2.27.2008

ಪಾಳೆಯಗಾರನೆಂದರೆ ಇಮ್ಮಡಿ ಜಗದೇವರಾಯ!

(ಗೆಳೆಯ ಆಸ್ಟಿನ್ ಜೋಸ್ ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲಿನವ. ವೃತ್ತಿಯಿಂದ ವಿಪ್ರೊ ಕಂಪನಿಯಲ್ಲಿ ತಂತ್ರಾಂಶ ತಜ್ಞ. ವಿಜಯನಗರ ಕಾಲದ ನಾಣ್ಯ ಸಂಗ್ರಹಕಾರ. ಪ್ರಾಚೀನ ಕಾಲದ ವಸ್ತುಗಳು, ಬಟನ್‌ಗಳು ಇತ್ಯಾದಿ ಹಳೆಯದು ಏನೇ ಇದ್ದರೂ ಇವನ ಆಸಕ್ತಿ ಕೆರಳಿಸುತ್ತದೆ.
ಆಸ್ಟಿನ್ ಜೋಸ್, ೧೮ನೇ ದಕ್ಷಿಣ ಭಾರತ ನಾಣ್ಯ ಸಂಗ್ರಹಕಾರರ ಸಂಘದ ಸಮಾವೇಷದಲ್ಲಿ ಮಂಡಿಸಿದ "ಚನ್ನಪಟ್ಟಣದ ಪಾಳೆಯಗಾರರ ನಾಣ್ಯಗಳು ಮತ್ತು ಇಮ್ಮಡಿ ಜಗದೇವರಾಯ" ಪ್ರಬಂಧದ ಮುಖ್ಯಾಂಶಗಳು ಮತ್ತು ಕರ್ನಾಟಕದ ಪಾಳೆಯಗಾರರಿಗೆ ಸಂಬಂಧಿಸಿದ ಕೆಲವು ಪುಸ್ತಕ\ಟಿಪ್ಪಣಿಗಳ ಆಧಾರದಿಂದ ಈ ಕೆಳಗಿನ ಲೇಖನವನ್ನು ಸಿದ್ಧಪಡಿಸಲಾಗಿದೆ
-ಅರೇಹಳ್ಳಿ ರವಿ)

ಕರ್ನಾಟಕದ ಪಾಳೆಯಗಾರರು ವಿಜಯನಗರ ಸಾಮ್ರಾಜ್ಯದ ಉನ್ನತಿ ಮತ್ತು ಅವನತಿಯ ಕಾಲಗಳಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರೂ ಇವರ ಆಳ್ವಿಕೆಯ ಬಗೆಗೆ ನಡೆದಿರುವ ಅಧ್ಯಯನಗಳು, ಸಂಶೋಧನೆಗಳು ಬಹಳ ಕಡಿಮೆ. ಪ್ರಾಮುಖ್ಯತೆಯನ್ನು ಪಡೆಯಬಹುದಾಗಿದ್ದ ಪಾಳೆಯಗಾರರ ಇತಿಹಾಸ ಹಲವಾರು ಕಾರಣಗಳಿಂದ ಸಾಕಷ್ಟು ಬೆಳಕಿಗೆ ಬಂದಿಲ್ಲ. ಆಳ್ವಿಕೆ, ಪ್ರಾಬಲ್ಯದ ದೃಷ್ಟಿಯಿಂದ ಇವರು ಪ್ರಸಿದ್ಧರಾಗಿದ್ದರೂ ಇತರೆ ಪ್ರಬಲ ರಾಜಮನೆತನಗಳ ಸಾಮಂತರಾಗಿದ್ದ ಕಾರಣಕ್ಕೆ ಹಲವಾರು ವಿಷಯಗಳಲ್ಲಿ ಇವರಿಗೆ ಸ್ವಾತಂತ್ರವಿರಲಿಲ್ಲ. ಯಾರೋ ಒಬ್ಬ ಪಾಳೆಯಗಾರ ಪ್ರಬಲನಾದನೆಂದರೆ ಅವನ ವಿರುದ್ಧ ದೊಡ್ಡ ದೊರೆಗೆ ದೂರು ನೀಡಲು ಇತರ ಪಾಳೆಯಗಾರ ಹಿಂಡೇ ತಯಾರಾಗುತ್ತಿತ್ತು. ಮುಖ್ಯವಾಗಿ ಪಾಳೆಯಗಾರರಿಗೆ ಸ್ವಂತ ನಾಣ್ಯಗಳನ್ನು ಮುದ್ರಿಸುವ ಅವಕಾಶವಿರಲಿಲ್ಲ. ಅವರು ಸಾಮಂತರಾಗಿದ್ದ ಪ್ರಭುತ್ವದ ನಾಣ್ಯಗಳನ್ನೇ ಬಳಸಬೇಕಾಗಿತ್ತು.
ಆಗಿದ್ದಾಗ್ಯೂ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಚನ್ನಪಟ್ಟಣದ ಪಾಳೆಯಗಾರರು ಮತ್ತು ಇವರ ಸಮಕಾಲೀನರಾದ ಯಲಹಂಕ ಪ್ರಭುಗಳು(ಇವರೂ ಪಾಳೆಯಗಾರರೇ, ಬೆಂಗಳೂರನ್ನು ಕಟ್ಟಿದವರು) ಸ್ವಂತ ನಾಣ್ಯಗಳನ್ನು ಮುದ್ರಿಸುವ ಸಾಹಸಕ್ಕೆ ಕೈ ಹಾಕಿದರು. ಈ ನಾಣ್ಯಗಳು ಬಹುತೇಕ ತಾಮ್ರದ್ದಾಗಿರುತ್ತಿದ್ದವು. ಅವರು ಸಾಮಂತರಾಗಿದ್ದಿರಬಹುದಾದ ಪ್ರಭುತ್ವದ ನಾಣ್ಯಗಳೂ ಒಟ್ಟೊಟ್ಟಿಗೆ ಚಲಾವಣೆಯಲ್ಲಿರುತ್ತಿದ್ದವು. ಸ್ವಂತ ನಾಣ್ಯಗಳನ್ನು ಮುದ್ರಿಸಿದ ಎಂಬ ಕಾರಣಕ್ಕಾಗಿ ಕೆಂಪೇಗೌಡನನ್ನು ಬಂಧಿಸಿ ವರ್ಷಾನುಗಟ್ಟಲೆ ಸೆರೆಯಲ್ಲಿಟ್ಟಿದ್ದರೆಂಬ ಇತಿಹಾಸಕಾರರ ಅಭಿಪ್ರಾಯವೊಂದಿದೆ.


