7.09.2006

ಕವಿ ಸಿದ್ಧಲಿಂಗಯ್ಯನವರೊಂದಿಗೆ ಒಂದು ಮಧ್ಯಾಹ್ನ......

a meet with poet and kannada development authority chairman g.s.siddalingaiah about kannada supporting softwares, kannada utf fonts, tunga fonts etc
ಕೆ ಎಸ್ ಸಿ 6ನೇ ವಾರ್ಷಿಕೋತ್ಸವ,CMS ಸಂಪೂರ್ಣ ಹಾಗೂ ಕನ್ನಡ ಪದಪರೀಕ್ಷಕದ ಬಿಡುಗಡೆ, ಸಮಾರಂಭದ ಸಿದ್ಧತೆಗಳ ವರದಿ
ವರದಿ-ಅರೇಹಳ್ಳಿ ರವಿ

ಕನ್ನಡ ಸಾಹಿತ್ಯ.ಕಾಂ‍ನ ೫ನೇ ವಾರ್ಷಿಕೋತ್ಸವ ಸಮಾರಂಭ ಹಲವಾರು ಕಾರಣಗಳಿಂದ ಮುಂದಕ್ಕೆ ಹೋಗುತ್ತಲೇ ಇತ್ತು. ಕಳೆದ ವಾರದ ಕೊನೆಯಲ್ಲಿ ಅನಂತಮೂರ್ತಿಯವರು ಮತ್ತು ಎಂ.ಪಿ.ಪ್ರಕಾಶ್‌ರವರು ಆಗಸ್ಟ್ ೬ರಂದು ಸಮಾರಂಭಕ್ಕೆ ಬರುವ ಆಶ್ವಾಸನೆಯನ್ನು ನೀಡುತ್ತಿದ್ದಂತೆ ನಾವು ಮಾಡಬೇಕಿದ್ದ ಹಲವಾರು ಪೂರ್ವಭಾವಿ ಕೆಲಸಗಳಿದ್ದವು. ಅವುಗಳಲ್ಲಿ ಕಾರ್ಯಕ್ರಮಕ್ಕೆ ಗಣ್ಯರನ್ನು ಅಧಿಕೃತವಾಗಿ ಆಹ್ವಾನಿಸುವುದೂ ಒಂದು. ಮೊದಲಿಗೆ ನಾವು ಆಹ್ವಾನಿಸಬೇಕಿದ್ದುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕವಿ ಸಿದ್ಧಲಿಂಗಯ್ಯನವರನ್ನು. ಗುರುವಾರ ಅವರ ಮನೆಗೆ ಫೋನ್ ಮಾಡಿ ಶನಿವಾರ (೦೮-೦೭-೨೦೦೬) ಭೇಟಿಗೆ ಬರುವುದಾಗಿ ಹೇಳಿದಾಗ ಬೆಳಿಗ್ಗೆಯೇ ಬನ್ನಿ ಎಂದು ಹೇಳಿದ್ದರು. ಶುಕ್ರವಾರ ರಾತ್ರಿಯೇ ಕಿರಣ್, ಅವರಿಗೆ ಕೊಡಬೇಕಾದ ಅಗತ್ಯ ಮಾಹಿತಿಗಳನ್ನು ಟೈಪ್ ಮಾಡಿ ಸಿದ್ಧ ಮಾಡಿಟ್ಟಿದ್ದರು. ನಾನು, ಶೇಖರ್‌ಪೂರ್ಣ, ರುದ್ರಮೂರ್ತಿ ಮತ್ತು ಕಿರಣ್ ಸಿದ್ಧಲಿಂಗಯ್ಯನವರ ಮನೆಯ ಬಳಿ ಸೇರಿದಾಗ ಸಮಯ ಹನ್ನೊಂದು ಘಂಟೆಯಾಗಿತ್ತು. ರಾಜರಾಜೇಶ್ವರಿ ನಗರದ ಐಡಿಯಲ್ ಟೌನ್‍ಷಿಪ್‍ನಲ್ಲಿನ ಅವರ ಮನೆ ಹುಡುಕುವುದು ಆರಂಭದಲ್ಲಿ ಸ್ವಲ್ಪ ಕಷ್ಟವೇ ಆಯಿತು. ಸಿದ್ಧಲಿಂಗಯ್ಯನವರು, ಮನೆಯಲ್ಲೇ ಇದ್ದರು. ಅವರು ಆಗ ತಾನೆ ಹಂಪಿಯಿಂದ ಮರಳಿ ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರೆನಿಸುತ್ತದೆ. ನಾವು ಬಂದ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಹೊರಬಂದ ಅವರು ನಮಗೆ ಯಥೋಚಿತ ಸ್ವಾಗತ ನೀಡಿ ಎಲ್ಲರ ಪರಿಚಯ ಮಾಡಿಕೊಂಡರು. ಶೇಖರ ಪೂರ್ಣರವರ ಪರಿಚಯ ಅವರಿಗೆ ಮುಂಚೆಯೇ ಇದ್ದ ಕಾರಣ ತಕ್ಷಣ ಪೀಠಿಕೆಯಿಲ್ಲದೆ ಕಾರ್ಯಕ್ರಮಕ್ಕೆ ಅವರನ್ನು ಮುಖ್ಯ ಅತಿಥಿಗಳಾಗಿ ಬರುವಂತೆ ಕೇಳಿಕೊಂಡೆವು. ತಮ್ಮ ದಿನಚರಿಯಲ್ಲಿ ಕಾರ್ಯಕ್ರಮದ ದಿನಾಂಕ ಗುರುತು ಹಾಕಿಕೊಂಡ ಅವರು ಕಾರ್ಯಕ್ರಮಕ್ಕೆ ಆಗಮಿಸುವ ಖಚಿತತೆ ನೀಡಿದರು. ಸ್ವಲ್ಪ ಸಮಯ ಅನೌಪಚಾರಿಕವಾಗಿ ಕನ್ನಡ, ಗಣಕ ತಂತ್ರಜ್ಞಾನ, ಕನ್ನಡಸಾಹಿತ್ಯ.ಕಾಂ ಎಂದು ಮಾತನಾಡುತ್ತಾ ಹೋದಾಗ, ಸಿದ್ದಲಿಂಗಯ್ಯನವರು ಈ ವಿಷಯಗಳಲ್ಲಿ ಸಲಹೆಯನ್ನು ಕೊಡಬೇಕೆಂದು ಕೇಳಿದರು.

