಹೇಳಿದ ಹಾಗೆ ಈ ದುರಂತದಲ್ಲಿ ಅನೇಕರಿಗೆ ಲಾಭ ಇದೆ.
ತುಸು ಚೆಂದಾಗಿ ಕಾಮೆಂಟ್ ಮಾಡೋಣ ಅಂದರೆ ನೀವು ಯಾರೂಂತ್ಲೇ ಗೊತ್ತಿಲ್ವಲ್ರೀ!

ನಾಗೇಶ್ ಹೆಗ್ಡೆ

ಅಮರ said...

ಕಳ್ಳ ಭಟ್ಟಿ ದಂದೆಯ ಸಾಕಷ್ಟು ವಿವರಗಳನ್ನ ಕಲೆಹಾಕಿ ನಮ್ಮ ಮುಂದೆ ಇಟ್ಟಿದ್ದೀರಾ ಧನ್ಯವಾದಗಳು, ಈ ದಂದೆಯ ಮೂಲದಲ್ಲಿ ಇರುವವರಿಗೆ ತಕ್ಕ ಶಿಕ್ಷೆಯಾಗುವಲ್ಲಿ ಹೊಸ ಸರಕಾರ ಮುಖ್ಯ ಪಾತ್ರ ವಹಿಸಲಿ.

ಹಳೆ ಮೈಸೂರು ಕ್ಷೇತ್ರಗಳ ಪಲಿತಾಂಶಗಳ ಬಗ್ಗೆ ಬರೆದಿದ್ದೀರಾ, ಅಲ್ಲಿನ ಜನಕ್ಕೆ ಬುದ್ದಿ ಇಲ್ಲ ಅನ್ನೊ ನಿಮ್ಮ ವಾದವನ್ನ ನಾನು ಒಪ್ಪೊಲ್ಲ. ಬಿಜೆಪಿ ನಮ್ಮ ರಾಜ್ಯದಲ್ಲಿ ಆಗ ತಾನೆ ಕಣ್ಣು ಬಿಡುತ್ತಿದ್ದ ಕಾಲದಲ್ಲಾಗಲೇ ಶಂಕರಲಿಂಗೇಗೌಡರು ಮತ್ತು ರಾಮದಾಸ್ ಶಾಸಕರಾಗಿದ್ದರು. ನೀವು ಈ ಚುಣಾವಣೆಯನ್ನ ಸೂಕ್ಷ್ಮವಾಗಿ ಗಮನಿಸಿದರೆ ಹಳೆ ಮೈಸೂರಿನ ವಿಭಾಗದಲ್ಲಿ ಹೆಚ್ಚು ಗೆದ್ದಿರುವವರು ಕೆಲಸ ಮಾಡಿದ ಮಂದಿ ಅಥವಾ ಹೊಸದಾಗಿ ಸ್ಪರ್ಧಿಸಿದವರು. ನಾನು ಪ್ರತಿನಿದಿಸುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಜೆಗೌಡರು ಅಪರಿಚಿತನ ಹಾಗೆ ಇದ್ದವರು . ಹುಣಸೂರು ಕ್ಷೇತ್ರದ ಜಿ ಟಿ ದೇವೆಗೌಡರು ಕೆಲಸ ಮಾಡಿದ್ದಕ್ಕಿಂದ ಕಳ್ಳ ಕಾಕರ ಮತ್ತು ರೌಡಿಗಳನ್ನ ರಕ್ಷಿಸುವುದರಲ್ಲೆ ಕಾಲ ಕಳೆದರು ಹಾಗಾಗಿ ಸೋಲು ನಿಶ್ಚಿತವಾಗಿತ್ತು. ಹಲವಾರು ವರ್ಷಗಳಿಂದ ಕೆವಲ ತನ್ನ ಮಾತುಗಾರಿಗೆ ಮತ್ತು ಪ್ರತಿಭಟನೆಗಳಿಂದ ಗೆಲ್ಲುತ್ತಿದ್ದ ವಾಟಾಳ್ ನಾಗರಾಜ್ ಸೋಲು ಪ್ರಜ್ಞಾವಂತ ಮತದಾರನ ತೀರ್ಪು. ಮಂಡ್ಯ ಜಿಲ್ಲೆಯಾದ್ಯಂತ ಬಿಜೆಪಿ ಕಣ್ಣು ಬಿಡಲು ಅಗಿಲ್ಲ ಯಾಕೆಂದರೆ ಅಲ್ಲಿ ಯಾವ ಬಿಜೆಪಿಯ ಪ್ರಭಾವಿ ನಾಯಕರಿಲ್ಲ ಗಮನಿಸಬೇಕಾದ ವಿಚಾರ. ಒಟ್ಟಾರೆ ಹಳೆ ಮೈಸೂರು ವಿಭಾಗದಲ್ಲಿ ಕೆಲಸ ಮಾಡಿದವರಿಗೆ ಮತ್ತು ಮಾಡುವಂತ ಅಭ್ಯರ್ತಿಗಳಿಗೆ ಸ್ಥಾನ ಸಿಕ್ಕಿದೆ.
-ಅಮರ

Ravee... said...

ನಾಗೇಶ ಹೆಗ್ಗಡೆಯವರೆ: ನನ್ನ ಇ ಮೈಲ್ ವಿಳಾಸ ಬ್ಲಾಗ್‍ನಲ್ಲಿದೆ. ನಿಮ್ಮಿಷ್ಟದಂತೆ ಕಾಮೆಂಟ್ ಮಾಡಬಹುದು.


ಅಮರ: ನೀವು ಹೇಳೋದು ನಿಜ. ಆದರೆ ಪರಂಪರಾಗತವಾಗಿ ಕಾಂಗ್ರೇಸ್ಸನ್ನು,ದಳವನ್ನು ಬೆಂಬಲಿಸಿದ ಭಾಗವದು. ಪ್ರಭಾವಿ ಮುಖಂಡರಿಲ್ಲ ಎನ್ನುವುದು ಅಷ್ಟು ನಿಜವಲ್ಲ. ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಪ್ರಭಾವಿಗಳೇ ಬೇಕೆಂತೇನೂ ಇಲ್ಲ. ಸೋತಿರುವ ಅನೇಕರು ಕೆಲಸ ಮಾಡಿಲ್ಲ ಅನ್ನೋದು ನಿಜ. ಆದರೆ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲು ಕಾರಣವಾದ ಎರಡೂ ಪಕ್ಷಗಳನ್ನು ರಾಜ್ಯದ ಜನ ತಿರಸ್ಕರಿಸಿದರೂ ಹಳೆ ಮೈಸೂರು ಭಾಗದಲ್ಲಿ ಕೈ-ಹೊರೆ ಹಿಡಿದಿದ್ದಾರೆ.

ರವೀ...

Guru said...

ನಮಸ್ಕಾರ ರವಿ, ನಿಮಗೆ ವಿಶೇಷ ಆಹ್ವಾನ

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english
http://saadhaara.com/events/index/kannada

ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ

ದಯಮಾಡಿ ಬನ್ನಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.

ಗುರು

ಜನಪ್ರಿಯ ಲೇಖನಗಳು