ಕನ್ನಡಸಾಹಿತ್ಯ ಗುಂಪಿಗೆ ಸದಸ್ಯರಾಗಿ


ಆದರೆ ಕೆಂಪೇಗೌಡನ ಬಂಧನ ವಿನಾಕಾರಣವಾದುದ್ದಾದರಿಂದ, ನಂತರ ತಮ್ಮ ತಪ್ಪನ್ನು ತಿದ್ದಿಕೊಂಡ ವಿಜಯನಗರ ಪ್ರಭುಗಳು ಅವನನ್ನು ಬಿಡುಗಡೆ ಮಾಡಿದರೆಂಬುದು ಉಲ್ಲೇಖನೀಯ.ದೊರೆತಿರುವ ಪಾಳೆಯಗಾರರ ನಾಣ್ಯಗಳಲ್ಲಿ ಈ ಎರಡೂ ವಂಶಗಳ ನಾಣ್ಯಗಳೇ ಹೆಚ್ಚಿವೆ. ಚನ್ನಪಟ್ಟಣದ ಪಾಳೆಯಗಾರರಲ್ಲಿ ಪ್ರಬಲನಾಗಿದ್ದ ಇಮ್ಮಡಿ ಜಗದೇವರಾಯನ ಹೆಸರಿನ ನಾಣ್ಯ ದೊರೆತಿರಲೇ ಇಲ್ಲ. ಇವನ ಸೋದರರಾದ ಪೇದ ಜಗದೇವರಾಯ ಮತ್ತು ಅಂಕುಶರಾಯರ ಹೆಸರಿನ ನಾಣ್ಯಗಳು ಸಂಗ್ರಹಕಾರರಿಗೆ ಸಿಕ್ಕಿ ಅವು ಪ್ರಕಟವಾಗಿವೆ.