ಮೊದಲಿಗೆ ನಮ್ಮ ಕನ್ನಡಸಾಹಿತ್ಯ.ಕಾಮ್‍ನ ಸ್ಥೂಲ ಪರಿಚಯ ಮಾಡಿಕೊಟ್ಟು ಸದ್ಯಕ್ಕೆ ಬಿಡುಗಡೆ ಮಾಡುತ್ತಿರುವ CMS 'ಸಂಪೂರ್ಣ' ಮತ್ತು ಕನ್ನಡ ಪದ ಪರೀಕ್ಷಕದ ಬಗ್ಗೆ ವಿವರಿಸಿದೆವು. ಗಣಕ ಮತ್ತು ಇಂಟರ್ನೆಟ್ ಲೋಕದ ಬಗ್ಗೆ ಪರಿಚಯವಿರದ ಸಿದ್ಧಲಿಂಗಯ್ಯನವರಿಗೆ ನಾವು ಸಂಬಂಧಿಸಿದ ಎಲ್ಲಾ ಮೂಲಭೂತ ಸಂಗತಿಗಳನ್ನು ಕುರಿತು ಹೇಳಬೇಕಾಗಿತ್ತು ಮತ್ತು ಅದು ಅತ್ಯಗತ್ಯವೂ ಆಗಿತ್ತು. ಕನ್ನಡ ಸಾಹಿತ್ಯ.ಕಾಂನಲ್ಲಿ ಅವರ 'ಊರುಕೇರಿ' ಪ್ರಕಟವಾಗಿದ್ದನ್ನು ಜ್ಞಾಪಿಸಿಕೊಂಡ ಅವರು ಊರುಕೇರಿ ಭಾಗ ಎರಡು ಬರಲಿರುವ ಬಗೆಗೆ ಮಾಹಿತಿ ನೀಡಿದರು.

ಅವರೊಂದಿಗೆ ಕೇಳಿಕೊಂಡ, ಚರ್ಚಿಸಿದ ಸಂಗತಿಗಳಲ್ಲಿ kannaadasaahithya.com ಗೆ ಸಂಬಂಧಿಸಿದ್ದು ಏನೂ ಇರಲಿಲ್ಲ. ಮತ್ತು ಕನ್ನಡಸಾಹಿತ್ಯ.ಕಾಂ ಗಾಗಿ ನಾವು ಏನನ್ನು ಕೇಳಿಕೊಳ್ಳಲಿಲ್ಲ. ಕೇಳಿಕೊಂಡದ್ದು, ಚರ್ಚಿಸಿದ್ದು ಇಡೀ ಕನ್ನಡ ಸಮುದಾಯದ ಗಣಕ ಬಳಕೆಯಲ್ಲಿರುವ ತೊಂದರೆಗಳು ಮತ್ತು ಅವುಗಳ ನಿವಾರಣೆ ಕುರಿತ ವಿಷಯಗಳಾಗಿದ್ದವು. ಚರ್ಚಿಸಿದ ವಿಷಯಗಳು ಈ ಕೆಳಕಂಡಂತಿವೆ.

೧) ಕನ್ನಡ ಪಠ್ಯದ ಗಣಕೀಕರಣದಲ್ಲಿರುವ ಬಹುದೊಡ್ಡ ಅಡ್ಡಿ ಎಂದರೆ ಕನ್ನಡದಲ್ಲಿ OCR(optical character recognition software) ಇಲ್ಲದಿರುವುದು. ಜೊತೆಗೆ ಉಚಿತ ಮತ್ತು ಯೋಗ್ಯವಾದ ಯೂನಿಕೋಡ್ ಫಾಂಟ್‍ಗಳು ಲಭ್ಯವಿಲ್ಲದಿರುವುದು. ಹೆಚ್ಚೂ ಕಮ್ಮಿ ಎಲ್ಲ ಭಾರತೀಯ ಭಾಷೆಗಳಲ್ಲೂ ಬಳಕೆಗೆ ಲಭ್ಯವಿರುವ OCR ಕನ್ನಡದಲ್ಲಿ ಇನ್ನೂ ಲಭ್ಯವಿಲ್ಲ. ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿರುವ TDIL (Technology Development for Indian Languages) ಸಂಸ್ಥೆಯು ಕನ್ನಡವನ್ನು ಹೊರತುಪಡಿಸಿ ಎಲ್ಲಾ ಭಾಷೆಗಳಲ್ಲೂ OCR ಮತ್ತು ಯೂನಿಕೋಡ್ ಫಾಂಟ್‍ನಂತಹ ಆನ್ವಯಿಕ ತಂತ್ರಾಂಶಗಳನ್ನು ಉಚಿತವಾಗಿ ಬಳಕೆದಾರರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಆದರೆ ನಮ್ಮವರ ಈ ನಿಟ್ಟಿನ ನಿರ್ಲಕ್ಷತೆಯೂ ಅವರನ್ನು ಕನ್ನಡದ ಬಗ್ಗೆ ಅಸಡ್ಡೆ ತಾಳುವಂತೆ ಮಾಡಿರಬೇಕು, ಇಲ್ಲ TDILನವರೇ ಪೂರ್ವಗ್ರಹಪೀಡಿತರಾಗಿ ಯೋಜನೆಯನ್ನು ಕೈಬಿಟ್ಟಿರಬೇಕು. ಹಾಗಾಗಿದ್ದರೆ ಅದು ಕನ್ನಡ ಭಾಷೆಗಾದ ಅವಮಾನವೇ ಸರಿ. ಕೇಂದ್ರ ಸರ್ಕಾರದಿಂದ ಅನುದಾನ ಪಡೆದು ಕನ್ನಡ OCR ಅಭಿವೃದ್ದಿಯ ಯೋಜನೆ ಕೈಗೆತ್ತಿಕೊಂಡ IISc ಯವರು ಹಣ ಖರ್ಚು ಮಾಡಿಸಿದರೇ ವಿನಃ OCR ಬಿಡುಗಡೆ ಮಾಡಲಿಲ್ಲ .OCR ಗೆ ಸಂಬಂಧಪಟ್ಟ ಒಂದಿಷ್ಟು ಯೋಜನಾ ವರದಿ ಮತ್ತು ದೋಷಪೂರಿತವಾದ ನಾಲ್ಕು UTF font ಗಳನ್ನು ನೆಪಮಾತ್ರಕ್ಕೆ ಬಿಡುಗಡೆ ಮಾಡಿದ್ದು ಬಿಟ್ಟರೆ ಯೋಜನೆ ನಿಂತ ನೀರಾಗಿದೆ. ಈ ನಿಟ್ಟಿನಲ್ಲಿ ವಿಚಾರಣೆ ನಡೆಸಬಹುದಾಗಿದ್ದ ಕರ್ನಾಟಕ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳು, ಮತ್ತು ಜನಪ್ರತಿನಿಧಿಗಳು ದಿವ್ಯಮೌನ ವಹಿಸಿದ್ದಾರೆ. ಇಷ್ಟೆಲ್ಲವನ್ನು ಕೇಳಿಸಿಕೊಂಡ ಸಿದ್ಧಲಿಂಗಯ್ಯನವರು ಎಲ್ಲ ಸಂಗತಿಗಳ ನೋಟ್ಸ್ ಮಾಡಿಕೊಂಡು ಅರ್ಥವಾಗದ ಅನೇಕ ಸಂಗತಿಗಳ ಬಗ್ಗೆ ಮತ್ತೆ ಮತ್ತೆ ಕೇಳಿ ವಿಷಯವನ್ನು ಮನನ ಮಾಡಿಕೊಂಡರು. ಶೀಘ್ರದಲ್ಲೇ ಸಂಬಂಧಿಸಿದ ಅಧಿಕಾರಿಗಳ ಸಭೆಯನ್ನು ಕರೆದು, ಅವರು ಏನು ಹೇಳುತ್ತಾರೆಂಬುದನ್ನು ಕೇಳಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಅಗತ್ಯವಾದರೆ OCR ಮತ್ತು UTF font ಗಳ ಅಭಿವೃದ್ಧಿಯ ಹೊಣೆಯನ್ನು ಕರ್ನಾಟಕ ಸರ್ಕಾರವೇ ವಹಿಸಿಕೊಳ್ಳಲು ಪ್ರಸ್ತಾವನೆ ಕಳುಹಿಸುವುದಾಗಿ ಹೇಳಿದರು.