ಇತ್ತೀಚೆಗೆ ಚನ್ನೈನಲ್ಲಿರುವ ನಾಣ್ಯ ಸಂಗ್ರಹಕಾರರಾಗಿರುವ ಶಂಕರರಾಮನ್‍ರವರ ಬಳಿಗೆ ನನ್ನ ಗೆಳೆಯ ಆಸ್ಟಿನ್ ಹೋಗಿದ್ದಾಗ ಅವರ ಬಳಿಯಿದ್ದ ಒಂದಷ್ಟು ಹಳೆಯ ನಾಣ್ಯಗಳ ರಾಶಿಯಲ್ಲಿ ತನಗೆ ಬೇಕಾದ ವಿಜಯನಗರ ಕಾಲದ ನಾಣ್ಯಗಳನ್ನು ಹುಡುಕುತ್ತಿದ್ದ. ಅಲ್ಲೇ ಇದ್ದ ರಾಮನ್, ಅಪರೂಪದ್ದೆನಿಸಬಹುದಾದ ನಾಣ್ಯವನ್ನು ಆಸ್ಟಿನ್ ಮುಂದೆ ಹಿಡಿದರು. ತಾಮ್ರದ್ದಾಗಿದ್ದ ನಾಣ್ಯದ ಒಂದು ಮುಖದಲ್ಲಿ ಜೋಡಿ ಅಂಕುಶ ಚಿಹ್ನೆ ಇದ್ದರೆ ಇನ್ನೊಂದು ಪಾರ್ಶ್ವದಲ್ಲಿ ‘ಯಿಮಡಿ ಜಗದೆವ’ ಎಂದು ಮೂರು ಸಾಲುಗಳ ಕನ್ನಡ ಬರಹವಿತ್ತು. ಕನ್ನಡದ ಶಾಸನ ಬರಹಗಳನ್ನು ಓದುವುದರಲ್ಲಿ ಸಾಕಷ್ಟು ಪಳಗಿರುವ ರಾಮನ್ ನಾಣ್ಯದ ಮೇಲಿದ್ದ ಬರಹವನ್ನು ಸ್ಪಷ್ಟವಾಗಿಯೇ ಗುರುತಿಸಿದರು. ಪಾಳೆಯಗಾರರ ನಾಣ್ಯಗಳ ಅನುಸೂಚಿಗಳನ್ನು ತೆರೆದು ನೋಡಿದಾಗ ಇಂಥದ್ದೊಂದು ನಾಣ್ಯವು ಇದುವರೆಗೂ ಎಲ್ಲೂ ಪ್ರಕಟವಾಗಿರಲಿಲ್ಲ.
ನಂತರ ಈ ವಿಶಿಷ್ಟ ನಾಣ್ಯದ ಕುರಿತು ಐತಿಹಾಸಿಕ ವಿವರಗಳನ್ನು ಕೆದಕುತ್ತಾ ಹೋದ ಹಾಗೇ ಚನ್ನಪಟ್ಟಣದ ಪಾಳೆಯಗಾರರನ್ನು ಕುರಿತ ಹಲವಾರು ಸಂಗತಿಗಳು ತಿಳಿದುಬಂದವು. ನಾಣ್ಯದ ಒಂದು ಬದಿಯಲ್ಲಿದ್ದ ಜಗದೇವ ಎಂಬ ಹೆಸರು ಚನ್ನಪಟ್ಟಣದ ಪಾಳೆಯಗಾರರ ರೂಢನಾಮ(ಅವರ ವಂಶಾವಳಿಯ ಬಿರುದು)ವಾಗಿದ್ದುದರಿಂದ ಸಹಜವಾಗಿಯೇ ಕುತೂಹಲ ಕೆರಳಿತು. ನಾಣ್ಯದ ಮೇಲಿದ್ದ ಜೋಡಿ ಅಂಕುಶಗಳ ಲಾಂಛನವೂ ಇದು ಚನ್ನಪಟ್ಟಣದ ಪಾಳೆಯಗಾರರಿಗೆ ಸೇರಿದ್ದೆಂದು ಹೇಳಲು ಬಹುಮುಖ್ಯ ಸಾಕ್ಷ್ಯವಾಗಿತ್ತು.

ನಮಗೆ ಸಿಕ್ಕ ಇಮ್ಮಡಿ ಜಗದೇವರಾಯನ ನಾಣ್ಯದ ವಿವರ:
ಮುಂಭಾಗ : ಕಮಾನೊಂದರಿಂದ ಸುತ್ತುವರೆದಿರುವ ಜೋಡಿ ಅಂಕುಶ
ಹಿಂಭಾಗ:
ಮೂರು ಸಾಲಿನ ‘ಯಮ್ಮಡಿ ಜಗದೆವ’ ಎಂಬ ಕನ್ನಡ ಬರಹ
ತೂಕ ೩.೨ ಗ್ರಾಂಗಳು
ವ್ಯಾಸ ೧೪ ಮಿ ಮೀ
ಲೋಹ ತಾಮ್ರ

ಈಗಾಗಲೇ ಪ್ರಕಟಗೊಂಡ ಜಗದೇವರಾಯ ಮತ್ತು ಅಂಕುಶರಾಯ ಹೆಸರಿನ ಎರಡು ನಾಣ್ಯಗಳ ವಿವರಗಳು ಇಂತಿವೆ .