೨) ಮೈಕ್ರೊಸಾಫ್ಟ್ ನವರ windows XPಯ ಕನ್ನಡ ಯೂನಿಕೋಡ್ ಫಾಂಟ್ Tunga ಹನ್ನೆರಡು ದೋಷಗಳನ್ನು ಒಳಗೊಂಡಿದ್ದರೂ ಅದನ್ನು ಖರೀದಿಸಿದ ಸರ್ಕಾರ ಮತ್ತು ಅಧಿಕಾರಿಗಳ ಬೇಜವಾಬ್ದಾರಿ ನೀತಿಯ ಬಗ್ಗೆ ಸಿದ್ಧಲಿಂಗಯ್ಯನವರಿಗೆ ವಿವರಿಸಲಾಯಿತು. ತುಂಗಾ ಫಾಂಟ್‍ನಲ್ಲಿ ತಪ್ಪುಗಳಿರುವುದು ಗೊತ್ತಾದ ಮೇಲೂ ಸರ್ಕಾರದ ಕಡೆಯಿಂದ ಸ್ಪಷ್ಟನೆ ಕೋರಿ ಮೈಕ್ರೊಸಾಫ್ಟ್ ನವರಿಗೆ ಒಂದು ಪತ್ರವೂ ಹೋಗಿಲ್ಲ. ಕನ್ನಡ ಸಾಹಿತ್ಯ.ಕಾಂನ ಅವಿರತ ಪ್ರಯತ್ನದಿಂದ ಮೈಕ್ರೊಸಾಫ್ಟ್ ಕಂಪನಿ ತಪ್ಪುಗಳನ್ನು ಸರಿಪಡಿಸಲು ಒಪ್ಪಿಕೊಂಡಿರುವುದನ್ನೂ ಶೇಖರಪೂರ್ಣರವರು ಸಿದ್ಧಲಿಂಗಯ್ಯನವರಿಗೆ ಮನವರಿಕೆ ಮಾಡಿಕೊಟ್ಟರು. ಒಂದು ವೇಳೆ ಕಂಪನಿ ದೋಷರಹಿತವಾದ ಫಾಂಟನ್ನು ಕೊಟ್ಟರೂ ಅದನ್ನು ಸರ್ಕಾರದ ಸಹಸ್ರಾರು ಗಣಕಗಳಲ್ಲಿ ಅನುಸ್ಥಾಪಿಸಲು ಆಗುವ ಖರ್ಚು ವೆಚ್ಚಗಳನ್ನು ಕಂಪನಿಗೇ ವಹಿಸುವ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆವು. ಇದರ ಬಗ್ಗೆಯೂ ಅಗತ್ಯ ವಿವರಗಳನ್ನು ಮನನ ಮಾಡಿಕೊಂಡ ಅವರು ಮೈಕ್ರೊಸಾಫ್ಟ್ ಜೊತೆಗಿನ ಖರೀದಿಯಲ್ಲಿ ಭ್ರಷ್ಟಾಚಾರದ ಸಾಧ್ಯತೆಗಳನ್ನು ತಳ್ಳಿಹಾಕಲಿಲ್ಲ. ಮಾಹಿತಿ ಸಿಂಧು ಯೋಜನೆಯಲ್ಲಿ ತರಬೇತಿಯಿಲ್ಲದ ಶಿಕ್ಷಕರನ್ನು ನೇಮಕ ಮಾಡಿಕೊಂಡು ಆ ಯೋಜನೆ ತನ್ನ ಕಾರ್ಯಸಾಧನೆಯಲ್ಲಿ ವಿಫಲವಾದ ಬಗ್ಗೆ ಬಹಳ ಹೊತ್ತು ಸಂವಾದ ನೆಡೆಯಿತು. ಗ್ರಾಮೀಣ ಸಮುದಾಯಕ್ಕೆ ಗಣಕ ಪರಿಚಯಿಸುವ ಕಾರ್ಯ ಅದೆಷ್ಟು ಕ್ಲಿಷ್ಟ ಮತ್ತು ಸೂಕ್ಷ್ಮ ಎಂಬ ಸಂಗತಿಯನ್ನು ಒಪ್ಪಿಕೊಂಡ ಸಿದ್ಧಲಿಂಗಯ್ಯ ನವರು ಮುಂದಿನ ದಿನಗಳಲ್ಲಿ ಅದು ಪ್ರಾಮುಖ್ಯತೆಯ ವಿಷಯವಾಗಬೇಕಾಗಿದೆಯೆಂದರು.