. ಜಗದೇವರಾಯ ನಾಣ್ಯದ ವಿವರ:
ಮುಂಭಾಗ: ಗಂಡ-ಭೇರುಂಡ
ಹಿಂಭಾಗ: ಎರಡು ಸಾಲಿನ ‘ಜಗದೆವ’ ಎಂಬ ಕನ್ನಡ ಬರಹ
ತೂಕ ೨.೭ ಗ್ರಾಂಗಳು
ವ್ಯಾಸ ೧೫ ಮಿ ಮೀ
ಲೋಹ ತಾಮ್ರ

. ಅಂಕುಶರಾಯ ನಾಣ್ಯದ ವಿವರ:
ಮುಂಭಾಗ : ಜೋಡಿ ಅಂಕುಶಗಳು ಮತ್ತು ಅವುಗಳನ್ನು
ಸುತ್ತುವರೆದಿರುವ ಒಂದು ಕಮಾನು
ಹಿಂಭಾಗ: ಎರಡು ಸಾಲಿನ ‘ಅಂಕುಶರಾಯ’ ಎಂಬ ಕನ್ನಡ ಬರಹ
ತೂಕ ೩.೨ ಗ್ರಾಂಗಳು
ವ್ಯಾಸ ೧೪ ಮಿ ಮೀ
ತಾಮ್ರ ತಾಮ್ರ

ಚನ್ನಪಟ್ಟಣದ ಪಾಳೆಯಗಾರರು ಮತ್ತು ಇಮ್ಮಡಿ ಜಗದೇವರಾಯ:

ಚನ್ನಪಟ್ಟಣ ಇತ್ತೀಚೆಗೆ ರಚನೆಯಾಗಿರುವ ರಾಮನಗರ ಜಿಲ್ಲೆಯ ಒಂದು ತಾಲೋಕು ಕೇಂದ್ರವಾಗಿದ್ದು ೧೫ ರಿಂದ ೧೭ನೇಶತಮಾನದವರೆಗೂ ಪ್ರಭಾವಿ ಪಾಳೆಯಗಾರರ ಆಳ್ವಿಕೆಯಲ್ಲಿತ್ತು. ಚನ್ನಪಟ್ಟಣದ ಪಾಳೆಯಗಾರರಲ್ಲಿ ಪ್ರಸಿದ್ಧರಾಗಿದ್ದ ರಾಣಾ ವಂಶದ ಪೆದ್ದ ಜಗದೇವರಾಯನೆಂಬುವವನು ಕ್ರಿ ಶ ೧೫೭೦ ರಲ್ಲಿ ಚನ್ನಪಟ್ಟಣದ ಅಧಿಕಾರಿಯಾಗಿ ನೇಮಿಸಲ್ಪಟ್ಟನು. ಇವನು ರಾಣಾ ವಂಶದಲ್ಲಿ ‘ಜಗದೇವರಾಯ’ನೆಂದು ಮೊದಲಿಗೆ ಕರೆಯಲ್ಪಟ್ಟ ತಿಮ್ಮಣ್ಣನಾಯಕನ ಮಗ.
ಇಮ್ಮಡಿ ಜಗದೇವರಾಯ ಈ ವಂಶದ ಪ್ರಸಿದ್ಧ ಪಾಳೆಯಗಾರ. ಅಪಾರ ಧೈರ್ಯಶಾಲಿಯೂ, ಶೂರನೂ ಆಗಿದ್ದ ಈತ ಪೆದ್ದ(ಪೇದ) ಜಗದೇವರಾಯನ ಸಹೋದರ.
ಆಗಾಗ ವಿಜಯನಗರ ಸಾಮ್ರಾಜ್ಯದ ಮೇಲೇ ದಂಡೆತ್ತಿ ಬರುತ್ತಿದ್ದ ವಿಜಾಪುರದ ಶಾಹೀ ಸುಲ್ತಾನರನ್ನು ಬಗ್ಗು ಬಡಿಯುವಲ್ಲಿ ಇಮ್ಮಡಿ ಜಗದೇವರಾಯನ ಪಾತ್ರ ಮಹತ್ವದ್ದು. ತನ್ನಂತಹ ಅನೇಕ ಪಾಳೆಯಗಾರ ಸಂಸ್ಥಾನಗಳೊಂದಿಗೆ ಸಮನ್ವಯ ಸಾಧಿಸಿ ಸೈನ್ಯಗಳನ್ನು ಕಲೆಹಾಕಿಕೊಂಡು ಹೋಗಿ ಶಾಹೀ ಸುಲ್ತಾನರನ್ನು ಹಿಮ್ಮೆಟ್ಟಿಸಿದನು. ಆಗಿನ ಶಾಹೀ ಸೈನ್ಯದ ದಂಡನಾಯಕರಾಗಿದ್ದ ಮುತುರ್ಜಾಖಾನ್, ಖಾನ್-ಖಾನ್, ನೂರ್-ಖಾನ್ ಮುಂತಾದವರನ್ನು ಇಮ್ಮಡಿ ಜಗದೇವರಾಯನ ನೇತೃತ್ವದ ಸೈನ್ಯ ಸೋಲಿಸಿ ಓಡಿಸಿತು.