ಶೇಖರಪೂರ್ಣರವರು ಸಿದ್ಧಲಿಂಗಯ್ಯನವರನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡದ್ದು ಬಹಳ ವಿಶೇಷವಾಗಿತ್ತು. ಹಲವಾರು ಸಂಗತಿಗಳಲ್ಲಿ ಸಿದ್ಧಲಿಂಗಯ್ಯನವರೊಂದಿಗೆ ತಾವು ಹೊಂದಿರುವ ಭಿನ್ನಾಭಿಪ್ರಾಯಗಳನ್ನು ಈ ಸಂದರ್ಭದಲ್ಲಿ ಹೊರಗೆಡವಿದರು. ಸಿದ್ಧಲಿಂಗಯ್ಯನವರೇ, ನನಗೆ ದಲಿತರ ವಿಷಯಕ್ಕೆ ಸಂಬಂಧಪಟ್ಟಂತೆ ನಿಮ್ಮ ಮೇಲೆ ಬಹಳ ಸಿಟ್ಟಿದೆ ಎಂದಾಗ ಅವರ ಮುಖದಲ್ಲಿ ಸ್ವೀಕೃತ ನಗೆಯಿತ್ತು. ಇಷ್ಟರಲ್ಲಾಗಲೇ ಅಲ್ಲಿ ಒಂದು ಆಪ್ತತೆಯ ಆತ್ಮೀಯ ವಾತಾವರಣ ನಿರ್ಮಾಣವಾಗಿತ್ತು. ಶೇಖರರವರು, ದಲಿತರು ಇಂಗ್ಲೀಷ್ ಕಲಿಸಿ ಎಂದು ಕೇಳುವುದನ್ನು ಬಿಟ್ಟು ಕಂಪ್ಯೂಟರ್ ಕಲಿಸಿ ಎಂದು ಒತ್ತಾಯಿಸಬೇಕೆಂದು ಸಲಹೆ ನೀಡಿದರು. ಹಾಗೆ ಮಾಡಿದರೆ ಕಂಪ್ಯೂಟರ್ ಜೊತೆಗೆ ಇಂಗ್ಲೀಷನ್ನು ಕಲಿಸಬೇಕಾಗುತ್ತದೆ. ಎರಡೂ ಒಟ್ಟೊಟ್ಟಿಗೆ ಈಡೇರಿಸಬೇಕಾದ ಬೇಡಿಕೆಗಳಾಗಬೇಕು ಎಂದರು. ಗ್ರಾಮೀಣರಿಗೆ ಕಂಪ್ಯೂಟರ್ ಕಲಿಸುವಾಗ ಕೈಪಿಡಿಗಳು ಸಂಪೂರ್ಣವಾಗಿ ಕನ್ನಡದಲ್ಲೇ ಇರಬೇಕು ಮತ್ತು ಅವರಿಗೆ ಸೂಕ್ತ ತರಬೇತಿ ಅನುಭವಿ ಶಿಕ್ಷಕರಿಂದಲೇ ಆಗಬೇಕು ಎಂಬ ಸಲಹೆಯನ್ನು ಸಿದ್ದಲಿಂಗಯ್ಯನವರು ಪರಿಗಣನೆಗೆ ತೆಗೆದುಕೊಂಡರು.