ಇಮ್ಮಡಿ ಜಗದೇವರಾಯನ ಶೌರ್ಯ-ಸಾಧನೆಗಳನ್ನು ಮೆಚ್ಚಿದ ವಿಜಯನಗರದ ಪ್ರಭುಗಳು, ೯ ಲಕ್ಷ ಪಘೋಡ(ಆ ಕಾಲದ ಚಾಲ್ತಿಯಲ್ಲಿದ್ದ ಹಣ)ಗಳ ವರಮಾನವಿದ್ದ ಜಿಲ್ಲೆಯೊಂದನ್ನು ಕೊಡುಗೆಯಾಗಿ ನೀಡಿದರು. ಶಾಹೀ ಸುಲ್ತಾನರ ನಿರಂತರ ದಾಳಿಯಿಂದ ಕಂಗೆಟ್ಟಿದ್ದ ವಿಜಯನಗರದ ಅರಸರು ಈ ಪ್ರದೇಶವನ್ನು ನಿಯಂತ್ರಿಸಲು ಸತತ ಹೆಣಗಾಡುತ್ತಿದ್ದರು. ಪೂರ್ವದ ಬಾರಾಮಹಲಿನಿಂದ(ಇಂದಿನ ಸೇಲಂ)-ಪಶ್ಚಿಮಘಟ್ಟಗಳವರೆಗಿನ ವಿಶಾಲ ಭಾಗ ಚನ್ನಪಟ್ಟಣ ಪಾಳೆಯಗಾರ ಸಂಸ್ಥಾನ(ಇಮ್ಮಡಿ ಜಗದೇವರಾಯನ)ದ ಆಳ್ವಿಕೆಗೆ ಒಳಪಟ್ಟಿತ್ತು. ಚನ್ನಪಟ್ಟಣವು ಈ ಪ್ರದೇಶದ ಹೃದಯ ಭಾಗದಲ್ಲಿದ್ದುದರಿಂದ ಸಹಜವಾಗಿಯೇ ಅದು ಇಮ್ಮಡಿ ಜಗದೇವರಾಯನ ರಾಜಧಾನಿಯಾಯಿತು. ‘ಚನ್ನಪಟ್ಟಣದ ಪಾಳೆಯಗಾರರು’ ಪ್ರಸಿದ್ಧಿಗೆ ಬಂದಿದ್ದು ಇಮ್ಮಡಿ ಜಗದೇವರಾಯನ ನಂತರವೇ ಎಂಬುದು ಇತಿಹಾಸದ ಗಮನಾರ್ಹ ಸಂಗತಿ. ಪಾಳೆಯಗಾರರಿಗೆ ಸಹಜವಾಗಿ ಸೈನ್ಯ-ಸಂಪನ್ಮೂಲದ ಕೊರತೆ ಬಹಳವಾಗಿದ್ದುದರಿಂದ ಇಮ್ಮಡಿ ಜಗದೇವರಾಯನ ನಂತರ ಈ ವಿಶಾಲ ಭೂಪ್ರದೇಶವೊಂದನ್ನು ನಿಯಂತ್ರಿಸುವುದು ಅವನ ವಾರಸುದಾರರಿಗೆ ಸಾಧ್ಯವಾಗದೇ ಹೋಯಿತು. ಇದರಿಂದ ಇನ್ನಷ್ಟು ಮರಿ ಪಾಳೆಯಗಾರರ ಹುಟ್ಟಿಕೊಂಡು ತಮ್ಮನ್ನು ಸ್ವತಂತ್ರರೆಂದು ಘೋಷಿಸಿಕೊಂಡರು. ಪರಿಣಾಮ ಚನ್ನಪಟ್ಟಣ ಸಂಸ್ಥಾನ ಮತ್ತೆ ಚಿಕ್ಕ ಪ್ರಾಂತ್ಯವಾಗಿಯೇ ಉಳಿಯಿತು. ಈ ಹೊತ್ತಿಗಾಗಲೇ ವಿಜಯನಗರದ ಅರಸರ ಪ್ರಾಬಲ್ಯವೂ ತಗ್ಗಿತ್ತು.