೩) ಕರ್ನಾಟಕ ಸರ್ಕಾರ ಅಧಿಕೃತವಾಗಿ ಹೊಂದಿರುವ ೫೬ ವೆಬ್‍ಸೈಟ್‍ಗಳಲ್ಲಿ ಸುಮಾರು ಮೂರ್ನಾಲ್ಕು ಮಾತ್ರ ಕನ್ನಡದಲ್ಲಿದ್ದು ಉಳಿದವು ಇಂಗ್ಲೀಷಿನಲ್ಲೇ ಇರುವುದನ್ನು ಸಿದ್ಧಲಿಂಗಯ್ಯನವರಿಗೆ ಹೇಳಿದೆವು. ಅವರಿಗೆ ಕನ್ನಡ ಅನುಷ್ಟಾನವೆಂಬುದು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿರುವ ವಿಷಯ ಮನದಟ್ಟಾಯಿತು. ಕನ್ನಡ ಅನುಷ್ಟಾನ ಅದನ್ನು ಇತ್ತೀಚಿನ ತಂತ್ರಜ್ಞಾನಕ್ಕೆ ಅನುಗುಣವಾಗಿ ಅಳವಡಿಕೊಳ್ಳುವುದರೊಂದಿಗೆ ಆರಂಭವಾಗಬೇಕೆಂದು ಶೇಖರರವರು ಒತ್ತಾಯಿಸಿದರು. ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಸಿದ್ಧಲಿಂಗಯ್ಯನವರು ಶೀಘ್ರದಲ್ಲೇ ಈ ವಿಷಯವನ್ನು ಇತ್ಯರ್ಥ ಮಾಡಿಬಿಡಬೇಕೆಂದು ಹೇಳಿದರು. ಹಾಗೆಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಂದು ಪ್ರತ್ಯೇಕ ವೆಬ್‍ಸೈಟ್ ತುರ್ತಾಗಿ ಅಗತ್ಯವಿದ್ದು ಅದನ್ನು ಸಾಧ್ಯವಾದರೆ ನಿಮ್ಮ KSCಯವರೇ ಮಾಡಿಕೊಡಿ ಎಂದರು.

೪) ಕನ್ನಡ ಲಿಪಿ ತಂತ್ರಾಂಶ 'ಬರಹ' ದ ಶೇಷಾದ್ರಿವಾಸುರವರ ಕನ್ನಡ ಸೇವೆಯ ಬಗ್ಗೆ ಸಿದ್ಧಲಿಂಗಯ್ಯನವರಿಗೆ ಹೇಳಿದಾಗ ಅವರ ಬಗ್ಗೆ ಹೆಚ್ಚಿನ ವಿಷಯ ಹೇಳಿ ಎಂದರು. ಕಂಪ್ಯೂಟರ್‌ನಲ್ಲಿ ದುಬಾರಿಯಾಗಿದ್ದ ಕನ್ನಡ ತಂತ್ರಾಂಶಗಳ ಕಾಲದಲ್ಲಿ, ಶೇಷಾದ್ರಿ ವಾಸು ಬರಹ ತಂತ್ರಾಂಶವನ್ನು ರೂಪಿಸಿದರಲ್ಲದೆ ಎಲ್ಲರಿಗೂ ಉಚಿತವಾಗಿ ಹಂಚಿದರು. ಆ ಮೂಲಕ ಲಕ್ಷಾಂತರ ಕನ್ನಡಿಗರ ಲಿಪಿ ಬಳಕೆಗೆ ಮುನ್ನುಡಿ ಹಾಡಿದರು. ಸರ್ಕಾರಗಳು ಆ ಸಾಧ್ಯತೆಯ ಬಗ್ಗೆ ಯೋಚನೆಯನ್ನೇ ಮಾಡಿರದಿದ್ದ ಕಾಲದಲ್ಲಿ ಶೇಷಾದ್ರಿವಾಸುರವರು 'ಬರಹ'ವನ್ನು ರೂಪಿಸಿ ಅದನ್ನು ಲಾಭಕ್ಕೆ ಇಟ್ಟುಕೊಳ್ಳದೆ ಉಚಿತವಾಗಿ ಕೊಟ್ಟರು. ಇವತ್ತಿಗೂ ಹಾಗೆಯೇ ಕೊಡುತ್ತಿದ್ದಾರೆ. ಪ್ರಪಂಚದಾದ್ಯಂತ ಇಂದು ಸುಮಾರು ಹತ್ತು ಲಕ್ಷಕ್ಕಿಂತಲೂ ಅಧಿಕ ಕನ್ನಡಿಗರು ಗಣಕಗಳಲ್ಲಿ 'ಬರಹ' ಅನುಸ್ಥಾಪಿಸಿಕೊಂಡಿದ್ದಾರೆ. ಅವರ ಸೇವೆಯನ್ನು ಇದುವರೆಗೂ ಕರ್ನಾಟಕ ಸರ್ಕಾರವೇ ಆಗಲಿ, ಇತರ ಯಾವುದೇ ಸಂಸ್ಥೆಗಳಾಗಲಿ ಗುರುತಿಸಿ, ಗೌರವಿಸದಿರುವುದು ಶೋಚನೀಯ ಮತ್ತು ಅವರನ್ನು ಬಲ್ಲವರಿಗೆ ಅತ್ಯಂತ ದುಃಖದಾಯಕ ಸಂಗತಿ. Infact ಶೇಷಾದ್ರಿವಾಸುರವರು ಇದಕ್ಕೆಂದು ಕೊರಗಿದ್ದೇ ಇಲ್ಲ. ಅವರು ಇದಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಕನ್ನಡ ಸೇವೆಯನ್ನು ಮುಂದುವರೆಸುತ್ತಿದ್ದಾರೆ. ಎಲ್ಲ ಭಾರತೀಯ ಭಾಷೆಗಳಲ್ಲೂ 'ಬರಹ' ತಂತ್ರಾಂಶವನ್ನು ಉಚಿತವಾಗಿಯೇ ಬಿಟ್ಟಿದ್ದಾರೆ. ಈ ವಿಷಯವನ್ನು ಶೇಖರಪೂರ್ಣರವರು ತುಂಬಾ ಭಾವುಕತೆಯಿಂದ ಹೇಳಿದಾಗ ಸಿದ್ಧಲಿಂಗಯ್ಯನವರು ತಕ್ಷಣವೇ ಶೇಷಾದ್ರಿವಾಸುರವರ ಹೆಸರನ್ನು ಈ ಸಾರಿಯೇ ಶಿಫಾರಸು ಮಾಡುವುದಾಗಿ ಹೇಳಿದರು. ನಾವು ಎಂತೆಂಥವರಿಗೋ ಪ್ರಶಸ್ತಿ ಕೊಡುತ್ತೇವೆ. ಇಂತಹ ದಕ್ಷರ ಬಗೆಗೆ - ನಿಮ್ಮಂಥವರು ಹೇಳದ ಹೊರತು ಸರ್ಕಾರದ ಕಣ್ಣಿಗೆ ಬೀಳಲಾರರು ಎಂದರು.

೫) ಇತ್ತೀಚೆಗೆ ಬಹು ಚರ್ಚಿತವಾಗುತ್ತಿರುವ ವಿಷಯ ಒಂದನೇ ತರಗತಿಯಿಂದಲೇ ಗ್ರಾಮೀಣ ಮಕ್ಕಳಿಗೆ ಇಂಗ್ಲೀಷ್ ಕಲಿಸಬೇಕೆಂಬುದು. ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿಸುವ ಜೊತೆ ಜೊತೆಗೇ ಮಕ್ಕಳಿಗೆ ಕಂಪ್ಯೂಟರ್ ಪರಿಚಯ ಮಾಡಿಕೊಡಬೇಕು. ಅದಕ್ಕಾಗಿ ಒಂದೆರಡು ಕಂಪ್ಯೂಟರ್‌ಗೆ ಸಂಬಂಧಿಸಿದ ಪಾಠಗಳನ್ನಾದರೂ ಇಂಗ್ಲೀಷ್ ಪಠ್ಯದಲ್ಲಿ ಸೇರಿಸುವಂತೆ ಸಲಹೆ ನೀಡಿ ಎಂದು ಸಿದ್ಧಲಿಂಗಯ್ಯನವರನ್ನು ಕೇಳಿಕೊಂಡೆವು .