ಆಧಾರ:
೧. ಕರ್ನಾಟಕದ ಪಾಳೆಯಗಾರರು - Visu.
೨. As referred by Buchanan.
೩. Muttagarae Scripts.
೪. History of Medieval Deccan - M.H. Sheravi.
೫. Southern School of Telugu Literature - N. Venkata Rao.
೬. Mysore Gazetteer - B.L. Rice.
೭. Page no. 230, Coins of Karnataka - K.Ganesh, 2007.

4 comments:

Anonymous said...

ರವಿಯವರೆ,
ಇಮ್ಮಡಿ ಜಗದೇವರಾಯನಂತಹ ಸಮರ್ಥ ವೀರರು, ಅವರ ಸಮಕಾಲೀನ ಪ್ರಸಿದ್ಧ ರಾಜರುಗಳ ಜೊತೆ ಐತಿಹಾಸಿಕವಾಗಿ ಮಹತ್ವದ ಸ್ಥಾನವನ್ನು ಪಡೆಯಬೇಕಾಗಿದ್ದವರು. ಇಂಥಹ ಪಾಳೆಯಗಾರರ ಮೇಲೆ ಸಂಶೋಧನೆಗಳು ಬೆಳಕು ಚೆಲ್ಲಿದ್ದು ಬಹಳ ಕಡಿಮೆ ಎನ್ನುವುದು ನಮ್ಮ ಮಟ್ಟಿಗೆ ವಿಷಾದನೀಯ ಸಂಗತಿ. ಇಷ್ಟಕ್ಕೂ ನಾವು ಯಾರ ಇತಿಹಾಸವನ್ನು ಬೆಳಕಿಗಿಡಿದು ತೋರಿಸಿದ್ದೇವೆ..? ಅದಕ್ಕೊ ಬುಖನನ್‍ನಂತಹ ವಿದೇಶಿಯೊಬ್ಬ ಬರಲಿ ಅಂತಾ ಕಾಯ್ತೀವಿ...! ಸಂಶೋಧನೆಗಳಿಗೆ ಡುಡ್ಡಿಲ್ಲ ಅನ್ನುವುದು ಸಮಸ್ಯೆಯಲ್ಲ.

Niri said...

ನಮಸ್ಕಾರ,

ನಾಣ್ಯ'ದ ಚಿತ್ರಗಳು ಇದ್ದಿದ್ದರೆ ಚೆನ್ನಾಗಿರುತ್ತಿತ್ತು.. :)

ಅರೇಹಳ್ಳಿ ರವಿ said...

ಅಪ್ಪಿ,
ನಾಣ್ಯದ ಚಿತ್ರಗಳನ್ನು ಹಾಕಲು ಅದರ ಸಂಶೋಧಕ ಆಸ್ಟಿನ್‌ ಜೋಸ್‌ರವರು ಅನುಮತಿಸಲಿಲ್ಲ. ಆ ಕುರಿತ ಪ್ರಬಂಧವಿನ್ನೂ ನಾಣ್ಯ ಸಂಗ್ರಹಕಾರರ ಸೊಸೈಟಿಯ ಜರ್ನಲ್‍ನಲ್ಲಿ ಪ್ರಕಟವಾಗುವುದಿದೆಯಂತೆ .

Sushrutha Dodderi said...

ಪ್ರಿಯ ರವೀ,
ನಮಸ್ಕಾರ. ಹೇಗಿದ್ದೀ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ’ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ’ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ’ಸಂಪದ’ದ ಹರಿಪ್ರಸಾದ್ ನಾಡಿಗ್, ’ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ’ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

ಜನಪ್ರಿಯ ಲೇಖನಗಳು