೬) ಕನ್ನಡದಲ್ಲಿ ಸಮಾನಾರ್ಥಕ ಪದಕೋಶವೊಂದರ ಅಗತ್ಯ ಬಹಳವಾಗಿರುವುದನ್ನು ಅವರ ಗಮನಕ್ಕೆ ತಂದೆವು. ಈಗಾಗಲೇ 'ನುಡಿ'ಯಲ್ಲಿ ಇರುವ ಪದಕೋಶದಲ್ಲಿ ಕೇವಲ ೪೦೦೦೦ ಪದಗಳಿದ್ದು ಅವು ಕನ್ನಡದ ವಿಶಾಲ ವ್ಯಾಪ್ತಿಗೆ ಏನೇನೂ ಸಾಲದು. ಮೈಸೂರು ವಿಶ್ವವಿದ್ಯಾನಿಲಯದವರು ಬಿಡುಗಡೆ ಮಾಡಿರುವ ಸಿ.ಡಿ ರೂಪದ ಶಬ್ದಕೋಶವೂ ಈ ನಿಟ್ಟಿನಲ್ಲಿ ಉಪಯೋಗವಿಲ್ಲ ಮತ್ತು ಅದು ಉಚಿತವೂ ಅಲ್ಲ. ಶಬ್ದಕೋಶವೆಂಬುದು ಪ್ರಚಲಿತ ಪದಗಳನ್ನು ಒಳಗೊಂಡಿದ್ದರೇ ಪರಿಪೂರ್ಣವೆನಿಸಿಕೊಳ್ಳುತ್ತದೆ. ಆದ್ದರಿಂದ ಬಹಳ ಬೇಗ ಶಬ್ದಕೋಶದ ಅಗತ್ಯವನ್ನು ಪೂರೈಸಬೇಕೆಂದು ಕೇಳಿಕೊಂಡೆವು.

ಎಲ್ಲಾ ವಿಷಯಗಳನ್ನೂ ತಮ್ಮ ಆರೆಂಟು ಪುಟಗಳ ನೋಟ್ಸ್‌ನಲ್ಲಿ ಪಟ್ಟಿ ಮಾಡಿಕೊಂಡ ಸಿದ್ಧಲಿಂಗಯ್ಯನವರು ನೀವು ಪ್ರಸ್ತಾಪಿಸಿದ ಪ್ರತಿ ಸಂಗತಿಗಳನ್ನು ಆದ್ಯತೆ ಮೇಲೆ ಸರ್ಕಾರದ ಮುಂದೆ ಇಡುತ್ತೇನೆ ಎಂದರು. ಅಧಿಕಾರಿಗಳ ಬೆವರಿಳಿಸಲು ಅವರಾಗಲೇ ಸಿದ್ಧವಾಗಿರುವುದು ಮಾತಿನಲ್ಲಿ ವೇದ್ಯವಾಗುತ್ತಿತ್ತು.

ಸಂವಾದದ ನಡುವೆ ಸಮಯ ಸರಿದದ್ದೇ ಗೊತ್ತಾಗಿರಲಿಲ್ಲ. ಮಧ್ಯೆ ಮಧ್ಯೆ ಅವರ ಮನೆಯವರು ಕೊಡುತ್ತಿದ್ದ ಟೀ ನಮ್ಮ ಉತ್ಸಾಹವನ್ನು ಇಮ್ಮಡಿಸಿತ್ತೆಂದರೆ ತಪ್ಪಾಗಲಾರದು. ಕೊನೆಯಲ್ಲಿ ಬೀಳ್ಕೊಡುವಾಗ ಮೈಕ್ರೊಸಾಫ್ಟ್ ವಿವಾದಕ್ಕೆ ಸಂಬಂಧಿಸಿದ ವೃತ್ತಪತ್ರಿಕೆಗಳ ವರದಿಗಳನ್ನು ನೀಡಲು ಕೇಳಿಕೊಡರು. ವರದಿಗಳನ್ನು ಮುಂದಿಟ್ಟುಕೊಂಡರೆ ಸರ್ಕಾರವನ್ನೇ ಆಗಲಿ, ಅಧಿಕಾರಿಗಳನ್ನೇ ಆಗಲಿ ಭಿಡೆಯಿಲ್ಲದೆ ಪ್ರಶ್ನಿಸಬಹುದೆಂಬುದು ಅವರ ಅಭಿಪ್ರಾಯ.

No comments:

ಜನಪ್ರಿಯ ಲೇಖನಗಳು